ಬಡತನದ ಮಾಪನ ಮತ್ತು ವಾಸ್ತವ ಚಿತ್ರಣ: ಆಳ ಅಗಲ

Date:

ವಿಶ್ವಬ್ಯಾಂಕ್‌ನ ಬಡತನ ಮತ್ತು ಸಮಾನತೆಯ ಇತ್ತೀಚಿನ ವರದಿಯ ಪ್ರಕಾರ 2011ರಿಂದ 2023ರ ಅವಧಿಯಲ್ಲಿ ಭಾರತದಲ್ಲಿ ಅಂದಾಜು 49.6 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಈ ವರದಿಯನ್ನು ಆಧರಿಸಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಮ್ಮ ಪಕ್ಷದ ಸಾಧನೆ ಎಂದು ಕೊಚ್ಚಿಕೊಳ್ಳುತ್ತಿದೆ. ಆದರೆ ವಾಸ್ತವ ಚಿತ್ರಣ ಬೇರೆಯೇ ಇದೆ... 

ಅಕ್ಟೋಬರ್‌ 2026ರಂದು ವಿಶ್ವಬ್ಯಾಂಕ್‌ನ ಬಡತನ ಮತ್ತು ಸಮಾನತೆಯ ವರದಿಯ ಪ್ರಕಾರ 2011ರಿಂದ 2023ರ ಅವಧಿಯಲ್ಲಿ ಭಾರತದಲ್ಲಿ ಅಂದಾಜು 49.6 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. 2021ರ ಪಿಪಿಪಿ(ಕೊಳ್ಳುವ ಸಾಮರ್ಥ್ಯದಲ್ಲಿನ ಸಾಮ್ಯತೆ) ಆಧಾರದ ಮೇಲೆ ದಿನಕ್ಕೆ 3 ಡಾಲರ್‌ಗಿಂತ(ರೂ. 283) ಕಡಿಮೆ ಆದಾಯ ಹೊಂದಿರುವವರ (ತೀವ್ರ ಬಡತನ) ಪ್ರಮಾಣವು ಶೇ. 27.1ರಿಂದ ಶೇ. 2.6ಕ್ಕೆ ಇಳಿದಿದೆ. ದಿನಕ್ಕೆ 4.20 ಡಾಲರ್‌ಗಿಂತ(ರೂ. 397) ಕಡಿಮೆ ಆದಾಯ ಹೊಂದಿರುವವರ(ಬಡತನ) ಪ್ರಮಾಣ ಶೇ. 57.7ರಿಂದ ಶೇ. 16.1ಕ್ಕೆ ಇಳಿದಿದೆ. ಬಡತನ ಇಳಿಕೆಗೆ ಕಾರಣವಾದ ಪ್ರಮುಖ ಅಂಶಗಳು: ಜನರ ಬಳಕೆ ವೆಚ್ಚದಲ್ಲಿ ಏರಿಕೆ, ಉಚಿತ ಅಥವಾ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳನ್ನು ಒದಗಿಸುವಂತಹ ಸಾಮಾಜಿಕ ಕಲ್ಯಾಣ ಯೋಜನೆಗಳ ವಿಸ್ತರಣೆ, 2017ರಿಂದ 2023ರ ಅವಧಿಯಲ್ಲಿ 13.4 ಕೋಟಿ ಹೆಚ್ಚುವರಿ ಉದ್ಯೋಗಗಳ ಸೃಷ್ಟಿ, ಗ್ರಾಮೀಣ ಮಹಿಳೆಯರು ವೇತನ ಪಡೆಯುವ ಉದ್ಯೋಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವುದು. ಈ ವರದಿಯನ್ನು ಆಧರಿಸಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಮ್ಮ ಪಕ್ಷದ ಸಾಧನೆ ಎಂದು ಕೊಚ್ಚಿಕೊಳ್ಳುತ್ತಿದೆ. ಆದರೆ ವಾಸ್ತವವೇನು?

