ಮಹಾರಾಷ್ಟ್ರದ ಥಾಣೆಯ ಶಹಾಪುರ ಬಳಿ ಗರ್ಡರ್ ಲಾಂಚಿಂಗ್ ಯಂತ್ರ ಕುಸಿದ ಪರಿಣಾಮವಾಗಿ ಕನಿಷ್ಠ 15 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಘಟನೆಯಲ್ಲಿ ಮೂವರು ಗಂಭೀರ ಗಾಯಗೊಂಡಿರುವುದಾಗಿ ಥಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಸಮೃದ್ಧಿ ಎಕ್ಸ್‌ಪ್ರೆಸ್ ಹೆದ್ದಾರಿಯ ಮೂರನೇ ಹಂತದ ನಿರ್ಮಾಣದಲ್ಲಿ ಗರ್ಡರ್ ಲಾಂಚಿಂಗ್ ಯಂತ್ರವನ್ನು ಬಳಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ಶಹಾಪುರ ತಾಲೂಕಿನ ಮುಂಬೈ ನಾಸಿಕ್ ಹೆದ್ದಾರಿಯಿಂದ 5ರಿಂದ 6 ಕಿ.ಮೀ ದೂರದಲ್ಲಿರುವ ಸರ್ಲಂಬೆ ಗ್ರಾಮದ ವ್ಯಾಪ್ತಿಯಲ್ಲಿ ಸಮೃದ್ಧಿ ಎಕ್ಸ್ ಪ್ರೆಸ್ ಹೆದ್ದಾರಿಯ ಕಾಮಗಾರಿ ನಡೆಯುತ್ತಿತ್ತು.
ಸೋಮವಾರ ರಾತ್ರಿ 11 ಗಂಟೆಯ ಸುಮಾರಿಗೆ 17 ಕಾರ್ಮಿಕರು ಮತ್ತು 9 ಎಂಜಿನಿಯರ್‌ಗಳ ಸಮ್ಮುಖದಲ್ಲಿ ಕೆಲಸ ಪ್ರಾರಂಭವಾಗಿತ್ತು. ಆಗ ಇದ್ದಕ್ಕಿದ್ದಂತೆ ಲಾಂಚರ್ ಯಂತ್ರ ಗರ್ಡರ್ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಬಿದ್ದಿದೆ. ಘಟನೆ ತಿಳಿದ ತಕ್ಷಣ ಸ್ಥಳೀಯ ಗ್ರಾಮಸ್ಥರು ನೆರವಿಗೆ ಧಾವಿಸಿದ್ದರು ಎಂದು ತಿಳಿದು ಬಂದಿದೆ.
ಸ್ಥಳೀಯ ಪೊಲೀಸರು ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕ್ರೇನ್ ಸಹಾಯದಿಂದ ಗರ್ಡರ್ ಅಡಿಯಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಹೊರ ತೆಗೆದಿದ್ದಾರೆ.
ರಕ್ಷಣಾ ಕಾರ್ಯ ಇನ್ನೂ ನಡೆಯುತ್ತಿದ್ದು, ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಮತ್ತು ಎನ್ ಡಿ ಆರ್ ಎಫ್ ಅಧಿಕಾರಿಗಳು ಆಗಮಿಸಿದ್ದಾರೆ.
ಇದುವರೆಗೆ 15 ಕಾರ್ಮಿಕರ ಶವಗಳನ್ನು ಶಹಾಪುರ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಎನ್‌ಡಿಆರ್‌ಎಫ್ ತಂಡ ತಿಳಿಸಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಂಭವವಿದೆ.