ಕೆ.ವಿ. ಸುಬ್ಬಣ್ಣ, ಬಿಡದಿ, ಬಂಡವಳಿಗರ ಗಾಲ್ಫ್: ದಶಕಗಳ ಹಿಂದಿನ ಎಚ್ಚರಿಕೆ

Date:

ಕೆ.ವಿ. ಸುಬ್ಬಣ್ಣ (1932-2005) ಅವರು ಸ್ವತಂತ್ರ ಭಾರತ ಮತ್ತು ಕರ್ನಾಟಕಗಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಜೀವನಕ್ಕೆ ಹೊಸದಿಕ್ಕು ಕಾಣಿಸಿದ ದೊಡ್ಡವರಲ್ಲಿ ಒಬ್ಬರು. ಕನ್ನಡ ನುಡಿ, ಕರ್ನಾಟಕ, ಭಾರತ, ಒಟ್ಟು ಭೂಲೋಕ- ಇವುಗಳ ಚೆಲುವಿಗೆ ಸಂಭ್ರಮಿಸುತ್ತಲೇ, ಅವುಗಳಿಗೆ ಒದಗಿಬಂದ ಹಲವು ಸಂಕಟಗಳ ವಿಷಯದಲ್ಲಿ ಗಟ್ಟಿಯಾದ ದನಿಯೆತ್ತಿ ಬರೆಯಲು, ಮಾತನಾಡಲು ಎಂದೂ ಹಿಂದೆಗೆದವರಲ್ಲ ಅವರು. ಅವರ ಬರಹಗಳು ತಮ್ಮ ಹರಿತವಾದ ಚಿಂತನೆಗೆ ಹೆಸರಾದಷ್ಟೇ ಸಾಹಿತ್ಯಕ ಸೊಗಸಿನ ಗದ್ಯಶೈಲಿಗೂ ಹೆಸರಾಗಿದ್ದು ನಮ್ಮ ಮನವನ್ನು ಎಂದಿಗೂ ಮುಟ್ಟುವಂಥವೇ ಆಗಿವೆ.

- Advertisement -

ಇಂದಿನ ಹಲವು ವಿದ್ಯಮಾನಗಳನ್ನು ನೋಡುತ್ತಿರುವಾಗ, ಸುಬ್ಬಣ್ಣನವರು 1-7-1992ರಂದು ‘ಪ್ರಜಾವಾಣಿ’ ಪತ್ರಿಕೆಯ ವಾಚಕರವಾಣಿ ವಿಭಾಗದಲ್ಲಿ ಪ್ರಕಟಿಸಿದ ಪತ್ರವೊಂದರ ನೆನಪಾಯಿತು. ಮೂವತ್ತುನಾಲ್ಕು ವರ್ಷಗಳ ಹಿಂದಿನ ಆ ಅಂದು, ರಾಜ್ಯದ ರಾಜಧಾನಿ ಬೆಂಗಳೂರಿನ ಬಳಿಯ ಬಿಡದಿ ಪ್ರದೇಶವನ್ನು ಜಪಾನಿನ ಉದ್ಯಮಿಗಳಿಗೆ ಕೊಟ್ಟು, ಅಲ್ಲೊಂದು ದೊಡ್ಡ ಜಾಪಾನೀ ಟೌನ್ಶಿಪ್ ಏಳುವ ಏರ್ಪಾಡು ಮಾಡಬೇಕೆಂದು ಅಂದಿನ ಸರಕಾರವು ಯೋಚಿಸುತ್ತಿದ್ದಾಗ ಸುಬ್ಬಣ್ಣನವರು ಬರೆದ ಪತ್ರ ಅದು. ಅದರಲ್ಲಿ ಅವರು ಕೊಟ್ಟ ಎಚ್ಚರಿಕೆ ಇಂದಿಗೂ ಎಷ್ಟು ಪ್ರಸ್ತುತವಾದುದಾಗಿದೆ ಅನ್ನುವುದನ್ನು ಅದನ್ನು ಓದಿದ ಯಾರಿಗೂ ಬಿಡಿಸಿ ಹೇಳಬೇಕಾಗುವುದಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು ಗ್ರಹಿಸಲು ಅವರ ದಿನಚರಿಯ ಭಾಗವೇ ಆಗಿದ್ದ ಕೆಲವು ತುಣುಕುಗಳು ನಿಮ್ಮ ಓದಿಗಾಗಿ... ಆರೆಸ್ಸೆಸ್‌ಗೊಂದು ಕಿವಿಮಾತುಅದು ದೇಶ ವಿಭಜನೆಯ ಕಾಲ. ಎಲ್ಲೆಲ್ಲೂ ಹಿಂದೂ-ಮುಸ್ಲಿಂ...

ಕಪ್ಪತಗುಡ್ಡದ ಮಡಿಲಲ್ಲಿ ಗಾಂಧಿ ತತ್ವಗಳ ಪ್ರೇರಣಾ ಕೇಂದ್ರ ‘ಸಬರಮತಿ...

ಗದಗ ನಗರದ ಕಪ್ಪತಗುಡ್ಡದ ಸೆರಗಿನಲ್ಲಿರುವ 'ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ'ದ ಆವರಣದಲ್ಲಿ ನಿರ್ಮಿಸಲಾಗಿರುವ ಸಬರಮತಿ ಆಶ್ರಮವು ಗಾಂಧೀಜಿಯವರ ತತ್ವ ಮತ್ತು ಆದರ್ಶಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಪ್ರೇರಣಾ ಕೇಂದ್ರವಾಗಿ...

ಮೊನ್ನೆಯವರೆಗೆ ರಾಜ್ಯದ ಉಪಮುಖ್ಯಮಂತ್ರಿಗಳಾಗಿದ್ದ ಡಿ.ಕೆ. ಶಿವಕುಮಾರ್ ಅವರು ಈಗ ನಮ್ಮ ಮುಖ್ಯಮಂತ್ರಿಗಳಾಗಿದ್ದಾರೆ. ಕರ್ನಾಟಕದ ಎಲ್ಲ ಕಡೆಯ ಜನ, ಜಲ, ನೆಲ ಹಾಗೂ ಜಂಗಲು-ಜೀವಗಳ ತಿಂದುಹಾಕುತ್ತ, ನಮ್ಮೆಲ್ಲವನ್ನೂ ಇನ್ನೂಯಿನ್ನೂ ನೊಣೆಯಲು ಹೊರಟಿವವರೆಲ್ಲರೂ ಈಗ ಶಿವಕುಮಾರ್ ಅವರ ಮುಂದಾಳ್ತದಲ್ಲಿ ಬೆಂಗಳೂರನ್ನು ಖಾಉಜಾ (ಖಾಸಗೀಕರಣ, ಉದಾರೀಕರಣ, ಜಾಗತೀಕರಣ) ಎಂಬ ರಕ್ಕಸನ ಮುದ್ದುಗೂಸಾಗಿ ಬೆಳೆಸಲು ಹಾತೊರೆಯುತ್ತಿದ್ದಾರೆ. ಈಚೆಗೆ, ಅವರ ಪಿಪಾಸೆಗೆ ಬಲಿಯಾಗಿ ತಮ್ಮೆಲ್ಲವನ್ನೂ ಕಳೆದುಕೊಳ್ಳಲಿದ್ದ ದೇವನಹಳ್ಳಿಯ ರೈತರು ಎಚ್ಚರಗೊಂಡು, ದೀರ್ಘಕಾಲ ಪ್ರತಿಭಟಿಸಿದರು. ನಗರದ ಉತ್ತರದಲ್ಲಿ ಅವರು ನಡೆಸಿದ ಆ ದೊಡ್ಡ ಸತ್ಯಾಗ್ರಹದ ಕಾವು ಆರುವುದಕ್ಕೆ ಮೊದಲೇ, ಇದೀಗ- ಎರಡನೆಯ ಬಾರಿಗೆ- ಊರಿನ ದಕ್ಷಿಣ ಭಾಗದಲ್ಲಿರುವ ಬಿಡದಿಯ ಜನ, ನೆಲ, ಜಲಗಳಿಗೂ ದೊಡ್ಡ ಕುತ್ತು ಒದಗಿಬಂದಿದೆ.

