ದೇವೇಗೌಡರ ಕೋಟೆಯಲ್ಲಿ ‘ಡಿಕೆಶಿ’ ಗುದ್ದಾಟ; ಒಕ್ಕಲಿಗ ನಾಯಕತ್ವ ಪಟ್ಟ ಸುಲಭವೇ?

Date:

2018ರ ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅತಂತ್ರ ಫಲಿತಾಂಶ ಬಂದಾಗ, ಬಿಜೆಪಿಯ ಕುದುರೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ಶಾಸಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಡಿಕೆ ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು. 2023ರಲ್ಲಿ ಕಾಂಗ್ರೆಸ್ ಪಕ್ಷ ಬಹುಮತವನ್ನು ಪಡೆಯುವಲ್ಲಿ ಡಿಕೆ ಶಿವಕುಮಾರ್ ಅವರ ಶ್ರಮ ಇತ್ತು.

ಹಳೇ ಮೈಸೂರು ಹೇಳಿಕೇಳಿ ಒಕ್ಕಲಿಗರ ಪ್ರಾಬಲ್ಯದ ಪ್ರದೇಶ. ಸಾಂಪ್ರದಾಯಿಕವಾಗಿ ಇಲ್ಲಿ ದೇವೇಗೌಡರ ಕುಟುಂಬ ಮತ್ತು ಕಾಂಗ್ರೆಸ್ ನಡುವೆಯೇ ಹಣಾಹಣಿ ನಡೆಯುತ್ತಾ ಬಂದಿದೆ. ಇನ್ನೊಂದೆಡೆ ಒಕ್ಕಲಿಗರ ನಡುವೆ ಬೇರು ಬಿಡದ ಹೊರತು, ಕರ್ನಾಟಕದಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೇರಲು ಸಾಧ್ಯವಿಲ್ಲ. ಹೀಗಾಗಿ ಕೋಮುರಾಜಕಾರಣವನ್ನು ಹಳೇಮೈಸೂರು ಭಾಗದಲ್ಲಿ ವಿಸ್ತರಿಸುವ ಕಸರತ್ತನ್ನು ಸಂಘಪರಿವಾರ ಕಳೆದೈದು ವರ್ಷಗಳಿಂದ ನಿರಂತರ ಮಾಡುತ್ತಿದೆ. ಈಗ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಚಾಲ್ತಿಯಲ್ಲಿದ್ದರೂ ತನ್ನ ನೆಲೆಯನ್ನು ಒಕ್ಕಲಿಗರ ಪ್ರದೇಶದಲ್ಲಿ ವಿಸ್ತರಿಸಿಕೊಳ್ಳುವ ಪ್ರಯತ್ನಗಳನ್ನು ಬಿಜೆಪಿ ನಿಲ್ಲಿಸುವುದಿಲ್ಲ. ಈ ತ್ರಿಕೋನ ಸ್ಪರ್ಧೆಯಲ್ಲಿ ಕಾಂಗ್ರೆಸ್ ಒಂದು ಮಟ್ಟಿಗೆ ಒಕ್ಕಲಿಗರ ಮತಬ್ಯಾಂಕ್‌ ಉಳಿಸಿಕೊಳ್ಳಲೇಬೇಕು. ಆ ಪ್ರಯತ್ನದ ಮುಖವಾಗಿಯೂ ಡಿಕೆ ಶಿವಕುಮಾರ್ ನಾಯಕತ್ವ ಕಾಣಿಸಿಕೊಳ್ಳುತ್ತದೆ.

