ಸೌದಿ ಅರೇಬಿಯಾದ ಮರಣದಂಡನೆ ಪ್ರಕರಣದಿಂದ ಚಿಂತನೆಗೆ ಹಚ್ಚುವ ಸಂಗತಿ ಎಂದರೆ, ಧಾರ್ಮಿಕ ಪಾವಿತ್ರ್ಯತೆಯ ಜತೆಗೆ ಮಾನವ ಜೀವದ ಪಾವಿತ್ರ್ಯವೂ ದೊಡ್ಡದು. ಯಾವುದೇ ಧರ್ಮದ ನಾಗರಿಕತೆಯ ಶ್ರೇಷ್ಠತೆಯನ್ನು ನಿರ್ಧರಿಸುವುದು ಅದು ಎಷ್ಟು ಕಠಿಣವಾಗಿ ಶಿಕ್ಷಿಸುತ್ತದೆ ಎಂಬುದರಿಂದಲ್ಲ, ಅದು ಎಷ್ಟು ನ್ಯಾಯಯುತವಾಗಿ ನಡೆದುಕೊಳ್ಳುತ್ತದೆ, ಎಷ್ಟು ಜೀವಗಳನ್ನು ರಕ್ಷಿಸುತ್ತದೆ, ಎಷ್ಟು ಮಾನವೀಯತೆಯನ್ನು ಉಳಿಸಿಕೊಳ್ಳುತ್ತದೆ ಎಂಬುದರಿಂದ. ಮಾನವ ʼಧರ್ಮʼವೆಂದರೆ ಇದೇ.
ಯಾವುದೇ ನಾಗರಿಕ ಸಮಾಜದಲ್ಲಿ ಧಾರ್ಮಿಕ ಶ್ರದ್ಧಾಕೇಂದ್ರಗಳು, ಪವಿತ್ರ ಸ್ಥಳಗಳು ಮತ್ತು ಆಯಾ ಸಮುದಾಯಗಳ ಭಾವನೆಗಳನ್ನು ಗೌರವಿಸುವುದು ಪ್ರತಿಯೊಬ್ಬರ ನೈತಿಕ ಹೊಣೆಗಾರಿಕೆ. ಮಸೀದಿ, ದೇವಾಲಯ ಅಥವಾ ಚರ್ಚ್‌ಗಳ ಪಾವಿತ್ರ್ಯವನ್ನು ಕಾಪಾಡುವುದು ಸಾರ್ವಜನಿಕ ನೈತಿಕತೆಯ ಭಾಗ ಎಂಬುದರಲ್ಲಿ ಎರಡನೇ ಮಾತಿಲ್ಲ. ಆದರೆ, ಪಾವಿತ್ರ್ಯಕ್ಕೆ ಧಕ್ಕೆ ತಂದಿದ್ದಾರೆ ಅಥವಾ ನಿಯಮ ಉಲ್ಲಂಘಿಸಿದ್ದಾರೆ ಎಂಬ ಕಾರಣ ನೀಡಿ ವ್ಯಕ್ತಿಯೊಬ್ಬನ ‘ಜೀವಿಸುವ ಮೂಲಭೂತ ಹಕ್ಕʼನ್ನೇ ಕಸಿದುಕೊಳ್ಳುವುದು ಎಷ್ಟರಮಟ್ಟಿಗೆ ಸಮರ್ಥನೀಯ ಎಂಬುದನ್ನು ಮಾನವ ಹಕ್ಕುಗಳು ಹಾಗೂ ಮಾನವೀಯ ನೆಲೆಗಟ್ಟಿನಲ್ಲಿ ಗಂಭೀರವಾಗಿ ಚಿಂತಿಸಬೇಕಿರುವ ಕ್ಷಣ ಇದು.
