ಭಾರತೀಯ ಚಿತ್ರರಂಗದ ಮೊಟ್ಟಮೊದಲ ನಿರ್ದೇಶಕಿ ಫಾತಿಮಾ ಬೇಗಂ; ಶತಮಾನದ ನೆನಪು

Date:

ನೂರು ವರ್ಷಗಳ ಹಿಂದೆಯೇ, ಮಹಿಳೆಯೊಬ್ಬಳು, ಕ್ಯಾಮರಾದ ಹಿಂದೆ ನಿಂತು, “ಕ್ಯಾಮರಾ, ಆಕ್ಷನ್‌, ಕಟ್” ಎಂದು ಹೇಳಿದ್ದು ಪ್ರೇಕ್ಷಕರು ಈಗ ಮರೆತಿದ್ದಾರೆ. ಈಕೆ ಫಾತಿಮಾ ಬೇಗಂ.  ಈಕೆ ಮಾತು ದೃಶ್ಯದೊಂದಿಗೆ ಬೆರೆಯುವ ಮುನ್ನವೇ ನಿರ್ದೇಶಕಿಯಾದವರು. ನೂರು ವರ್ಷಗಳ ಹಿಂದೆ ಈಕೆ ನಿರ್ದೇಶಿಸಿದ ಚಿತ್ರ ಬುಲ್‌ ಬುಲ್‌-ಯೇ-ಪರಿಸ್ತಾನ್‌. ದುರಾದೃಷ್ಟಕರ ಸಂಗತಿಯೆಂದರೆ ಇಂದಿಗೂ ಭಾರತೀಯ ಚಿತ್ರರಂಗದ ಬಗ್ಗೆ ಚಿಂತನೆ ನಡೆದಾಗ, ಅಕಾಡೆಮಿಕ್‌ ಚರ್ಚೆ ನಡೆದಾಗಲೆಲ್ಲ ಆಕೆಯ ಹೆಸರು ಹಿನ್ನೆಲೆಗೆ ಸರಿಯುತ್ತದೆ.

- Advertisement -

ವಿಶ್ವ ಸಿನಿಮಾಕ್ಕೆ ಇದು 138ನೇ ವರ್ಷ. ಹಾಗೆಯೇ ಭಾರತೀಯ ಚಿತ್ರರಂಗಕ್ಕೀಗ 113 ವರ್ಷ. ಈ ವರ್ಷ ಅಂದರೆ 2026 ಭಾರತೀಯ ಚಿತ್ರರಂಗಕ್ಕೆ ಒಂದು ವಿಶೇಷ ಕಾಲಾವಧಿ. ಏಕೆಂದರೆ,  ಮಹಿಳೆಯೊಬ್ಬರು ಚಿತ್ರ ನಿರ್ದೇಶಿಸಿ ಈ ವರ್ಷಕ್ಕೆ ಒಂದು ಶತಮಾನವಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೋಟ್ ಕ್ಲಬ್‌ನಿಂದ ಜಂತರ್ ಮಂತರ್‌ವರೆಗೆ; ದೆಹಲಿಯ ಪ್ರತಿಭಟನಾ ತಾಣ...

ಸ್ವಾತಂತ್ರ್ಯಾನಂತರ ಹಲವು ದಶಕಗಳವರೆಗೆ ದೆಹಲಿಯ ಇಂಡಿಯಾ ಗೇಟ್ ಸಮೀಪದ ರಾಜಪಥದಲ್ಲಿರುವ ಬೋಟ್ ಕ್ಲಬ್ ಮೈದಾನವು ದೇಶದ ಪ್ರಮುಖ ರಾಜಕೀಯ ಪ್ರತಿಭಟನೆಗಳು, ರೈತ ಸಮಾವೇಶಗಳು ಮತ್ತು ಸಾರ್ವಜನಿಕ ಚಳವಳಿಗಳಿಗೆ ವೇದಿಕೆಯಾಗಿತ್ತು. ದೆಹಲಿಯ ಜಂತರ್ ಮಂತರ್ ಪ್ರತಿಭಟನಾ...

2026ರ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಯ ಹಿಂದಿನ ತಿರುಳು

ಅಮೆರಿಕದ ಇಬ್ಬರು ವಿದ್ವಾಂಸರಾದ ರಾಬರ್ಟ್ ಇ. ಹಾಲ್ ಮತ್ತು ಮೈಕಲ್ ವುಡ್‌ಫೋರ್ಡ್ ರೂಪಿಸಿದ 'ನವ-ಕೇನ್ಸಿಯನ್ ಮಾದರಿ'ಗಳು ಇಂದು ಜಗತ್ತಿನ ಬಹುತೇಕ ಕೇಂದ್ರ ಬ್ಯಾಂಕುಗಳ ಮತ್ತು ಹಣಕಾಸು ಇಲಾಖೆಗಳ ದೈನಂದಿನ ದಿಕ್ಸೂಚಿಯಾಗಿವೆ. ಆ ಕಾರಣಕ್ಕೆ...

ಮಣಿಪುರ | ಜನಾಂಗೀಯ ಕಿಚ್ಚಿಗೆ ದ್ವೇಷ ರಾಜಕಾರಣದ ತುಪ್ಪ;...

ಮಣಿಪುರದಲ್ಲಿ ಕಳೆದ ಮೂರು ವರ್ಷಗಳಿಂದ ಮುಗಿಯದ ಜನಾಂಗೀಯ ರಕ್ತಪಾತಕ್ಕೆ, ಸಮುದಾಯಗಳ ನಡುವಿನ ಹಳೆಯ ವೈರತ್ವವನ್ನು ಮೀರಿ, ಸರ್ಕಾರದ ಪಕ್ಷಪಾತದ ರಾಜಕಾರಣ, ಆಡಳಿತಾತ್ಮಕ ವೈಫಲ್ಯ ಮತ್ತು ವಿಭಜನಾತ್ಮಕ ನೀತಿಗಳೂ ಕಾರಣವಾಗಿವೆ. ಉರಿಯುವ ಬೆಂಕಿಗೆ ತುಪ್ಪ...

