ಶಿವಕುಮಾರ್ ಮುರುಗೇಶನ್ ಅವರ ಮೊದಲ ನಿರ್ದೇಶನದ ಚಿತ್ರ ತಾಯ್ ಕೆಳವಿ- ಪ್ರಗತಿಪರತೆ ಮತ್ತು ಸಮಾನತೆಯ ಧಾರೆಯ ಒಂದು ಮಾದರಿಯಂತೆ, ಪರಿಪೂರ್ಣ ರೂಪದಂತೆ ಭಾಸವಾಗುತ್ತದೆ. ಶೂದ್ರ ಸಂಸ್ಕೃತಿ ಮತ್ತು ಸಾಮಾಜಿಕ ಅರಿವಿಗಾಗಿ ನೋಡಬೇಕಾದ ಚಿತ್ರವಾಗಿದೆ.
ಭಾರತೀರಾಜ, ತಮಿಳು ಚಿತ್ರರಂಗವನ್ನು ಹೊಸ ದಿಕ್ಕಿಗೆ ಹೊರಳಿಸಿದ ಸೃಜನಶೀಲ ನಿರ್ದೇಶಕರು. ನಿರ್ದೇಶನದ ಜೊತೆಗೆ ನಿರ್ಮಾಪಕ, ಸಂಭಾಷಣೆಕಾರ ಮತ್ತು ನಟನಾ ಕ್ಷೇತ್ರಕ್ಕೂ ಕೈಚಾಚಿದವರು. ಮುಖ್ಯವಾಗಿ ತಮಿಳು ಚಿತ್ರರಂಗವನ್ನು ಹಳ್ಳಿಗೆ ಕರೆದುಕೊಂಡು ಹೋದವರು. ಹಲವು ಅತ್ಯುತ್ತಮ ಚಿತ್ರಗಳ ಮೂಲಕ ತಮಿಳು ಭಾಷೆಗೆ ಬೆಲೆ ತಂದವರು. ಸಾಮಾನ್ಯರನ್ನು ಸ್ಟಾರ್‍ಗಳನ್ನಾಗಿ ಮಾಡಿದವರು. ಹಾಗಾಗಿ ಇವರಿಗೆ ತಮಿಳುನಾಡಿನಲ್ಲಿ ವಿಶೇಷ ಸ್ಥಾನವಿದೆ. ಇಡೀ ಚಿತ್ರರಂಗವೇ ಅತ್ಯಂತ ಗೌರವದಿಂದ ಕಾಣುತ್ತದೆ.
ಅವರಿಗೆ ಈಗ 84ರ ಹರೆಯ. ವಯಸ್ಸಿನ ಕಾರಣಕ್ಕೆ ಆರೋಗ್ಯವೂ ಕೈ ಕೊಟ್ಟಿದೆ. ಚಿಕಿತ್ಸೆ ಪಡೆದು ಸದ್ಯ ಸುಧಾರಿಸಿಕೊಳ್ಳುತ್ತಿದ್ದಾರೆ. ಅವರ ಆರೋಗ್ಯ ವಿಚಾರಿಸಲು ಹೋದ ನಟಿ ರಾಧಿಕಾ ಶರತ್‌ಕುಮಾರ್ ಮಾತಿನ ಮಧ್ಯೆ, ‘ನನ್ನ ನಟನೆಯ ತಾಯ್ ಕೆಳವಿ ನೋಡಿದ್ರಂತೆ…’ ಎಂದರು. ‘ಹೌದು, ನಿನ್ನದು ನ್ಯಾಷನಲ್ ಅವಾರ್ಡ್‌ಗೆ ಅರ್ಹವಾದ ಅಭಿನಯ. ಚಿತ್ರ ತುಂಬಾನೇ ಚೆನ್ನಾಗಿದೆ’ ಎಂದರು. ಆಕೆ ತಕ್ಷಣ, ‘ಹಾಗೇನಾದರೂ ಆದರೆ, ಆ ಪ್ರಶಸ್ತಿಯನ್ನು ತಂದು ನಿಮ್ಮ ಕಾಲಬುಡದಲ್ಲಿಟ್ಟು ಆಶೀರ್ವಾದ ಪಡೆಯುತ್ತೇನೆ’ ಎಂದರು.
