2024ರ ಜನವರಿಯಲ್ಲಿ ಪಂಚ ರಾಜ್ಯಗಳ ವಿಧಾನಸಭೆ ಅವಧಿ ಮುಕ್ತಾಯಗೊಳ್ಳಲಿರುವ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಪ್ರಕಟಿಸಿದಂತೆ ಛತ್ತೀಸ್‌ಗಢ ಮತ್ತು ಮಿಝೋರಾಂ ರಾಜ್ಯಗಳಲ್ಲ ಇಂದು ಮತದಾನ ಆರಂಭವಾಗಿದ್ದು, ಮಧ್ಯಾಹ್ನ 11ರವರೆಗೆ ಶೇ.26ರಷ್ಟು ಮತ ಚಲಾವಣೆಯಾಗಿರುವುದಾಗಿ ವರದಿಯಾಗಿದೆ.
ಲೋಕಸಭಾ ಚುನಾವಣೆಗೂ ಮುನ್ನ ನಡೆಯುತ್ತಿರುವ ಈ ಚುನಾವಣೆಯನ್ನು ‘ಸೆಮಿಫೈನಲ್’ ಎಂದೇ ಪರಿಗಣಿಸಲಾಗಿದ್ದು, ತಮ್ಮ ಮುಂದಿನ ಸರ್ಕಾರವನ್ನು ಆಯ್ಕೆ ಮಾಡಲು ಜನ ಯಾರಿಗೆ ಅಧಿಕಾರ ನೀಡಲಿದ್ದಾರೆ ಎಂದು ಕಾದು ನೋಡಬೇಕಿದೆ.
ಭಾರತದ ಈಶಾನ್ಯ ರಾಜ್ಯವಾಗಿರುವ ಮಿಝೋರಾಂನಲ್ಲಿ 40 ವಿಧಾನಸಭಾ ಕ್ಷೇತ್ರಗಳಿದ್ದು, ಚುನಾವಣಾ ಆಯೋಗವು ಒಂದೇ ಹಂತದಲ್ಲಿ ಇಲ್ಲಿ ಮತದಾನ ನಡೆಸುತ್ತಿದೆ.
ಸದ್ಯದ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 174 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಿಝೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್), ಕಾಂಗ್ರೆಸ್ ಮತ್ತು ಝೋರಾಮ್ ಪೀಪಲ್ಸ್ ಮೂವ್ಮೆಂಟ್ (ಝೆಡ್ ಪಿ ಎಂ) ಎಲ್ಲ 40 ಕ್ಷೇತ್ರಗಳಿಂದಲೂ ಸ್ಪರ್ಧಿಸುತ್ತಿವೆ. ಬಿಜೆಪಿ, ಎಎಪಿ ಮತ್ತು ಸ್ವತಂತ್ರ ಅಭ್ಯರ್ಥಿಗಳು ಕ್ರಮವಾಗಿ 23, 4 ಮತ್ತು 27 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದಾರೆ.
ಕ್ರಿಶ್ಚಿಯನ್ ಪ್ರಾಬಲ್ಯವಿರುವ ಮಿಝೋರಾಂನಲ್ಲಿ ಎಂಎನ್‌ಎಫ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದು, ಪಕ್ಷದ ಅಧ್ಯಕ್ಷ ಝೊರಾಮ್‌ತಂಗ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮಿಝೋರಾಂನಲ್ಲಿ ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ. ಈಶಾನ್ಯ ರಾಜ್ಯಾದ್ಯಂತ 1,276 ಮತಗಟ್ಟೆಗಳಲ್ಲಿ 8,00,000 ಕ್ಕೂ ಹೆಚ್ಚು ಅರ್ಹ ಮತದಾರರು ಇಂದು ಮತ ಚಲಾಯಿಸುವ ನಿರೀಕ್ಷೆಯಿದೆ.
ಛತ್ತೀಸ್‌ಗಢದಲ್ಲಿ ಇಂದು ಮೊದಲ ಹಂತದ ಮತದಾನ
ಛತ್ತೀಸ್‌ಗಢದಲ್ಲಿ ಎರಡು ಹಂತಗಳಲ್ಲಿ ಮತದಾನ ನಿಗದಿಯಾಗಿದ್ದು, ಇಂದು ಮೊದಲ ಹಂತದ ಮತದಾನ ನಡೆಯುತ್ತಿದೆ. ನವೆಂಬರ್ 17ರಂದು ಎರಡನೇ ಹಂತದ ಮತದಾನ ನಡೆಯಲಿದೆ.
ಒಟ್ಟು 90 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಛತ್ತೀಸ್‌ಗಢದಲ್ಲಿ ಮೊದಲ ಹಂತದ ಮತದಾನದಲ್ಲಿ 20 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. 11 ಗಂಟೆಯವರೆಗಿನ ಮತದಾನದಲ್ಲಿ ಶೇ.22.97 ಮತ ಚಲಾವಣೆಯಾಗಿರುವುದಾಗಿ ವರದಿಯಾಗಿದೆ.
ಪೊಲೀಸ್ ಮತ್ತು ಅರೆಸೇನಾ ಪಡೆಗಳ ಬಿಗಿ ಭದ್ರತೆಯ ನಡುವೆ ಚುನಾವಣೆ ನಡೆಯುತ್ತಿದ್ದರೂ, ಸುಕ್ಮಾ ಜಿಲ್ಲೆಯಲ್ಲಿ ನಕ್ಸಲೀಯರು ನಡೆಸಿದ ಐಇಡಿ ಸ್ಫೋಟದಲ್ಲಿ ಸಿಆರ್‌ಪಿಎಫ್ ಕಮಾಂಡೋ ಒಬ್ಬರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಮತದಾನದ ವೇಳೆಗಿನ ಭದ್ರತೆಯನ್ನು ಪರಿಶೀಲಿಸುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ.
ಮೊದಲ ಹಂತದ 20 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಿಗೆ ಬೆಳಗ್ಗೆ 7 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಮತದಾನ ನಡೆಯಲಿದೆ. ಉಳಿದ 10 ಕ್ಷೇತ್ರಗಳಿಗೆ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ.
ಮೊದಲ ಹಂತದಲ್ಲಿ 19,93,937 ಪುರುಷ ಮತದಾರರು, 20,84,675 ಮಹಿಳಾ ಮತದಾರರು ಮತ್ತು 69 ತೃತೀಯ ಲಿಂಗಿ ಮತದಾರರು 20 ಸ್ಥಾನಗಳಲ್ಲಿ ತಮ್ಮ ಹಕ್ಕು ಚಲಾಯಿಸುವ ಅರ್ಹತೆ ಪಡೆದಿದ್ದಾರೆ. ಈ ಹಂತದಲ್ಲಿ ಒಟ್ಟು 40,78,681 ಮತದಾರರಿದ್ದಾರೆ.