ಸೌದಿ ಅರೇಬಿಯಾದಲ್ಲಿ ಇತ್ತೀಚೆಗೆ ಬಾಂಗ್ಲಾದೇಶ ಮೂಲದ ಇಬ್ಬರು ವಲಸೆ ಕಾರ್ಮಿಕರಿಗೆ ಮರಣದಂಡನೆ ವಿಧಿಸಲಾಗಿದೆ. ಜಗತ್ತಿನಾದ್ಯಂತ ಸೌದಿಯ ನಡೆಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಈ ಪ್ರಕರಣದ ಸುತ್ತ ಮಾಧ್ಯಮಗಳಲ್ಲಿ ವಿಭಿನ್ನ ರೀತಿಯ ವರದಿಗಳೂ ಹರಿದಾಡುತ್ತಿವೆ. ಒಂದು ವರ್ಗ ಇದನ್ನು ಅನೈತಿಕ ಕೃತ್ಯಕ್ಕೆ ಸಿಕ್ಕ ಶಿಕ್ಷೆ ಎಂದರೆ, ಮತ್ತೊಂದು ವರ್ಗ ಕಳೆದ ಎರಡು-ಮೂರು ವರ್ಷಗಳಿಂದ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಅಪರಾಧ ಸಾಬೀತಾದ ಮೇಲೆಯೇ ಅಲ್ಲಿನ ಕಾನೂನಿನಂತೆ ಶಿಕ್ಷೆ ಜಾರಿಯಾಗಿದೆ ಎನ್ನುತ್ತಿದೆ. ಸೌದಿ ಸರ್ಕಾರದಿಂದ ಈ ಕುರಿತು ಇನ್ನು ಅಧಿಕೃತ ಸ್ಪಷ್ಟನೆ ಹೊರಬಿದ್ದಿಲ್ಲವಾದರೂ, ಅದು ಮರಣದಂಡನೆ ವಿಧಿಸಬಹುದಾದ ಅಪರಾಧವಂತೂ ಅಲ್ಲ. ಸೌದಿ ಪ್ರಜೆಗಳು ಎಸಗಿದ ಅಪರಾಧ ಏನೇ ಇರಲಿ, ಮರಣದಂಡನೆಯಂತಹ ಕಠೋರ ಶಿಕ್ಷೆ ಸಮರ್ಥನೀಯವಲ್ಲ.
ಅಂತಾರಾಷ್ಟ್ರೀಯ ಕಾನೂನಿನಲ್ಲಿ ‘ಸಾರ್ವಭೌಮತ್ವದ ಸಿದ್ಧಾಂತ’ದ ಪ್ರಕಾರ, ದೇಶವೊಂದು ತನ್ನ ಭೌಗೋಳಿಕ ಎಲ್ಲೆಯೊಳಗೆ ನಡೆಯುವ ಅಪರಾಧಗಳಿಗೆ ಸಂಬಂಧಿಸಿದಂತೆ ವಿದೇಶಿ ಪ್ರಜೆಗಳನ್ನು ಒಳಗೊಂಡಂತೆ ಎಲ್ಲರ ಮೇಲೆಯೂ ತನ್ನ ಕಾನೂನುಗಳನ್ನೇ ಅನ್ವಯಿಸುವ ಮತ್ತು ಶಿಕ್ಷೆ ವಿಧಿಸುವ ಸಂಪೂರ್ಣ ಅಧಿಕಾರವನ್ನು ಹೊಂದಿರುತ್ತದೆ. ಜತೆಗೆ ಈ ಅಧಿಕಾರವು ಮಾನವ ಹಕ್ಕುಗಳ ಒಪ್ಪಂದಗಳ ಕಟ್ಟುನಿಟ್ಟಿನ ನಿಯಮಗಳಿಗೆ ಒಳಪಟ್ಟಿರುತ್ತದೆ. ‘ವಿಯೆನ್ನಾ ಕಾನ್ಸುಲರ್ ಒಪ್ಪಂದ- Article 36’ದ ಪ್ರಕಾರ, ಯಾವುದೇ ದೇಶವು ವಿದೇಶಿ ಪ್ರಜೆಯನ್ನು ಬಂಧಿಸಿದಾಗ ಅಥವಾ ಅವರಿಗೆ ಗಂಭೀರ ಶಿಕ್ಷೆ ವಿಧಿಸುವ ಮುನ್ನ ಆತನ ದೇಶದ ರಾಯಭಾರ ಕಚೇರಿಗೆ ತಕ್ಷಣ ಮಾಹಿತಿ ನೀಡಬೇಕು ಮತ್ತು ಆರೋಪಿಗೆ ಅಗತ್ಯ ಕಾನೂನು ನೆರವು ಹಾಗೂ ಭಾಷಾ ನೆರವು ಸಿಗುವಂತೆ ನೋಡಿಕೊಳ್ಳುವುದು ಕಡ್ಡಾಯ. ಜೊತೆಗೆ, ವಿಶ್ವಸಂಸ್ಥೆಯ ‘ಸಿವಿಲ್ ಮತ್ತು ರಾಜಕೀಯ ಹಕ್ಕುಗಳ ಅಂತಾರಾಷ್ಟ್ರೀಯ ಒಪ್ಪಂದ’ ಪ್ರಕಾರ, ಅತ್ಯಂತ ಭೀಕರ ಹಾಗೂ ಯೋಜಿತ ಕೊಲೆಯಂತಹ ‘ಹಿಂಸಾತ್ಮಕ ಅಪರಾಧಗಳಿಗೆ’ ಮಾತ್ರವೇ ಮರಣದಂಡನೆಯನ್ನು ಸೀಮಿತಗೊಳಿಸಬೇಕು. ಧಾರ್ಮಿಕ ಆಚರಣೆಯ ಉಲ್ಲಂಘನೆ, ನೈತಿಕ ಅಪರಾಧಗಳು ಅಥವಾ ಅಹಿಂಸಾತ್ಮಕ ಕೃತ್ಯಗಳಿಗೆ ವಿದೇಶಿಯರ ಮೇಲೆ ಮರಣದಂಡನೆ ವಿಧಿಸುವುದು ‘ಸಾರ್ವತ್ರಿಕ ಮಾನವ ಹಕ್ಕುಗಳ’ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಅಂತಾರಾಷ್ಟ್ರೀಯ ನ್ಯಾಯಾಲಯಗಳ ತೀರ್ಪುಗಳ ಪ್ರಕಾರ, ವಿದೇಶಿ ಪ್ರಜೆಗಳಿಗೆ ನ್ಯಾಯಯುತ ವಿಚಾರಣೆಯ ಹಕ್ಕು ನಿರಾಕರಿಸಿ ಅಥವಾ ರಾಯಭಾರ ಕಚೇರಿಯ ಸಂಪರ್ಕ ನೀಡದೆ ವಿಧಿಸುವ ಮರಣದಂಡನೆಯು ಅಂತಾರಾಷ್ಟ್ರೀಯ ಕಾನೂನಿನಡಿಯಲ್ಲಿ ಕಾನೂನುಬಾಹಿರ ಕೃತ್ಯವೆಂದೇ ಪರಿಗಣಿಸಲ್ಪಡುತ್ತದೆ. ಸೌದಿಯ ಶರಿಯಾ ಕಾನೂನು ಹೇಳುವುದು ಇದನ್ನೇ.
