- ನನ್ನ ಬಗ್ಗೆ ವಿಮರ್ಶೆ ಮಾಡಲು ‘ಉಡುಗೊರೆ’ ಬಿಟ್ಟರೆ ಇನ್ಯಾವುದೇ ವಿಷಯ ಇಲ್ಲ
- ‘ಬೌದ್ಧಿಕ ದಿವಾಳಿತನ ಪ್ರದರ್ಶಿಸಿ ಜನರ ಮುಂದೆ ಇನ್ನಷ್ಟು ಚಿಕ್ಕವರಾಗಬೇಡಿ‘
ಒಂದು ವೇಳೆ ಸ್ಫೋಟವಾದರೆ ಗ್ಯಾಸ್ ಸಿಲಿಂಡರ್ ಅಥವಾ ಕುಕ್ಕರ್ ಸ್ಪೋಟವಾಗಬೇಕೇ ಹೊರತು ಸ್ಟೌ ಸ್ಪೋಟವಾಗುವ ಸಾಧ್ಯತೆಯೇ ಇಲ್ಲ ಎಂಬ ಕನಿಷ್ಠ ಪರಿಜ್ಞಾನವೂ ವಿಪಕ್ಷಗಳಿಗೆ ಇಲ್ಲದಿರುವುದು ದುರದೃಷ್ಟಕರ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿರುಗೇಟು ನೀಡಿದ್ದಾರೆ.
ಮತದಾರರನ್ನು ಸೆಳೆಯಲು ಕಳಪೆ ಸ್ಟೌಗಳನ್ನು ನೀಡಿದ್ದರ ಪರಿಣಾಮ ಅದು ಸ್ಫೋಟಗೊಂಡಿದೆ ಎಂಬ ಆರೋಪ ಸುಧಾಕರ್ ವಿರುದ್ಧ ಕೇಳಿಬಂದಿತ್ತು. ಸುಧಾಕರ್ ಫೋಟೊ ಇರುವ ಹಾನಿಯಾದ ಸ್ಟೌ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.
ಈ ಕುರಿತು ಸರಣಿ ಮಾಡಿರುವ ಸಚಿವ ಡಾ. ಕೆ ಸುಧಾಕರ್, “ಚುನಾವಣೆ ಸಂದರ್ಭದಲ್ಲಿ ಜನರಿಗೆ ಉಡುಗೊರೆ ಕೊಟ್ಟು ಮತ ಖರೀದಿ ಮಾಡುವ ಸಂಸ್ಕೃತಿ ನನ್ನದಲ್ಲ ಮತ್ತು ಅದರ ಅವಶ್ಯಕತೆಯೂ ನನಗಿಲ್ಲ” ಎಂದು ತಿಳಿಸಿದ್ದಾರೆ.
“ಚಿಕ್ಕಬಳ್ಳಾಪುರದಲ್ಲಿ ಕಳೆದ ಹತ್ತು ವರ್ಷಗಳಿಂದ ಮಾಡಿರುವ ಅಭಿವೃದ್ಧಿಯೇ ನಾನು ನನ್ನ ಜನತೆಗೆ ಕೊಟ್ಟಿರುವ ಉಡುಗೊರೆ. ನನ್ನ ಕೆಲಸವೇ ನನಗೆ ಶ್ರೀರಕ್ಷೆ. ಪ್ರತೀ ವರ್ಷದಂತೆ ಈ ವರ್ಷವೂ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಂಡ ಮಹಿಳೆಯರಿಗೆ ಸಮಾಧಾನಕರ ಬಹುಮಾನವಾಗಿ ಸ್ಟೌಗಳನ್ನು ನೀಡಲಾಗಿತ್ತು” ಎಂದು ಸ್ಪಷ್ಟನೆ ನೀಡಿದ್ದಾರೆ.
