ಬಾಡೂಟದವರಿಗೆ ಮನೆ ಬಾಡಿಗೆ ಇಲ್ಲ: ಗುಟ್ಕಾಕ್ಕಿಂತ ಬಿರಿಯಾನಿ ಲೇಸು!

Date:

ನಿನ್ನೆ ಬೆಳಗಿನ ಜಾವ ಚುಮು ಚುಮು ಚಳಿಯಲ್ಲಿ ಒಬ್ಬ ಆಸಾಮಿ ಎದುರು ಬದುರಾದ. ಆತನ ಹೆಸರು ಶೇಖರ್, ಪಕ್ಕದ ಗೆಳೆಯ ಗುರ್ಲಿಂಗನಿಗೆ ತುಂಬ ಕ್ಲೋಜ್‌. ನಾನ್ಯಾರು ಎಂಬ ಪರಿಚಯವಿಲ್ಲದೆ ಗರಿಗರಿಯಾಗಿ ನಾಲಗೆ ಹರಿಯಬಿಟ್ಟು, ಸ್ವರಗಳನ್ನು ಬೇಕಾಬಿಟ್ಟಿ ಒದರುತ್ತಿದ್ದ. ತಂಬಾಕು ತಿಂದ ಬಿಳಿದಾದ ಕೆಂದುಟಿ… ಇಷ್ಟಗಲ ಬಾಯಿ ತೆರೆದು ಇಷ್ಟಿಷ್ಟಕ್ಕೆ ಉಗುಳುವವನು, ಹೊಸ ಮನೆ ಕಟ್ಟಿಸಿ ಮೂರು ತಿಂಗಳಂತೆ, ಕೆಳಗಿನ ಮನೆ 15000 ರೂ. ಬಾಡಿಗೆ ನೀಡಿದ್ದ. ಮೇಲಿನದು ಮತ್ತೆ ಅದಕ್ಕೂ ಮೇಲಿನ ಎರಡು ಕೋಣೆ ಸೇರಿಸಿ ತಾನು ವಾಸಿಸಲು ಉಪಯೋಗಿಸಿದ್ದ.

ಗುರ್ಲಿಂಗ, ಖುಷಿಯಿಂದ ನನ್ನದು ಒಂದು ಕೆಳಗಿನ ಮನೆ ಖಾಲಿ ಇದೆ. ನಿನಗೆ ಪರಿಚಯದ ಅನೇಕರಿದ್ದಾರೆ 30:50 ಸೈಜಿನ ಮನೆ ಬೃಹತ್ತಾಗಿದೆ, ಎಲ್ಲ ಸೌಲಭ್ಯ ಹೊಂದಿದೆ ಸ್ವಂತಕ್ಕೆ ಎಂಬಂತೆ ಕಟ್ಟಿಸಿರುವೆ. ಎಷ್ಟಕ್ಕೆ ಬಾಡಿಗೆ ಕೊಡಬಹುದು? ಎಂದು ಪ್ರಶ್ನಿಸಿದ. ನೋಡು ಗುರ್ಲಿಂಗ, ಕನಿಷ್ಠ 15000 ಇಲ್ಲದೆ ಯಾರಿಗೂ ಮನೆ ಬಾಡಿಗೆ ಕೊಡಬೇಡ, ನಮ್ಮ ಕಾಲೋನಿಗೆ ತುಂಬ ಡಿಮ್ಯಾಂಡ್ ಇದೆ. ಮೊನ್ನೆ ಮನೆ ಓಪನಿಂಗ್ ಮಾಡಿದ ಆ ಜೋಷಿ , 11,000 ಕ್ಕೆ ಮನೆ ಬಾಡಿಗೆ ಕೊಟ್ಟು ನನ್ನ ಕಡೆಯಿಂದ ಚೆನ್ನಾಗಿ ಬೈಸಿಕೊಂಡ. ಮನೆ ಖಾಲಿ ಇದ್ದರೂ ಪರವಾಗಿಲ್ಲ, ಇಷ್ಟು ಕಡಿಮೆ ಬಾಡಿಗೆ ಕೊಡಬಾರದೆಂದು ಚೆನ್ನಾಗಿ ಬೈದಿದ್ದೆ. ಆ ಜೋಷಿ ʼಇರಲಿ ಬಿಡಣ್ಣ ಹೊಸ ಮನೆ ಬಹಳ ದಿವಸ ಖಾಲಿ ಬಿಡಬಾರದುʼ ಎಂದು ಸಮರ್ಥಿಸಿಕೊಂಡಿದ್ದ . ನೀನು ಹಾಗೆ ಮಾಡಬೇಡ ಗುರ್ಲಿಂಗ, ಎಂದು ನನ್ನ ಕಡೆ ಬೊಟ್ಟು ಮಾಡಿದ್ದ. ನನ್ನ ಪಕ್ಕದ ಮನೆಯ ಆತ್ಮೀಯ ಗುರ್ಲಿಂಗ ಎದುರಾದ, ಗೆಳೆಯ ಶೇಖರನಿಗೆ ಕ್ಲೋಜ್‌ ಎಂದ ಮೇಲೆ ನನಗೂ ಆತ್ಮೀಯನೆ ಎಂದು ನಾನು ಭಾವಿಸಿದೆ.

