ಚುನಾವಣೆ 2023 | ಮತದಾನದ ಬಗ್ಗೆ ಲೇಖಕಿಯರ ಮನದಾಳದ ಮಾತು

Date:

ಕರ್ನಾಟಕ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ, ಭ್ರಷ್ಟಾಚಾರ, ವೋಟಿಗಾಗಿ ಹಣ ನೀಡುವ ವ್ಯವಹಾರ ಸಾಕಷ್ಟು ಸದ್ದು ಮಾಡುತ್ತಿರುವಾಗ ನಾಡಿನ ಲೇಖಕಿಯರ ಮನದಾಳದ ಮಾತು ಇಲ್ಲಿದೆ.

ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿವೆ. ರಾಜಕೀಯ ಪಕ್ಷಗಳ ಪ್ರಣಾಳಿಕೆಗಳು ‘ಮಹಿಳಾ ಸಬಲೀಕರಣದ’ ಜಪ ಮಾಡ್ತಿವೆ. ಆದರೆ, ದೇಶದಲ್ಲಿ ನಡೆಯುತ್ತಿರುವ ಮಹಿಳಾ ವಿರೋಧಿ ಕೃತ್ಯಗಳಿಗೆ ರಾಜಕೀಯ ಪಕ್ಷಗಳ ಪ್ರತಿಕ್ರಿಯೆ ಗಮನಿಸಿದಲ್ಲಿ ಜನಪ್ರತಿನಿಧಿಗಳ ‘ಮಹಿಳಾ ಸಬಲೀಕರಣ’ದ ವ್ಯಾಖ್ಯಾನವೇ ಬದಲಾಗುವಂತಿದೆ. ಈ ಬಾರಿಯ ಚುನಾವಣೆ ರಾಜಕಾರಣಿಗಳಿಗೆ ಮಾತ್ರವಲ್ಲ, ಜನಸಾಮಾನ್ಯರಿಗೂ ಮುಖ್ಯ. ಭ್ರಷ್ಟಾಚಾರ, ವೋಟಿಗಾಗಿ ಹಣ ನೀಡುವ ವ್ಯವಹಾರ ಸಾಕಷ್ಟು ಸದ್ದು ಮಾಡುತ್ತಿರುವ ಹೊತ್ತಿನಲ್ಲಿ ನಾಡಿನ ಲೇಖಕಿಯರ ಮನದಾಳದ ಮಾತು ಕೇಳಲೇಬೇಕು.

ಲೇಖಕಿಯರು ಎಂತಹ ಪಕ್ಷ ಅಧಿಕಾರಕ್ಕೆ ಬರಬೇಕೆಂದು ಬಯಸುತ್ತಿದ್ದಾರೆ? ಜನಸಾಮಾನ್ಯರಿಗೆ ಸೃಜನಶೀಲ ಲೇಖಕಿಯರ ಕಿವಿಮಾತುಗಳೇನು? ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಲೇಖಕಿಯರು ಪ್ರತಿಕ್ರಿಯಿಸಿದ್ದಾರೆ. ಈ ಪ್ರಯತ್ನದ ಭಾಗವಾಗಿ, ಕನ್ನಡದ ಪ್ರಮುಖ ಲೇಖಕಿಯರಾದ ವೈದೇಹಿ, ಪ್ರತಿಭಾ ನಂದಕುಮಾರ್, ಸುನಂದಾ ಕಡಮೆ, ಪಿ ಚಂದ್ರಿಕಾ, ಭಾರತಿ ಹೆಗಡೆ ಹಾಗೂ ಟೀನಾ ಶಶಿಕಾಂತ್ ನೀಡಿದ ಪ್ರತಿಕ್ರಿಯೆಗಳ ವಿವರ ಇಲ್ಲಿದೆ. 

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮತದಾನ ಬಹುದೊಡ್ಡ ಕರ್ತವ್ಯ: ವೈದೇಹಿ

ಕನ್ನಡದ ಪ್ರಮುಖ ಲೇಖಕಿಯರಲ್ಲೊಬ್ಬರಾದ ವೈದೇಹಿ ಪ್ರಕಾರ, “ನಿರಂಕುಶ ಪ್ರಭುತ್ವದಲ್ಲಿ ಮತದಾನದ ಹಕ್ಕು ಇರುವುದಿಲ್ಲ, ನಮ್ಮ ಧ್ವನಿಯೂ ಇರುವುದಿಲ್ಲ, ನಮ್ಮದು ಪ್ರಜಾಪ್ರಭುತ್ವ ಹಾಗಾಗಿ ಮತದಾನ ನಮ್ಮ ಧ್ವನಿ, ಅದನ್ನು ಸರಿಯಾದ ರೀತಿಯಲ್ಲಿ ಚಲಾಯಿಸಲೇಬೇಕು. ನಮ್ಮ ಹಕ್ಕನ್ನು ನಾವು ಚಲಾಯಿಸಿ, ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವುದು ನಮ್ಮೆಲ್ಲರ ಮೂಲಭೂತ ಕರ್ತವ್ಯ. ಅದನ್ನು ಬಿಟ್ಟರೆ ನಮಗೆ ಬೇರೆ ದಾರಿ ಇಲ್ಲ, ಪ್ರಜಾಪ್ರಭುತ್ವವೇ ನಮಗೆ ದಿಕ್ಕು.”

ಎಂತಹ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, “ಜನಪರ ಸರ್ಕಾರ ಅಧಿಕಾರಕ್ಕೆ ಬರಬೇಕು. ಕೇವಲ ಪ್ರಣಾಳಿಕೆಗಳಲ್ಲಿ ಮಾತ್ರವಲ್ಲ, ಅವನ್ನು ಕಾರ್ಯರೂಪಗೊಳಿಸುವಲ್ಲಿಯೂ ಬದ್ಧತೆ ಉಳಿಸಿಕೊಳ್ಳುವ ಸರ್ಕಾರ ಅಧಿಕಾರಕ್ಕೆ ಬರಬೇಕು” ಎಂದು ಹೇಳಿದ್ದಾರೆ.

