ಚೈತ್ರಾ ಪ್ರಕರಣ | ಬಿಜೆಪಿಯ ವಸೂಲಿ ದಂಧೆಯ ಬಲಿಪಶುಗಳಲ್ಲಿ ಹಿಂದೂ-ಮುಸ್ಲಿಂ ಇಬ್ಬರೂ ಇದ್ದಾರೆ

Date:

Advertisements
ಉಗ್ರ ಭಾಷಣ ಮಾತ್ರವಲ್ಲ, ಹಣದ ಸುಲಿಗೆಯಲ್ಲೂ ಚೈತ್ರಾ ಕುಂದಾಪುರಳ ನಿಸ್ಸೀಮ ಪ್ರತಿಭೆ ಬಯಲಾಗಿದೆ. ಕಾಂಗ್ರೆಸ್‌ ಸರ್ಕಾರ ಆಡಳಿತದಲ್ಲಿರುವಾಗ ಈ ಕಹಿಸತ್ಯ ಹೊರಬಿದ್ದದ್ದು ಬಿಜೆಪಿಗೆ ನುಂಗಲಾರದ ತುತ್ತು. ಟಿಕೆಟ್‌ ದಂಧೆಯ ಜೊತೆಗೆ ನಾನಾ ರೂಪಗಳಲ್ಲಿ ಬಿಜೆಪಿ ಹಣ ಲೂಟಿ ಹೊಡೆದಿರುವ ಬಗ್ಗೆ ಚರ್ಚೆಗಳು ಶುರುವಾಗಿವೆ. 

ಕೇಸರಿ ಶಾಲು ಸುತ್ತಿಕೊಂಡು ಅನ್ಯ ಕೋಮುಗಳ ವಿರುದ್ಧ ದ್ವೇಷ ಬಿತ್ತುವುದು, ಸಂಘಪರಿವಾರದ ವಿರುದ್ಧವಿರುವರನ್ನು ದೇಶದ್ರೋಹಿಗಳ ಪಟ್ಟಿಗೆ ಸೇರಿಸಿ ಉಗ್ರ ಭಾಷಣ ಮಾಡುವುದು, ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು ವಿನಾಕಾರಣ ಸದಾ ಬೊಬ್ಬಿರಿಯುವುದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಗತಿಪರರನ್ನು ಹೀನಾಯವಾಗಿ ನಿಂದಿಸುವುದು… ಇದು ಬಿಜೆಪಿಯ ಬೆಂಬಲಿಗರು, ಉಗ್ರ ಭಾಷಣಕಾರರು ದಶಕಗಳಿಂದ ಮಾಡಿಕೊಂಡು ಬರುತ್ತಿರುವ ಕುಹಕ ಕಾಯಕ.

ರಾಷ್ಟ್ರಮಟ್ಟದಲ್ಲೂ ಹಿಂದುತ್ವದ ಹೆಸರಿನಲ್ಲಿ ನಡೆಯುತ್ತಿರುವ ಹುಸಿ ರಾಷ್ಟ್ರವಾದದ ವ್ಯಾಧಿಯಿದು. ಬಿಜೆಪಿ ಮತ್ತು ಆರೆಸ್ಸೆಸ್ ಬೆಂಬಲ ಇವರಿಗೆ ಉಂಟು. ಅನೈತಿಕ ಪೊಲೀಸಗಿರಿ, ಪುಂಡಾಟಗಳನ್ನು “ಕ್ರಿಯೆಗೆ ತಕ್ಕ ಪ್ರತಿಕ್ರಿಯೆ” ಎಂದು ಹೇಳಿ ಸಮರ್ಥಿಸಿಕೊಂಡು ಕೋಮುವಾದದ ಕಿಚ್ಚಿಗೆ ತುಪ್ಪ ಸುರಿಯುತ್ತ ಬಂದಿದ್ದಾರೆ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ನಾಯಕರು.

