ಇರಾನ್ ಮೇಲೆ ಅಮೇರಿಕ ಮತ್ತು ಇಸ್ರೇಲ್ ಮೈತ್ರಿಕೂಟ ಮಾಡಿರುವ ದಾಳಿಯ ಪರಿಣಾಮ ಜಾಗತಿಕ ಮಟ್ಟದಲ್ಲಿ ಅನಿಲ ಸಂಕಷ್ಟ ತಂದೊಡ್ಡುವ ಸಾಧ್ಯತೆ ದಟ್ಟವಾಗಿದೆ. ಕತಾರ್ ಅಲ್ಲಿರುವ ಜಗತ್ತಿನ ಅತಿದೊಡ್ಡ ನೈಸರ್ಗಿಕ ಅನಿಲ ಘಟಕ ರಾಸ್ ಲಫ್ಘಾನ್ ಅನಿಲ ಘಟಕದ ಮೇಲೆ ಇರಾನ್ ನಡೆಸಿರುವ ಕ್ಷಿಪಣಿ ದಾಳಿಯಿಂದಾಗಿ ಭಾರತದಂತಹ ದೇಶಕ್ಕೆ ಅನಿಲ ಪೂರೈಕೆ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕ ಸೃಷ್ಟಿಯಾಗಿದೆ.
ಈ ದಾಳಿಯ ಪರಿಣಾಮವಾಗಿ ಕತಾರ್‌ನ ದ್ರವೀಕೃತ ನೈಸರ್ಗಿಕ ಅನಿಲ (ಎನ್‌ಎನ್‌ಜಿ) ರಫ್ತು ಸಾಮರ್ಥ್ಯ ಶೇ .17ರಷ್ಟು ಕುಸಿತವಾಗಿದೆ ಎಂದು ವರದಿಯಾಗಿದೆ. ಮಾರ್ಚ್ 18 ಮತ್ತು 19ರಂದು ಇರಾನ್ ಪ್ರತಿಕಾರವಾಗಿ ಈ ದಾಳಿ ನಡೆಸಿತ್ತು. ಇದರ ಪರಿಣಾಮವಾಗಿ ಅಲ್ಲಿ ಅನಿಲ ಉತ್ಪಾದನೆಗೆ ಅಡ್ಡಿ ಉಂಟಾಗಿದೆ. ಭಾರತದಂತಹ ಇತರೆ ದೇಶಗಳಿಗೆ ಆಗುತ್ತಿದ್ದ ರಫ್ತಿನ ಮೇಲೆ ಬಹಳ ದೊಡ್ಡ ಹೊಡೆತ ಬೀಳಲಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ : ಟ್ರಂಪ್‌ಗೆ ಚಿತ್ತಭ್ರಮೆಯೇ?; ಅಮೆರಿಕ ಅಧ್ಯಕ್ಷರ ಮಾನಸಿಕ ಆರೋಗ್ಯದ ಸುತ್ತ ಅನುಮಾನದ ಹುತ್ತ
ದಾಳಿಯಿಂದಾಗಿ ವಾರ್ಷಿಕ ಆದಾಯದಲ್ಲಿ ಅಂದಾಜು 20 ಬಿಲಿಯನ್ ಅಮೇರಿಕನ್ ಡಾಲರ್ ನಷ್ಟ ಉಂಟಾಗಲಿದೆ ಎಂದು ಕತಾರ್ ಎನರ್ಜಿ ಏಜೆನ್ಸಿ ಹೇಳಿಕೊಂಡಿದೆ. ಮಾತ್ರವಲ್ಲದೆ, ಕನಿಷ್ಠ 5 ವರ್ಷಗಳಾದರೂ ದುರಸ್ತಿ ಕಾಮಗಾರಿಗೆ ಬೇಕು ಎಂದು ಅಂದಾಜಿಸಲಾಗಿದ್ದು, ಇದರಿಂದಾಗಿ ಭಾರತದಂತಹ ಇತರೆ ದೇಶಗಳೊಂದಿಗೆ ಮಾಡಿಕೊಂಡ ದೀರ್ಘಾವಧಿಯ ಎಲ್‌ಎನ್‌ಜಿ ರಫ್ತು ಒಪ್ಪಂದಕ್ಕೆ ಸಂಕಷ್ಟ ಎದುರಾಗಬಹುದು. ಜಾಗತಿಕ ಮಟ್ಟದಲ್ಲಿ ಅನಿಲ ಬಿಕ್ಕಟ್ಟು ಸೃಷ್ಟಿಯಾಗಬಹುದು ಎಂದು ಕೂಡ ಹೇಳಲಾಗಿದೆ. ಇನ್ನು, ʼಅನಿಲ ಉತ್ಪಾದನೆ ಸಹಜ ಸ್ಥಿತಿ ಬರುವುದಕ್ಕೆ ಕನಿಷ್ಠ ಆರು ತಿಂಗಳು ಬೇಕಾಗಬಹುದುʼ ಎಂದು ಅಂತರರಾಷ್ಟ್ರೀಯ ಎನರ್ಜಿ ಏಜೆನ್ಸಿಯ ಅಧ್ಯಕ್ಷ ಎಚ್ಚರಿಕೆ ನೀಡಿದ್ದು ಆತಂಕಕಾರಿಯಾಗಿದೆ.