- Advertisement -

‘ಕನಕಪುರ ಬಂಡೆ’ ಎಂದೇ ಗುರುತಿಸಲ್ಪಡುವ ಡಿಕೆ ಶಿವಕುಮಾರ್ ಅವರು ಸೈದ್ಧಾಂತಿಕವಾಗಿ ಸಿದ್ದರಾಮಯ್ಯನವರಿಗೆ ಎಂದಿಗೂ ಪ್ರತಿಸ್ಪರ್ಧಿ ಆಗಲಾರರು. ವ್ಯವಹಾರ- ಡಿಕೆ ಶಿವಕುಮಾರ್ ಅವರ ನೇಚರ್. ಆದರೆ, ಪಕ್ಷದ ಸಂಘಟನೆಗಾಗಿ ಬಂಡವಾಳ ಹೂಡಿ, ಬಂಡವಾಳ ತೆಗೆಯಬಲ್ಲ ಚತುರ. ಎದುರಾಳಿಗಳು ಎಷ್ಟೇ ಕಿರುಕುಳ ಕೊಟ್ಟರೂ ಪಕ್ಷ ಬದಲಿಸದ ಗಟ್ಟಿಕಾಳು ಮತ್ತು ನಿಷ್ಠಾವಂತ. ದುರಾದೃಷ್ಟವಶಾತ್ ಡಿಕೆ ಶಿವಕುಮಾರ್ ಅವರ ದೊಡ್ಡ ಮಿತಿಯೇ ‘ಇಮೇಜ್’. ಸಂಘಟನಾ ಚಾಣಾಕ್ಷನಾದರೂ ‘ಪಾಪ್ಯುಲರ್ ಲೀಡರ್’ ಎಂಬ ಇಮೇಜ್ ಕೊರತೆಯ ಕಾರಣ, ಅವರ ಕುರ್ಚಿ ಕಾಲು ಯಾವಾಗ ಬೇಕಾದರೂ ಮುರಿದು ಬೀಳಬಹುದು. ಆದರೆ ಈ ಎಲ್ಲವನ್ನೂ ಮೀರಿ, ಬಲಿಷ್ಠ ಒಕ್ಕಲಿಗ ನಾಯಕನಾಗಿ ಹೊಮ್ಮಿದರೆ ಅದು ಅವರಿಗೂ ಕಾಂಗ್ರೆಸ್ ಪಕ್ಷಕ್ಕೂ ಬಹುಕಾಲದ ಆಸ್ತಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಡಿಕೆ ಶಿವಕುಮಾರ್ ಅವರಿಗೆ ಅಧಿಕಾರದ ಬಲ ಸಿಕ್ಕಿರುವ ಕಾರಣ, ಅವರ ಸುತ್ತ ಒಂದಿಷ್ಟು ಒಕ್ಕಲಿಗರು ಬಂದು ನಿಲ್ಲುತ್ತಾರೆಂಬುದು ನಿಜ. ಇಷ್ಟು ಮಾತ್ರಕ್ಕೆ ಡಿಕೆ ಶಿವಕುಮಾರ್ ಶಿವಕುಮಾರ್ ಶಿವಕುಮಾರ್ಯವರನ್ನು ಸಮುದಾಯದ ನಾಯಕರನ್ನಾಗಿ ಗುರುತಿಸಲು ಸಾಧ್ಯವೇ? ಎಚ್.ಡಿ.ಕುಮಾರಸ್ವಾಮಿಯವರನ್ನು ಮೀರಬಲ್ಲ ನಾಯಕನಾಗಿ ಹೊಮ್ಮಬಲ್ಲರೇ? ವಾಸ್ತವವೆಂದರೆ ಡಿಕೆ ಶಿವಕುಮಾರ್ ಅವರ ಈ ಏರುಗತಿಯ ಬೆಳವಣಿಗೆಯನ್ನು ದೇವೇಗೌಡರ ಫ್ಯಾಮಿಲಿ ಸುಲಭವಾಗಿ ತೆಗೆದುಕೊಳ್ಳುವುದಿಲ್ಲ.

ದೇವೇಗೌಡರ ಫ್ಯಾಮಿಲಿ ಜೊತೆಗೆ ಡಿಕೆ ಶಿವಕುಮಾರ್ ಕದನ

ಡಿಕೆ ಶಿವಕುಮಾರ್ ಅವರು ರಾಜಕಾರಣವನ್ನು ಪ್ರವೇಶಿಸಿದ ದಿನಗಳಿಂದಲೂ ದೇವೇಗೌಡರ ಫ್ಯಾಮಿಲಿಗೆ ಮಗ್ಗಲು ಮುಳ್ಳಾಗಿಯೇ ಬೆಳೆದಿದ್ದಾರೆಂಬುದನ್ನು ಚುನಾವಣಾ ಇತಿಹಾಸ ಹೇಳುತ್ತದೆ. 1985ರಲ್ಲಿ ಡಿಕೆ ಶಿವಕುಮಾರ್ ಚುನಾವಣಾ ರಾಜಕಾರಣಕ್ಕೆ ಪ್ರವೇಶಿಸುತ್ತಾರೆ. ದೇವೇಗೌಡರ ವಿರುದ್ಧ ಅಂದಿನ ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗ ಡಿಕೆ ಶಿವಕುಮಾರ್ ಅವರ ವಯಸ್ಸು ಕೇವಲ 23 ಎನ್ನುತ್ತವೆ ವರದಿಗಳು (ಗಮನಿಸಿ: ಚುನಾವಣೆಗೆ ಸ್ಪರ್ಧಿಸಲು 25 ವರ್ಷ ವಯಸ್ಸಾಗಿರಬೇಕು. ಬಹುಶಃ ಶಾಲಾ ದಾಖಲಾತಿಗಳು 25 ವರ್ಷ ಎಂದು ತೋರಿಸಿರಬಹುದು ಅಥವಾ ದಾಖಲಾತಿಗಳನ್ನು ಸರಿಯಾಗಿ ಪರಿಶೀಲಿಸದೆ ಇದ್ದಿರಹುದು). ಮೊದಲ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ 15,000 ಮತಗಳಿಂದ ಸೋತರೂ, ಕಾಂಗ್ರೆಸ್ ಪಕ್ಷದಲ್ಲಿ ಅವರಿಗೆ ಮನ್ನಣೆ ಸಿಗುತ್ತದೆ.