- Advertisement -

ವಿವಿಧ ದೇಶಗಳಲ್ಲಿನ ಬಡತನದ ಪ್ರಮಾಣವನ್ನು ಹೋಲಿಕೆ ಮಾಡಲು ವಿಶ್ವಬ್ಯಾಂಕ್ ತನ್ನದೇ ಆದ ಮಾನದಂಡವನ್ನು ಬಳಸುತ್ತದೆ. ಈ ಮೂಲಕ ದೇಶಗಳ ನಡುವಿನ ಆರ್ಥಿಕತೆ ಮತ್ತು ಬೆಲೆ ವ್ಯತ್ಯಾಸಗಳನ್ನು ಪರಿಗಣಿಸಿ ಜಾಗತಿಕ ಬಡತನವನ್ನು ಅಳೆಯುತ್ತದೆ. ಇದು ಪ್ರಮಾಣೀಕೃತವೇ ಅಲ್ಲವೇ ಎಂಬುದು ಬೇರೆ ಚರ್ಚೆ. ವಿಶ್ವಬ್ಯಾಂಕ್ ಬಡತನವನ್ನು ಲೆಕ್ಕಹಾಕುವಾಗ ಸಾಮಾನ್ಯ ವಿದೇಶಿ ವಿನಿಮಯ ದರಗಳನ್ನು ಆಧರಿಸುವುದಿಲ್ಲ. ಬದಲಾಗಿ ಪಿಪಿಪಿ(ಕೊಳ್ಳುವ ಸಾಮರ್ಥ್ಯದಲ್ಲಿನ ಸಾಮ್ಯತೆ) ಎಂಬ ಮಾನದಂಡವನ್ನು ಬಳಸುತ್ತದೆ. ಇದು ವಿವಿಧ ದೇಶಗಳಲ್ಲಿನ ಸರಕು ಮತ್ತು ಸೇವೆಗಳ ಬೆಲೆಗಳಲ್ಲಿನ ವ್ಯತ್ಯಾಸವನ್ನು ಸರಿಹೊಂದಿಸುತ್ತದೆ. ಉದಾಹರಣೆಗೆ, ಅಮೆರಿಕದಲ್ಲಿ ಒಂದು ಡಾಲರ್‌ಗೆ ಖರೀದಿಸಬಹುದಾದ ವಸ್ತುಗಳನ್ನೇ ಭಾರತದಲ್ಲಿ ಖರೀದಿಸಲು ಅದಕ್ಕೆ ಸಮಾನವಾದ ಭಾರತೀಯ ರೂಪಾಯಿಗಳ ಅಗತ್ಯವಿರುವುದಿಲ್ಲ. ಭಾರತದ ಬೆಲೆಮಟ್ಟಕ್ಕೆ ಅನುಗುಣವಾಗಿ ಅದಕ್ಕಿಂತ ಹೆಚ್ಚು ಅಥವಾ ಕಡಿಮೆ ರೂಪಾಯಿ ಸಾಕಾಗಬಹುದು. ಈ ಬೆಲೆ ವ್ಯತ್ಯಾಸವನ್ನು ಪಿಪಿಪಿ  ಪರಿಗಣಿಸುತ್ತದೆ. ವಿಶ್ವಬ್ಯಾಂಕ್ ದೇಶಗಳ ಆರ್ಥಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ವಿವಿಧ ಹಂತಗಳ ಬಡತನ ರೇಖೆಗಳನ್ನು ನಿಗದಿಪಡಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಾಂಧೀಯ ‘ರಾಮ’-ಮನುವಾದಿಗಳ ‘ಶ್ರೀರಾಮ’ನಲ್ಲ

ಸಮಾನತೆಯ ರಾಮರಾಜ್ಯಕ್ಕೂ, ವರ್ಣಾಶ್ರಮದ ರಾಜಕಾರಣಕ್ಕೂ ಇರುವ ವ್ಯತ್ಯಾಸವೇನು? ಗಾಂಧೀಜಿಯವರ ಪಾಲಿಗೆ ರಾಮ ಎಂದರೆ ಸತ್ಯ, ಅಹಿಂಸೆ, ಪ್ರೀತಿ ಮತ್ತು ಸರ್ವಧರ್ಮ ಸಮಭಾವದ ಸಂಕೇತ; ಅಂಬೇಡ್ಕರ್ ಅವರ ವಿಮರ್ಶೆಯಲ್ಲಿ ಪುರಾಣದ ರಾಮನ ಆಡಳಿತದಲ್ಲಿ ಜಾತಿ...