ಕರಾವಳಿ ಜಿಲ್ಲೆಗಳ ಚುನಾವಣೆಗಳಲ್ಲಿ ದಶಕಗಳಿಂದ ಬಿಜೆಪಿ ಅಭ್ಯರ್ಥಿಗಳ ಸತತ ಗೆಲುವುಗಳ ಹಿಂದೆ ಈ ಉಗ್ರ ಭಾಷಣಕಾರರ ಕಡು ಕೋಮುವಾದದ ಕಾಣಿಕೆಯೂ ಇದೆ. ಹೆಚ್ಚು ಕೆಲಸ ಮಾಡದಿದ್ದರೂ, ಕ್ಷೇತ್ರದ ಅಭಿವೃದ್ಧಿ ಕುರಿತು ತಲೆ ಕೆಡಿಸಿಕೊಳ್ಳದೆ ಇದ್ದರೂ ಮತ ಗಳಿಕೆಯಲ್ಲಿ ಈ ಬಿಜೆಪಿ ನಾಯಕರು ಹಿಂದೆ ಬಿದ್ದಿಲ್ಲ. ಸದಾ ಕೋಮುಗಲಭೆಯ ಉರಿ ಹಚ್ಚುವುದು, ಯುವಕರ ಕೈಗೆ ತಲವಾರು, ತ್ರಿಶೂಲ ಮುಂತಾದ ಆಯುಧಗಳನ್ನು ನೀಡುವುದು, ಮನೆ ಮನೆಯಲ್ಲೂ ತಲವಾರು ಇಟ್ಟುಕೊಳ್ಳುವಂತೆ ತಾಕೀತು ಮಾಡುವುದು ಇವರ ಎಡೆಬಿಡದ ಚಾಳಿ.  “ಮಹಿಳೆಯರು ಕೇವಲ ಸೌಟ್‌ ಹಿಡಿಯೋದಲ್ಲ ತಲವಾರು ಹಿಡಿದು ಬೀದಿಗೆ ಬರಬೇಕು. ಹಿಂದೂ ಹೆಣ್ಣಮಕ್ಕಳ ರಕ್ಷಣೆಗೆ ಬೀದಿಗೆ ಬನ್ನಿ” ಎಂಬುದು ಇತ್ತೀಚೆಗೆ ವಿಎಚ್‌ಪಿಯ ಶರಣ್‌ ಪಂಪ್ವೆಲ್‌ ನೀಡಿದ್ದ ಹೇಳಿಕೆ. ಹೀಗೆ ಯುವ ಸಮುದಾಯ ಕೇಸರಿ ಹೊದ್ದು ಬೀದಿ ಪಾಲಾಗಿದ್ದು ಸಾಲದೆಂಬಂತೆ ಮಹಿಳೆಯರೂ ಮನೆಬಿಟ್ಟು ತಲವಾರು ಹಿಡಿದು ಹೊರಬನ್ನಿ, ಹಿಂದೂ ಸಮಾಜ ಅಪಾಯದಲ್ಲಿದೆ ಎಂದು ಬೊಬ್ಬೆ ಹೊಡೆಯುತ್ತಾ ತಾವು ಮಾತ್ರ ವಿಲಾಸಿ ಜೀವನ ನಡೆಸುತ್ತಿರುವುದರ ಹಿಂದೆ ಹಲವು ಕರಾಳ ದಂಧೆಗಳ ಕಮಾಯಿ ಇರುವುದು ಗುಟ್ಟಾಗಿ ಉಳಿದಿಲ್ಲ.

ಕಳೆದ ಐದಾರು ವರ್ಷಗಳಿಂದ ಪ್ರಚೋದನಕಾರಿ ಭಾಷಣ ಮಾಡುತ್ತಾ ರಾಜ್ಯದೆಲ್ಲೆಡೆ ಪ್ರಸಿದ್ಧಿ ಪಡೆದ ಹೆಸರು ಚೈತ್ರಾ ಕುಂದಾಪುರ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಎಂ ಎ ಮಾಡಿ ಕೆಲ ಕಾಲ ಟಿವಿ, ಪತ್ರಿಕೆಗಳಲ್ಲಿ ಕೆಲಸ ಮಾಡಿದಾಕೆ. ಕಾಲೇಜು ದಿನಗಳಲ್ಲಿಯೇ ಎಬಿವಿಪಿಯಲ್ಲಿ ಗುರುತಿಸಿಕೊಂಡವಳು. ಆಕೆಯ ವಾಕ್‌ಚಾತುರ್ಯದ ಲಾಭವನ್ನು ಸಂಘಪರಿವಾರ ತನ್ನ ಕೋಮು ರಾಜಕಾರಣಕ್ಕೆ ಬಸಿದು ಬಳಸಿಕೊಂಡಿತು. ಪ್ರಚೋದನಕಾರಿ ಭಾಷಣ ಮಾಡಿದ ಕಾರಣಕ್ಕೆ ಹಲವು ಪ್ರಕರಣಗಳು ಈಕೆಯ ಮೇಲೆ ದಾಖಲಾಗಿವೆ. 2018ರಲ್ಲಿ ಗಂಗಾವತಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಕೋಮು ಪ್ರಚೋದಕ ಭಾಷಣ ಮಾಡಿದ ಕಾರಣಕ್ಕೆ ಪ್ರಕರಣ ದಾಖಲಾಗಿತ್ತು. “ಭಾಷಣಕ್ಕೆ ಕರೆದ ಬಿಜೆಪಿ ನಾಯಕರು ಪ್ರಕರಣ ದಾಖಲಾದಾಗ ಬೇಲ್‌ ಕೊಡಿಸಲೂ ಬಂದಿಲ್ಲ” ಎಂದು ಆಕೆ ಅಲವತ್ತುಕೊಂಡಿರುವ ಆಡಿಯೋವೊಂದು ‘ವೈರಲ್‌’ ಆಗಿತ್ತು. ನಂತರ ಬಂದ ಯಡಿಯೂರಪ್ಪ ಸರ್ಕಾರ ಆ ಪ್ರಕರಣವನ್ನು ವಾಪಸ್‌ ಪಡೆದಿತ್ತು.

