ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಇಂದಿನಿಂದ(ಜು.27) ಮೂರು ಪಂದ್ಯಗಳ ಏಕದಿನ ಸರಣಿ ಆರಂಭಗೊಳ್ಳಲಿರುವ ಮುನ್ನವೇ ಪ್ರಮುಖ ಬೌಲರ್ ಮೊಹಮ್ಮದ್ ಸಿರಾಜ್ ಸರಣಿಯಿಂದಲೇ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.
ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಬಿಸಿಸಿಐ, ಮೊಹಮ್ಮದ್ ಸಿರಾಜ್ ಪಾದದ ನೋವಿನಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬಿಸಿಸಿಐ ವೈದ್ಯಕೀಯ ತಂಡ ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ನೀಡಿದೆ. ಹಾಗಾಗಿ, ತಂಡದಿಂದ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ.
ಏಕದಿನ ತಂಡದಿಂದ ಟೀಂ ಇಂಡಿಯಾದ ಬಲಗೈ ವೇಗಿ ಮೊಹಮ್ಮದ್ ಸಿರಾಜ್ ಅವರು ಮೂರು ಪಂದ್ಯಗಳಿಗೂ ಲಭ್ಯವಿರುವುದಿಲ್ಲ ಹಾಗೂ ಜುಲೈ 27ರಂದು ಬಾರ್ಬಡೋಸ್‌ನಲ್ಲಿ ಪ್ರಾರಂಭವಾಗುವ ಏಕದಿನ ಸರಣಿಗೆ ಬದಲಿ ಆಟಗಾರನನ್ನು ತಂಡವು ಕರೆದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
ಹಾಗಾಗಿ, ಸದ್ಯ ವೇಗಿಗಳಾದ ಜಯದೇವ್ ಉನಾದ್ಕಟ್, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್ ತಂಡದಲ್ಲಿದ್ದಾರೆ. ಇವರಲ್ಲಿ ನಾಯಕ ರೋಹಿತ್ ಶರ್ಮಾ ಯಾರಿಗೆ ಅವಕಾಶ ನೀಡಲಿದ್ದಾರೆ ಎಂದು ಕಾದು ನೋಡಬೇಕಿದೆ.
ಜುಲೈ 27 ಮತ್ತು 29ರಂದು ಬಾರ್ಬಡೋಸ್‌ನಲ್ಲೇ ಮೊದಲ ಮತ್ತು ಎರಡನೇ ಏಕದಿನ ಪಂದ್ಯ ನಡೆಯಲಿದ್ದು, ಟ್ರಿನಿಡಾಡ್‌ನಲ್ಲಿ ಆಗಸ್ಟ್ ಒಂದರಂದು ಮೂರನೇ ಪಂದ್ಯ ನಡೆಯಲಿದೆ. ನಂತರ ಐದು ಪಂದ್ಯಗಳ ಟಿ20 ಸರಣಿ ಆಗಸ್ಟ್ 03 ರಿಂದ ಆರಂಭಗೊಳ್ಳಲಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಅಂತಿಮ ದಿನ ದಿನವಿಡೀ ಮಳೆ ಸುರಿದ ಕಾರಣ ಡ್ರಾನಲ್ಲಿ ಅಂತ್ಯಗೊಂಡಿತ್ತು. ರೋಹಿತ್ ಶರ್ಮಾ ನೇತೃತ್ವದ ಭಾರತದ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಜಯಿಸಿದ್ದರಿಂದ ಸರಣಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ಟೆಸ್ಟ್‌ನಲ್ಲಿ ಐದು ವಿಕೆಟ್ ಕಬಳಿಸಿದ್ದ ವೇಗಿ ಮೊಹಮ್ಮದ್ ಸಿರಾಜ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಈಗ ಗಾಯದ ಸಮಸ್ಯೆಯಿಂದ ಏಕದಿನ ಸರಣಿಯಿಂದಲೇ ಹೊರಗುಳಿಯುವಂತಾಗಿದೆ.
ಭಾರತದ ನವೀಕೃತ ಏಕದಿನ ತಂಡ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್), ಇಶಾನ್ ಕಿಶನ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಜಯದೇವ್ ಉನಾದ್ಕಟ್, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್