ಮಂಡೇಲ ನೇತೃತ್ವದಲ್ಲಿ ಗುಲಾಮಗಿರಿ – ವರ್ಣಭೇದ ನೀತಿ ವಿರುದ್ಧ...

ನೆಲ್ಸನ್ ಮಂಡೇಲಾ ಅವರಂತಹ ಮಹಾನ್ ನಾಯಕರು ಕಟ್ಟಿದ್ದ ಈ ಪಕ್ಷ ದಾರಿ ತಪ್ಪಿದ್ದಾದರೂ ಹೇಗೆ ಎಂಬ ಪ್ರಶ್ನೆಗೆ ರಾಜಕೀಯ ತಜ್ಞರು ಸ್ಪಷ್ಟ ಕಾರಣಗಳನ್ನು ನೀಡಿದ್ದಾರೆ. ಆಡಳಿತಶಾಹಿಯ ಭ್ರಷ್ಟಾಚಾರ, ಮಿತಿಮೀರಿದ ಬಡತನ, ನಿರುದ್ಯೋಗ, ಮತ್ತು...

ಶಿವಮೊಗ್ಗ | ಮಿತಿಮೀರಿದ ಸಂಚಾರ ದಟ್ಟಣೆ ಸಮಸ್ಯೆ ಪೊಲೀಸರೊಂದಿಗೆ...

ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಶಿವಮೊಗ್ಗ ನಗರದಲ್ಲಿ ವಾಹನಗಳ ಸಂಖ್ಯೆ ಏರಿಕೆ, ವಾಣಿಜ್ಯ ಚಟುವಟಿಕೆಗಳ ವಿಸ್ತರಣೆ ಹಾಗೂ ರಸ್ತೆ ಒತ್ತುವರಿಯಿಂದಾಗಿ ಸಂಚಾರ ದಟ್ಟಣೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಈ ಸಮಸ್ಯೆಯನ್ನು ಸುಧಾರಿಸಲು ಪೊಲೀಸ್‌ ಇಲಾಖೆ...

ಮುಖ್ಯವಾಗಿ ಸಂಪತ್ತಿನ ಅಸಮಾನ ಹಂಚಿಕೆಯನ್ನು ಸೂಚಿಸುವ ಸಾಪೇಕ್ಷ ಬಡತನ(relative poverty) ಮತ್ತು ಜನರ ಮೂಲಭೂತ ಅಗತ್ಯವನ್ನು ಸಹ ಪೂರೈಸಲು ಸಾಧ್ಯವಾಗದ ಸಮಗ್ರ ಬಡತನ(absolute poverty) ಎಂದು ವಿಂಗಡಿಸಲಾಗುತ್ತದೆ. ಇಂದು ಭಾರತವು ಸಮಗ್ರ ಬಡತನದಿಂದ ಹೊರಬಂದಿದೆ ಎನ್ನುವುದು ಸಮಾಧಾನಕರ ಸಂಗತಿಯಾದರೆ  ಸಾಪೇಕ್ಷ ಬಡತನದ ಪ್ರಮಾಣ ಹೆಚ್ಚುತ್ತಿರುವುದು ಕಳವಳಕಾರಿ ವಿಚಾರವಾಗಿದೆ. ಒಂದು ಕಾಲದಲ್ಲಿ ಗ್ರಾಮೀಣ ಭಾಗದಲ್ಲಿ ಕೇಂದ್ರೀಕರಣಗೊಂಡಿದ್ದ ಬಡತನ ನಗರೀಕರಣ ಮತ್ತು ವಲಸೆಯ ವಿದ್ಯಮಾನದ ಕಾರಣ ಅದು ನಗರ ಪ್ರದೇಶಕ್ಕೆ ವಿಸ್ತರಿಸಿಕೊಳ್ಳುತ್ತಿದೆ. ವೈರುಧ್ಯವೆಂದರೆ ‘ಬಡತನ ನಿರ್ಮೂಲನೆಗಾಗಿ ನಗರಕ್ಕೆ ವಲಸೆ ಬನ್ನಿ’ ಎನ್ನುವ ಸರ್ಕಾರದ ನವ ಉದಾರೀಕರಣ ನೀತಿಯು ಗ್ರಾಮೀಣ ಬಡತನ ಮತ್ತು ನಗರ ಬಡತನ ಎನ್ನುವ ವ್ಯಾಪಕವಾಗಿ ವಿಸ್ತರಿಸಿಕೊಂಡ ಬಡತನಕ್ಕೆ ಕಾರಣವಾಗುತ್ತಿದೆ. ಮುಖ್ಯವಾಗಿ ಉದ್ಯೋಗ ಕಲ್ಪಿಸುತ್ತದೆ ಎನ್ನುವ ಉದ್ದೇಶದಿಂದ ನಗರಕ್ಕೆ ವಲಸೆ ಬರುವ ಕೂಲಿ ಕಾರ್ಮಿಕರ ಬಡತನ ಮತ್ತು ನಗರೀಕರಣದ ನಡುವಿನ ಸಂಬಂಧಗಳ ಅಧ್ಯಯನ ಮಾಡಬೇಕಿದೆ.