“ಕನಸೇ ಇಲ್ಲದ ಸರ್ಕಾರಗಳು ನಮಗೆ ಬೇಡ. ಕನಸಿರುವ ಸರ್ಕಾರ ಅಧಿಕಾರಕ್ಕೆ ಬರಬೇಕು. ಮುಖ್ಯವಾಗಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಪ್ಪಿಸುವಂತಹ ಸರ್ಕಾರಗಳನ್ನು ನಾನು ಎದಿರುನೋಡುತ್ತೇನೆ. ರೈತರು, ಮಹಿಳೆಯರು, ಬಡಬಗ್ಗರು ಘನತೆಯಿಂದ ಬದುಕುವುದನ್ನು ಸಾಧ್ಯವಾಗಿಸುವಂತಹ ಸರ್ಕಾರಕ್ಕಾಗಿ ನಾನು ಮತ ಚಲಾಯಿಸುತ್ತೇನೆ. ಪ್ರಜೆಗಳ ಬಹುದೊಡ್ಡ ಕರ್ತವ್ಯವೇ ಮತದಾನ. ಮಹಿಳೆಯರು ಇಂದು ಏನನ್ನೇ ಸಾಧಿಸಿದ್ದರೂ, ಅದಕ್ಕೆ ಕಾರಣ ಪ್ರಜಾಪ್ರಭುತ್ವ. ಅದರ ಬೇರನ್ನು ಗಟ್ಟಿಗೊಳಿಸಲು ಎಲ್ಲರೂ ಮತದಾನ ಮಾಡಲೇಬೇಕು” ಎಂದು ಕರೆ ನೀಡಿದ್ದಾರೆ.  

ಪ್ರಜಾಪ್ರಭುತ್ವದ ಅಡಿಪಾಯ ರಕ್ಷಿಸಿ: ಸುನಂದಾ ಕಡಮೆ

ಮತದಾನದ ಪ್ರಾಮುಖ್ಯತೆ ಬಗ್ಗೆ ಪ್ರತಿಕ್ರಿಯಿಸಿರುವ ಕನ್ನಡದ ಪ್ರಮುಖ ಲೇಖಕಿ ಸುನಂದಾ ಕಡಮೆ, “ಸಂವಿಧಾನಿಕ ಚುನಾವಣೆಗಳಲ್ಲಿ ಗರಿಷ್ಠ ಪ್ರಮಾಣದ ಮತದಾನ ನಡೆಯದಿದ್ದರೆ, ಪ್ರಜಾಪ್ರಭುತ್ವದ ಅಡಿಪಾಯವೇ ಕುಸಿದಂತೆ. ಅದರಲ್ಲೂ ರಾಷ್ಟ್ರ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರು ನಮ್ಮ ಬಲವನ್ನು ತೋರಲೇಬೇಕಾದ ಕಾಲವಿದು” ಎಂದು ಎಚ್ಚರಿಸಿದ್ದಾರೆ. 

ಎಂತಹ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂಬ ಪ್ರಶ್ನೆಗೆ ಸ್ಪಂದಿಸಿರುವ ಸುನಂದಾ ಕಡಮೆ, “ಧರ್ಮವನ್ನು ಮುಂದಿರಿಸಿ ಮುಗ್ಧರನ್ನು ಅಂದಭಕ್ತರನ್ನಾಗಿ ಪರಿವರ್ತಿಸಿ, ತಮ್ಮ ಅಧಿಕಾರ ಲಾಲಸೆ ತೀರಿಸಿಕೊಳ್ಳುತ್ತಿರುವ ಇಂದಿನ ಮತಾಂಧ ಸರ್ಕಾರ ಮೊದಲು ಕೊನೆಯಾಗಬೇಕಿದೆ. ಬರಹಗಾರರು, ಸಮಾಜ ಸುಧಾರಕರು, ಪತ್ರಕರ್ತರು ಹಾಗೂ ರಾಜಕಾರಣಿಗಳು ಇವರೆಲ್ಲರೂ ಸಮಾಜವಾದಿಗಳಾಗಿದ್ದರೆ ಮಾತ್ರ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ. ಹಾಗಾಗಿ ಇಂದು ನಾಡಿಗೆ ಅವಶ್ಯವಾಗಿರುವುದು ಸಮಾಜವಾದದ ಹಿನ್ನೆಲೆಯಿರುವ ಸರ್ಕಾರ” ಎಂಬ ಸ್ಪಷ್ಟ ಹೇಳಿಕೆ ನೀಡಿದ್ದಾರೆ. 

ಮತ ಹಾಕಿ ರಾಜಕೀಯದ ಬಗ್ಗೆ ಮಾತಾಡಿ: ಪ್ರತಿಭಾ ನಂದಕುಮಾರ್

ಮತದಾನದ ಪ್ರಾಮುಖ್ಯತೆ ಮತ್ತು ಮುಂದಿನ ಸರ್ಕಾರಗಳ ಬಗ್ಗೆ ಲೇಖಕಿ ಪ್ರತಿಭಾ ನಂದಕುಮಾರ್ ಪ್ರತಿಕ್ರಿಯಿಸಿದ್ದು, “ಮತದಾನ ಮಾಡದೇ ರಾಜಕೀಯದ ಬಗ್ಗೆ ಮಾತನಾಡುವ ಹಕ್ಕು ಇರುವುದಿಲ್ಲ” ಎಂದಿದ್ದಾರೆ.

“ರಾಜಕೀಯದ ಎಲ್ಲಾ ವಿದ್ಯಾಮಾನಗಳು ಪರಿಣಾಮ ಬೀರುವುದು ಮಹಿಳೆಯರ ಮೇಲೆಯೇ, ಬೆಲೆ ಏರಿಕೆಯಿಂದ ರಾಜಕಾರಣಿಗಳ ಕೀಳುಮಟ್ಟದ ಹೇಳಿಕೆಗಳವರೆಗೆ ಪ್ರತಿ ವಿಚಾರವೂ ನೇರವಾಗಿ ಹೆಣ್ಣು ಮಕ್ಕಳಿಗೆ ಸಂಬಂಧಿಸಿದ್ದು” ಎಂದು ವಿವರಿಸಿದ್ದಾರೆ. 

