ಕೇಂದ್ರದಲ್ಲಿ ಹಾಗೂ ಅರುಣಾಚಲ ಪ್ರದೇಶದಲ್ಲಿ- ಎರಡೂ ಕಡೆ ಬಿಜೆಪಿ ಸರ್ಕಾರವಿದೆ. ಡಬಲ್ ಎಂಜಿನ್ ಸರ್ಕಾರವಿದ್ದರೂ, ಅತ್ತ ಚೀನಾದ ಅತಿಕ್ರಮಣಕ್ಕೆ ಖಡಕ್ ಉತ್ತರವನ್ನೂ ನೀಡುತ್ತಿಲ್ಲ, ಇತ್ತ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿ ಸ್ಥಳೀಯ ಅಸ್ಮಿತೆಯನ್ನು ಗೌರವಿಸುತ್ತಲೂ ಇಲ್ಲ.
ದೇಶದ ಅವಿಭಾಜ್ಯ ಅಂಗವಾಗಿರುವ ಅರುಣಾಚಲ ಪ್ರದೇಶ ರಾಜ್ಯದ ಜನತೆ ಸದ್ಯಕ್ಕೆ ಎರಡು ರೀತಿಯ ಸಮಸ್ಯೆಗೆ ಸಿಲುಕಿದ್ದಾರೆ. ಒಂದು- ಹೊರಗಿನಿಂದ, ಚೀನಾದ ಯೋಧರು ಅರುಣಾಚಲ ಪ್ರದೇಶದ ಕೆಲ ಭಾಗಗಳನ್ನು ಅತಿಕ್ರಿಮಿಸುವ ಮೂಲಕ ಸ್ಥಳೀಯ ಜನರನ್ನು ಹೊರಗಟ್ಟುತ್ತಿದ್ದಾರೆ. ಎರಡು- ಒಳಗಿನಿಂದ, ರಾಜ್ಯ ಸರ್ಕಾರ ಸಿಯಾಂಗ್ ನದಿಗೆ ಅಡ್ಡಲಾಗಿ ಬೃಹತ್ ಅಣೆಕಟ್ಟು ನಿರ್ಮಿಸಲು ಮುಂದಾಗಿ, ಸ್ಥಳೀಯರನ್ನು ನಿರ್ಲಕ್ಷಿಸಿದೆ, ವಕ್ಕಲೆಬ್ಬಿಸಲು ನೋಡುತ್ತಿದೆ.
ದುರದೃಷ್ಟಕರ ಸಂಗತಿ ಎಂದರೆ, ಕೇಂದ್ರದಲ್ಲಿ ಹಾಗೂ ಅರುಣಾಚಲ ಪ್ರದೇಶದಲ್ಲಿ- ಎರಡೂ ಕಡೆ ಬಿಜೆಪಿ ಸರ್ಕಾರವಿದೆ. ಡಬಲ್ ಎಂಜಿನ್ ಸರ್ಕಾರವಿದ್ದರೂ, ಅತ್ತ ಚೀನಾದ ಅತಿಕ್ರಮಣಕ್ಕೆ ಖಡಕ್ ಉತ್ತರವನ್ನೂ ನೀಡುತ್ತಿಲ್ಲ, ಇತ್ತ ಸ್ಥಳೀಯ ಅಸ್ಮಿತೆಯನ್ನು ಗೌರವಿಸುತ್ತಲೂ ಇಲ್ಲ.