ಈ ಪುಟ್ಟ ಭೇಟಿ ಮತ್ತು ತುಣುಕು ಸಂಭಾಷಣಯ ವಿಡಿಯೋ ಈಗ ವೈರಲ್ ಆಗುತ್ತಿದೆ. ವೈರಲ್ ಆಗಲು ಕಾರಣ- ಭಾರತೀರಾಜ, ರಾಧಿಕಾ ಮತ್ತು ತಾಯ್ ಕಿಳವಿ ಚಿತ್ರ.
ಇದನ್ನು ಓದಿದ್ದೀರಾ?: ಸ್ಥಿರಚಿತ್ರಕ್ಕೆ ಚಲನೆಯ ಜೀವ: ಚಿತ್ರಕಲೆ ಮತ್ತು ಸಿನಿಮಾದ ಬೆಸುಗೆ
ತಮಿಳು ಚಿತ್ರರಂಗವು ನೈಜ ಕಥೆಗಳಿಗೆ ಮತ್ತು ಮಣ್ಣಿಗಂಟಿ ಬದುಕಿದವರ ಚಿತ್ರಗಳಿಗೆ ಹೆಸರುವಾಸಿ. ಈ ಸಾಲಿಗೆ ಸೇರುವ ಮತ್ತೊಂದು ಅರ್ಥಪೂರ್ಣ ಚಿತ್ರವೇ ‘ತಾಯ್ ಕೆಳವಿ‘. ನಿರ್ದೇಶಕ ಶಿವಕುಮಾರ್ ಮುರುಗೇಶನ್, ಈ ಚಿತ್ರದ ಮೂಲಕ ಸಮಾಜದ ಅತ್ಯಂತ ನಿರ್ಲಕ್ಷಿತ ವರ್ಗವಾದ ‘ವಯಸ್ಸಾದ ತಾಯಂದಿರ’ ಬದುಕನ್ನು ಬಿಡಿಸಿಟ್ಟಿದ್ದಾರೆ. ಕುಟುಂಬ ವ್ಯವಸ್ಥೆಯೊಳಗಿರುವ ‘ಬಳಸಿ ಬಿಸಾಡುವ’ ಮನೋಭಾವವನ್ನು ನೇರವಾಗಿ ಎದೆಗೆ ದಾಟಿಸಿದ್ದಾರೆ. ಕಟುಸತ್ಯಕ್ಕೆ ಕನ್ನಡಿ ಹಿಡಿದಿದ್ದಾರೆ. ಚಿತ್ರಕ್ಕೊಂದು ರಾಜಕೀಯ-ಸಾಮಾಜಿಕ ಆಯಾಮ ದಕ್ಕುವಂತೆ ನೋಡಿಕೊಂಡಿದ್ದಾರೆ.
ಚಿತ್ರದ ಕಥೆ ಸರಳವಾಗಿದ್ದರೂ ಅದರ ಆಳ ದೊಡ್ಡದಿದೆ. ವಯಸ್ಸಾದ ಒಬ್ಬ ತಾಯಿ, ತನ್ನ ಕೊನೆಯ ಕಾಲದಲ್ಲಿ ತನ್ನದೇ ಕುಟುಂಬದವರಿಂದ ಹೇಗೆ ಕಡೆಗಣಿಸಲ್ಪಡುತ್ತಾಳೆ ಮತ್ತು ಆಕೆಯ ಅಸ್ತಿತ್ವಕ್ಕೆ ಹೇಗೆ ಧಕ್ಕೆಯಾಗುತ್ತದೆ ಎಂಬುದೇ ಚಿತ್ರದ ಕೇಂದ್ರಬಿಂದು. ಕುಟುಂಬದ ಒಳಗಿನ ಶೋಷಣೆ, ಪ್ರೀತಿಯ ನೆಪದಲ್ಲಿ ನಡೆಯುವ ನಿರ್ಲಕ್ಷ್ಯ ಮತ್ತು ಕೊನೆಗೆ ಆಕೆ ತನ್ನ ಆತ್ಮಗೌರವಕ್ಕಾಗಿ ತೆಗೆದುಕೊಳ್ಳುವ ನಿರ್ಧಾರಗಳು- ‘ವಯಸ್ಸಾದವರು ಹೊರೆಯಲ್ಲ, ನಮ್ಮ ಬೇರುಗಳು’ ಎಂಬ ಸಂದೇಶ ಪ್ರೇಕ್ಷಕರ ಕಣ್ಣು ತೆರೆಸುತ್ತವೆ.
