ಪ್ರವೇಶಿಕೆ
ಮಕ್ಕಳಿಗೆ, ಅವರ ಮುಗ್ಧತೆಯ ಮುದ್ದನ್ನು ಉಳಿಸಿಕೊಳ್ಳುತ್ತಲೇ ಒಂದಷ್ಟು ಲೋಕಜ್ಞಾನವನ್ನು ನೀಡುವ ಪದ್ಯಗಳನ್ನು ನಾವೆಲ್ಲ ಸಣ್ಣಂದಿನಲ್ಲಿ ಕಲಿತಿದ್ದೇವೆ. ನಾವು ದೊಡ್ಡವರಾಗುತ್ತ ಆಗುತ್ತ ಆಮೇಲಿನ ತರಗತಿಗಳಲ್ಲಿ ಕಲಿತ ಪದ್ಯಗಳನ್ನು ಮರೆತರೂ, ಅಥವಾ ಅವುಗಳನ್ನು ಮಸುಕಾಗಿಯಷ್ಟೇ ನೆನಪು ಮಾಡಿಕೊಳ್ಳಬಲ್ಲೆವಾದರೂ, ತೀರ ಚಿಕ್ಕವಯಸ್ಸಿನಲ್ಲಿ ಕಲಿತ ಆ ಮೊದಮೊದಲ ಪದ್ಯಗಳು ನಮ್ಮಲ್ಲಿ ಎಂದಿಗೂ ಹಚ್ಚಹಸಿರಾಗಿ ಉಳಿದಿರುತ್ತವೆ. ಅದಕ್ಕೆ ಕಾರಣ, ನಮ್ಮ ಅಂದಿನ ಮನಸ್ಸಿನ ಸ್ವಚ್ಛತೆಯಷ್ಟೇ ಆ ಪದ್ಯಗಳ ಲೋಕದ ಸ್ವಚ್ಛತೆ ಕೂಡ. ಆದರೆ ಲೋಕ, ಬದುಕು – ತುಂಬ ಜಂಜಡ, ದುಃಖ, ಒತ್ತಡ ತುಂಬಿದ್ದು. ಅದು ಬರಬರುತ್ತ ನಮಗೆ ಗೊತ್ತಾಗುತ್ತದೆ. ಗೊತ್ತಾದಾಗ, ಹಿಂದಿನ ಆ ಸ್ವಚ್ಛತೆ, ಮುಗ್ಧತೆ, ನ್ಯಾಯಪರತೆಯತ್ತ ಸೆಳೆತವಿದ್ದರೆ, ವಯಸ್ಕ ಜೀವನದಲ್ಲಿ ನೊಂದ ನಾವು ನಮ್ಮಂತೆ ನೊಂದವರ ಜೊತೆಯಾಗಿ ನಿಲ್ಲುತ್ತೇವೆ:
ನರಕವೆರಡು ಕೂಡಿದಲ್ಲಿ ಸ್ವರ್ಗವೇ
ನರಳಿ ಬಾರದಿರಬಹುದು.
ಆದರೆ ಕಲ್ಯಾಣ
ಕಲ್ಯಾಣ ಕೊಂಚ ಹತ್ತಿರ ಎನಿಸಬಹುದು
ಅಲ್ಲವೇ?
ಇಂದು ಅನ್ಯಾಯ ಎಣೆಮೀರಿದೆ. ದೇಶದ ಕೋಟ್ಯಂತರ ಜನರನ್ನು – ಬಡವರು, ಆದಿವಾಸಿಗಳು, ಅಲ್ಪಸಂಖ್ಯಾತರನ್ನು, ಜೊತೆಗೆ ನ್ಯಾಯದ ಪರವಾಗಿ ಹೋರಾಡುವವರನ್ನು – ಅವರು ಭಾರತೀಯರೇ ಅಲ್ಲವೆಂದೂ, ಅವರಲ್ಲಿ ಹಲವರೋ ಕೆಲವರೋ ವಿದೇಶಗಳ ದುಷ್ಟ ಏಜೆಂಟರೆಂದೂ ಸುಳ್ಳುಸುಳ್ಳೇ ಸಾರಿ ಅವರ ಓಟಿನ ಹಕ್ಕನ್ನು, ದೇಶದ ನಾಗರಿಕತೆಯ ಗುರುತನ್ನೂ ಕಸಿದುಕೊಂಡು ಅವರನ್ನು ಅಕ್ಷರಶಃ ಅಳಿಸಿಹಾಕುವ ಉದ್ಯಮವನ್ನು ನಮ್ಮ ಒಕ್ಕೂಟ ಸರಕಾರ ಮತ್ತು ಅದರ ಬೆನ್ನೆಲುಬಾದ ಸಂಘಶಕ್ತಿಗಳು ಕೈಗೊಂಡಿವೆ. ಇಂಥ ಹೊತ್ತಲ್ಲಿ, ಈ ಕೆಳಗಿರುವ ಕೆಲ ಸಾಲುಗಳನ್ನು ಬರೆಯುವ ದುರ್ಭಾಗ್ಯ ನನ್ನದಾಗಿದೆ. ನೋಯುತ್ತ ನೋಯುತ್ತ ನಮ್ಮೆಲ್ಲರ ಮುದ್ದಿನ ಸಾಲುಗಳನ್ನು ಕೆಡಿಸಿದ್ದೇನೆ. ಅವುಗಳನ್ನು ಉಣಿಸಿ, ನಮ್ಮನ್ನು ಬೆಳೆಸಿದ ಅಜ್ಜಂದಿರ ಕ್ಷಮೆ, ಇಂದಿನ ನಿಮ್ಮ ಕ್ಷಮೆ ನನಗಿರಲಿ – ರಘುನಂದನ
ಓಟಿನ ಹಕ್ಕು ಸತ್ಹೋಯ್ತು
ಒಂದು ಎರಡು ಓಟಿನ ಹಕ್ಕು
ಮೂರು ನಾಕು SIRರ್ರು ಬಂತು
ಐದು ಆರು ಫಾರಂ ತುಂಬು
ಏಳು ಎಂಟು ಗಂಟೋಗಂಟು
ಒಂಬತ್ತು ಹತ್ತು ಓಟಿಗೆ ಕುತ್ತು
ಒಂದರಿಂದ ಹತ್ತು ಹೀಗಿತ್ತು
ಓಟಿನ ಹಕ್ಕು ಸತ್ಹೋಯ್ತು
ಗುಸಪಿಸ ಮಾತೊಳಗೆ
ಬೆಕ್ಕೇ! ಬೆಕ್ಕೇ! ಮುದ್ದಿನ ಸೊಕ್ಕೇ!