ಗುಜರಾತಿನ ಗೋಧ್ರಾ ಹತ್ಯಾಕಾಂಡವನ್ನು ಖಂಡಿಸುತ್ತಾ ಖ್ಯಾತ ಸಾಹಿತಿ ಪೂಚಂತೇ, ʼಕೊಂದು ಉಳಿಸಿಕೊಳ್ಳುವ ಧರ್ಮ ಯಾವುದಾದರೂ ಇದೆಯಾ ಈ ಪ್ರಪಂಚದಲ್ಲಿ?ʼ ಎಂದಿದ್ದರು. ಸೌದಿಯ ನಿರ್ಧಾರದ ವಿರುದ್ಧ ಜಾಗತಿಕವಾಗಿ ಆಕ್ರೋಶ ವ್ಯಕ್ತವಾಗುತ್ತಿರುವುದು ಒಳ್ಳೆಯ ಬೆಳವಣಿಗೆ, ನಮ್ಮಲ್ಲಿನ್ನೂ ಕೊಂಚ ಮಾನವೀಯತೆ ಉಳಿದಿದೆ! ಆದರೆ, ವಿದೇಶದ ಧಾರ್ಮಿಕ ಶಿಕ್ಷೆಯ ವಿರುದ್ಧ ಮಾನವೀಯತೆ ಮೆರೆಯುವ ನಾವು, ನಮ್ಮದೇ ದೇಶದ ಒಳಗಿನ ಹುಳುಕುಗಳನ್ನು ಸರಿ ಮಾಡಿಕೊಳ್ಳುವುದೂ ಅಗತ್ಯ. ವಯಸ್ಸಿನ ಮಿತಿ ಇಲ್ಲದೆ, ಧರ್ಮ ಭೇದವಿಲ್ಲದೆ ದೇವಾಲಯ, ಚರ್ಚ್, ಮಸೀದಿಗಳ ಅಂಗಳದಲ್ಲೇ ಅಮಾಯಕ ಹೆಣ್ಣುಮಕ್ಕಳ ಮೇಲೆ ಭೀಕರ ಅತ್ಯಾಚಾರ ಎಸಗಿ ಕೊಲೆಗೈದಾಗ, ಆ ಅತ್ಯಾಚಾರಿಗಳ ಪರವಾಗಿ ಮೆರವಣಿಗೆ ನಡೆಸಿ ಹೋರಾಟ ರೂಪಿಸುವ ವಿಕೃತ ‘ಕ್ರಿಮಿಗಳು’ ನಮ್ಮ ನಡುವೆಯೂ ಇದ್ದಾರೆ. ಸೌದಿಯ ಶಾಸನಕ್ಕೂ, ಅತ್ಯಾಚಾರಿಗಳನ್ನು ರಕ್ಷಿಸಲು ನಿಲ್ಲುವ ಈ ವಿಕೃತ ಮನಸ್ಥಿತಿಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ಎರಡೂ ಮಾನವೀಯತೆಯ ಶವದ ಮೇಲೆ ನಿಂತಿರುವ ಬೂಟಾಟಿಕೆಗಳೇ.
ಮತ್ತೊಂದೆಡೆ, ಸೌದಿಯ ತೀರ್ಪನ್ನು ಖಂಡಿಸುತ್ತಾ ಮಾನವ ಹಕ್ಕುಗಳ ಪಾಠ ಹೇಳುವವರಲ್ಲೇ ಹಲವರು, ಇದೇ ನೆಲದಲ್ಲಿ ದಲಿತರು, ಶೋಷಿತರು ದೇವಾಲಯ ಪ್ರವೇಶಿಸಿದಾಗ ಅವರ ಮೇಲೆ ದೈಹಿಕ ಹಲ್ಲೆ ನಡೆಸಿ ಸಮಾಜದಿಂದ ಬಹಿಷ್ಕರಿಸುವ ಅಮಾನವೀಯ ಆಚರಣೆಗಳನ್ನು ಪೋಷಿಸುತ್ತಿದ್ದಾರೆ. ಸ್ವಂತ ನಾಡಿನ ಸಹೋದರನಿಗೆ ಸಮಾನತೆಯ ಹಕ್ಕನ್ನು ನಿರಾಕರಿಸುವವರು, ವಿದೇಶದ ಮಾನವ ಹಕ್ಕುಗಳ ಕುರಿತು ಮಾತನಾಡುವುದು ವಿಪರ್ಯಾಸ. ಮಾನವೀಯತೆಯ ಲವಲೇಶವಾದರೂ ಉಳಿದಿರುವ ಯಾವುದೇ ನಾಗರಿಕ ನೆಲದಲ್ಲಿ ಸೌದಿಯ ಕಠೋರ ತೀರ್ಪು ಖಂಡನೀಯವೇ. ಆದರೆ ಆ ಖಂಡನೆ ನಿಷ್ಪಕ್ಷಪಾತವಾಗಿರಬೇಕಾದರೆ, ನಮ್ಮ ಮನೆಯೊಳಗಿನ ಅಪರಾಧಗಳು ಮತ್ತು ಜಾತಿವಾದಿ ಅನ್ಯಾಯಗಳ ವಿರುದ್ಧವೂ ಅದೇ ಮಟ್ಟದ ನೈತಿಕತೆ ಜಾಗೃತಗೊಳ್ಳಬೇಕು.
