`ಒಂದಿಲ್ಲ ಒಂದು ದಿವಸ ನಾನು ಅಖಂಡ ಕರ್ನಾಟಕದ ಮುಖ್ಯಮಂತ್ರಿ ಆಗತೇನಿ. ವಿಧಾನ ಸೌಧದ ಮೆಟ್ಟಿಲಿನ ತನಕ ಜೆಸಿಬಿಯಲ್ಲಿ ಹೋಗತೇನಿ’, ಅಂತ ನಮ್ಮ ಆತ್ಮೀಯ ಸ್ನೇಹಿತರಾದ ಗೌಡರು ಜೋರಾಗಿ ಅಪ್ಪಣೆ ಕೊಡಿಸಿದ್ದಾರೆ. ಅದನ್ನು ಕಲ್ಪಿಸಿ ಕೊಂಡಾಗಲೆಲ್ಲ ನನಗೆ ಹೊಸದಾಗಿ ಸರ್ಕಾರಿ ನೌಕರಿ ಸಿಕ್ಕ ಜಸಪಾಲ ಭಟ್ಟಿ ಅವರು ತಮ್ಮ ಪತ್ನಿಯನ್ನು ರೋಡ್ ರೋಲರ್ ಮೇಲೆ ಕೂಡಿಸಿಕೊಂಡು ಊರಲ್ಲಿ ಒಂದು ರೌಂಡ್ ಹೋಗುವ ಚಿತ್ರ ಕಣ್ಣು ಮುಂದೆ ಬರುತ್ತದೆ.
ಬಲಿರೇ ಪರಾಕ್ರಮ ಕಂಠೀರವ,
ಈ ನಮ್ಮ ಬಸನಗೌಡ ರಾಮನಗೌಡ ಯತ್ನಾಳ್ ಗೌಡರು ಅಂದರೆ ಯಾರು ಅಂತ ತಿಳಿದಿದ್ದೀರಿ?
ಬಿಜೆಪಿಯಿಂದ ಹೊರಹಾಕಿಸಿಕೊಂಡು, ಜೆಸಿಬಿಯ ಮೇಲೆ ಒಂದು ರೌಂಡ್ ಹೋಗುವ ತಯಾರಿಯಲ್ಲಿ ಇರುವ, ಬಿಜೆಪಿಯವರಿಗಿಂತ ಭರ್ತಿ ಬಿಜೆಪಿಯಾಗಿ, ರಾಜನಿಗಿಂತ ಹೆಚ್ಚಿನ ರಾಜಭಕ್ತಿ ತೋರಿಸುತ್ತ ಇರುವ, ಯಾವುದೇ ಇಮೇಜ್ ಮ್ಯಾನೇಜರ್ ನೆರವಿಲ್ಲದೇ ತಮ್ಮ ಇಮೇಜ್ ಅನ್ನು ಶಾರುಖ್ ಖಾನ್ ಗಿಂತ ಹೆಚ್ಚು ಜತನದಿಂದ ಕಾಯ್ದುಕೊಂಡು ಬರುತ್ತಿರುವವರು ಇವರು.
ನಮ್ಮೆಲ್ಲರ ಹೆಮ್ಮೆಯ ಗೌಡರು ಹೆಂಗ ಇದ್ದಾರೆ ಅಂತ ನೀವು ತಿಳಿದುಕೊಂಡಿದ್ದೀರಿ? ಹಿಂದೂ ಹೃದಯ ಸಾಮ್ರಾಟ್ ಎನ್ನುವ ಆ ಒಂದು ಪೋಸ್ಟ್‌ಗೆ ಅಪರಿಮಿತ ಪ್ರತಿಸ್ಪರ್ಧಿಗಳು ಇದ್ದರೂ ತಾವೇ ನಿಜವಾದ ಸಾಮ್ರಾಟ್ ಅಂತ ಗಟ್ಟಿಯಾಗಿ ನಂಬಿರುವ, ತಮ್ಮ ಹಿಂಬಾಲಕರು ತಮ್ಮ ಮೇಲೆ ಇಟ್ಟಿರುವ ಭರವಸೆಯನ್ನು ಸುಳ್ಳು ಮಾಡದೇ ಇರಲು ಅಹೋರಾತ್ರಿ ಶ್ರಮಿಸುತ್ತಿರುವವರು ಈ ನಮ್ಮ ಗೌಡರು.
