ಇಂದು ಅಂಬೇಡ್ಕರ್ ಜಯಂತಿ. ರಘುನಂದನ ಅವರ 'ನಾನು ಸತ್ತಮೇಲೆ' ಕವನ ಸಂಕಲನದಿಂದ ಆಯ್ದ ಬಾಬಾಸಾಹೇಬರ ಬೋಗುಣಿ ಎಂಬ ಕವಿತೆಯನ್ನು ಈ ದಿನ ಓದುಗರಿಗಾಗಿ ನೀಡುತ್ತಿದ್ದೇವೆ.
ಬಾಬಾಸಾಹೇಬರ ಬೋಗುಣಿ
ಎಲ್ಲ ಮಲಗಳಿಗಿಂತಲೂ ಅಸಹ್ಯವಾದುದು ಅವಿದ್ಯೆ
-ದಮ್ಮಪದ, ಮಲವಗ್ಗ
1
ಬಿಕ್ಕೆಯ ಕೊಡು ಅಂತ ಬೋಗುಣಿ ನಾ ನನ್ನನ್ನೆ
ಒಡ್ಡಿಕೊಂಡಿರೋದು ಅನ್ನ ಬಟ್ಟೆಗಾಗಿ ಅಲ್ಲ ಅಂ
ತಸ್ತಿಗಾಗಿ ಅಲ್ಲ ಭಂತೇ ಕೊಡು ಧನಕನಕ ಅಂತಲ್ಲ
ಬಂದೆ ನಿನ್ನಲ್ಲಿ ಬೇಡಿ ಮಹಬೋಧಿ ದಮ್ಮ ಬಿಕ್ಕೆ
ಅದು ಆಗದು ತರಾತುರಿಗೆ ದಕ್ಕದು ಅಂದೆಯ
ಸರಿ ನೀಡು ನಾಡೆಲ್ಲಕ್ಕೆಲ್ಲರಿಗೆ ಒಂದಿಷ್ಟು ಸುಬುದ್ಧಿ
ನಿಂತಿದ್ದೇನೆ ಇಲ್ಲಿ ಸೂಟು ಬೂಟು ಬಿಟ್ಟು ತುಂ
ಡರಿವೆಯಲ್ಲಿ ಬೇಡುತ್ತ ಎಲ್ಲರ ಎಲ್ಲವುದರ ಶುದ್ಧಿ
ಇಣುಕಲಿ ತಂತಮ್ಮ ಎದೆಯೊಳಕ್ಕವರು ಇಳಿಯಲಿ
ಬಾಚಿ ತೆಗೆಯಲಿ ತಮ್ಮ ತಮ್ಮವರ ಕೂಡಿಟ್ಟ ಹೇಲ
ಕಾಣಲಿ ಕಸರು ಕಾಯಿಲೆಯ ಎಂಥ ಬಂಡಸಾಲೆ
ಯದುs ಗುಣಿಸಿ ಅರೆದು ಮದ್ದು ಕೊಟ್ಟುಕೊಳ್ಳಲಿ
ಮಣ್ಣುಗೂಡಿಸಲಿ ಅದನು ಬಳಿಕ ನೆಲ ಹಸನುಮಾಡಲಿ
ಬಿತ್ತಿ ಬೆಳೆದು ತೆಗೆಯಲೆಲ್ಲರಿಗೆ ನಿನ್ನ ಬೋಧದ ಫಸಲ
2
ಒಡ್ಡಿಕೊಂಡೆ ಹಾಗೆ ಆವತ್ತು ಬಾಗಿ ಐನೂರು ಸಾವಿರ
ದಲ್ಲೊಬ್ಬನಾಗಿ. ಬೋಗುಣಿಯ ಕೊಟ್ಟೆ ನಾಡಿನೆಲ್ಲರ ಕೈಗೆ.
ಹಾರೈಸಿದೆ. ಅಗುಳು ಕಾಣದೇನೇ ಸಂದುಹೋದೆ.
3
ಬಿತ್ತು, ಬಳಿಕ, ಕಂಡಿತೊಂದಗುಳುಆಗೀಗ; ಇನ್ನೆಷ್ಟೊ ಮಣ್ಣುಪಾಲು.
ನೆಟ್ಟನಿಲ್ಲದ ಬಗೆ, ಸೊಟ್ಟನೆಯ ಬೊಗಸೆ, ವಾರೆ ಹಿಡಿದ ಬೋಗುಣಿ –
ತಪ್ಪು ಭಂತನದ್ದೇ?! ಅಗೊ ಆ ಮೇಲಿನವರ ಆ ಮುಂದಾಳುಗಳೀ
ನನ್ನವರ ಈ ಕೆಲವು ಗುರ್ಕಾರರು: ಎಲ್ಲ ಬಿಟ್ಟವರು, ಒಟ್ಟಿಬ್ಬರೂ!