ಅವಿಭಜಿತ ಅಖಂಡ ಭಾರತದ ಪರ್ಶಿಯನ್‌ ಮಹಿಳೆ ಫಾತಿಮಾ ಬೇಗಂ (ಈಕೆಯ ಹೆಸರನ್ನು ಫತ್ಮಾ ಬೇಗಂ ಎಂದು ಕೂಡ ಉಚ್ಛರಿಸುತ್ತಾರೆ) 1926ರಲ್ಲಿ ಬುಲ್ ಬುಲ್‌ ಎಂಬ ಚಿತ್ರವನ್ನು ನಿರ್ದೇಶಿಸಿ, ಭಾರತದ ಮೊತ್ತ ಮೊದಲ ಮಹಿಳಾ ನಿರ್ದೇಶಕಿ ಎಂಬ ಕೀರ್ತಿಗೆ ಪಾತ್ರರಾದದ್ದು ಇಂದು ಇತಿಹಾಸ. 113 ವರ್ಷಗಳ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ತೆರೆದರು ಎಂದೇ ಹೇಳಬೇಕು. ನಮ್ಮಲ್ಲಿ ಒಂದು ನಂಬಿಕೆ ಇದೆ. ತೀರಾ ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ನಿರ್ದೇಶನಕ್ಕೆ ಬಂದರು ಎಂದು ಎಲ್ಲರೂ ನಂಬಿಕೊಂಡಿದ್ದಾರೆ. ಆದರೆ ಸುಮಾರು ನೂರು ವರ್ಷಗಳ ಹಿಂದೆಯೇ, ಮಹಿಳೆಯೊಬ್ಬಳು, ಕ್ಯಾಮರಾದ ಹಿಂದೆ ನಿಂತು, “ಕ್ಯಾಮರಾ, ಆಕ್ಷನ್‌, ಕಟ್” ಎಂದು ಹೇಳಿದ್ದು ಜನರು ಮರೆತಿದ್ದಾರೆ. ಸಾರ್ವಜನಿಕರ ನೆನಪು ತಾತ್ಕಾಲಿಕ ಅದಕ್ಕೆ ಮದ್ದಿಲ್ಲ ಬಿಡಿ.  ಈಕೆ ಮಾತು ದೃಶ್ಯದೊಂದಿಗೆ ಬೆರೆಯುವ ಮುನ್ನವೇ ನಿರ್ದೇಶಕಿಯಾದವರು. ನಮ್ಮ ದುರಾದೃಷ್ಟಕರ ಸಂಗತಿಯೆಂದರೆ ಇಂದಿಗೂ ಭಾರತೀಯ ಚಿತ್ರರಂಗದ ಬಗ್ಗೆ ಚಿಂತನೆ ನಡೆದಾಗ, ಅಕಾಡೆಮಿಕ್‌ ಚರ್ಚೆ ನಡೆದಾಗಲೆಲ್ಲ. ಆಕೆಯ ಹೆಸರು ಹಿನ್ನೆಲೆಗೆ ಸರಿಯುತ್ತದೆ. ಈಗಲೂ ಆಕೆಯ ಛಾಯಾಚಿತ್ರ ದಕ್ಕುವುದು ಕೂಡ ದುರ್ಲಭ ಎಂದರೆ, ಫಾತ್ಮ ಅವರ ಆತ್ಮಕ್ಕಿರಲಿ, ನಮ್ಮ ಆತ್ಮಸಾಕ್ಷಿಯೇ ಒಪ್ಪುವುದಿಲ್ಲ.

Fathima begam

ಮೇ 3, 1913ರಲ್ಲಿ ದಾದಾ ಸಾಹೇಬ್‌ ಫಾಲ್ಕೆ ನಿರ್ಮಿಸಿದ ರಾಜಾ ಹರಿಶ್ಚಂದ್ರ ಎಂಬ ಪೂರ್ಣಪ್ರಮಾಣದ ಮೂಕಿ ಕಥಾಚಿತ್ರದೊಂದಿಗೆ ಭಾರತದ ಚಿತ್ರಲೋಕದ ಇತಿಹಾಸಕ್ಕೆ ಮುನ್ನುಡಿ ಬರೆದರೆ, ಅದಾದ 13 ವರ್ಷಕ್ಕೆ ಮಹಿಳೆಯೊಬ್ಬರು ಚಿತ್ರವೊಂದನ್ನು ನಿರ್ದೇಶಿಸಿದರು ಎನ್ನುವುದು ಇಲ್ಲಿ ಬಹು ಮುಖ್ಯವಾದ ಸಂಗತಿ. ಕಳೆದ ಹಲವು ದಶಕಗಳಲ್ಲಿ ದಕ್ಷಿಣ ಏಷಿಯಾದ ಸಿನಿಮಾಗಳು technicolour ಮೂಲಕ ಪ್ರೀತಿ, ಪ್ರೇಮ, ಪ್ರಣಯ, ಸಾಹಸ, ಚರಿತ್ರೆ, ಸಂಸ್ಕೃತಿ ಇತ್ಯಾದಿ ಸಂಗತಿಗಳನ್ನು ರೋಮಾಂಚಕವಾಗಿ, ಕೆಲವೊಮ್ಮೆ ಸೂಕ್ಷ್ಮವಾಗಿ, ಮತ್ತೆ ಕೆಲವೊಮ್ಮೆ ಹೃದಯದಲ್ಲಿ ನೆನಪು ಉಳಿಸುವಂತೆ ದೃಶ್ಯ ಮಾಧ್ಯಮಕ್ಕೆ ಅಳವಡಿಸಿಕೊಂಡೇ ಬಂದಿವೆ. ವಿಶ್ವದ ಸಿನಿಮಾ ಉದ್ಯಮದಲ್ಲಿ ದಕ್ಷಿಣ ಏಷಿಯಾ ಸಿನಿಮಾ ನಿರ್ಮಾಣ ಮಾಡುವ ಅತಿ ದೊಡ್ಡ ಉದ್ಯಮ. ಆದರೆ ದಕ್ಷಿಣ ಏಷಿಯಾ ಸಿನಿಮಾಗಳ ಒಂದು ದೌರ್ಬಲ್ಯವೆಂದರೆ, ಅದು ಹೆಣ್ಣನ್ನು ಮಾರಾಟ ವಸ್ತುವಾಗಿ ಪ್ರದರ್ಶನಕ್ಕಿಡುವುದು. ಪ್ರೇಕ್ಷಕರು ಬಯಸುತ್ತಾರೆ ಎಂಬ ನೆಪವೊಡ್ಡಿ ತಮಗೆ ಇಷ್ಟವಾಗುವಂತೆ, ಮನರಂಜನೆಯ ಪ್ರಮುಖ ಸರಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇಂದಿಗೂ ಪರಿಸ್ಥಿತಿ ಏನೂ ಬದಲಾಗಿಲ್ಲ. ಪ್ರಾಂತೀಯ ಸಿನಿಮಾಗಳ ಬಗ್ಗೆ ಹಲವಾರು ಸಿನಿಮಾ ತಜ್ಞರು ಇದನ್ನು ಪ್ರಮುಖವಾಗಿ  ಹೇಳಿಕೊಂಡೇ ಬಂದಿದ್ದಾರೆ. ಆದರೂ ಅವರು ಕೂಡ, ಕೆಲವು ಕೆಲವು ಹೆಣ್ಣು ಮಕ್ಕಳು ಚಿತ್ರರಂಗದ ಪ್ರಮುಖ ತಿರುವಿಗೆ ಕಾರಣವಾಗಿರುವುದನ್ನು ಹೆಚ್ಚು ಒತ್ತು ಕೊಟ್ಟು ಹೇಳಿರುವುದು ಆಯಾ ಕಾಲ ಘಟ್ಟದ ಅದೃಷ್ಟ, ತಿಳಿವಳಿಕೆ, ಸೂಕ್ಷ್ಮತೆ ಎನ್ನಲೇ ಬೇಕು. ಕೆಲವರಂತೂ ಮಹಿಳಾ ಕೇಂದ್ರಿತ ಚಿತ್ರಗಳನ್ನು ಮಾಡಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.

