ವೈಯಕ್ತಿಕ ಕಾರಣಗಳಿಂದ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದ ಟೀಮ್ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ಇನ್ನುಳಿದ ಮೂರು ಟೆಸ್ಟ್ಗಳಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ ಎಂದು ಬಿಸಿಸಿಐ ಶನಿವಾರ ಅಧಿಕೃತ ಹೇಳಿಕೆ ನೀಡಿದೆ.
ಈಗಾಗಲೇ ಎರಡು ಟೆಸ್ಟ್ ಪಂದ್ಯಗಳು ಹೈದರಾಬಾದ್ ಹಾಗೂ ವಿಶಾಖಪಟ್ಟಣದಲ್ಲಿ ನಡೆದಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದಿದ್ದರೆ, ಎರಡನೇ ಟೆಸ್ಟ್ ಅನ್ನು ಟೀಮ್ ಇಂಡಿಯಾ ಗೆಲ್ಲುವ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.
ಇನ್ನುಳಿದ ಮೂರು ಟೆಸ್ಟ್ ರಾಜ್ಕೋಟ್, ರಾಂಚಿ ಮತ್ತು ಧರ್ಮಶಾಲಾದಲ್ಲಿ ನಡೆಯಲಿದೆ. ಈ ಟೆಸ್ಟ್ಗಳಿಗೆ ತಂಡವನ್ನು ನಿರ್ಧರಿಸಲು ಆಯ್ಕೆಗಾರರು ಆನ್ಲೈನ್ ಸಭೆಯಲ್ಲಿ ಭೇಟಿಯಾಗಬೇಕಿತ್ತು. ಇದರಲ್ಲಿ ಮೂರು ಟೆಸ್ಟ್ಗಳಿಗೆ ಅಲಭ್ಯತೆಯ ಬಗ್ಗೆ ಕೊಹ್ಲಿ ಬಿಸಿಸಿಐಗೆ ತಿಳಿಸಿದ್ದಾರೆ.
Virat Kohli won’t be participating in the Test series against England due to personal reasons.
– Come back stronger, King …!!! 👑 pic.twitter.com/3BISk6e1fv
— Mufaddal Vohra (@mufaddal_vohra) February 10, 2024
ಟೀಮ್ ಇಂಡಿಯಾದ ಮಾಜಿ ನಾಯಕ ಕೊಹ್ಲಿ, “ಉಳಿದ ಮೂರು ಟೆಸ್ಟ್ಗಳಿಂದ ಹಿಂದೆ ಸರಿಯುವ ನಿರ್ಧಾರದ ಬಗ್ಗೆ ಆಯ್ಕೆದಾರರಿಗೆ ತಿಳಿಸಿದ್ದಾರೆ. ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ” ಎಂದು ಬಿಸಿಸಿಐ ಇಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ತವರಿನಲ್ಲಿ ಸಂಪೂರ್ಣ ಸರಣಿಯಿಂದ ಹೊರಗುಳಿಯಲಿದ್ದಾರೆ. ವಿರಾಟ್ ಕೊಹ್ಲಿ ತಮ್ಮ 13 ವರ್ಷಗಳ ಟೆಸ್ಟ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಸಂಪೂರ್ಣ ಸರಣಿಯನ್ನು ಕಳೆದುಕೊಳ್ಳಲಿದ್ದಾರೆ.
ಈವರೆಗೆ ಟೆಸ್ಟ್ ಕ್ರಿಕೆಟ್ನಲ್ಲಿ 113 ಪಂದ್ಯಗಳಲ್ಲಿ 191 ಇನ್ನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ, 49.16ರ ಸರಾಸರಿಯಲ್ಲಿ 8,848 ರನ್ ಗಳಿಸಿದ್ದಾರೆ. ಈವರೆಗೆ ಒಟ್ಟು 29 ಶತಕಗಳನ್ನು ಸಿಡಿಸಿದ್ದಾರೆ. ಔಟಾಗದೆ 254 ರನ್ ಗಳಿಸಿರುವುದು ಅವರ ಗರಿಷ್ಠ ಮೊತ್ತವಾಗಿದೆ.