ಕೈ ಎಡವೊ ಬಲವೊ ಲೆಕ್ಕ ಹಾಕಿಹಾಕಿ, ಮುಳ್ಳಿರದ ತಕ್ಕಡಿ ತಪ್ಪು
ಬೇಕೆಂದೆ ತೂಗುವವರು. ಚಪ್ಪಾಳೆ ತಟ್ಟೋಕೆ ಕೂಡಬೇಕೆರಡೂ
ಅನ್ನೋದ ಮರೆತವರು. ದಮ್ಮಪದ ತುಳಿಯೋಕೆ ದಮ್ಮಚಕ್ಕ
ತಿರುವೋಕೆ ದಮ್ಮು ಸಾಲದಾಗಿ, ಭೋಗದಾಸೆಯ ಹೋsರು
ಬೋಧವಿಲ್ಲದ ಬದಲು, ಬೋಧಿಯಿಲ್ಲದ ಸಮತೆ, ಅಷ್ಟೆ ಸಾಕಾಗಿ
ಮೆರೆದಿದೆ ಅವಿದ್ಯೆ, ನನ್ನ ಬೆದರುಬೊಂಬೆ ಮುಂದಿಟ್ಟು ಢಾಳುಢಾಳು.
4
ಕಾಡೋದು ಅದೇ, ಅವಿದ್ಯೆ: ದಮ್ಮಬಿಕ್ಕೆ, ಹೊರಗೆ ಕೈಯೊಡ್ಡಿ
ಬೇಡಿದರೆ, ಇಲ್ಲ, ಲೇಬಲ್ಲು ಹಚ್ಚಿ, ಹಚ್ಚಿಕೊಂಡು, ಮೇಜುಕುಟ್ಟಿ
ಯರಚಿದರೆದಕ್ಕುತ್ತೆ ಅನ್ನೋದು. ಸೂಟಿನಲ್ಲಿ ಬಂದಿಮಾಡಿ ನನ್ನ
ದೇವರುs, ಎದೆಗಮುಕಿಸಿದ ಆ ಹೊತ್ತಿಗೆ ದೇವವಾಕ್ಕುs ಅನ್ನೋದು.
ಆರೋ ಮೊದಲು ಅಡರಿ ಅಡರಿ ಉರಿದು ಅರಸಿ ಬೆಳಗಿದ ಜೀವ
ಬೇಡಿದ್ದೇನು, ತೊಟ್ಟದ್ದೊಡ್ಡಿದ್ದೇನು, ಯಾಕೆ, ಯಾರಲ್ಲಿ, ಯಾರಿಗಾಗಿ
ಮರೆಯಾಗಿಹೋಯಿತೋ… ದೇವರಲ್ಲ ಅಲ್ಲ, ಅಲ್ಲ ದೇವವಾಕ್ಕು!
ಸೂಟುಆಯಿತುಅಂದಿಗೆ; ಇಂದಿಗಲ್ಲ. ಇನ್ನೀಗ, ಕೆದಕಿಕೊಳ್ಳದೆ
ಪಸೆಹರಿಯಿಸಿ ಇನ್ನೂಒಳಗೆ ಒಳತೋಟಿಯಿಂದ ಬೋಧಿ ಪಡ
ಕೊಳ್ಳದೆ ಆಗದು ಹೊಸತು ನಡಿಗೆ, ನವಯಾನ. ಆಗುವುದೋ…
5
ಒಂದರಿಂದೊಂದಾಗುತ್ತಿರುತ್ತಿಲ್ಲವಾಗುತ್ತಹೋಗುವುದು ತಿಳಿದೂ
ಅನ್ನಿಸುತ್ತೆ ಒಮ್ಮೊಮ್ಮೆ…ನನಗೂ …ನನ್ನಂಥವನಿಗೂ…
ಕಡೆಗೆ ಇರೋದು, ಉಳಿಯೋದು…ದುಃಖವೇ ಏನೋ…
ಟಿಪ್ಪಣಿ:
ಬಂಡಸಾಲೆ– ಗೋದಾಮು, ಉಗ್ರಾಣ
ಹೋರು- ಹೋರಾಟ
ನವಯಾನ- ಬಾಬಾಸಾಹೇಬರು ಹುಟ್ಟುಹಾಕಿದ ಹೊಸ ಬೌದ್ಧಪಂಥ
ಒಂದರಿಂದೊಂದು….ಹೋಗುವುದು– ಬುದ್ಧನು ಕಂಡರಿಸಿದ ಪ್ರತೀತ್ಯಸಮುತ್ಪಾದ ತತ್ತ್ವ

ರಘುನಂದನ
ಕವಿ, ನಾಟಕಕಾರ, ರಂಗನಿರ್ದೇಶಕ