image 9 14

ಆರ್ಥಿಕ ತಜ್ಞ ಕುಝ್ನೆಟ್ಸ್‌ನ ತಲೆಕೆಳಗಾದ U-ಆಕಾರದ ವ್ಯಾಖ್ಯಾನವು ಆದಾಯ ಅಸಮಾನತೆ ಮತ್ತು ಆರ್ಥಿಕ ಬೆಳವಣಿಗೆಯ ನಡುವಿನ ಸಂಬಂಧವನ್ನು ಸೂಚಿಸುತ್ತದೆ. ಇದರ ಪ್ರಕಾರ ಆರ್ಥಿಕತೆಯು ಅಭಿವೃದ್ಧಿಯಾಗುತ್ತಿದ್ದಂತೆ, ಆದಾಯ ಅಸಮಾನತೆಯು ಆರಂಭದಲ್ಲಿ ಹೆಚ್ಚಾಗುತ್ತದೆ, ಒಂದು ಗರಿಷ್ಠ ಬಿಂದುವನ್ನು ತಲುಪುತ್ತದೆ, ತದನಂತರ ಕಡಿಮೆಯಾಗುತ್ತದೆ. ನವ ಉದಾರೀಕರಣದ ಆರ್ಥಿಕತೆ ಆಧರಿತ ಅಭಿವೃದ್ಧಿಯ ಆರಂಭಿಕ ಹಂತವಾದ ಕೈಗಾರಿಕೀಕರಣದ ಸಮಯದಲ್ಲಿ, ಆದಾಯ ಅಸಮಾನತೆಯು ಹೆಚ್ಚಾಗುತ್ತದೆ. ಇದಕ್ಕೆ ಕಾರಣ:

