ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ನೀರಜ್ ಚೋಪ್ರಾರ ಮೂಲಕ ಬೆಳ್ಳಿ ಪದಕ ಲಭಿಸಿದೆ.
ಇಂದು ನಡೆದ ಒಲಿಂಪಿಕ್ಸ್‌ನ ಪುರುಷರ ಜಾವೆಲಿನ್ ಥ್ರೋ ವಿಭಾಗದಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ 92.97 ಮೀಟರ್ ದೂರ ಎಸೆಯುವ ಮೂಲಕ ಚಿನ್ನಕ್ಕೆ ಕೊರಳೊಡ್ಡಿದರೆ, ಭಾರತದ ಸ್ಟಾರ್ ಅಥ್ಲೀಟ್ ಆಗಿರುವ ನೀರಜ್ ಚೋಪ್ರಾ 89.45 ದೂರ ಎಸೆಯುವ ಮೂಲಕ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. 88.54 ಎಸೆದಿದ್ದ ಗ್ರೆನೇಡಾ ದೇಶದ ಅಥ್ಲೀಟ್ ಎ ಪೀಟರ್ಸ್ ಮೂರನೇ ಸ್ಥಾನ ಪಡೆದುಕೊಂಡರು.
ಪಾಕಿಸ್ತಾನದ ಅರ್ಷದ್ ನದೀಮ್ ಎಸೆದ 92.97 ಮೀಟರ್ ದೂರದ ಜಾವೆಲಿನ್ ಥ್ರೋ ಒಲಿಂಪಿಕ್ಸ್‌ನಲ್ಲಿ ಹೊಸ ದಾಖಲೆಯಾಗಿದೆ. ಟ್ರ್ಯಾಕ್ & ಫೀಲ್ಡ್ ನಲ್ಲಿ ಪಾಕಿಸ್ತಾನದ ಪರ ಚೊಚ್ಚಲ ಚಿನ್ನ ಗೆದ್ದ ಸಾಧನೆಗೆ ನದೀಮ್ ಪಾತ್ರರಾಗಿದ್ದಾರೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದರು. ಪ್ಯಾರಿಸ್‌ನಲ್ಲಿ ಕೂಡ ಬೆಳ್ಳಿ ಪದಕ ಗಳಿಸುವ ಮೂಲಕ ನಿರಂತರವಾಗಿ ಎರಡು ಒಲಿಂಪಿಕ್ಸ್‌ನಲ್ಲಿ ಪದಕಕ್ಕೆ ಮುತ್ತಿಡುವ ಮೂಲಕ ವಿಶೇಷ ಸಾಧನೆಗೆ ಪಾತ್ರರಾಗಿದ್ದಾರೆ.