ಎಲ್ಲಿಗೆ ಹೋಗಿದ್ದೆ? ಓಟಿನ ಬೂತಿಗೆ
ಹೋಗಲು ನಿನ್ನ ಕಾದು ಕೂತಿದ್ದೆ.
ಅಯ್ಯೋ ಮಳ್ಳಿ! ಮುದ್ದಿನ ಮೊದ್ದೆ!
ಯಲೆಕ್ಸನ್ ಕಮೀಸನ್ನಾಪೀಸಿಗೆ!
ಮೋದಿ-ಷಾಹಜೀ ಇದ್ದರು ಅಲ್ಲಿ
ಗುಸಪಿಸ ಮಾತೊಳಗೆ!
ತೋಳರಾಯ! ತೋಳರಾಯ!
ತೋಳರಾಯ! ತೋಳರಾಯ!
ಊಟ ಬೇಕೇ?
ಊಟಬೇಕು: SIRರ್ರಿನ ಗಿಲೀಟ್
ಓಟು ಬೇಕು!
ತೋಳರಾಯ! ಗಿಲೀಟು
ಏಕೆ ಬೇಕು?
ಗಿಲೀಟ್ ಮಾಡಿ ಗಾದಿಮೇಲೆ
ಕೂರಬೇಕು!
ತೋಳರಾಯ! ಅಲ್ಲಿ ಕೂತು
ಏನು ಮಾಡುವೆ?
ನಿನ್ನ ತಿಂದು ಮನೆಮಾರು
ಮಾರಿಬಿಡುವೆ!
ಹಾಳುತೋಳ! ತಾಳು! ಹೋಗಿ
ಕೋಲು ತರುವೆನು!
ಗುರ್ರ್ರ್! SIRರ್ರಂತ ಈಗಲೆ
ತಿಂದುಬಿಡುವೆನು!
ಕೆಟ್ಟಕನಸಿನ ಪಾಠ
ಇವಳು ಕಮಲಿ. ಇವನು ಬಸವ.
ಬಸವ ಕಮಲಿಯ ಗಂಡ.
ಕಮಲಿ ಬಸವನ ಹೆಂಡತಿ.
ಇವರು ಅವರ ಮಕ್ಕಳು.
ಬಸವ ಕಲ್ಲು ಕುಟ್ಟುವನು.
ಕಮಲಿ ಇಟ್ಟಿಗೆ ಹೊರುವಳು.
ಮಕ್ಕಳು ಶಿಮೆಂಟಲಾಡುವರು.
SIRರ್ರು ಬರುವರು. ಹೇಳುವರು:
ಕಮಲಿಗೆ ಓಟಿಲ್ಲ. ಬಸವಗು ಓಟಿಲ್ಲ.
ಇನ್ನು ರೇಷನ್ ಚೀಟಿ, ಬಿಪಿಎಲ್‌ಗೂ
ಕಿಮ್ಮತ್ತಿಲ್ಲ. ಅಕ್ಕಿ-ಜೋಳ-ರಾಗಿ ಇಲ್ಲ.
ಮಕ್ಕಳ ಪಾಲಿಗೆ ಕೂಳಿಲ್ಲ.
ಕಮಲಿಗೆ ಬಸ್ಸು ಬಿಟ್ಟಿ ಅಲ್ಲ, ಇನ್ನು
ಆಧಾರ್ ಚೀಟಿ ನಡೆಯೋದಿಲ್ಲ.
ತಿಕೀಟಿಗಂತೂ ಕಾಸಿಲ್ಲ.
ಹಟ್ಟೀ ಜೋತಿ ಇಲ್ಲ, ಅದರ
ಲಕುಮಿ ಕೂಡಾ ಇನ್ನಿಲ್ಲ.
ಗೋರ್ಮೆಂಟ್ ಮದ್ದೂ ಸಿಗೋದಿಲ್ಲ.
ಕಮಲಿ ಬಸವ ನಮ್ಮವರಲ್ಲ:
ಮನುಷ್ಯರಲ್ಲ: ಜಿರಲೆಗಳು

ರಘುನಂದನ
ಕವಿ, ನಾಟಕಕಾರ, ರಂಗನಿರ್ದೇಶಕ