*ಆರ್ಥಿಕ ಬೆಳವಣಿಗೆಯು ಸಾಮಾನ್ಯವಾಗಿ ನಿರ್ದಿಷ್ಟ ವಲಯಗಳಲ್ಲಿ (ಉದಾಹರಣೆಗೆ ನಗರ ಕೈಗಾರಿಕೆಗಳು) ಪ್ರಾರಂಭವಾಗುತ್ತದೆ, ಇದು ಕೆಲವು ಉದ್ಯಮಿಗಳು ಅಥವಾ ಬಂಡವಾಳಶಾಹಿಗಳಿಗೆ ಲಾಭವನ್ನು ನೀಡುತ್ತದೆ, ಆದರೆ ದುಡಿಯುವ ವರ್ಗ, ವಲಸೆ ಬಂದ ಗ್ರಾಮೀಣ ಕೂಲಿ ಕಾರ್ಮಿಕರು ಬಡತನದಲ್ಲಿ ವಾಸಿಸುತ್ತಾರೆ.
*ಬಂಡವಾಳಶಾಹಿ ಆಧರಿತ ಕೈಗಾರಿಕಾ ಬೆಳವಣಿಗೆಗಳು ಗ್ರಾಮೀಣ ಪ್ರದೇಶಗಳಿಗಿಂತ ವೇಗವಾಗಿ ಬೆಳೆಯುವುದರಿಂದ ಅಸಮಾನತೆಯ ವೇಗವು ವೃದ್ಧಿಸುತ್ತದೆ.
*ಈ ಹಂತದಲ್ಲಿ ಶಿಕ್ಷಣ, ಕೌಶಲ್ಯಗಳು ಮತ್ತು ಪುನರ್‌ ಉತ್ಪಾದನೆಯಿಂದ ಗಳಿಸಿದ ಸಂಪತ್ತು ಕೆಲವರಲ್ಲಿ ಕೇಂದ್ರೀಕರಣಗೊಳ್ಳುತ್ತದೆ.

ಇದನ್ನು ಓದಿದ್ದೀರಾ?: ಕೆಲಸವಿಲ್ಲ, ಪರಿಹಾರವೂ ಅಷ್ಟಕ್ಕಷ್ಟೇ: ದೆಹಲಿಯ ವಿಷಪೂರಿತ ಗಾಳಿಗೆ ಬೆಲೆ ತೆರುತ್ತಿರುವ ಕಟ್ಟಡ ಕಾರ್ಮಿಕರು!

ಗರಿಷ್ಠ ಅಸಮಾನತೆ: ಆರ್ಥಿಕ ಅಭಿವೃದ್ಧಿಯ ಒಂದು ನಿರ್ದಿಷ್ಟ ಹಂತದಲ್ಲಿ ಆದಾಯ ಅಸಮಾನತೆಯು ಗರಿಷ್ಠ ಮಟ್ಟವನ್ನು ತಲುಪುತ್ತದೆ. ಇದು ತಲೆಕೆಳಗಾದ U ವಕ್ರರೇಖೆಯ ಉನ್ನತ ಬಿಂದುವಾಗಿದ್ದು, ಬೆಳವಣಿಗೆಯ ಲಾಭಗಳ ಅಸಮರ್ಪಕ ವಿತರಣೆಯಿಂದಾಗಿ ಅಸಮಾನತೆಯು ಅತ್ಯಂತ ಗರಿಷ್ಠ ಮಟ್ಟದಲ್ಲಿರುತ್ತದೆ.

ನಂತರದ ಅಭಿವೃದ್ಧಿಯ ಹಂತಗಳು: ಆರ್ಥಿಕತೆಯು ಪಕ್ವವಾಗುತ್ತಿದ್ದಂತೆ, ಆದಾಯ ಅಸಮಾನತೆಯು ಕಡಿಮೆಯಾಗುತ್ತದೆ. ಇದಕ್ಕೆ ಕಾರಣವಾಗುವ ಅಂಶಗಳು:

*ಶಿಕ್ಷಣ ಮತ್ತು ಕೌಶಲ್ಯ ತರಬೇತಿಗೆ ಹೆಚ್ಚಿದ ಆದ್ಯತೆ. ಇದು ಹೆಚ್ಚಿನ ಜನರಿಗೆ ಉನ್ನತ ವೇತನದ ಉದ್ಯೋಗಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
*ನಗರೀಕರಣ ಮತ್ತು ಕಾರ್ಮಿಕರ ಮೇಲ್ಮುಖ ಚಲನೆ ಗ್ರಾಮೀಣ-ನಗರ ಆದಾಯ ಅಂತರವನ್ನು ಕಡಿಮೆ ಮಾಡುತ್ತದೆ.
*ಸರ್ಕಾರದ ಮಧ್ಯಸ್ತಿಕೆ, ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳು ಮತ್ತು ಕಾರ್ಮಿಕ ನೀತಿಗಳು ಸಂಪತ್ತಿನ ಮರುವಿತರಣೆಗೆ ಸಹಾಯ ಮಾಡುತ್ತವೆ.