ದಕ್ಷಿಣ ಏಷಿಯಾದ ಚಿತ್ರಗಳ ಬಗ್ಗೆ ಚರಿತ್ರಾರ್ಹವಾಗಿ ನೋಡುವುದು ಬಹಳ ಕಷ್ಟದ ಜವಾಬ್ದಾರಿ. ಹಾಗೆ ನೋಡುವಾಗಿ ಮೊದಲು ಕಾಣಿಸುವುದು ಈ ಫಾತಿಮಾ ಬೇಗಂ. ಈಕೆ 1926ರಲ್ಲಿ ತನ್ನದೇ ಆದ ಸಿನಿಮಾ ಕಂಪನಿಯೊಂದನ್ನು ಆರಂಭಿಸಿ ಬುಲ್‌ ಬುಲ್‌ ಚಿತ್ರವನ್ನು ನಿರ್ಮಾಣ ಮಾಡಿ ನಿರ್ದೇಶಿಸಿದ್ದು, ಪಥ ಬದಲಾವಣೆಯ ಸಂಕೇತ ಎಂಬಂತೆ ನೋಡುವ ಆಗತ್ಯವಿದೆ. ನಂತರ ಇಂದಿನ ಪಾಕಿಸ್ತಾನವಾಗಿರುವ ಪ್ರಾಂತದಲ್ಲಿ ಸಂಗೀತ ಪರ್ವೀನ್‌ ರಿಜ್ವಿ ಹಾಗೂ ಶಮೀಮ್‌ ಅರ ಅವರು ನಿರ್ದೇಶಕಿಯರಾಗಿ ಚಿತ್ರರಂಗ ಪ್ರವೇಶ ಮಾಡಿದರು. ಇದಾದ ನಂತರ ಇಂದಿನ ಬಾಂಗ್ಲಾ ದೇಶದ ಕೊಹಿನೂರ್‌ ಅಕ್ತರ್‌ ನಿರ್ದೇಶಕಿಯರಾಗಿ ಹೆಸರು ಮಾಡಿದ್ದಲ್ಲದೆ, ಮಹಿಳಾ ನಿರ್ದೇಶಕರ ಪರಂಪರೆಯನ್ನು ಮುಂದುವರಿಸಿದರು. ಇದು ಮಹಿಳಾ ಕಲಾವಿದರು ತಮ್ಮ ವೃತ್ತಿಯನ್ನು ಎಷ್ಟು ತೀವ್ರವಾಗಿ ಪ್ರೀತಿಸುತ್ತಿದ್ದರು ಎಂಬುದು ಅರ್ಥವಾಗುತ್ತದೆ. ಆ ಪೈಕಿ ಬಹಳಷ್ಟು ಮಂದಿ ಅಭಿನಯದ ಮೂಲಕ ಚಿತ್ರರಂಗ ಪ್ರವೇಶ ಮಾಡಿದವರು. ಇದಾದ ಎಷ್ಟೋ ವರ್ಷಗಳ ನಂತರ ಮತ್ತೆ ಈ ಪರಂಪರೆಗೆ  ಪುರುಷ ಪ್ರಧಾನ ಸಿನಿಮಾ ಜಗತ್ತಿನಲ್ಲಿ ಕುಟುಕು ಜೀವ ಬಂತು. ಆಗ ಅಂದರೆ ಎಂಭತ್ತರ ದಶಕದಲ್ಲಿ ಮೀರಾ ನಾಯರ್‌ ಹಾಗೂ ದೀಪಾ ಮೆಹ್ತಾರಂಥ ಮಹಿಳೆಯರು ಚಿತ್ರ ನಿರ್ದೇಶನದ ಹೊಣೆ ಹೊತ್ತರು. ಈ ರೀತಿ ಶ್ರೀಲಂಕಾದಂಥ ಸಣ್ಣ ಪ್ರಾಂತ್ಯದಲ್ಲಿ ನಿರ್ದೇಶಕಿಯರ ಪರಂಪರೆಗೆ ಜೀವ ತುಂಬಿದವರು ಸುಮಿತ್ರಾ ಪೆರೀಸ್.‌  ಅವರು ಇತ್ತೀಚೆಗೆ 2023ರಲ್ಲಿ ತೀರಿಕೊಂಡರು. ಇವರ ಸಂಸ್ಕರಿತ ಚಿತ್ರ ಗೆಹೆನೂ ಲಮಾಯಿ ಚಿತ್ರವನ್ನು ಕಳೆದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು. ಅದನ್ನು ವೀಕ್ಷಸಿದಾಗ ಆ ನಿರ್ದೇಶಕಿಯ ಬಗ್ಗೆ ಇನ್ನಿಲ್ಲದ ಪ್ರೀತಿ, ವಿಶ್ವಾಸ ಉಕ್ಕಿ ಬಂತು.