`ಒಂದಿಲ್ಲ ಒಂದು ದಿವಸ ನಾನು ಅಖಂಡ ಕರ್ನಾಟಕದ ಮುಖ್ಯಮಂತ್ರಿ ಆಗತೇನಿ. ವಿಧಾನ ಸೌಧದ ಮೆಟ್ಟಿಲಿನ ತನಕ ಜೆಸಿಬಿಯಲ್ಲಿ ಹೋಗತೇನಿ’, ಅಂತ ನಮ್ಮ ಆತ್ಮೀಯ ಸ್ನೇಹಿತರಾದ ಗೌಡರು ಜೋರಾಗಿ ಅಪ್ಪಣೆ ಕೊಡಿಸಿದ್ದಾರೆ. ಅದನ್ನು ಕಲ್ಪಿಸಿ ಕೊಂಡಾಗಲೆಲ್ಲ ನನಗೆ ಹೊಸದಾಗಿ ಸರ್ಕಾರಿ ನೌಕರಿ ಸಿಕ್ಕ ಜಸಪಾಲ ಭಟ್ಟಿ ಅವರು ತಮ್ಮ ಪತ್ನಿಯನ್ನು ರೋಡ್ ರೋಲರ್ ಮೇಲೆ ಕೂಡಿಸಿಕೊಂಡು ಊರಲ್ಲಿ ಒಂದು ರೌಂಡ್ ಹೋಗುವ ಚಿತ್ರ ಕಣ್ಣು ಮುಂದೆ ಬರುತ್ತದೆ. ಅದು ಹಾಗಿರಲಿ. ನನ್ನ ಕಲ್ಪನೆ ನಿಮಗ್ಯಾಕೆ ?
ಇಂತಿರ್ಪ ಗೌಡರು ಹೀಗೊಮ್ಮೆ ಬೆಳಗಾವಿಗೆ ಬಂದಿದ್ದರು. ಹಂಗೂ ಅವರು ವರ್ಷಕ್ಕೆ ಎರಡು ಬಾರಿ ಅಲ್ಲಿಗೆ ಹೋಗತಾರ. ಒಮ್ಮೆ ಚಳಿಗಾಲದ ಅಧಿವೇಶನವನ್ನು ಬೆಚ್ಚಗೆ ಮಾಡಲಿಕ್ಕೆ. ಇನ್ನೊಮ್ಮೆ ತಮ್ಮ ಅಸಂಖ್ಯ ಅಭಿಮಾನಿಗಳಲ್ಲಿ ಯಾರಾದರೂ ಏನಾದರೂ ಒಂದು ಕಾರ್ಯಕ್ರಮ ಇಟ್ಟುಕೊಂಡಾಗ ಜೋರು ಭಾಷಣ ಮಾಡಿ, ಅದನ್ನೇ ಪ್ರಮುಖ ಕಾರ್ಯಕ್ರಮವನ್ನಾಗಿ ಬದಲಾವಣೆ ಮಾಡಲಿಕ್ಕೆ.

ಅವತ್ತು ಬಂದವರು ಇಲ್ಲಿನ ಮಹಿಳಾ ರಾಜಕಾರಣಿಯೊಬ್ಬರ ವಿರುದ್ಧ ಘನಘೋರವಾದ ಭಾಷಣ ಮಾಡಿದರು. “ನಮ್ಮದೇ ಉಪ ಪಂಗಡಕ್ಕೆ ಸೇರಿದ ಅವರು ಬಹಳ ಒಳ್ಳೆಯವರು, ಆದರೆ ಅವರನ್ನು ಹಾಳು ಮಾಡುತ್ತಿರುವವರು ಅವರ ಸುತ್ತಲೇ ಇದ್ದಾರೆ. ಅದು ಅವರಿಗೆ ಗೊತ್ತಾಗುತ್ತಾ ಇಲ್ಲ. ಅವರು ಅವರನ್ನು ಹೊಗಳಿ ಹೊಗಳಿ ದಾರಿ ತಪ್ಪಿಸುತ್ತಿದ್ದಾರೆ’’ ಅಂತ ಗೌಡರು ಹೇಳಿದರು.
ತಾವು ಅವರಿಗೆ ಏನೇನೋ ಬಾಯಿಗೆ ಬಂದಿದ್ದು ಅಂದು ಮುಗಿಸಿದ ಮೇಲೆ. ಅವರ ಹಿಂಬಾಲಕರನ್ನು ಉದ್ದೇಶಿಸಿ, “ನೀವು ಅವರಿಗೆ ಏನೇನೋ ಬಾಯಿಗೆ ಬಂದಿದ್ದು ಅಂತೀರಿ. ಹಂಗೆಲ್ಲಾ ಅನ್ನ ಬ್ಯಾಡ್ರಿ. ಅವರದು ಒಂದು ಈಟ್ ಆಬರೂ ಉಳಸರ” ಅಂತ ಅಂದ್ರು.
`ಆಬರೂ’ ಅನ್ನುವ ಈ ಒಂದು ಪದದ ಸಲುವಾಗಿ ಇಷ್ಟೆಲ್ಲಾ ಪೀಠಿಕೆ ಹೇಳಬೇಕಾಯಿತು ನೋಡಿ. ಹಂಗ ಅಂದರೆ ಉರ್ದುದಲ್ಲಿ ಘನತೆ, ಮರ್ಯಾದೆ, ಗೌರವ ಅಂತ ಅರ್ಥ. ಸಾಬರೂ ಅನ್ನುವ ಪದದ ಜೊತೆಗೆ ಇದು ಅಂತ್ಯ ಸಂದಿ ಹೊಂದಿರುವ ಕಾರಣ ಇದನ್ನು ಅವರಿಗೆ ಸಂಬಂಧ ಪಟ್ಟಿದ್ದು ಅಂತ ತಿಳಿಬೇಡಿ. ಬಿಜೆಪಿ ಅಧ್ಯಕ್ಷ ವಿಜಯೆಂದ್ರ ಅವರು ಸೇರಿದಂತೆ ಎಲ್ಲರನ್ನೂ ದಂಡಿಸುವ ಈ ದಂಡಕ ಅರಣ್ಯದ ಮೃಗೇಂದ್ರರು ಸಂಸ್ಕೃತ , ಇಂಗ್ಲೀಷು ಅಥವಾ ಕನ್ನಡ, ಪದಗಳನ್ನು ಬಿಟ್ಟು ಈ ಉರ್ದು ಪದ ಯಾಕೆ ಬಳಸಿದರು ಎನ್ನುವುದೇ ಈಗಿನ ವಿಚಾರ.