ಅವರಿಬ್ಬರು ಯಾವುದೊ ವಿಷಯಕ್ಕೆ ನಕ್ಕರು, ಸಂಬಂಧವಿಲ್ಲದಿದ್ದರು ನಾನು ಸುಮ್ಮನೆ ನಕ್ಕೆ, ಅವರಿಗೆ ಬೇಸರವಾಗಬಾರದೆಂದು ಅವರ ಮಾತಿನೊಂದಿಗೆ ಮಾತಾದೆ ಇಬ್ಬರ ಪ್ರತಿಮಾತಿಗೂ ಸುಮ್ಮನೆ ನಗುವ ಕೆಲಸ ನನ್ನದಾಗಿತ್ತು. ಶೇಖರ್ ಸರಕಾರಿ ಗೆಳೆಯ, ಶಿಕ್ಷಣ ಇಲಾಖೆಯಲ್ಲಿ ದೀರ್ಘಾವಧಿ ಸೇವೆಯಲ್ಲಿದ್ದ , ʼನಮ್ಮ ಕಾಲೋನಿಯಲ್ಲಿ ಕಡಿಮೆಗೆ ಮನೆ ಬಾಡಿಗೆ ಕೊಟ್ಟರೆ ನಾವೆಲ್ಲರೂ ನಷ್ಟ ಅನುಭವಿಸಬೇಕಾಗುತ್ತದೆ ನಮ್ಮೆಲ್ಲರದು ಒಂದೇ ಹಠ ಒಂದೇ ದರ ಇರಲಿʼ ಎಂದು ಪ್ರಣಾಳಿಕೆ ಮಂಡಿಸಿದ. ನಮ್ಮ ಗುರ್ಲಿಂಗ ಹೌದೌದು ಎಂದು ತಲೆಯಲ್ಲಾಡಿಸಿದ.