“ರಾಜಕಾರಣಿಗಳು ಹೆಣ್ಣು ಮಕ್ಕಳ ಬಗ್ಗೆ ತುಂಬಾ ಕೇವಲವಾಗಿ ಮಾತನಾಡುತ್ತಿದ್ದಾರೆ, ಇದು ಅತ್ಯಂತ ಅಪಾಯಕಾರಿ. ಯಾಕೆಂದರೆ ನಾವು ಕಳೆದ 100 ವರ್ಷಗಳಲ್ಲಿ ಶತಮಾನದಿಂದ ಬಂದಂತಹ ಕ್ರೌರ್ಯಗಳನ್ನು ಹಿಮ್ಮೆಟ್ಟಿಸಿ ಶಿಕ್ಷಣದಿಂದಾಗಿ ಹಂತಹಂತವಾಗಿ ಬೆಳೆದು ಮುಂದೆ ಬಂದಿದ್ದೇವೆ. ಈ ಮಟ್ಟಕ್ಕೆ ತಲುಪಲು ತುಂಬಾ ಕಷ್ಟಪಟ್ಟಿದ್ದೇವೆ. ಹೆಣ್ಣು ಮಕ್ಕಳು ಶಿಕ್ಷಣ ಪಡೆಯಬೇಕು, ಅವರಿಗೆ ಸ್ವಾತಂತ್ರ್ಯ ಸಿಗಬೇಕು, ಕೆಲಸ ಮಾಡಬೇಕು, ಎಲ್ಲಾ ಕ್ಷೇತ್ರಗಳಲ್ಲೂ ಅವರದೇ ಸಾಧನೆ ಇರಬೇಕು. ಮುಖ್ಯವಾಗಿ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎನ್ನುವ ಕಾರಣದಿಂದಾಗಿ ಮುಂದೆ ಸಾಗಿದ್ದೇವೆ. ಆದರೆ ಕಳೆದ ಕೆಲ ವರ್ಷಗಳಲ್ಲಿ ಹೆಣ್ಣು ಮಕ್ಕಳನ್ನು 200 ವರ್ಷ ಹಿಂದಕ್ಕೆ ತಳ್ಳುವಂತಹ ಪ್ರಕ್ರಿಯೆಗಳು ನಡೆಯುತ್ತಿವೆ. ಕಳೆದ ಒಂದು ದಶಕದ ಹಿಂದಿನ ಪರಿಸ್ಥಿತಿ ಹೀಗೆ ಇರಲಿಲ್ಲ. ಆದರೆ ಈಗ ಹೆಣ್ಣುಮಕ್ಕಳನ್ನು ರಾಜಕಾರಣದಲ್ಲಿ ಒಂದು ಸಬ್ಜೆಕ್ಟ್ ಅನ್ನುವ ರೀತಿ ಬಳಸಿಕೊಳ್ಳಲಾಗ್ತಿದೆ. ದಿನಬೆಳಗಾದರೇ ಹೆಣ್ಣು ಮಕ್ಕಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಅವರಿಗೇನು ಬೇಕಾಗಿಲ್ಲ, ಅವರೇನು ಮಹಾ ಅನ್ನುವ ಉಡಾಫೆ ಧೋರಣೆಗಳಿಂದ ಕುಗ್ಗಿಸುವಂತಹ ಹೇಳಿಕೆಗಳನ್ನು ನೀಡಲಾಗುತ್ತಿದೆ. ಸನಾತನ ಸಂಸ್ಕೃತಿ ಹೆಸರಿನಲ್ಲಿ ಹೆಣ್ಣು ಮಕ್ಕಳನ್ನು 200 ವರ್ಷ ಹಿಂದಕ್ಕೆ ತಳ್ಳುವಂತಹ ವಿದ್ಯಾಮಾನಗಳು ವ್ಯವಸ್ಥಿತವಾಗಿ ನಡೆಯುತ್ತಿವೆ” ಎಂದು ಕಿಡಿಕಾರಿದ್ದಾರೆ.  

“ಯಾವ ದೇಶದಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಹೆಣ್ಣು ಮಕ್ಕಳು ರಾಜಕಾರಣದಲ್ಲಿ ಮುಂದೆ ಬರಲು ಆಲೋಚಿಸುತ್ತಿದ್ದರೋ. ಅದೇ ದೇಶದಲ್ಲಿ ಇಂದು ರಾಷ್ಟ್ರಪತಿ ಸ್ಥಾನದಲ್ಲಿ ಮಹಿಳೆಗೆ ಯಾವ ಅಧಿಕಾರವಿಲ್ಲದಂತೆ ನೋಡಿಕೊಳ್ಳಲಾಗುತ್ತಿದೆ. ಇದು ಜಾತಿ ರಾಜಕಾರಣ ಅಂತ ಎಲ್ಲರಿಗೂ ಗೊತ್ತಿದೆ. ವಿತ್ತ ಮಂತ್ರಿಗಳು ಮಹಿಳೆಯಾಗಿದ್ದರೂ ಪ್ರಯೋಜನವಿಲ್ಲ. ಅವರ ಮನಸ್ಥಿತಿ ತೀರಾ ಪುರುಷಪ್ರಧಾನ ವ್ಯವಸ್ಥೆಯದ್ದು. ಜನಾಭಿಪ್ರಾಯಕ್ಕಾಗಿ ಹೇಳಿಕೆ ಕೊಟ್ಟು. ಅವನ್ನು ಕಾರ್ಯರೂಪಕ್ಕೆ ಇಳಿಸುವಲ್ಲಿ ಸೋಲುತ್ತಿರುವ ಪಕ್ಷಗಳ ಬಗ್ಗೆ ಈಗ ನಾವು ಎಚ್ಚರಿಕೆಯಿಂದ ಇರಬೇಕು” ಎಂದು ಪ್ರತಿಭಾ ನಂದಕುಮಾರ್ ಎಚ್ಚರಿಸಿದ್ದಾರೆ. 

ನಮ್ಮ ಮತ ಅತ್ಯಂತ ಮುಖ್ಯವಾದದ್ದು, ನಮ್ಮ ವೋಟು ಪಡೆಯುವ ಯೋಗ್ಯತೆ ಇರುವ ಅಭ್ಯರ್ಥಿಗೆ ವೋಟು ಹಾಕಬೇಕು. ಮೊದಲೆಲ್ಲಾ ಮನೆಯ ಪುರುಷರ ಮಾತು ಕೇಳಿ ವೋಟು ಹಾಕುವ ಅಭ್ಯಾಸವಿತ್ತು. ಈಗ ಕಾಲ ಬದಲಾಗಿದೆ. ಹೆಣ್ಣು ಮಕ್ಕಳು ಹೆಚ್ಚೆಚ್ಚು ಮತದಾನ ಮಾಡಬೇಕು. ವೋಟೇ ಹಾಕದೇ ರಾಜಕಾರಣದ ಬಗ್ಗೆ ಮಾತಾಡುವ ಹಕ್ಕು ಇರುವುದಿಲ್ಲ. ಇದು ಮಹಿಳೆ ಮತ್ತು ಅಭಿವ್ಯಕ್ತಿ ಎಲ್ಲಾ ಕ್ಷೇತ್ರಕ್ಕೂ ಅನ್ವಯವಾಗುತ್ತದೆ. ಹಾಗೇ ರಾಜಕೀಯಕ್ಕೂ ಅನ್ವಯಿಸುತ್ತದೆ. ಇಂದಿನ ರಾಜಕಾರಣದಲ್ಲಿ ಮಹಿಳೆಯರು ತಮ್ಮನ್ನು ಅಭಿವ್ಯಕ್ತಿಗೊಳಿಸಿಕೊಳ್ಳದೆ, ನಮಗೆ ಅವಕಾಶವಿಲ್ಲ ಎಂದು ಆರೋಪಿಸುವುದು ತಪ್ಪಾಗುತ್ತದೆ ಎಂದಿದ್ದಾರೆ.