ಇದು ಭಾರತಕ್ಕೆ ದೊಡ್ಡ ಅನಿಲ ಬಿಕ್ಕಟ್ಟು ಸೃಷ್ಟಿಸುವುದು ಮಾತ್ರವಲ್ಲದೆ, ಆರ್ಥಿಕ ಸಂಕಷ್ಟವನ್ನು ಉಂಟುಮಾಡಲಿದೆ. ಭಾರತ ಅನಿಲ ಪೂರೈಕೆಗಾಗಿ ಕತಾರ್ ದೇಶವನ್ನೇ ಹೆಚ್ಚಾಗಿ ಅವಲಂಬಿಸಿದ್ದು, ಭಾರತದ ಕಚ್ಚಾತೈಲ ಬೇಡಿಕೆಯಲ್ಲಿ ಶೇ 88, ಎಲ್‌ಪಿಜಿಯ ಶೇ.60 ಮತ್ತು ನೈಸರ್ಗಿಕ ಅನಿಲದ ಬೇಡಿಕೆಯಲ್ಲಿ ಶೇ.50ರಷ್ಟಕ್ಕೆ ವಿದೇಶಗಳನ್ನೇ ಅವಲಂಬಿಸಿದೆ. ಪೆಟ್ರೋಲಿಯಂ ಯೋಜನೆ ಹಾಗೂ ವಿಶ್ಲೇಷಣಾ ಕೋಶ (ಪಿಪಿಎಸಿ) ಮತ್ತು ವಾಣಿಜ್ಯ ಸಚಿವಾಲಯದ 2025-26ರ ಅಂಕಿಅಂಶಗಳು ಹೇಳುವ ಪ್ರಕಾರ, ಭಾರತಕ್ಕೆ ಅನಿಲ ಪೂರೈಸುವ ದೇಶಗಳಲ್ಲಿ ಕತಾರ್ ಮುಂಚೂಣಿಯಲ್ಲಿದೆ ಎನ್ನುವುದು ಉಲ್ಲೇಖನೀಯ.
ಅಮೆರಿಕ-ಇಸ್ರೇಲ್ ಮೈತ್ರಿಕೂಟ ಇರಾನ್ ಮೇಲೆ ಮಾಡಿರುವ ದಾಳಿಯಿಂದಾಗಿ ತೈಲ ಸಂಚಾರಕ್ಕೆ ಅಡ್ಡಿಯಾಗಿದೆ. ಭಾರತ ಸೇರಿದಂತೆ ಹಲವು ದೇಶಗಳಲ್ಲೂ ಇಂಧನ ಬಿಕ್ಕಟ್ಟು ಸೃಷ್ಟಿಯಾಗಿದೆ. ಭಾರತದಲ್ಲಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದು ಭಾರತದ ಆರ್ಥಿಕತೆಯ ಮೇಲೆ ಅಡ್ಡ ಪರಿಣಾಮ ಬೀರಲಿದೆ, ಹಣದುಬ್ಬರ ಸೃಷ್ಟಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
(ವಿವಿಧ ರಾಷ್ಟ್ರೀಯ ಸುದ್ದಿ ಸಂಸ್ಥೆಗಳ ಮೂಲಗಳಿಂದ)
ಕತಾರ್ ಅನಿಲ ಘಟಕದ ಮೇಲೆ ಇರಾನ್ ಕ್ಷಿಪಣಿ ದಾಳಿ : ದುರಸ್ತಿಗೆ ಬೇಕು ಕನಿಷ್ಠ 5 ವರ್ಷ |ಭಾರತಕ್ಕೆ ಸಂಕಷ್ಟ
ಪೋಸ್ಟ್ ಹಂಚಿಕೊಳ್ಳಿ:
ಪೋಸ್ಟ್ ಹಂಚಿಕೊಳ್ಳಿ:
This video cannot be played in your browser. Open the video directly
ಈ ಹೊತ್ತಿನ ಪ್ರಮುಖ ಸುದ್ದಿ
ವಿಡಿಯೋ




