- ವೃದ್ಧ ದಂಪತಿಯ ಪ್ರಾಮಾಣಿಕತೆಯನ್ನು ಮೆಚ್ಚಿದ ನೆಟ್ಟಿಗರು
- ‘ಮೇಕೆ ಕೇವಲ ಪ್ರಾಣಿಯಲ್ಲ, ಅವಳ ಕುಟುಂಬದ ಭಾಗ’ ಎಂದ ನೆಟ್ಟಿಗ
ರೈಲಿನಲ್ಲಿ ತನ್ನ ಮೇಕೆಯೊಂದಿಗೆ ಪ್ರಯಾಣಿಸುತ್ತಿದ್ದ ಬಡ ವೃದ್ಧ ಮಹಿಳೆಯೊಬ್ಬರು ತಮಗೆ ಮಾತ್ರವಲ್ಲದೇ, ಮೇಕೆಗೂ ಟಿಕೆಟ್ ಪಡೆದುಕೊಂಡು ಸುದ್ದಿಯಾಗಿದ್ದಾರೆ.
ರೈಲಿನಲ್ಲಿ ಟಿಟಿಇ ರೈಲ್ವೆ ಟಿಕೆಟ್ ಪರಿಶೀಲನೆಯ ವೇಳೆ ಈ ಬೆಳವಣಿಗೆ ನಡೆದಿದ್ದು, ಟಿಟಿಇಯ ‘ಬಾಡಿ ವೋರ್ನ್’ ಕ್ಯಾಮೆರಾದಲ್ಲಿ ವಿಡಿಯೋ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.
ಬಡ ವೃದ್ಧ ಮಹಿಳೆ ತನ್ನ ಪತಿ ಹಾಗೂ ಮೇಕೆಯೊಂದಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಟಿಕೆಟ್ ಪರಿಶೀಲನೆಗೆಂದು ಬಂದ ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್ (TTE) ಅಧಿಕಾರಿ, ಟಿಕೆಟ್ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಹೌದು ಇದೆ ಎಂದು ಉತ್ತರಿಸಿದ ವೃದ್ಧ ಮಹಿಳೆ ತನ್ನ ಪತಿಯ ಬಳಿಯಲ್ಲಿ ಅಧಿಕಾರಿಗೆ ಟಿಕೆಟ್ ತೋರಿಸುವಂತೆ ತಿಳಿಸಿದ್ದಾರೆ.
ಪರಿಶೀಲನೆಯ ಸಂದರ್ಭ, “ನಮಗಿಬ್ಬರಿಗೆ ಮಾತ್ರವಲ್ಲ. ನನ್ನ ಮೇಕೆಗೂ ಸೇರಿ ಮೂರು ಟಿಕೆಟ್ ತೆಗೆದುಕೊಂಡಿದ್ದೇನೆ” ಎಂದು ಆತ್ಮವಿಶ್ವಾಸದಿಂದ ಹೇಳಿದ್ದಾರೆ. ಆಕೆಯ ಈ ಹೇಳಿಕೆಯ ವಿಡಿಯೋ ಟಿಟಿಇಯ ‘ಬಾಡಿ ವೋರ್ನ್’ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ವಿಡಿಯೋ ಯಾವಾಗಿನದ್ದು, ಯಾವ ರೈಲಿನಲ್ಲಿ ಪ್ರಯಾಣಿಸಿದ್ದು ಎಂಬ ಮಾಹಿತಿ ಲಭ್ಯವಾಗಿಲ್ಲ. ಆದರೆ, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ವೈರಲ್ ಆಗಿದ್ದು, ಬಡ ಮಹಿಳೆಯ ಪ್ರಾಮಾಣಿಕತೆಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

“ಆಕೆಯ ಬಳಿಯಲ್ಲಿರುವ ಮೇಕೆ ಆಕೆಗೆ ಕೇವಲ ಪ್ರಾಣಿಯಲ್ಲ. ಅದು ಅವಳ ಕುಟುಂಬದ ಭಾಗ. ಕುಟುಂಬದ ಸದಸ್ಯರೊಂದಿಗೆ ಪ್ರಯಾಣಿಸುವಾಗ ಟಿಕೆಟ್ ಪಡೆಯದಿರಲು ಸಾಧ್ಯವೇ? ಸಮಾನತೆಯ ಪಾಠವನ್ನು ನಾವು ಇಂಥವರಿಂದ ಕಲಿಯಬೇಕು. ಹಲವರಿಗೆ ಇವರು ಮಾದರಿ. ಎಂತಹ ದೊಡ್ಡ ಮನಸ್ಸು. ಆಕೆಯ ಆತ್ಮವಿಶ್ವಾಸದ ನಗುವೇ ಎಲ್ಲವನ್ನೂ ಹೇಳುತ್ತದೆ” ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
“ಇಂತಹವರು ನಮ್ಮ ದೇಶದ ಹೆಮ್ಮೆ. ಪ್ರಾಮಾಣಿಕ ಭಾರತೀಯ ಪ್ರಜೆ ಈಕೆ” ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.