ಇದನ್ನು ಓದಿದ್ದೀರಾ?: ಅಧಿಕಾರಸ್ಥರ ಅತಿಯಾಸೆಗೆ ಬಿಡದಿ ರೈತರು ಬಲಿಯಾಗಬೇಕೇ?

ಆದರೂ, ‘ಆವತ್ತು ಸುಬ್ಬಣ್ಣನವರು ಬರೆದದ್ದು ವಿದೇಶೀಯರು ಇಲ್ಲಿ ಸ್ಥಾಪಿಸಲು ಹೊರಟಿದ್ದ ವಸಾಹತಿನ ಬಗ್ಗೆ. ಈವತ್ತು ಆಗಲು ಹೊರಟಿರುವುದು ಸ್ವದೇಶೀ ಆದದ್ದು, ಸ್ವದೇಶದ ಅಭಿವೃದ್ಧಿಗೆ ಇಂಬುಕೊಡುವಂಥದು’ ಎಂಬ ಸಮಜಾಯಿಷಿ ಬಂದೀತು. ಆದರೆ ಅದೆಲ್ಲ ರಿಯಲ್ ಎಸ್ಟೇಟ್ ದಂಧೆ ನಡೆಸುವವರ ಕಾಕಪೋಕತನದ ಮಾತಾಗಿರುತ್ತದೆ, ಅಷ್ಟೇ. ಆವತ್ತು ಆಗಲಿದ್ದುದಕ್ಕೂ, ಈವತ್ತು ಆಗುತ್ತಿರುವುದಕ್ಕೂ ದೊಡ್ಡ ವ್ಯತ್ಯಾಸವೇನೂ ಇಲ್ಲ. ಆಳುವ, ಬಂಡವಳಿಗ ವರ್ಗದ ಲಾಭಲಾಲಸೆ ಅಂದಿಗೂ ಇಂದಿಗೂ ಒಂದೇ ಆಗಿದ್ದು, ಮುಂದಿಗೂ ಹಾಗೇ ಇರುತ್ತದೆ ಅನ್ನುವುದೇ ದಿಟ.

ಯಾಕೆಂದರೆ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯದ್ದೂ ಸೇರಿದಂತೆ ಅನಾಹುತಕಾರಿಯಾದ ಹಲಹಲವು ಯೋಜನೆಗಳ ಹಂಚಿಕೆ ಶಿವಕುಮಾರ್ ಅವರದ್ದು: https://eedina.com/politics/shivkumar-and-saitans-hug/2025-06-21/. ಇದೀಗ ಅವರ ಕಣ್ಣು ಬಿಡದಿ ಪ್ರದೇಶದ ಮೇಲೆ ಬಿದ್ದಿದೆ. ಬಿಡದಿ ಟೌನ್ಶಿಪ್ ಯೋಜನೆ ಕುರಿತು ಅವರು ಮಾತನಾಡುವಾಗ, ಅದರ ಹಿಂದೆ ಇರುವುದು ಆ ಸುತ್ತಿನ ಪ್ರದೇಶದಲ್ಲಿ ಬೆಂಗಳೂರಿಗಾಗಿ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಟ್ಟುವ ಯೋಜನೆ ಅನ್ನುವುದನ್ನು ನಾವು ಮರೆಯಬಾರದು. ಅಂಥ ಒಂದು ತಾಣದ ನಿರ್ಮಾಣಕ್ಕಾಗಿ ಏನು, ಎಷ್ಟೆಲ್ಲ ಬೇಕಾಗುತ್ತದೆ, ಏನೆಲ್ಲ ನಾಶವಾಗುತ್ತದೆ ಅನ್ನುವುದನ್ನಾಗಲಿ, ಅದರಿಂದ ನಮ್ಮ ಬದುಕಿನಲ್ಲಿ ಯಾವೆಲ್ಲ ವಿಕಾರಗಳು ಎಷ್ಟೆಲ್ಲ ತಳ ಊರಿಬಿಡುತ್ತವೆ ಅನ್ನುವುದನ್ನಾಗಲಿ ಬಿಚ್ಚಿಡುವ ಅಗತ್ಯವಿಲ್ಲ ಎಂದುಕೊಂಡಿದ್ದೇನೆ.

