ಏಪ್ರಿಲ್ 2, 2011. ಯಾರಿಗೆ ನೆನಪಿಲ್ಲ ಹೇಳಿ. ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಟೀಮ್ ಇಂಡಿಯಾವು ಎರಡನೇ ಬಾರಿಗೆ ಏಕದಿನ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದು ಸಂಭ್ರಮಿಸಿದ ಐತಿಹಾಸಿಕ ದಿನ. 13 ವರ್ಷಗಳ ಹಿಂದೆ ಇದೇ ದಿನ, ಇಡೀ ಭಾರತವೇ ಖುಷಿಯ ಅಲೆಯಲ್ಲಿ ತೇಲುತ್ತಿತ್ತು.
ಸುದೀರ್ಘ 28 ವರ್ಷಗಳ ಕಾಯುವಿಕೆಯ ಬಳಿಕ, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಎಂಎಸ್ ಧೋನಿ ನೇತೃತ್ವದ ತಂಡವು ಶ್ರೀಲಂಕಾವನ್ನು ರೋಚಕವಾಗಿ ಸೋಲಿಸುವ ಮೂಲಕ ವಿಶ್ವಕಪ್ ಗೆದ್ದು ಬೀಗಿತ್ತು. ಈ ಐತಿಹಾಸಿಕ ದಿನವನ್ನು ಇಂದು ಬಿಸಿಸಿಐ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ನೆನಪಿಸಿದ್ದು, ಕ್ರಿಕೆಟ್ ಅಭಿಮಾನಿಗಳನ್ನು ಮತ್ತೊಮ್ಮೆ 13 ವರ್ಷ ಹಿಂದಕ್ಕೆ ಕರೆದೊಯ್ದಿದೆ.
Throwback to a very special day! 🏆
🗓️ #OnThisDay in 2011, #TeamIndia won the ODI World Cup for the second time 👏👏 pic.twitter.com/inyLTWKcrY
— BCCI (@BCCI) April 2, 2024
ಏಪ್ರಿಲ್ 2ರಂದು ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಶ್ರೀಲಂಕಾ, 6 ವಿಕೆಟ್ ಕಳೆದುಕೊಂಡು 274 ರನ್ ದಾಖಲಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಟೀಮ್ ಇಂಡಿಯಾ, 48.2 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 277 ರನ್ ದಾಖಲಿಸುವ ಮೂಲಕ ಬರೋಬ್ಬರಿ 28 ವರ್ಷಗಳ ನಂತರ ತನ್ನದೇ ತವರಿನಲ್ಲಿ ಭಾರತ ವಿಶ್ವಕಪ್ ಎತ್ತಿಹಿಡಿದು ಸಂಭ್ರಮಿಸಿತು.
A World Cup innings for the ages 🏆@msdhoni powered India to glory in emphatic style.#CWC11Rewind pic.twitter.com/DvHqga6cVy
— ICC Cricket World Cup (@cricketworldcup) April 2, 2021
2011ರಲ್ಲಿ ಟೀಮ್ ಇಂಡಿಯಾ ವಿಶ್ವಕಪ್ ಅಭಿಯಾನ ಹೀಗಿತ್ತು.
- 2011ರ ಫೆಬ್ರವರಿ 19ರಂದು, ಭಾರತವು ತನ್ನ ವಿಶ್ವಕಪ್ ಅಭಿಯಾನವನ್ನು ಬಾಂಗ್ಲಾದೇಶದ ಢಾಕಾದಲ್ಲಿ ಆರಂಭಿಸಿತ್ತು. ಮೊದಲ ಪಂದ್ಯದಲ್ಲೇ ಗೆದ್ದು ಶುಭಾರಂಭ ಮಾಡಿತು. ವೀರೇಂದ್ರ ಸೆಹ್ವಾಗ್ ಪಂದ್ಯದ ಹೀರೋ ಆಗಿ ಮಿಂಚಿದರು.
- ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಆಕರ್ಷಕ ಶತಕ ಬಾರಿಸಿದರು. ಆದರೆ ಈ ಪಂದ್ಯ ಟೈನಲ್ಲಿ ಕೊನೆಗೊಂಡಿತು.
- ಐರ್ಲೆಂಡ್ ವಿರುದ್ಧ ಭಾರತ ಸುಲಭ ಜಯ ತನ್ನದಾಗಿಸಿಕೊಂಡಿತು. ಪಂದ್ಯದಲ್ಲಿ ಐದು ವಿಕೆಟ್ ಹಾಗೂ 50 ರನ್ ಗಳಿಸಿದ ಯುವರಾಜ್ ಸಿಂಗ್ ಪಂದ್ಯಶ್ರೇಷ್ಠರಾದರು.
- ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಡಚ್ಚರು ನೀಡಿದ ಸುಲಭ ಗುರಿಯನ್ನು 36.3 ಓವರ್‌ಗಳಲ್ಲಿ ಬೆನ್ನಟ್ಟಿದ ಭಾರತವು, 5 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
- ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್ ತೆಂಡೂಲ್ಕರ್ ಮತ್ತೊಂದು ಅದ್ಭುತ ಶತಕ ಸಿಡಿಸಿದರು. ಆದರೆ, ರೋಚಕ ಪಂದ್ಯದಲ್ಲಿ ಭಾರತ ಸೋತಿತು. ಟೂರ್ನಿಯಲ್ಲಿ ಭಾರತ ಸೋತ ಏಕೈಕ ಪಂದ್ಯವಿದು.