WhatsApp Image 2026 07 12 at 9.35.41 AM

ಈ ನಿರ್ದೇಶಕಿಯರ ಬಗ್ಗೆ ಹೇಳುವಾಗ ಒಂದು ಸಂಗತಿಯನ್ನು ಇಲ್ಲಿ ಸ್ಪಷ್ಟಪಡಿಸಲೇಬೇಕು. ಒಂದು ಕಾಲದಲ್ಲಿ ಮಹಿಳೆಯರು, ಅದರಲ್ಲೂ ಗೌರವಾನ್ವಿತ ಕುಟುಂಬಗಳ ಮಹಿಳೆಯರು ಚಿತ್ರಗಳಲ್ಲಿ ಕಾಣಿಸಿಕೊಳ್ಳುವುದು ಒಂದು ರೀತಿಯಲ್ಲಿ ಕಳಂಕ, ಅಪಮಾನ ಎಂದೇ ಭಾವಿಸಲಾಗಿತ್ತು. ಅದರಿಂದ ಅವರು ʼಹೊಂದಾಣಿಕೆʼ ಮಾಡಿಕೊಳ್ಳಬೇಕಾಗುತ್ತದೆ ಎಂಬ ಮಾತೂ ಇತ್ತು. (ಈ ಭಾವನೆ ಇಂದಿಗೂ ಬದಲಾಗದಿರುವುದು, ನಮ್ಮ ಸಮಾಜ, ಚಿತ್ರರಂಗ ಅವರನ್ನು ನಡೆಸಿಕೊಂಡು ಬಂದಿರುವುದಕ್ಕೆ ನಾವೇ ನಮ್ಮನ್ನು ದೂಷಿಸಿಕೊಳ್ಳಬೇಕು). ಹಾಗಾಗಿ ಫಾಲ್ಕೆ ಮಾಡಿದ ʼರಾಜಾ ಹರಿಶ್ಚಂದ್ರʼ ಮೂಕಿ ಚಿತ್ರದಲ್ಲಿ ಗಂಡಸರೇ ಹೆಣ್ಣು ಪಾತ್ರಗಳನ್ನು ಮಾಡಬೇಕಾದಂಥ ಅನಿವಾರ್ಯತೆ ನಿರ್ಮಾಣವಾಯಿತು. ಇಂಥ ಸಂದರ್ಭದಲ್ಲಿ ಮುಂದೆ ಬಂದವರು ಯಹೂದಿ, ಆಂಗ್ಲೋ-ಇಂಡಿಯನ್‌ ಮತ್ತು ಯುರೇಷಿಯನ್ ಸಮುದಾಯ ತನ್ನ ಎದೆಗಾರಿಕೆ ತೋರಿಸಿ ಅಭಿನಯಕ್ಕೆ ಸಿದ್ಧವಾಗಿ ಮುಂದೆ ಬಂದಿದ್ದೇ ಅಲ್ಲದೆ ನಿರ್ದೇಶನಕ್ಕೂ ಇಳಿದದ್ದು ಒಂದು ಯುಗ ಪಲ್ಲಟವೆಂದೇ ಹೇಳಬೇಕು. ಈ ಸಂದರ್ಭದಲ್ಲಿ ಹೆಸರಿಸಲೇಬೇಕಾದ ಕೆಲವು ಮಹಿಳೆಯರೆಂದರೆ, ದುರ್ಗಾಬಾಯಿ ಕಾಮತ್‌ ಹಾಗು ಕಮಲಾಬಾಯಿ ಗೋಖಲೆ, ಫಾತ್ಮಾ ಬೇಗಂ, ಸುಲೋಚನ (ರೂಬಿ ಮೇಯರ್ಸ್)‌ ಪ್ರಮೀಳಾ (ಎಸ್ತರ್‌ ವಿಕ್ಟೋರಿಯಾ ಅಬ್ರಾಹಂ) ಇವರೆಲ್ಲ ಬಾಗ್ದಾದಿ ಯಹೂದಿ ಸಮುದಾಯದಿಂದ ಬಂದವರು ಎನ್ನುವುದು ಮುಖ್ಯ. ನಂತರ ಬಂದವರು ಜುಬೇದಾ ಬೇಗಂ.