ಶಿವಕುಮಾರ್ ಅವರು, ಮೊನ್ನೆಯಷ್ಟೇ, ರಾಜಧಾನಿಯ ಅತ್ಯಂತ ಶ್ರೀಮಂತರ ಆಡುದಾಣವಾದ ಬೆಂಗಳೂರು ಗಾಲ್ಫ್ ಕ್ಲಬ್‌ನ ನೂರೈವತ್ತನೇ ವರ್ಧಂತಿಯ ಹಬ್ಬದಲ್ಲಿ ಕ್ಲಬ್ಬಿನ ಒಬ್ಬ ಸದಸ್ಯರಾಗಿ ಪಾಲ್ಗೊಂಡು, ಆ ಕ್ಲಬ್ಬಿನವರು ಬೆಂಗಳೂರಿನಲ್ಲಿ ಇನ್ನೂ ನಾಲ್ಕೈದು ಗಾಲ್ಫ್ ಕೋರ್ಸ್‌ಗಳನ್ನು ನಿರ್ಮಿಸಬೇಕಿತ್ತು ಎನ್ನುತ್ತ, ಮುಂದಿನ ಐದು ವರ್ಷದಲ್ಲಿ ಇನ್ನೊಂದು ಕೋರ್ಸ್ ಮಾಡಿ ಎಂದು ಅಲ್ಲಿನವರನ್ನು ಹುರಿದುಂಬಿಸಿದವರು: https://www.prajavani.net/district/bengaluru-city/dk-shivakumar-bangalore-golf-club-new-course-proposal-4081472 . ಇದನ್ನು ಹಿನ್ನೆಲೆಯಲ್ಲಿಟ್ಟುಕೊಂಡು ನೋಡಿದಾಗ, ಸಿರಿವಂತರ ಈ ಅತಿ ದುಬಾರಿ ಆಟವನ್ನು ಕುರಿತಾಗಿಯೂ ಸಿರಿವಂತರ ಹಣದ ಲಾಲಸೆ ಮತ್ತು ಹೃದಯಹೀನತೆಯನ್ನು ಕುರಿತಾಗಿಯೂ ಸುಬ್ಬಣ್ಣನವರು ತಮ್ಮ ಪತ್ರದಲ್ಲಿ ಹೇಳಿರುವುದು ಇನ್ನೂ ಹೆಚ್ಚು ಮಾರ್ಮಿಕವಾಗುತ್ತದೆ.

ಇದನ್ನು ಓದಿದ್ದೀರಾ?: ಬಿಡದಿ ಟೌನ್ ಶಿಪ್ ಯೋಜನೆ ಹಿಂದೆ ರಿಯಲ್ ಎಸ್ಟೇಟ್ ವ್ಯವಹಾರದ ದಂಧೆ?