ಶೇಖರನ ಕೈಯಲ್ಲಿ ಕೊರಳಿಗೆ ಚೈನು ಬಿಗಿದ ನಾಯಿಯೊಂದು ನಾಲಿಗೆ ಚಾಚುತ್ತ, ಹಲ್ಲು ತಿಂಡಿಗಾಗಿ ಅದು ಇದು ತಲಾಸ ಮಾಡುತ್ತಿತ್ತು , ಆಂ…, ಗುರುಲಿಂಗ ಒಂದು ಮಾತು ಹೇಳುವದು ಮರೆತಿದ್ದೆ, ತುಂಬ ಮಹತ್ವದ ವಿಷಯವದು. ಎಚ್ಚರಿಕೆಯಿಂದ ಕೇಳು, ʼನೀನು ಮನೆ ಯಾರಿಗಾದರೂ ಕೊಡು ನನ್ನ ತಕರಾರು ಇಲ್ಲ ಆದರೆ, ಈ ಸಾಬರಿಗೆ ಮಾತ್ರ ಮನೆ ಬಾಡಿಗೆ ಕೊಡಬೇಡʼ ಎನ್ನುತ್ತಿದ್ದಾಗ ಗುರ್ಲಿಂಗ ಅವುಡ ಕಚ್ಚಿ ಹೇ..ಹೇ.. ಎಂದು ನನ್ನ ತೋರಿಸಿ ಸಂಜ್ಞೆ ಮಾಡಿದರೂ, ಖಬರು ಇಲ್ಲದ ಸರಕಾರಿ ಗೆಳೆಯ ಮಾತು ಮುಂದುವರೆಸಿದ. ನಾನಂತೂ ಬಿಲ್ಕುಲ್ ಹೇಳಿ ಬಿಡುತ್ತೇನೆ “ನಾನು ಸಾಬ್ರಿಗೆ ಬಾಡಿಗೆ ಕೊಡುವುದಿಲ್ಲ “. ಕಳೆದ ವರ್ಷ ನನ್ನದೊಂದು ಪ್ಲಾಟು ಮಾರುವದಿತ್ತು, ನಮ್ಮವರಿಗೆ 10 ಲಕ್ಷ ಅವರಿಗಾದರೆ 11 ಲಕ್ಷ ಎಂದು ಮಾರಾಟಕ್ಕಿಟ್ಟಿದ್ದೆ ಎಂದು ಮಾತು ಮುಂದುವರಿಸುತ್ತಾ… ʼಈ ಸಾಬರಿಗೆ ಯಾಕೆ ಬಾಡಿಗೆ ಕೊಡಬಾರದೆಂದರೆ ಶಿಸ್ತು ಇಲ್ಲದವರು, ಬಿರ್ಯಾನಿ ತಿಂದು ಮನೆ ಕುಲಗೆಡುಸುತ್ತಾರೆ. ಗಲೀಜು ಮಾಡುತ್ತಾರೆ, ವಿಪರೀತ ಗಬ್ಬೆಬ್ಬಿಸುತ್ತಾರೆ, ಮನೆ ಖಾಲಿ ಇದ್ದರೂ ಪರವಾಗಿಲ್ಲ ಅಂತವರಿಗೆ ಮಾತ್ರ ಕೊಡಬೇಡʼ ಎಂದು ತಾಕೀತು ಮಾಡಿದ.

