ಕಳೆದ ವರ್ಷ ಡಿಸೆಂಬರ್ 5 ರಂದು ವಿಶ್ವದ ಮನೋರಂಜನಾ ದೈತ್ಯ ಸಂಸ್ಥೆ ನೆಟ್ ಫ್ಲಿಕ್ಸ್-ವಾರ್ನರ್ ಬ್ರದರ್ಸ್ ಅನ್ನು ತನ್ನ ಜಾಲದೊಂದಿಗೆ ಸೇರಿಸಿಕೊಳ್ಳುವುದಾಗಿ ಪ್ರಕಟಿಸಿತು. ಈ ವ್ಯವಹಾರದ ಒಟ್ಟು ಅಂದಾಜು ಬೆಲೆ 82.7 ಬಿಲಿಯನ್ ಡಾಲರ್ ಎಂದೂ ಹೇಳಲಾಗುತ್ತಿದೆ. ಹಾಗಾದಲ್ಲಿ ಈ ಎರಡೂ ಮನೋರಂಜನಾ ಜಗತ್ತಿನ ಡೈನೋಸಾರ್ ಗಳ ಸಾರ್ವಭೌಮತ್ವ ಮತ್ತು ಏಕಚಕ್ರಾಧಿಪತ್ಯ ಸ್ಥಾಪಿಸಲು ಈ ಒಪ್ಪಂದ ಹೆದ್ದಾರಿಯಾಗಲಿದೆ. ಅಲ್ಲದೆ ವಿಶ್ವದ ಸಿನಿಮಾ ಮತ್ತು ಮನೋರಂಜನಾ ಜಾಲ, ಹಾಗೂ ಹಂಚಿಕೆಯ ಜಾಲ ತನ್ನದಾಗಿಸಿಕೊಳ್ಳುತ್ತದೆ. ವಿಶ್ವದ ಚಿತ್ರಮಂದಿರಗಳಿಗೆ ಅಂತಿಮ ಪರದೆಯಾಗಲಿದೆ.
“Cinema is the lie we tell ourselves to see the truth more clearly or the truth we disguise, so we can bear to look at it”
-Jean-Luc Godard
ಕಳೆದ ವರ್ಷ ಡಿಸೆಂಬರ್ 5 ರಂದು ವಿಶ್ವದ ಮನೋರಂಜನಾ ದೈತ್ಯ ಸಂಸ್ಥೆ ನೆಟ್ ಫ್ಲಿಕ್ಸ್-ವಾರ್ನರ್ ಬ್ರದರ್ಸ್ ಅನ್ನು ತನ್ನ ಜಾಲದೊಂದಿಗೆ ಸೇರಿಸಿಕೊಳ್ಳುವುದಾಗಿ ಪ್ರಕಟಿಸಿತು. ಈ ಮೂಲಕ ವಾರ್ನರ್ ಬ್ರದರ್ಸ್ ನ ಸಿನಿಮಾ, ಟೆಲಿವಿಷನ್ ಸ್ಟೂಡಿಯೋ ಹಾಗೂ ಅದರ ಪ್ರಸಾರದ ಆಸ್ತಿಯಾದ HBO ಸೇರಿದಂತೆ ಎಲ್ಲವನ್ನೂ ತನ್ನದಾಗಿಸಿಕೊಳ್ಳುವುದಾಗಿ ಹೇಳಿತು. ಈ ವ್ಯವಹಾರದ ಒಟ್ಟು ಅಂದಾಜು ಬೆಲೆ 82.7 ಬಿಲಿಯನ್ ಡಾಲರ್ ಎಂದೂ ಹೇಳಿತು. ಈ ಬೆಳವಣಿಗೆ ಸಮಕಾಲೀನ ಮನೋರಂಜನಾ ಮಾರುಕಟ್ಟೆ ಬಹುಕಾಲದಿಂದ ನಡೆದು ಬಂದಿದ್ದ ವಾರ್ನರ್ ಬ್ರದರ್ಸ್ ಮೇಲೆ ತನ್ನ ಅಧಿಪತ್ಯ ಸಾಧಿಸಿದಂತಾಗುತ್ತದೆ ಮತ್ತು ನೆಟ್ ಫ್ಲಿಕ್ಸ್ ಗೆ ವಿಶ್ವದ ಮನೋರಂಜನಾ ಉದ್ಯಮದ ಮೇಲೆ ಸಾರ್ವಭೌಮತ್ವ ಮತ್ತು ಏಕಚಕ್ರಾಧಿಪತ್ಯ ಸ್ಥಾಪಿಸಲು ಹೆದ್ದಾರಿಯಾಗಲಿದೆ ಎಂಬ ನಂಬಿಕೆ ಇಡೀ ಜಗತ್ತನ್ನು ಬೆಚ್ಚಿಬೀಳಿಸಿತಲ್ಲದೆ, ವಿಶ್ವದ ಸಿನಿಮಾ ಮತ್ತು ಮನೋರಂಜನಾ ಜಾಲ, ಹಾಗೂ ಹಂಚಿಕೆಯ ಜಾಲ ತನ್ನದಾಗಿಸಿಕೊಳ್ಳುತ್ತದೆ ಎಂಬ ಮಾತೂ ಕೇಳಿ ಬಂದಿತ್ತು.
ಕೇವಲ ವ್ಯೂಹಾತ್ಮಕ ಹಾಗೂ, ಮಾನಸಿಕ ಪ್ರಕ್ರಿಯೆಯೇ?
ಆದರೆ ʼನೆಟ್ ಫ್ಲಿಕ್ಸ್ʼ ಇದು ಕೇವಲ ವ್ಯೂಹಾತ್ಮಕ ಹಾಗೂ, ಮಾನಸಿಕ ಪ್ರಕ್ರಿಯೆಯೇ ಹೊರತು ಇದರಿಂದಾಗಿ ಕಾರ್ಯಗತಗೊಳಿಸುವಲ್ಲಿ ಯಾವುದೇ ಪರಿಣಾಮ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿತು. ಏಕೆಂದರೆ ನೆಟ್ ಫ್ಲಿಕ್ಸ್ ಗೆ ಆಗ ಇನ್ನೂ ನಿಯಂತ್ರಕ ಅನುಮತಿ (Regulatory approval) ದೊರೆತಿರಲಿಲ್ಲ. ಏಕೆಂದರೆ ನೆಟ್ ಫ್ಲಿಕ್ಸ್ ಇನ್ನೂ ಅಂತಿಮ ಪರಿಶೀಲನಾ ಹಂತ ತಲುಪಿರಲಿಲ್ಲ.ಈ ಮಧ್ಯೆ ಫೆಬ್ರುವರಿ 2026ರಲ್ಲಿ ವಾರ್ನರ್ ಬ್ರದರ್ಸ್ ಇನ್ನೊಂದು ಸಂಸ್ಥೆ ಪ್ಯಾರಮೌಂಟ್ ಸ್ಕೈಡ್ಯಾನ್ಸ್ ಜೊತೆಗೆ ಮತ್ತೊಂದು ಒಪ್ಪಂದಕ್ಕೆ ಸಿದ್ಧತೆ ನಡೆಸಿತು. ಪ್ಯಾರಾಮೌಂಟ್ ನೀಡಲು ಸಿದ್ಧವಿದ್ದ ಹಣಕ್ಕೆ ಸಮನಾಗಿ ಸ್ಪರ್ಧಿಸಲು ನೆಟ್ ಫ್ಲಿಕ್ಸ್ ಗೆ ಸಾಧ್ಯವಾಗಿಲ್ಲ. ಹಾಗಾಗಿ ಈಗ ಸದ್ಯಕ್ಕೆ ಈ ಎರಡು ಸಂಸ್ಥೆಗಳ ನಡುವಿನ ಮಾತುಕತೆ ತೂಗುಯ್ಯಾಲೆಯಲ್ಲಿದೆ. ಇದು ಯಾವ ಕಡೆಗೆ ಬೇಕಾದರೂ ವಾಲಬಹುದು ಎಂಬುದು ಅಮೆರಿಕೆಯಲ್ಲಿ ಸದ್ಯ ನಡೆಯುತ್ತಿರುವ ಚರ್ಚೆ.