ಕುಝ್ನೆಟ್ಸ್‌ನ ಮೊದಲ ಹಂತದ ತಲೆಕೆಳಗಾದ U-ಆಕಾರದ ವ್ಯಾಖ್ಯಾನವನ್ನು ಭಾರತ ಇಂದು ಅನುಭವಿಸುತ್ತಿದೆ. ಆದರೆ ಗರಿಷ್ಠ ಮಟ್ಟ ತಲುಪಿದ ನಂತರ ಅಸಮಾನತೆ ಕಡಿಮೆಯಾಗುತ್ತದೆ ಎನ್ನುವ ಎರಡನೆ ಹಂತದ ವಿಶ್ಲೇಷಣೆ ಸಂಪೂರ್ಣ ಸುಳ್ಳು ಎಂದು ಭಾರತದ ಇಂದಿನ ಅಗಾಧ ಪ್ರಮಾಣದ ಅಸಮಾನತೆಯ ದತ್ತಾಂಶದಿಂದ ಸ್ಪಷ್ಟವಾಗುತ್ತದೆ.  ಬ್ರೊಕರೇಜ್‌ ಸಂಸ್ಥೆ ಬರ್ನಸ್ಟೇನ್‌ ಪ್ರಕಟಿಸಿದ ಇತ್ತೀಚಿನ ವರದಿಯ ಪ್ರಕಾರ ಶೇ.1 ಪ್ರಮಾಣದ ಕ್ರೂನಿ ಬಂಡವಾಳಶಾಹಿ ಕುಟುಂಬಗಳು ಭಾರತದ ಶೇ.60ರಷ್ಟು ಸಂಪತ್ತನ್ನು ಹೊಂದಿವೆ. ಭಾರತದ ಜನಸಂಖ್ಯೆಯ ಶೇ0.14 ಪ್ರಮಾಣದ ಎರಡು ಮಿಲಿಯನ್(20‌ ಲಕ್ಷ) ಕುಟುಂಬಗಳು ಅಂದಾಜು 2.36 ಲಕ್ಷ ಕೋಟಿ ಲಿಕ್ವಿಡ್‌ ಸಂಪತ್ತನ್ನು ಹೊಂದಿದ್ದಾರೆ. ಆಕ್ಸ್ಫಫಮ್‌ 2023ರ ವರದಿಯ ಪ್ರಕಾರ ಶೇ.1 ಪ್ರಮಾಣದ ಅತಿ ಶ್ರೀಮಂತರು(ಉಬರ್‌ ಶ್ರೀಮಂತರು) ಶೇ.40ರಷ್ಟು ಆದಾಯವನ್ನು, ಶೇ.60ರಷ್ಟು ಸಂಪತ್ತನ್ನು, ಶೇ.70ರಷ್ಟು ಹಣಕಾಸು ಆಸ್ತಿಯನ್ನು ಹೊಂದಿದ್ದಾರೆ. ಶೇ.3ರಷ್ಟು ಶ್ರೀಮಂತರು ಶೇ.45ರಷ್ಟು ಆದಾಯವನ್ನು, ಶೇ.70ರಷ್ಟು ಸಂಪತ್ತನ್ನು, ಶೇ.70ರಷ್ಟು ಹಣಕಾಸು ಆಸ್ತಿಯನ್ನು ಹೊಂದಿದ್ದಾರೆ. ಕೆಲವೇ ಕೆಲವು ಕ್ರೋನಿ ಬಂಡವಾಳಶಾಹಿ ಕುಟುಂಬಗಳ ಬಳಿ ಅಪಾರ ಸಂಪತ್ತಿನ ಕ್ರೋಡೀಕರಣದ ಕಾರಣ ಇಂತಹ ಅಗಾಧ ಅಸಮಾನತೆ ಸೃಷ್ಟಿಯಾಗಿದೆ.