Advertisements
Chaitra kundapur1
ಹಿಂದೂ ಸಂಘಟನೆಗಳ ಪಾಲಿನ “ಪ್ರಖರ ವಾಗ್ಮಿ” ಚೈತ್ರಾ

ಸ್ವಲ್ಪದಿನ ತಣ್ಣಗಿದ್ದ ಚೈತ್ರ ಮತ್ತೆ ಚಿಗುರಿದ್ದು ಸಮ್ಮಿಶ್ರ ಸರ್ಕಾರ ಹೋಗಿ ಬಿಜೆಪಿ ಸರ್ಕಾರ ಬಂದಾಗಲೇ. ಎರಡು ವರ್ಷಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಮಠದ ನಡುವಿನ ವಿವಾದದ ಸಮಯದಲ್ಲಿ ಪುಂಡರ ಗುಂಪು ಕಟ್ಟಿಕೊಂಡು ಸುಬ್ರಹ್ಮಣ್ಯಕ್ಕೆ ಹೋಗಿ ಗದ್ದಲ ಎಬ್ಬಿಸಿ ಸುದ್ದಿಯಾಗಿದ್ದಳು. ದುರ್ಗಾವಾಹಿನಿ, ಎಬಿವಿಪಿ, ಬಜರಂಗದಳ ಮುಂತಾದ ಹಿಂದುತ್ವವಾದಿ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಮುಸ್ಲಿಂ ದ್ವೇಷದ ಹೇಳಿಕೆಗಳನ್ನು ಕೊಡುತ್ತಾ, ಲವ್‌ ಜಿಹಾದ್‌, ಅಕ್ರಮ ಗೋ ಸಾಗಣೆ ಬಗ್ಗೆ ಪುಂಖಾನುಪುಂಖ ಭಾಷಣ ಕುಟ್ಟುತ್ತ, ಕಡೆಗೆ ಈಕೆ ತುಳಿದದ್ದು ಕೋಟಿಗಟ್ಟಲೆ ಹಣ ಲೂಟಿ ಹೊಡೆಯುವ ಕೆಟ್ಟ ದಾರಿಯನ್ನು. ಈಕೆಯ ಬಲಿಪಶುವಾದವನೂ ಹಿಂದೂ, ಲೂಟಿ ಮಾಡಿದ್ದು ಬಿಜೆಪಿಯ ಹೆಸರಿನಲ್ಲಿ!

ಮುಸ್ಲಿಮರ ವಿರುದ್ಧ ಹೀನಾಯವಾಗಿ ಭಾಷಣ ಮಾಡುವ ಈಕೆ ಬಚ್ಚಿಟ್ಟುಕೊಂಡಿದ್ದು ಮುಸ್ಲಿಂ ಗೆಳತಿಯ ಮನೆಯಲ್ಲಿ ಎಂದು ವರದಿಯಾಗಿತ್ತು. ಈಕೆಯ ಪರ ವಾದಿಸುತ್ತಿರುವ ವಕೀಲರು ಮುಸಲ್ಮಾನರು ಎಂಬುದೂ ಸೋಜಿಗದ ಸಂಗತಿ. ಇದೇ ರೀತಿ ಕೋಮುವಾದಿ ಭಾಷಣ ಮಾಡುವ ಶರಣ್‌ ಪಂಪ್ವೆಲ್‌, ಮುಸ್ಲಿಂ ಉದ್ಯಮಿಗೆ ಸೇರಿದ ಮಂಗಳೂರಿನ ಮಾಲ್‌ ಒಂದಕ್ಕೆ ʼಮ್ಯಾನ್‌ಪವರ್‌ ಸಪ್ಲಯರ್!‌ʼ. ಹೊರಗಿನ ಸಮಾಜದಲ್ಲಿ ಕೋಮು ವಿಷ ಕಾರುವ ಯುವ ಮನಸ್ಸುಗಳನ್ನು ಒಡೆಯುವ ಇವರಿಗೆ ಹಣ ಸಂಪಾದನೆಗಾಗಿ ಮುಸ್ಲಿಮರ ಜೊತೆ ವ್ಯವಹರಿಸಲು ಯಾವ ಹಿಂಜರಿಕೆಯೂ ಇಲ್ಲ.

ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಕರೆಯ ಮೇರೆಗೆ ಉತ್ತರ ಕರ್ನಾಟಕದಲ್ಲೂ ಈಕೆ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದಾಳೆ. ಲಜ್ಜೆಗೆಟ್ಟ ಮಾಧ್ಯಮಗಳು ಈಕೆಯನ್ನು ಯುವವಾಗ್ಮಿ, ಚಿಂತಕಿ, ಸಾಮಾಜಿಕ ಹೋರಾಟಗಾರ್ತಿ, ಹಿಂದುತ್ವದ ‘ಫೈಯರ್‌ ಬ್ರಾಂಡ್‌’ ಎಂದು ಬಣ್ಣಿಸಿವೆ. ಸಿದ್ದರಾಮಯ್ಯ ಅವರು ಹಿಂದಿನ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಪರೇಶ್‌ ಮೇಸ್ತನ ಸಾವಿನ ಪ್ರಕರಣದಲ್ಲಿ ಬಿಜೆಪಿಯ ಪ್ರತಿಭಟನಾ ಸಭೆಯಲ್ಲಿ ಭಾಷಣ ಮಾಡುತ್ತಾ “ಸಿದ್ದರಾಮಯ್ಯನವರೇ ಪರೇಶ್‌ ಮೇಸ್ತನ ಕೊಲೆಗಾರ” ಎಂದು ಹೇಳಿದ್ದರೂ ಕಾಂಗ್ರೆಸ್‌ ಸರ್ಕಾರ ಆಕೆಯ ವಿರುದ್ಧ ಯಾವುದೇ ಕ್ರಮ ಜರುಗಿಸಿರಲಿಲ್ಲ.  

ಹಾರಿಕಾ
ಹಿಂದುತ್ವದ ಉಗ್ರ ಭಾಷಣಕಾರರಾದ ಹಾರಿಕಾ ಮಂಜುನಾಥ್, ಚೈತ್ರಾ ಕುಂದಾಪುರ, ಪುನೀತ್‌ ಕೆರೆಹಳ್ಳಿ

ಉಗ್ರ ಭಾಷಣ ಮಾತ್ರವಲ್ಲ, ಹಣದ ಸುಲಿಗೆಯಲ್ಲೂ ಈಕೆಯ ನಿಸ್ಸೀಮ ಪ್ರತಿಭೆ ಬಯಲಾಗಿದೆ. ಕಾಂಗ್ರೆಸ್‌ ಸರ್ಕಾರ ಆಡಳಿತದಲ್ಲಿರುವಾಗ ಈ ಕಹಿಸತ್ಯ ಹೊರಬಿದ್ದದ್ದು ಬಿಜೆಪಿಗೆ ನುಂಗಲಾರದ ತುತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಡುಪಿಯ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್‌ ಕೊಡಿಸುವ ಆಮಿಷವೊಡ್ಡಿ ಚೈತ್ರಾ ಮತ್ತು ಆಕೆಯ ಪುಂಡರ ಬಳಗ ಸುಮಾರು ಎಂಟೂವರೆ ಕೋಟಿ ರೂಪಾಯಿ ಲೂಟಿ ಹೊಡೆದಿದ್ದಾರೆ ಎಂಬ ಆರೋಪ ಸ್ಫೋಟಿಸಿದೆ. ಸುಮಾರು ಐದು ಕೋಟಿ ರೂಪಾಯಿಗೆ ಬಲಿಪಶು ಗೋವಿಂದ ಬಾಬು ಪೂಜಾರಿ ದಾಖಲೆ ಇಟ್ಟುಕೊಂಡಿದ್ದಾರೆ. ಉಳಿದ ಹಣಕ್ಕೆ ದಾಖಲೆ ಇಲ್ಲ. ಈ ಚಿಕ್ಕ ವಯಸ್ಸಿನ ಚೈತ್ರಾಳನ್ನು ಆತ ನಂಬಲು ಆಕೆಗೆ ಬಿಜೆಪಿ ಮತ್ತು ಸಂಘಪರಿವಾರಿಗಳ ಜೊತೆಗಿರುವ ಹತ್ತಿರದ ನಂಟು ಕಾರಣ. ಈಕೆಯ ಮಾತಿನ ಮೋಡಿಗೆ ಬಿದ್ದವರಲ್ಲಿ ಗೋವಿಂದ ಪೂಜಾರಿ ಒಬ್ಬರೇ ಅಲ್ಲ. ಉಡುಪಿ ಮತ್ತು ಕೋಟದಲ್ಲಿ ಕೇಸರಿ ಶಾಲುಗಳ ಅಂಗಡಿ ಹಾಕಲು ನೆರವು ನೀಡುತ್ತೇನೆ ಎಂದು ನಂಬಿಸಿ ಮೀನು ವ್ಯಾಪಾರಿಯೊಬ್ಬನಿಂದ 5 ಲಕ್ಷ ರೂಪಾಯಿ ಕಿತ್ತಿರುವ ಬಗ್ಗೆ ಸುದಿನ ಎಂಬವರು ಕೋಟ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಕೋಟ ಪೊಲೀಸರು ವಿಚಾರಣೆಗಾಗಿ ಚೈತ್ರಾಳನ್ನು ತಮಗೆ ಒಪ್ಪಿಸುವಂತೆ ಕೋರ್ಟ್‌ಗೆ ಮನವಿ ಮಾಡಿರುವ ಸುದ್ದಿ ಬಂದಿದೆ. ತನಗಿರುವ ಖ್ಯಾತಿ, ಸಂಘಪರಿವಾರ ಮತ್ತು ಬಿಜೆಪಿಯ ನಾಯಕರ ಜೊತೆಗಿನ ಸಲುಗೆ, ಅಭಿಮಾನಿ ಬಳಗ, ಹೀಗೆ ಈಕೆ ಹಲವು ಭ್ರಮೆಗೆ ಬಿದ್ದು ಹಣ ಮಾಡುವ ದಂಧೆಗೆ ಇಳಿದಿರುವುದು ವಿಪರ್ಯಾಸ.