ಕೊನೆಯದಾಗಿ, ಹೇಳಲೇಬೇಕಾದ್ದು: ಜೆಡಿಎಸ್‌ನ ಕುಮಾರಸ್ವಾಮಿಯವರೂ ಬಿಜೆಪಿಯ ಮುಖಂಡರೂ ಬಿಡದಿಯ ಜನರ ಪರವಾಗಿ ದನಿ ಎತ್ತಿದಂತಿದೆಯಾದರೂ, ಅದೆಲ್ಲ ಕೇವಲ ನಟನೆ, ಬೂಟಾಟಿಕೆಯಲ್ಲದೆ ಬೇರೆಯಲ್ಲ. ಈಗ ಬಿಡದಿಯಲ್ಲಿ ಅವರು ಹೂಡಿರುವ ಹೂಟ, ಚೆಂಡನ್ನು ಬಿಲಕ್ಕೆ ಬೀಳಿಸುವ ಗಾಲ್ಫ್ ಆಟದ ಒಂದು ಬಗೆ, ನಮ್ಮ ಜೀವನದ ಒಂದಿಗಿನ ಅವರ ಎಂದಿನ ಚೆಲ್ಲಾಟ, ಅಷ್ಟೆ. ಬಿಡದಿಯ ಜನರು ಈ ಸತ್ಯವನ್ನು ಮರೆಯಬಾರದು, ನಾಡಿನ ನಾವು ಯಾರೂ ಈ ನಕಲಿ ಜನರ ಆಟಕ್ಕೆ ಬೇಸ್ತುಬೀಳಬಾರದು. ಅಲ್ಲಿನ ರೈತಮಕ್ಕಳ ಹೋರಾಟ ಸ್ಪಷ್ಟ, ಸ್ವತಂತ್ರವಾದ ದಾರಿಯನ್ನು ಹಿಡಿಯಬೇಕು.

ಸುಬ್ಬಣ್ಣನವರ ಈ ಪತ್ರ, ಆಮೇಲೆ, ಕೆ.ವಿ. ಸುಬ್ಬಣ್ಣ ಅವರ ಆಯ್ದ ಬರಹಗಳು (ಪ್ರ: ಕನ್ನಡ ವಿಶ್ವವಿದ್ಯಾಲಯ, 1992) ಸಂಕಲನದಲ್ಲಿಯೂ, ಅವರ ಅರೆ ಶತಮಾನದ ಅಲೆ ಬರಹಗಳು (ಪ್ರ: ಅಕ್ಷರ ಪ್ರಕಾಶನ, 2004 ಮತ್ತು 2011) ಎಂಬ ಸಮಗ್ರ ಬಿಡಿಬರಹಗಳ ಸಂಪುಟದಲ್ಲಿಯೂ ಪ್ರಕಟವಾಗಿದೆ. ಎರಡೂ ಪುಸ್ತಕಗಳ ಸಂಪಾದನೆ: ಟಿ. ಪಿ. ಅಶೋಕ.

ಬಿಡದಿ ಟೌನ್ ಶಿಪ್

ಜಾಪಾನಿ ವಸಾಹತು: ಒಂದು ಪತ್ರ
ಮಾನ್ಯರೇ,
ಎರಡು ವಾರಗಳ ಹಿಂದೆ ಒಂದು ಸುದ್ದಿಯು ಎಲ್ಲ ಪತ್ರಿಕೆಗಳಲ್ಲೂ ಪ್ರಮುಖವಾಗಿ ಪ್ರಕಟವಾಯಿತು. ಅದಕ್ಕೆ ಪ್ರತಿಕ್ರಿಯೆ ಬಂದೀತು ಅಂತ ಕಾದು, ಬಾರದೆ ಆಶ್ಚರ್ಯವಾಗಿ ಬರೆಯುತ್ತಿದ್ದೇನೆ.

ಸುದ್ದಿಯ (ನವದೆಹಲಿ- ಜೂನ್ 18, 1992) ಸಾರಾಂಶ ಇದು: ಬೆಂಗಳೂರಿಂದ ನೂರು ಕಿ.ಮೀ. ಒಳವೃತ್ತದಲ್ಲಿ, ಬಹುಶಃ ಸಾತನೂರು ಅಥವಾ ಬಿಡದಿ ಸಮೀಪ, ಜಪಾನ್ ತನ್ನದೇ ಆದ ಒಂದು ಉದ್ಯಮನಗರಿಯನ್ನು ನಿರ್ಮಿಸಿಕೊಳ್ಳಲು ಆಸಕ್ತವಾಗಿದೆ ಮತ್ತು ಕರ್ನಾಟಕ ಸರ್ಕಾರವು ಒಳಬರುವ ಭಾರೀ ಪ್ರಮಾಣದ ಬಂಡವಾಳವನ್ನು ಗಣಿಸಿ ಈ ಯೋಜನೆಯನ್ನು ಅತ್ಯುತ್ಸಾಹದಿಂದ ಸ್ವಾಗತಿಸಿದೆ. ಅಲ್ಲಿ ಸುಮಾರು 30 ಜಾಪಾನಿ ಉದ್ಯಮಗಳು ಬಂದು ನೆಲೆಸುತ್ತವೆ. ತಮಗೆ ಅನುಕೂಲವಾಗುವ ರೀತಿಯಲ್ಲಿ ಅಲ್ಲಿ ಅವರೇ ವಸತಿ ವಿಸ್ತರಣೆ, ಶಾಲೆ, ಆಸ್ಪತ್ರೆ, ಅಂಗಡಿಗಳು, ಹೋಟೆಲ್‌ಗಳು ಮುಂತಾದವುಗಳನ್ನು ಯೋಜಿಸಿ ನಿರ್ಮಿಸಿಕೊಳ್ಳುತ್ತಾರೆ. ಮತ್ತು ಜಾಪಾನೀ ಉದ್ಯಮ ಉಸ್ತುವಾರಿಗರಿಗೆ ಗಾಲ್ಫ್ ಕ್ರೀಡೆ ಬಹುಪ್ರಿಯವಾದ್ದಾದ ಕಾರಣ ಅಲ್ಲಿ ಒಂದು ದೊಡ್ಡ ಗಾಲ್ಫ್ ಮೈದಾನವನ್ನೂ ನಿರ್ಮಿಸಲಾಗುತ್ತದೆ. ಇದು ಸುದ್ದಿ.

ಈಚಿನ ದಿನಗಳಲ್ಲಿ ಭಾರತ ಸರ್ಕಾರವು ‘ಆರ್ಥಿಕ ಸುಧಾರಣೆ’ಗೆಂದು ಇಡೀ ಪ್ರಪಂಚವನ್ನೇ ಹಲ್ಲುಗಿಂಜಿ ಸ್ವಾಗತಿಸುತ್ತಿರುವುದರ ಹಿನ್ನೆಲೆಯಲ್ಲಿ ಮತ್ತು ಮೊನ್ನೆ ತಾನೇ ನಮ್ಮ ಪ್ರಧಾನಿ ಜಪಾನಿಗೆ ಖುದ್ದಾಗಿ ಹೋಗಿ ಅವರ ಎದುರು ಸೆಲ್ಲೆಯ ಸೆರಗು ಹಾಸಿಬಂದಿರುವ ಹಿನ್ನೆಲೆಯಲ್ಲಿ ಮೇಲಿನ ಯೋಜನೆ ಕಾರ್ಯಗತವಾಗುವುದು ತಡವಾಗಲಿಕ್ಕಿಲ್ಲ.

ತಮಿಳರು, ಆಂಧ್ರರು, ಕೇರಳೀಯರು, ಮಹಾರಾಷ್ಟ್ರೀಯರು, ಮಾರವಾಡಿಗಳು ಮುಂತಾಗಿ ಹೊರಗಿನ ಜನ ನಮ್ಮಲ್ಲಿ ಬಂದು ಆಕ್ರಮಿಸುತ್ತಾರೆ ಎನ್ನುವ ಕಾರಣಕ್ಕೆ ತಟ್ಟನೆ ಕೆಂಡವಾಗಿ ಉರಿದು ಸ್ಫೋಟಿಸುವ ನಮ್ಮ ಕನ್ನಡದ ಛಲವಂತ ವ್ಯಕ್ತಿ-ಸಂಸ್ಥೆಗಳಿಗೆ ಅಥವಾ ಕಡೆಯ ಪಕ್ಷ ‘ಬೆಂಗಳೂರನ್ನುಳಿಸಿ-ಬಂಟ’ರಿಗೆ ಈ ಜಾಪಾನೀ ವಸತಿಯ ಸುದ್ದಿ ಸುದ್ದಿಯಾಗಿಯೇ ಕಾಣಲಿಲ್ಲವಲ್ಲ ಎನ್ನುವುದು ದೊಡ್ಡ ಆಶ್ಚರ್ಯ. ಹಾಗೆ ನೋಡಿದರೆ, ಕಾವೇರಿ ನೀರಿನ ಸಮಸ್ಯೆ ಸಾಹಿತ್ಯಕ್ಕೆ ನೇರ ಸಂಬಂಧಿಸಿದ್ದಲ್ಲ. ಆದರೆ ನಮ್ಮ ಸಾಹಿತ್ಯ ಪರಿಷತ್ತು ಅದನ್ನು ಗಂಭೀರವೆಂದು ಪರಿಗಣಿಸಿ ನಿರ್ಣಯ ಕೈಗೊಂಡಿತು. ಮೇಲಿನ ಸುದ್ದಿ ಮಾತ್ರ, ಕನ್ನಡ ಪತ್ರಿಕೆಗಳಲ್ಲಿ ಕನ್ನಡದಲ್ಲೇ ಪ್ರಕಟವಾಗಿದ್ದರೂ ಕೂಡ, ಪರಿಷತ್ತನ್ನು ತಾಕಲೇ ಇಲ್ಲ.