ಅಂತೆಯೇ, ಅಫ್ಘಾನಿಸ್ತಾನದಂತಹ ಪ್ರದೇಶಗಳಲ್ಲಿ ಭೂಕಂಪ ಸಂಭವಿಸಿದಾಗ ಅವಶೇಷಗಳಡಿಯಲ್ಲಿ ಸಿಲುಕಿದ ಮಹಿಳೆಯರನ್ನು ಧಾರ್ಮಿಕ ಕಟ್ಟುಪಾಡುಗಳ ಹೆಸರಿನಲ್ಲಿ ರಕ್ಷಿಸಲು ಹಿಂಜರಿಯಲಾಯಿತು ಎಂಬುದು ಆಘಾತಕಾರಿ ಸಂಗತಿ! ಒಂದು ಜೀವ ಅಪಾಯದಲ್ಲಿದ್ದಾಗ ಆ ಜೀವವನ್ನು ರಕ್ಷಿಸುವುದು ಮೊದಲ ಮಾನವೀಯ ಕರ್ತವ್ಯ. ಮನುಷ್ಯ ಜೀವವನ್ನು ಉಳಿಸುವುದಕ್ಕಿಂತ ಬೇರೆ ಯಾವ ಸಂಪ್ರದಾಯವನ್ನೂ ಯಾವ ಧರ್ಮವೂ ಭೋದಿಸುವುದಿಲ್ಲ. ಅಂತಾರಾಷ್ಟ್ರೀಯ ಕಾನೂನು ಮತ್ತು ಮಾನವ ಹಕ್ಕುಗಳ ತತ್ತ್ವಶಾಸ್ತ್ರದಲ್ಲಿ ‘ಅಪರಾಧಕ್ಕೆ ತಕ್ಕ ಶಿಕ್ಷೆ’ʼ ಎಂಬ ಸೂತ್ರವಿದೆ. ಧಾರ್ಮಿಕ ಭಾವನೆಗೆ ಧಕ್ಕೆ ತಂದ ಪ್ರಕರಣಗಳಲ್ಲಿ ದಂಡ, ಜೈಲು ಶಿಕ್ಷೆ ಅಥವಾ ಸುಧಾರಣಾತ್ಮಕ ತಿದ್ದುಪಡಿ ಕ್ರಮಗಳನ್ನು ಕೈಗೊಳ್ಳಲು ಅವಕಾಶವಿರುತ್ತದೆ. ಅದನ್ನು ಬಿಟ್ಟು ಮರಣದಂಡನೆಯಂತಹ ಅಂತಿಮ ಶಿಕ್ಷೆ ವಿಧಿಸುವುದು ಮಾನವೀಯ ನೈತಿಕತೆಗೆ ಎಸಗುವ ಅನ್ಯಾಯ.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಎದ್ದು ನಿಂತ ಯುವಜನತೆ, ಹೊಸ ಬೆಳವಣಿಗೆಯತ್ತ ಭಾರತ