- ಚೆನ್ನೈನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿತು. ಯುವರಾಜ್ ಸಿಂಗ್ ಆಕರ್ಷಕ ಶತಕ ಬಾರಿಸಿದರು. 80 ರನ್‌ಗಳ ಗೆಲುವಿನೊಂದಿಗೆ ಭಾರತ ಟ್ರೋಫಿಗೆ ಹತ್ತಿರವಾಯ್ತು.
1999, 2003 ಮತ್ತು 2007ರಲ್ಲಿ ಹ್ಯಾಟ್ರಿಕ್ ವಿಶ್ವಕಪ್ ಗೆದ್ದು ಸತತ ನಾಲ್ಕನೇ ವಿಶ್ವಕಪ್ ಗೆಲುವಿನ ಹೊಸ್ತಿಲಲ್ಲಿದ್ದ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಧೋನಿ ಬಳಗ ಸೋಲಿಸಿತು. ವಿಶ್ವಕಪ್ ಗೆಲ್ಲುವ ಫೇವರೀಟ್ ತಂಡವಾಗಿದ್ದ ಕಾಂಗರೂಗಳನ್ನು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತವು 5 ವಿಕೆಟ್‌ಗಳಿಂದ ಮಣಿಸಿತು. ಇದರೊಂದಿಗೆ ರಿಕಿ ಪಾಂಟಿಂಗ್ ಬಳಗವನ್ನು ಟೂರ್ನಿಯಿಂದಲೇ ಹೊರದಬ್ಬಿತು.
One like for CWC 2011 ICT squad.#CWC11Rewind pic.twitter.com/vjazZprCGT
— Cricket fan (@Cricket_fan2602) April 2, 2024
ಮೊಹಾಲಿಯಲ್ಲಿ ನಡೆದ ಸೆಮಿಫೈನಲ್ ಪಂದ್ಯ ಇನ್ನೂ ರೋಚಕವಾಗಿತ್ತು. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 29 ರನ್‌ಗಳಿಂದ ರೋಚಕವಾಗಿ ಸೋಲಿಸಿದ ಭಾರತ, ಫೈನಲ್‌ಗೆ ಲಗ್ಗೆ ಹಾಕಿತು.
ಫೈನಲ್‌ನಲ್ಲಿ ಕುಮಾರ್ ಸಂಗಕ್ಕಾರ ನೇತೃತ್ವದ ಲಂಕನ್ನರನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಫೈನಲ್ ಪಂದ್ಯದಲ್ಲಿ ಗೌತಮ್ ಗಂಭೀರ್ 97 ರನ್ ಗಳಿಸಿ ಔಟಾಗುವ ಮೂಲಕ 3 ರನ್‌ಗಳಿಂದ ಶತಕ ವಂಚಿತರಾದರು. ವಿರಾಟ್ ಕೊಹ್ಲಿ 35, ಸಚಿನ್ ತೆಂಡುಲ್ಕರ್ 18 ರನ್, ಯುವರಾಜ್ ಸಿಂಗ್ ಔಟಾಗದೆ 21 ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ 91 ರನ್ ಗಳಿಸಿ, ಮಿಂಚಿದರು.
ಈ ಗೆಲುವಿನೊಂದಿಗೆ ಬರೋಬ್ಬರಿ 28 ವರ್ಷಗಳ ನಂತರ ತನ್ನದೇ ತವರಿನಲ್ಲಿ ಭಾರತ ವಿಶ್ವಕಪ್ ಎತ್ತಿಹಿಡಿದು ಸಂಭ್ರಮಿಸಿತು. ಭಾರತ ತಂಡದ ನಾಯಕ ಎಂಎಸ್ ಧೋನಿ ಸಿಕ್ಸರ್ ಸಿಡಿಸುವುದರೊಂದಿಗೆ ಶ್ರೀಲಂಕಾ ತಂಡವನ್ನು ಫೈನಲ್ ಪಂದ್ಯದಲ್ಲಿ ಸೋಲಿಸಿ, ಭಾರತ ಕ್ರಿಕೆಟ್ ತಂಡದ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಏಪ್ರಿಲ್ 2ರಂದು ರಾತ್ರಿ ಇಡೀ ಭಾರತಕ್ಕೆ ಭಾರತವೇ ಸಂಭ್ರಮಿಸಿತ್ತು.
ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಮುಂಬೈನ ತಾಜ್ ಪ್ಯಾಲೇಸ್ ಹೋಟೆಲ್ ಬಳಿ ನಡೆದ ಫೋಟೋ ಶೂಟ್‌ನಲ್ಲಿ ಪಾಲ್ಗೊಂಡರು. ಗೇಟ್ ವೇ ಆಫ್ ಇಂಡಿಯಾ ಪಕ್ಕದಲ್ಲಿ ನಿಂತು ಐಸಿಸಿ ಕ್ರಿಕೆಟ್ ವಿಶ್ವಕಪ್ ಟ್ರೋಫಿಯೊಂದಿಗೆ ಫೋಟೋಗೆ ಪೋಸ್ ನೀಡಿದರು.