ಸರ್ಕಾರವೇ ರೇಪಿಸ್ಟ್‌ಗಳನ್ನು ಬಿಡುಗಡೆ ಮಾಡಿ, ಕ್ರಿಮಿನಲ್‌ಗಳಿಗೆ, ಅತ್ಯಾಚಾರಿಗಳಿಗೆ ಟಿಕೆಟ್ ಕೊಟ್ಟರೆ ನಮಗೆ ಯಾವ ಭರವಸೆ ಇರುತ್ತದೆ? ನಡವಳಿಕೆ, ಚಾರಿತ್ರ್ಯ ಎನ್ನುವುದು ಗಂಡಸರಿಗೆ ಅತೀಮುಖ್ಯ. ಚಾರಿತ್ರ್ಯವೇ ಇಲ್ಲದ ಕ್ರಿಮಿನಲ್‌ಗೆ ವೋಟ್ ಹಾಕಿದರೆ ಅವರು ದುಡ್ಡುಕೊಟ್ಟು ಗೆದ್ದರೆ, ನಮ್ಮ ಭವಿಷ್ಯವೇನು ಎನ್ನುವುದುನ್ನು ಚಿಂತಿಸಬೇಕು. ವೈಯಕ್ತಿಕ ಬದುಕಿನಲ್ಲಿ ನೈತಿಕತೆ ಇಲ್ಲದ, 40 ಕ್ರಿಮಿನಲ್ ಕೇಸ್ ಇರುವವರಿಗೆ ಟಿಕೆಟ್ ಕೊಟ್ಟು, ಪ್ರಧಾನಿಗಳು ಬಂದು ಪ್ರಚಾರ ಮಾಡುತ್ತಾರೆ. ಅವರು ಹೆಣ್ಣು ಮಕ್ಕಳನ್ನು ಏನೆಂದುಕೊಂಡಿದ್ದಾರೆ. ಹಾಗಾಗಿಯೇ ವ್ಯಕ್ತಿ ಯಾರು ಎಂದು ನೋಡಿ ವೋಟು ಹಾಕಬೇಕು. ಆತನಿಗೆ ನಾವು ಪ್ರಶ್ನೆ ಕೇಳುವ ಸ್ವತಂತ್ರ್ಯವಿರಬೇಕು. ಕೆಲಸ ನಿರ್ವಹಿಸುವ ಬದ್ಧತೆ ಇರುವವರಿಗೆ ವೋಟ್ ಹಾಕಬೇಕು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. 

ಮತದಾನ ನಮ್ಮ ಸಾಮಾಜಿಕ ಜವಾಬ್ದಾರಿ: ಭಾರತಿ ಹೆಗಡೆ 

“ಮತದಾನ ಪ್ರತಿಯೊಬ್ಬ ನಾಗರಿಕನ ಹಕ್ಕು. ಅಲ್ಲಿ ಸ್ತ್ರೀ-ಪುರುಷರೆಂಬ ಭೇದವಿಲ್ಲದೆ ನಮ್ಮ ಹಕ್ಕನ್ನು ನಾವು ಚಲಾಯಿಸಲು ನಾವು ಸಂಪೂರ್ಣ ಸ್ವತಂತ್ರರು” ಎಂದಿದ್ದಾರೆ ಪತ್ರಕರ್ತೆ, ಲೇಖಕಿ ಭಾರತಿ ಹೆಗಡೆ. 

“1950ರಲ್ಲಿ ಎಲ್ಲಾ ವಯಸ್ಕ ಭಾರತೀಯ ನಾಗರಿಕರಿಗೆ ಸಾರ್ವತ್ರಿಕ ಮತದಾನದ ಹಕ್ಕು ನೀಡಲಾಯಿತು. ಆದರೆ ಭಾರತದಲ್ಲಿ ಪ್ರತಿ ಚುನಾವಣೆಯಲ್ಲೂ ಸಂಪೂರ್ಣ ಮತದಾನವಾಗುವುದಿಲ್ಲ. ಶೇ 70ರಷ್ಟು, ಶೇ 60ರಷ್ಟು ಮಾತ್ರ ಮತದಾನ ಎಂಬ ವರದಿಗಳು ಚುನಾವಣೆಯ ನಂತರ ಬರುತ್ತವೆ. ಬಹಳ ಮುಖ್ಯವಾಗಿ ಪುರುಷರಿಗಿಂತ ಮಹಿಳೆಯರು ಮತದಾನ ಮಾಡುವುದು ಕಡಿಮೆ ಎಂದು ಸಮೀಕ್ಷೆಯೂ ಹೇಳುತ್ತದೆ. ಮತದಾನದ ದಿನ ಸಾಕಷ್ಟು ಜನ ರಜಾದಿನವೆಂಬದ ಭಾವಿಸುತ್ತಾರೆ. ಜೊತೆಗೆ ಯಾರಿಗೆ ಓಟು ಹಾಕಿದರೂ ಅಷ್ಟೇ, ನಮ್ಮ ಸಮಸ್ಯೆಗಳನ್ನೇನು ಅವರು ನಿವಾರಿಸುತ್ತಾರಾ? ಅವರು ಕುರ್ಚಿಗಾಗಿ ಹೊಡೆದಾಡಲು ನಾವ್ಯಾಕೆ ಮತದಾನ ಮಾಡಬೇಕೆಂಬ ಅಸಡ್ಡೆ ಮತ್ತೊಂದು ಕಡೆ ಇರುತ್ತದೆ. ಆದರೆ ಮತದಾನ ಮಾಡುವುದು ನಮ್ಮ ಸಾಮಾಜಿಕ ಜವಾಬ್ದಾರಿ ಎಂದು ಅರಿಯುವವರು ಕಡಿಮೆ ಜನ ಇದ್ದಾರೆ” ಎಂದು ಭಾರತಿ ಹೆಗಡೆ ವಿಷಾದ ವ್ಯಕ್ತಪಡಿಸಿದ್ದಾರೆ. 

