ಗೋವಿನ ರಕ್ಷಣೆಗಾಗಿ ಕಠಿಣ ಕಾನೂನುಗಳನ್ನು ಜಾರಿಗೊಳಿಸಿ ಜೀವಾವಧಿ ಶಿಕ್ಷೆಯಂತಹ ತೀರ್ಪುಗಳಿಗೆ ಕಾರಣವಾಗುತ್ತಿರುವ ಮೋದಿ ಸರ್ಕಾರ, ಇನ್ನೊಂದೆಡೆ ನಾಯಿ, ಬೆಕ್ಕು ಮತ್ತು ಕೋತಿಗಳಂತಹ ಪ್ರಾಣಿಗಳನ್ನು ಪ್ರಯೋಗಾಲಯಗಳಿಗೆ ಸುಲಭವಾಗಿ ಬಲಿಕೊಡುವ ಹೊಸ ನಿಯಮಗಳನ್ನು ತರುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಭಾರತೀಯ ಸಂವಿಧಾನದ 51A(g) ವಿಧಿ ಮತ್ತು 1960ರ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯು ಎಲ್ಲಾ ಜೀವಿಗಳನ್ನೂ ಸಮಾನವಾಗಿ ಕಾಣಬೇಕು ಎಂದು ಹೇಳುತ್ತದೆ. ಆದರೆ, ಕಳೆದ ಅಕ್ಟೋಬರ್ 6ರಂದು ಕೇಂದ್ರ ಸರ್ಕಾರ ಅಧಿಸೂಚಿಸಿರುವ ‘ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (ಪ್ರಯೋಗಾಲಯ ಪ್ರಾಣಿಗಳ ನಿಯಂತ್ರಣ) ಕರಡು ನಿಯಮಗಳು-2026’ ಈ ಜಾತ್ಯತೀತ ಆಶಯಕ್ಕೆ ವಿರುದ್ಧವಾಗಿದೆ ಎಂದು ಪ್ರಾಣಿ ಹಕ್ಕುಗಳ ಹೋರಾಟಗಾರರು ಮತ್ತು ತಜ್ಞರು ಕಿಡಿಕಾರಿದ್ದಾರೆ.
ಹೊಸ ಕರಡು ನಿಯಮಗಳಲ್ಲಿ ಏನಿದೆ?
ಪೆಟಾ ಇಂಡಿಯಾ (PETA India) ಸೇರಿದಂತೆ ಹಲವು ಸಂಘಟನೆಗಳು ಈ ಕರಡಿನಲ್ಲಿರುವ ಮೂರು ಅಪಾಯಕಾರಿ ಅಂಶಗಳನ್ನು ಬೊಟ್ಟು ಮಾಡಿವೆ.
ನಾಯಿ, ಬೆಕ್ಕು, ಕೋತಿ, ಕುದುರೆ, ಕುರಿ ಮತ್ತು ಹಂದಿಗಳ ಮೇಲೆ ನಡೆಸುವ ‘ಸಣ್ಣಪುಟ್ಟ ಅಥವಾ ಮಧ್ಯಮ ಮಟ್ಟದ’ ಪ್ರಯೋಗಗಳಿಗೆ ಇನ್ನು ಮುಂದೆ ಕೇಂದ್ರ ಸಮಿತಿಯ ಅನುಮತಿ ಬೇಕಿಲ್ಲ. ಪ್ರಯೋಗ ನಡೆಸುವ ಸಂಸ್ಥೆಯ ಉದ್ಯೋಗಿಗಳೇ ಬಹುಸಂಖ್ಯಾತರಾಗಿರುವ ‘ಆಂತರಿಕ ನೈತಿಕ ಸಮಿತಿ’ಯೇ ಅನುಮತಿ ನೀಡಬಹುದು. ಇದು ಪ್ರಯೋಗಾಲಯಗಳಿಗೆ ಸ್ವಯಂ-ಪರವಾನಗಿ ನೀಡಿದಂತಾಗುತ್ತದೆ.
ಹೊಸ ಕರಡಿನಲ್ಲಿ ಬೀದಿನಾಯಿ ಮತ್ತು ಬೆಕ್ಕುಗಳ ಬಳಕೆಗೆ ನಿಷೇಧವಿದ್ದರೂ, “ಸಕ್ಷಮ ಪ್ರಾಧಿಕಾರಗಳ” ಅನುಮತಿಯ ಮೇರೆಗೆ ಅವುಗಳನ್ನು ಬಳಸಿಕೊಳ್ಳಲು ‘ವಿನಾಯಿತಿ’ ನೀಡಲಾಗಿದೆ. ಇದರಿಂದ ಸಂತಾನಹರಣಕ್ಕಾಗಿ ಹಿಡಿಯುವ ಬೀದಿನಾಯಿಗಳು ನೇರವಾಗಿ ಪ್ರಯೋಗಾಲಯ ಸೇರುವ ಅಪಾಯವಿದೆ.
ಜಾಗತಿಕ ಮಟ್ಟದಲ್ಲಿ ಸಂಶೋಧನಾ ಕೋತಿಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹೊತ್ತಲ್ಲೇ, ಹೊಸ ನಿಯಮಗಳು ಕೋತಿಗಳ ಮೇಲಿನ ಪ್ರಯೋಗಗಳಿಗೆ ಸುಲಭವಾಗಿ ಅನುಮತಿ ನೀಡುತ್ತವೆ.
