2024ರಲ್ಲಿ ಯುನಿಸೆಫ್ ನೀಡಿದ ವರದಿಯಲ್ಲಿ ಸುಡಾನ್‌ನ ಅಂತರ್ಯುದ್ದದಲ್ಲಿ ಮಕ್ಕಳು ಹಾಗೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂಬ ಘೋರ ಸತ್ಯ ಹೊರಬಿದ್ದದೆ. ನೊಂದ ಅಸಹಾಯಕ ಮಕ್ಕಳು ತಮ್ಮ ಜೀವನ ಅಂತ್ಯಗೊಳಿಸುವ ಪ್ರಯತ್ನಕ್ಕೆ ಇಳಿದಿದ್ದಾರೆ ಎಂದು ಯುನಿಸೆಫ್ ವರದಿ ತಿಳಿಸಿದೆ.
ಜಗತ್ತಿನ ಈ ತನಕದ ಎಲ್ಲಾ ಸಂಘರ್ಷಗಳ, ಗಲಭೆಗಳ ಯುದ್ದಾಪರಾಧಗಳಲ್ಲಿ ಅತಿ ಹೇಯ ಅತ್ಯಾಚಾರ. ಹೆಣ್ಣು, ಹೊನ್ನು, ಮಣ್ಣಿಗಾಗಿ ಕದನಗಳು ಹುಟ್ಟಿಕೊಂಡವು ಎಂಬ ವಿತಂಡವಾದವಿದೆ. ಯುದ್ಧ ಹುಟ್ಟಿದ್ದು ಹೆಣ್ಣಿನಿಂದಲ್ಲ ಗಂಡಿನಿಂದ, ಪಿತೃಪ್ರಧಾನ ಜಗತ್ತಿನ ಕುರುಡುತನದಿಂದ. ಹೆಣ್ಣನ್ನು ಅಸ್ತ್ರವಾಗಿಸಿಕೊಂಡ ಇಂತಹದ್ದೇ ಒಂದು ಸಂಘರ್ಷ ನೈಲ್ ನದಿಯ ನಾಡಿನಲ್ಲಿ ತಾಂಡವವಾಡಿದೆ.
ಈಶಾನ್ಯ ಆಫ್ರಿಕಾದ ಸುಡಾನ್‌ನಲ್ಲಿ ತಲೆ ಎತ್ತಿರುವ ಅಂತರ್ಯುದ್ದದ ಪರಿಣಾಮ ಲಕ್ಷ ಲಕ್ಷ ನರಮೇಧಗಳು ನಡೆಯುತ್ತಿದೆ. ಸುಡಾನ್‌ನ ಸ್ತ್ರೀಯರು ನಿರಂತರ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. 2023ರ ಏಪ್ರಿಲ್‌ನಲ್ಲಿ ಬುಡಕಟ್ಟು ಸಂಘರ್ಷದ ಹೆಸರಿಟ್ಟು ಶುರುವಾದ ಅಂತರ್ಯುದ್ದ ಸುಡಾನ್ ನೆಲವನ್ನು ರಕ್ತಸಿಕ್ತವಾಗಿಸಿದೆ.
ರ್ಯಾಪಿಡ್ ಸಪೋರ್ಟ್ ಫೋರ್ಸ್ (RSF) ಮತ್ತು ಸುಡಾನ್ ಸೇನೆಯ(SAF) ನಡುವೆ ನಡೆಯುತ್ತಿರುವ ನಿರಂತರ ಸಂಘರ್ಷವು ಈಗ ಅಧಿಕಾರ ಹಂಚಿಕೆಯ ಸಂಘರ್ಷವಾಗಿ ಉಳಿದಿಲ್ಲ. ಬದಲಾಗಿ ಕ್ರೌರ್ಯದ, ಪ್ರತೀಕಾರದ, ಜನಾಂಗೀಯ ಶ್ರೇಷ್ಠತೆಯ ರೂಪ ತಾಳಿದೆ.

ಲೈಗಿಂಕ ದೌರ್ಜನ್ಯ, ಎಳೆಯ ಹಸುಳೆಗಳನ್ನು ಲೆಕ್ಕಿಸದೆ ಅಟ್ಟಹಾಸ : 2024ರಲ್ಲಿ ಯುನಿಸೆಫ್ ನೀಡಿದ ವರದಿಯಲ್ಲಿ ಸುಡಾನ್‌ನ ಅಂತರ್ಯುದ್ದದಲ್ಲಿ ಮಕ್ಕಳು ಹಾಗೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂಬ ಘೋರ ಸತ್ಯ ಹೊರ ಬೀಳುತ್ತದೆ. ನೊಂದ ಅಸಹಾಯಕ ಮಕ್ಕಳು ತಮ್ಮ ಜೀವನ ಅಂತ್ಯಗೊಳಿಸುವ ಪ್ರಯತ್ನಕ್ಕೆ ಇಳಿದಿದ್ದಾರೆ ಎಂದು ತಿಳಿಸಿದೆ.