ತಂಡ ಪ್ರಕಟಿಸಿದ ಬಿಸಿಸಿಐ
ಇಂಗ್ಲೆಂಡ್ ವಿರುದ್ಧ ಇನ್ನುಳಿದ ಮೂರು ಟೆಸ್ಟ್ ಪಂದ್ಯಗಳಿಗೆ ಬಿಸಿಸಿಐ ತಂಡ ಪ್ರಕಟಿಸಿದೆ. ವಿರಾಟ್ ಕೊಹ್ಲಿ ಹೊರತಾಗಿ, ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಕೂಡ ಇಂಗ್ಲೆಂಡ್ ವಿರುದ್ಧದ ಕೊನೆಯ ಮೂರು ಟೆಸ್ಟ್ ಪಂದ್ಯಗಳಿಂದ ಹೊರಬಿದ್ದಿದ್ದಾರೆ.
ಗಾಯದ ಸಮಸ್ಯೆಯಿಂದ ಎರಡನೇ ಟೆಸ್ಟ್ ಪಂದ್ಯ ಮಿಸ್ ಮಾಡಿಕೊಂಡಿದ್ದ ಕೆ ಎಲ್ ರಾಹುಲ್ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ ಸ್ಥಾನ ಪಡೆದುಕೊಂಡಿದ್ದಾರೆ. ಯುವ ಆಟಗಾರ ಸರ್ಫರಾಜ್ ಖಾನ್ ಎರಡನೇ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿದ್ದರು. ಆದರೆ ಕೊನೆಯ 11ರಲ್ಲಿ ಸ್ಥಾನ ಪಡೆದಿರಲಿಲ್ಲ.
🚨 NEWS 🚨#TeamIndia‘s Squad for final three Tests against England announced.
Details 🔽 #INDvENG | @IDFCFIRSTBankhttps://t.co/JPXnyD4WBK
— BCCI (@BCCI) February 10, 2024
ಮುಂದಿನ ಮೂರು ಪಂದ್ಯಗಳಲ್ಲಿ ಸರ್ಫರಾಜ್ ಖಾನ್ ಹೆಸರಿದೆ. ಆದರೆ ಯಾವಾಗ ಪದಾರ್ಪಣೆ ಮಾಡಲಿದ್ದಾರೆ ಎಂದು ಕಾದುನೋಡಬೇಕಿದೆ. ಈ ನಡುವೆ ವಿಕೆಟ್ ಕೀಪರ್ ಆಗಿ ಧ್ರುವ್ ಜುರೆಲ್ ಅವರಿಗೂ ಸ್ಥಾನ ನೀಡಲಾಗಿದೆ.
ಇದೇ ವೇಳೆ 17 ಮಂದಿಯ ತಂಡದಲ್ಲಿರುವ ಏಕೈಕ ಹೊಸ ಮುಖ ಬಂಗಾಳದ ವೇಗಿ ಆಕಾಶ್ ದೀಪ್. ಆರ್ಸಿಬಿ ತಂಡದ ಬಲಗೈ ವೇಗಿ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಮತ್ತು ಇತ್ತೀಚಿನ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಭಾರತ ಎ ತಂಡದ ಟೆಸ್ಟ್ ಸರಣಿಯಲ್ಲಿ ತಮ್ಮ ಸ್ಥಿರ ಪ್ರದರ್ಶನಕ್ಕಾಗಿ ರಾಷ್ಟ್ರೀಯ ತಂಡದಿಂದ ಚೊಚ್ಚಲ ಕರೆ ಪಡೆದಿದ್ದಾರೆ. ಅವೇಶ್ ಖಾನ್ ಬದಲಿಗೆ ಮೊಹಮ್ಮದ್ ಸಿರಾಜ್ ತಂಡಕ್ಕೆ ಮರಳಿದ್ದಾರೆ.
ಭಾರತ ಟೆಸ್ಟ್ ತಂಡ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಕೆಎಲ್ ರಾಹುಲ್, ರಜತ್ ಪಾಟೀದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಆರ್. ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್.