- ಸಿಎನ್ಬಿಸಿಯ ಜೂಲಿಯಾ ಬೋರ್ಸ್ಟಿನ್ ಅವರೊಂದಿಗಿನ ಸಂದರ್ಶನದ ವೇಳೆ ಮಾಹಿತಿ ನೀಡಿದ ಸಿಇಒ
- ಈ ಹಿಂದೆ ‘200 ರಿಂದ 250 ಮಿಲಿಯನ್ ದೈನಂದಿನ ಬಳಕೆದಾರ ಉಲ್ಲೇಖಿಸಿದ್ದ ಲಿಂಡಾ ಯಾಕರಿನೊ
ಎಲಾನ್ ಮಸ್ಕ್ ಒಡೆತನದ ಬಳಿಕ ಟ್ವಿಟ್ಟರ್ನ ದೈನಂದಿನ ಬಳಕೆದಾರರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವ ವಿಚಾರವನ್ನು ಈಗಿನ ‘ಎಕ್ಸ್’ ಸಂಸ್ಥೆಯ(ಹಿಂದಿನ ಟ್ವಿಟ್ಟರ್) ಸಿಇಒ ಲಿಂಡಾ ಯಾಕರಿನೊ ಒಪ್ಪಿಕೊಂಡಿದ್ದಾರೆ.
ಇತ್ತೀಚೆಗೆ ವೋಕ್ಸ್ ಮೀಡಿಯಾದ ಕೋಡ್ 2023 ಕಾರ್ಯಕ್ರಮದಲ್ಲಿ ಸಿಎನ್ಬಿಸಿಯ ಜೂಲಿಯಾ ಬೋರ್ಸ್ಟಿನ್ ಅವರೊಂದಿಗಿನ ಸಂದರ್ಶನದ ವೇಳೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಲಿಂಡಾ, ‘ಈ ಹಿಂದೆ ನಾನು ಸಿಎನ್ಬಿಸಿಗೆ ನೀಡಿದ್ದ ಸಂದರ್ಶನದಲ್ಲಿ 250 ಮಿಲಿಯನ್ ದೈನಂದಿನ ಬಳಕೆದಾರರು ಇದ್ದ ಬಗ್ಗೆ ತಿಳಿಸಿದ್ದೆ. ಕಂಪನಿಯು ಪ್ರಸ್ತುತ 225 ಮಿಲಿಯನ್ ದೈನಂದಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ. ತಿಂಗಳಿಗೆ ಸುಮಾರು 540 ಮಿಲಿಯನ್ ಬಳಕೆದಾರರು ಇದ್ದಾರೆ” ಎಂದು ತಿಳಿಸಿದ್ದಾರೆ.
ಆ ಮೂಲಕ ಟ್ವಿಟರ್ ಅನ್ನು ಎಲಾನ್ ಮಸ್ಕ್ ಸ್ವಾಧೀನಪಡಿಸಿಕೊಳ್ಳುವ ಮೊದಲು ಇದ್ದ ಹತ್ತಾರು ಮಿಲಿಯನ್ ಬಳಕೆದಾರರಲ್ಲಿ ಕುಸಿತವಾಗಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಸುಮಾರು 45 ನಿಮಿಷಗಳ ಸುದೀರ್ಘ ಸಂದರ್ಶನ ನೀಡಿರುವ ‘ಎಕ್ಸ್’ ಸಿಇಒ ಲಿಂಡಾ ಯಾಕರಿನೊ, 2024ರಲ್ಲಿ ಸಂಸ್ಥೆಗೆ ಲಾಭದಾಯಕ ವರ್ಷವಾಗಲಿದೆ. ಅದನ್ನು ಸಾಧಿಸಲು ಸಂಸ್ಥೆ ಪ್ರಯತ್ನಿಸುತ್ತಿದೆ. ನಾವು ಈಗ ಅದೇ ವ್ಯವಹಾರದಲ್ಲಿ ಮುಳುಗಿದ್ದೇವೆ. 2024ರ ಆರಂಭದಲ್ಲಿ ಅದರ ಸೂಚನೆ ಸಿಗಲಿದೆ” ಎಂದು ಕೋಡ್ ಕಾನ್ಫರೆನ್ಸ್ನ ವೇದಿಕೆಯಲ್ಲಿ ಸಿಇಒ ಲಿಂಡಾ ಯಾಕರಿನೊ ತಿಳಿಸಿದ್ದಾರೆ.