ಇದೇ ಈ ಹೊತ್ತಿನ ವಿಶೇಷ. ಆದರೆ ಈ ಉತ್ತರ ಕರ್ನಾಟಕದವರ ಹಣೆಬರನೇ ಇಷ್ಟು ಅಂತ ಹೇಳಿ ಈ ಗಂಭೀರ ವಿಚಾರವನ್ನು ತಳ್ಳಿ ಹಾಕಬೇಡಿ.
ಇಂಥದೇ ಇನ್ನೊಂದು ಹೃದಯ ಸಾಮ್ರಾಟ್ ಅವರ ಕತೆ ಹೇಳಲು ನಿಮ್ಮಂಥ ರಸಿಕರಲ್ಲಿ ಅವಕಾಶ ಕೋರುತ್ತೇನೆ. ಇದು ಚಕ್ರವರ್ತಿ ಸೂಲಿಬೆಲೆ ಅಂತಲೇ ಹೆಸರಾಗಿರುವ ಮಿಥುನ್ ಚಕ್ರವರ್ತಿ ಅವರ ಬಗ್ಗೆ. ಹೆಸರಿನಲ್ಲಿ ಚಕ್ರವರ್ತಿ’ ಇದ್ದರೂ ಆ ಸಂಸ್ಥಾನಕ್ಕೆ ಇವರು ಇನ್ನೂ ರಾಜಕುಮಾರರು. ಕೆಲ ವರ್ಷಗಳ ಹಿಂದೆ ಉತ್ತರ ಕರ್ನಾಟಕದ ಒಂದು ದೊಡ್ಡ ಮಠದ ವಾರ್ಷಿಕ ಜಾತ್ರಾ ಉತ್ಸವದ ಕಾರ್ಯಕ್ರಮ ಇತ್ತು. ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಕರೆಸಬೇಕು ಅಂತ ಅಲ್ಲಿನ ಗುರುಗಳು ಮತ್ತು ಅವರ ಶಿಷ್ಯರು ಪಟ್ಟು ಹಿಡಿದರು. ಆದರೆ ಅದು ಸಾಧ್ಯಆಗಲಿಲ್ಲ. ಇಂತಿರ್ಪ ಕಾಲದಲ್ಲಿ, ಚಕ್ರವರ್ತಿ ಅವರು ಪ್ರಧಾನಿ ಅವರನ್ನು ಗಣಕಯಂತ್ರದ ಪರದೆಯ ಆನ್ಲೈನ್ ಭಾಷಣ ಮಾಡಲು ವಿನಂತಿಸಿಕೊಂಡರು. ಅವರು ಒಪ್ಪಿಕೊಂಡರು. ಅವರ ಭಾಷಣ ಮುಗಿದ ತಕ್ಷಣ. ಚಕ್ರವರ್ತಿ ಅಣ್ಣಾ ಅವರು ಮಾತಾಡಬೇಕು ಎನ್ನುವ ಸಭಿಕರ ವಿನಂತಿಯನ್ನು ಅವರು ಮನ್ನಿಸಿದರು. ತಮ್ಮ ಮಾತಿನ ಶುರುವಾತಿಗೆ ʼಹಮ್ ಪ್ರಧಾನಿ ಸಾಬ್ ಕೋ ತೆಹ್ ಎ ದಿಲ್ ಸೆ ಶುಕ್ರಿಯಾ ಅದಾ ಕರ್ತೆ ಹೈಂ’ ಅಂತ ಅಂದ್ರು. ಮಾಧ್ಯಮದ ಸಾಲಿನಲ್ಲಿ ಕುಳಿತಿದ್ದ ನಾನು “ಅರೆ, ಇವರು ಎಷ್ಟು ಚನ್ನಾಗಿ ಉರ್ದು ಮಾತಾಡುತ್ತಾರಲ್ಲ’’ ಅಂತ ಅಂದೆ. ನನ್ನ ಪಕ್ಕದಲ್ಲಿ ಕುಳಿತಿದ್ದ ಹಿರಿಯರೊಬ್ಬರು”ಅರೆ, ಇದು ಉರ್ದುವೇ?, ನಾನು ಹಿಂದಿ ಅಂತ ತಿಳಿದುಕೊಂಡಿದ್ದೆ’’ ಅಂತ ಅಂದ್ರು.

