ವಿಶ್ವಕಪ್ ಟೂರ್ನಿಯುದ್ಧಕ್ಕೂ ಉತ್ತಮ ಪ್ರದರ್ಶನ ತೋರಿದ್ದ ಭಾರತ ತಂಡ ಫೈನಲ್ ತಂಡದಲ್ಲಿ ನೀರಸ ಪ್ರದರ್ಶನ ತೋರಿದೆ. ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಆಸೀಸ್‌ನ ಉತ್ತಮ ಕ್ಷೇತ್ರ ರಕ್ಷಣೆ ಹಾಗೂ ಅತ್ಯುತ್ತಮ ಬೌಲಿಂಗ್‌ನಿಂದ 50 ಓವರ್‌ಗಳಲ್ಲಿ ಆಲೌಟ್ ಆಗಿ 240 ರನ್ ಗಳಿಸಿ ಆಸ್ಟ್ರೇಲಿಯಾಗೆ ಸಾಧರಣ ಗುರಿ ನೀಡಿದೆ.
ಅಹಮದಾಬಾದ್‌ನ ಮೊಟೆರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಪ್ಯಾಟ್ ಕಮ್ಮಿನ್ಸ್ ಭಾರತಕ್ಕೆ ಬ್ಯಾಟಿಂಗ್ ಆಹ್ವಾನಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆರಂಭಿಕ ಆಘಾತ ಅನುಭವಿಸಿತು.
4 ರನ್ ಗಳಿಸಿದ್ದ ಉದಯೋನ್ಮುಖ ಆಟಗಾರ ಶುಭಮನ್ ಗಿಲ್ ಐದನೇ ಓವರ್‌ನಲ್ಲಿ ಸ್ಟಾರ್ಕ್ ಬೌಲಿಂಗ್‌ನಲ್ಲಿ ಜಂಪಾಗೆ ಕ್ಯಾಚಿತ್ತು ನಿರ್ಗಮಿಸಿದರು. ಎಂದಿನಂತೆ ಸ್ಫೋಟಕ ಆಟವಾಡಿದ ನಾಯಕ ರೋಹಿತ್ ಶರ್ಮಾ 10ನೇ ಓವರ್‌ನಲ್ಲಿ ಮ್ಯಾಕ್ಸ್‌ವೆಲ್ ಬೌಲಿಂಗ್‌ನಲ್ಲಿ ಟ್ರಾವಿಸ್ ಹೆಡ್‌ಗೆ ಕ್ಯಾಚ್ ನೀಡಿ ಔಟಾದರು. 31 ಚೆಂಡುಗಳಲ್ಲಿ 47 ರನ್ ಗಳಿಸಿದ ರೋಹಿತ್ 3 ಸಿಕ್ಸರ್ ಹಾಗೂ 4 ಬೌಂಡರಿ ಬಾರಿಸಿದರು. ನಾಲ್ಕನೇ ಕ್ರಮಾಂಕದ ಶ್ರೇಯಸ್ ಅಯ್ಯರ್ 4 ರನ್ ಗಳಿಗೆ ಪೆವಿಲಿಯನ್‌ಗೆ ನಿರ್ಗಮಿಸಿದರು.
ಈ ಸುದ್ದಿ ಓದಿದ್ದೀರಾ? ವಿಶ್ವಕಪ್ | ದ್ರಾವಿಡ್, ಕೊಹ್ಲಿ,ಶಮಿ ಯಾರಿಗಾಗಿ ಈ ಬಾರಿಯ ಕಪ್; ರೋಚಕ ಹಣಾಹಣಿಯ ನಿರೀಕ್ಷೆಯಲ್ಲಿ ಕ್ರಿಕೆಟ್ ಜಗತ್ತು
ಟೀಂ ಇಂಡಿಯಾದ ಮೂರು ವಿಕೆಟ್ ಪತನವಾದ ನಂತರ ವಿರಾಟ್ ಕೊಹ್ಲಿ ಹಾಗೂ ಕೆ ಎಲ್ ರಾಹುಲ್ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದರು. 109 ಎಸೆತಗಳ ಇವರಿಬ್ಬರ ಜೊತೆಯಾಟದಲ್ಲಿ ಹರಿದು ಬಂದಿದ್ದು 67 ರನ್ ಮಾತ್ರ. ಇದರಲ್ಲಿ ಒಂದು ಬೌಂಡರಿ ಮಾತ್ರ ಇತ್ತು.
66 ಎಸೆತಗಳಲ್ಲಿ 54 ಗಳಿಸಿದ ವಿರಾಟ್ ಕೊಹ್ಲಿ ಆಸೀಸ್ ನಾಯಕ ಕಮ್ಮಿನ್ಸ್ ಬೌಲಿಂಗ್‌ನಲ್ಲಿ 29ನೇ ಓವರ್‌ನಲ್ಲಿ ಬೌಲ್ಡ್ ಆದರು. ಇವರ ಆಟದಲ್ಲಿ 4 ಬೌಂಡರಿಗಳು ಮಾತ್ರ ಇತ್ತು. ಕೊಹ್ಲಿ ಔಟಾದ ನಂತರ ಅಲ್‌ರೌಂಡರ್ ರವೀಂದ್ರ ಜಡೇಜಾ (9) ಹೆಚ್ಚು ಹೊತ್ತು ನಿಲ್ಲಲಿಲ್ಲ.
ಅರ್ಧ ಶತಕ ಗಳಿಸಿದ ಕೆ ಎಲ್ ರಾಹುಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್‌ಗೆ ಕ್ಯಾಚಿತ್ತು ಔಟಾದರು. ರಾಹುಲ್ 107 ಚೆಂಡುಗಳಲ್ಲಿ ಕೇವಲ ಒಂದು ಬೌಂಡರಿಯೊಂದಿಗೆ 66 ರನ್ ಗಳಿಸಿದರು.
ಶಮಿ (6),ಜಸ್‌ಪ್ರೀತ್ ಬೂಮ್ರಾ(1) ಬಂದ ಹಾಗೆಯೇ ಪೆವಿಲಿಯನ್‌ಗೆ ತೆರಳಿದರು. ಸೂರ್ಯ ಕುಮಾರ್ ಯಾದವ್ (18) ಹಾಗೂ ಕುಲ್‌ದೀಪ್ ಯಾದವ್(10) ಗಳಿಸುವುದರೊಂದಿಗೆ ಭಾರತ ಅಂತಿಮವಾಗಿ 50 ಓವರ್‌ಗಳಲ್ಲಿ 240 ರನ್ ಕಲೆ ಹಾಕಿತು.
ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 55/3,ಪ್ಯಾಟ್ ಪಮ್ಮಿನ್ಸ್ 29/2, ಜೋಶ್ ಹ್ಯಾಜಲ್ವುಡ್ 51/2, ಆಡಂ ಜಾಂಪಾ, ಮ್ಯಾಕ್ಸ್‌ವೆಲ್ ತಲಾ ಒಂದು ವಿಕೆಟ್ ಗಳಿಸಿ ಭಾರತವನ್ನು ಕಟ್ಟಿ ಹಾಕಿದರು.