ತಲೆ ತಿರುಗಿಸಿದ ಗುರ್ಲಿಂಗ ನನ್ನ ಕಡೆ ಪೆಚ್ಚು ಮೋರೆಯಲ್ಲಿ ನೋಡಿದ. ಅನ್ಯತಾ ಭಾವಿಸಬೇಡ ಎಂಬಂತೆ, ನನಗೆ ಈ ವಿಷಯ ಬಾರಿ ಅಚ್ಚರಿ ಮೂಡಿಸಲಿಲ್ಲ, ಇಂತಹ ಅನುಭವಗಳು ಎಷ್ಟೋ, ಈ ವಿಷಯದಲ್ಲಿ ಕುಪಿತನಾಗದವನು, ಕಳೆದ ವರ್ಷ ಕಾಂತೇಶ್ ಎನ್ನುವ ಗೆಳೆಯ ಸಮಾಜ ವಿಜ್ಞಾನ ಮೇಷ್ಟ್ರು, ನಮ್ಮ ಮನೆಗೆ ಬಂದು ನಿಮ್ಮ ಕಾಲೋನಿಯಲ್ಲಿ ನನಗೊಂದು ನಿವೇಶನ ನೋಡು ಎಂದು ಪರಿ ಪರಿಯಾಗಿ ಬೇಡಿದ, ಬಿಸಿಲಲ್ಲಿ ಬಳಲಿದ್ದೀಯ ಹಸಿದವನಂತೆ ಕಾಣುತ್ತಿ, ಮೊದಲು ಊಟ ಮಾಡು ಆಮೇಲೆ ಪ್ಲಾಟು ನೋಡೋಣ ಎಂದೆ. ನಾನು ವಾಸಿಸುವ ನಿವೇಶನ ವಿಶಾಲವಾಗಿದ್ದು ಪ್ಲಾಟುಗಳು ಇರುವ ಮಾಲೀಕನಿಗೆ ಪರಿಚಯಿಸಿದೆ ನನಗೆ ತುಂಬ ಆತ್ಮೀಯರು ಒಳ್ಳೆಯ ಗೆಳೆಯ ಒಂದೇ ಡೆಸ್ಕಲ್ಲಿ ಕುಳಿತು ಪಾಠ ಕೇಳಿದ್ದೇವೆ ಎಂದೆ. ಮಾಲಿಕರು ಗೆಳೆಯನನ್ನು ಕರೆದು 15 ಪ್ಲಾಟುಗಳು ತೋರಿಸಿ ಬೇಕಾದುದು ಆಯ್ಕೆ ಮಾಡಿಕೊಳ್ಳಿ ಎಂದರು. ಗೆಳೆಯ ಎಲ್ಲವನ್ನು ಅವಲೋಕಿಸಿದ, ನೆರೆ ಹೊರೆಯಲ್ಲಿ ಯಾರು ಯಾರ ನಿವೇಶನ ಇದೆ ಎಂದು ವಿಚಾರಿಸಿದ ಕೊನೆಗೆ ತಿರ್ಮಾನಕ್ಕೆ ಬಂದ, ʼಮಾಲೀಕರೆ ಹಣ ಬೇಕಾದರೆ ಲಕ್ಷ ಹೆಚ್ಚಿಗೆ ಕೊಡುವೆ ಆದರೆ, ಪಕ್ಕದಲ್ಲಿ ಸಾಬರು ಇರಬಾರದುʼ ಎಂದು ಮೆಲ್ಲನೆ ಉಸಿರಿದ.

ಮಾಲೀಕರು ನನ್ನ ಕಡೆ ನೋಡಿ ಮುಸಿ ಮುಸಿ ನಕ್ಕು , ʼನಿಮ್ಮನ್ನು ಕರೆದುಕೊಂಡು ಬಂದಿರುವ ನಮ್ಮ ಗುರುಗಳು ಸಾಬ್ರು ʼ ಜಾತಿ ಧರ್ಮ ನೋಡಿ ನಿವೇಶನ ಕೊಡುವದಿಲ್ಲ ದುಡ್ಡು ಕೊಟ್ಟು ಖರೀದಿಸುವ ಎಲ್ಲ ಮನುಷ್ಯರಿಗೂ ಗೌರವ ಕೊಡುತ್ತೇವೆ. ನೀವು ನಮ್ಮ ಗುರುಗಳ ಸಹಪಾಠಿ ಎನ್ನುವ ಕಾರಣಕ್ಕಾಗಿ ನನ್ನ ನಿವೇಶನ ತೆರೆದಿದೆ, ಇದು ಮನುಷ್ಯರು ವಾಸಿಸುವ ನಿವೇಶನ. ನಿಮ್ಮ ಜೊತೆಯಾಗಿ ಬಂದ ಗುರುಗಳು ನನಗೆ ಕಲಿಸಿದ ಪಾಠ, ಒಂದು ಲಕ್ಷ ಕಡಿಮೆ ಕೊಟ್ಟರು ಸರಿಯೇ ಉತ್ತಮ ಮನುಷ್ಯರಿಗೆ ಕೊಡುತ್ತೇನೆʼ ಎಂದು ಸಮಾಜ ವಿಜ್ಞಾನ ಬೋಧಿಸಿದ . ನನ್ನ ಬಳಿಗೆ ಬಂದ ಸಹಪಾಠಿ ತಪ್ಪು ತಿಳಿಯಬೇಡ ದೋಸ್ತಾ… ಈಗ ನಾನು ಬಾಡಿಗೆ ಇದ್ದದ್ದು ಸಾಬರ ಮನೆಯಲ್ಲಿ, ಮನೆಯಲ್ಲಿ ವಯಸ್ಸಾದ ತಂದೆಯವರಿದ್ದಾರೆ ತುಂಬ ಮಡಿ ಮೈಲಿಗೆಯವರು ನಿನಗೂ ಗೊತ್ತಿದೆ, ಸ್ವಂತ ಮನೆಯಲ್ಲಾದರೂ ನಮ್ಮ ಅಕ್ಕ ಪಕ್ಕ ವಾಸಿಸುವವರು ಶುದ್ದ ಸಸ್ಯಾಹಾರಿಗಳಿರಲಿ ಎಂಬುದು ತಂದೆಯ ಕೊನೆ ಆಸೆʼ ಎಂದು ನನ್ನ ಮುಂದೆ ಅಳುತ್ತಿರುವಂತೆ ನಟಿಸಿದ. ಸರಿ ಅದು ನಿನ್ನ ಸಮಸ್ಯೆ ಅಲ್ಲ ಎಂದು ನಾನು ಸಮಾಧಾನಗೊಂಡೆ.

