ಮಹಿಳೆಯರ ಸಬಲೀಕರಣಕ್ಕಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ 2023ರ ಜೂನ್ 11ರಂದು ಮಹಿಳೆಯರಿಗಾಗಿಯೇ ಶಕ್ತಿ ಯೋಜನೆ ಜಾರಿಗೆ ತಂದಿದೆ. ಮಹಿಳೆಯರು ಈ ಯೋಜನೆಯಡಿಯಲ್ಲಿ ಬಸ್ ನಿರ್ವಾಹಕರಿಗೆ ಆಧಾರ ಕಾರ್ಡ್ ತೋರಿಸಿ ಕರ್ನಾಟಕದಾದ್ಯಂತ ಎಲ್ಲಿ ಬೇಕಾದರೂ ಪ್ರಯಾಣಿಸಬಹುದು. ಆದರೆ, ಕೆಲವು ನಿರ್ವಾಹಕರು ಇನ್ಸೆಂಟಿವ್ ಆಸೆಗೆ ಬಿದ್ದು, ಬೇಕಾಬಿಟ್ಟಿಯಾಗಿ ‘ಶಕ್ತಿ ಯೋಜನೆ’ ಟಿಕೆಟ್ ಹರಿದು ಹಾಕುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿ ವರದಿಯಾಗುತ್ತಿವೆ.
ಶಕ್ತಿ ಯೋಜನೆ ಜಾರಿಯಾದಾಗಿನಿಂದ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಸರ್ಕಾರಿ ಬಸ್‌ಗಳಲ್ಲಿ ನಿರ್ವಾಹಕರು ಮಹಿಳೆಯರಿಗೆ ಫ್ರೀ ಟಿಕೆಟ್ ನೀಡುತ್ತಿದ್ದು, ಈ ಟಿಕೆಟ್ ಹಣವನ್ನು ಸರ್ಕಾರ ನಿಗಮಗಳಿಗೆ ನೀಡುತ್ತದೆ. ಅಲ್ಲದೆ, ಯೋಜನೆಯಡಿ ಬಸ್ ನಿರ್ವಾಹಕರಿಗೆ ಶೇ.3ರಷ್ಟು ಪ್ರೋತ್ಸಾಹ ಧನ ನೀಡಲಾಗುತ್ತಿದೆ.
ಹೀಗಾಗಿ, ಹೆಚ್ಚಿನ ಪ್ರೋತ್ಸಾಹ ಧನ ಪಡೆಯಲು ನಿರ್ವಾಹಕರು ಮಹಿಳೆಯರು ಇಳಿಯುವ ನಿಲ್ದಾಣಗಳಿಗಿಂತ ಮುಂದಿನ ಸ್ಥಳಗಳಿಗೆ ಶೂನ್ಯ ಟಿಕೆಟ್ ನೀಡುತ್ತಿದ್ದಾರೆ. ಇನ್ನು ಮಹಿಳೆಯರು ಬಸ್‌ಗಳಲ್ಲಿ ಇಲ್ಲದೇ, ಇದ್ದರೂ ಕೂಡ ಬೇಕಾಬಿಟ್ಟಿಯಾಗಿ ಟಿಕೆಟ್ ಹರಿಯುತ್ತಿದ್ದಾರೆ. ಇಲ್ಲವೇ, ಶಕ್ತಿ ಯೋಜನೆಯ ಟಿಕೆಟ್‌ಗಳನ್ನು ಪುರುಷ ಪ್ರಯಾಣಿಕರಿಗೆ ನೀಡುತ್ತಿರುವುದು ಬೆಳಕಿಗೆ ಬಂದಿದೆ.
ಬಸ್‌ನಲ್ಲಿ ಮಹಿಳೆಯರು ಇಲ್ಲದೇ ಇದ್ದರೂ, ಕಂಡಕ್ಟರ್ ಬೇಕಾಬಿಟ್ಟಿಯಾಗಿ ಟಿಕೆಟ್ ಹರಿದು ಸರ್ಕಾರಕ್ಕೆ ಸುಳ್ಳು ತೋರಿಸುತ್ತಿದ್ದಾರೆ. ಒಂದು ಟ್ರಿಪ್‌ನಲ್ಲಿ 10 ರಿಂದ 20 ಶಕ್ತಿ ಯೋಜನೆಯ ಉಚಿತ ಟಿಕೆಟ್ ಹರಿಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಧಿಕಾರಿಗಳು ಚಕ್ಕಿಂಗ್ ಮಾಡುವ ವೇಳೆ ಸಿಕ್ಕಿಬೀಳುವ ನಿರ್ವಾಹಕರ ಸಂಖ್ಯೆ ಹೆಚ್ಚಳವಾಗುತ್ತಿದೆ.
ನಾಲ್ಕು ನಿಗಮದಲ್ಲಿ ಕಳೆದ ಎರಡು ತಿಂಗಳಿನಲ್ಲಿ ನೂರಕ್ಕೂ ಹೆಚ್ಚು ನಿರ್ವಾಹಕರು ಚೆಕ್ಕಿಂಗ್ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ. ಬಿಎಂಟಿಸಿ ಬಸ್‌ನಲ್ಲಿ ಮಹಿಳೆಯರು ಇಲ್ಲದೇ ಇದ್ದರೂ ನಿರ್ವಾಹಕರು 25 ರಿಂದ 30 ಟಿಕೆಟ್ ಹರಿದು ಹಾಕುತ್ತಿದ್ದಾರೆ ಎನ್ನಲಾಗಿದೆ.
