ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಇರಾನ್-ಅಮೆರಿಕ ಸಂಘರ್ಷವು ಗಲ್ಫ್ ಸಹಕಾರ ಮಂಡಳಿಯ (GCC) ಆರು ರಾಷ್ಟ್ರಗಳ ಆರ್ಥಿಕತೆಯ ಮೇಲೆ ತೀವ್ರ ದುಷ್ಪರಿಣಾಮ ಬೀರಿದೆ. ಗಲ್ಫ್ ರಾಷ್ಟ್ರಗಳು 2026ರಿಂದ 2030ರ ಅವಧಿಯಲ್ಲಿ ಈ ರಾಷ್ಟ್ರಗಳು ಒಟ್ಟಾರೆ 475 ಬಿಲಿಯನ್ ಡಾಲರ್ (ಸುಮಾರು 40 ಲಕ್ಷ ಕೋಟಿ ರೂಪಾಯಿ) ಬಜೆಟ್ ಕೊರತೆಯನ್ನು ಎದುರಿಸಲಿವೆ ಎಂದು ಜಾಗತಿಕ ವಿಮಾ ಮತ್ತು ಆರ್ಥಿಕ ಸಂಶೋಧನಾ ಸಂಸ್ಥೆ ‘ಅಲಿಯಾನ್ಸ್ ರಿಸರ್ಚ್’ ತನ್ನ ಇತ್ತೀಚಿನ ವರದಿಯಲ್ಲಿ ಎಚ್ಚರಿಸಿದೆ.
ಯುದ್ಧದ ಪರಿಣಾಮವಾಗಿ ಗಲ್ಫ್ ರಾಷ್ಟ್ರಗಳ ಮೂಲಸೌಕರ್ಯಕ್ಕೆ ಈಗಾಗಲೇ 200 ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಭೌತಿಕ ಹಾನಿಯಾಗಿದೆ. 2030ರ ವೇಳೆಗೆ ಒಟ್ಟು ಆರ್ಥಿಕ ಉತ್ಪಾದನೆಯಲ್ಲಿ 790 ಬಿಲಿಯನ್ ಡಾಲರ್ ನಷ್ಟ ಉಂಟಾಗುವ ಅಂದಾಜಿದೆ. ಇರಾನ್ ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಿಂದಾಗಿ 80ಕ್ಕೂ ಹೆಚ್ಚು ಇಂಧನ ಘಟಕಗಳಿಗೆ ಹಾನಿಯಾಗಿದ್ದು, ಇದರಲ್ಲಿ ಮೂರನೇ ಒಂದು ಭಾಗದಷ್ಟು ಘಟಕಗಳು ತೀವ್ರವಾಗಿ ಜಖಂಗೊಂಡಿವೆ. ವಿಶೇಷವಾಗಿ ಕತಾರ್‌ನ ‘ನಾರ್ತ್ ಫೀಲ್ಡ್’ ಅನಿಲ ಘಟಕಕ್ಕೆ ಆಗಿರುವ ಹಾನಿಯು ಅದರ ಒಟ್ಟು ಅನಿಲ ಉತ್ಪಾದನೆಯ ಶೇ. 18ರಷ್ಟರ ಮೇಲೆ ಪರಿಣಾಮ ಬೀರಿದ್ದು, ಇದು ಸಹಜ ಸ್ಥಿತಿಗೆ ಮರಳಲು ಹಲವು ವರ್ಷಗಳೇ ಬೇಕಾಗಬಹುದು.
ಇದನ್ನೂ ಓದಿ: ಇರಾನ್ ಯುದ್ಧ: ಭಾರತ ಕಲಿಯಬೇಕಿರುವ ಪಾಠವೇನು?