ಇಲ್ಲಿ ಮತ್ತೊಂದು ಸಂಗತಿಯನ್ನು ಹೇಳಲೇಬೇಕು. ಇಂದು ʼನಾವುʼ ಮತ್ತು ʼಅವರುʼ ಎಂಬ ಬೈನರಿಯಲ್ಲಿ ನೋಡುತ್ತಿರುವ ಜಗತ್ತಿನ ಹಿನ್ನೆಲೆಯಲ್ಲಿ ನೋಡಬೇಕಾದರೆ, ಭಾರತೀಯ ಚಿತ್ರರಂಗ ಇಂದು 113 ವರ್ಷಗಳ ದಾರಿಯನ್ನು ಸವೆಸಬೇಕಾದರೆ, ಅದರಲ್ಲಿ ಮುಸ್ಲಿಂ ಸಮುದಾಯದ ಪಾತ್ರ ಬಹುದೊಡ್ಡದು. ಮೊದಲ ಟಾಕಿ ಚಿತ್ರದಿಂದ ಹಿಡಿದು, ಇಂದಿನವರೆಗೂ ಅದು ನಡೆದುಕೊಂಡೇ ಬಂದಿದೆ. ಬರಹದ ಕ್ಷೇತ್ರವಿರಬಹುದು, ಹಾಗೆಯೇ, ಛಾಯಾಗ್ರಹಣ, ಸಂಕಲನ, ಸಂಗೀತ, ಹಿನ್ನೆಲೆ ಸಂಗೀತ ಈ ಎಲ್ಲದರ ಮೂಲಕ ಅವರ ನೀಡಿರುವ ಕಾಣಿಕೆಯನ್ನು ಮರೆಯಲಾಗದು.  ಚಿತ್ರ ನಿರ್ಮಾಪಕ ಅರ್ದೇಶಿರ್‌ ಇರಾನಿ ಅವರ ಅಲಂ ಅರ ಅವರಿಂದ ಆರಂಭವಾದ ಈ ಪರಂಪರೆ, ದಿಲೀಪ್‌ ಕುಮಾರ್‌, (ಯೂಸೂಫ್‌ ಖಾನ್‌) ಮೀನಾ ಕುಮಾರಿ, ಒಂದು ಕಾಲದಲ್ಲಿ ಚಿತ್ರರಂಗದ ಪ್ರಮುಖ ತಾರೆಯರು. 1950ರ ವೇಳೆಗೆ ಮುಸ್ಲಿಂ ಸಮುದಾಯದ ಅತ್ಯುತ್ತಮ ಸಾಂಸ್ಕೃತಿಕ ಸಂಗತಿಗಳನ್ನು, ಉರ್ದು ಕಾವ್ಯವನ್ನು ಗಜಲ್ ಗಳನ್ನು ಅಳವಡಿಸಿದ ಝ ಮುಘಲ್‌ –ಏ- ಅಜಂ ಚಿತ್ರಗಳ ಮೂಲಕ ಚಿತ್ರರಂಗದ ಹಿರಿಮೆಯನ್ನು ಹೆಚ್ಚಿಸಿದರು. ಇಷ್ಟೇ ಅಲ್ಲದೆ, ಎಷ್ಟೋ ಜನ ಮುಸ್ಲಿಂ ನಾಯಕರು, ತಮ್ಮ ಹೆಸರನ್ನು ಬದಲಿಸಿಕೊಂಡೇ ಮುಂದೆ ಬಂದರು. ಶಾರೂಖ್‌ ಖಾನ್‌, ಅಮೀರ್‌ ಖಾನ್‌, ಸಲ್ಮಾನ್‌ ಖಾನ್‌, ವಹಿದಾ ರೆಹಮಾನ್‌, ಎ.ಆರ್.‌ ರೆಹಮಾನ್‌, ಸಾಹಿರ್‌ ಲೂಧಿಯಾನ್ವಿ, ಜಾವೇದ್‌ ಅಖ್ತರ್‌ ಮುಂತಾದವರು ಹಾಗೂ ಹೀಗೂ ಇಂದಿಗೂ ತಮ್ಮ identity ಉಳಿಸಿಕೊಂಡಿದ್ದಾರೆ. ಈಗಂತೂ, ಎಲ್ಲ ಮುಸ್ಲಿಂ ಕಲಾವಿದರು, ತಮ್ಮ ಹೆಸರನ್ನು ಬದಲಿಸಿಕೊಳ್ಳುವ ಪ್ರಮೇಯವೇ ಬರುವುದಿಲ್ಲ. ಕಾಲ ಬದಲಾಗಿದೆ. ಆದರೆ, ಆಗಿನ ʼಅವರುʼ ಮತ್ತು ʼನಾವುʼ ಎಂಬ ಕಂದರ ಮಾತ್ರ ದಿನದಿನಕ್ಕೆ ವಿಸ್ತಾರವಾಗುತ್ತಿದೆ. ಇದು ಕಾಲದ ದುರಂತವೆಂದೇ ಹೇಳಬೇಕು. ಈ ಮುಸ್ಲಿಂ Social genre ತಮ್ಮ cultural identityಯನ್ನು ರೂಪಿಸಿಕೊಳ್ಳುವುದನ್ನು ಮಾತ್ರ ನಿಲ್ಲಿಸಿಲ್ಲ. ತಮ್ಮ ಕಾವ್ಯ, ಚಿತ್ರಗೀತೆ, ಸಂಗೀತದ ಮೂಲಕವಷ್ಟೇ ಅಲ್ಲದೆ, ತಮ್ಮ ನೆನಪುಳಿಸುವಂಥ ಅಭಿನಯದ ಮೂಲಕ ಪುನಃ ಪುನಃ ಕಟ್ಟುತ್ತಿರುವುದು ನೆಮ್ಮದಿಯ ಸಂಗತಿ. ನಿದರ್ಶನಕ್ಕೆ ಇತ್ತೀಚೆಗೆ ಅಗಲಿದ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌. ಈಗಲೂ ತಮ್ಮ ಪ್ರತಿಭೆಯಿಂದ ನಮ್ಮನ್ನು ಮುಗ್ಧರಾಗಿಸುವ ನವಾಜುದ್ದೀನ್‌ ಸಿದ್ಧಿಕಿ. ಇರ್ಫಾನ್‌ ಅಂತೂ ಭಾರತೀಯ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದ ನೆನಪುಳಿಸಿ, ಕವಿತೆಯಾಗಿಯೇ ನಮ್ಮೊಂದಿಗೆ ಉಳಿದಿದ್ದಾರೆ.

