ಐಪಿಎಲ್ 16ನೇ ಆವೃತ್ತಿಯಲ್ಲಿ ಮಂಗಳವಾರ ನಡೆಯುವ ʻಹೈ ವೋಲ್ಟೇಜ್ʼ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು , ಆರ್‌ಸಿಬಿ ತಂಡಗಳು ಮುಖಾಮುಖಿಯಾಗಲಿವೆ.
ಪ್ಲೇ ಆಫ್ ಹಂತದ ಆಸೆಯನ್ನು ಜೀವಂತವಾಗಿರಿಸಬೇಕಾದರೆ ಉಭಯ ತಂಡಗಳಿಗೂ ಇಂದಿನ ಪಂದ್ಯ ಅತ್ಯಂತ ಮಹತ್ವಾದ್ದಾಗಿದೆ.
ಪ್ರಸಕ್ತ ಟೂರ್ನಿಯಲ್ಲಿ ಎರಡೂ ತಂಡಗಳು ತಲಾ 10 ಪಂದ್ಯಗಳನ್ನು ಆಡಿದ್ದು, ಅಷ್ಟೇ ಅಂಕಗಳನ್ನು ಹೊಂದಿವೆ. ಆದರೆ ಮುಂಬೈ ತಂಡಕ್ಕಿಂತಲೂ ಆರ್‌ಸಿಬಿ ಉತ್ತಮ ರನ್ ರೇಟ್ ಹೊಂದಿದೆ. ಅಂಕಪಟ್ಟಿಯಲ್ಲಿ ಸದ್ಯ ಆರ್‌ಸಿಬಿ 6 ಮತ್ತು ಮುಂಬೈ 8ನೇ ಸ್ಥಾನದಲ್ಲಿದೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ಮಂಗಳವಾರ ನಡೆಯುವ ಪಂದ್ಯದ ವಿಜೇತರು 12 ಅಂಕಗಳನ್ನು ಹೊಂದುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಲಿದ್ದಾರೆ. ಸೋಲು ಕಾಣುವ ತಂಡದ ಪ್ಲೇ ಆಫ್ ಹಾದಿ ಕಠಿಣವಾಗಲಿದೆ.
16ನೇ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ಆರ್‌ಸಿಬಿ, ಮುಂಬೈ ಇಂಡಿಯನ್ಸ್ ವಿರುದ್ಧ ಆಡಿತ್ತು. ಮುಂಬೈ ಇಂಡಿಯನ್ಸ್ ನೀಡಿದ್ದ 171 ರನ್‌ಗಳ ಗುರಿಯನ್ನು ಆರ್‌ಸಿಬಿ, 16.2 ಓವರ್ಗಳಲ್ಲಿ ಚೇಸ್ ಮಾಡಿತ್ತು.
ಆರ್‌ಸಿಬಿ ಪಾಲಿಗೆ ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಆಧಾರ ಸ್ತಂಭವಾಗಿದ್ದಾರೆ. ಇವರಿಬ್ಬರ ವಿಕೆಟ್ ಆರಂಭದಲ್ಲೇ ಪತನವಾದರೆ ಪಂದ್ಯದಲ್ಲಿ ಮುಂಬೈ ಕೈ ಮೇಲಾಗಲಿದೆ.
ರೋಹಿತ್ ವೈಫಲ್ಯ: ಮುಂಬೈ ಇಂಡಿಯನ್ಸ್ ಪಾಲಿಗೆ ನಾಯಕ ರೋಹಿತ್ ಶರ್ಮಾ ಅವರ ಫಾರ್ಮ್ ಚಿಂತೆಯನ್ನುಂಟು ಮಾಡಿದೆ. ಕಳೆದ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದ್ದರೂ ಸಹ ಖಾತೆ ತೆರೆಯುವಲ್ಲಿ ವಿಫಲರಾಗಿದ್ದರು. ಇದರೊಂದಿಗೆ ಐಪಿಎಲ್ ಚರಿತ್ರೆಯಲ್ಲೇ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ಬ್ಯಾಟರ್ ಎಂಬ ಕುಖ್ಯಾತಿಗೂ ಒಳಗಾದರು.