ಅಂದ ಹಾಗೆ ಭವ್ಯ ಭಾರತದ ಮುಂದಿನ ಪ್ರಧಾನಿ ಹುದ್ದೆಗೆ ನಮ್ಮೆಲ್ಲರ ಫೇವರಿಟ್ ಆಗಿರುವ, ಪ್ರತಿಸ್ಪರ್ಧಿಯೇ ಇಲ್ಲದಿರುವ ಸ್ಪರ್ಧಿಯಾಗಿರುವ ಯೋಗಿ ಆದಿತ್ಯನಾಥ ಅವರು ಮೊನ್ನೆ ಒಂದು ಭಾಷಣ ಮಾಡಿದರು. ಅದು ಯಾವಾಗಪ್ಪ ಅಂದರೆ, ದೆಹಲಿಯಲ್ಲಿ ಕಾಫ್ಕಾನ ಜಿರಲೆಗಳೆಲ್ಲ ಉಪವಾಸ ಕುಳಿತಿದ್ದರಲ್ಲ, ಆವಾಗ. ಅವರು ಏನು ಹೇಳಿದರು ಅಂದರೆ “ಭಾರತ ಮೇ ರೆಹನಾ ಹೈ ತೋ ಕಾಯ್ದೆ ಮೇ ರೆಹನಾ ಹೈ. ಕಾನೂನ ತೋಡೊಗೆ ತೋ ಜಹನ್ನುಮ್ ಮೇ ಜಾವೊಗೆ. ಜನ್ನತ ಮೇ ಜಾನೆ ಕೆ ಸಪನೆ ನಹಿ ದೇಖ ಸಕತೆ,’’ ಅಂತ ಎಚ್ಚರಿಕೆ ಕೊಟ್ಟರು. ಈ ಹಿನ್ನೆಲೆಯಲ್ಲಿ ನಿಮಗೆ ಒಂದು ಕ್ವಿಜ್.
ಅವರ ಹೇಳಿಕೆಯಲ್ಲಿ ಎಷ್ಟು ಪಾಡು ಪದಗಳು ಇವೆ? 2. ಅವರು ಸರಳವಾಗಿ, ಮುಗ್ಧತೆಯಿಂದ ಈ ಮಾತು ಹೇಳಿರಬಹುದೇ, ಅಥವಾ ಗೊತ್ತಿದ್ದು ಗೊತ್ತಿದ್ದೂ ಹೀಗೆ ಮಾಡಿರಬಹುದೆ ?
ಮಗದೊಮ್ಮೆ, ಬೆಂಗಾವಲೂರಿನ ದೊಡ್ಡ ಕನ್ನಡ ಪತ್ರಿಕೆಯೊಂದರ ಸಂಪಾದಕರು ಚುನಾವಣಾ ಪೂರ್ವದಲ್ಲಿ ಭೇಟಿಯಾಗಿದ್ದರು. ತಿಂಡಿ ಮಾಡಿದ ಮೇಲೆ ನಾನು ಈಗ ಸ್ವಲ್ಪ ಪರ್ಷಿಯನ್ ಡ್ರಿಂಕ್ ಕುಡಿಯೋಣ’ ಅಂದೆ. ಅವರು ಚಕಿತರಾಗಿ ನನ್ನತ್ತ ನೋಡಿದರು. ನಾನು ಲೋ ಟಕ್ಕೆ ನೀರು ಬಗ್ಗಿಸಿ ಕೊಂಡು ಕೂಡಿದೆ. ` ನೀರು ಎನ್ನುವುದು ಪರ್ಶಿಯನ್ ಮೂಲದ ಪದ ಅಲ್ಲವೇ? ಹೀಗಾಗಿ ಇದು ಪರ್ಶಿಯನ್ ಡ್ರಿಂಕ್, ಅಲ್ಲವೇ,’’ ಅಂತ ಅಂದಾಗ ಎಲ್ಲರೂ ನಗಾಡಿದರು.
ಹಂಗೆ ಮಾತಾಡುತ್ತಾ , ನಾವು ಅನೇಕ ಪರ್ಶಿಯನ್ ಮೂಲದ ಪದಗಳನ್ನು ಸರಳವಾಗಿ ದಿನಾಲು ಬಳಕೆ ಮಾಡುತ್ತೇವೆ. ಆದರೆ ಅದರ ಬಗ್ಗೆ ನಮಗೆ ಅಷ್ಟೊಂದು ಗಮನ ಇಲ್ಲ ಅಂತ ಅಂದೆ. ಅವರು ನೀವು ಉತ್ತರ ಕರ್ಣಾಟಕದವರು ಮಾಡುತ್ತಿರಬಹುದು, ನಾವು ದಕ್ಷಿಣದವರು ಅಥವಾ ಕರಾವಳಿಯವರು ಮಾಡುವುದು ಕಮ್ಮಿ ಅಂತ ಅಂದರು.