1989ರಲ್ಲಿ ಸಾತನೂರು ಕ್ಷೇತ್ರದಿಂದ ಸ್ಪರ್ಧಿಸಿ ಜನತಾ ಪಕ್ಷದ ಯು.ಕೆ. ಸ್ವಾಮಿ ಅವರನ್ನು ಸೋಲಿಸಿ, 27ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಡಿಕೆ ಶಿವಕುಮಾರ್ ವಿಧಾನಸಭೆ ಪ್ರವೇಶಿಸುತ್ತಾರೆ. ಎಸ್. ಬಂಗಾರಪ್ಪನವರ ಸಂಪುಟದಲ್ಲಿ ಕಿರಿಯ ವಯಸ್ಸಿಗೆ ಸಚಿವರಾಗುತ್ತಾರೆ. 1994ರಲ್ಲಿ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದಾಗ, ಧೃತಿಗೆಡದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮತ್ತೆ ಸಾತನೂರಿನಲ್ಲಿ ಭರ್ಜರಿ ಜಯ ಸಾಧಿಸಿದ ಅವರು, ಮರಳಿ ಕಾಂಗ್ರೆಸ್ ಸೇರುತ್ತಾರೆ. 1999ರಲ್ಲಿ ಮತ್ತೆ ದೇವೇಗೌಡರ ಕುಟುಂಬವನ್ನು ಎದುರಿಸಬೇಕಾಗಿ ಬರುತ್ತದೆ. ದೇವೇಗೌಡರ ಪುತ್ರ ಎಚ್.ಡಿ. ಕುಮಾರಸ್ವಾಮಿ ಅವರು ಸಾತನೂರು ಕ್ಷೇತ್ರದಿಂದ ಸ್ಪರ್ಧಿಸಿದಾಗ, ಶಿವಕುಮಾರ್ ಅವರು ಎಚ್ಡಿಕೆ ಅವರನ್ನು ಸೋಲಿಸಿ ರಾಜಕೀಯದಲ್ಲಿ ‘ಜೈಂಟ್ ಕಿಲ್ಲರ್’ (ಮಹಾನಾಯಕನನ್ನು ಗೆದ್ದವರು) ಎಂಬ ಖ್ಯಾತಿ ಪಡೆಯುತ್ತಾರೆ. ಎಸ್.ಎಂ. ಕೃಷ್ಣ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ (1999-2004) ಡಿಕೆ ಶಿವಕುಮಾರ್ ಅವರು ನಗರಾಭಿವೃದ್ಧಿ ಮತ್ತು ಸಹಕಾರ ಇಲಾಖೆಯಂತಹ ಪ್ರಮುಖ ಖಾತೆಗಳನ್ನು ನಿಭಾಯಿಸುತ್ತಾರೆ. ಕೃಷ್ಣ ಅವರ ಕಾಲದಲ್ಲಿ ಡಿಕೆ ಶಿವಕುಮಾರ್ ಏರುಗತಿಯಲ್ಲಿ ಬೆಳೆದರೆಂದೇ ರಾಜಕೀಯ ವಿಶ್ಲೇಷಕರು ಗುರುತಿಸುತ್ತಾರೆ.

ದೇವೇಗೌಡರ ಪ್ರಭಾವವನ್ನು ಎದುರಿಸುವ ಅನಿವಾರ್ಯತೆಯಲ್ಲಿದ್ದ ಕಾಂಗ್ರೆಸ್ ಪಕ್ಷವು ಎಸ್.ಎಂ. ಕೃಷ್ಣ ಅವರೊಂದಿಗೆ ಕಿರಿಯ ಒಕ್ಕಲಿಗ ನಾಯಕನೊಬ್ಬನನ್ನು ಮುನ್ನೆಲೆಗೆ ತರಲು ಬಯಸಿತ್ತು. ಆ ನಿಟ್ಟಿನಲ್ಲಿ ಹೊಮ್ಮಿದ ಮುಖವೇ ಡಿ.ಕೆ. ಶಿವಕುಮಾರ್. ಪಕ್ಷ ಬಯಸಿದ್ದನ್ನು ಸಾಕಾರಗೊಳಿಸುವ ಪ್ರಯತ್ನದಲ್ಲಿ ತಕ್ಕಮಟ್ಟಿಗೆ ಡಿಕೆ ಶಿವಕುಮಾರ್ ಯಶಸ್ವಿಯೂ ಆಗಿದ್ದಾರೆ. 2004ರ ಲೋಕಸಭೆ ಚುನಾವಣೆಯಲ್ಲಿ ಅಂದಿನ ಕನಕಪುರ ಕ್ಷೇತ್ರದಲ್ಲಿ ಪತ್ರಕರ್ತೆ ತೇಜಸ್ವಿನಿ ಗೌಡ ಅವರನ್ನು ಕಾಂಗ್ರೆಸ್‌ನಿಂದ ಕಣಕ್ಕಿಳಿಸಿ, ದೇವೇಗೌಡರನ್ನು ಸೋಲಿಸಿದಾಗ ಡಿಕೆ ಶಿವಕುಮಾರ್ ಅವರ ಸ್ಥಾನಮಾನ ಮತ್ತಷ್ಟು ಬಲವಾಗುತ್ತದೆ. ಆನಂತರ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಬಲ ರಾಜಕೀಯ ಶಕ್ತಿಯಾಗಿಯೂ ಅವರು ಗುರುತಿಸಿಕೊಳ್ಳುತ್ತಾರೆ. ಅದೇ ಪ್ರದೇಶದಲ್ಲಿ ತಮ್ಮ ರಾಜಕೀಯ ನೆಲೆಯನ್ನು ನಿರ್ಮಿಸಿಕೊಂಡಿದ್ದ ಕುಮಾರಸ್ವಾಮಿ ಅವರೊಂದಿಗೆ ಸಹಜವಾಗಿ ರಾಜಕೀಯ ವೈರತ್ವ ಬೆಳೆಯುತ್ತದೆ.

