ಕ್ರಿಕೆಟ್ ವೃತ್ತಿ ಜೀವನದ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ ಇಂಗ್ಲೆಂಡ್ ತಂಡದ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಅವರಿಗೆ ಕೊನೆಯ ಪಂದ್ಯವನ್ನು ಸ್ಮರಣೀಯವಾಗಿಸುವಲ್ಲಿ ಬೆನ್ ಸ್ಟೋಕ್ಸ್ ಬಳಗ ಸಫಲವಾಗಿದೆ.
ಆ್ಯಷಸ್ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧ 49 ರೋಚಕ ರನ್‌ಗಳ ಅಭೂತಪೂರ್ವ ಜಯ ಗಳಿಸುವ ಮೂಲಕ ಬ್ರಾಡ್ ನೆನಪಿನಲ್ಲಿ ಉಳಿಯುವ ಪಂದ್ಯವನ್ನಾಗಿಸಿದ್ದಲ್ಲದೇ, ಐದು ಟೆಸ್ಟ್ ಪಂದ್ಯಗಳ ಆ್ಯಷಸ್ ಸರಣಿಯಲ್ಲಿ 2-2 ಸಮಬಲ ಸಾಧಿಸಿದೆ. ಒಂದು ಪಂದ್ಯ ಡ್ರಾ ಗೊಂಡಿತ್ತು.
ಓವಲ್‌ನ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ ಮುಗಿದ ಬಳಿಕ ಆಸ್ಟ್ರೇಲಿಯಾಕ್ಕೆ ಗೆಲ್ಲಲು 394 ರನ್‌ಗಳ ಗುರಿ ನೀಡಿತ್ತು. ಆದರೆ ಒಂದು ಹಂತದಲ್ಲಿ ತಮ್ಮ ಕೈಯಲ್ಲಿದ್ದ ಪಂದ್ಯದಲ್ಲಿ ನಾಟಕೀಯ ಬೆಳವಣಿಗೆಯಲ್ಲಿ ಆಸೀಸ್ ಬ್ಯಾಟರ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು. ಪರಿಣಾಮ 49 ರನ್ ಗಳಿಂದ ಸೋಲನುಭವಿಸಿತು.
ಕೊನೆಯ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಎರಡು ವಿಕೆಟ್ ಪಡೆಯುವಲ್ಲಿ ಬ್ರಾಡ್ ಸಫಲರಾದರು. ಮೊದಲ ಇನ್ನಿಂಗ್ಸ್‌ನಲ್ಲಿ ಕೂಡ ಎರಡು ವಿಕೆಟ್ ಗಳಿಸಿದ್ದರು.
ಆ್ಯಷಸ್ ಟೆಸ್ಟ್ ಸರಣಿಯ ಬಳಿಕ ನಿವೃತ್ತಿಯಾಗುವುದಾಗಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್, ಕಳೆದ ಶನಿವಾರ ದಿಢೀರ್ ಆಗಿ ಪ್ರಕಟಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಪಡಿಸಿದ್ದರು. ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಬಳಿಕ ತಮ್ಮ ನಿರ್ಧಾರ ತಿಳಿಸಿದ್ದರು.
37 ವರ್ಷದ ಬ್ರಾಡ್, ಆ್ಯಷಸ್‌ನ ಅಂತಿಮ ಪಂದ್ಯ ಸೇರಿದಂತೆ ಒಟ್ಟು 167 ಟೆಸ್ಟ್‌ಗಳಿಂದ 604 ವಿಕೆಟ್‌ಗಳನ್ನು ಪಡೆದಿದ್ದಾರೆ. ಟೆಸ್ಟ್‌ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಐದನೇ ಬೌಲರ್ ಅವರಾಗಿದ್ದಾರೆ.
2006 ರಲ್ಲಿ ಟಿ20 ಮತ್ತು ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅವರು, 2007 ರಲ್ಲಿ ಕೊಲಂಬೊದಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದೊಂದಿಗೆ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟಿದ್ದರು.