ಕಳೆದ ವರ್ಷದ ನವೆಂಬರ್ನಲ್ಲಿ ಸರಣಿ ಟ್ವೀಟ್ಗಳ ಮೂಲಕ ಪ್ರತಿದಿನದ ಟ್ವಿಟರ್ ಬಳಕೆದಾರರ ಮಾಹಿತಿಯನ್ನು ಸ್ವತಃ ಪೋಸ್ಟ್ ಮಾಡಿದ್ದ ಎಲಾನ್ ಮಸ್ಕ್, ‘ಟ್ವಿಟರ್ 254.5 ಮಿಲಿಯನ್ ದೈನಂದಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ” ಎಂದಿದ್ದರು.
ಆದಾಗ್ಯೂ, ಕಂಪನಿಯು ತನ್ನ ಸ್ವಾಧೀನದ ನಂತರ ಸಕ್ರಿಯ ಬಳಕೆದಾರರ ಸಂಖ್ಯೆಯಲ್ಲಿ ಎಷ್ಟು ಬೆಳವಣಿಗೆ ನಡೆದಿದೆ ಎಂಬುದನ್ನು ಎಲ್ಲೂ ವಿವರ ಲಭ್ಯವಾಗಿಲ್ಲ.
Twitter added 1.6M daily active users this past week, another all-time high pic.twitter.com/Si3cRYnvyD
— Elon Musk (@elonmusk) November 22, 2022
ಟ್ವಿಟ್ಟರ್ ಅನ್ನು 2022ರ ಅಕ್ಟೋಬರ್ನಲ್ಲಿ ತನ್ನ ತೆಕ್ಕೆಗೆ ಪಡೆದುಕೊಂಡ ಬಳಿಕ ಟೆಸ್ಲಾ ಕಂಪೆನಿಯ ಮಾಲೀಕ ಎಲಾನ್ ಮಸ್ಕ್, ಮೈಕ್ರೋಬ್ಲಾಗಿಂಗ್ ಫ್ಲ್ಯಾಟ್ಫಾರ್ಮ್ನಲ್ಲಿ ಹಲವು ಬದಲಾವಣೆ ಮಾಡುತ್ತಿದ್ದಾರೆ.
ಈ ಹಿಂದೆ ಟ್ವಿಟ್ಟರ್ನಲ್ಲಿದ್ದ ನೀಲಿ ಹಕ್ಕಿಯ ಲೋಗೋ ಈಗ ಇಲ್ಲ. ಬದಲಾಗಿ ಕಪ್ಪು ಅಕ್ಷರದಲ್ಲಿ ಎಕ್ಸ್ (X) ಎಂದು ಬರೆದಿರುವ ಲೋಗೋ ಹಾಗೂ ಟ್ವಿಟರ್ ಟ್ವಿಟರ್ ಬದಲು ‘ಎಕ್ಸ್’ ಎಂದು ಮರುನಾಮಕರಣ ಮಾಡಿದ್ದರು.
“ಶೀಘ್ರದಲ್ಲಿಯೇ ಟ್ವಿಟ್ಟರ್ ಬ್ರ್ಯಾಂಡ್ಗೆ ಮತ್ತು ಎಲ್ಲ ಹಕ್ಕಿಗಳಿಗೆ ಕ್ರಮೇಣವಾಗಿ ನಾವು ವಿದಾಯ ಹೇಳಬೇಕಿದೆ” ಎಂದು ಎಲಾನ್ ಮಸ್ಕ್ ಟ್ವೀಟ್ ಮಾಡಿ ತಿಳಿಸಿದ್ದ ಬೆನ್ನಲ್ಲೇ ಲೋಗೋ ಹಾಗೂ ಬ್ರಾಂಡ್ ಹೆಸರು ಬದಲಾಯಿಸಿದ್ದರು.