ಪಕ್ಕದ ಪ್ರಾಂತ್ಯದ ಜನ ಬಂದು ಒಳನುಸುಳಿಕೊಳ್ಳುವುದಕ್ಕೂ ಈಗ ಈ ಜಾಪಾನೀ ಜನ ರಾಜಾರೋಷವಾಗಿ ಇಲ್ಲಿ ಬಂದು ನೆಲೆಸುವುದಕ್ಕೂ ಇರುವ ವ್ಯತ್ಯಾಸಗಳನ್ನು ಗಮನಿಸಬೇಕು. ಇವರು ತಮ್ಮ ಸರ್ಕಾರದ ಅಧಿಕೃತ ರಕ್ಷಣೆಯೊಡನೆ ಬರುತ್ತಾರೆ; ಇಲ್ಲಿ ನಮ್ಮ ಮಧ್ಯೆ ತಮ್ಮದೇ ಪುಟ್ಟ ಜಪಾನ್ ನಿರ್ಮಿಸಿಕೊಳ್ಳುತ್ತಾರೆ: ಬೆಂಗಳೂರಿನ ಜನ ನೀರಿಲ್ಲದೆ ಬವಣೆ ಪಡಲಿ, ಅಸಂಖ್ಯಾತ ದರಿದ್ರರು ಸ್ಲಂಗಳಲ್ಲಿ ಸತ್ತುಕೊಳ್ಳುತ್ತಿರಲಿ, ಇವರು ತಮ್ಮ ಪಾಡಿಗೆ ತಾವು ಗಾಲ್ಫ್ ಆಡಿಕೊಂಡಿರುತ್ತಾರೆ. ನಮ್ಮ ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ ವ್ಯವಸ್ಥೆಗಳನ್ನು ಧಿಕ್ಕರಿಸಿ ಸದಾ ನಮ್ಮಿಂದ ಬೇರೆಯಾಗಿ ಬದುಕುತ್ತಾರೆ. ಇಂಥ ಜನ ನಮ್ಮನ್ನು ಯಾವ ಮನೋಭಾವದಿಂದ ಕಾಣಲು ಸಾಧ್ಯ?

ಕೆಲವು ಟಿಬೆಟನ್ನರಿಗೆ ಇಂಡಿಯಾ ಆಶ್ರಯ ಕಲ್ಪಿಸಿಕೊಟ್ಟಿತು. ಕರ್ನಾಟಕದಲ್ಲೂ ಅವರ ಕಾಲೊನಿಗಳಿವೆ. ನಾವು ಯೋಜಿಸಿ ನಿರ್ಮಿಸಿಕೊಟ್ಟ ಕಾಲೊನಿಗಳಲ್ಲಿ ಬಂದು ನೆಲೆಸಿದ ಆ ಜನ ಕಳೆದ 2-3 ದಶಕಗಳಲ್ಲಿ ಬಹುಮಟ್ಟಿಗೆ ನಮ್ಮವರೇ ಆಗಿದ್ದಾರೆ. ‘ಜಾಪಾನೀ ವಸತಿ’ಗೂ ಇದಕ್ಕೂ ಇರುವ ವ್ಯತ್ಯಾಸವನ್ನು ಕೂಡ ಗಮನಿಸಬೇಕು.