ಚೀನಾ ದೇಶವು ಟಿಬೆಟ್ ಸ್ವಾಯತ್ತ ಪ್ರದೇಶದ ಮೇಡೋಗ್ ಜಿಲ್ಲೆಯಲ್ಲಿ ಯಾರ್ಲುಂಗ್ ತ್ಸಾಂಗ್ಪೋ (ಭಾರತದಲ್ಲಿ ಬ್ರಹ್ಮಪುತ್ರ) ನದಿಗೆ ಅಡ್ಡಲಾಗಿ ವಿಶ್ವದ ಅತಿ ದೊಡ್ಡ- ಸುಮಾರು 60,000 ಮೆಗಾ ವ್ಯಾಟ್ ಜಲವಿದ್ಯುತ್ ಯೋಜನೆಯನ್ನು ನಿರ್ಮಿಸುತ್ತಿದೆ. ಯಾರ್ಲುಂಗ್ ತ್ಸಾಂಗ್ಪೋ ನದಿಯು ಪಶ್ಚಿಮ ಟಿಬೆಟ್‌ನಲ್ಲಿರುವ ಆಂಗ್ಸಿ ಗ್ಲೇಸಿಯರ್ ಅಥವಾ ಹಿಮನದಿಯಿಂದ ಹುಟ್ಟಿ, ಭಾರತದ ಅರುಣಾಚಲ ಪ್ರದೇಶದಲ್ಲಿ ಸಿಯಾಂಗ್ ನದಿಯಾಗಿ ಹರಿದು, ನಂತರ ಅಸ್ಸಾಂನಲ್ಲಿ ಬ್ರಹ್ಮಪುತ್ರ ನದಿಯಾಗಿ ರೂಪಾಂತರಗೊಳ್ಳುತ್ತದೆ. ಹೀಗಾಗಿ ಚೀನಾದ ಜಲವಿದ್ಯುತ್ ಯೋಜನೆಯಿಂದ ಕೆಳಹಂತದ ದೇಶಗಳಾದ ಭಾರತ ಮತ್ತು ಬಾಂಗ್ಲಾದೇಶಗಳು ತೀವ್ರ ತೊಂದರೆಗೆ ಸಿಲುಕುವುದರಿಂದ ಕಳವಳಕ್ಕೆ ಕಾರಣವಾಗಿದೆ. ದೇಶದ ಪ್ರಕೃತಿ-ಪರಿಸರದ ದೃಷ್ಟಿಯಿಂದ ದೂರಗಾಮಿ ಸಮಸ್ಯೆಗಳೂ ಎದುರಾಗಲಿವೆ.

ಇದರ ನಡುವೆಯೇ ಚೀನಾ, ಗಡಿಯಲ್ಲಿ ಸೇನಾ ಚಟುವಟಿಕೆ ಹೆಚ್ಚಿಸಿದೆ. ಗಡಿಯುದ್ದಕ್ಕೂ ಮಿಲಿಟರಿ ಮತ್ತು ನಾಗರಿಕ ಗ್ರಾಮಗಳನ್ನು ನಿರ್ಮಿಸುತ್ತಿದೆ. ಅರುಣಾಚಲ ಪ್ರದೇಶದೊಳಗೆ ಸೌತ್ ಟಿಬೆಟ್ ಗುರುತಿಸಿದೆ. ಗಡಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುತ್ತಿದೆ. ಗಲ್ವಾನ್ ಕಣಿವೆಯಲ್ಲಿ 20 ಭಾರತೀಯ ಯೋಧರನ್ನೂ ಹತ್ಯೆ ಮಾಡಿದೆ.
ಒಂದು ಕಡೆ, ಚೀನಾದ ಅತಿಕ್ರಮಣ ಮತ್ತು ಮತ್ತೊಂದು ಕಡೆ ಜಲವಿದ್ಯುತ್ ಯೋಜನೆ; ಎರಡಕ್ಕೂ ಖಡಕ್ ಕ್ರಮ ಕೈಗೊಳ್ಳಬೇಕಾದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ, ಕೈ ಕಟ್ಟಿ ಕೂತಿದೆ. ಅಷ್ಟೇ ಅಲ್ಲ, ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಅರುಣಾಚಲ ಪ್ರದೇಶದ ಬಿಜೆಪಿ ಸರ್ಕಾರ, ಸಿಯಾಂಗ್ ನದಿಗೆ ಅಡ್ಡಲಾಗಿ 11,200 ಮೆಗಾ ವ್ಯಾಟ್ ಸಾಮರ್ಥ್ಯದ ಅಣೆಕಟ್ಟು (ಸಿಯಾಂಗ್ ಅಪ್ಪರ್ ಮಲ್ಟಿಪರ್ಪಸ್ ಪ್ರಾಜೆಕ್ಟ್ -SUMP) ನಿರ್ಮಿಸಲು ಮುಂದಾಗಿದೆ. ಅದಕ್ಕೆ ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಅಗತ್ಯ ಎಂಬ ವಾದವನ್ನು ಮುಂದು ಮಾಡುತ್ತಿದೆ.
ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಚೀನಾದ ಯೋಜನೆ ಭಾರತಕ್ಕೆ ನಿಜವಾದ ರಾಜತಾಂತ್ರಿಕ ಸವಾಲಾಗಿರಬಹುದು. ಆದರೆ ಆ ಸವಾಲಿಗೆ- ಸಿಟ್ಟಿಗೆ ಅಣೆಕಟ್ಟು ಕಟ್ಟಲು ಮುಂದಾಗುವುದು ಚೀನಾಕ್ಕೆ ಕೊಡುವ ಉತ್ತರವಲ್ಲ. ಅದನ್ನು ಬಿಜೆಪಿಯ ಅತ್ಯುತ್ತಮ ಕಾರ್ಯತಂತ್ರವೆಂದು ಹೇಳಲು ಸಾಧ್ಯವಿಲ್ಲ. ಅಷ್ಟಕ್ಕೂ ಈ ಅಣೆಕಟ್ಟು ನಿರ್ಮಾಣಕ್ಕೆ ತಗಲುವ ವೆಚ್ಚವೆಷ್ಟು, ಅದರಿಂದ ಆಗುವ ಆರ್ಥಿಕ-ಸಾಮಾಜಿಕ ಪಲ್ಲಟಗಳೇನು, ಅರುಣಾಚಲ ಪ್ರದೇಶದ ಜನರಿಗೆ ಆಗುವ ಲಾಭವೇನು ಎಂದು ಬಿಜೆಪಿ ಯೋಚಿಸಿಯೇ ಇಲ್ಲ.
ಇದನ್ನು ಓದಿದ್ದೀರಾ?: ಮೋದಿಯ 56 ಇಂಚಿನ ಅಳ್ಳೆದೆ ಮತ್ತು ಚೀನಾದ ಅತಿಕ್ರಮಣ
ಸಿಯಾಂಗ್ ನದಿಯನ್ನು ಅರುಣಾಚಲ ಪ್ರದೇಶದ ಆದಿ (Adi) ಬುಡಕಟ್ಟು ಸಮುದಾಯದ ಜನ ತಾಯಿ ಎಂದು ನಂಬಿದ್ದಾರೆ. ಇದು ಬುಡಕಟ್ಟು ಸಮುದಾಯಕ್ಕೂ ಸಿಯಾಂಗ್ ನದಿಗೂ ಇರುವ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ಅಷ್ಟೇ ಅಲ್ಲ, ಈ ಸಮುದಾಯದ ಜನರು ಸಿಯಾಂಗ್ ನದಿಯನ್ನು ಪೂಜಿಸುತ್ತಾರೆ, ದೇವತೆಯೆಂದು ಗೌರವಿಸುತ್ತಾರೆ. ಇಂತಹ ನದಿಗೆ ಅಡ್ಡಲಾಗಿ ಈಗ ಬೃಹತ್ ಅಣೆಕಟ್ಟು ಕಟ್ಟಲು ಅರುಣಾಚಲ ಪ್ರದೇಶದ ಬಿಜೆಪಿ ಸರ್ಕಾರ ಮುಂದಾಗಿದೆ.