ಈ ಪ್ರಕರಣ ಹೊರ ಬರುತ್ತಿದ್ದಂತೆ, “ಬಿಜೆಪಿಯಲ್ಲಿ ಟಿಕೆಟ್‌ ಮಾರಾಟಕ್ಕೆ ಅವಕಾಶವೇ ಇಲ್ಲ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ” ಎಂದು ಕೆಲ ಬಿಜೆಪಿ ನಾಯಕರು ಬೀಗಿದ್ದಾರೆ. ಚೈತ್ರಾ ಕುಂದಾಪುರ ಯಾರೆಂದೇ ಗೊತ್ತಿಲ್ಲ, ಆಕೆಯ ಸಂಪರ್ಕವಿಲ್ಲ, ಒಮ್ಮೆಯೂ ಆಕೆಯನ್ನು ಭೇಟಿ ಮಾಡಿಲ್ಲ, ಆಕೆಯ ಮುಖದ ನೆನಪೂ ಇಲ್ಲ… ಎಂದೆಲ್ಲ ಬಿಜೆಪಿ ನಾಯಕರು ಈಗ ಹೇಳುತ್ತಿರುವುದು ಹಾಸ್ಯಾಸ್ಪದ. ತಮ್ಮ ಸ್ವಾರ್ಥಕ್ಕಾಗಿ ಕಾರ್ಯಕರ್ತರನ್ನು ಬಳಸಿಕೊಂಡು ಅವರು ಅಪರಾಧಗಳಲ್ಲಿ ಸಿಕ್ಕಿಹಾಕಿಕೊಂಡ ಕೂಡಲೇ ಅವ ನಮ್ಮವನಲ್ಲ ಎಂಬ ಹೇಳಿಕೆ ಬಿಜೆಪಿಯಲ್ಲಿ ಸರ್ವೇಸಾಧಾರಣ. ಚೈತ್ರಾ ವಿಚಾರದಲ್ಲಿ ಆಗಿರುವುದು ಅಕ್ಷರಶಃ ಇದೇ.

ಸಂಘಪರಿವಾರಕ್ಕೆ ನೇಮನಿಷ್ಠೆಯಿಂದ ದುಡಿದು ನಂತರ ಅಲ್ಲಿನ, ಅಕ್ರಮ ಅವ್ಯವಹಾರ, ಹಿಂದುಳಿದ ವರ್ಗಗಳ ಯುವಕರನ್ನು ಬಲಿಪಶು ಮಾಡುವ ಹುನ್ನಾರದಿಂದ ಬೇಸತ್ತು ಹೊರ ಬಂದಿರುವ ಕೆಲವರು ಬಿಚ್ಚಿಡುವ ಈ ದಂಧೆಯ ಕರಾಳ ಮುಖ ಇನ್ನೂ ಭೀಕರ.

ಸ್ವಾಮಿ
ರಾಮಚಂದ್ರಾಪುರ ರಾಘವೇಶ್ವರ ಭಾರತೀಸ್ವಾಮಿ ಜೊತೆ ವಂಚಕ ಹಾಲಶ್ರೀ

ಮೋದಿ ಕಾರ್ಯಕ್ರಮಕ್ಕೆ ಮುಸ್ಲಿಮರಿಂದ ಹಣ ವಸೂಲಿ

“ಚುನಾವಣೆಗೆ ಆರೇಳು ತಿಂಗಳಿರುವಾಗ, ನೀವು ಕೆಲಸ ಶುರು ಮಾಡಿ, ನಿಮಗೆ ಟಿಕೆಟ್‌ ಪಕ್ಕಾ ಆಗಿದೆ ಎಂದು ನಂಬಿಸಿ ಐದಾರು ಕೋಟಿ ಹಣ ಖರ್ಚು ಮಾಡಿಸಿರುವ ಹಲವು ಉದಾಹರಣೆಗಳಿವೆ” ಎಂದು ಸಂಘಪರಿವಾರದಲ್ಲಿದ್ದು ಹೊರ ಬಿದ್ದಿರುವ ಒಬ್ಬರು ಈ ದಿನ.ಕಾಮ್‌ಗೆ ತಿಳಿಸಿದರು.

“ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆಂದು ಪ್ರಧಾನಿ ಮೋದಿ ಮಂಗಳೂರಿಗೆ ಬಂದಿದ್ದಾಗ, ಆ ಕಾರ್ಯಕ್ರಮದ ವೆಚ್ಚಕ್ಕೆಂದು ಮುಸ್ಲಿಂ ಉದ್ಯಮಿಗಳಿಂದ ಹಣ ಪಡೆಯಲಾಗಿದೆ. ಮುಸ್ಲಿಮರನ್ನು ಹೀನಾಮಾನ ಟೀಕಿಸುವ ಬಿಜೆಪಿ ಸಂಘಪರಿವಾರದ ನಾಯಕರು, ಚುನಾವಣೆ ಹತ್ತಿರ ಬರುತ್ತಿದ್ದಂತೆ ಮುಸ್ಲಿಂ ಉದ್ಯಮಿಗಳಿಂದ ಚುನಾವಣಾ ಖರ್ಚಿಗಾಗಿ ದೇಣಿಗೆ ಪಡೆಯುತ್ತಾರೆ. ಮುಸ್ಲಿಂ ವ್ಯಕ್ತಿಗಳಿಂದ ಬೆದರಿಸಿ ಅಥವಾ ಸಹಾಯ ಮಾಡುವ ಆಮಿಷವೊಡ್ಡಿ ಹಣ ವಸೂಲಿ ಮಾಡುತ್ತಾರೆ” ಎನ್ನುತ್ತಾರೆ ಅವರು.

ಕಳೆದ ಕರ್ನಾಟಕ  ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮುಸ್ಲಿಂ ಸಮುದಾಯದ ಶಿಕ್ಷಣ ಸಂಸ್ಥೆಯವರಿಗೆ ಸಹಾಯ ಮಾಡುವ ಭರವಸೆ ನೀಡಿ ಪ್ರಧಾನಿ ಮೋದಿ ಬರುವ ಕಾರ್ಯಕ್ರಮದ ಖರ್ಚಿಗೆಂದು ಏಳು ಕೋಟಿ ಹಣ ವಸೂಲಿ ಮಾಡಿರುವ ಆರೋಪವನ್ನೂ ಅವರು ಮಾಡಿದರು.

“ನಿರ್ದಿಷ್ಟ ಶಿಕ್ಷಣ ಸಂಸ್ಥೆಯೊಂದಕ್ಕೆ ವಿದ್ಯುಚ್ಛಕ್ತಿ ಸಮಸ್ಯೆ ಇದೆ. ಅಲ್ಲಿ ಸಬ್‌ಸ್ಟೇಷನ್‌ ಸ್ಥಾಪಿಸಲು ಸುಮಾರು ಇನ್ನೂರು ಕೋಟಿಯಷ್ಟು ಖರ್ಚಾಗುತ್ತದೆ. ಆ ಕೆಲಸವನ್ನು ಸರ್ಕಾರದಿಂದ ಮಾಡಿಸುತ್ತೇವೆ ಎಂಬ ಆಮಿಷವೊಡ್ಡಿ ಏಳು ಕೋಟಿ ರೂಪಾಯಿ ಹಣ ವಸೂಲಿ ಮಾಡಿದ್ದಾರೆ. ಈ ಪ್ರಕರಣದ ಮಧ್ಯವರ್ತಿ ವ್ಯಕ್ತಿಯೇ 50 ಲಕ್ಷ ರೂ. ಹಣ ಪಡೆದಿದ್ದಾನೆ” ಎಂದು ಅವರು ಬಹಿರಂಗಪಡಿಸಿದರು.

ಚೈತ್ರಾ ಕುಂದಾಪುರ ಗ್ಯಾಂಗ್‌ ವಂಚನೆ ಪ್ರಕರಣ ಬಯಲಾಗುತ್ತಿದ್ದಂತೆ ಹಲವರ ಬಗ್ಗೆ ಅನುಮಾನಗಳು ಶುರುವಾಗಿದೆ. ಹಾಲಶ್ರೀ ಸ್ವಾಮಿಯ ಜೊತೆಗೆ ಹಲವು ಸಮಾರಂಭಗಳಲ್ಲಿ, ಖಾಸಗಿ ಪ್ರವಾಸಗಳಲ್ಲಿ ಜೊತೆಗಿದ್ದ ಭಾಷಣಕಾರ ಚಕ್ರವರ್ತಿ ಸೂಲಿಬೆಲೆಗೆ ಈ ವಂಚನೆ ಪ್ರಕರಣ ಮೂರು ತಿಂಗಳ ಮೊದಲೇ ಗೊತ್ತಿತ್ತು ಎಂಬುದು ಆತನಿಂದಲೇ ಬಹಿರಂಗವಾದ ಮೇಲಂತೂ ಈ ಅನುಮಾನಗಳಿಗೆ ಪುಷ್ಟಿ ಬಂದಿದೆ. ಚಕ್ರವರ್ತಿ ಸೂಲಿಬೆಲೆಗೆ ಅತ್ತ ಗೋವಿಂದ ಪೂಜಾರಿಯೂ ಆಪ್ತ, ಇತ್ತ ಹಾಲಶ್ರೀಯೂ ಆಪ್ತ, ಚೈತ್ರ ಕುಂದಾಪುರಳ ಜೊತೆ ಸಂಪರ್ಕ ಇಲ್ಲ ಎಂದು ಹೇಳಿದರೂ ಇಬ್ಬರೂ ಒಂದೇ ದೋಣಿಯ ಪಯಣಿಗರು. ಸೂಲಿಬೆಲೆಯ ಅರಿವಿಗೇ ಬಾರದಂತೆ ಚೈತ್ರಾ ಕುಂದಾಪುರ ತಂಡದ ನಾಟಕ ನಡೆದಿದೆ ಎಂಬ ಮಾತನ್ನು ನಂಬುವುದು ಕಷ್ಟ.