ಮತದಾನ ಮಾಡದಿರುವುದರಿಂದ ಆಗುವ ಅಪಾಯಗಳ ಬಗ್ಗೆ ಭಾರತಿ ಹೆಗಡೆ ವಿವರಿಸಿದ್ದಾರೆ. ಅವರ ಪ್ರಕಾರ, ಮತದಾನ ಮಾಡದಿರುವುದರಿಂದ ಎರಡು ರೀತಿಯ ಅಪಾಯಗಳಿರುತ್ತವೆ.

1. ನಮ್ಮ ಜವಾಬ್ದಾರಿಯಿಂದ ನಾವು ನುಣುಚಿಕೊಳ್ಳುತ್ತೇವೆ.

2. ನಾವು ಮತದಾನ ಮಾಡದಿದ್ದರೆ ಬೇರೆಯವರ ಅಭಿಪ್ರಾಯಕ್ಕೆ ತಲೆಬಾಗಿದ್ದೇವೆಂದು ಅರ್ಥ. ಅಂದರೆ ಬೇರೆಯವರ ಆಯ್ಕೆಗೆ ನಾವು ಮನ್ನಣೆ ಕೊಟ್ಟಂತಾಗುತ್ತದೆ.

ಹಾಗಾಗಿ ಮತದಾನ ನಮ್ಮೆಲ್ಲರ ಹಕ್ಕು ಮತ್ತು ಜವಾಬ್ದಾರಿ.

“ನಂತರ ಚುನಾಯಿತ ಸರ್ಕಾರವನ್ನು ನಾವೇ ಬೈಯ್ಯುವಂತಾಗಬಾರದು. ಇದು ನಮ್ಮ ಆಯ್ಕೆಯಾಗಿರಲಿಲ್ಲ. ಈ ಪಕ್ಷ ಬರುವುದು ಬೇಡವಾಗಿತ್ತೆಂದು ಮನೆಯಲ್ಲಿ ಕುಳಿತು ಗೊಣಗುವುದಕ್ಕಿಂತ ನಮಗೆ ಬೇಕಾದ ಸರ್ಕಾರವನ್ನು ನಾವು ಆಯ್ಕೆ ಮಾಡಿಕೊಳ್ಳಬೇಕೆಂದರೆ ಮತದಾನ ಅನಿವಾರ್ಯ ಮತ್ತು ನಮ್ಮ ಜವಾಬ್ದಾರಿ” ಎಂದು ಹೇಳಿದ್ದಾರೆ.  

ಎಂಥಹ ಸರ್ಕಾರವನ್ನು ನೀವು ನಿರೀಕ್ಷಿಸುತ್ತೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, “ಇಂತಹದ್ದೇ ಸರ್ಕಾರ ಬಂದರೆ ಒಳ್ಳೆಯದು ಎಂದು ಪ್ರಬಲವಾಗಿ ಹೇಳುವಂತಹ ಪರಿಸ್ಥಿತಿಯಲ್ಲಿ ನಾವಿಂದು ಇಲ್ಲ. ಯಾಕೆಂದರೆ ಕಳೆದ ಅನೇಕ ವರ್ಷಗಳಿಂದ ಯಾವುದೇ ಪಕ್ಷವೂ ಅತ್ಯುತ್ತಮ ಆಡಳಿತ ನೀಡಿದೆ ಎಂಬ ಯಾವ ಉದಾಹರಣೆಗಳೂ ನಮ್ಮ ಮುಂದೆ ಇಲ್ಲ. ನಮ್ಮ ಮುಂದೆ ಆಯ್ಕೆಯೇ ಇಲ್ಲದಿರುವಾಗ ಇಂತಹ ಪಕ್ಷ ಬಂದರೆ ಒಳಿತು ಎಂದು ಹೇಳುವುದಾದರೂ ಹೇಗೆ?” ಎಂದು ಮರುಪ್ರಶ್ನಿಸಿದ್ದಾರೆ. 

“ಹೀಗಿದ್ದೂ ಬರುವ ಸರ್ಕಾರದ ಮುಂದೆ ಕೆಲವು ನಿರೀಕ್ಷೆ ಅನ್ನುವುದಕ್ಕಿಂತಲೂ ಕೆಲವು ಬೇಡಿಕೆಗಳನ್ನಿಡಬಹುದು. ಒಬ್ಬ ಮಹಿಳೆಯಾಗಿ ನಾನು ಯೋಚಿಸುವುದಿಷ್ಟೇ. ಪ್ರತಿ ಅಗತ್ಯ ವಸ್ತುಗಳ ಬೆಲೆ ಏರಿಕೆಯೂ ಮಹಿಳೆಯನ್ನು ಬಾಧಿಸುತ್ತದೆ. ಪ್ರತಿಸಲದ ನೀರಿನ ಸಮಸ್ಯೆಯೂ, ಅವಳನ್ನು ಭಾದಿಸುತ್ತದೆ. ಹಾಗೆಯೇ ಶಿಕ್ಷಣ ಸಮಸ್ಯೆಗಳೂ ಅವಳನ್ನು ಕಾಡುತ್ತವೆ. ಅಂದರೆ ಪ್ರಭುತ್ವದ ಬಹುತೇಕ ಯೋಜನೆಗಳಲ್ಲಿ ಮಹಿಳೆ ಇರುವುದಿಲ್ಲ. ಅವರ ಯೋಜನೆಗಳಲ್ಲಿ ಮಹಿಳೆಯೆಂದರೆ ತಾಳಿ, ತೊಟ್ಟಿಲುಗಳ ಭಾಗ್ಯವೇ ಪ್ರಧಾನವಾಗಿರುತ್ತವೆ. ಪ್ರಭುತ್ವ ರೂಪಿಸುವ ನೀರು, ಶಿಕ್ಷಣ, ಆರೋಗ್ಯ, ಯೋಜನೆಗಳನ್ನು ಮಹಿಳೆಯರಿಗಾಗಿ ಅಥವಾ ಮಹಿಳೆಯರನ್ನೂ ಒಳಗೊಂಡಾಗ ಮಾತ್ರ ಅವರಿಗೆ ಅನುಕೂಲವಾಗುತ್ತದೆ” ಎಂದಿದ್ದಾರೆ.

“ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳಲ್ಲಿ ನೀರಿನ ಮತ್ತು ಶೌಚಾಲಯದ ಸಮಸ್ಯೆಗಳನ್ನು ಬಗೆಹರಿಸಿದಲ್ಲಿ ಸಾಕಷ್ಟು ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗುವುದು ತಪ್ಪುತ್ತದೆ. ಅದೇರೀತಿ ಅಗತ್ಯ ವಸ್ತುಗಳಾದ, ಬೆಲೆ ಏರಿಕೆ ತಡೆಗಟ್ಟಿದರೆ ಸಾಮಾನ್ಯ ಮಹಿಳೆ ಅಚ್ಚುಕಟ್ಟಾಗಿ ಸಂಸಾರ ತೂಗಿಸಿಕೊಂಡು ಹೋಗಲು ಅನುಕೂಲವಾಗುವುದು. ಇವೆಲ್ಲ ಬೇಡಿಕೆಗಳೇ ಹೊರತು ನಿರೀಕ್ಷೆಯಲ್ಲ. ಯಾವ ನಿರೀಕ್ಷೆಯೂ ಯಾವ ಪಕ್ಷದ ಮೇಲೂ ಇರದ ಕಾರಣಕ್ಕೆ ನಿರೀಕ್ಷೆಯ ಕುರಿತು ಬರೆಯಲಾರೆ” ಎಂದು ಸ್ಪಷ್ಟನೆ ನೀಡಿದ್ದಾರೆ. 

ವಿವಿಧತೆಯಲ್ಲಿ ಏಕತೆ ಗೌರವಿಸುವ ಸರ್ಕಾರ ತನ್ನಿ: ಟೀನಾ ಶಶಿಕಾಂತ್ 

ಮತದಾನದ ಪ್ರಾಮುಖ್ಯತೆ ಬಗ್ಗೆ ಮತ್ತೊರ್ವ ಲೇಖಕಿ, ಪತ್ರಕರ್ತೆ ಟೀನಾ ಶಶಿಕಾಂತ್ ಪ್ರತಿಕ್ರಿಯಿಸಿ, “ಪ್ರಜಾಪ್ರಭುತ್ವದ ಅಸ್ತಿತ್ವ ಮತ್ತು ಆರಂಭ ಇರುವುದೇ ಮತದಾನದಲ್ಲಿ. ನಾವು ನಮ್ಮ ಮತ ಚಲಾಯಿಸಿ ವಿಧಾನಸಭೆ, ಸಂಸತ್ತಿಗೆ ಕಳುಹಿಸುವ ಜನರು ನಮ್ಮ ದನಿಯಾಗುತ್ತಾರೆ. ನಮ್ಮ ಕ್ಷೇತ್ರ, ರಾಜ್ಯ, ದೇಶಗಳ ಪ್ರಗತಿಗಾಗಿ ಕೆಲಸ ಮಾಡುತ್ತಾರೆ. ನಮ್ಮ ದನಿ ಕೇಳಬೇಕು ಎಂದರೆ ನಾವೆಲ್ಲ ಮತದಾನ ಮಾಡಬೇಕು. ಕೆಲವೊಂದು ಪ್ರತಿಕೂಲ ಪರಿಸ್ಥಿತಿಗಳಲ್ಲಿ ಜನರು ಮತದಾನ ಮಾಡುವಲ್ಲಿ ಉದಾಸೀನ ತೋರಿದಾಗ ಅಸಮರ್ಥ ಸರ್ಕಾರ ಜಾರಿಗೆ ಬರುತ್ತದೆ. ಹಾಗಾದ ಮೇಲೆ ನಾವು ಕೂಗಾಡಿ, ಸಿಟ್ಟುಮಾಡಿ ಪ್ರಯೋಜನವಿಲ್ಲ. ಸರಿಯಾದ ಪ್ರತಿನಿಧಿಯನ್ನು ಆಯ್ಕೆ ಮಾಡಲು ಮತದಾನ ಅವಶ್ಯಕ” ಎಂದು ಎಚ್ಚರಿಸಿದ್ದಾರೆ.

ಜೊತೆಗೆ ಎಂತಹ ನಾಯಕ ಅಥವಾ ಸರ್ಕಾರ ನಿರೀಕ್ಷಿಸುತ್ತೀರಿ ಎಂಬ ಪ್ರಶ್ನೆಗೆ ಸ್ಪಂದಿಸಿರುವ ಅವರು, “ಈ ಚುನಾವಣೆಯ ಮೂಲಕ ನಾನು ನಿರೀಕ್ಷಿಸುವುದು ಅಸಲಿಗೆ ಜನಪರ ಸರ್ಕಾರ. ನನಗೆ ಯಾವುದೇ ನಾಯಕ/ಕಿಯನ್ನು ಮುಂದೆ ನಿಲ್ಲಿಸಿ ಬಾಕಿ ಎಲ್ಲಾ ಅಡಾವುಡಿ ಗವರ್ನೆನ್ಸ್ ನಡೆಸುವ ಸರ್ಕಾರ ಬೇಡ. ಜಾತಿಭೇದ, ಮತಭೇದ, ಲಿಂಗಭೇದ ಮಾಡುವ ಸರ್ಕಾರ ಬೇಡ. ಕೆಲ ಜಾತಿಗಳಿಗೆ ಮಾತ್ರ ಮಣೆಹಾಕುವ ಸರ್ಕಾರ ಬೇಡ. ಮೌಢ್ಯ ತುಂಬಿದ ಆಚರಣೆಗಳಿಗೆ ಇಂಬುಕೊಡುವ ಸರ್ಕಾರ ಬೇಡ. ಹೇಳಿದ್ದನ್ನು ನಡೆಸಿ ತೋರುವ ಸರ್ಕಾರ ಬೇಕು. ವಿವಿಧತೆಯಲ್ಲಿ ಏಕತೆ ಗೌರವಿಸುವ ಸರ್ಕಾರ ಬೇಕು. ನನಗೆ ವಿಜ್ಞಾನ, ಆವಿಷ್ಕಾರ, ಶಿಕ್ಷಣ, ಪ್ರಾಥಮಿಕ ಆರೋಗ್ಯಗಳಿಗೆ ಅತಿ ಹೆಚ್ಚು ಪ್ರಾಮುಖ್ಯತೆ ಕೊಡುವ ಸರ್ಕಾರ ಬೇಕು” ಎಂದು ತಿಳಿಸಿದ್ದಾರೆ. 