ಚಿತ್ರಮಂದಿರಗಳು ಅಂತಿಮ ತೆರೆ ಎಳೆಯಲು ಸಜ್ಜು
ಅಮೆರಿಕೆಯಲ್ಲಿನ ಅಧಿಕೃತ ಮೂಲಗಳ ಪ್ರಕಾರ, ನೆಟ್ ಫ್ಲಿಕ್ಸ್ ಮತ್ತು ವಾರ್ನರ್ ಬ್ರದರ್ಸ್ ನಡುವಿನ ವ್ಯಾವಹಾರಿಕ ಒಪ್ಪಂದ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಉಭಯ ಸಂಸ್ಥೆಗಳೂ Hart Scot Rodino (HSR) ಸಿದ್ಧಪಡಿಸಿದ ವರದಿಗಳನ್ನು ಅಮೆರಿಕೆಯ Department of Justice (DOJ) ಮತ್ತು European Commission ಗಳ ಮೇಲುಸ್ತುವಾರಿಯಲ್ಲಿರುವ Competition Authorities ಗೆ ಸಲ್ಲಿಕೆ ಮಾಡಿವೆ. ಆದರೆ ಈ ಒಪ್ಪಂದದ ಕಾಲಾವಧಿ ಈ Agencyಗಳು ತಮ್ಮ ವರದಿ ಸಲ್ಲಿಸುವ ಮುನ್ನವೇ ಮುಕ್ತಾಯಗೊಂಡಿದ್ದು, ಈಗ ವಾರ್ನರ್ ಬ್ರದರ್ಸ್ ಡಿಸ್ಕವರಿ ಅವರು ಪ್ಯಾರಾಮೌಂಟ್ ಸ್ಮೈಡ್ಯಾನ್ಸ್ ಜೊತೆಗೆ ಒಪ್ಪಂದವೊಂದಕ್ಕೆ ಪ್ರಯತ್ನಿಸುತ್ತಿದ್ದು ಪ್ರತಿ ಶೇರ್ ಗೆ 31 ಡಾಲರ್ ಲೆಕ್ಕಾಚಾರದಲ್ಲಿ ಒಪ್ಪಂದದ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ ಇದರಿಂದ ನೆಟ್ ಫ್ಲಿಕ್ಸ್ ಜೊತೆಗಿನ ಒಪ್ಪಂದದ ಪರಿಣಾಮ ಏನಾಗಬಹುದು ಎಂಬ ಚರ್ಚೆ ನಡೆಯುತ್ತಿದೆ.
ಲಾಸ್ ಏಂಜಲೀಸ್ ವರದಿಯ ಪ್ರಕಾರ ಸಿನಿಮಾ ಕಾರ್ಮಿಕರ ಮತ್ತು ಸಿನಿಮಾ ಥಿಯೇಟರ್ ಗಳನ್ನು ನಡೆಸುವವರು ಯಾವುದೇ ರೀತಿಯಲ್ಲಿ ಯಾರ ನಡುವೆ ಒಪ್ಪಂದವಾದರೂ, ಸ್ಥಳೀಯ ಥಿಯೇಟರ್ ಮತ್ತು ಕಲಾವಿದರು ಮತ್ತು ಕಾರ್ಮಿಕರ ಭವಿಷ್ಯ ಡೋಲಾಯಮಾನವಾಗುತ್ತದೆ ಎಂಬ ಭಯ ದಟ್ಟವಾಗಿ ಹರಡಿದೆ. ಕಳೆದ ಆರು ತಿಂಗಳಿಂದ ಈ ನೆಟ್ ಫ್ಲಿಕ್ಸ್ –ವಾರ್ನರ್ ಬ್ರದರ್ಸ್ ನಡುವಿನ ಪ್ರಾಯೋಜಿತ ಒಪ್ಪಂದ ಇಡೀ ಜಗತ್ತಿನ ಮನೋರಂಜನಾ ಲೋಕದ ಎದೆಯಲ್ಲಿ ಢವಢವ ಹುಟ್ಟಿಸಿದೆ. ಸಿನಿಮಾ ಜಗತ್ತಂತೂ ಕಂಗಾಲಾಗಿ ಕೂತಿದೆ. ಇಲ್ಲಿನ ಚಿತ್ರಮಂದಿರದ ಮಾಲೀಕರಂತೂ ದಾರಿಕಾಣದಂತಾಗಿ ಕೂತಿದ್ದಾರೆ. ಏಕೆಂದರೆ ಈ ಈ ನೆಟ್ ಫ್ಲಿಕ್ಸ್ –ವಾರ್ನರ್ ಬ್ರದರ್ಸ್ ನಡುವಿನ ಪ್ರಾಯೋಜಿತ ಒಪ್ಪಂದದಿಂದ ಸಿನಿಮಾ ನಿರ್ಮಾಪಕರು ತಮ್ಮ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಹಿಂದೆ ಮುಂದೆ ನೋಡುತ್ತಾರೆ. ತಮ್ಮ ಚಿತ್ರಮಂದಿರಗಳಿಗಿಂತ ಮುಂಚೆ, ನಿರ್ಮಾಪಕರು ಚಿತ್ರವನ್ನು ಈ ಸ್ಟ್ರೀಮಿಂಗ್ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಲು ಇಚ್ಛಿಸುತ್ತಾರೆ. ಬೆಂಗಳೂರೂ ಸೇರಿದಂತೆ ಜಗತ್ತಿನಾದ್ಯಂತ ಚಿತ್ರಮಂದಿರಗಳು ಮುಚ್ಚುವಂಥ ಸ್ಥಿತಿ ನಿರ್ಮಾಣವಾಗುತ್ತದೆ. ಈ ಸಮಸ್ಯೆ ಜಗತ್ತಿನಾದ್ಯಂತ ನಡೆಯುತ್ತಿರುವ ಎಲ್ಲ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿಯೂ ಚರ್ಚೆಯಾಗುತ್ತಿದೆ.