ಅವಧಿ ಪೂರ್ಣಕ್ಕೂ ಮುನ್ನವೇ ಎಸ್‌.ಎಂ. ಕೃಷ್ಣ ಅವರು ಚುನಾವಣೆಗೆ ಹೋದಂತಹ ಸಂದರ್ಭದಲ್ಲಿ ಅತಂತ್ರ ಫಲಿತಾಂಶ ಬಂದು ಜೆಡಿಎಸ್‌- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ (2004-05) ರಚನೆಯಾಗುತ್ತದೆ. ಧರಂಸಿಂಗ್ ಮುಖ್ಯಮಂತ್ರಿಯಾಗುತ್ತಾರೆ. ಆದರೆ ಮೈತ್ರಿ ಸರ್ಕಾರದಲ್ಲಿ ದೇವೇಗೌಡರ ಬಣವು ಎಸ್.ಎಂ. ಕೃಷ್ಣ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರನ್ನೂ ಅಧಿಕಾರದ ಹುದ್ದೆಗಳಿಂದ ದೂರ ಇಡುತ್ತದೆ. ನಂತರ ಸಮ್ಮಿಶ್ರ ಸರ್ಕಾರವನ್ನು ಕೆಡವಿ, ಬಿಜೆಪಿ ಜೊತೆಯಲ್ಲಿ ಸರ್ಕಾರ ರಚಿಸಿದ ಕುಮಾರಸ್ವಾಮಿಯವರ ರಾಜಕೀಯ ಪರ್ವ ಶುರುವಾಗುತ್ತದೆ. ದೇವೇಗೌಡರ ನಂತರದ ಒಕ್ಕಲಿಗ ಲೀಡರ್ ಆಗಿ ಎಚ್‌ಡಿಕೆ ತಮ್ಮ ಸ್ಥಾನವನ್ನು ಬಲಪಡಿಸಿಕೊಳ್ಳುತ್ತಾರೆ. ಯಡಿಯೂರಪ್ಪನವರಿಗೆ ಅಧಿಕಾರ ಬಿಟ್ಟುಕೊಡದ ಕಾರಣ, ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊಮ್ಮುತ್ತದೆ. ಬಳಿಕ ಶುರುವಾಗಿದ್ದು ಆಪರೇಷನ್ ಕಮಲದ ಕಾಲ. ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿ ಉಚ್ಛ್ರಾಯ ಸ್ಥಿತಿಗೇರಿದ ಕಾಲವೂ ಅದಾಗಿತ್ತು. ಭ್ರಷ್ಟ ಬಿಜೆಪಿಯನ್ನು ಸೋಲಿಸಿ 2013ರಲ್ಲಿ ಕಾಂಗ್ರೆಸ್ ಗೆದ್ದಾಗ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು ಡಿಕೆ ಶಿವಕುಮಾರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುತ್ತಾರೆ. ಎಸ್‌.ಎಂ. ಕೃಷ್ಣ ಅವರು ಕಾಂಗ್ರೆಸ್‌ನಲ್ಲಿ ನೇಪಥ್ಯಕ್ಕೆ ಸರಿದ ಮೇಲೆ ಪ್ರಮುಖ ಒಕ್ಕಲಿಗ ಮುಖವಾಗಿ ಪಕ್ಷವು ಮುಂದೆ ತರಲು ಬಯಸಿದ್ದು ಡಿಕೆ ಶಿವಕುಮಾರ್ ಅವರನ್ನೇ. ಹೀಗಾಗಿ ದೇವೇಗೌಡರ ಫ್ಯಾಮಿಲಿ ವರ್ಸಸ್ ಡಿಕೆ ಶಿವಕುಮಾರ್ ಕುಟುಂಬ ಎಂಬುದು ಸಾಮಾನ್ಯ ಕದನವಾಗಿ ಮಾರ್ಪಡುತ್ತದೆ.

ದೇವೇಗೌಡರ ಕುಟುಂಬ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಪ್ರತಿಷ್ಠೆಯ ಕದನಕ್ಕೆ ಸಾಕ್ಷಿಯಾದ ಅತ್ಯಂತ ರೋಚಕ ಘಟ್ಟವೆಂದರೆ 2013 ರ ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪಚುನಾವಣೆ. 2009ರ ಸಾರ್ವತ್ರಿಕ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಎಚ್.ಡಿ. ಕುಮಾರಸ್ವಾಮಿ ಅವರು ಗೆದ್ದು ಸಂಸದರಾಗಿದ್ದರು. ಆದರೆ, 2013ರ ಮೇ ತಿಂಗಳಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ರಾಮನಗರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗುತ್ತಾರೆ. ಲೋಕಸಭಾ ಸದಸ್ಯ ಸ್ಥಾನಕ್ಕೆ ಎಚ್‌ಡಿಕೆ ರಾಜೀನಾಮೆ ನೀಡಿದ್ದರಿಂದ 2013ರ ಆಗಸ್ಟ್‌ನಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗುತ್ತದೆ.

ಕಳೆದುಹೋದ ಕ್ಷೇತ್ರವನ್ನು ತನ್ನಲ್ಲೇ ಉಳಿಸಿಕೊಳ್ಳಲು ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಜೆಡಿಎಸ್‌ ಕಣಕ್ಕಿಳಿಸುತ್ತದೆ. ಇತ್ತ ಕಾಂಗ್ರೆಸ್‌ನಿಂದ ಶಿವಕುಮಾರ್ ಅವರ ಸಹೋದರ ಡಿ.ಕೆ. ಸುರೇಶ್ ಎದುರಾಳಿಯಾಗುತ್ತಾರೆ. ಇದು ನೇರವಾಗಿ ಗೌಡರ ಕುಟುಂಬ ವರ್ಸಸ್ ಡಿ.ಕೆ. ಸಹೋದರರ ನಡುವಿನ ಪ್ರತಿಷ್ಠೆಯ ಕದನವಾಗಿ ಮಾರ್ಪಡುತ್ತದೆ. ಕಾಂಗ್ರೆಸ್ ಮತ್ತು ಡಿ.ಕೆ. ಸಹೋದರರನ್ನು ಸೋಲಿಸಲೇಬೇಕು ಎಂಬ ಏಕೈಕ ಉದ್ದೇಶದಿಂದ ಅಂದು ಜೆಡಿಎಸ್ ಮತ್ತು ಬಿಜೆಪಿ ಅನಿರೀಕ್ಷಿತ ಒಪ್ಪಂದ ಮಾಡಿಕೊಳ್ಳುತ್ತವೆ. ಬಿಜೆಪಿ ಈ ಕ್ಷೇತ್ರದಿಂದ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ, ಜೆಡಿಎಸ್‌ನ ಅನಿತಾ ಕುಮಾರಸ್ವಾಮಿ ಅವರಿಗೆ ಬಹಿರಂಗ ಬೆಂಬಲ ಘೋಷಿಸುತ್ತದೆ.

ಇದರಿಂದಾಗಿ ಇಡೀ ಕ್ಷೇತ್ರದಾದ್ಯಂತ ತೀವ್ರ ಕುತೂಹಲ ಸೃಷ್ಟಿಯಾಗುತ್ತದೆ. ಭಾರೀ ಹೈವೋಲ್ಟೇಜ್ ಪ್ರಚಾರ ಮತ್ತು ರಾಜಕೀಯ ತಂತ್ರ-ಪ್ರತಿತಂತ್ರಗಳ ನಂತರ ನಡೆದ ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. 2014ರ ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ ಬಿಜೆಪಿ ಅಲೆ ಇದ್ದಾಗಲೂ ಶಿವಕುಮಾರ್ ಅವರು ಬೆಂಗಳೂರು ಗ್ರಾಮಾಂತರದಿಂದ ತಮ್ಮ ಸಹೋದರ ಡಿ.ಕೆ. ಸುರೇಶ್ ಅವರನ್ನು ಗೆಲ್ಲಿಸಿಕೊಂಡು ಬಂದು ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡುತ್ತಾರೆ.