ಇಲ್ಲ. ಎಲ್ಲರೂ ಒಂದೇ. ಆದರೆ ನಮಗೆ ಗೊತ್ತಿದೆ, ನಿಮಗೆ ಗೊತ್ತಿಲ್ಲ,’’ ಅಂತ ಅಂದೆ. ಈಗ ನಮ್ಮ ಮುಂದೆ ಇರುವುದು ಏನು ಹೇಳಿ? -ಚುನಾವಣೆ. ಅದರಿಂದ ಏನು ಆಗಬಹುದು?- ಬದಲಾವಣೆ. ಇವೆರಡೂ ಪರ್ಶಿಯನ್ ಮೂಲದ ಪದಗಳು ಅಲ್ಲವೇ ಅಂದಾಗ, ಅವರಿಗೆ ಥಟ್ಟನೆ ಹೊಳೆಯಲಿಲ್ಲ. ಕೆಲ ನಿಮಿಷ ಗಳ ನಂತರಹೌದಲ್ಲವೇ!’’ ಅಂತ ಬೆರಗಾದರು . ಅವರು ಕರಾವಳಿ ಯವರು. ಆದರೆ ಬೆಂಗಳೂರು ಎಂಬ ಮಾಯಾ ಮೋಹಿನಿ ಅವರಲ್ಲಿ ನಾನೂ ಬ್ಯಾಂಗ್ಲೋರಿಯನ್ ಎನ್ನುವ ಭ್ರಮೆ ಮೂಡಿಸಿಬಿಟ್ಟಿದ್ದಳು. ಅದನ್ನು ಅವರಿಗೆ ಆಮೇಲೆ ಸೂಕ್ಷ್ಮವಾಗಿ ಹೇಳಿದೆ.
ಈ ಕನ್ಫ್ಯೂಸ್ ಕನ್ನಡಿಗರ ಪಾಡನ್ನು ಬಣ್ಣಿಸಲು ನಾನು ಒಂದು ಪದ ಕಂಡು ಹಿಡಿದಿದ್ದೇನೆ. ಅದು ಕನ್ನಡದಲ್ಲಿ `ಪಾಡು’, ಇಂಗ್ಲೀಷ್ ನಲ್ಲಿ ಯೂ ಪಾಡು- ಪಿ. ಎ. ಡಿ. ಯು. (ಪರ್ಷಿಯನ್, ಅರಬಿಕ್, ದಖನಿ ಹಾಗೂ ಉರ್ದು).
ಇದನ್ನು ಸರಳವಾಗಿ ಅರ್ಥ ಮಾಡಿಸಲು ನಾನು ಒಂದು ವಾಕ್ಯ ಹೇಳುತ್ತೇನೆ – `ಸರ್ಕಾರಿ ತರಬೇತಿ ಕೇಂದ್ರದ ಬಾಜು ರಸ್ತೆಯ ಬಜಾರ್ ನಲ್ಲಿ ತಾಜಾ ತರಕಾರಿ ಖರೀದಿ ಮಾಡಿ ನೂರು ರೂಪಾಯಿ ಕೊಟ್ಟರೆ, ಚಿಲ್ಲರೆ ವಾಪಸ್ ಕೊಡುತ್ತಾರೆ’. ಇದರಲ್ಲಿ ಎಷ್ಟು ಕನ್ನಡ ಪದಗಳಿವೆ ಎನ್ನುವುದು ಒಂದು ಕುಶಾಲಿನ ಕ್ವಿಜ್. ಇದಕ್ಕೆ ಫರಾಮಯಿಷಿ ಪೆಟ್ಟಿಗೆಯೇ ಬಹುಮಾನ.
ಅಂದ ಹಾಗೆ, ಉತ್ತರ ಕರ್ಣಾಟಕದ ಜನಪದರು ಸೂಕ್ತ ಎನ್ನುವ ಪದಕ್ಕೆ ಒಂದು ಸಮಾನರ್ಥಕ ಪದ ಬಳಸುತ್ತಾರೆ -ಅದು ಪಾಡು’, ಪಾಡ್ ಆತ ಬಿಡು’, ಅಂದರೆ ಒಳ್ಳೆಯದಾಯಿತು ಅಂತ ಅರ್ಥ.
ಇಷ್ಟೆಲ್ಲಾ ಪೀಠಿಕೆ ಹಾಕಿ ಯಾಕೆ ಮಾತಾಡಬೇಕಾಯಿತು ಎಂದರೆ ಅದಕ್ಕೂ ಒಂದು ಹಿಂದಿನ ಕತೆ ಇದೆ. ಮೊನ್ನೆ ಮೊನ್ನೆ ನೆರೆಯ ರಾಜ್ಯ ತೆಲಂಗಾಣ ದಿಂದ ಒಂದು ಹಸಿ ಸುದ್ದಿ ಬಂದಿದೆ. ಹಿಂದಿ ಕ್ಲಾಸ್ನಲ್ಲಿ ಉರ್ದು ಹೇಳಿಕೊಟ್ಟ ಶಿಕ್ಷಕರೊಬ್ಬರಿಗೆ ತರಗತಿಯ ಹೊರಗೆ ಕಳಿಸಿ ಶಿಕ್ಷೆ ಕೊಡಲಾಗಿದೆ. ಆ ಎರಡೂ ಭಾಷೆಗಳನ್ನು ಸರಿಯಾಗಿ ಅರಿಯದ, ಅವುಗಳ ವ್ಯತ್ಯಾಸ ತಿಳಿಯದ ಶಿಷ್ಯರು ಗುರುಗಳಿಗೆ ಸರಿಯಾಗಿ ಪಾಠ ಕಲಿಸಿದ್ದಾರೆ. ಒಂದಲ್ಲ, ಎರಡು ಕೈ ನೋಡಿದ್ದಾರೆ.