ತೈಲ ಮತ್ತು ಅನಿಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿನ ಅಡೆತಡೆಗಳಿಂದಾಗಿ 2026ರ ಮೊದಲ ಹತ್ತು ತಿಂಗಳಲ್ಲಿ ಗಲ್ಫ್ ರಾಷ್ಟ್ರಗಳ ಕಚ್ಚಾ ತೈಲ ರಫ್ತು ಕಳೆದ ವರ್ಷಕ್ಕಿಂತ ಶೇ. 27.6ರಷ್ಟು ಕುಸಿದಿದೆ. 2026ರಲ್ಲಿ ಜಿಸಿಸಿ ರಾಷ್ಟ್ರಗಳ ಜಿಡಿಪಿ ಶೇ. 4.0ರಷ್ಟು ಕುಸಿಯಲಿದ್ದರೆ, ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಶೇ. 3.8ರಿಂದ ಶೇ. 4.8ರಷ್ಟು ಆರ್ಥಿಕ ಹಿಂಜರಿತದ ಮುನ್ಸೂಚನೆ ನೀಡಿದೆ. ಹಾರ್ಮುಜ್ ಜಲಸಂಧಿಯನ್ನೇ ಸಂಪೂರ್ಣವಾಗಿ ಅವಲಂಬಿಸಿರುವ ಕತಾರ್ (ಶೇ. 14), ಕುವೈತ್ (ಶೇ. 11) ಮತ್ತು ಬಹ್ರೇನ್ (ಶೇ. 8) ಆರ್ಥಿಕತೆಗಳು ತೀವ್ರ ಕುಸಿತ ಕಾಣಲಿದ್ದು, ಪರ್ಯಾಯ ಬಂದರು ಹೊಂದಿರುವ ಒಮಾನ್ ಮಾತ್ರ ಶೇ. 3.3ರಷ್ಟು ಬೆಳವಣಿಗೆ ದಾಖಲಿಸುವ ನಿರೀಕ್ಷೆಯಿದೆ.
ಬಜೆಟ್ ಕೊರತೆ ಮತ್ತು 247 ಬಿಲಿಯನ್ ಡಾಲರ್ ಹಳೆಯ ಸಾಲದ ಮರುಪಾವತಿಗಾಗಿ ಗಲ್ಫ್ ರಾಷ್ಟ್ರಗಳಿಗೆ ಒಟ್ಟು 722 ಬಿಲಿಯನ್ ಡಾಲರ್ ಹಣಕಾಸಿನ ಅಗತ್ಯವಿದೆ. ಇದನ್ನು ಸರಿದೂಗಿಸಲು ಈ ರಾಷ್ಟ್ರಗಳು 301 ಬಿಲಿಯನ್ ಡಾಲರ್ ಹೊಸ ಸಾಲ ಪಡೆಯಲು ಮುಂದಾಗಿದ್ದು, ವಿದೇಶಿ ವಿನಿಮಯ ಮೀಸಲು ನಿಧಿಯಿಂದ 125 ಬಿಲಿಯನ್ ಡಾಲರ್ ಮತ್ತು ಸಾರ್ವಭೌಮ ಸಂಪತ್ತು ನಿಧಿಯಿಂದ (Sovereign Wealth Funds) 90 ಬಿಲಿಯನ್ ಡಾಲರ್ ಬಳಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಈಗಾಗಲೇ 2026ರ ಸೆಪ್ಟೆಂಬರ್ ಅಂತ್ಯಕ್ಕೆ ಗಲ್ಫ್ ರಾಷ್ಟ್ರಗಳ ಒಟ್ಟು ಸಾಲ ಭದ್ರತೆಗಳ ಮೊತ್ತ 1.2 ಟ್ರಿಲಿಯನ್ ಡಾಲರ್ ದಾಟಿದ್ದು, ಇದರಲ್ಲಿ ಬಹ್ರೇನ್ ಅತ್ಯಂತ ದುರ್ಬಲ ಸ್ಥಿತಿಯಲ್ಲಿದೆ.
ಕೇವಲ ಇಂಧನ ಕ್ಷೇತ್ರವಷ್ಟೇ ಅಲ್ಲದೆ, ಪ್ರವಾಸೋದ್ಯಮ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಗಳಿಗೂ ಯುದ್ಧದ ಬಿಸಿ ತಟ್ಟಿದೆ. 2026ರ ಮೊದಲಾರ್ಧದಲ್ಲಿ ಗಲ್ಫ್ ರಾಷ್ಟ್ರಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಶೇ. 22ರಷ್ಟು ಇಳಿಕೆಯಾಗಿದ್ದು, ಪ್ರವಾಸೋದ್ಯಮವು ಯುದ್ಧಪೂರ್ವ ಸ್ಥಿತಿಗೆ ಮರಳಲು 2029ರವರೆಗೆ ಕಾಯಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ, ಜನವರಿಗೆ ಹೋಲಿಸಿದರೆ ಸೆಪ್ಟೆಂಬರ್ ವೇಳೆಗೆ ದುಬೈನ ಮನೆಗಳ ಬೆಲೆಯಲ್ಲಿ ಶೇ. 10.2ರಷ್ಟು ಕುಸಿತ ದಾಖಲಾಗಿದೆ.



