ಮುಂಬರುವ ಏಷ್ಯನ್ ಗೇಮ್ಸ್‌ಗೆ (2026) ನಡೆಯಲಿರುವ ಆಯ್ಕೆ ಪ್ರಕ್ರಿಯೆಯ (ಟ್ರಯಲ್ಸ್) ಮುನ್ನಾದಿನ ಭಾರತದ ತಾರಾ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ದೆಹಲಿ ಹೈಕೋರ್ಟ್‌ನಿಂದ ಭಾರಿ ರಿಲೀಫ್ ಸಿಕ್ಕಿದೆ. ಮೇ 30 ಮತ್ತು 31ರಂದು ನಡೆಯಲಿರುವ ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ನ್ಯಾಯಾಲಯವು ಅವರಿಗೆ ಹಸಿರು ನಿಶಾನೆ ತೋರಿದೆ. ಮಾತೃತ್ವ ರಜೆಯ ಬಳಿಕ ಆಂಕಣಕ್ಕೆ ಮರಳುತ್ತಿರುವ ವಿನೇಶ್‌ಗೆ ಈ ತೀರ್ಪು ಬಹುದೊಡ್ಡ ಆಸರೆಯಾಗಿದೆ.
ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ರೂಪಿಸಿದ್ದ ಆಯ್ಕೆ ನೀತಿಯನ್ನು ಕಟುವಾಗಿ ವಿಮರ್ಶಿಸಿದೆ. ಮಾತೃತ್ವ ರಜೆಯ ಕಾರಣದಿಂದ ಕ್ರೀಡೆಯಿಂದ ಸ್ವಲ್ಪ ಕಾಲ ದೂರವಿದ್ದ ವಿನೇಶ್ ಅವರಂತಹ ‘ಐಕಾನಿಕ್’ (ಶ್ರೇಷ್ಠ) ಆಟಗಾರ್ತಿಯನ್ನು ಪರಿಗಣಿಸುವ ಯಾವುದೇ ವಿವೇಚನಾ ಅಧಿಕಾರವನ್ನು ಹೊಂದಿಲ್ಲದ ಡಬ್ಲ್ಯುಎಫ್‌ಐನ ನಿಯಮಗಳು, “ಸ್ಪಷ್ಟವಾಗಿ ಕ್ರೀಡಾಪಟುಗಳನ್ನು ಹೊರಗಿಡುವ ಸ್ವಭಾವವನ್ನು ಹೊಂದಿವೆ” ಎಂದು ಪೀಠವು ತನ್ನ ತೀರ್ಪಿನಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ. ಕ್ರೀಡೆ ಮತ್ತು ನ್ಯಾಯದ ಹಿತದೃಷ್ಟಿಯಿಂದ ಅರ್ಜಿದಾರರಿಗೆ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವುದು ಅತ್ಯಗತ್ಯ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಇದನ್ನು ಓದಿದ್ದೀರಾ? ಕೊಹ್ಲಿ-ರೋಹಿತ್ 2027ರ ವಿಶ್ವಕಪ್ ಆಡ್ತಾರಾ; ಬಿಸಿಸಿಐ ಮುಂದಿದೆ ದೊಡ್ಡ ಸವಾಲು
ಟ್ರಯಲ್ಸ್‌ಗೆ ವಿಧಿಸಲಾದ ಕಟ್ಟುನಿಟ್ಟಿನ ಷರತ್ತುಗಳು:
ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನ್ಯಾಯಾಲಯವು ಕೆಲವು ಮಹತ್ವದ ನಿರ್ದೇಶನಗಳನ್ನು ನೀಡಿದೆ:
ವಿಡಿಯೋ ಚಿತ್ರೀಕರಣ – ಡಬ್ಲ್ಯುಎಫ್‌ಐ ನಡೆಸುವ ಆಯ್ಕೆ ಪ್ರಕ್ರಿಯೆಯನ್ನು (ಟ್ರಯಲ್ಸ್) ಕಡ್ಡಾಯವಾಗಿ ಸಂಪೂರ್ಣ ವಿಡಿಯೋ ರೆಕಾರ್ಡ್ ಮಾಡಬೇಕು.
ಸ್ವತಂತ್ರ ವೀಕ್ಷಕರ ನೇಮಕ: ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್ – SAI) ಮತ್ತು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ – IOA) ಯಿಂದ ತಲಾ ಒಬ್ಬರು ಸ್ವತಂತ್ರ ವೀಕ್ಷಕರನ್ನು ನೇಮಿಸಬೇಕು. ಈ ವೀಕ್ಷಕರ ಸಮ್ಮುಖದಲ್ಲೇ ಸಂಪೂರ್ಣ ಆಯ್ಕೆ ಪ್ರಕ್ರಿಯೆ ನಡೆಯಬೇಕು.
ಇದಕ್ಕೂ ಮುನ್ನ, ಮೇ 18ರಂದು ದೆಹಲಿ ಹೈಕೋರ್ಟ್‌ನ ಏಕಸದಸ್ಯ ಪೀಠವು ವಿನೇಶ್ ಫೋಗಟ್ ಅವರ ಟ್ರಯಲ್ಸ್ ಭಾಗವಹಿಸುವಿಕೆಯ ಕುರಿತು ತಕ್ಷಣದ ರಿಲೀಫ್ ನೀಡಲು ನಿರಾಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ವಿನೇಶ್ ಅವರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿಯ ವಿಚಾರಣೆ ನಡೆಸಿದ ಪೀಠವು, ಡಬ್ಲ್ಯುಎಫ್‌ಐ ಈ ಹಿಂದೆ ವಿನೇಶ್‌ಗೆ ನೀಡಿದ್ದ ಶೋಕಾಸ್ ನೋಟಿಸ್ ಕೇವಲ “ಪೂರ್ವಯೋಜಿತ ಮತ್ತು ಮುಕ್ತಾಯಗೊಂಡ ವಿಚಾರಗಳನ್ನು ಮರುಪ್ರಸ್ತಾಪಿಸುವ” ಪ್ರಯತ್ನದಂತೆ ಕಾಣುತ್ತಿದೆ ಎಂದು ಅಭಿಪ್ರಾಯಪಟ್ಟಿದೆ. ಈ ಮೂಲಕ ದೇಶದ ಹೆಮ್ಮೆಯ ಕುಸ್ತಿಪಟುವಿಗೆ ಮರಳಿ ಕಣಕ್ಕಿಳಿಯುವ ಅವಕಾಶ ಒಲಿದುಬಂದಿದೆ.