ಬೃಹತ್ ಜಲಾಶಯ ನಿರ್ಮಾಣದಿಂದ ಸುಮಾರು 32 ಗ್ರಾಮಗಳು ಮುಳುಗಡೆಯಾಗಲಿವೆ. ಮನೆ, ಕೃಷಿಭೂಮಿ ಮತ್ತು ಪೂರ್ವಜರ ನೆಲವನ್ನು ಕಳೆದುಕೊಳ್ಳುವ ಭೀತಿ ಜನರನ್ನು ಕಾಡುತ್ತಿದೆ. ಸಿಯಾಂಗ್ ಕಣಿವೆಯಲ್ಲಿ ವಾಸಿಸುವ ಆದಿ ಬುಡಕಟ್ಟು ಸಮುದಾಯಕ್ಕೆ ಸಿಯಾಂಗ್ ನದಿ ಕೇವಲ ನೀರಿನ ಮೂಲವಲ್ಲ. ಅದು ಅವರ ಇತಿಹಾಸ, ಧಾರ್ಮಿಕ ನಂಬಿಕೆ, ಸಂಸ್ಕೃತಿ ಮತ್ತು ಬದುಕಿನ ಅವಿಭಾಜ್ಯ ಅಂಗ. ಹೀಗಾಗಿ ಅವರು ನದಿಯ ಮೇಲಿನ ಹಸ್ತಕ್ಷೇಪವನ್ನು ತಮ್ಮ ಅಸ್ತಿತ್ವದ ಮೇಲಿನ ದಾಳಿಯೆಂದು ಪರಿಗಣಿಸಿದ್ದಾರೆ.

ಜೊತೆಗೆ, ಹಿಮಾಲಯದ ಭೂಕಂಪನ ಸೂಕ್ಷ್ಮ ಪ್ರದೇಶದಲ್ಲಿ ಇಷ್ಟು ದೊಡ್ಡ ಅಣೆಕಟ್ಟು ನಿರ್ಮಿಸುವುದರಿಂದ ಪರಿಸರ ವ್ಯವಸ್ಥೆ, ನದಿಯ ಸಹಜ ಹರಿವು ಮತ್ತು ಸ್ಥಳೀಯ ಜೀವವೈವಿಧ್ಯದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಜನ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲ, ಯೋಜನೆಯ ಪೂರ್ವಸಾಧ್ಯತಾ ವರದಿ (Pre-Feasibility Report) ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಮೊದಲು ಸ್ಥಳೀಯ ಸಮುದಾಯಗಳೊಂದಿಗೆ ಸಮಾಲೋಚನೆ ನಡೆಸಬೇಕು, ಅವರ ಆತಂಕಗಳಿಗೆ ಉತ್ತರಿಸಬೇಕು. ಸರ್ಕಾರ ಅದಕ್ಕೆ ಮುಂದಾಗಿಲ್ಲ ಎಂಬ ಗುರುತರ ಆರೋಪವಿದೆ.
ಇದರ ನಡುವೆಯೇ ಬಿಜೆಪಿ ಸರ್ಕಾರ ಪ್ರಚಾರದ ತೆವಲಿಗೆ ಬಿದ್ದಿದೆ. ಯೋಜನೆಯ ಪರವಾಗಿ ಜನಾಭಿಪ್ರಾಯ ರೂಪಿಸಲು ಖಾಸಗಿ ಸಂಸ್ಥೆಗೆ 10.91 ಕೋಟಿ ಮೊತ್ತದ ಸಾರ್ವಜನಿಕ ಸಂಪರ್ಕ ಗುತ್ತಿಗೆ ನೀಡಿರುವ ವರದಿ, ಈಗ ವಿವಾದಕ್ಕೆ ಕಾರಣವಾಗಿದೆ. ಜನರ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಪ್ರಚಾರಕ್ಕೆ ಆದ್ಯತೆ ನೀಡಲಾಗುತ್ತಿರುವುದು ಸಹಜವಾಗಿಯೇ ಸರ್ಕಾರದ ವಿರುದ್ಧ ಜನ ಸಿಡಿದೇಳಲು ಕಾರಣವಾಗಿದೆ.
ಅಕ್ಟೋಬರ್ ಮೊದಲ ವಾರ, ಆದಿ ಬುಡಕಟ್ಟು ಸಮುದಾಯ ಬಿಜೆಪಿ ಸರ್ಕಾರದ ನಿಲುವು ವಿರೋಧಿಸಿ ಬೀದಿಗೆ ಇಳಿಯಿತು. ಸಿಯಾಂಗ್ ಜಿಲ್ಲೆಯ ರಿಗಾದಲ್ಲಿ ನಡೆದ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿತು. ಈ ಸಂದರ್ಭದಲ್ಲಿ ಕೇಂದ್ರ ಭದ್ರತಾ ಪಡೆಗಳಿಗೆ ಸೇರಿದ ಶಿಬಿರಕ್ಕೆ ಬೆಂಕಿ ಹಚ್ಚಲಾಯಿತು.