ತಮಿಳುನಾಡಿನ ಒಂದು ಸಾಮಾನ್ಯ ಹಳ್ಳಿ ಕರೂಮತ್ತೂರು. ಅಲ್ಲೊಂದು ದೊಡ್ಡ ಮನೆ, ಆ ಮನೆಯಲ್ಲಿ ವಯಸ್ಸಾದ ವಿಧವೆ ಪಾವುನುತಾಯಿ, ಆ ತಾಯಿಗೆ ನಾಲ್ಕು ಮಕ್ಕಳು- ಒಂದು ಹೆಣ್ಣು, ಮೂರು ಗಂಡು. ಆದರೆ ಅವರಾರೂ ಅಕ್ಷರ ಬಲ್ಲವರಲ್ಲ, ಬುದ್ಧಿವಂತರೂ ಅಲ್ಲ. ತಾಯಿ ಹೇಳಿದಂತೆ ಕೇಳುವವರೂ ಅಲ್ಲ. ಮದುವೆಯಾಗಿ ಮನೆ ಬಿಟ್ಟಿದ್ದಾರೆ. ಮಾತುಮಾತಿಗೂ ತಾಯಿಯನ್ನು ಜಿಪುಣಿ ಎಂದು ಜರೆಯುತ್ತಾರೆ. ಮಗಳ ಗಂಡ, ಹೆಂಡತಿ ಬಿಟ್ಟು ಹೋಗಿದ್ದಾನೆ. ಆಕೆ ಮತ್ತವಳ ಮಗನನ್ನು ನೋಡಿಕೊಳ್ಳುವ ಜವಾಬ್ದಾರಿ ಈ ವಯಸ್ಸಾದ ತಾಯಿಯ ಮೇಲೇ ಬಿದ್ದಿದೆ. ಆದರೆ ಆ ತಾಯಿ ಎದೆಗುಂದುವುದಿಲ್ಲ. ಬಂದದ್ದನ್ನು ಬಂದಂತೆ ಸ್ವೀಕರಿಸಿ ಬದುಕು ಕಟ್ಟಿಕೊಂಡದ್ದನ್ನು ಸಾರುವುದೂ ಇಲ್ಲ.
ಪ್ರತಿದಿನ ಪಾವುನುತಾಯಿ ದೇವರಿಗೆ ಕೈ ಮುಗಿದು, ಮನೆಯ ಹೊರಕ್ಕೆ ಕಾಲಿಟ್ಟಾಕ್ಷಣ, ಊರಿನ ಜನರ ಎದೆಯ ನಗಾರಿ ಹೊಡೆದುಕೊಳ್ಳುತ್ತದೆ. ಊರವರಿಗೆಲ್ಲ ಸಾಲ ಕೊಟ್ಟು, ಸಾಲದ ಬಡ್ಡಿ ವಸೂಲು ಮಾಡುವ ಆ ಲೇಡಿ ಬಾಸ್ ಕಂಡರೆ ಎಲ್ಲರಿಗೂ ಭಯ. ಅವರು, ಆಕೆ ಸಾಯಬೇಕೆಂದು ಬಯಸುತ್ತಾರೆ, ಆಕೆಗೆ ಲಕ್ವಾ ಹೊಡೆದು ಹಾಸಿಗೆಯಲ್ಲಿ ಮಲಗಿದಾಗ ಸಂತೋಷಪಡುತ್ತಾರೆ. ಸಾವಿನ ಸುದ್ದಿಗಾಗಿ ಹಪಾಹಪಿಸುತ್ತಾರೆ. ಆದರೆ ಆಕೆ, ತಾನು ಸತ್ತರೂ ಕೂಡ ಸಮಾಧಿಗೆ ತಾನೇ ನಡೆದು ಹೋಗಿ ಮಲಗುತ್ತೇನೆ ಎನ್ನುವ ಗಟ್ಟಿಗಿತ್ತಿ.