ವಿಶ್ವದ ಮನೋರಂಜನಾ ಜಗತ್ತಿನ ಬಗ್ಗೆ ಒಟ್ಟಾರೆ ಬೆಳವಣಿಗೆಗಳ ಬಗ್ಗೆ ವಿಸ್ತೃತವಾಗಿ ಬರೆಯುತ್ತಿರುವ ನನ್ನ ಗೆಳೆಯ ಜಾನ್ ಗ್ಸೇವಿಯರ್ ಈ ಬಗ್ಗೆ ವಿವರವಾಗಿ ಚರ್ಚಿಸಿದ್ದಾರೆ. ಗ್ಸೇವಿಯರ್ ಹಿರಿಯ ಪತ್ರಕರ್ತ, ದ ಹಿಂದೂ ಪತ್ರಿಕೆಯ Technology Editor̤ ಈ ಹಿಂದೆ ಬ್ಲೂಮ್ಬರ್ಗ್ ಹಾಗೂ ಮೆಕೆನ್ಜಿ ಕಂಪನಿಗಳಿಗೆ Technology ಬಗ್ಗೆ ದೀರ್ಘವಾಗಿ ಬರೆದವರು. ಗ್ಸೇವಿಯರ್ ಪ್ರಕಾರ ಈ ಒಪ್ಪಂದ ಜಾರಿಗೆ ಬಂದರೆ, ನೆಟ್ ಫ್ಲಿಕ್ಸ್ ಗೆ ಸೃಜನಶೀಲ ಕೃತಿಗಳ ಸೃಷ್ಟಿಯ ಮೇಲೆ ಸಮಾನವಿಲ್ಲದ ಅಧಿಕಾರವನ್ನು ಒದಗಿಸುತ್ತದೆ ಅಲ್ಲದೆ, ಮಾಲಿಕತ್ವ, ಹಂಚಿಕೆ ಹಾಗು ಪ್ರದರ್ಶನದ ಮೇಲೆ ಇನ್ನಿಲ್ಲದ ಅಧಿಕಾರವನ್ನು ಒದಗಿಸುತ್ತದೆ. ತನ್ನ ಸಂಗ್ರಹವನ್ನು ಅತಿ ಕಡಿಮೆ ದರದಲ್ಲಿ ಬೃಹದಾಕಾರವಾಗಿ ಬೆಳೆಸುತ್ತದೆ. ಸ್ವತಂತ್ರ ಧ್ವನಿಗಳ ಮೇಲೆ, ಗ್ರಾಹಕರ ಆಯ್ಕೆ ಮೇಲೆ, ಸಿನಿಮಾದ ಅನುಭವದ ಮೇಲೆ ತನ್ನ ಅಧಿಪತ್ಯ ಸ್ಥಾಪಿಸುತ್ತದೆ. ಎನ್ನುತ್ತಾರೆ. ಅವರ ತಿಳಿವಳಿಕೆಯ ಪ್ರಕಾರ, ನೆಟ್ ಫ್ಲಿಕ್ಸ್ , ಅಮೆಜಾನ್ ಪ್ರೈಮ್, ಡಿಸ್ನಿ ಪ್ಲಸ್, ಎಲ್ಲವೂ ಒಟ್ಟಾಗಿ ನೋಡುಗರ ಅಸಕ್ತಿಯನ್ನು ಲೆಕ್ಕಾಚಾರ ಅದಕ್ಕೆ ತಕ್ಕಂಥ ಮಾರುಕಟ್ಟೆಯನ್ನು ಸೃಷ್ಟಿ ಮಾಡುತ್ತದೆ.

ಕೆಲಸಗಳ ನಷ್ಟ ಮತ್ತು ಅದರ ಪರಿಣಾಮ
ಅಷ್ಟೇ ಅಲ್ಲ, ಅಲ್ಲಿನ ನೌಕರರು, ಚಾಕರರು, ಕೆಲಸಕಳೆದುಕೊಂಡು ನಿರ್ಗತಿಕರಾಗುತ್ತಾರೆ. ಅವರಿಗೆ ಬದಲಿ ನೌಕರಿ ದಕ್ಕುವುದಿಲ್ಲ. ದಶಕಗಳಿಂದ ಅವರು ಈ ವೃತ್ತಿಯನ್ನೇ ನಂಬಿಕೊಂಡಿದ್ದಾರೆ. ಈ ಬೆಳವಣಿಗೆಯಿಂದ ಮತ್ತು ಚಿತ್ರರಂಗವನ್ನು ನಿರ್ಬಲವಾಗಿಸುತ್ತಿರುವ ಕೃತಕ ಬುದ್ದಿಮತ್ತೆ (AI) ಎಷ್ಟು ಮಂದಿ ತಮ್ಮ ಕೆಲಸ ಕಳೆದುಕೊಳ್ಳಲಿದ್ದಾರೆ ಹಾಗೂ ಎಷ್ಟು ಮಂದಿ ಕಲಾವಿದರು ತಂತ್ರಜ್ಞರು ಮತ್ತು ಇತರರು ನಿರ್ಗತಿಕರಾಗುತ್ತಿದ್ದಾರೆ ಎಂಬುದರ ಖಚಿತ ಲೆಕ್ಕಾಚಾರ ಇನ್ನೂ ದೊರಕಿಲ್ಲ ಗೋಲ್ಡಮನ್ ಸ್ಯಾಚ್ಸ್ (Goldman Sachs) ಲೆಕ್ಕಾಚಾರದ ಪ್ರಕಾರ ಜಗತ್ತಿನ 300 ಮಿಲಿಯನ್ ಪೂರ್ಣಕಾಲಿಕ ನೌಕರರು ಕೆಲಸ ಕಳೆದುಕೊಳ್ಳುವುದಂತೂ ನಿಶ್ಚಿತ. ಇವರಿಗೆ ಪುನರ್ವಸತಿ ಕಲ್ಪಿಸುವ ಸಾಧ್ಯತೆ ಇದೆ ಎಂಬ ಸಮಜಾಯಿಷಿ ಕೂಡ ಕೇಳಿ ಬರುತ್ತಿದೆ. ಇದೇ ರೀತಿ AI ನಿಂದಾಗಿ ಮೋರ್ಗಾನ್ ಸ್ಟ್ಯಾನ್ಲಿ ಪ್ರಕಾರ ಸುಮಾರು ೪೦೦,೦೦೦ ಯೂರೋಪಿಯನ್ ಬ್ಯಾಂಕಿಂಗ್ ನೌಕರರು ಕೆಲಸಕಳೆದುಕೊಳ್ಳುತ್ತಿದಾರೆ. ಈ ದಿನ ಸಂಪರ್ಕಿಸಿದ ಕೆಲವು ನೆಟ್ ಫ್ಲಿಕ್ಸ್ ನ ಅಧಿಕಾರಿಗಳ ಪ್ರಕಾರ ಹೆಚ್ಚು ಕಾಲ ಚಿತ್ರಗಳು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡರೆ, ಅದರ ಪರಿಣಾಮವಾಗಿ streaming platform ನ ಲಾಭದ ಪ್ರಮಾಣ ಗಣನೀಯವಾಗಿ ಕುಸಿಯಲಿದೆ. ಅಷ್ಟೇ ಅಲ್ಲ ಅದು ಗ್ರಾಹಕ ವಿರೋಧಿ ನೀತಿ. ಇದರ ಅರ್ಥವೆಂದರೆ, ಈ ಚಿತ್ರಗಳು ಆದಷ್ಟು ಶೀಘ್ರ ಚಿತ್ರಮಂದಿರಗಳು ಈ Streaming