ಆರು ತಿಂಗಳಾಯ್ತು, ಸಮಾಜ ವಿಜ್ಞಾನ ಶಿಕ್ಷಕ ಈ ಕಡೆ ತಿರುಗಿಯೂ ನೋಡಲಿಲ್ಲ. ನಾನು ಮತ್ತು ಗುರುಲಿಂಗ ಜೀವದ ಗೆಳೆಯರು ಅವನ ಮನೆಗೆ “ಯುಗಾದಿ” ಬಂತೆಂದರೆ ಮೊದಲ ʼಬೇವು-ಬೆಲ್ಲʼ, ನಮ್ಮ ಮನೆಗೆ ನಮ್ಮ ರಂಜಾನಿನ ʼಸುರುಕುರುಮಾʼ ಗುರ್ಲಿಂಗನ ಮನೆಗೆ ಹೋಗಿ ನಿತ್ಯ ಭಾವೈಕ್ಯದ ಸೇತುವೆಯಾಗಿತ್ತು, ಬೆಳಿಗ್ಗೆ ವಾಕಿಂಗಲ್ಲಿ ಸಿಕ್ಕ ಶೇಖರ್. ಒಂದು ರೀತಿಯಲ್ಲಿ ಕಾಂತೇಶನ ಗುಣದವನು. ಗೆಳೆಯ ಶೇಖರನ ಮಾತಿಗೆ ಬೇಸರಿಸದೆ ಕೇಳಿದೆ, ನೀವು ಬಾಡಿಗೆ ಯಾರಿಗಾದರೂ ಕೊಡಿ ತಕರಾರು ಇಲ್ಲ, ಬೆಳ್ಳಂ ಬೆಳಿಗ್ಗೆ ಬಾಯಲ್ಲಿ ಏನು ಜಗಿಯುತ್ತೀರಿ!? ಪಾನ ಪರಾಗ ಎಂದ ಶೇಖರ್. ಇದಕ್ಕಿಂತ ಬಿರ್ಯಾನಿ ತಿನ್ನುವುದು ಎಷ್ಟೋ ಪಾಲು ಉತ್ತಮ. ತಂಬಾಕಿನ ಚಟಕ್ಕೆ ಬಲಿಯಾಗಿ ಮನೆತನ ಹಾಳು ಮಾಡಿಕೊಂಡವರಿದ್ದಾರೆ , ಅತಿ ಸಣ್ಣ ವಯಸ್ಸಲ್ಲಿ ತಂಬಾಕು ತಿಂದು ಕ್ಯಾನ್ಸರಿಗೆ ತುತ್ತಾಗಿ ಹೆಂಡತಿ ಮಕ್ಕಳನ್ನು ತಬ್ಬಲಿ ಮಾಡಿ ಸತ್ತವರಿದ್ದಾರೆ, ಬಿರ್ಯಾನಿ ತಿಂದು ಯಾರು ಸತ್ತಿಲ್ಲ ಆರೋಗ್ಯ ಕೆಡಿಸಿಕೊಂಡಿಲ್ಲ ಇನ್ನಷ್ಟು ಆರೋಗ್ಯವಂತನಾಗಬಹುದು.