ಇತ್ತೀಚೆಗೆ ಗುಜರಾತ್‌ನ ಕಲೋಲ್‌ನಲ್ಲಿ ಗೋಹತ್ಯೆ ಪ್ರಕರಣವೊಂದರಲ್ಲಿ ಮೂವರು ಮುಸ್ಲಿಮರಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಒಂದು ಪ್ರಾಣಿಯ ರಕ್ಷಣೆಗಾಗಿ ಇಷ್ಟೊಂದು ಕಠಿಣ ನಿಲುವು ತಳೆಯುವ ವ್ಯವಸ್ಥೆ, ಉಳಿದ ಮೂಕ ಪ್ರಾಣಿಗಳ ಮೇಲಿನ ಕ್ರೌರ್ಯದ ವಿಚಾರದಲ್ಲಿ ಏಕೆ ಉದಾರವಾಗುತ್ತಿದೆ ಎಂಬ ಪ್ರಶ್ನೆ ಎದ್ದಿದೆ.
ಕಳೆದೊಂದು ದಶಕದಲ್ಲಿ ಪ್ರಾಣಿ ಕಲ್ಯಾಣ ಮಂಡಳಿಯ ಅಧಿಕಾರ ಮೊಟಕುಗೊಳಿಸಿರುವುದು, ಸರ್ಕಸ್‌ಗಳಲ್ಲಿ ಪ್ರಾಣಿಗಳ ನಿಷೇಧ ಕೈಬಿಟ್ಟಿರುವುದು ಮತ್ತು ಕ್ರೌರ್ಯ ತಡೆ ಕಾಯ್ದೆಯ ದಂಡ ಹೆಚ್ಚಿಸುವ ಮಸೂದೆಯನ್ನು ನನೆಗುದಿಗೆ ಹಾಕಿರುವುದು ಸರ್ಕಾರದ ಆದ್ಯತೆಯನ್ನು ತೋರಿಸುತ್ತದೆ.
ಕರಡು ನಿಯಮಗಳಿಗೆ ಆಕ್ಷೇಪಣೆ ಮತ್ತು ಸಲಹೆಗಳನ್ನು ಸಲ್ಲಿಸಲು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ನೀಡಿದ್ದ 30 ದಿನಗಳ ಕಾಲಾವಕಾಶವು ನವೆಂಬರ್ 6ಕ್ಕೆ ಮುಕ್ತಾಯಗೊಂಡಿದೆ. ಈ ಅವಧಿಯಲ್ಲಿ ದೇಶಾದ್ಯಂತ ಪ್ರಾಣಿ ದಯಾ ಸಂಘಟನೆಗಳು, ಕಾನೂನು ತಜ್ಞರು, ವಿದ್ಯಾರ್ಥಿಗಳು ಹಾಗೂ ಸಾವಿರಾರು ನಾಗರಿಕರು ಈ ಕರಡನ್ನು ಸಂಪೂರ್ಣವಾಗಿ ಹಿಂಪಡೆಯುವಂತೆ ‘ಪ್ರಾಣಿಗಳ ಮೇಲಿನ ಪ್ರಯೋಗಗಳ ನಿಯಂತ್ರಣ ಮತ್ತು ಮೇಲ್ವಿಚಾರಣಾ ಸಮಿತಿ’ಗೆ (CCSEA) ಲಿಖಿತ ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ.
ಆದರೆ, ಸಾರ್ವಜನಿಕರಿಂದ ವ್ಯಕ್ತವಾಗಿರುವ ವಿರೋಧಕ್ಕೆ ಸಚಿವಾಲಯವು ಇದುವರೆಗೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಸಲ್ಲಿಕೆಯಾಗಿರುವ ಸಾವಿರಾರು ಆಕ್ಷೇಪಣೆಗಳನ್ನು ಪರಿಗಣಿಸಿ ಸರ್ಕಾರ ಈ ಕರಡನ್ನು ಕೈಬಿಡುತ್ತದೆಯೇ ಅಥವಾ ಜನಾಭಿಪ್ರಾಯವನ್ನು ಬದಿಗೊತ್ತಿ ಅಂತಿಮ ಅಧಿಸೂಚನೆ ಹೊರಡಿಸುತ್ತದೆಯೇ ಎಂಬುದು ಈಗ ತೀವ್ರ ಕುತೂಹಲ ಮೂಡಿಸಿದೆ. ಪ್ರಾಣಿಗಳ ಧಾರ್ಮಿಕ ಮಹತ್ವವನ್ನು ನೋಡಿ ಕರುಣೆ ತೋರುವ ಬದಲು, ಎಲ್ಲಾ ಜೀವಿಗಳಿಗೂ ಸಮಾನ ರಕ್ಷಣೆ ನೀಡುವ ಜಾತ್ಯತೀತ ನೀತಿಯನ್ನು ಸರ್ಕಾರ ಅನುಸರಿಸಬೇಕು ಎಂದು ತಜ್ಞರು ಆಗ್ರಹಿಸಿದ್ದಾರೆ.