ಆನಂತರ ಅಕ್ಟೋಬರ್ 23-24ರಂದು ಪೂರ್ವ ಸಿಯಾಂಗ್ ಜಿಲ್ಲೆಯ ಪಾಸಿಘಾಟ್‌ನಲ್ಲಿ ಅಣೆಕಟ್ಟು ವಿರೋಧಿ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿತು. ಪ್ರತಿಭಟನಾಕಾರರು NHPC ಕಚೇರಿಗೆ ಹಾಗೂ ಆರು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕಾಳಿಂಗ್ ಮೊಯಾಂಗ್ ಮತ್ತು ಇಬ್ಬರು ಶಾಸಕರ ನಿವಾಸಗಳ ಮೇಲೆ ದಾಳಿ ನಡೆಸಿ ಹಾನಿ ಮಾಡಿದರು. ಪೊಲೀಸರು ಅಶ್ರುವಾಯು ಮತ್ತು ಸ್ಟನ್ ಗ್ರೆನೇಡ್‌ಗಳನ್ನು ಬಳಸಿದರು. ಸುಮಾರು 27 ಪ್ರತಿಭಟನಾಕಾರರನ್ನು ಬಂಧಿಸಲಾಯಿತು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ರಾಪಿಡ್ ಆ್ಯಕ್ಷನ್ ಫೋರ್ಸ್(RAF) ಪಡೆಗಳನ್ನು ನಿಯೋಜಿಸಿತು. ಪ್ರತಿಭಟನಾಕಾರರ ವಿರುದ್ಧ ಅರುಣಾಚಲ ಪ್ರದೇಶ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (APUAPA) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಆಕ್ರೋಶ ಭುಗಿಲೇಳಲು ಕಾರಣವಾಗಿದೆ.

ಸಿಯಾಂಗ್ ನದಿಗೆ ಅಡ್ಡಲಾಗಿ ಬೃಹತ್ ಅಣೆಕಟ್ಟು ನಿರ್ಮಿಸುವ ಪ್ರಸ್ತಾವದ ವಿರುದ್ಧ ಈ ತಿಂಗಳ ಆರಂಭದಲ್ಲಿ ನಡೆದ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆದುಕೊಂಡ ನಂತರ, ಆ ಹೋರಾಟದ ನೇತೃತ್ವ ವಹಿಸಿಕೊಂಡವರು ಟಗೋರಿ ಮಿಜೆ. 38 ವರ್ಷದ ಮಿಜೆ ಅವರು ಅರುಣಾಚಲ ಪ್ರದೇಶದ ಎರಡನೇ ಅತಿದೊಡ್ಡ ಗ್ರಾಮವಾದ ಸಿಯಾಂಗ್ ಜಿಲ್ಲೆಯ ರಿಗಾ ಗ್ರಾಮದ ನಿವಾಸಿ. ಅವರು ಅರುಣಾಚಲ ಪ್ರದೇಶದ ಅತಿದೊಡ್ಡ ಮೂಲನಿವಾಸಿ ಬುಡಕಟ್ಟು ಸಮುದಾಯಗಳಲ್ಲಿ ಒಂದಾದ ಆದಿ ಸಮುದಾಯಕ್ಕೆ ಸೇರಿದವರು. ಸಿಯಾಂಗ್, ಪೂರ್ವ ಸಿಯಾಂಗ್ ಮತ್ತು ಮೇಲಿನ ಸಿಯಾಂಗ್ ಜಿಲ್ಲೆಗಳ ಬಹುಪಾಲು ಜನಸಂಖ್ಯೆ ಈ ಸಮುದಾಯದ್ದಾಗಿದೆ. ಇಟಾನಗರದಲ್ಲಿ ನೆಲೆಸಿರುವ ಮಿಜೆ, ಈಗ ಸರ್ಕಾರದ ವಿರುದ್ಧದ ಪ್ರತಿಭಟನೆಯನ್ನು ಮುನ್ನಡೆಸುತ್ತಿದ್ದಾರೆ.