platforms ಬರಬೇಕು. ಅಮೆರಿಕೆಯ ಚಿತ್ರಮಂದಿರಗಳ ಮಾಲೀಕರು ಹೇಳುವುದನ್ನು ಕೇಳಿದರೆ, ಭಾರತದ ಚಿತ್ರಮಂದರಿಗಳ ಮಾಲೀಕರ ಭಯ ಅರ್ಥವಾಗುತ್ತದೆ. ಅಂದರೆ, ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಮೂಲಕ ಚಿತ್ರಮಂದಿರಗಳು ತಮ್ಮ ಅಸ್ತಿತ್ವ ಉಳಿದುಕೊಳ್ಳಲು ಸಾಧ್ಯ. ಅವುಗಳ ಆದಾಯದ ಮೂಲ ಇದು. ವಾರ್ನರ್ ಚಿತ್ರಗಳು ಚಿತ್ರಮಂದಿಗಳ ಬೃಹದ್ ಪರದೆಯ ಮೇಲೆ ಬಿಡುಗಡೆಯಾದರೆ, ನಂತರ Streaming platforms ನಲ್ಲಿ ಈ ಚಿತ್ರವನ್ನು ನೋಡಲು ಯಾರು ಬಯಸುತ್ತಾರೆ. ಇದರಿಂದ NetFlix-Warner Brosನಂಥ ಬೃಹತ್ ಪರದೆಯ ಮೇಲೆ ಆನಂದಿಸಬೇಕಾದ ಚಿತ್ರಗಳ ತಮ್ಮ ಪ್ರಭಾವವನ್ನು ಉಳಿಸಿಕೊಳ್ಳುತ್ತದೆ. ಹಾಗಾಗಿ ಹೆಚ್ಚು ಕಾಲ ಚಿತ್ರಮಂದಿರಗಳಲ್ಲಿ ಈ ಚಿತ್ರಗಳ ಪ್ರದರ್ಶನಾವಧಿಯನ್ನು ಕಡಿತಗೊಳಿಸಬೇಕೆಂಬುದು ಇದರ ಮೂಲ ಉದ್ದೇಶ.
ಹಾಲಿವುಡ್ ಕಾರ್ಮಿಕರ ಮತ್ತು ಕಲಾವಿದರ ಚಳವಳಿ
2023ರಲ್ಲಿ ನಡೆದ ಹಾಲಿವುಡ್ ಕಾರ್ಮಿಕರ ಮಹಾನ್ ಚಳವಳಿ AI ಆಗಮನದಿಂದ ಅಗುವ ಪರಿಣಾಮಳ ಬಗ್ಗೆ ಸಾಕಷ್ಟು ಮನವರಿಕೆ ಮಾಡಿಕೊಟ್ಟಿತ್ತು. ಅದರಲ್ಲಿ AI ನ ಪರಿಣಾಮವಾಗಿ ಚಿತ್ರೋದ್ಯಮ ಮತ್ತು streaming platforms ಮೇಲೆ ಆಗಬಹುದಾದ ಪರಿಣಾಮ ಮತ್ತು ಕಾರ್ಮಿಕರ ವರ್ಗದ ಮೇಲಾಗುವ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳ ಬಗ್ಗೆ ಎಚ್ಚರಿಸಿತು. ಮೊದಲು ತಮ್ಮ ಭಯವನ್ನು ಬಿಚ್ಚಿಟ್ಟವರು ಚಿತ್ರಕತೆಗಳ ಬರಹಗಾರರು. AI ಸ್ವತಃ ಚಿತ್ರಕಥೆಗಳನ್ನು ರಚಿಸುವುದಾದರೆ, ಸೃಜನಶೀಲತೆಗೇನು ಬೆಲೆ? ಎಂಬ ಪ್ರಶ್ನೆಯನ್ನು ಎತ್ತಿದರು. Members of the Writers Guild of America (WGA) ಇನ್ನು ಮುಂದೆ ತಾವು ಸೃಷ್ಟಿಸುವ ಕಥೆಗಳ ಬಗ್ಗೆ ರಕ್ಷಣೆ ಕೇಳಿದ್ದರು. ಹಾಗಾಗಿ ಬರಹಗಾರರ ಮತ್ತು ಲೇಖಕರು ತಾವು ಸೃಜಿಸಿದ ಕಥೆ, ಚಿತ್ರಕಥೆಗಳಿಗೆ ರಕ್ಷಣೆ ಕೇಳಿದ್ದಲ್ಲದೆ. AI ಸೃಷ್ಟಿಸಿದ ಕಥೆ ಚಿತ್ರಕಥೆಗಳಿಗೆ ತಮ್ಮ ಹೆಸರು ಹಾಕಿಕೊಳ್ಳುವಂತಿಲ್ಲ. ಹಾಗೆಯೇ ಕಲಾವಿದರು ತಮ್ಮ ಹಕ್ಕುಗಳ ಬಗ್ಗೆ ವಾದ ಮಂಡಿಸಿದರು. ತಮ್ಮನ್ನು ಹೋಲುವ ಚಿತ್ರಗಳನ್ನು ದೃಶ್ಯಗಳನ್ನು ತಮ್ಮ ಅನುಮತಿ ಇಲ್ಲದೆ ಬಳಸಿಕೊಳ್ಳುವಂತಿಲ್ಲ ಎಂಬ ಷರತ್ತು ವಿಧಿಸಿದರು. SAG (Screen Actors Guild) ಮತ್ತು AFRA (American Federation of Radio and Television Artists ) ಎಂಬ ಕಾರ್ಮಿಕರ ಮತ್ತು ಕಲಾವಿದರ ಸಂಘಟನೆಗಳು ಈ ಪರವಾಗಿವಾದಿಸಿ ನ್ಯಾಯಕ್ಕಾಗಿ ಹೋರಾಟ ನಡೆಸಿದವು. ಈ ಹೋರಾಟದಲ್ಲಿ ಸುಮಾರು 1,70,000 ಕಲಾವಿದರು, ಕಾರ್ಮಿಕರು ಭಾಗವಹಿಸಿ, ಹಾಲಿವುಡ್ ನ ಚಿತ್ರ ನಿರ್ಮಾಣವನ್ನು ಕೆಲವು ತಿಂಗಳುಗಳ ಕಾಲ ತಡೆಹಿಡಿದರು. ಹಲವು ತಿಂಗಳ ಕಾಲದ ಮಾತುಕತೆಯ ನಂತರ ಹಾಲಿವುಡ್ ನ ನಿರ್ಮಾಪಕರು, ಈ ಒಪ್ಪಂದಕ್ಕೆ ಸಹಿ ಹಾಕಿದ ಮೇಲೆ ಅವರ ಚಳವಳಿ ನಿಂತಿತು. ಇದರಿಂದ ಯಾವ ಪರಿಣಾಮವಾಯಿತೋ ಇಲ್ಲವೋ ಗೊತ್ತಿಲ್ಲ. ಆದರೆ, ಇದರಿಂದ AI ನಿಂದ ಬರಹಗಾರರಿಗೆ ಮತ್ತು ಕಲಾವಿದರ ಮೇಲೆ ಪರಿಣಾಮದ ಮೇಲೆ ಸ್ವಲ್ಪ ಮಟ್ಟಿಗೆ ನಿಯಂತ್ರಣ ದೊರಕಿತು. ಆದರೆ, ಒಂದು ವರದಿಯ ಪ್ರಕಾರ ಅವರಿಗೆ ಇದುವರೆಗೆ ದಕ್ಕುತ್ತಿದ್ದ ಅವಕಾಶಗಳು ಕಡಿಮೆಯಾಗಿರುವುದಂತೂ ಸತ್ಯ. ಮುಂದೆ ಇದರ ಪರಿಣಾಮ ನಿಧಾನವಾಗಿ ಮನೋರಂಜನಾ ಜಗತ್ತನ್ನು ನಿಧಾನವಾಗಿ ಆಪೋಷನ ತೆಗೆದುಕೊಳ್ಳುವುದನ್ನು ತಡೆಯುವುದು ಕಷ್ಟ ಎಂದು ಕೆಲವು ಸ್ವಯಂ ಸೇವಾ ಸಂಸ್ಥೆಗಳು ಮಾಡಿರುವ ಅಧ್ಯಯನದಿಂದ ತಿಳಿದುಬರುತ್ತದೆ. ಆದರೆ ಈ ಬಗ್ಗೆ ಯಾರೂ ಇದರ ಬಗ್ಗೆ ತಲೆಕೆಡೆಸಿಕೊಂಡಿರುವಂತೆ ಕಾಣಿಸುವುದಿಲ್ಲ.
ʼದೇವರುʼ ಕೊಟ್ಟ ವರ
ಭಾರತದಲ್ಲಂತೂ, AI ತಮಗೆ ದೇವರು ಕೊಟ್ಟ ವರ ಎಂದೇ ಇಡೀ ಚಿತ್ರರಂಗ ಭಾವಿಸಿದಂತಿದೆ. ಆರು ವರ್ಷಗಳಲ್ಲಿ ಮಾಡಬೇಕಾದ ಬ್ಲಾಕ್ ಬಸ್ಟರ್ ಚಿತ್ರವನ್ನು ಒಂದು ತಿಂಗಳಲ್ಲಿ ಮಾಡಬಹುದು, ಇದರಿಂದ ಖರ್ಚು ಉಳಿಯುತ್ತೆ ಮುಂತಾದ ಭ್ರಮೆಗಳಲ್ಲಿ ಭಾರತೀಯ ಚಿತ್ರರಂಗವಿದೆ. ಇದಕ್ಕೆ ಇತ್ತೀಚೆಗೆ ಭಾರತದಲ್ಲಿ ನಡೆಯುತ್ತಿರುವ International Film Festival ಗಳಲ್ಲಿ AI ನ ಅಗತ್ಯದ ಬಗ್ಗೆ ಕಾರ್ಪೋರೇಟ್ ಸಂಸ್ಥೆಗಳು ಹರಡುತ್ತಿರುವ ಪೂರಕ ಮಾಹಿತಿಗಳೇ ಕಾರಣ. ಇಲ್ಲಿನ Master Class ಗಳಲ್ಲಿ ಚರ್ಚೆಯಾಗುತ್ತಿರುವುದು ಮುಖ್ಯವಾದಿ ಇದೇ ವಿಷಯ ಎಂದು ವಿಶೇಷವಾಗಿ ಏನೂ ಹೇಳಬೇಕಿಲ್ಲ. ಅವು AI ನೀಡುತ್ತಿರುವ ಪ್ರಾಧಾನ್ಯವೇ ಕಾರಣ. ಇದಕ್ಕೆ ನಿದರ್ಶನ ಬೇಕಿದ್ದರೆ, ಇತ್ತೀಚೆಗೆ ಗೋವಾದಲ್ಲಿ ನಡೆದ International Film Festival of India ದಲ್ಲಿ ಭಾರತ ಚಿತ್ರರಂಗದ ಛತ್ರಛಾಯಾ ಸಂಸ್ಥೆಯಾದ National Film Development Corporation of India (NFDC) ಹಾಗೂ LTIMindtree ಜಂಟಿಯಾಗಿ AI Film Festival ನಡೆಸಿತು. ಈ ಚಿತ್ರೋತ್ಸವದಲ್ಲಿ AI ಸೃಷ್ಟಿಸಿದ ಚಿತ್ರಗಳು, ಅಂದರೆ Cinema AI Hackthon ನಡೆಸಿದ್ದಲ್ಲದೆ, ಅವುಗಳಿಗೆ ಪ್ರಶಸ್ತಿಯನ್ನು ಘೋಷಿಸಿತು. ಈ ಚಿತ್ರೋತ್ಸವದಲ್ಲಿ ಮಾನವನ ಬುದ್ದಿಮತ್ತೆಯ ಸೃಜನಶೀಲ ಸಿನಿಮಾಗಳೊಂದಿಗೆ AI generated ಚಿತ್ರಗಳನ್ನು ಸ್ಪರ್ಧೆಗೆ ಇಳಿಸಿತು. ಚಿತ್ರಕಥೆ ರಚನೆ, Editing, ವಿಷ್ಯುಯಲ್ ಎಫೆಕ್ಟ್, ಅನಿಮೇಷನ್ ಹಾಗು ನಿರ್ಮಾಣ ಯೋಜನೆಗಳ ಬಗ್ಗೆ ದೊಡ್ಡದೊಂದು ಕಾರ್ಯಾಗಾರ ಕೂಡ ನಡೆಸಿತು. ಈ Hackathons ಚಿತ್ರದ ನಿರ್ಮಾಣ, ನಿರ್ದೇಶಕರ, ಕಲಾವಿದರು ಹಾಗೂ ತಂತ್ರಜ್ಞರನ್ನು ಒಟ್ಟುಗೂಡಿಸಿತು. ಜೊತೆಯಲ್ಲಿ AI ಸೃಷ್ಟಿ ಮಾಡುವ ಅವಕಾಶಗಳು ಹಾಗೂ ನೈತಿಕ ಸವಾಲುಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿತು. ಮುಂಬೈ ನಲ್ಲಿ ನಡೆಸಿರುವ ಚಿತ್ರೋತ್ಸವಗಳಲ್ಲಿ AI ಸೃಷ್ಟಿಸಿದ ಚಿತ್ರಗಳ ಮೇಲೆಯೇ ಒತ್ತು ನೀಡಿತು. ಇದೆಲ್ಲ ಏನನ್ನು ಸೂಚಿಸುತ್ತದೆ.