ಅಯ್ಯೋ ಅದನ್ನೇನು ಅಂತಾ ಪರಿ ಸುದ್ದಿ ಅಂತ ಹೇಳ್ತೀರಿ. ಅಲ್ಪ ಸಂಖ್ಯಾತರನ್ನು ಕಂಡಕಂಡಲ್ಲಿ, ಅಕಾರಣ, ಸ್ವಕಾರಣ, ವಿನಾಕಾರಣವಾಗ ಹೊಡೆಯುವುದು ಸಾಮಾನ್ಯವಾಗಿ ಬಿಟ್ಟಿದೆ. ಅಂತಹದ್ದೆಲ್ಲಾ `ಸುದ್ದಿ’ ಯ ವ್ಯಾಖ್ಯಾನದೊಳಗ ಬರೋದಿಲ್ಲ, ಅಂತ ನೀವು ಅನ್ನಬಹುದು. ಆ ವಾಕ್ ಹೇಳಲಿಕ್ಕೆ ನಿಮಗೆ ಸ್ವಾತಂತ್ರ್ಯ ಇದೆ.
ಹೀಗಾಗಿ ಈಗೊಂದು ಕತೆ ಕೇಳೋಣ.
ರತ್ನಗಿರಿ ರಹಸ್ಯ ಎನ್ನುವ ಒಂದು ಶ್ವೇತ -ಶ್ಯಾಮ ಕನ್ನಡ ಚಲನಚಿತ್ರ ಇದೆ. ನೀವು ನೋಡಿದ್ದೀರಾ?
ಅದರಲ್ಲಿ ಒಬ್ಬ ರಾಜ ಹಾಗೂ ಅವನ ಧೂರ್ತ ಮಂತ್ರಿಕನ ಕತೆ ಇದೆ. ಮಂತ್ರ ಕಲಿಯಲು ಬಂದ ರಾಜನನ್ನು ಗಿಣಿಯಾಗಿಸಿ ಪಂಜರದಲ್ಲಿ ಇರಿಸಿ, ತಾನೇ ರಾಜ್ಯಭಾರ ಮಾಡುವ, ಯುವ ರಾಜಕುಮಾರಿಯ ಮೇಲೆ ಆಸೆ ಮಾಡುವ ಆ ದುಷ್ಟನನ್ನು ಒಬ್ಬ ಹಳ್ಳಿಯ ಹುಡುಗ ಸೋಲಿಸಿ, ರಾಜನನ್ನು ಬಂಧನ ದಿನದ ಬಿಡಿಸಿ ರಾಜಕುಮಾರ ನಾಗುವ ಕತೆ ಇದೆ. ಇದು 1952 ರ ಕತೆ.
ಸುಮಾರು ಐದು ನೂರು ವರ್ಷದ ಹಿಂದೆ ಇದೇ ಕತೆ ಯನ್ನು ಆಧರಿಸಿ ಉರ್ದು ಭಾಷೆಯ ಮೊದಲ ಕಾದಂಬರಿ ಬರೆಯಲಾಯಿತು. ಬೀದರ್ ಮೂಲದ ಫಕ್ರುದ್ದೀನ್ ನಿಜಾಮಿ ಬರೆದ `ಮಸನಬಿ ಕದಂ ರಾವ್, ಪದಂ ರಾವ್’ ಎನ್ನುವ 4,000 ಸಾಲಿನ ಗದ್ಯ ಕಾವ್ಯ, ಸರಿಸುಮಾರು ಇದೇ ಕತೆಯನ್ನು ಹೇಳುತ್ತದೆ.
ಬರೀ ಇಷ್ಟೇ ಹೇಳಿದರೆ ಈ ಪ್ರಾಥಮಿಕ ಸಾಹಿತ್ಯ ಕೃತಿಯ ಬಗ್ಗೆ ಹೆಚ್ಚು ಹೇಳಿದಂತೆ ಆಗೋದಿಲ್ಲ. ಈ ಎರಡೂ ಕೃತಿಗಳ ಕತೆ ಒಂದೇ ಯಾಕೆ? ಅವೆರಡೂ ಏನು ಒಂದೇ ಸಂಸ್ಕೃತಿ ಇರುವ ಪ್ರದೇಶದಲ್ಲಿ ಹುಟ್ಟಿದವೋ ಅಥವಾ ಒಂದೇ ಭಾಷಾ ಪರಿಸರದೊಳಗ ಇದ್ದವೋ? ನಮಗೂ ಅವರಿಗೂ ಏನು ಸಂಬಂಧ? ಆ ಭಾಷೆಗೂ, ಈ ಭಾಷೆಗೂ ಏನು ಸಂಬಂಧ? ಅಲ್ಲೇ ಎಲ್ಲೋ ಪರದೇಶದೊಳಗ ಹುಟ್ಟಿದ ಉರ್ದುಕ್ಕೂ, ನಮ್ಮ ಕಾವೇರಿಯಿಂದ ಮಾ ಗೋದಾವರಿಯವರೆಗೂ ಹಬ್ಬಿದ ಕನ್ನಡದ ಕಸ್ತೂರಿಗೂ ಯಾವ ಕಳಬಳ್ಳಿ? ಎತ್ತಣ ಬೆಟ್ಟದ ನೆಲ್ಲಿಕಾಯಿ, ಎಲ್ಲಿನ ಸಮುದ್ರ, ಎಲ್ಲಿಯ ಉಪ್ಪು?