ಇದನ್ನು ಓದಿ>>ಸುಡಾನ್ | ಸೇನೆ-ಅರೆಸೇನಾ ಪಡೆ ಸಂಘರ್ಷದಲ್ಲಿ ಭಾರತೀಯ ಮೂಲದ ವ್ಯಕ್ತಿ ಸಾವು
ಹ್ಯೂಮನ್ ರೈಟ್ಸ್ ವಾಚ್ ಹೇಳಿಕೆಯ ಪ್ರಕಾರ ಆರ್‌ಎಸ್‌ಎಫ್ ಮತ್ತು ಮೈತ್ರಿ ಪಡೆಗಳು ನರಮೇಧ ನಡೆಸಿರುವುದು ಖಾತ್ರಿಯಾಗಿದೆ. ದಾರ್ಫುರ್‌ನಲ್ಲಿ ಮಸಲಿತ್ ಹಾಗೂ ಉಳಿದ ಅರಬ್ಬೇತರ ಸಮುದಾಯಯಗಳನ್ನು ಗುರಿಯಾಗಿಸಿಕೊಂಡು ನಿರಂತರ ಹತ್ಯೆಗಳು ನಡೆಯುತ್ತಿವೆ.
ಡಾಕ್ಟರ್ಸ್ ವಿದ್‌ಔಟ್ ಬಾರ್ಡರ್ಸ್ ಎಂಬ ಎನ್‌ಜಿಒ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರನ್ನು ಮಕ್ಕಳನ್ನು ರಕ್ಷಿಸಿ ಚಿಕಿತ್ಸೆ ನೀಡುತ್ತಿದೆ. ಈ ಸಂಸ್ಥೆಯ ಜೊತೆಗೆ ತನಗಾದ ಪರಿಸ್ಥಿತಿಯನ್ನು ವಿವರಿಸಿದ ಹನಾನ್ ಎಂಬ 18 ವರ್ಷದ ಯುವತಿ, ರ್ಯಾಪಿಡ್ ಸಪೋರ್ಟ್ ಫೋರ್ಸ್‌ನಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ. ಸತತ ಮೂರು ವರ್ಷಗಳಿಂದ ಯುದ್ಧ ಅಪರಾಧಗಳಲ್ಲಿ ತೊಡಗಿರುವ ಈ ಅರೆಸೇನಾ ಪಡೆ ಸುಡಾನ್ ರಕ್ಷಣಾ ಪಡೆಯ ವಿರುದ್ಧ ನಿರಂತರ ದಾಳಿ ನಡೆಸುತ್ತಿದೆ.
ಹನಾನ್ ತನ್ನ ಸ್ನೇಹಿತೆಯ ಜೊತೆಗೆ ದಾರ್ಫುರ್ ರಸ್ತೆ ಅಂಚಿನಲಿ ನಡೆದು ಹೋಗುತ್ತಿದ್ದಾಗ ಬೈಕಿನ ಮೇಲೆ ಬಂದ ನಾಲ್ವರು ಅವರನ್ನು ತಡೆದು ಎಳೆದೊಯ್ದು ಅತ್ಯಾಚಾರ ಮಾಡಿದ್ದಾರೆ ಎಂದು ಡಾಕ್ಟರ್ಸ್ ವಿತೌಟ್ ಬಾರ್ಡರ್ಸ್ (MSF) ಸಂಸ್ಥೆಯ ಸ್ವಯಂ ಸೇವಕರೊಡನೆ ಸಂತ್ರಸ್ತೆಯರು ಹೇಳಿಕೊಂಡಿದ್ದಾರೆ.
“ದೇಹವೇ ಬೇಡವೆನಿಸುವಷ್ಟು ಘಾಸಿಯಾಗಿದ್ದೆ, ಮರಗಟ್ಟಿದ ದೇಹ, ಸೊಂಟದ ಹೊರತಾಗಿ ದೇಹದ ಇನ್ಯಾವ ಭಾಗದ ನೋವು ನನ್ನ ಬಾಧಿಸಲಿಲ್ಲ, ಅಮಾನುಷವಾಗಿ ನನ್ನನ್ನು ಥಳಿಸಿದರು, ತಮ್ಮ ಕೈಗಳಲ್ಲಿದ್ದ ಗನ್‌ಗಳಿಂದ ನನ್ನ ಬೆನ್ನಿಗೆ ಬಲವಾಗಿ ಹೊಡೆದರು…” ಹೀಗೆ ಹನಾನ್ ತನಗಾದ ಕರಾಳ ಅನುಭವವನ್ನು MSF ಮುಂದೆ ತೆರೆದಿಡುತ್ತಾಳೆ.