ಇನ್ಸೆಂಟಿವ್ ಆಸೆಗಾಗಿ ಶಕ್ತಿ ಯೋಜನೆ ದುರ್ಬಳಕೆ
ಬಸ್ ಕಂಡಕ್ಟರ್ ಮತ್ತು ಚಾಲಕ ದಿನಕ್ಕೆ 10 ಸಾವಿರ ಕಲೆಕ್ಷನ್ ಮಾಡಿದರೇ, ಅವರಿಗೆ ದಿನಕ್ಕೆ ಒಬ್ಬರಿಗೆ ₹332 ರಂತೆ ಇಬ್ಬರಿಗೆ ₹664 ಇನ್ಸೆಂಟಿವ್ ನೀಡಲಾಗುತ್ತದೆ. ಶಕ್ತಿ ಯೋಜನೆಯಡಿ ಉಚಿತ ಟಿಕೆಟ್ ನೀಡಿದರೂ, ಸರ್ಕಾರ ನಿಗಮಗಳಿಗೆ ಹಣ ನೀಡುವುದರಿಂದ ಇದನ್ನು ಕೂಡ ನಿಗಮದ ಆದಾಯ ಎಂದು ಪರಿಗಣನೆ ಮಾಡಿ ದಿನಕ್ಕೆ ಬರುವ ಆದಾಯಕ್ಕೆ ಲೆಕ್ಕ ಹಾಕಿ ಆ ಮೊತ್ತದಲ್ಲಿಯೂ ನಿರ್ವಾಹಕ ಮತ್ತು ಚಾಲಕರಿಗೆ ನಿಗಮ ಇನ್ಸೆಂಟಿವ್ ನೀಡುತ್ತದೆ.
ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ನಿರ್ವಾಹಕರು ಇನ್ಸೆಂಟಿವ್ ಆಸೆಗಾಗಿ ಶಕ್ತಿ ಯೋಜನೆಯ ಟಿಕೆಟ್‌ಗಳನ್ನು ಬೇಕಾಬಿಟ್ಟಿಯಾಗಿ ಹರಿದು ಹಾಕುತ್ತಿರುವ ಘಟನೆಗಳು ವರದಿಯಾಗಿವೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ₹5 ಕೋಟಿ ವೆಚ್ಚದಲ್ಲಿ ಫ್ರೀಡಂ ಪಾರ್ಕ್ ನವೀಕರಣ
ಮೆಜೆಸ್ಟಿಕ್ – ವೈಟ್ ಫಿಲ್ಡ್ ಮಾರ್ಗದ ಬಸ್‌ನಲ್ಲಿ ಒಬ್ಬರೇ ಮಹಿಳೆಯರು ಇದ್ದರೂ ಶಕ್ತಿ ಯೋಜನೆಯ 35 ಟಿಕೆಟ್ ಗಳನ್ನು ಹರಿದು ಹಾಕಿ ಕಂಡಕ್ಟರ್ ವೆಂಕಟೇಶ್ ಫೆ.15ರಂದು ಬೆಳಿಗ್ಗೆ 4:50ಕ್ಕೆ ಚೆಕ್ಕಿಂಗ್ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದರು.
ಮೆಜಸ್ಟಿಕ್ – ಬೆನ್ನಿಗಾನಹಳ್ಳಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್‌ನಲ್ಲಿ ಶಕ್ತಿ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ನೀಡಬೇಕಿದ್ದ 25 ಟಿಕೆಟ್‌ಗಳನ್ನು ಬಸ್ ನಿರ್ವಾಹಕ ಪುರುಷರಿಗೆ ನೀಡಿ ಫೆ.6ರಂದು ಬೆಳಿಗ್ಗೆ 8:20ಕ್ಕೆ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ.
ಫೆ.12ರಂದು ರಾತ್ರಿ 9:22ಕ್ಕೆ ಹೆಬ್ಬಾಳ – ಬನಶಂಕರಿ ಮಾರ್ಗದಲ್ಲಿ ಆಂಧ್ರಪ್ರದೇಶದ ಮೂಲದ ಆರು ಜನರಿಂದ ಹಣ ಪಡೆದು ಶಕ್ತಿ ಯೋಜನೆಯ ಉಚಿತ ಟಿಕೆಟ್ ನೀಡಿ ಕಂಡಕ್ಟರ್ ಜಿ. ತಮ್ಮಣ್ಣಗೌಡ ಸಿಕ್ಕಿ ಬಿದ್ದಿದ್ದರು. ಇಲ್ಲಿಯವರೆಗೆ ಇಂತಹ ಪ್ರಕರಣಗಳಲ್ಲಿ 25 ಕ್ಕೂ ಹೆಚ್ಚು ನಿರ್ವಾಹಕರು ಸಿಕ್ಕಿ ಬಿದ್ದಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗಾಗಿ ಶಕ್ತಿ ಯೋಜನೆ ಆರಂಭ ಮಾಡಿದರೇ, ನಿರ್ವಾಹಕರು ಇನ್ಸೆಂಟಿವ್ ಆಸೆಗಾಗಿ ಶಕ್ತಿ ಯೋಜನೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.