ಪಕ್ಷ ಸಂಘಟನೆಗೆ ಉದಾರವಾಗಿ ಹಣ ಹರಿಸಬಲ್ಲ, ಡಿಕೆ ಶಿವಕುಮಾರ್ ಅವರನ್ನು ಹೊಸಕಿ ಹಾಕಿದರೆ, ಕಾಂಗ್ರಸ್‌ನ ಕೀಲು ಮುರಿದಂತೆ ಎಂದು ತಿಳಿದಿದ್ದ ಕೇಂದ್ರ ಬಿಜೆಪಿ ಸರ್ಕಾರ, ಡಿಕೆ ಶಿವಕುಮಾರ್ ಅವರ ಮೇಲೆ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಪ್ರಯೋಗಿಸಲು ಶುರು ಮಾಡುತ್ತದೆ. ಹಣ ವರ್ಗಾವಣೆ ಮತ್ತು ತೆರಿಗೆ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ), ಆದಾಯ ತೆರಿಗೆ ಇಲಾಖೆ ಹಾಗೂ ಕೇಂದ್ರೀಯ ತನಿಖಾ ದಳ (ಸಿಬಿಐ) ಸೇರಿದಂತೆ ಹಲವು ಸಂಸ್ಥೆಗಳ ತನಿಖೆಗಳನ್ನು ಡಿಕೆ ಶಿವಕುಮಾರ್ ಎದುರಿಸಬೇಕಾಗುತ್ತದೆ.

ಶಿವಕುಮಾರ್ ಅವರನ್ನು 2019 ರಲ್ಲಿ ಇಡಿ ಬಂಧಿಸಿತ್ತು. ಈ ಬಂಧನವು ರಾಜಕೀಯ ಪ್ರೇರಿತ ಎಂದು ಕಾಂಗ್ರೆಸ್ ಆರೋಪಿಸಿತ್ತು. 2018ರ ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅತಂತ್ರ ಫಲಿತಾಂಶ ಬಂದಾಗ, ಬಿಜೆಪಿಯ ಕುದುರೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ಶಾಸಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಡಿಕೆ ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು. ಈ ಕಾರಣಕ್ಕಾಗಿಯೇ ಬಿಜೆಪಿ ಸೇಡಿನ ಕ್ರಮ ಜರುಗಿಸಿತ್ತು ಎಂದು ವಿಶ್ಲೇಷಿಸಲಾಗಿತ್ತು. ಅಂತಿಮವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ರಚಿಸುವಲ್ಲಿ ಡಿಕೆ ಶಿವಕುಮಾರ್ ಪಾತ್ರ ವಹಿಸಿದ್ದರು.

ದೆಹಲಿಯ ತಿಹಾರ್ ಜೈಲಿನಲ್ಲಿ 50 ದಿನ ಕಳೆದ ನಂತರ ಡಿಕೆ ಶಿವಕುಮಾರ್ ಅವರಿಗೆ ಜಾಮೀನು ಮಂಜೂರಾಯಿತು. ಅವರು ಬೆಂಗಳೂರಿಗೆ ಮರಳಿದಾಗ, ಕಾಂಗ್ರೆಸ್ ನಾಯಕರು ವಿಮಾನ ನಿಲ್ದಾಣದಿಂದ ಬೃಹತ್ ರೋಡ್ ಶೋ ಆಯೋಜಿಸಿದ್ದರು. ಡಿಕೆ ಶಿವಕುಮಾರ್ ಬಂಧನವು ಒಕ್ಕಲಿಗ ಸಮುದಾಯಕ್ಕೆ ಮಾಡಿದ ‘ಅಪಮಾನ’ ಎಂದು ಪ್ರಚಾರ ಮಾಡಲು ಕಾಂಗ್ರೆಸ್ ಯತ್ನಿಸಿತು. 2023ರಲ್ಲಿ ಕಾಂಗ್ರೆಸ್ ಪಕ್ಷ ಬಹುಮತವನ್ನು ಪಡೆಯುವಲ್ಲಿ ಡಿಕೆ ಶಿವಕುಮಾರ್ ಅವರ ಶ್ರಮ ಇತ್ತು. ಸಹಜವಾಗಿ ಅವರು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದರು.

ಈ ಲೇಖನ ಓದಿದ್ದೀರಾ?: ಕರ್ನಾಟಕ ರಾಜಕಾರಣ | ಲೋಕಸಭೆ ಸಮರಕ್ಕೆ ರಾಹುಲ್ ಗಾಂಧಿ ಹೊಸ ಕಾರ್ಯತಂತ್ರ ಸಿದ್ಧಗೊಳಿಸುತ್ತಿದ್ದಾರೆಯೇ?