“ಚುನಾವಣೆ ಸಂದರ್ಭದಲ್ಲಿ ‘ಉಡುಗೊರೆ’ ನೀಡಿ ಮತ ಕೊಂಡುಕೊಳ್ಳುವ ಕಾಂಗ್ರೆಸ್, ಜೆಡಿಎಸ್ ನಾಯಕರ ಕಾಮಾಲೆ ಕಣ್ಣಿಗೆ ಎಲ್ಲವೂ ಹಾಗೆ ಕಾಣುವುದು ಅಚ್ಚರಿಯೇನಲ್ಲ” ಎಂದು ವಾಗ್ದಾಳಿ ನಡೆಸಿದ್ದಾರೆ.
“ಸತ್ಯಾಂಶ ಅರಿಯುವ ಪ್ರಯತ್ನ ಮಾಡದೆ ವರದಿ ಮಾಡಿರುವ ದಿನಪತ್ರಿಕೆ ಮತ್ತು ಅದನ್ನು ಬಳಸಿಕೊಂಡು ಜನರ ದಿಕ್ಕು ತಪ್ಪಿಸಲು ಹೊರಟಿರುವ ವಿಪಕ್ಷಗಳ ಕಥೆ ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಎಂಬಂತಿದೆ” ಎಂದು ಕುಟುಕಿದ್ದಾರೆ.
“ಸ್ಟೌ ಬಳಸುವ ರೀತಿಯಲ್ಲಿ ತಿಳುವಳಿಕೆ ಕೊರತೆಯಿಂದ ಉಂಟಾದ ಒಂದು ಲೋಪದಿಂದ ಈ ಘಟನೆ ಸಂಭವಿಸಿದೆಯೇ ಹೊರತು, ಸ್ಟೌವ್‌ನ ಗುಣಮಟ್ಟದಿಂದ ಯಾವುದೇ ಅಪಾಯ ಅಥವಾ ತೊಂದರೆ ಉಂಟಾಗಿಲ್ಲ” ಎಂದು ಸಮರ್ಥಿಸಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅಂಬೇಡ್ಕರ್‌ಗೆ ಅವಮಾನ ಮಾಡಿದ ಬಿಜೆಪಿ ಅಭ್ಯರ್ಥಿ, ಶಾಸಕ ರಘು
“ಚಿಕ್ಕಬಳ್ಳಾಪುರದ ಶಾಸಕನಾಗಿ, ಜನಪ್ರತಿನಿಧಿಯಾಗಿ 10 ವರ್ಷ ಸೇವೆಯ ನಂತರ ವಿಪಕ್ಷಗಳಿಗೆ ನನ್ನ ಬಗ್ಗೆ ವಿಮರ್ಶೆ ಮಾಡಲು ‘ಉಡುಗೊರೆ’ ಬಿಟ್ಟರೆ ಇನ್ಯಾವುದೇ ವಿಷಯ ಇಲ್ಲ ಎಂತಾದರೆ ಅದು ನನ್ನ ಕೆಲಸಕ್ಕೆ ವಿಪಕ್ಷಗಳು ನೀಡಿರುವ ಸರ್ಟಿಫಿಕೇಟ್ ಎಂದು ಭಾವಿಸುತ್ತೇನೆ” ಎಂದು ಕುಟುಕಿದ್ದಾರೆ.
“ಕ್ಷೇತ್ರಕ್ಕೆ, ಜನರಿಗೆ ಉಪಯೋಗವಾಗುವ ನೈಜ, ಗಂಭೀರ ಅಭಿವೃದ್ಧಿ ವಿಷಯಗಳ ಬಗ್ಗೆ ಟೀಕೆ – ಟಿಪ್ಪಣಿ ಮಾಡಿ. ಅದು ಬಿಟ್ಟು ಈ ರೀತಿ ಕ್ಷುಲ್ಲಕ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ನಿಮ್ಮ ಬೌದ್ಧಿಕ ದಿವಾಳಿತನ ಪ್ರದರ್ಶಿಸಿ ಜನರ ಮುಂದೆ ಇನ್ನಷ್ಟು ಚಿಕ್ಕವರಾಗಬೇಡಿ. ವಿಪಕ್ಷಗಳಿಗೆ ಇದು ನನ್ನ ಸಲಹೆ” ಎಂದು ಟ್ವೀಟ್ ಮಾಡಿದ್ದಾರೆ.