ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಸದ ಸಮಸ್ಯೆ ಹೇಳತೀರಾಗಿದೆ. ಕಸವನ್ನು ಸಂಗ್ರಹಣೆ ಮಾಡಲು ನಿಗದಿತ ಸ್ಥಳವನ್ನು ಹುಡುಕಲು ಪಾಲಿಕೆ ಅಧಿಕಾರಿಗಳು ಹೈರಾಣಾಗಿದ್ದಾರೆ. ಇದೀಗ, ಡೈರಿ ಸರ್ಕಲ್ನ ಫ್ಲೈಓವರ್ ಕೆಳಗಡೆ ಪ್ರಾಥಮಿಕ ಹಂತದಲ್ಲಿ ಕಸ ಸಂಗ್ರಹಣೆ ಮಾಡಲಾಗ್ತಿದೆ. ಪಾಲಿಕೆಯ ಈ ಕ್ರಮಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಡೈರಿ ಸರ್ಕಲ್ ಫ್ಲೈ ಓವರ್ ಕೆಳಗೆ ಪಾಲಿಕೆ 2022ರಲ್ಲಿ ಕಸ ಸಂಗ್ರಹಣೆ ಮಾಡಲು ಆರಂಭಿಸಿದೆ. ಇದೀಗ, ಪಾಲಿಕೆ ಈ ಜಾಗದಲ್ಲಿ ಕಸ ಸಂಗ್ರಹ ಘಟಕ ಮಾಡುತ್ತಿದೆ ಎಂದು ಸ್ಥಳೀಯರು ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಫ್ಲೈಓವರ್ ಕೆಳಗಡೆ ಕಸ ಸಂಗ್ರಹಣೆ ಮಾಡುತ್ತಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ. ನಿತ್ಯ ಕಸದ ಗಬ್ಬುವಾಸನೆ ಅಲ್ಲದೇ, ಕೋರಮಂಗಲ ಮತ್ತು ಜಯದೇವ ಆಸ್ಪತ್ರೆಗೆ ನಿತ್ಯ ನೂರಾರು ಜನ ಸಂಚಾರ ಮಾಡುತ್ತಾರೆ. ಇದರಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ಸಮಸ್ಯೆಯಾಗುತ್ತಿದೆ. ಕೂಡಲೇ, ಕಸ ಸಂಗ್ರಹವನ್ನ ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಪಟ್ಟು ಹಿಡಿದಿದ್ದಾರೆ.
“ಫ್ಲೈ ಓವರ್ ಕೆಳಗಡೆ ಕಸ ಸಂಗ್ರಹಣೆ ಮಾಡದಿರಲು ಪಾಲಿಕೆಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ. ಕಸ ಸಂಗ್ರಹವನ್ನ ಬೇರೆಡೆ ಸ್ಥಳಕ್ಕೆ ಸ್ಥಳಾಂತರ ಮಾಡಿ, ಈ ಜಾಗದಲ್ಲಿ ಪಾರ್ಕ್ ಮಾಡಿ ಇಲ್ಲವಾದರೇ ಪ್ರತಿಭಟನೆ ಮಾಡುತ್ತೇವೆ” ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಹುಂಡೈ ಕಾರು ಶೋರೂಮ್ ಬೆಂಕಿಗೆ ಆಹುತಿ
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಸಂಸ್ಥೆಯ ಮುಖ್ಯ ಪ್ರಧಾನ ಎಂಜಿನಿಯರ್ ಬಸವರಾಜ್ ಕಬಾಡೆ, “ಹೊರವಲಯಗಳಲ್ಲಿ ಕಸ ಸುರಿಯುತ್ತಿದ್ದೇವೆ. ಡೈರಿ ಸರ್ಕಲ್ನ ಫ್ಲೈ ಓವರ್ ಕೆಳಗಡೆ ವಾರ್ಡ್ಗಳಿಂದ ಸಂಗ್ರಹ ಮಾಡುವ ಕಸವನ್ನು ಪ್ರಾಥಮಿಕ ಹಂತದಲ್ಲಿ ಬೇರೆ ಮಾಡಲಾಗುತ್ತದೆ. ಬೆಂಗಳೂರಿನಲ್ಲಿ ಕಸದ ನಿರ್ವಹಣೆ ತುಂಬಾ ಸಮಸ್ಯೆಯಾಗಿದೆ. ಸ್ಥಳಗಳನ್ನು ಗುರುತು ಮಾಡುವುದು ಸಮಸ್ಯೆಯಾಗಿದೆ. ಇದಕ್ಕೆ ಬೇರೆ ಮಾರ್ಗವಿಲ್ಲ. ಆದರೆ, ಜನರಿಗೆ ಕಸದ ವಾಸನೆ ಬರದಂತೆ ಕ್ರಮ ತೆಗೆದುಕೊಳುತ್ತೇವೆ” ಎಂದರು.