ಮತ್ತೆ ಫಾತಿಮಾ ಬೇಗಂ ಅವರ ಬದುಕಿನಲ್ಲಿ ಇಣುಕಿದರೆ ಕಾಣುವುದು ಅಸ್ಪಷ್ಟವಾದ, ಮಸುಕು ಮಸುಕಾದ ಚಿತ್ರಗಳೇ. 1892 ರಲ್ಲಿ ಹುಟ್ಟಿ 1983ರವರೆಗೆ ಜೀವನ ಸವೆಸಿದ ಈಕೆ ಆ ಕಾಲಕ್ಕೆ ಒಬ್ಬ ನವಾಬನ ಕೇವಲ ಭಾರತೀಯ ಚಿತ್ರ ಇತಿಹಾಸದ ಮೊಟ್ಟ ಮೊದಲ ನಿರ್ದೇಶಕಿಯಷ್ಟೇ ಅಲ್ಲ. ವಿಶ್ವ ಚಿತ್ರರಂಗದಲ್ಲಿ ನಿರ್ದೇಶನಕ್ಕೆ ಇಳಿದ ಮಹಿಳೆಯರ ಸಾಲಿಗೆ ಸೇರಿದವರು ಎಂದು ಯಾವ ಎಗ್ಗಿಲ್ಲದೆ ಹೇಳಬಹುದು. ಫಾತಿಮಾ ಅಂದಿನ ಭಾರತೀಯ ಚಿತ್ರರಂಗದ ಆದ್ಯರಲ್ಲಿ ಒಬ್ಬರು. ಮೂಕಿ ಯುಗದ ಕಾಲದಲ್ಲಿ, ಪುರುಷ ಪ್ರಧಾನವಾಗಿದ್ದ ಚಿತ್ರರಂಗದಲ್ಲಿ ನಿರ್ಮಾಪಕರು, ಚಿತ್ರಕಥೆಗಾರರು, ಸ್ಟುಡಿಯೋ ಒಂದರ ಮಾಲೀಕರು ಆಗಿದ್ದ ಮಹಿಳೆ ಈಕೆ. ಉರ್ದು-ಪಾರ್ಸಿ ರಂಗಭೂಮಿಯ ಮೂಲಕ ಸಾಂಸ್ಕೃತಿಕ ಲೋಕಕ್ಕೆ ಅಡಿ ಇಟ್ಟವರು. ರಂಗಭೂಮಿಯ ಶಿಕ್ಷಣ ಫಾತಿಮಾಗೆ ಆಗಷ್ಟೇ ಶೈಶಾವಸ್ಥೆಯಲ್ಲಿದ್ದ ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರಲು ಸಾಧ್ಯವಾಗಿಸಿತು. ಆಕೆಯ ಮಹತ್ವದ ಕಾಣಿಕೆ ಚಿತ್ರರಂಗಕ್ಕೆ ದಕ್ಕಿದ್ದು 1926ರಲ್ಲಿ ಎಂಬುದು ಮಾತ್ರ ಖಚಿತ. ಆಕೆ ನಿರ್ದೇಶಿಸಿದ ಬುಲ್‌ ಬುಲ್‌—ಪರಿಸ್ತಾನ್‌ (ಕಿನ್ನರ ಲೋಕದ ಕೋಗಿಲೆ ಎಂದರ್ಥ). ಈ ಚಿತ್ರ ಅಖಂಡ ಭಾರತದ ಮೊಟ್ಟ ಮೊದಲ ಮಹಿಳಾ ನಿರ್ದೇಶಿತ ಚಿತ್ರ. ಈ ಚಿತ್ರಕ್ಕೆ ಸಂಬಂಧಿಸಿದ ಯಾವುದೇ print ಲಭ್ಯವಿಲ್ಲದಿದ್ದರೂ, ದೊರೆತಿರುವ ಮಾಹಿತಿಗಳ ಪ್ರಕಾರ ಪರ್ಶಿಯನ್‌ ಜಾನಪದ ಲೋಕದ ಕಿನ್ನರ ಲೋಕದ ಕಲ್ಪನೆಯನ್ನು ಆಧರಿಸಿದ ಚಿತ್ರ ಇದು. ಈ ಚಿತ್ರದಲ್ಲಿ ಒಂದು ಮಾಂತ್ರಿಕ ಪ್ರದೇಶದ, ಕಿನ್ನರರು, ಕಿಂಪುರುಷರು, ರಾಜರು ರಾಣಿಯರ ಕಾಲ್ಪನಿಕ. ಆದರೆ ರಮ್ಯವಾದ ಕಥೆಯನ್ನು ಆಧರಿಸಿದ ಚಿತ್ರ. ಮಾತಿಲ್ಲದ ಈ ಚಿತ್ರಕ್ಕೆ ದೃಶ್ಯಗಳ ಮೂಲಕವೇ ಮಾತು ಕಟ್ಟಿಕೊಟ್ಟ ಸಿನಿಮಾ ಇದು. ಆ ಕಾಲಕ್ಕೆ ಇಂಥ ಚಿತ್ರ ಮಾಡುವುದು ಸುಲಭದ ಮಾತೇನಲ್ಲ. ಈ ಚಿತ್ರಕ್ಕಾಗಿ ಕಲಾ ನಿರ್ದೇಶಕರ ನೆರವಿನಿಂದ ಅದ್ಭುತವಾದ ರಮ್ಯ ಕಲ್ಪನಾ ಲೋಕವನ್ನೇ ಫಾತಿಮಾ ಸೃಷ್ಟಿಸಿದ್ದರಂತೆ.  ಆ ಕಾಲಕ್ಕೆ ಟ್ರಿಕ್‌ ಛಾಯಾಗ್ರಹಣವನ್ನು ಬಳಸಿದವರು ಫಾತಿಮಾ. ಎಂದಿನಂತೆ ರಂಗಭೂಮಿ ಪರಂಪರೆಯ ಛಾಯೆಯಾಗಿ ದೀರ್ಘವಾದ ಗಾನ-ನೃತ್ಯ ಲೋಕ ಕೂಡ ಅವರು ಸೃಷ್ಟಿಸಿದ್ದರು. ಇಂಥ ಪ್ರಯೋಗಾತ್ಮಕ ಸಾಹಸಕ್ಕೆ ಬೇಕಾದ್ದು ಎದೆಗಾರಿಕೆ, ಅದು ಫಾತಿಮಾರಲ್ಲಿತ್ತು ಎಂಬುದು ನಿಸ್ಸಂಶಯ. ಇದಕ್ಕೆ ಅಗತ್ಯವಾದ ಕಲಾವಂತಿಕೆಯ ಸೆಟ್‌ ಗಳನ್ನು ಹಾಕಲೇ ಸಾಕಷ್ಟು ವೆಚ್ಚವನ್ನು ಬೇಡುವ ಚಿತ್ರವಿದು. ಆ ಧೈರ್ಯ ಸಾಹಸಕ್ಕೆ ಮುಂದಾದವರು ಫಾತಿಮಾ ಎಂಬುದನ್ನು ತುಂಬು ಗರ್ವದಿಂದಲೇ ಹೇಳಬೇಕಾದ ಸಂಗತಿ.

ಬುಲ್‌ ಬುಲ್‌—ಪರಿಸ್ತಾನ್‌ ನಂತರ ಹೀರಾ ರಾಂಜಾಃ, ಚಂದ್ರಾವಳಿ, ಕನಕತಾರಾ, ಮಿಲನ್‌ ದಿನಾರ್‌, ಹಾಗೂ ಶಾಕುಂತಲಾ ಸೇರಿದಂತೆ ಹಲವು ಮೂಕಿ ಚಿತ್ರಗಳನ್ನು ಫಾತಿಮಾ ನಿರ್ಮಿಸಿ, ನಿರ್ದೇಶಿಸಿದ್ದು ಕಡಿಮೆ ಸಾಧನೆ ಏನಲ್ಲ. ಆದರೆ ಈ ಮೂಕಿ ಚಿತ್ರಗಳ ಬಗ್ಗೆ ಐತಿಹಾಸಿಕ ದಾಖಲೆಗಳ ಕೊರತೆಯಿಂದಾಗಿ ಆ ಚಿತ್ರಗಳ ಬಗೆಗೂ ಹೆಚ್ಚಿನ ಮಾಹಿತಿ ಲಭ್ಯವಾಗುವುದಿಲ್ಲ. ನಮ್ಮ Archive ಗಳಲ್ಲಿ ಕೂಡ ಈ ಬಗ್ಗೆ ವಿವರಗಳಿಲ್ಲವೆಂದರೆ, ನಮ್ಮ ದೇಶದಲ್ಲಿ ದೃಶ್ಯ ಸಂಸ್ಕೃತಿಯನ್ನು ಕಾಪಾಡುವಲ್ಲಿ ನಾವು ಎಷ್ಟು ಹಿಂದೆ ಉಳಿದಿದ್ದೇವೆ ಎಂಬುದು ಅರ್ಥವಾಗುತ್ತದೆ. ಫಾತಿಮಾ ಅವರಿಗೆ ಮೂವರು ಹೆಣ್ಣು ಮಕ್ಕಳು; ಸುಲ್ತಾನಾ, ಝುಬೇದ, ಹಾಗೂ ಶಹಜಾದಿ ಕೂಡ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿದವರು. ಈ ಪೈಕಿ ಭಾರತೀಯ ಚಿತ್ರರಂಗದ ಇತಿಹಾಸ ಬರೆದ ಟಾಕಿ ಚಿತ್ರ ʼಅಲಂ ಅರಾʼ ನಾಯಕಿ ಜುಬೇದ. ತಾಯಿ ನಿರ್ದೇಶಕಿಯಾದರೆ, ಮಗಳು ಭಾರತದ ಮೊದಲ ಮಾತಿನ ಸಿನಿಮಾ ಅಲಂ ಅರಾದಲ್ಲಿ ನಟಿಸಿ ದಾಖಲೆ ಬರೆದಾಕೆ.

alam ara

ಫಾತಿಮಾ ಹೆಚ್ಚು ಕಡಿಮೆ ಆಗಿನ ಕಾಲದಲ್ಲಿ ನಾಟಕರಂಗದಲ್ಲಿ ಇದ್ದ ಕಲ್ಪನೆಯ ಚಿತ್ರಗಳು, ಪುರಾಣದ, ಇತಿಹಾಸದ ರಾಜ ಮಹಾರಾಜರ ಕಥೆಗಳು ಆಕೆಯ ಚಿತ್ರದ ವಸ್ತುಗಳಾಗಿದ್ದವು, ಆದರೆ ಫಾತಿಮಾ ಒತ್ತು ಕೊಡುತ್ತಿದ್ದದ್ದು, ಗಟ್ಟಿಯಾದ ಮಹಿಳಾ ಪಾತ್ರಗಳಿರುವ ಕಥೆಗಳಿಗೆ. ಆಕೆಯ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲದಿದ್ದರೂ, ಆ ಕಾಲದ ದಿನ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಜಾಹೀರಾತು, ವಿಮರ್ಶೆ ಎಂಬ ಹೆಸರಿನ ಪರಿಚಯಾತ್ಮಕ ಲೇಖನಗಳು ಮುಂತಾದವುಗಳ ಮೂಲಕ ದೊರೆಯುವ ಸಾಮಾಗ್ರಿಗಳಿಂದ ಈ ರೀತಿಯ ಒಂದು ಲೇಖನ ಬರೆಯಲು ಸಾಧ್ಯವಾಗಿದೆ ಎಂದು ಹೇಳಬಹುದು.

ಫಾತಿಮಾ ಭಾರತೀಯ ಸಿನಿಮಾದಲ್ಲಿ ಮಹಿಳೆಯರು ನಡೆದು ಮುಂದೆ ಬರಲು ಬೇಕಾದ ಕಾಲುದಾರಿಯನ್ನು ನಿರ್ಮಿಸಿದವರು ಎಂಬುದನ್ನು ಖಡಾಖಂಡಿತವಾಗಿ ಹೇಳಬಹುದು. ಆಕೆಯ ಚಿತ್ರಗಳ ಕುರಿತ ದಾಖಲೆ ನಾಶವಾಗಿರಬಹುದು, ಚಿತ್ರ ಭಂಡಾರಗಳಲ್ಲಿ ಅವುಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲದಿರಬಹುದು, ಆದರೆ ಭಾರತೀಯ ಚಿತ್ರರಂಗಕ್ಕೆ ಫಾತಿಮಾ ನೀಡಿದ ಕೊಡುಗೆಯನ್ನು ಯಾರೂ ನಿರಾಕರಿಸಲಾರರು. ಆದರೆ ಫಾತಿಮಾ ಸೃಷ್ಟಿಸಿದ ದಾರಿಯಲ್ಲಿ ನಡೆದ ದೇವಿಕಾ ರಾಣಿ, ಪ್ರೋತಿಮಾ ದಾಸ್‌ಗುಪ್ತಾ, ಶೋಭಾ ಸಮರ್ಥ್‌, ಫಾತಿಮಾರವರನ್ನು ಈಗಲೂ ನೆನಪಿಸಿಕೊಳ್ಳಬೇಕು. ನೂರು ವರ್ಷಗಳ ನಂತರ ಫಾತಿಮಾರ ಬಗ್ಗೆ ಬರೆಯುತ್ತಿರುವ ಈ ಹೊತ್ತಿನಲ್ಲಿ ನಿರ್ದೇಶಕಿಯರ ಪಡೆಯೇ ಸಿದ್ಧವಾಗಿದೆ.  ಸಾಯಿ ಪರಾಂಜಪೆ, ಅಪರ್ಣಾ ಸೇನ್‌, ಕಲ್ಪನಾ ಲಾಜ್ಮಿ, ಮೀರಾ ನಾಯರ್‌, ದೀಪಾ ಮೆಹ್ತಾ, ಅನಂತರ ಫರ್ಹಾಖಾನ್‌, ಜೋಯಾ ಅಖ್ತರ್‌, ಕಿರಣ್‌ ರಾವ್‌, ಅಲಂಕೃತಾ ಶ್ರೀವಾಸ್ತವ, ಮೇಘನಾ ಗುಲ್ಜಾರ್‌, ರೀಮಾ ಕಾಗ್ತಿ, ಪಾಯಲ್‌ ಕಪಾಡಿಯಾ, ಗುಣೀತ್‌ ಮೊಂಗಾ, ಕಾರ್ತಿಕಾ ಗೋನ್ಸಾಲ್ವೇಸ್‌, ಶುಚಿ ತಲಾಟಿ, ಆರತಿ ಕಡವ್‌, ಜಸ್ಮೀತ್‌ ರೀನ್‌, ಅಶ್ವಿನಿ ಅಯ್ಯರ್‌ ತಿವಾರಿ, ಅನ್ವಿತಾ ದತ್… ಹೀಗೆ ಹೆಸರುಗಳು ಬೆಳೆಯುತ್ತಲೇ ಹೋಗುತ್ತದೆ.

