ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ಪಾಕಿಸ್ತಾನದ ಜಾವೆಲಿನ್ ಥ್ರೋ ತಾರೆ ಅರ್ಷದ್ ನದೀಮ್ ಅವರಿಗೆ ಪಾಕಿಸ್ತಾನದ ಪಂಜಾಬ್ ಸರ್ಕಾರ ಭಾರೀ ಪ್ರಮಾಣದ ಬಹುಮಾನವನ್ನು ನೀಡಿದೆ ಎಂದು ವರದಿಯಾಗಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಪ್ಯಾರಿಸ್ ಕ್ರೀಡಾಕೂಟದಲ್ಲಿ ಐತಿಹಾಸಿಕ ಸಾಧನೆ ಮಾಡಿದ ಅರ್ಷದ್ ನದೀಮ್ ಅವರಿಗೆ ಸರ್ಕಾರ ಒಂದು ಕೋಟಿ ರೂಪಾಯಿ ನಗದು ಬಹುಮಾನ ಮತ್ತು ಹೊಸ ಕಾರನ್ನು ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಪಾಕ್ನ ಪಂಜಾಬ್ ಮುಖ್ಯಮಂತ್ರಿ ಮರ್ಯಮ್ ನವಾಜ್ ಅವರು ಮಿಯಾನ್ ಚುನ್ನುನಲ್ಲಿರುವ ನದೀಮ್ ಅವರ ಗ್ರಾಮಕ್ಕೆ ಖುದ್ದು ತೆರಳಿ ಅರ್ಷದ್ ಮತ್ತು ಅವರ ಕುಟುಂಬವನ್ನು ಭೇಟಿ ಮಾಡಿದರು. ಭೇಟಿಯ ಸಮಯದಲ್ಲಿ, ಅವರು ನಗದು ಬಹುಮಾನ ಮತ್ತು ಹೊಸ ಕಾರಿನ ಕೀಗಳನ್ನು ಹಸ್ತಾಂತರಿಸಿದರು.
ಇದನ್ನು ಓದಿದ್ದೀರಾ? ಒಲಿಂಪಿಕ್ಸ್ | ಪುರುಷರ ಜಾವೆಲಿನ್ ಥ್ರೋ: ಪಾಕ್ನ ನದೀಮ್ಗೆ ಚಿನ್ನ, ಭಾರತದ ನೀರಜ್ಗೆ ಬೆಳ್ಳಿ
ಹಾಗೆಯೇ ನದೀಮ್ ಸಾಧನೆಯನ್ನು ಶ್ಲಾಘಿಸಿದ ಮರ್ಯಮ್ ನವಾಜ್, “ಅರ್ಷದ್ ಅವರು ಈ ಎಲ್ಲ ಬಹುಮಾನವನ್ನು ಪಡೆಯಲು ಅರ್ಹರಾಗಿದ್ದಾರೆ. ಏಕೆಂದರೆ ರಾಷ್ಟ್ರಕ್ಕೆ ತುಂಬಾ ಸಂತೋಷ ಮತ್ತು ಹೆಮ್ಮೆ ತಂದಿದ್ದಾರೆ” ಎಂದು ಹೇಳಿದ್ದಾರೆ.
ಇನ್ನು ಕಾರಿನ ನಂಬರ್ ಪ್ಲೇಟ್ ನಂಬರ್ 92.97 ಆಗಿದೆ. ಇದು ಅವರ ಪ್ಯಾರಿಸ್ ಒಲಿಂಪಿಕ್ಸ್ ರೆಕಾರ್ಡ್ ಆಗಿದೆ. ಲಾಹೋರ್ಗೆ ಹಿಂದಿರುಗುವ ಮುನ್ನ ನದೀಮ್ ಕೋಚ್ ಸಲ್ಮಾನ್ ಇಕ್ಬಾಲ್ ಬಟ್ ಅವರಿಗೆ ಸಿಎಂ 50 ಲಕ್ಷ ರೂಪಾಯಿ ಚೆಕ್ ನೀಡಿದರು.
ಪುರುಷರ ಜಾವೆಲಿನ್ ಥ್ರೋ ಫೈನಲ್ನಲ್ಲಿ, ನದೀಮ್ 92.97 ಮೀಟರ್ ಎಸೆದು ಒಲಂಪಿಕ್ ಚಿನ್ನದ ಪದಕವನ್ನು ಗಳಿಸಿದ ಪಾಕಿಸ್ತಾನದ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಎಂಬ ಇತಿಹಾಸವನ್ನು ನಿರ್ಮಿಸಿದರು. ಹಾಲಿ ಚಾಂಪಿಯನ್ ಭಾರತದ ನೀರಜ್ ಚೋಪ್ರಾ ಅತ್ಯುತ್ತಮ ಪ್ರದರ್ಶನ ನೀಡಿದ್ದು 89.45 ಮೀ ಎಸೆದು ಬೆಳ್ಳಿ ಪದಕವನ್ನು ಪಡೆದರು.