ಸೂಲಿಬೆಲೆ 3
ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಜೊತೆ ಆರೋಪಿ ಹಾಲಶ್ರೀ

ಚಕ್ರವರ್ತಿ ಸೂಲಿಬೆಲೆ ಯುವ ಬ್ರಿಗೇಡ್‌ ಎಂಬ ಸಂಘಟನೆಯ ಸ್ಥಾಪಕ. ಸುಳ್ಳು ಭಾಷಣ ಮಾಡುವುದನ್ನೇ ವೃತ್ತಿ ಮಾಡಿಕೊಂಡವರು. ಎಷ್ಟೇ ನಗೆಪಾಟಲಿಗೀಡಾದರೂ ಯಾವುದೇ ಅಂಜಿಕೆ ಇಲ್ಲದೇ ಸುಳ್ಳು ಹೇಳುತ್ತಾ, ಫೇಕ್‌ ಸುದ್ದಿಗಳನ್ನು ಹರಡುವ ಈತನನ್ನು ಮೋದಿ ಮಾಧ್ಯಮಗಳು ತಲೆ ಮೇಲೆ ಹೊತ್ತು ಮೆರೆಸುತ್ತಿವೆ. ದೇಶದ ಆರ್ಥಿಕತೆ, ರಕ್ಷಣಾ ಕ್ಷೇತ್ರ, ಬಾಹ್ಯಾಕಾಶ, ರಾಕೆಟ್ ಸೈನ್ಸ್,… ಯಾವುದೇ ವಿಚಾರವಿದ್ದರೂ ಸೂಲಿಬೆಲೆಯವರ ಅಭಿಪ್ರಾಯ ಕೇಳುವುದು ಮೋದಿ ಮಾಧ್ಯಮಗಳ ಚಟ. ಐಷಾರಾಮಿ ಬದುಕು ನಡೆಸಲು ಈತನಿಗೆ ಹಣ ಎಲ್ಲಿಂದ ಬರುತ್ತದೆ ಎಂದು ಹಲವರು ಪ್ರಶ್ನಿಸುವುದುಂಟು. ಮೈಮುರಿದು ದುಡಿಯದೇ, ಯಾವುದೇ ಉದ್ಯೋಗ ಮಾಡದೇ ಐಷಾರಾಮಿ ಬದುಕು ಕಂಡುಕೊಂಡವರಿಗೆ ಹಿಂದೆ ಹಣ ಮಾಡುವ ಹಲವು ದಾರಿಗಳಿರುತ್ತವೆ. ಯಾರೋ ಒಬ್ಬ ಕಾರು ಉಡುಗೊರೆ ಕೊಟ್ಟರು, ಮತ್ತೊಬ್ಬರು ಮನೆ ಕಟ್ಟಿಸಿಕೊಟ್ಟರು, ಅವರಾರೋ ಬಟ್ಟೆ ಕೊಡಿಸಿದರು, ದುಬಾರಿ ಮೊಬೈಲ್‌ ಕೊಡಿಸಿದರೆಂದು ಸೂಲಿಬೆಲೆ ಹೇಳಿದರೆ ನಂಬುವ ಮೂರ್ಖರೂ ಇದ್ದರು. ಆದರೆ, ಈಗ ಅಂತಹವರಲ್ಲೂ ಕ್ರಮೇಣ ಅನುಮಾನ ಮೂಡುವಂತಾದರೆ ಅದು ಸ್ವಾಭಾವಿಕ.

