ಬ್ಯೂಟಿಷಿಯನ್ ತರಬೇತಿ ಪಡೆದವರಿಗೆ ಈ ಸಾಫ್ ಹಾಗೂ ವರ್ಲ್ಡ್ ವಿಷನ್ ಇಂಡಿಯಾ ಸಂಸ್ಥೆ ವತಿಯಿಂದ ಪ್ರಮಾಣ ಪತ್ರ ವಿತರಣೆ ಫೆಬ್ರವರಿ 12 ರಿಂದ ಫೆಬ್ರವರಿ16ರವರೆಗೆ ಐದು ದಿನಗಳ ಬ್ಯೂಟಿಷಿಯನ್ ತರಬೇತಿ ಕಾರ್ಯಕ್ರಮ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತರಬೇತಿ ಪಡೆದವರಿಗೆ ವೈಷ್ಣವಿ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರದಂದು 35 ಮಂದಿ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಿದರು.
ಕಾರ್ಯಕ್ರಮದಲ್ಲಿ ಸಿದ್ದಣ್ಣಗೌಡ ಬಿರಾದರ್ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಾತನಾಡಿ, “ಮಹಿಳೆಯರು ತಮ್ಮ ಸ್ವಂತ ದುಡಿಮೆಯನ್ನು ಪ್ರಾರಂಭಿಸಿದರೆ ನಮ್ಮ ದೇಶದ ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತದೆ. ಖರೀದಿಸುವ ಪ್ರಮಾಣವು ಹೆಚ್ಚುತ್ತದೆ” ಎಂದು ತಿಳಿಸಿದರು.
ವರ್ಲ್ಡ್ ವಿಷನ್ ಇಂಡಿಯಾ ವ್ಯವಸ್ಥಾಪಕ ಅನಿಲ್ ತೇಜಪ್ಪ ಮಾತನಾಡಿ, ಐದು ದಿನ ನಡೆದ ಕಾರ್ಯಕ್ರಮದ ಬಗ್ಗೆ ತಿಳಿಸಿ, “ಮುಂಬರುವಂತಹ ದಿನಗಳಲ್ಲಿ ಎಲ್ಲ ಹೆಣ್ಣು ಮಕ್ಕಳು ಸ್ವಯಂ ಉದ್ದಿಮೆ ಮಾಡುವಲ್ಲಿ ಯಶಸ್ವಿಗೊಳ್ಳಲು ಸಾಧ್ಯ” ಎಂದು ಹೇಳಿದರು.
ಜಸ್ಟಿನ್ ಈ ಸಾಫ್ ಫೌಂಡೇಶನ್ ಅಧಿಕಾರಿ ಮಾತನಾಡಿ, “ಸುಮಾರು ಕಳೆದ ಎರಡು ವರ್ಷಗಳಿಂದ ಕೇರಳ, ತಮಿಳುನಾಡು, ತೆಲಂಗಾಣ ರಾಜ್ಯಗಳಲ್ಲಿ ಮಹಿಳೆಯರಿಗಾಗಿ ಇಂತಹ ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ನೀಡುತ್ತಿದ್ದು, ಹಲವಾರು ಮಹಿಳೆಯರು ಸ್ವತಃ ಉದ್ದಿಮೆಯನ್ನು ಮಾಡುತ್ತಿದ್ದಾರೆ. ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಇದೇ ಮೊದಲಿಗೆ ವರ್ಲ್ಡ್ ವಿಷನ್ ಇಂಡಿಯಾ ಸಂಸ್ಥೆಯ ಸಹಯೋಗದಲ್ಲಿ ಈ ಒಂದು ಕೌಶಲ್ಯ ಅಭಿವೃದ್ಧಿ ತರಬೇತಿ ಪ್ರಾರಂಭ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಎಲ್ಲ ಹೆಣ್ಣು ಮಕ್ಕಳಿಗೆ ಅವಕಾಶಗಳು ಸಿಗುವಂತೆ ಮಾಡುತ್ತೇವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಮನಗರ | ಲಾರಿ – ಟಿಟಿ ನಡುವೆ ಭೀಕರ ಅಪಘಾತ; ಮೂವರ ದುರ್ಮರಣ
ಈ ಕಾರ್ಯಕ್ರಮದಲ್ಲಿ ಕನ್ಯಾಕುಳೂರ್ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಆಂಜನೇಯ, ಬ್ಯೂಟಿಷಿಯನ್ ತರಬೇತಿದಾರರು ಡೇವಿಡ್ ತಿಮೋತಿ ಹಾಗೂ ಮಮತಾ ಸೇರಿದಂತೆ ಸುಂದರ್, ಸುಪ್ರೀಂ ಜಾಯ್, ರೋಮ್, ಕವಿತಾ ಇದ್ದರು.