ಇದುವರೆಗೂ ಉತ್ತರ ಹಾಗೂ ದಕ್ಷಿಣ ದಾರ್ಫುರ್‌ನ ಹಲವೆಡೆ ಜನವರಿ 2024ರಿಂದ ನವೆಂಬರ್ 2025ರವರೆಗೆ 3,396 ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಬದುಕುಳಿದ ಮಹಿಳೆಯರಿಗೆ MSF ಚಿಕಿತ್ಸೆ ನೀಡಿದೆ.
ʼನಾನು ನಿಮಗೆ ಏನೋ ಹೇಳಬೇಕು…ʼ ಎಂಬ ಶೀರ್ಷಿಕೆಯಡಿ MSF ಸಂಸ್ಥೆ ಈ ದತ್ತಾಂಶವನ್ನು ಬಿಡುಗಡೆ ಮಾಡಿದೆ. ಇದು ಸುಡಾನ್‌ನ 18 ಪ್ರಾಂತ್ಯಗಳ ವರದಿ ಮಾತ್ರ. ಇಂತಹ ಸಹಸ್ರಾರು ಘಟನೆಗಳು ಯಾರ ಗಮನಕ್ಕೂ ಬರದೇ ಮಣ್ಣು ಸೇರಿದೆ.
ಅರೆಸೇನಾ ಹಾಗೂ ಸೇನಾ ಪಡೆಯ ನಡುವೆ ಅಧಿಕಾರ ಹಂಚಿಕೆಗೆ ನಡೆದ ಕಲಹ ಸತತ ಮೂರು ವರ್ಷಗಳ ನಂತರವೂ ಮುಕ್ತಿ ಕಂಡಿಲ್ಲ.
ವಿಶ್ವಸಂಸ್ಥೆಯ ತನಿಖಾ ವರದಿಯ ಪ್ರಕಾರ ಅರೆಸೇನಾ ಪಡೆಯ ಪೇದೆಗಳು ಮಹಿಳೆಯರನ್ನು ಹಿಂಸಿಸುವಾಗ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ವೇಳೆ ಅವಾಚ್ಯವಾಗಿ ಜನಾಂಗೀಯ ನಿಂದನೆ ಮಾಡುವುದಲ್ಲದೆ, ನೀವು ಅರಬ್ ಸಂತತಿಗೆ ಜನ್ಮ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. 2,50,000 ಸಂಖ್ಯೆಯಲ್ಲಿರುವ ಅರಬ್ಬೇತರರ ಬದುಕು ಜನಾಂಗೀಯ ಹತ್ಯಾಕಾರರ ಕಪಿಮುಷ್ಟಿಯಲ್ಲಿ ನಲುಗಿ ಹೋಗಿದೆ.
RSF ಜನಾಂಗ ಶುದ್ಧಿಯ ಹೆಸರಿನಲ್ಲಿ ವ್ಯವಸ್ಥಿತ ನರಬಲಿ ನಡೆಸುತ್ತಿದೆ. ವಯಸ್ಕರು, ವೃದ್ಧರಿಂದ ಹಿಡಿದು ಅಪ್ರಾಪ್ತ ಬಾಲಕರನ್ನು, ತೊಟ್ಟಿಲ ಕಂದಮ್ಮಗಳನ್ನು ಹತ್ಯೆಗೀಡು ಮಾಡುತ್ತಿದೆ. ಆಯ್ದ ಸಮುದಾಯದ ಹುಡುಗಿಯರು ಮತ್ತು ವಯಸ್ಕ ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತಿರುವ ಈ ಜನಾಂಗ ಶ್ರೇಷ್ಠತೆಯ ಮದ ತುಂಬಿದ ರಕ್ಕಸರು ಮಹಿಳೆಯರ ಮೇಲೆ ಕ್ರೂರ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾರೆ.
ಸಂಘರ್ಷಗಳು ಹೆಣ್ಣನ್ನು ತಮ್ಮ ಅಸ್ತ್ರವಾಗಿಸಿರುವುದು ಸುಡಾನ್‌ಲ್ಲೇ ಮೊದಲಲ್ಲ. ಕಾಂಗೊದಲ್ಲಿ ನಡೆದ ಸಂಘರ್ಷದಲ್ಲಿ ಪ್ರತಿದಿನ 40 ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿತ್ತು.
ಗಾಜಾದಲ್ಲಿ ನಡೆಯುತಿರುವ ದಾಳಿಯಲ್ಲಿಯೂ ದಮನಿತಳು ಮಹಿಳೆಯೇ, ಸಾವಿರಾರು ಸಂಖ್ಯೆಯ ಮಹಿಳೆಯರು ಅತ್ಯಾಚಾರಕ್ಕೆ ಒಳಗಾದರು. ಬಹುಪಾಲು ಸ್ತ್ರೀಯರನ್ನು ಗುಂಡಿಟ್ಟು ಕೊಲ್ಲಲಾಗುತ್ತಿದೆ. ಈ ಹಿಂಸಾಚಾರ ಇನ್ನೂ ನಿಂತಿಲ್ಲ.