ಇದನ್ನು ಓದಿ ‘ಈ ದಿನ’ ಸಂಪಾದಕೀಯ | ಹಣ-ಹೆಸರು ಗಳಿಕೆಗೆ ಧರ್ಮವೇ ಸುಲಭದ ಸಾಧನ

ಪುನೀತ್‌ ಕೆರೆಹಳ್ಳಿ ಎಂಬ ಕ್ರಿಮಿನಲ್‌ ಸೂಲಿಬೆಲೆಯನ್ನು ಗುರು ಎನ್ನುತ್ತಾನೆ. ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಈತನಿಗೆ ಜಾಮೀನು ಸಿಕ್ಕಿದಾಗ ಕರೆದು ಹೋಳಿಗೆಯೂಟ ಹಾಕಿ ಗುರುವೀತ. ತಾನು ಹಿಂದೂ ಧರ್ಮ ರಕ್ಷಕ ಎಂದು ಹೇಳಿಕೊಂಡು ಹಸುವಿನ ವ್ಯಾಪಾರಿಗಳಿಂದ ಸುಲಿಗೆಗಿಳಿದ ಕಾರಣ ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದಾನೆ. ಗೋಸಾಗಾಟ ಮಾಡುತ್ತಿದ್ದ ವಾಹನದ ಚಾಲಕ ಸಾತನೂರಿನ ಇದ್ರಿಸ್‌ ಪಾಶಾ ಅವರನ್ನು ಹೊಡೆದು ಕೊಲೆ ಮಾಡಿದ ಪ್ರಕರಣದ ಪ್ರಮುಖ ಆರೋಪಿಯೀತ. ಇತ್ತೀಚೆಗೆ ಗೂಂಡಾ ಕಾಯ್ದೆಯಡಿ ಬಂಧನಕ್ಕೊಳಗಾಗಿಯೂ ಒಂದೇ ತಿಂಗಳಿನಲ್ಲಿ ಹೊರ ಬಂದಿದ್ದಾನೆ. ಈತನೂ ಐಷಾರಾಮಿ ಕಾರಿನ ಒಡೆಯ. ಒಟ್ಟಿನಲ್ಲಿ ಹಿಂದುತ್ವದ ಉಗ್ರ ಭಾಷಣಕಾರರು ಮತ್ತು ಅವರ ಜೊತೆ ಸಲುಗೆಯಿಂದ ಇರುವ ಖಾವಿಧಾರಿಗಳ ಬಗ್ಗೆ ಎಚ್ಚರದಿಂದ ಇರಬೇಕು ಎಂಬ ಸಂದೇಶ ರವಾನೆಯಾಗಿದೆ.

ಇದನ್ನು ಓದಿ ಚೈತ್ರಾ ಕುಂದಾಪುರ ನಮ್ಮ ಸಂಘಟನೆಯಲ್ಲಿ ಇದ್ದಾಳೆ ಎಂದು ಯಾರು ಹೇಳಿದ್ದು? ಶರಣ್ ಪಂಪ್‌ವೆಲ್ ಹೇಳಿಕೆ

ಇನ್ನು ಬಿಜೆಪಿ ಟಿಕೆಟ್‌ ಕೊಡುವುದಾಗಿ ವಂಚಿಸಿದ ಪ್ರಕರಣ ಇದು ಒಂದೇ ಅಲ್ಲ, ಹಲವು ನಡೆದಿದೆ ಎಂಬ ಅನುಮಾನಕ್ಕೆ ಪೂರಕವಾಗಿ ನೆಲಮಂಗಲ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಕೊಡಿಸುವ ಆಮಿಷಕ್ಕೆ ವ್ಯಕ್ತಿಯೊಬ್ಬರು ಬಲಿಯಾಗಿರುವ ಮಾಹಿತಿ ಹರಿದಾಡುತ್ತಿದೆ. “ನೆಲಮಂಗಲದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯೊಬ್ಬರು 35ಲಕ್ಷದವರೆಗೆ ಹಣವನ್ನು ಕಳೆದುಕೊಂಡಿದ್ದಾರೆ. ಆ ವ್ಯಕ್ತಿ ಸದ್ಯದಲ್ಲಿಯೇ ಪೊಲೀಸರಿಗೆ ದೂರು ನೀಡಲಿದ್ದಾರೆ” ಎಂಬುದು ಮಾಜಿ ಆರೆಸ್ಸೆಸ್‌ ಮುಖಂಡರೊಬ್ಬರ ಮಾಹಿತಿ. ಈ ಮಧ್ಯೆ ತುಮಕೂರಿನ ಟಿಕೆಟ್‌ ಕೊಡಿಸುವುದಾಗಿ ದಾವಣೆಗೆರೆ ಮೂಲದ ಬಿಜೆಪಿ ಕಾರ್ಯಕರ್ತೆಯೊಬ್ಬರು ವಂಚಿಸಿರುವ ಮಾತುಗಳು ಕೇಳಿ ಬಂದಿವೆ. ವಂಚನೆಗೊಳಗಾದವರು ಒಬ್ಬೊಬ್ಬರಾಗಿಯೇ ಹೊರ ಬರುವ ಧೈರ್ಯ ಮಾಡುತ್ತಿದ್ದಾರೆ. ಚೈತ್ರಾ ಪ್ರಕರಣದ ಹೆಜ್ಜೆ ಜಾಡು ಅರಸುತ್ತ ಹೋದಂತೆ ಬಿಜೆಪಿ ಟಿಕೆಟ್ ಹೆಸರಿನಲ್ಲಿ ಹಣ ಸುಲಿಗೆ ಕರಾಳ ಧಂದೆಯ ವಿರಾಟ್‌ ರೂಪ ಅನಾವರಣಗೊಳ್ಳುತ್ತಲಿದೆ. ಹಿಂದುತ್ವದ ಹೆಸರಿನ ವಿಕಾರಗಳು ಒಂದೊಂದಾಗಿ ತೆರೆದುಕೊಳ್ಳುತ್ತಿವೆ.

ಹೇಮಾ 2
ಹೇಮಾ ವೆಂಕಟ್
+ posts

ʼಈ ದಿನ.ಕಾಮ್‌ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್
ಹೇಮಾ ವೆಂಕಟ್
ʼಈ ದಿನ.ಕಾಮ್‌ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X