ಹಿಂಗ ನಾವೇ ನಾವೇ ವಿಚಾರ ಮಾಡೋದು ಬಿಟ್ಟು ಒಮ್ಮೆ ತಿಳಿದವರು, ನಮ್ಮ ಹಿರಿಯರು (ಇವರಿಗೆ ಆ ಹಳೆ ಮೈಸೂರ್ ಕಡೆ `ಪೂರ್ವಸೂರಿಗಳು’ ಅಂತಾರ) ಏನು ಹೇಳಿದ್ದಾರೆ ಅಂತ ನೋಡೋಣ.
ಭಾಷೆ, ಇತಿಹಾಸ, ಸಂಸ್ಕೃತಿ ಅಭ್ಯಾಸ ಮಾಡಿದ ಅನೇಕರ ಪ್ರಕಾರ ಉರ್ದು ಅನ್ನೋದು ಒಂದು ಭಾರತೀಯ ಭಾಷೆ. ಖರೆ ಅಂದ್ರ ಬೇರೆ ಕೆಲವು ಭಾಷೆಗಳನ್ನು ನಾವು ಅಗದೀ ಭಾರತೀಯ ಭಾಷೆ ಅಂತ ತಿಳಿದು ಕೊಂಡಿದ್ದೇವೆಯೋ ಅವುಗಳಷ್ಟೇ , ಶಂಬರ ಟಕ್ಕೆ , ಭಾರತೀಯ ಭಾಷೆ.
ಅದು ಹೆಂಗ? ಇದನ್ನು ಅರ್ಥ ಮಾಡಿಕೊಳ್ಳಬೇಕು ಅಂದರೆ 1947ರ ನಂತರದ ಭಾರತದ ಭೂಪಟ ವನ್ನು ನಾವು ಒಂದು ಕ್ಷಣ ಪಕ್ಕಕ್ಕೆ ಇಡಬೇಕು. ಕೆಲ ಶತಮಾನ ಹಿಂದಕ್ಕೆ ಹೋಗಬೇಕು. ಬ್ರಿಟಿಷರು, ಡಚ್ಛರು, ಮುಘಲರು, ಹೂಣರು, ಕುಶಾಣರು , ಗ್ರೀಕರು, ರೋಮನ್ನರು, ಪರಷಿಯನ್ನರು ಎಲ್ಲರೂ ಆ ಕಡೆ- ಈ ಕಡೆ ಓಡಾಡಿದಕ್ಕಿಂತ ಹಿಂದೆ ಅಖಂಡ ಭಾರತದ ಸೀಮೆಗಳು ಏನಾಗಿದ್ದವು ಅಂತ ಒಮ್ಮೆ ಊಹಿಸಿಕೊಳ್ಳಬೇಕು. ಆಗ ಮಧ್ಯ ಏಷಿಯಾದ ಹೃದಯ ಭಾಗದಲ್ಲಿ, ವಿವಿಧ ನದಿ ಕಣಿವೆಗಳ ಮೇಲೆ ಹುಟ್ಟಿಕೊಂಡ ನಾಗರಿಕತೆಗಳಲ್ಲಿ ಎರಡು ಪ್ರಮುಖ ಭಾಷಾ ಗುಚ್ಛಗಳು ಹುಟ್ಟಿಕೊಂಡವು. ಅವು ಇಂಡೋ ಯುರೋಪಿಯನ್ ಹಾಗೂ ಪ್ರೋಟೋ ಅಫ್ರೋ ಏಷಿಯಾಟಿಕ್ ಹಾಗೂ ಪ್ರೋಟೋ ಇಂಡೋ ಯುರೋಪಿಯನ್. ಈ ಎರಡು ಗುಂಪುಗಳಲ್ಲಿ ಸಹೋದರ ಸಂಬಂಧ ಇದೆ. ಅನೇಕ ಪದಗಳ, ಪದಪುಂಜಗಳ, ವ್ಯಾಕರಣ ನಿಯಮಗಳ, ಕೊಡು- ಕೊಳ್ಳುವ ಪ್ರಕ್ರಿಯೆ ನಡೆದಿದೆ, ನಡೆಯುತ್ತಲೇ ಇದೆ.
ಈ ವಿನಿಮಯ ಕೇವಲ ಇಂಡೋ ಯುರೋಪಿಯನ್ ಭಾಷೆಗಳಿಗೆ ಸೀಮಿತವಾಗಿಲ್ಲ. ಪ್ರೋಟೋ- ದ್ರಾವಿಡ್ ಹಾಗೂ ದ್ರಾವಿಡ್ ಭಾಷೆಗಳಿಗೂ ವಿಸ್ತರಿಸಿದೆ. `ಪಾಡು’ ಭಾಷೆಗಳಿಗೆ ಮೈಲುಗಟ್ಟಲೆ ದೂರ ಇವೆ ಅಂತ ನಾವು ಅಂದು ಕೊಂಡಿರುವ ತಮಿಳು- ಮಲಯಾಳ ಭಾಷೆಗಳಲ್ಲಿಯೂ ಕೂಡ ಇದು ಕಂಡು ಬರುತ್ತದೆ.