ಇಥಿಯೋಫಿಯಾದ ಟಿಗರೆಯ್ ಹಾಗೂ ಅಮ್‌ಹರ ಪ್ರಾಂತ್ಯದಲ್ಲಿ ನಡೆದ ಸಂಘರ್ಷದಲ್ಲಿ ಮಹಿಳೆಯರು ಬಲಿಪಶುಗಳಾದರು. ಕಲಹಕ್ಕೆ ಬಿದ್ದ ವಿರುದ್ಧ ಬಣಗಳೆರಡು ಅಲ್ಲಿನ ಸ್ತ್ರೀಯರ ಮೇಲೆ ಲೈಂಗಿಕ ದೌರ್ಜನ್ಯ ಮೆರೆದರು. ಸಿರಿಯಾದಲ್ಲಿ ಯುದ್ಧ ಕಾಲದಲ್ಲಿ ಸ್ಥಳಾಂತರಗೊಂಡ ಮಹಿಳೆಯರನ್ನು ಸತತ ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿದರು.
ಈವರೆಗಿನ ಜಗತ್ತಿನ ಎಲ್ಲಾ ಕದನಗಳು ಹೆಣ್ಣಿನ ಬದುಕನ್ನು ಅಸಹನೀಯಗೊಳಿಸಿದೆ. ದಾಳಿ ಮಾಡುವ ಬಂಡುಕೋರರ ಮೊದಲ ಗುರಿ ಹೆಣ್ಣು. ಅವಳ ದೇಹಾಗ್ನಿಯಲ್ಲಿ ಚಳಿ ಕಾಯಿಸದ ಹೊರತು ಇವರ ಯುದ್ಧಗಳು ಅಂತ್ಯ ಆಗದು. ಯುದ್ಧ ಗೆಲ್ಲಲು ಆಕೆಯ ದೇಹವನ್ನು ಅಸ್ತ್ರವನ್ನಾಗಿಸುತ್ತಾರೆ. ದೈಹಿಕವಾಗಿ ಮಾನಸಿಕವಾಗಿ ಅವಳನ್ನು ಕುಗ್ಗಿಸುವ ಆ ಮೂಲಕ ಇಡೀ ಸಮುದಾಯದ ಅಸ್ತಿತ್ವ ಅಲುಗಿಸುವ ಕೃತ್ಯಕ್ಕೆ ಇಳಿಯುತ್ತಾರೆ ಯುದ್ದಪರಾಧಿಗಳು.
ಯುದ್ಧ ಸಮಯದ ಹೆಣ್ಣಿನ ಮೇಲಿನ ಅತ್ಯಾಚಾರಗಳು ಇಡೀ ಜನಾಂಗವೊಂದರ ಅಧಃಪತನಕ್ಕೆ ಬಳಸುವ ಅಸ್ತ್ರ. ಯುದ್ಧ ಕಾಲದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸ್ತ್ರೀ ಸಮುದಾಯ ಬದುಕಿನ ಅಂತ್ಯದವರೆಗೂ ಪರಿಣಾಮಗಳನ್ನು ಅನುಭವಿಸುತ್ತಾಳೆ.
ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು HIV ಯಂತಹ ಮಾರಕ ಕಾಯಿಲೆಗಳಿಗೆ ಒಳಗಾಗುತ್ತಾರೆ. PTSD ಯಂತಹ ಆಘಾತಕಾರಿ ಮಾನಸಿಕ ಕಾಯಿಲೆಗಳಿಂದ ಬಳಲುತ್ತಾರೆ.
ಹೀಗಾಗಿಯೇ ಯುದ್ಧ ಕಾಲದಲ್ಲಿ ಮಹಿಳೆಯರನ್ನು ತಮ್ಮ ಅಸ್ತ್ರವಾಗಿಸಿಕೊಳ್ಳುವ ತೀವ್ರಗಾಮಿಗಳು ತಮ್ಮ ಎದುರಾಳಿ ಸಮುದಾಯದ ಸ್ತ್ರೀ ಸಂಕುಲವನ್ನೇ ಗುರಿಯಾಗಿಸುವುದು. ಆಕೆಯ ಮೇಲಿನ ಒತ್ತಡಗಳು ಆ ನಿರ್ದಿಷ್ಟ ಸಮುದಾಯದ ನಾಶಕ್ಕೆ ನಾಂದಿ ಹಾಡುತ್ತದೆ ಎಂಬ ದುಷ್ಟ ಆಲೋಚನೆಯಿಂದ.