ಮುಖ್ಯ ಪಾತ್ರವಾದ ವಯಸ್ಸಾದ ತಾಯಿಯಾಗಿ ನಟಿಸಿರುವ ಹಿರಿಯ ನಟಿ ರಾಧಿಕಾ ಶರತ್‌ಕುಮಾರ್ ಅವರ ಅಭಿನಯ ಅದ್ಭುತ. ಅವರ ಸುಕ್ಕುಗಟ್ಟಿದ ಮುಖ, ಮೂಗಿಗಿಂತ ದೊಡ್ಡದಾದ ಮೂಗುತಿಗಳು, ಓಲೆಗಳ ತೂಕಕ್ಕೆ ಇಳಿಬಿದ್ದ ಕಿವಿಗಳು, ಸುರುಂಡಿ ಸೀರೆ, ಸಿಟಿ ಸುತ್ತಾಟ, ಸಿನೆಮಾ ನೋಡಾಟ, ಬೆರಳ ಸಂದಿಯ ಚುಟ್ಟಾ, ಫಾಂಟಾ, ಒರಟು ಭಾಷೆ- ಟಿಪಿಕಲ್ ತಮಿಳು ತಾಯಿಯನ್ನು ತಂದು ನಿಲ್ಲಿಸಿದಂತಿದೆ. ಮುಖದ ನೆರಿಗೆಗಳು, ಅವು ಹೊರಡಿಸುವ ಭಾವನೆಗಳು ಸಾವಿರಾರು ಪದಗಳಿಗೆ ಸಮನಾಗಿದೆ. ಆಂಗಿಕ ಅಭಿನಯ ಮತ್ತು ಮೌನದ ಮೂಲಕ ಅಭಿವ್ಯಕ್ತಿಸುವ ರೀತಿ ಚಿತ್ರದ ಅತಿದೊಡ್ಡ ಶಕ್ತಿಯಾಗಿದೆ. ಚಿತ್ರದ ಸಂಭಾಷಣೆ ತೀಕ್ಷ್ಣವಾಗಿದೆ. ಹಿನ್ನೆಲೆ ಸಂಗೀತ ಕಥೆಯ ಗಂಭೀರತೆಗೆ ತಕ್ಕಂತಿದೆ.
ಚಿತ್ರದಲ್ಲಿ ಅತಿಯಾದ ನಾಟಕೀಯತೆ ಇಲ್ಲ. ಹಳ್ಳಿಯ ಬದುಕಿಗೇ ಕ್ಯಾಮರಾ ಇಟ್ಟಂತೆ, ಎಲ್ಲವೂ ಯಥಾವತ್ತಾಗಿ ಚಿತ್ರಣಗೊಂಡಿದೆ. ಅಲ್ಲಿನ ಜನರ ದ್ವಂದ್ವ ಮನಸ್ಥಿತಿ, ಸ್ವಾರ್ಥ, ಮೌಢ್ಯ, ಸೋಗಲಾಡಿತನ, ಸೋಮಾರಿತನ ಎಲ್ಲವೂ ನೈಜವಾಗಿದೆ. ಚಿತ್ರವು ಹಳ್ಳಿ ಹಿನ್ನೆಲೆಯ ಗದ್ದಲಭರಿತ ಹಾಸ್ಯಚಿತ್ರದಂತೆ ಕಾಣುತ್ತದೆ. ಹಳ್ಳಿಯ ಪರಿಸರವನ್ನು ಅಲ್ಲಲ್ಲಿ ನಾಟಕೀಯವಾಗಿ ಚಿತ್ರೀಕರಿಸಲಾಗಿದೆ. ಚಿತ್ರದ ಓಟ ತುಂಬಾ ನಿಧಾನವಾಗಿದೆ. ಕಮರ್ಷಿಯಲ್ ಚಿತ್ರಗಳನ್ನು ಇಷ್ಟಪಡುವವರಿಗೆ, ಸ್ವಲ್ಪ ಬೋರ್ ಎನಿಸಬಹುದು. ಹಾಗೆಯೇ ಚಿತ್ರದ ಅಂತ್ಯಕ್ಕೆ ಇನ್ನಷ್ಟು ಸ್ಪಷ್ಟತೆ ಬೇಕಿತ್ತು ಎನಿಸಬಹುದು.