2024ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿಯಾಗಿದ್ದವು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದದ್ದು ದೇವೇಗೌಡರ ಅಳಿಯ ಡಾ. ಸಿ.ಎನ್. ಮಂಜುನಾಥ್! ಆದರೆ ಈ ಕದನದಲ್ಲಿ ಶಿವಕುಮಾರ್ ಸಹೋದರ ಸುರೇಶ್ ಹೀನಾಯವಾಗಿ ಸೋತಿದ್ದೂ ಉಂಟು. ನಲವತ್ತು ವರ್ಷಗಳ ಚುನಾವಣಾ ರಾಜಕಾರಣದಲ್ಲಿ ಕಾಂಗ್ರೆಸ್ ಏಳುಬೀಳುಗಳೊಂದಿಗೆ ಬೆಳೆದ ಡಿಕೆ ಶಿವಕುಮಾರ್ ಅವರು ದೇವೇಗೌಡರ ಫ್ಯಾಮಿಲಿಯನ್ನು ಎದುರಿಸುತ್ತಲೇ ಬಂದಿದ್ದಾರೆ ಮತ್ತು ಚುನಾವಣೆಗಳಲ್ಲಿ ಏಳುಬೀಳುಗಳನ್ನು ಕಂಡಿದ್ದಾರೆ. ಆದರೆ ಒಕ್ಕಲಿಗ ನಾಯಕತ್ವದ ಪಟ್ಟ ಹಿಡಿಯುವಲ್ಲಿ ಇರಬೇಕಾದ ಇಮೇಜ್ ಡಿಕೆ ಶಿವಕುಮಾರ್ ಅವರಿಗೆ ದಕ್ಕದಾಗಿದ್ದು ದುರಂತವೇ ಸರಿ. ಸಮುದಾಯದ ಮುಖವಾಗಬಲ್ಲ ವರ್ಚಸ್ಸು ಸಹಜವಾಗಿ ಅವರಿಂದ ಹೊಮ್ಮಲಿಲ್ಲ. ಪಕ್ಷ ಸಂಘಟನೆಯ ಕಾರಣಕ್ಕೆ ಸಿಕ್ಕಿರುವ ದೊಡ್ಡ ಅವಕಾಶವನ್ನು ಹೇಗೆ ಬಳಸುತ್ತಾರೆ ಎಂದು ಕಾಲವೇ ನಿರ್ಧರಿಸುತ್ತದೆ.

ರಾಜಕೀಯ ಎದುರಾಳಿಯೊಬ್ಬನನ್ನು ಉನ್ನತ ಹುದ್ದೆಯಲ್ಲಿ ಕೂರಿಸಿರುವುದರಿಂದ ದೇವೇಗೌಡರ ಕುಟುಂಬವು ರಾಜಕೀಯ ದಾಳಗಳನ್ನು ಉರುಳಿಸದೆ ಇರುವುದಿಲ್ಲ. ಮತ್ತೊಂದೆಡೆ ಒಕ್ಕಲಿಗರ ಪ್ರದೇಶದಲ್ಲಿ ಬೇರು ಬಿಡುವುದಕ್ಕೆ ಮತ್ತು ಜೆಡಿಎಸ್ ಪಕ್ಷವನ್ನು ಆಪೋಷನ ತೆಗೆದುಕೊಳ್ಳುವುದಕ್ಕೆ ಕಾಯುತ್ತಿರುವ ಬಿಜೆಪಿ ಹಾಗೂ ಅದರ ಕೇಂದ್ರ ನಾಯಕರು ಡಿಕೆ ಶಿವಕುಮಾರ್ ಮೇಲೂ ಕಣ್ಣಿಡುವುದು ಖಚಿತ.