ಅಕ್ಟೋಬರ್ 29ರಂದು ಇಟಾನಗರದ ಜನನಿಬಿಡ ರಸ್ತೆಗಳಲ್ಲಿ ಆಕಾಶದೀಪ್‌ನಿಂದ ಇಂದಿರಾ ಗಾಂಧಿ ಉದ್ಯಾನದವರೆಗೆ ಎರಡು ಕಿಲೋಮೀಟರ್‌ಗೂ ಹೆಚ್ಚು ದೂರ ಸಾಗಿದ ಬೃಹತ್ ಮೆರವಣಿಗೆಯನ್ನು ನೋಡಲು ಪಾದಚಾರಿಗಳು ಅಲ್ಲಲ್ಲಿ ನಿಂತರು. ಮೆರವಣಿಗೆ ಆರಂಭವಾಗುವ ಮುನ್ನ ಪ್ರತಿಭಟನಾಕಾರರು ರಾಷ್ಟ್ರಗೀತೆಯನ್ನು ಹಾಡಿದರು. ‘ಹಮ್ ಹಮಾರಾ ಸಿಯಾಂಗ್ ಮಾಂಗ್ತೆ, ನಹೀಂ ಕಿಸಿ ಸೇ ಭೀಖ್ ಮಾಂಗ್ತೆ (ನಾವು ನಮ್ಮ ಸಿಯಾಂಗ್ ನದಿಯನ್ನು ಕೇಳುತ್ತಿದ್ದೇವೆ; ಯಾರ ಬಳಿಯೂ ಭಿಕ್ಷೆ ಬೇಡುತ್ತಿಲ್ಲ)’ ಎಂಬ ಘೋಷಣೆಯನ್ನು ಮೆರವಣಿಗೆಯುದ್ದಕ್ಕೂ ಪ್ರತಿಭಟನಾಕಾರರು ನಿರಂತರವಾಗಿ ಕೂಗುತ್ತಲೇ ಇದ್ದರು. ಬಂಧಿತರ ಬಿಡುಗಡೆಗೆ ಒತ್ತಾಯಿಸಿದರು. ಈ ಪ್ರತಿಭಟನೆಗೆ ಈಗ ಯುವಸಮುದಾಯ ಜೊತೆಯಾಗಿದೆ. ಕಾಕ್ರೋಚ್ ಜನತಾ ಪಾರ್ಟಿ ಮತ್ತು ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿದೆ.
ಇದನ್ನು ಓದಿದ್ದೀರಾ?: ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್
ಬಂಧನ ಮತ್ತು ವಶಕ್ಕೆ ಪಡೆಯುವ ಕ್ರಮಗಳ ವಿಚಾರವಾಗಿ ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ರಾಜ್ಯದ ಜನರ ಒಪ್ಪಿಗೆ ಪಡೆಯದೆ ಮುಖ್ಯಮಂತ್ರಿ ಪೆಮಾ ಖಂಡು ನೇತೃತ್ವದ ಸರ್ಕಾರ ಸಿಯಾಂಗ್ ಅಣೆಕಟ್ಟು ಯೋಜನೆಯನ್ನು ಹೇರಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ಬಿಜೆಪಿ ಸರ್ಕಾರ ಈ ಆರೋಪಗಳನ್ನು ನಿರಾಕರಿಸಿದೆ. ಪ್ರತಿಭಟನೆಗಳನ್ನು ಕಾಂಗ್ರೆಸ್ ಪ್ರಾಯೋಜಿಸುತ್ತಿದೆ ಎಂದು ಪ್ರತ್ಯಾರೋಪ ಮಾಡಿದೆ.
