ಐಪಿಎಲ್ 16ನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಶನಿವಾರ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಟೂರ್ನಿಯ 39ನೇ ಪಂದ್ಯದಲ್ಲಿ ಗುಜರಾತ್, ಆತಿಥೇಯ ಕೆಕೆಆರ್ ತಂಡವನ್ನು 7 ವಿಕೆಟ್‌ಗಳ ಅಂತರದಲ್ಲಿ ಸುಲಭವಾಗಿ ಮಣಿಸಿತು.
ಕೋಲ್ಕತ್ತಾ ನೈಟ್ ರೈಡರ್ಸ್ ಮುಂದಿಟ್ಟಿದ್ದ 180 ರನ್‌ಗಳ ಗೆಲುವಿನ ಗುರಿಯನ್ನು ಗುಜರಾತ್, 17.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ ಚೇಸ್ ಮಾಡಿತು. ಅಮೋಘ ಫಾರ್ಮ್ ಮುಂದುವರಿಸಿದ ವಿಜಯ್ ಶಂಕರ್ ಭರ್ಜರಿ ಅರ್ಧಶತಕ (51 ರನ್, 24 ಎಸೆತ, 4×2, 6×5) ಆರಂಭಿಕ ಶುಭಮನ್ ಗಿಲ್ 49 ಹಾಗೂ ಡೇವಿಡ್ ಮಿಲ್ಲರ್ 32 ರನ್‌ಗಳಿಸುವ ಮೂಲಕ ಜಿಟಿ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.
ಈ ಸುದ್ದಿ ಓದಿದ್ದೀರಾ?: ಕುಸ್ತಿಪಟುಗಳ ಪ್ರತಿಭಟನೆ ʻಅಶಿಸ್ತುʼ ಎಂದ ಪಿಟಿ ಉಷಾ!
ಇದಕ್ಕೂ ಮೊದಲು ಬ್ಯಾಟ್ ಮಾಡಿದ್ದ ಕೆಕೆಆರ್ ಪರ ಆರಂಭಿಕ ರಹ್ಮಾನುಲ್ಲಾ ಗುರ್ಬಾಝ್, ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರಾದರೂ, ಸಹ ಆಟಗಾರರಿಂದ ಯಾವುದೇ ಬೆಂಬಲ ವ್ಯಕ್ತವಾಗಲಿಲ್ಲ. 39 ಎಸೆತಗಳನ್ನು ಎದುರಿಸಿದ ಗುರ್ಬಾಝ್ 7 ಸಿಕ್ಸರ್ ಮತ್ತು 5 ಬೌಂಡರಿಗಳ ನೆರವಿನೊಂದಿಗೆ 81 ರನ್‌ಗಳಿಸಿದ್ದ ವೇಳೆ ರಶೀದ್ ಖಾನ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಶಾರ್ದೂಲ್ ಠಾಕೂರ್ ಶೂನ್ಯ ಸುತ್ತಿದರೆ, ನಾಯಕ ನಿತೀಶ್ ರಾಣಾ ಕೇವಲ 4 ರನ್‌ಗಳಿಸುವಷ್ಟರಲ್ಲೇ ವಿಕೆಟ್ ಒಪ್ಪಿಸಿದ್ದು ತಂಡಕ್ಕೆ ಹಿನ್ನಡೆಯನ್ನುಂಟು ಮಾಡಿತು.
ಬೌಲಿಂಗ್‌ನಲ್ಲಿ ಗುಜರಾತ್ ಪರ ಮುಹಮ್ಮದ್ ಶಮಿ 3, ಜಾಶ್ ಲಿಟ್ಲ್ ಮತ್ತು ನೂರ್ ಅಹ್ಮದ್ ತಲಾ 2 ವಿಕೆಟ್ ಪಡೆದರು.
ಟೂರ್ನಿಯಲ್ಲಿ 8ನೇ ಪಂದ್ಯವನ್ನಾಡಿದ ಗುಜರಾತ್ 6ನೇ ಗೆಲುವು ಸಾಧಿಸಿದರೆ, 9ನೇ ಪಂದ್ಯವನ್ನಾಡಿದ ಕೆಕೆಆರ್ 6ನೇ ಸೋಲು ಕಂಡಿತು. ಇದರೊಂದಿಗೆ ಅಂಕಪಟ್ಟಿಯಲ್ಲಿ ಜಿಟಿ ಅಗ್ರಸ್ಥಾನಕ್ಕೇರಿದರೆ, ಕೆಕೆಆರ್ 7ನೇ ಸ್ಥಾನಕ್ಕೆ ಕುಸಿದಿದೆ.