BIFFES ನ ಮರೆಯಲಾರದ ಅನುಭವ
ಬೆಂಗಳೂರಿನಲ್ಲಿ ನಡೆದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (BIFFES) ನಲ್ಲಿ ಇದೇ ರೀತಿಯ ಕಾರ್ಯಾಗಾರವೊಂದು ನಡೆಯಿತು. ಆ ಕಾರ್ಯಾಗಾರದಲ್ಲಿ ಈ ಲೇಖಕ ಹಾಲಿವುಡ್ ನಲ್ಲಿ ನಡೆದ ಚಳವಳಿ, ಈ ರೀತಿ streamline platforms ಗಳ ಒಕ್ಕೂಟ ಮಾಡಬಹುದಾದ ಪರಿಣಾಮ ಹಾಗೂ ನೆಟ್ ಫ್ಲಿಕ್ಸ್ ಮತ್ತು ವಾರ್ನರ್ ಬ್ರದರ್ಸ್ ಹಾಗು, ಪ್ಯಾರಾಮೌಂಟ್ ನಂತ ಕಾರ್ಪೋರೇಟ್ ಸಂಸ್ಥೆಗಳು ತಮ್ಮದೆ ಒಕ್ಕೂಟ ಮಾಡಿಕೊಂಡು, ಮನರಂಜನಾ ಮಾಧ್ಯಮ, ವಿಶೇಷವಾಗಿ ಸಿನಿಮಾ ಕ್ಷೇತ್ರದ ಮೇಲೆ ಪ್ರಭುತ್ವ ಸ್ಥಾಪನೆ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ಪ್ರಶ್ನಿಸಿದಾಗ. ಅಲ್ಲಿನ ಸಂಯೋಜಕರು, “ಅವೆಲ್ಲ ನೈತಿಕತೆಯ ಪ್ರಶ್ನೆಗಳು. ವಾಣಿಜ್ಯೋದ್ದೇಶಗಳಿಗೆ ಅನ್ವಯವಾಗುವುದಿಲ್ಲ. ನೀವು ಕಾರ್ಮಿಕ ನಾಯಕರಂತೆ ಮಾತನಾಡುತ್ತಿದ್ದೀರಿ. ಅವರ ಪರವಾದ ಪ್ರಶ್ನೆಗಳನ್ನು ಎತ್ತುತ್ತಿದ್ದೀರಿ. ನೀವು ವಾಣಿಜ್ಯದ ದೃಷ್ಟಿಯಿಂದ ಈ ಬೆಳವಣಿಗೆಯನ್ನು ಗಮನಿಸಬೇಕು. ಇದರಿಂದಾಗುವ ಲಾಭಗಳತ್ತ ಗಮನ ಹರಿಸಬೇಕು. ನಿಮಗೆ ಸಮಗ್ರ ನೋಟ ದಕ್ಕಿದಂತೆ ಕಾಣಿಸುತ್ತಿಲ್ಲ. ನಿಮಗೆ ನಮ್ಮ ಸಂಯೋಜಕ ಮುಖ್ಯಸ್ಥರು ಬೇರೆ ಸಮಯ ನೀಡಿ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ” ಎಂದು ತಿಪ್ಪೇ ಸಾರಿಸಿಬಿಟ್ಟರು. ನಂತರ ಸಂಯೋಜಕ ಹಿರಿಯರನ್ನು ಭೇಟಿ ಮಾಡಿದಾಗಲೂ ಅವರು, ನನ್ನ ಆಸಕ್ತಿಗಳನ್ನು ತಿಳಿದುಕೊಂಡು, ಅಮಿಷ ತೋರಿಸಲೂ ಪ್ರಯತ್ನಿಸಿದರು. ಉತ್ತರ ಮಾತ್ರ ಕೊಡಲಿಲ್ಲ. ಅದರೆ, ಈ ರೀತಿ ಪ್ರಶ್ನೆಗಳನ್ನು ಎತ್ತಿದ್ದಕ್ಕೆ ಕನ್ನಡ ಚಿತ್ರರಂಗದವರೇ ಅನೇಕರು, ನನ್ನ ವಿರುದ್ಧ ಅಪಸ್ವರ ಎತ್ತಿದ್ದನ್ನು, ಇನ್ನೂ ನಾನು ಮರೆತಿಲ್ಲ.