ನಾವು- ನೀವೆಲ್ಲ ಒಂದು ಸಣ್ಣ ಸಂಡೆ ಪ್ರಾಜೆಕ್ಟ್ ಶುರು ಮಾಡಬಹುದು. ನಾನು ಈಗಾಗಲೇ ಶುರು ಮಾಡಿರುವುದರಿಂದ ನಿಮಗೆ ನೀವೇ ಮಾಡಿ ನೋಡಿ ಎಂದು ಹೇಳಬಹುದು.
ನಿಮ್ಮ ಎದುರು ಅಂದಿನ ದಿನ ಪತ್ರಿಕೆ ಇರಲಿ. ಇನ್ನೊಂದು ಕಡೆ, ಒಂದು ಖಾಲಿ ಕಾಗದ ಇರಲಿ. ಆ ಪತ್ರಿಕೆಯಲ್ಲಿ ನನ್ನಂತಹ ಬಡಪಾಯಿ ಪತ್ರಕರ್ತರು ಬಳಸಿದ ಪಾಡು ಪದಗಳನ್ನು ಒಂದು ಕಡೆ ಪಟ್ಟಿ ಮಾಡಿ ಬರೆಯಿರಿ. ಇದು ಪಾಡು ಪದ ಎಂದು ಖಾತ್ರಿ ಇರುವ, ಇಲ್ಲದಿರುವ ಅಥವಾ ಸಂದೇಹ ಬರುವ ಪದಗಳನ್ನೆಲ್ಲವನ್ನೂ ಪಟ್ಟಿ ಮಾಡಿ. ಯಾವುದೋ ಒಂದು ಪದದ ಮೂಲದ ಬಗ್ಗೆ ನಿಮಗೆ ಮಾಹಿತಿ ಇಲ್ಲದಿದ್ದರೆ, ಅಥವಾ ಅನುಮಾನ ಬಂದರೆ, ಪದ ಮೂಲ ವಿಜ್ಞಾನದ ಬಗ್ಗೆ ಆಜೀವ ಸಂಶೋಧನೆ ನಡೆಸಿದ ಪಾವೆಂ ಆಚಾರ್ಯ ಅವರ `ಪದಾರ್ಥ ಚಿಂತಾಮಣಿ’ ಪುಸ್ತಕ ನೋಡಿ. ಆ ಪುಸ್ತಕ ನಿಮ್ಮ ಕಪಾಟಿನಲ್ಲಿ ಇಲ್ಲದಿದ್ದರೆ, ಚಿಂತಿಸಬೇಡಿ. ಸಂಚಯದ ಗೆಳೆಯರ ಗುಂಪಿನ ಓಂಶಿವಪ್ರಕಾಶ ಹಾಗೂ ಇತರರು ಪಾವೆಂ ಆಚಾರ್ಯ ಅವರ ಸಮಗ್ರ ಸಾಹಿತ್ಯ ಡಿಜಿಟಲಿಕರಣ ಮಾಡಿದ್ದಾರೆ. ಅದು ಎಲ್ಲರಿಗೂ ಉಚಿತವಾಗಿ ಸಂಚಯ ತಾಣದಲ್ಲಿ ಸಿಗುತ್ತದೆ (https://pavem.sanchaya.net/).
ಈ ಕೆಲಸವನ್ನು ವಾರಕ್ಕೆ 2-3 ಬಾರಿ ಮಾಡಿ. ಒಂದೆರಡು ತಿಂಗಳ ನಂತರ ನಿಮಗೆ ಆಶ್ಚರ್ಯ ಆಗುತ್ತದೆ. ಈ ಪದವನ್ನು ನಾನು ಕನ್ನಡ ಅಂದುಕೊಂಡಿದ್ದೇನೆಲ್ಲ ಅಂತ ನಿಮಗೆ ಸಹಜವಾಗಿ ಅನ್ನಿಸುತ್ತದೆ. ಹಿಂದೆ ಒಮ್ಮೆ ಹೀಗೆಯೇ ನನಗೆ ಅನ್ನಿಸಿದ್ದಾಗ ನಾನು `ಬಿಸಿಲು ಏರಿದಾಗ ಕನ್ನಡಿಗರು ಏನು ಕುಡಿಯಬೇಕು?’ ಅನ್ನುವ ಲೇಖನ ಬರೆದಿದ್ದೆ. ಇಂಥಾ ಲೇಖನ ಬರೆಯಲು, ಅರಿಯಲು, ಹಂಚಲು, ನಿಮಗೂ ಸ್ಪೂರ್ತಿ ಬರಬಹುದು. ಬರಲಿ ಅಂತ ಆಶಿಸುತ್ತೇನೆ.

ಹೃಷಿಕೇಶ ಬಹದ್ದೂರ ದೇಸಾಯಿ
ಪತ್ರಕರ್ತರು