ಅಸಲಿಗೆ, ರಾಜ್ಯ ಬಿಜೆಪಿ ಸರ್ಕಾರ ಬಲವಂತವಾಗಿ ಅಣೆಕಟ್ಟು ನಿರ್ಮಾಣ ಯೋಜನೆಯನ್ನು ಹೇರಲು ಪ್ರಯತ್ನಿಸುತ್ತಿರುವುದರಿಂದ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಯೋಜನೆಯ ಪ್ರಾಥಮಿಕ ಕಾರ್ಯಸಾಧ್ಯತಾ ವರದಿಗೆ (PFR) ಅನುಮತಿ ನೀಡುವಂತೆ ಜನರ ಮೇಲೆ ಒತ್ತಡ ಹೇರಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗುತ್ತಿದೆ. ಸರ್ಕಾರ ಜನರ ಮಾತು ಕೇಳುತ್ತಿಲ್ಲ. ಬದಲಿಗೆ ಜನರ ಮೇಲೆ ಹಲ್ಲೆ ನಡೆಸುತ್ತಿದೆ. APUPA ಅಡಿಯಲ್ಲಿ ಬಂಧಿಸುತ್ತಿದೆ, ಎಫ್‌ಐಆರ್ ದಾಖಲಿಸುತ್ತಿದೆ. ದಿನದಿಂದ ದಿನಕ್ಕೆ ಜನವಿರೋಧಿ ಸರ್ಕಾರವೆಂದು ಸಾಬೀತಾಗುತ್ತಿದೆ.

ಈ ಬೆಳವಣಿಗೆ ಬಿಜೆಪಿ ಸರ್ಕಾರಕ್ಕೆ ರಾಜಕೀಯವಾಗಿಯೂ ಆಡಳಿತಾತ್ಮಕವಾಗಿಯೂ ಎಚ್ಚರಿಕೆಯ ಗಂಟೆಯಾಗಿದೆ. ಚೀನಾದ ವಿರುದ್ಧ ರಾಷ್ಟ್ರೀಯ ಹಿತಾಸಕ್ತಿಯ ಮಾತುಗಳನ್ನು ಆಡುವ ಸರ್ಕಾರ, ತನ್ನದೇ ದೇಶದ ಆದಿವಾಸಿ ಸಮುದಾಯಗಳ ಆತಂಕಕ್ಕೆ, ಕಳವಳಕ್ಕೆ ನ್ಯಾಯಯುತ ಉತ್ತರ ನೀಡುವಲ್ಲಿ ನಿರ್ಲಕ್ಷ್ಯ ತೋರುತ್ತಿದೆ. ಅಭಿವೃದ್ಧಿ ಎಂದರೆ ಅಣೆಕಟ್ಟು ನಿರ್ಮಾಣ ಎಂದು ಹೇಳುತ್ತಲೇ, ದೇಶವಾಸಿಗಳ ಬದುಕು, ಭೂಮಿ, ಸಂಸ್ಕೃತಿ ಮತ್ತು ಹಕ್ಕುಗಳನ್ನು ದಮನ ಮಾಡುತ್ತಿದೆ. ಚೀನಾದ ಅತಿಕ್ರಮಣದ ವಿರುದ್ಧ ಸಿಟ್ಟಿಗೇಳದ ಬಿಜೆಪಿ ಸರ್ಕಾರ, ದೇಶವನ್ನು ಬಲಿ ಕೊಡುತ್ತಿದೆ.
ಇದು ಕೇವಲ ಅರುಣಾಚಲ ಪ್ರದೇಶಕ್ಕೆ ಸೀಮಿತವಾದ ಸಮಸ್ಯೆಯಲ್ಲ. ಅಭಿವೃದ್ಧಿ ನೆಪದಲ್ಲಾಗುವ ಅಧ್ವಾನಕ್ಕೆ ಹಿಮಾಲಯ ಕೊಂಚ ಕದಲಿದರೂ, ಅದು ದೇಶದ ನೆಮ್ಮದಿಗೆ ಭಂಗ ತರದೇ ಇರುವುದಿಲ್ಲ. ಅದರಿಂದಾಗುವ ಅಲ್ಲೋಲ-ಕಲ್ಲೋಲ ಊಹಿಸುವುದೂ ಸಾಧ್ಯವಿಲ್ಲ. ಇದು ‘ದೇಶಭಕ್ತ’ ಮೋದಿಗೆ ತಿಳಿಯುವುದಾದರೂ ಹೇಗೆ?

ಲೇಖಕ, ಪತ್ರಕರ್ತ