ತಿರಸ್ಕರಿಸುವ ಆಶಯವಲ್ಲ
ಹಾಗೆಂದು AI ಅನ್ನು ಸಾರಾಸಗಟಾಗಿ ತಿರಸ್ಕರಿಸಬೇಕೆಂಬುದು ಇಲ್ಲಿನ ಆಶಯವಲ್ಲ. ಆದರೆ AI ಒಂದರ್ಥದಲ್ಲಿ ಎರಡೂ ಪಕ್ಕಗಳಲ್ಲಿಯೂ ಹರಿತವಾಗಿರುವ ಕತ್ತಿಯಂತೆ. ಅದನ್ನು ಬಳಸುವಾಗ ವಿವೇಕ ವಿವೇಚನೆ ತೀರಾ ಅಗತ್ಯ. ಈಗ ಸುದ್ದಿ ಪತ್ರಿಕೆಗಳಲ್ಲಿ ಯಾವ ಬರಹಗಾರ AI ಬಳಸಿ ಬರೆದಿದ್ದಾನೆ. ಆ ಬರಹಗಾರನ ಸ್ವಂತಿಕೆ ಎಷ್ಟು. ಅದನ್ನು ಓದುಗರಿಗೆ ತಲುಪಿಸಬಹುದೇ? ಬಿಡಬಹುದೇ? ಎಂಬುದನ್ನು ಹುಡುಕಿ ತೆಗೆಯುವುದೇ ಉಪಸಂಪಾದಕರಿಗೆ ಸವಾಲಾಗಿ ಕೂತಿದೆ. ಈಗಿರುವ ಪ್ರಶ್ನೆ Should we leave writing to AI? As even literary prize juries cańt identify good writing ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಸಿನಿಮಾದ ವಿಷಯದಲ್ಲೂ ಹೀಗೆ. ನನ್ನ ಮಟ್ಟಿಗೆ Cinema is my home ̧ I think I have always lived in it ನನ್ನಂಥವರಿಗೆ AI ಮಾಡುತ್ತಿರುವ ಪರಿಣಾಮವನ್ನು ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಇದನ್ನು ಪ್ರಗತಿ ತಂತ್ರಜ್ಞಾನದ ವಿರೋಧವೆಂದು ಭಾವಿಸಿದರೂ ನನ್ನ ಅಭ್ಯಂತರವಿಲ್ಲ. ಈ ಸಂದರ್ಭದಲ್ಲಿ ನನಗೆ J Robert Oppenheimer ನೆನಪಾಗುತ್ತಾನೆ. ಹಿರೋಷಿಮಾದ ಮೇಲೆ ಅಣುಬಾಂಬ್ ಬಿದ್ದಾಗ ಆತನ ಮನಸ್ಸು ಸಂಕೀರ್ಣವಾಗಿ ಕೂತಿತ್ತು. ಆರಂಭದಲ್ಲಿ ಎರಡನೇ ವಿಶ್ವ ಮಹಾಯುದ್ಧವನ್ನು ನಿಲ್ಲಿಸಲು ತನ್ನಿಂದ ಸಾಧ್ಯವಾಯಿತು ಎಂದು ಅವನು ಸಂತುಷ್ಟನಾಗಿದ್ದ. ಆದರೆ ನಂತರ ನಾಗಸಾಕಿ ಮೇಲೆ ಅಣುಬಾಂಬ್ ಪ್ರಯೋಗಿಸಿದಾಗ ಅವನಿಗೆ ಪಾಪಪ್ರಜ್ಞೆ ಕಾಡತೊಡಗಿತು. ಇದು ಅನಗತ್ಯವಾಗಿತ್ತು ಎಂಬ ಭಾವನೆ ಅವನನ್ನು ಕಾಡ ತೊಡಗಿತು. ಅವನು ಅಕ್ಷರಶಃ ಕಣ್ಣೀರು ಹಾಕಿದ ಎನ್ನುವವರೂ ಇದ್ದಾರೆ. ಅವನು ಅಧ್ಯಕ್ಷ ಹ್ಯಾರಿ ಎಸ್. ಟ್ರೂಮನ್ಗೆ ಬರೆದ ಪತ್ರದ ಸಾರಾಂಶ ಹೀಗಿದೆ. ́Mr President I feel I have blood on my hands”̤ ಕೊನೆಗೆ Hydrogen Bomb ತಯಾರಿಕೆಯನ್ನು ತೀವ್ರವಾಗಿ ವಿರೋಧಿಸಿದ್ದು ಇತಿಹಾಸ.

ಓಪನ್ಹೈಮರ್ ನ ನಿದರ್ಶನ
ಆಧುನಿಕ ತಂತ್ರಜ್ಞಾನದಿಂದಾಗುವ ಲಾಭ, ನಷ್ಟ ಅನಾಹುತಗಳನ್ನು ಅರ್ಥ ಮಾಡಿಕೊಳ್ಳಬೇಕೆಂದರೆ, ಕ್ರಿಸ್ವೋಫರ್ ನೋಲಾನ್ ನಿರ್ದೇಶಿಸಿದ ಭೌತ ಶಾಸ್ತ್ರಜ್ಞ ಜೆ. ರಾಬರ್ಟ್ ಓಪನ್ ಹೈಮರ್ ಕುರಿತ ಸಾಕ್ಷ್ಯಾ ಚಿತ್ರದಂಥ ಕಥಾ ಚಿತ್ರವನ್ನು ಎಲ್ಲರೂ ನೋಡಲೇಬೇಕು. ಈ ಚಿತ್ರ ತಾಂತ್ರಿಕ ತಿಳಿವಳಿಕೆ ಮತ್ತು ನೈತಿಕ ಪ್ರಶ್ನೆಗಳನ್ನು ಕಥಾನಕದ ಕೇಂದ್ರ ವಸ್ತುವನ್ನಾಗಿಸಿ ನೋಡುವುದರಲ್ಲಿ ಇರುವ ಪ್ರಜ್ಞೆಯ ಮಟ್ಟದ ತಿಳುವಳಿಕೆಗೆ ಹಿಡಿದ ಸಾಕ್ಷಿ ಪ್ರಜ್ಞೆಯಂತಿದೆ ಎಂದರೆ ತಪ್ಪಾಗಲಾರದು. ಕೊನೆಯಲ್ಲಿ ಓಪನ್ ಹೈಮರ್ ನ ಖಾಸಗಿಯಾಗಿ ದುಃಖಿಸುವ ಪರಿಯನ್ನು ಅನುಭವಿಸಿಯೇ ತಿಳಿಯಬೇಕು. ಆದರೂ, ಈ ಚಿತ್ರವನ್ನು ನೋಡಿದಾಗ ಹಿರೋಶಿಮಾ ಮತ್ತು ನಾಗಸಾಕಿಯನ್ನು ಒಂದು ಗ್ರಾಹಕ ವಸ್ತುವಾಗಿ ನೋಲಾನ್ ಬಳಸಿಕೊಂಡಿದ್ದಾನೆಯೇ ಎನ್ನಿಸದೇ ಇರುವುದಿಲ್ಲ. ಏಕೆಂದರೆ ನೋಲಾನ್ ಕಥೆ ಹೇಳುವ ಕ್ರಮದಲ್ಲೇ ದೋಷವಿದೆ ಎನ್ನಿಸುತ್ತದೆ. ನೋಲನ್ ಒಂದರ್ಥದಲ್ಲಿ ಅಣು ಬಾಂಬ್ ಆ ಎರಡು ಪ್ರಾಂತಗಳ ಮೇಲೆ ಮಾಡಿದ ಪರಿಣಾಮವನ್ನು ತನ್ನ ಅನುಕೂಲಕ್ಕಾಗಿ ಸರಳೀಕರಿಸಿದ್ದಾನೆ ಎನ್ನಿಸುತ್ತದೆ.