ಜಾಪಾನಿಗಳು ದೊಡ್ಡ ಬಂಡವಾಳ ಹೊತ್ತು ತಂದು ಇಲ್ಲಿ ಸುರಿಯುತ್ತಾರೆ, ನಿಜ. ಆದರೆ, ಆ ಬಂಡವಾಳ ನಮ್ಮನ್ನು ಹೀರಿ ನಫೆಯನ್ನು ನೇರ ಜಪಾನಿಗೆ ರವಾನಿಸುತ್ತದೆ. ಅದಕ್ಕಿಂತ ಹೆಚ್ಚಾಗಿ, ನಮ್ಮವರು ಅವರ ತಾಂತ್ರಿಕತೆಯ ಗುಲಾಮರಾಗುತ್ತಾರೆ, ಸ್ವಾತಂತ್ರ್ಯಹೀನರಾಗುತ್ತಾರೆ.

ತಡವಾಯ್ತು, ಸರಿ. ಈಗಲಾದರೂ ನಾವು ಎಚ್ಚತ್ತುಕೊಂಡೇವೆಯೆ? ಈಚೆಗೆ ಬಹಳ ಪ್ರಚಾರಕ್ಕೆ ಬಂದಿರುವ ‘ಕನ್ನಡ ಸ್ವಾಭಿಮಾನ’ ಎಂಬ ಮಾತಿಗೆ ಅರ್ಥ ಕಂಡುಕೊಳ್ಳಲು ನಾನು ಕಾತರನಾಗಿದ್ದೇನೆ.

-ಕೆ.ವಿ. ಸುಬ್ಬಣ್ಣ, 1992

WhatsApp Image 2023 05 29 at 7.32.13 PM
ರಘುನಂದನ
+ posts

ಕವಿ, ನಾಟಕಕಾರ, ರಂಗನಿರ್ದೇಶಕ

ಪೋಸ್ಟ್ ಹಂಚಿಕೊಳ್ಳಿ:

ರಘುನಂದನ
ರಘುನಂದನ
ಕವಿ, ನಾಟಕಕಾರ, ರಂಗನಿರ್ದೇಶಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಇಸಿ ಗ್ಯಾನೇಶ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ: ಅನುಮತಿ ನಿರಾಕರಣೆ; ಜಂತರ್ ಮಂತರ್‌ನಲ್ಲಿ ಬಿಗಿ ಭದ್ರತೆ

ಮುಖ್ಯ ಚುನಾವಣೆ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ...

ಸ್ಮರಣೆ | ʼಗಾಂಧಿ ನೀ ನಮ್ಮೆಲ್ಲರೊಳಗೂ ಇರುವೆʼ

ಗಾಂಧಿ ನಿನ್ನ ಚಾಳೀಸಿನೊಳಗೆ ತೂರಿಕೊಂಡ ಸ್ವಚ್ಚ ಭಾರತವಿನ್ನೂ ಚರಂಡಿಯಲ್ಲಿ ಹೊರಳಾಡುತ್ತಿದೆ. ಕಪ್ಪು...

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌: ಯಾಕೀ ವಿವಾದ?

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ....

ಪೈಲಟ್ ಗಾಯಗೊಂಡ ನಂತರ ʼಫ್ಲೈದುಬೈʼ ವಿಮಾನ ನಡೆಸಿದವರು ಯಾರು? ವಿಮಾನದ ಕಾಕ್‌ಪಿಟ್‌ ಹೇಗಿರುತ್ತದೆ ಬಲ್ಲಿರಾ?

ಬುಧವಾರ ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹಾರಾಟದಲ್ಲಿದ್ದ FZ1073 ವಿಮಾನದಲ್ಲಿ ನಡೆದ...