ಕ್ಷಮೆ, ಕರುಣೆ, ನ್ಯಾಯ, ಬಡವರ ಬಗ್ಗೆ ಕಾಳಜಿ ಮತ್ತು ಮಾನವ ಘನತೆಯಂತಹ ಮೌಲ್ಯಗಳನ್ನು ಸಾರಿದ್ದರು ಪ್ರವಾದಿ ಮೊಹಮ್ಮದ್. ತಪ್ಪು ಮಾಡಿದವರನ್ನು ತಿದ್ದುವುದು, ತಿದ್ದಿಕೊಳ್ಳಲು ಅವಕಾಶ ನೀಡುವುದು, ಅನ್ಯಾಯವನ್ನು ವಿರೋಧಿಸುವುದು ಮತ್ತು ದುರ್ಬಲರ ಪರವಾಗಿ ನಿಲ್ಲುವುದು ಅವರ ಬೋಧನೆಗಳ ಪ್ರಮುಖ ಭಾಗಗಳಾಗಿದ್ದವು. ಪ್ರವಾದಿಯವರ ಈ ಮಾನವೀಯ ಸಂದೇಶಗಳನ್ನು ಅರ್ಥಮಾಡಿಕೊಳ್ಳುವುದಕ್ಕೂ, ಧರ್ಮದ ಹೆಸರಿನಲ್ಲಿ ವಿಶೇಷವಾಗಿ ಇಸ್ಲಾಂ ರಾಷ್ಟ್ರಗಳಲ್ಲಿ ರೂಪುಗೊಂಡಿರುವ ಪ್ರತಿಯೊಂದು ಕಾನೂನನ್ನೂ ಪ್ರಶ್ನಾತೀತವಾಗಿ ಒಪ್ಪಿಕೊಳ್ಳುವುದಕ್ಕೂ ಬಹಳ ವ್ಯತ್ಯಾಸವಿದೆ. ಧಾರ್ಮಿಕ ಇತಿಹಾಸದಲ್ಲಿ ರೂಪುಗೊಂಡಿರುವ ಕಾನೂನುಗಳು, ಅವುಗಳ ವ್ಯಾಖ್ಯಾನಗಳು ಮತ್ತು ಅವುಗಳನ್ನು ಜಾರಿಗೊಳಿಸುವ ರಾಜಕೀಯ ವ್ಯವಸ್ಥೆಗಳನ್ನು ಪ್ರವಾದಿಯವರ ಅಸಲಿ ಬೋಧನೆಗಳೊಂದಿಗೆ ಒಂದೇ ಎಂದು ಸಮೀಕರಿಸುವುದು ಸರಿಯಲ್ಲ.
ಧಾರ್ಮಿಕ ಪಾವಿತ್ರ್ಯತೆಯ ಜತೆಗೆ ಮಾನವ ಜೀವದ ಪಾವಿತ್ರ್ಯವೂ ದೊಡ್ಡದು. ಯಾವುದೇ ಧರ್ಮದ ನಾಗರಿಕತೆಯ ಶ್ರೇಷ್ಠತೆಯನ್ನು ನಿರ್ಧರಿಸುವುದು ಅದು ಎಷ್ಟು ಕಠಿಣವಾಗಿ ಶಿಕ್ಷಿಸುತ್ತದೆ ಎಂಬುದರಿಂದಲ್ಲ, ಅದು ಎಷ್ಟು ನ್ಯಾಯಯುತವಾಗಿ ನಡೆದುಕೊಳ್ಳುತ್ತದೆ, ಎಷ್ಟು ಜೀವಗಳನ್ನು ರಕ್ಷಿಸುತ್ತದೆ, ಎಷ್ಟು ಮಾನವೀಯತೆಯನ್ನು ಉಳಿಸಿಕೊಳ್ಳುತ್ತದೆ ಎಂಬುದರಿಂದ. ಮಾನವ ʼಧರ್ಮʼವೆಂದರೆ ಇದೇ ಅಲ್ಲವೇ?





