- ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಬೆಳವಣಿಗೆ
- ‘ಕಮೆಂಟರಿ’ ವಿಭಾಗದ ಭಾಗವಾಗಿ ಶ್ರೀಲಂಕಾದಲ್ಲಿರುವ ಬಿಜೆಪಿ ಸಂಸದ ಗಂಭೀರ್
ಭಾರತದ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಬರುತ್ತಿದ್ದ ವೇಳೆ ಕೆಲ ಅಭಿಮಾನಿಗಳು ಕೊಹ್ಲಿ ಕೊಹ್ಲಿ ಎಂದು ಕೆಲ ಅಭಿಮಾನಿಗಳು ಬೊಬ್ಬೆ ಹೊಡೆದಾಗ, ಮಧ್ಯದ ಬೆರಳನ್ನು ತೋರಿಸಿರುವ ವಿಡಿಯೋವೊಂದು ವೈರಲಾಗಿದೆ.
ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಬೆಳವಣಿಗೆ ನಡೆದಿರುವುದಾಗಿ ವರದಿಯಾಗಿದ್ದು, ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.
ವಿಡಿಯೋದಲ್ಲಿ ಗಂಭೀರ್ ಅವರು ಮೈದಾನದಿಂದ ಕಮೆಂಟರಿ ಬಾಕ್ಸ್ ಕಡೆಗೆ ಬರುತ್ತಿದ್ದದ್ದನ್ನು ಗಮನಿಸಿ ಕೆಲ ಅಭಿಮಾನಿಗಳು, ಕೊಹ್ಲಿ ಕೊಹ್ಲಿ ಎಂದು ಬೊಬ್ಬೆ ಹೊಡೆಯುತ್ತಿದ್ದರು. ಈ ವೇಳೆ ಗಂಭೀರ್ ಮಧ್ಯದ ಬೆರಳನ್ನು ತೋರಿಸುವ ಮೂಲಕ ಅಸಭ್ಯವಾಗಿ ವರ್ತಿಸಿದ್ದಾರೆ.
“ಕೊಹ್ಲಿ, ಕೊಹ್ಲಿ” ಘೋಷಣೆಗಳನ್ನು ಕೇಳಿದಾಗ ಗಂಭೀರ್ ಫೋನ್‌ನಲ್ಲಿ ಮಾತನಾಡುತ್ತಿರುವುದು ಕಂಡುಬಂದಿದೆ. ಆಗ ಬೊಬ್ಬೆ ಹೊಡೆದವರತ್ತ ತಿರುಗಿ ಮಧ್ಯದ ಬೆರಳನ್ನು ತೋರಿಸಿದರು.
ಈ ವಿಡಿಯೋ ವೈರಲಾದ ಬೆನ್ನಲ್ಲೇ ಹಲವು ಮಂದಿ ನೆಟ್ಟಿಗರು, ಗೌತಮ್ ಗಂಭೀರ್ ಅವರ ಈ ಅಸಭ್ಯ ವರ್ತನೆಗೆ ಕಿಡಿಕಾರಿದ್ದಾರೆ.
‘ಕಮೆಂಟರಿ’ ವಿಭಾಗದ ಭಾಗವಾಗಿ ಶ್ರೀಲಂಕಾದಲ್ಲಿರುವ ಬಿಜೆಪಿ ಸಂಸದ ಗಂಭೀರ್, ಪಾಕ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಔಟಾದ ಶೈಲಿಯನ್ನು ಬಹಿರಂಗವಾಗಿ ಟೀಕಿಸಿದ್ದರು. ಅಲ್ಲದೇ, ವಿರಾಟ್ ಕೊಹ್ಲಿ ಪಾಕ್ ಆಟಗಾರರ ಜೊತೆ ಸೌಹಾರ್ದಯುತವಾಗಿ ವರ್ತಿಸಿದ್ದಕ್ಕೆ ‘ನಿಮ್ಮ ಸ್ನೇಹ ಮೈದಾನದಿಂದ ಹೊರಗಿರಲಿ’ ಎಂದು ಕಿಡಿಕಾರಿದ್ದರು. ಇದು ವಿರಾಟ್ ಕೊಹ್ಲಿ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿತ್ತು.
ವಿಡಿಯೋ ವೈರಲ್ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಗೌತಮ್ ಗಂಭೀರ್, ಕಾಶ್ಮೀರದ ಬಗ್ಗೆ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದಕ್ಕೆ ಈ ರೀತಿ ನಡೆದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
“ಸಾಮಾಜಿಕ ಮಾಧ್ಯಮದಲ್ಲಿ ವೈರಲಾಗಿರುವ ವಿಡಿಯೋದಲ್ಲಿ ಯಾವುದೇ ಸತ್ಯವಿಲ್ಲ. ಏಕೆಂದರೆ ಜನರು ಅವರಿಗೆ ಬೇಕಾದದ್ದನ್ನು ಮಾತ್ರ ತೋರಿಸುತ್ತಾರೆ. ಕಾಶ್ಮೀರದ ಬಗ್ಗೆ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದರೆ ಮತ್ತು ಕಾಶ್ಮೀರದ ಬಗ್ಗೆ ಮಾತನಾಡಿದರೆ ನಿಮ್ಮ ಮುಂದೆ ಇರುವವರು ಸ್ಪಷ್ಟವಾಗಿ ಪ್ರತಿಕ್ರಿಯಿಸುತ್ತಾರೆ ಮತ್ತು ಮುಗುಳ್ನಕ್ಕು ಹೋಗುವುದಿಲ್ಲ. ಅಲ್ಲಿ 2-3 ಪಾಕಿಸ್ತಾನಿಗಳು ಕಾಶ್ಮೀರದ ಬಗ್ಗೆ ಭಾರತ ವಿರೋಧಿ ವಿಷಯಗಳನ್ನು ಮಾತನಾಡುತ್ತಿದ್ದರು. ಅದಕ್ಕೆ ಅದು ನನ್ನ ಸಹಜ. ಪ್ರತಿಕ್ರಿಯೆಯಾಗಿತ್ತು. ನನ್ನ ದೇಶದ ವಿರುದ್ಧ ಹೇಳುವ ಮಾತನ್ನು ಕೇಳಲು ಸಾಧ್ಯವಿಲ್ಲ. ಹಾಗಾಗಿ, ಅದು ನನ್ನ ಪ್ರತಿಕ್ರಿಯೆ” ಎಂದು ಬಿಜೆಪಿಯ ಸಂಸದರೂ ಆಗಿರುವ ಗೌತಮ್ ಗಂಭೀರ್ ಹೇಳಿಕೆ ನೀಡಿದ್ದಾರೆ.
ಕಳೆದ 2023ರ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ನಂತರ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ತೀವ್ರ ವಾಗ್ವಾದ ನಡೆಸಿದ್ದರು. ಅದು ತಳ್ಳಾಟ-ನೂಕಾಟದವರೆಗೂ ಹೋಗಿದ್ದನ್ನು ಇಲ್ಲಿ ಸ್ಮರಿಸಬಹುದು.