ಈ ಸುದ್ದಿ ಓದಿದ್ದೀರಾ?: ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳದ ಭರವಸೆ ನೀಡಿದ ಪ್ರಿಯಾಂಕಾ ಗಾಂಧಿ

ಸಮಾಜದ ಸ್ವಾಸ್ಥ್ಯ ಕಾಪಾಡುವ ಸರ್ಕಾರ ಬರಬೇಕು: ಪಿ ಚಂದ್ರಿಕಾ

ಮತದಾನದ ಪ್ರಾಮುಖ್ಯತೆ ಮತ್ತು ಮುಂದಿನ ಸರ್ಕಾರದ ಬಗ್ಗೆ ಲೇಖಕಿ ಮತ್ತು ಪ್ರಕಾಶಕಿಯಾಗಿರುವ ಪಿ ಚಂದ್ರಿಕಾ ಪ್ರತಿಕ್ರಿಯಿಸಿ, “ಮತದಾನ ಸಂವಿಧಾನ ನಮಗೆ ಕೊಟ್ಟಿರುವ ಪ್ರಮುಖ ಅಧಿಕಾರ, ಇದಕ್ಕಾಗಿ ಮೊದಲಿಗೆ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ ಧನ್ಯವಾದ ತಿಳಿಸಲೇಬೇಕು. ಯಾಕೆಂದರೆ ಸಮಾನತೆಯ ಹಿನ್ನೆಲೆಯಲ್ಲಿ ನಮಗೆ ಮತದಾನದ ಹಕ್ಕನ್ನು ಕೊಟ್ಟಿದ್ದಾರೆ. ಈ ಅವಕಾಶ ತಪ್ಪಿಸಿಕೊಳ್ಳದೇ ನಾವು ಸ್ವಯಂಪ್ರೇರಿತರಾಗಿ ಮತದಾನ ಮಾಡೋಣ. ಇದರಲ್ಲಿ ಯಾರದೇ ಒತ್ತಡಗಳು ಬೀಳದಂತೆ ನೋಡಿಕೊಳ್ಳಬೇಕು. ಅವಿದ್ಯಾವಂತರಲ್ಲಿ ಮಾತ್ರವಲ್ಲ, ವಿದ್ಯಾವಂತ ಮಹಿಳೆಯರಲ್ಲೂ ಈ ರೀತಿಯ ಹೇಳಿಕೆಗಳನ್ನು ನೋಡಬಹುದು. ಇದನ್ನ ಸರಿದೂಗಿಸುವುದೇ ದೊಡ್ಡ ಸವಾಲು” ಎಂದಿದ್ದಾರೆ. 

ಎಂತಹಾ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, “ನನಗೆ ಬೇಕಾದಂತಹ, ನನ್ನ ಸಮಸ್ಯೆಗಳನ್ನು ಬಗೆಹರಿಸುವ ಸರ್ಕಾರ ಬೇಕಿದೆ, ಹಾಗಾಗಿ ಇದನ್ನು ನಾನೇ ನಿರ್ಧಾರ ಮಾಡಬೇಕು. ಹೆಣ್ಣು ಮಕ್ಕಳಲ್ಲಿ ಹೆಚ್ಚಿನ ವಿವೇಚನಾ ಶಕ್ತಿ ಇರುತ್ತದೆ. ಹತ್ತು ದಿಕ್ಕುಗಳಲ್ಲಿ ಯೋಚಿಸುವ ಶಕ್ತಿ ಇರುತ್ತದೆ. ಪುರುಷ ಅವಲಂಭಿತ ಅಭಿಪ್ರಾಯಗಳಿಂದ ಒಮ್ಮೆ ಹೊರಗೆ ಬಂದರೆ ನಮಗಿರುವ ಅಧಿಕಾರಗಳು ನಮಗಿರುವ ಅವಕಾಶಗಳು ತಂತಾನೆ ಗೋಚರಿಸುತ್ತವೆ” ಎಂದಿದ್ದಾರೆ.  

ನಮ್ಮ ಸಂವಿಧಾನ ರಚನೆಯಾಗಿ ಇಷ್ಟು ವರ್ಷಗಳಾದ ನಂತರವೂ ಮಹಿಳಾ ಮತದಾನ ಕಡಿಮೆ ಇರುವುದು ಮತ್ತು ಈ ವಿಚಾರ ಚರ್ಚೆಯಾಗುತ್ತಿರೋದು ವಿಷಾದನೀಯ. ಒಟ್ಟಾರೆ ರಾಜಕೀಯ ಕ್ಷೇತ್ರ ಮಹಿಳೆಯರನ್ನು ನಿಯಂತ್ರಿಸುತ್ತಿದೆ ಎನ್ನುವುದು ಸ್ಪಷ್ಟ. ರಾಜಕೀಯದಲ್ಲಿ ಮಹಿಳೆಯರನ್ನು ಒಂದು ಸಾಧನವಾಗಿ ಕಾಣಲಾಗುತ್ತಿದೆ. ರಾಜಕಾರಣದಲ್ಲಿ ಮಹಿಳಾ ಪ್ರಾತಿನಿಧ್ಯದ ವಿಚಾರ ಬಂದಾಗ ಶೇ 33 ಮೀಸಲಾತಿ ಕೊಡುವುದು ದೊಡ್ಡ ವಿಷಯವಾಗಿರಲಿಲ್ಲ. ಆದರೆ, ಶೇ 50 ಭಾಗವಿರುವ ಜನಸಂಖ್ಯೆಗೆ ಶೇ 33ರಷ್ಟು ಮೀಸಲಾತಿ ಕೊಡುವುದಕ್ಕೂ ಒಪ್ಪುತ್ತಿಲ್ಲ ಎಂದಾದರೇ ಆ ಕ್ಷೇತ್ರವನ್ನು ಎಷ್ಟು ಪುರುಷರು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಅರಿವಾಗುತ್ತದೆ. ಹಾಗಾಗಿ ಮಹಿಳೆಯರು ಹೆಚ್ಚು ಮತದಾನ ಮಾಡಬೇಕು, ಆ ಮೂಲಕ ಯಾವುದೇ ಧರ್ಮದ ಹೆಸರಿನಲ್ಲಿ ಹೆಣ್ಣನ್ನು ನಿಯಂತ್ರಿಸದೇ ಇರುವಂತಹ, ಮತ್ತೆ ಸಮಾಜದ ಸ್ವಾಸ್ಥ್ಯ ಕಾಪಾಡುವಂತಹ ಸರ್ಕಾರ ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳಬೇಕು. ಪಕ್ಷದ ಪ್ರಣಾಳಿಕೆಗಳಲ್ಲಿ ಘೋಷಣೆಯಾದ ಕಾಯ್ದೆ-ಕಾನೂನುಗಳನ್ನ ಜಾರಿಗೊಳಿಸುವ ಕಡೆ ಕೆಲಸ ಮಾಡುವ ಸರ್ಕಾರಗಳು ಬೇಕು” ಎಂದು ಹೇಳಿದ್ದಾರೆ.