ಮತ್ತೆ ನೆಟ್ಫ್ಲಿಕ್ಸ್ ಮತ್ತು ವಾರ್ನರ್ ಬ್ರದರ್ಸ್ ನಡುವಿನ ವ್ಯಾವಹಾರಿಕ ಒಪ್ಪಂದದ ವಿಷಯಕ್ಕೆ ಬರುವುದಾದರೆ, ಕೆನಡಾದ ಮಾಧ್ಯಮ ಸಿದ್ಧಾಂತವಾದಿ ಮಾರ್ಷಲ್ ಮೆಕ್ಲಹಾನ್ ಮಾತುಗಳು ನೆನಪಾಗುತ್ತವೆ. ಅವನು ಹೇಳುವುದು “ಮಾಧ್ಯಮವೇ ಒಂದು ಸಂದೇಶ” ಎಂದು. ಈ ನವಮಾಧ್ಯಮಗಳು ನಾವು ನೊಡುವ ಕ್ರಮವನ್ನು ನಿರ್ಧರಿಸುತ್ತದಲ್ಲದೆ ಬದಲಿಸುತ್ತದೆ ಕೂಡ. ತಾನು ತಲುಪಿಸಲಿರುವ ಸಂದೇಶದ ಲಯ ಮತ್ತು ತಾಳವನ್ನು ತನ್ನ ಅನುಕೂಲಕ್ಕೆ ಪರಿವರ್ತಿಸಿಕೊಳ್ಳುತ್ತದೆ. ಹಾಗಾಗಿ ಅದರ ಸಂವಹನದ ಮೂಲ ಆಶಯವನ್ನು ನಿಧಾನವಾಗಿ ಅಳಿಸಿಹಾಕುತ್ತದೆ. ಹಾಗಾಗಿ streaming ಮಾಧ್ಯಮಗಳು ನಮ್ಮ ಮನಸ್ಸಿನ ರಚನೆಗಳನ್ನು ತನ್ನಿಷ್ಟದಂತೆ ತಿದ್ದಿ-ತೀಡಿ, ತಮ್ಮದಾಗಿಸಿಕೊಳ್ಳುವ ಅಪಾಯವಿರುತ್ತದೆ. ನಮ್ಮ ಇಚ್ಛೆಗಳನ್ನು ಗ್ರಾಹಕ ಉಪಯೋಗದ ವಸ್ತುವಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಅರ್ಥದಲ್ಲಿ ಆಗಲಿರುವ ಅಥವಾ ಆಗುವ ಒಪ್ಪಂದ ತಮ್ಮ ದೃಷ್ಟಿಯನ್ನುಕೇವಲ ದೃಶ್ಯ ಭಂಡಾರದ ಮೇಲೆ ಮಾತ್ರ ಕೇಂದ್ರೀಕರಿಸುತ್ತಿಲ್ಲ. ಬದಲಿಗೆ ಸೃಜನಶೀಲ ಮನಸ್ಸುಗಳನ್ನು ಹಂಚಿಕೆಯ ಶಕ್ತಿಕೇಂದ್ರವಾಗಿ ಮಾರ್ಪಡಿಸುತ್ತದೆ ಎಂಬುದನ್ನು ಮರೆಯಬಾರದು ಎಂದು ಮೆಕ್ಲಹಾನ್ ಹೇಳುತ್ತಾನೆ. ಅವನ ಮಾತು ನೂರಕ್ಕೆ ನೂರರಷ್ಟು ಸತ್ಯ ಎಂದು ಒಪ್ಪಿಕೊಳ್ಳದೆ ಬೇರೆ ದಾರಿ ಇಲ್ಲ. ಹೀಗಾದಾಗ, streaming platform ನೀಡುತ್ತಿರುವ ಗ್ರಾಹಕ products ಮೊಬೈಲ್ ಫೋನ್ ಮತ್ತು ಲ್ಯಾಪ್ ಟಾಪ್ಗಳ ಮೂಲಕ ಹರಿದು ಕತ್ತಲಕೋಣೆಯಲ್ಲಿ ಒಂಟಿಯಾಗಿ ಚಿತ್ರವನ್ನು ಅನುಭವಿಸುವ ಸೃಜನಶೀಲ ಮನಸ್ಸುಗಳ ಪ್ರಕ್ರಿಯೆಯನ್ನು ಬದಲಾಯಿಸುವುದರ ಜೊತೆಗೆ ಚಿತ್ರ ನೋಡುವ, ಅರ್ಥೈಸಿಕೊಳ್ಳುವ, ಅಂತರ್ಗತಗೊಳಿಸಿಕೊಳ್ಳುವ ಎಲ್ಲ ಸಾಧ್ಯತೆಗಳನ್ನು ಸುಲಭವಾಗಿ ಕಿತ್ತುಕೊಳ್ಳುತ್ತದೆ. ಸಿನಿಮಾ ಒಂದು ಸಮುದಾಯದ ಕಲೆ ಮಾಧ್ಯಮವಾಗಿ ಉಳಿಯುವುದಿಲ್ಲ. ಕೇವಲ ನೋಡಿ ಮರೆತು, ಮುಂದಿನ ಚಿತ್ರವನ್ನು ನೋಡುವಂತೆ ಮಾಡುತ್ತದೆ. ಹಾಗಾಗಿ ಅಲ್ಲಲ್ಲಿ. Since You watched this movie ̧ you can also watch this̤ You may like it ಎಂಬ ಸೂಚನೆಗಳು ಕಾಣಿಸುತ್ತವೆ. ಇದನ್ನು ಏನೆಂದು ಕರೆಯಬೇಕು ಹೇಳಿ? ದೊಡ್ಡ ದೊಡ್ಡ ದೈತ್ಯ Streamline Platform ಕಥೆಯೇ ಹೀಗಿರುವಾಗ, ಭಾರತದ ಛೋಟಾ ಮೋಟಾ streaing platfoŗms ಕಥೆ ಏನಾಗಬಹುದು ಎಂಬುದು ನಮ್ಮ ಊಹೆಗೆ ಸಿಲುಕದಂಥದ್ದು ಎನ್ನಬಹುದು.
ಟ್ರಂಪ್ ಹೇಳುವುದೇನು? ಎಂಬುದು ಮುಖ್ಯ
ಮತ್ತು ವಾರ್ನರ್ ಬ್ರದರ್ಸ್ ನಡುವಿನ ವ್ಯಾವಹಾರಿಕ ಒಪ್ಪಂದದ ಬಗ್ಗೆ ಅಮೆರಿಕಾದ ಪ್ರಸಕ್ತ ಅಧ್ಯಕ್ಷ ಡೋನಾಲ್ಟ್ ಟ್ರಂಪ್ ಆಶ್ಚರ್ಯಕರ ರೀತಿಯಲ್ಲಿ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. “ಈ ಒಪ್ಪಂದದಿಂದ ತೊಂದರೆಯಾಗುವುದು ಖಂಡಿತ” ಎಂದಿದ್ದಾರೆ. ಡೆಮೊಕ್ರೆಟಿಕ್ ಸೆನೆಟರ್, ಎಲಿಜಬೆತ್ ವಾರೆನ್ ಈ ಒಪ್ಪಂದ “anti monopoly nightmare ́ ಎಂದಿದ್ದಾರೆ. ಅಷ್ಟೆ ಅಲ್ಲದೆ, ಈ ರೀತಿ ಏಕಸಾಮ್ಯ ವ್ಯವಸ್ಥೆ ಜಾರಿಗೆ ಬಂದರೆ, ಗ್ರಾಹಕ ಹೆಚ್ಚಿನ ಹಣವನ್ನು ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಆದರೆ ಇವೆಲ್ಲಕ್ಕೂ, ಅಮೆರಿಕೆಯ Justice Department ಏನು ತೀರ್ಪು ಕೊಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಮುರಳೀಧರ ಖಜಾನೆ
ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.