ರಾಜಕಾರಣದಲ್ಲಿ ಭ್ರಷ್ಟಚಾರವನ್ನು ಮೈಗೆತ್ತಿಕೊಳ್ಳದೆ ಇದ್ದ ಸಿದ್ದರಾಮಯ್ಯನಂಥವರನ್ನೇ ಕೇಂದ್ರ ತನಿಖಾ ಸಂಸ್ಥೆಗಳ ಕುಣಿಕೆಗೆ ಸಿಕ್ಕಿಸಲು ಬಿಜೆಪಿ ಯತ್ನಿಸಿತ್ತು. ಹೀಗಿರುವಾಗ ಈಗಾಗಲೇ ಇ.ಡಿ, ಸಿಬಿಐ ಸಂಕಷ್ಟಗಳನ್ನು ಎದುರಿಸಿರುವ ಡಿಕೆ ಶಿವಕುಮಾರ್ ಅವರ ಮೇಲೆ ಕೇಂದ್ರವು ಮತ್ತೊಂದು ಸುತ್ತಿನ ಕಾರ್ಯಾಚರಣೆಗೆ ಇಳಿಯಬಹುದು. ಪ್ರಮುಖ ಹುದ್ದೆಯಲ್ಲಿರುವ ವ್ಯಕ್ತಿಯ ಮೇಲೆ ದಾಳಿ ಮಾಡುವ ಮೂಲಕ ಕಾಂಗ್ರೆಸ್ಸಿನ ನೈತಿಕ ಸ್ಥೈರ್ಯವನ್ನೂ ಕಸಿಯಬಹುದು. ಬಿಜೆಪಿಯ ಮಿತ್ರ ಪಕ್ಷ ಜೆಡಿಎಸ್ ಕೂಡ ಇಂತಹ ದಾಳಿಗಳನ್ನು ಬೆಂಬಲಿಸಿ, ಡಿಕೆ ಶಿವಕುಮಾರ್ ಅವರನ್ನು ರಾಜಕೀಯವಾಗಿ ಮುಗಿಸಲು ಯತ್ನಿಸಬಹುದು. ಇಂತಹ ರಾಜಕೀಯ ಅಡಕತ್ತರಿಗಳಿಗೆ ಸಿಗಬಾರದೆಂದರೆ ಡಿಕೆ ಶಿವಕುಮಾರ್ ಆದಷ್ಟು ಬೇಗ, ದೊಡ್ಡ ಇಮೇಜ್ ಕಟ್ಟಿಕೊಳ್ಳಬೇಕಾಗುತ್ತದೆ. ‘ಡಿಕೆ ಶಿವಕುಮಾರ್ ಅವರನ್ನು ಮುಟ್ಟಿದರೆ, ಒಂದು ಸಮುದಾಯದ ವೋಟ್ ಬ್ಯಾಂಕ್ ಎದುರು ಹಾಕಿಕೊಂಡಂತೆ, ಡಿಕೆ ಶಿವಕುಮಾರ್ ಅವರನ್ನು ಮುಟ್ಟಿದರೆ ಕರ್ನಾಟಕದ ಒಬ್ಬ ಜನಪ್ರಿಯ ಮುಖ್ಯಮಂತ್ರಿಯನ್ನು ಮುಟ್ಟಿದಂತೆ, ಡಿಕೆ ಶಿವಕುಮಾರ್ ಸಹವಾಸಕ್ಕೆ ಹೋದರೆ ಅಧಿಕಾರ ಹಿಡಿಯುವುದು ಕಷ್ಟವಾಗುತ್ತದೆ’ ಎಂಬ ಸಂದೇಶ ರವಾನಿಸುವಷ್ಟರ ಮಟ್ಟಿಗೆ ಇಮೇಜ್ ಬೆಳೆದರೆ ಮಾತ್ರ ಡಿಕೆ ಶಿವಕುಮಾರ್ ಅವರ ಅಸ್ತಿತ್ವ ಉಳಿಯುತ್ತದೆ. ಅಡ್ಜೆಸ್ಟ್ಮೆಂಟ್ ರಾಜಕೀಯ ನಡೆಸಲು ಹೋದರೆ, ಪಕ್ಷಕ್ಕೂ, ಸಿದ್ಧಾಂತಕ್ಕೂ, ಅಸ್ತಿತ್ವಕ್ಕೂ ಹೊಡೆತ ಬೀಳುತ್ತದೆ. ಒಕ್ಕಲಿಗರೇ ದೊಡ್ಡಸಂಖ್ಯೆಯಲ್ಲಿರುವ ಭಾಗದಲ್ಲಿ ಬಿಡದಿ ಟೌನ್‌ಶಿಪ್‌ ಮಾಡಲು ಯತ್ನಿಸುತ್ತಿರುವುದು ಕೂಡ ಡಿಕೆ ಶಿವಕುಮಾರ್ ಅವರಿಗೆ ಭಾರೀ ಹೊಡೆತ ನೀಡಬಹುದು. “ರೈತರ ಮಗನೆಂದು ಹೇಳುವ ನೀನು ರೈತರ ಬದುಕಿಗೆ ಮುಳುವಾಗುತ್ತಿದ್ದೀಯ” ಎಂದು ತಿರುಗಿಬಿದ್ದರೆ ಡಿಕೆ ಶಿವಕುಮಾರ್ ಅವರು ಒಕ್ಕಲಿಗರ ಮನಗೆಲ್ಲುವುದು ಕನಸಿನ ಮಾತಾಗುತ್ತದೆ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಕ್ಕು ತೋಚದೆ ತಬ್ಬಿಬ್ಬಾಗಿರುವ ಚುನಾವಣಾ ಆಯೋಗ: ದಿನೇ ದಿನೆ ಕುಸಿಯುತ್ತಿರುವ ವಿಶ್ವಾಸಾರ್ಹತೆ

ಸೆಪ್ಟೆಂಬರ್ 23ರ 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯ ವರದಿಯ ನಂತರ ಆಯೋಗ...

ಸ್ಟಿಂಗ್ ಆಪರೇಷನ್ | ಭ್ರಷ್ಟಾಚಾರ ಬಯಲಿಗೆಳೆಯುವ ಸಾಧನವಾಗಬೇಕೇ ವಿನಾ ರಾಜಕೀಯ ಒತ್ತಡ, ಬ್ಲ್ಯಾಕ್‌ಮೇಲ್‌ನ ಆಯುಧವಾಗಬಾರದು

ಆಡಳಿತ ಪಕ್ಷವನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವದ ಮೂಲಭೂತ ಕರ್ತವ್ಯ. ಆದರೆ, ವಿರೋಧ ಪಕ್ಷಗಳಿಗೂ...

ಬೇಡ್ತಿ ನದಿ ತಿರುವು ಯೋಜನೆಯೂ, ಬೊಮ್ಮಾಯಿ-ಕಾಗೇರಿ ಪೀಕಲಾಟವೂ

ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇದ್ದಕ್ಕಿದ್ದಂತೆಯೇ ಬೇಡ್ತಿ-ವರದಾ ಮತ್ತು...