ವಿಜಯಪುರ ಜಿಲ್ಲೆಯ ಕೂಡಗಿ NTPCಯ ಹಾರುಬೂದಿಯಿಂದಾಗಿ ಸುತ್ತಮುತ್ತಲಿನ ರೈತರ ಜಮೀನಿನ ಕುಡಿಯುವ ನೀರು ಹಾಗೂ ಬೆಳೆಗಳ ಮೇಲೆ ಬೂದಿ ತುಂಬಿಕೊಂಡು ಸಮಸ್ಯೆ ಉಂಟಾಗಿದೆ. ಈ ಪ್ರದೇಶದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಶುದ್ಧ ಕುಡಿಯುವ ನೀರು ಹಾಗೂ ಮೂಲಸೌಕರ್ಯಗಳನ್ನು ಒದಗಿಸಬೇಕು, ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಶಿಕ್ಷಣಕ್ಕೆ ಅನುಗುಣವಾಗಿ ಉದ್ಯೋಗಾವಕಾಶ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಆಗ್ರಹಿಸಲಾಗಿದೆ.
ವಿಜಯಪುರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಸಂಘಟನಾಕಾರರು ಮಾತನಾಡಿ, “ಜಂಬಗಿ ಗ್ರಾಮದಲ್ಲಿ ಕೆರೆಗೆ ನೀರು ತುಂಬಿಸಬೇಕು. ಜತೆಗೆ ಗ್ರಾಮದಲ್ಲಿಯ ಮೂಲಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ಶೌಚಾಲಯ, ಚರಂಡಿ, ಬೀದಿ ದೀಪದ ವ್ಯವಸ್ಥೆ ಕಲ್ಪಿಸಬೇಕು. ಜಂಬಗಿಯಿಂದ ಆಹೆರಿ ಗ್ರಾಮದವರೆಗೆ 30 ಲಕ್ಷ ರೂ.ಗಳ ಪಿಆರ್ಡಿ ಅನುದಾನದಲ್ಲಿ ಕೈಗೊಂಡ ರಸ್ತೆ ನಿರ್ಮಾಣ ಕಾರ್ಯ ಸಂಪೂರ್ಣ ಕಳಪೆಯಾಗಿದ್ದು, ಅಪೂರ್ಣವಾಗಿರುವ ಕಾಮಗಾರಿಯನ್ನು ಸಂಪೂರ್ಣಗೊಳಿಸಬೇಕು” ಒತ್ತಾಯಿಸಿದರು.
“ಬೇಸಿಗೆ ಪ್ರಾರಂಭವಾಗಿರುವುದರಿಂದ ಜಿಲ್ಲೆಯ ಎಲ್ಲ ಕೆರೆಗಳಿಗೂ ನೀರು ತುಂಬಿಸುವ ಕೆಲಸವಾಗಬೇಕು. ವಿಶೇಷವಾಗಿ ತಿಡಗುಂದಿ ಹಾಗೂ ಚಡಚಣ ತಾಲೂಕಿಗೆ ಸಂಬಂಧಪಟ್ಟಂತೆ 35-36 ಡಿಸ್ಟ್ರಿಬ್ಯೂಟರ್ಗಳಿಗೆ ನೀರು ಹರಿಸಿ ಬೋರಿಹಳ್ಳವನ್ನು ತುಂಬಿಸಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿ>ವಿಜಯಪುರ | ಮೇ.8ರಂದು ಬೃಹತ್ ರೈತ ಜನ ಜಾಗೃತಿ ಸಮಾವೇಶ; 15 ಸಾವಿರ ರೈತರು ಪಾಲ್ಗೊಳ್ಳುವ ನಿರೀಕ್ಷೆ
ಈ ವೇಳೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಕೋಲಾರ ತಾಲೂಕು ಅಧ್ಯಕ್ಷ ಸೋಮು ಬಿರಾದಾರ, ವಿಜಯಪುರ ತಾಲೂಕು ಅಧ್ಯಕ್ಷ ಹನುಮೇಶ್ ಜಮಖಂಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಕೋಳಿ, ಮುಖಂಡ ರಾಮಸಿಂಗ ರಜಪೂತ ಸೇರಿದಂತೆ ರೈತರಾದ ಪ್ರಕಾಶ ತೇಲಿ, ಶಂಕರಗೌಡ ಬಿರಾದಾರ, ಸುನೀಲಕುಮಾರ ಹಿರೇಮಠ, ವೀರಣ್ಣ ಸಜ್ಜನ, ಕಾಲೇಸಾಬ ನದಾಫ್, ರಾಜುಗೌಡ ಪಾಟೀಲ, ಗ್ಯಾನುಗೌಡ ಪಾಟೀಲ, ಬಸು ತಳವಾರ, ಸುನಿಲ್ ಕೋಲಕಾರ್, ಬಸವರಾಜ ಮಸೂತಿ, ಸಂಗಮೇಶ ಕೊಣಾಸಿರಸಗಿ, ವಿಕ್ರಂ ವಾಗಮೋರೆ, ಅನಿಲ ಕೋಳಿ ಮುಂತಾದವರು ಇದ್ದರು.