ಅಷ್ಟಾದರೂ, ಇದು ಕೇವಲ ಒಂದು ಸಿನಿಮಾ ಅಲ್ಲ, ಬದಲಾಗಿ ಪ್ರತಿಯೊಂದು ಮನೆಯ ಕನ್ನಡಿ. ತಮ್ಮ ಹೆತ್ತವರನ್ನು ಅಥವಾ ಹಿರಿಯರನ್ನು ಕೇವಲ ‘ಒಂದು ವಸ್ತು’ ಎಂದು ಭಾವಿಸುವ ಇಂದಿನ ಪೀಳಿಗೆಗೆ ಈ ಸಿನಿಮಾ ಒಂದು ದೊಡ್ಡ ಪಾಠ.
ಹಾಗೆಯೇ ‘ತಾಯ್ ಕೆಳವಿ’ ವೇಗವಾದ ಅಥವಾ ಲಘು ಮನರಂಜನೆಯ ಚಿತ್ರವಲ್ಲ. ನಿಧಾನಗತಿಯ ಕಥನ ಮತ್ತು ಗಂಭೀರ ವಿಷಯ ನಿಮಗೆ ಇಷ್ಟವಿದ್ದರೆ ಮಾತ್ರ ತಟ್ಟುತ್ತದೆ. ಸಾಮಾಜಿಕ ಕಳಕಳಿಯುಳ್ಳ ಕಥೆಗಳನ್ನು ಇಷ್ಟಪಡುವವರಾದರೆ ತಣ್ಣಗೆ ಎದೆಗಿಳಿಯುತ್ತದೆ. ನಿಮ್ಮನ್ನು ಯೋಚನೆಗೂ ಹಚ್ಚುತ್ತದೆ.
ಇದನ್ನು ಓದಿದ್ದೀರಾ?: ‘ದಲಿತ್ ಸುಬ್ಬಯ್ಯ’ ಎಂಬ ಪ್ರತಿರೋಧದ ಕಥನ ಎತ್ತುವ ಪ್ರಶ್ನೆಗಳು
ಶಿವಕುಮಾರ್ ಮುರುಗೇಶನ್ ಅವರ ಮೊದಲ ನಿರ್ದೇಶನದ ಚಿತ್ರ ತಾಯ್ ಕೆಳವಿ- ಪ್ರಗತಿಪರತೆ ಮತ್ತು ಸಮಾನತೆಯ ಧಾರೆಯ ಒಂದು ಮಾದರಿಯಂತೆ, ಪರಿಪೂರ್ಣ ರೂಪದಂತೆ ಭಾಸವಾಗುತ್ತದೆ. ಅದಕ್ಕೆ ಒಪ್ಪುವಂತೆ ತಾಯಿಯೇ ಮುಂದೆ ನಿಂತು, ಮಗಳಿಗೆ ಮತ್ತೊಂದು ಮದುವೆ ಮಾಡಿಸುವುದು; ಜಿಪುಣಿಯಂತೆ ಕಂಡರೂ ಸೊಸೆಯಂದಿರಿಗೆ ಬದುಕಿನ ಪಾಠ ಹೇಳಿಕೊಡುವುದು; ತನ್ನಿಷ್ಟದಂತೆ ಉಂಡುಟ್ಟು ಸ್ವಾಭಿಮಾನದಿಂದ ಬದುಕುವುದು- ಚಿತ್ರವನ್ನು ಬೇರೆಯದೇ ದೃಷ್ಟಿಕೋನದಿಂದ ನೋಡುವಂತೆ ಪ್ರೇರೇಪಿಸುತ್ತದೆ.
ಪಾವುನುತಾಯಿ ಪಾತ್ರ ನಿರ್ವಹಿಸಿದ ರಾಧಿಕಾಗೆ ನ್ಯಾಷನಲ್ ಅವಾರ್ಡ್ ಬರುತ್ತದೋ ಬಿಡುತ್ತದೋ, ಅದು ಬೇರೆ. ಶೂದ್ರ ಸಂಸ್ಕೃತಿ ಮತ್ತು ಸಾಮಾಜಿಕ ಅರಿವಿಗಾಗಿ ನೋಡಬೇಕಾದ ಚಿತ್ರವಿದು.

ಲೇಖಕ, ಪತ್ರಕರ್ತ