ಸರ್ರ.. ಸರ್ರ.. ನೀವು ಒಳ್ಳೆಯವರು, ನಿಮ್ಮನ್ನ ಗಮನಿಸದೆ ಹೇಳಿಬಿಟ್ಟೆ ಕ್ಷಮಿಸಿ ತಪ್ಪಾಯಿತು ಎಂದು ನನ್ನ ಕೈಯನ್ನು ತನ್ನ ತಲೆ ಮೇಲೆ ಇಡಲು ಪ್ರಯತ್ನಿಸಿದ, “ಆಹಾರ ಪ್ರತಿಯೊಬ್ಬನ ಹಕ್ಕು, ಬಿರ್ಯಾನಿ ತಿನ್ನುವ ಅನೇಕ ಗೆಳೆಯರು ಮುಸ್ಲಿಮರಲ್ಲ. ಕೆಲವು ಮುಸ್ಲಿಮರು ಶುದ್ದ ಸಸ್ಯ ಹಾರಿಗಳಿದ್ದಾರೆ, ನೀವು ಒಬ್ಬ ಸರಕಾರಿ ಉದ್ಯೋಗಿಯಾಗಿ ಜಾತಿ ಮತ್ತು ಧರ್ಮದ ಕಾರಣಕ್ಕೆ ಮನೆ ಬಾಡಿಗೆ ಕೊಡುವುದು ಬೇಡ ಎಂದರೆ, ಇದು ತೀರಾ ಅಸಹಿಷ್ಣುತೆಯಲ್ಲವೆ? ವರಸೆ ಬದಲಿಸಿದ. ಇಲ್ಲ ಸರ್, ನೀವು ನಿಜವಾದ ದೇಶಾಭಿಮಾನಿಗಳು, ನನ್ನೊಬ್ಬ ಗೆಳೆಯ ಖಾಸೀಂ ಪ್ರತಿವರ್ಷ ಮನೆಯಲ್ಲಿ ಗಣೇಶನನ್ನು ಕೂಡಿಸಿ ದೇಶ ಭಕ್ತಿ ಮೆರೆಯುವನು, ಅವನ ಮನೆಯಲ್ಲಿಯ ಹೈದರಾಬಾದ ಬಿರ್ಯಾನಿ ಘಮ್ಮೆನ್ನುವಂತದ್ದು. ಹೌದು, ನನ್ನೊಬ್ಬ ಗೆಳೆಯ ರಮೇಶ ಸಹ ರಂಜಾನಿನಲ್ಲಿ ಉಪವಾಸ ಮಾಡಿ ಕಟ್ಟು ನಿಟ್ಟಿನ ವೃತ ಆಚರಿಸುವನು, ಇದು ನಿಜವಾದ ಅಂಬೇಡ್ಕರ್ ಭಾರತ”.