ಕನ್ನಡದಲ್ಲಿ ಪ್ರೇಮಾ ಕಾರಂತರಿಂದ ಆರಂಭವಾದ ಈ ಪರಂಪರೆಯಲ್ಲಿ ಎಂ.ವಿ. ರಾಜಮ್ಮ, ಸುಮನಾ ಕಿತ್ತೂರು, ಸಿಂಧೂ ಶ್ರೀನಿವಾಸಮೂರ್ತಿ, ಯಶೋಧಾ ಪ್ರಕಾಶ್‌, ವಿಜಯಲಕ್ಷ್ಮಿ ಸಿಂಗ್‌, ಚಂಪಾ ಶೆಟ್ಟಿ, ರೂಪಾ ಅಯ್ಯರ್‌,  ಕವಿತಾ ಲಂಕೇಶ್‌, ಆರತಿ, ಶೃತಿ ನಾಯ್ಡು, ಪ್ರಿಯಾ ಬೆಳ್ಳಿಯಪ್ಪ, ಅನನ್ಯ ಕಾಸರವಳ್ಳಿ, ಪ್ರಿಯಾ ಹಾಸನ್‌, ಪುಷ್ಪಾ.…ಹೀಗೆ ಪ್ರತಿಭಾವಂತ ಮಹಿಳೆಯರ ಪಟ್ಟಿ ಬೆಳೆಯುತ್ತಲೇ ಇದೆ. ಇಂದು ಈ ಪಟ್ಟಿ ಇನ್ನಷ್ಟು ಮುಂದುವರಿಯಲು ಅಂದು ಕಾರಣರಾದವರು ಫಾತಿಮಾ ಎಂಬ ನೆನಪು ಎಂಬುದು ಮುಖ್ಯ ಅಷ್ಟೇ ಹೇಳಲು ಸಾಧ್ಯ.

IMG 20251121 WA0005
ಮುರಳೀಧರ ಖಜಾನೆ
+ posts

ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಮುರಳೀಧರ ಖಜಾನೆ
ಮುರಳೀಧರ ಖಜಾನೆ
ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ನಮ್ಮನ್ನು ದಮನಿಸುವ ಪೊಲೀಸ್ ಆದೇಶ ಕೂಡಲೇ ರದ್ದಾಗಲಿ’: ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ ಲಿಂಗತ್ವ ಅಲ್ಪಸಂಖ್ಯಾತರು

ಲಿಂಗತ್ವ ಅಲ್ಪಸಂಖ್ಯಾತರ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಇತ್ತೀಚೆಗೆ ಹೊರಡಿಸಿರುವ...

ಎಸ್‌ಸಿ, ಎಸ್‌ಟಿ ಮೀಸಲಾತಿ ಶೇ.56ಕ್ಕೆ ಏರಿಕೆ ಮಾಡಿದ್ದ ಆದೇಶ ರದ್ದುಗೊಳಿಸಿದ ಹೈಕೋರ್ಟ್!

ರಾಜ್ಯದ ಹಿಂದಿನ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರವು ಪರಿಶಿಷ್ಟ ಜಾತಿ (ಎಸ್‌ಸಿ)...

ದೆಹಲಿಯಲ್ಲಿ ಹೆಚ್ಚಿದ ಕಟ್ಟೆಚ್ಚರ: ಒಂದು ತಿಂಗಳು 20,000 ಅರೆಸೇನಾ ಸಿಬ್ಬಂದಿ ನಿಯೋಜನೆ

ಪ್ರತಿಪಕ್ಷ 'ಇಂಡಿಯಾ' ಒಕ್ಕೂಟದ ಪ್ರತಿಭಟನೆ ಹಾಗೂ ಮುಂಬರುವ ಹಬ್ಬದ ಋತುವಿನ ಹಿನ್ನೆಲೆಯಲ್ಲಿ...

ಬೋಟ್ ಕ್ಲಬ್‌ನಿಂದ ಜಂತರ್ ಮಂತರ್‌ವರೆಗೆ; ದೆಹಲಿಯ ಪ್ರತಿಭಟನಾ ತಾಣ ಬದಲಾದದ್ದು ಹೇಗೆ?

ಸ್ವಾತಂತ್ರ್ಯಾನಂತರ ಹಲವು ದಶಕಗಳವರೆಗೆ ದೆಹಲಿಯ ಇಂಡಿಯಾ ಗೇಟ್ ಸಮೀಪದ ರಾಜಪಥದಲ್ಲಿರುವ ಬೋಟ್...