“ಜನರ ಮೂಲಭೂತ ಅನಿವಾರ್ಯಗಳ ಬಗ್ಗೆ ಅರಿವಿರುವ ಅವುಗಳನ್ನು ಸರಿಯಾದ ರೀತಿ ಪೂರೈಸುವ ಸರ್ಕಾರ ಅಧಿಕಾರಕ್ಕೆ ಬರಬೇಕು. ಆದರೆ ಎಲ್ಲವನ್ನು ಉಚಿತವಾಗಿ ಕೊಡುತ್ತೇವೆ ಅನ್ನುವವರು ಅಲ್ಲ, ಅಥವಾ ಮಹಿಳೆಯರಿಗೆ ದೈವೀಕತೆಗೆ ಆರೋಪಿಸಿ, ಧರ್ಮ ರಕ್ಷಣೆಯ ಹೆಸರಿನಲ್ಲಿ ಅವರನ್ನು ನಿಯಂತ್ರಿಸುವ ಸರ್ಕಾರಗಳು ಬೇಕಿಲ್ಲ” ಎಂದಿದ್ದಾರೆ.

ಹೆಣ್ಣು ಮಕ್ಕಳು ರಾಜಕೀಯ ಕ್ಷೇತ್ರಕ್ಕೆ ಬರಬೇಕು, ಅಧಿಕಾರ ನಡೆಸುವ ಜಾಗದಲ್ಲಿ ಕೂರಬೇಕು. ಯಾಕೆಂದರೆ ಗಂಡು ಜಗತ್ತಿನಲ್ಲಿರುವಷ್ಟು ಭ್ರಷ್ಟಾಚಾರ, ಹೆಣ್ಣು ಜಗತ್ತಿನಲ್ಲಿಲ್ಲ, ಮಾತೃತ್ವದ ಶಕ್ತಿಗೆ ಇನ್ನೊಬ್ಬರ ಸಂಕಟ ಅರ್ಥವಾಗುತ್ತದೆ. ರಾಜಕೀಯ ಇಚ್ಛಾಶಕ್ತಿಗೆ ಹೆಣ್ಣು ಕಾಣಿಸಬೇಕು, ಆಕೆಯ ಸಮಸ್ಯೆಗಳು ಕಾಣಿಸಬೇಕು. ಹೆಣ್ಣಿನ ಮೇಲೆ ಅತ್ಯಾಚಾರಗಳಾದ ತಕ್ಷಣದಲ್ಲಿ ಕ್ರಮ ಕೈಗೊಳ್ಳುವ ಪ್ರಬಲ ಸರ್ಕಾರ ಬರಬೇಕು, ಅತ್ಯಾಚಾರಿಗೆ ತಕ್ಷಣ ಶಿಕ್ಷೆ ನೀಡುವ ಕಾನೂನುಗಳು ಸಂವಿಧಾನಾತ್ಮಕವಾಗಿಯೇ ಜಾರಿಯಾಗಬೇಕು. ಹೆಣ್ಣು ದೇಹವನ್ನೇ ಮಿತಿಯನ್ನಾಗಿ ಮಾಡಿಕೊಳ್ಳುವ ಮನಸ್ಥಿತಿಗಳಿಗೆ ಅಧಿಕಾರ ಕೊಡಬಾರದು” ಎಂದು ಎಚ್ಚರಿಸಿದ್ದಾರೆ.

ಒಟ್ಟಾರೆಯಾಗಿ ಜನಪರ ಮತ್ತು ಮಹಿಳಾಪರ ಸರ್ಕಾರ ಅಧಿಕಾರಕ್ಕೆ ಬರಬೇಕು ಹಾಗೂ ಮತದಾನ ಮಾಡುವ ಮೂಲಕ ಅಂತಹ ಸರ್ಕಾರವನ್ನು ನಾವೇ ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ಎಲ್ಲಾ ಲೇಖಕಿಯರ ಮನದಾಳದ ಮಾತಾಗಿದೆ. 

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಬಳ್ಳಾಪುರ | ಏಕಕಾಲದಲ್ಲಿ ಒಂದೇ ಕುಟುಂಬದ 85 ಮಂದಿ ಮತದಾನ

ಲೋಕಸಭಾ ಚುನಾವಣೆ ಹಿನ್ನೆಲೆ, ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನದ ಪ್ರಕ್ರಿಯೆ ಬಿರುಸಿನಿಂದ...

ಹಿಂದಿಗಿಂತ ಈಗ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ನನಗಿದೆ: ಡಿ ಕೆ ಸುರೇಶ್

ನಾನು ಕಳೆದ ಮೂರು ಚುನಾವಣೆಗಳಿಗಿಂತ ಈ ಬಾರಿ ಅತಿ ಹೆಚ್ಚಿನ ಮತಗಳ...

ಏ.29 ರಿಂದ ರಾಜ್ಯದ 11ಕ್ಕೂ ಅಧಿಕ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ : ಹವಾಮಾನ ಇಲಾಖೆ

ಏಪ್ರಿಲ್ 29ರಿಂದ ರಾಜ್ಯದ 11ಕ್ಕೂ ಅಧಿಕ ಜಿಲ್ಲೆಗಳಲ್ಲಿ ನಾಲ್ಕು ದಿನಗಳ ಕಾಲ...

ಮಂಗಳೂರು | ಮತಗಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತನ ಗೂಂಡಾಗಿರಿ

ರಾಜ್ಯದ 14 ಕ್ಷೇತ್ರಗಳಲ್ಲಿ ಏ.26 ರಂದು ಬೆಳಗ್ಗಿನಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗಿದೆ....