- ನೇಪಾಳವನ್ನು 10 ವಿಕೆಟ್ಗಳಿಂದ ಸೋಲಿಸಿದ್ದ ರೋಹಿತ್ ಪಡೆ
- ನೇಪಾಳ ಕ್ರಿಕೆಟ್ ತಂಡದ ಮೂವರನ್ನು ಸನ್ಮಾನಿಸಿದ ಹಾರ್ದಿಕ್, ಕೊಹ್ಲಿ, ದ್ರಾವಿಡ್
ಏಷ್ಯಾಕಪ್ 2023 ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡ ಸೂಪರ್-4 ಹಂತಕ್ಕೆ ಪ್ರವೇಶ ಪಡೆದಿದೆ.
ಸೋಮವಾರ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ನೇಪಾಳ ವಿರುದ್ಧದ ಪಂದ್ಯದಲ್ಲಿ ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ ಟೀಮ್ ಇಂಡಿಯಾ 10 ವಿಕೆಟ್ಗಳ ಅಮೋಘ ಗೆಲುವು ಕಂಡಿತು.
ಪಂದ್ಯದ ಬಳಿಕ ಡ್ರೆಸ್ಸಿಂಗ್ ರೂಮಿನಲ್ಲಿ ನಡೆದ ಪುಟ್ಟ ಕಾರ್ಯಕ್ರಮದಲ್ಲಿ ಕಠಿಣ ಹೋರಾಟ ನೀಡಿದ್ದ ನೇಪಾಳ ಕ್ರಿಕೆಟ್ ತಂಡವನ್ನು ಟೀಮ್ ಇಂಡಿಯಾ ಅಭಿನಂದಿಸಿದೆ.
ನೇಪಾಳ ತಂಡದ ಕೋಚ್ ಮಾಂಟಿ ದೇಸಾಯಿ ಅವರು ಕೆಲವೊಂದು ವಿವರಗಳನ್ನು ತಿಳಿಸಿದ ನಂತರ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ನೇಪಾಳ ಕ್ರಿಕೆಟ್ ತಂಡದ ಮೂವರು ಆಟಗಾರರಿಗೆ ಪದಕಗಳನ್ನು ನೀಡಿ, ಅಭಿನಂದಿಸಿದರು.
ನಿನ್ನೆಯ ಪಂದ್ಯದಲ್ಲಿ 48 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಎರಡು ಸಿಕ್ಸರ್ಗಳನ್ನು ಒಳಗೊಂಡ 56 ರನ್ ಗಳಿಸಿ ಎಲ್ಲರೂ ಆಶ್ಚರ್ಯಚಕಿತಗೊಳಿಸಿದ್ದ ಬೌಲರ್ ಸೋಂಪಾಲ್ ಕಾಮಿ ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ ಹಾರ್ದಿಕ್ ಪಾಂಡ್ಯ ಅವರಿಂದ ಮೊದಲ ಪದಕವನ್ನು ಪಡೆದರು. ನೇಪಾಳ ಪರ ಅತಿ ಹೆಚ್ಚು ರನ್ (58) ಗಳಿಸಿದ ಆಸಿಫ್ ಶೇಖ್ಗೆ, ವಿರಾಟ್ ಕೊಹ್ಲಿ ಪದಕ ನೀಡಿದರೆ, ತಂಡದಲ್ಲಿ ಉತ್ತಮ ಕ್ಷೇತ್ರ ರಕ್ಷಣೆ ಮಾಡಿ ಗಮನ ಸೆಳೆದ ದೀಪೇಂದ್ರ ಸಿಂಗ್ ಅವರನ್ನು ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಪದಕ ನೀಡಿ ಗೌರವಿಸಿದರು.
ಟೀಮ್ ಇಂಡಿಯಾದ ಈ ನಡೆಗೆ ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಸೋಂಪಾಲ್ ಕಾಮಿ ಶೂಗೆ ಹಸ್ತಾಕ್ಷರ ನೀಡಿದ ವಿರಾಟ್ ಕೊಹ್ಲಿ
ಪಾಕಿಸ್ತಾನ ಆಟಗಾರರೊಂದಿಗೆ ಉತ್ತಮ ಸ್ನೇಹ ಹೊಂದಿ ಸುದ್ದಿಯಾಗಿದ್ದ ವಿರಾಟ್ ಕೊಹ್ಲಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ನೇಪಾಳ ಡ್ರೆಸ್ಸಿಂಗ್ ರೂಮ್ನಲ್ಲಿ ಕೆಲ ಸಮಯ ಕಳೆದ ಕೊಹ್ಲಿ, ಎಲ್ಲ ಆಟಗಾರರ ಜೊತೆ ಮಾತನಾಡಿ ಬ್ಯಾಟಿಂಗ್ ಟಿಪ್ಸ್ ನೀಡಿದರು. ನೇಪಾಳ ಆಟಗಾರ ಸೋಂಪಾಲ್ ಕಾಮಿ ಅವರ ಶೂಗೆ ಸಹಿ ಮಾಡುವ ಮೂಲಕ ಅವರ ಕನಸನ್ನು ವಿರಾಟ್ ಕೊಹ್ಲಿ ನನಸು ಮಾಡಿದರು.
ಅವರು ಸೋಂಪಾಲ್ ಅವರ ಶೂಗೆ ಹಸ್ತಾಕ್ಷರ ಹಾಕಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನೇಪಾಳಿ ವೇಗಿ ‘ಇದು ನನ್ನ ಕನಸು ನನಸಾದ ಕ್ಷಣ’ ಎಂದು ಹೇಳಿದ್ದಾರೆ.