ಶೇಖರ್ ಹೌದೆನುತ ಬಾಯಲ್ಲಿದ್ದ ತಂಬಾಕು ಉಗಿದ, ಇನ್ಮುಂದೆ ತಂಬಾಕು ತಿನ್ನುವುದಿಲ್ಲ ಎಂದು ಶಪಥ ಮಾಡಿದ. ಶೇಖರನ ನಾಯಿ ಕೈ ಕೊಸರಿಕೊಂಡು ಓಡಿತು ದೂರದಲ್ಲಿ ನನ್ನ ಸೌಹಾರ್ದ ಮನೆಯಿಂದ ಹೆಂಡತಿಯ “ಕುರ್ಕುರೆ” ದನಿ ಕೇಳಿ ಬಂತು, ತಾಟಲ್ಲಿದ್ದ ಘಮ್ಮನೆಯ ಬಿರಿಯಾನಿ ವಾಸನೆಗೆ ಗೆಳೆಯನ ನಾಯಿ , “ಸೌಹಾರ್ದ” ಮನೆಗೆ ಜಿಗಿಯಿತು , ಈ ನಾಯಿಗೆ ವಾರದಲ್ಲಿ ಮೂರು ದಿನ ಬಿರಿಯಾನಿ ನಮ್ಮ ಮನೆಯಲ್ಲಿ. ಶೇಖರ್ ಮೆಲ್ಲನೆ ಗುನುಗಿದ ʼಇತ್ತೀಚಿಗೆ ನಮ್ಮ ನಾಯಿ ಮನೆಯಲ್ಲಿ ಊಟವೇ ಬಿಟ್ಟಿತ್ತು, ರುಚಿಗೆ ಹೋಳಿಗೆ ಮಾಡಿ ಹಾಕಿದರು ಮೂಸಿಯೂ ನೋಡುತ್ತಿಲ್ಲʼ.
………………………………………..

- Advertisement -
IMG 20260602 WA00011 e1780394313533
ಅಜಮೀರ ನಂದಾಪುರ
+ posts

ಅಧ್ಯಕ್ಷರು ಡಾ.ಸಿದ್ಧಯ್ಯ ಪುರಾಣಿಕ ಟ್ರಸ್ಟ್ ಕೊಪ್ಪಳ ಹಾಗೂ
ಸದಸ್ಯರು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು.

ಪೋಸ್ಟ್ ಹಂಚಿಕೊಳ್ಳಿ:

ಅಜಮೀರ ನಂದಾಪುರ
ಅಜಮೀರ ನಂದಾಪುರ
ಅಧ್ಯಕ್ಷರು ಡಾ.ಸಿದ್ಧಯ್ಯ ಪುರಾಣಿಕ ಟ್ರಸ್ಟ್ ಕೊಪ್ಪಳ ಹಾಗೂ ಸದಸ್ಯರು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹವಾಮಾನ ವರದಿ | ಬೆಂಗಳೂರು ಸೇರಿ ಕರ್ನಾಟಕದ ಹಲವೆಡೆ ಅ.22ರವರೆಗೆ ಮಳೆ

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಮಳೆ ಮುಂದುವರಿಯುವ...

ಬೀಳಗಿ | ಬೆಳೆ ಉಳಿಸಲು ಘಟಪ್ರಭಾ ಎಡದಂಡೆ ಕಾಲುವೆಯ ಕೊನೆಯವರೆಗೆ ನೀರು ಹರಿಸಿ: ಭಾರತೀಯ ಕಿಸಾನ್‌ ಸಂಘ ಆಗ್ರಹ

ಘಟಪ್ರಭಾ ಮತ್ತು ಕೃಷ್ಣಾ ನದಿಗಳಲ್ಲಿ ಸಾಕಷ್ಟು ನೀರಿದ್ದರೂ ಘಟಪ್ರಭಾ ಎಡದಂಡೆ ಕಾಲುವೆಯ...

ಈ ದಿನ ಸಂಪಾದಕೀಯ | ಅಂಕಿತಾ ಹತ್ಯೆ ಶಂಕಿತರಿಗೆ ಸಾಂವಿಧಾನಿಕ ಹುದ್ದೆ ಸರಿಯೇ?

ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿದ್ದ ವಿಐಪಿ ದುಶ್ಯಂತ್‌ ಅವರ ಮೇಲಿನ...

‘ಮೋದಿಯನ್ನು ದೇವರನ್ನಾಗಿಸುವ ಯತ್ನ’: ಬಿಹಾರ ಸಿಎಂ ಹೇಳಿಕೆಗೆ ಪ್ರಶಾಂತ್ ಕಿಶೋರ್ ಕಿಡಿ

ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮನಿಗೂ ಮನೆ ಒದಗಿಸಿದರು ಎಂಬ ಬಿಹಾರ...