2023ರ ಏಷ್ಯಾ ಟೈಮ್ಸ್‌ನ ವರದಿಯ ಪ್ರಕಾರ 2000ರಲ್ಲಿ ಜಿಡಿಪಿಯ ಶೇ.2ರಷ್ಟಿದ್ದ ದೇಶದ ಬಿಲಿಯನಾಧೀಶರ ಸಂಪತ್ತು 2020ರ ವೇಳೆಗೆ ಜಿಡಿಪಿಯ ಶೇ.20ರಷ್ಟು ಏರಿಕೆಯಾಗಿದೆ. ಫಾರ್ಚೂನ್‌ ಇಂಡಿಯಾ ಮಾಧ್ಯಮದ ವರದಿಯ ಪ್ರಕಾರ 2023ರಲ್ಲಿ 5.23 ಲಕ್ಷ ಕೋಟಿಯಷ್ಟಿದ್ದ ಅದಾನಿಯ ಸಂಪತ್ತು 2025-26ರಲ್ಲಿ 7.5 ಲಕ್ಷ ಕೋಟಿಯಷ್ಟಾಗಿದೆ. ಒಂದು ವರ್ಷದಲ್ಲಿ 5.16 ಲಕ್ಷ ಕೋಟಿಯಷ್ಟು ಹೆಚ್ಚಳವಾಗಿದೆ. ಅಂದರೆ ದುಪ್ಪಟ್ಟಾಗಿದೆ. ಮುಖೇಶ ಅಂಬಾನಿಯ ಸಂಪತ್ತು 2025-26ರಲ್ಲಿ 8.4 ಲಕ್ಷ ಕೋಟಿಯಷ್ಟಾಗಿದೆ. ಒಂದೇ ದಿನದಲ್ಲಿ 59,000 ಕೋಟಿಯಷ್ಟು ಹೆಚ್ಚಳವಾಗಿದೆ. 2023ರಲ್ಲಿ 1.36 ಲಕ್ಷ ಕೋಟಿಯಷ್ಟಿದ್ದ ಸಾವಿತ್ರಿ ದೇವಿ ಜಿಂದಾಲ್‌ ಅವರ ಸಂಪತ್ತು 2024ರಲ್ಲಿ 2.77 ಲಕ್ಷ ಕೋಟಿಯಷ್ಟಾಗಿದೆ. ಒಂದು ವರ್ಷದಲ್ಲಿ 1.41 ಲಕ್ಷ ಕೋಟಿಯಷ್ಟು ಹೆಚ್ಚಳವಾಗಿದೆ. ದುಪ್ಪಟ್ಟಾಗಿದೆ. ದೇಶದ ಹತ್ತು ಅತಿ ಶ್ರೀಮಂತರ ಸಂಪತ್ತು ಅಂದಾಜು 35 ಲಕ್ಷ ಕೋಟಿಯಷ್ಟಿದೆ. ಮತ್ತೊಂದೆಡೆ 2023ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು 125 ದೇಶಗಳಲ್ಲಿ 111ನೇ ಸ್ಥಾನ ಹೊಂದಿದೆ, 2026ರಲ್ಲಿ 100ನೇ ಸ್ಥಾನದಲ್ಲಿದೆ. ಕೆಲವು ಆರೋಗ್ಯ ಸೂಚಕಗಳು ಸುಧಾರಿಸಿದ್ದರೂ, ಇತರ ಸೂಚಕಗಳು ಹದಗೆಟ್ಟಿವೆ. 80 ಕೋಟಿ ಜನಸಂಖ್ಯೆ ಪಡಿತರ ವ್ಯವಸ್ಥೆ ಮೂಲಕ ಆಹಾರ, ಧಾನ್ಯ ಪಡೆಯುತ್ತಿದ್ದಾರೆ. ಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿದೆ. ಕಳೆದ ಮೂವತ್ತು ವರ್ಷಗಳ ಹಿಂದಿನ ದಿನಗಳಿಗೆ ಹೋಲಿಸಿದರೆ ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ ದುರ್ಬಲಗೊಂಡಿದೆ. ಸಾರಾಂಶದಲ್ಲಿ ಕುಝ್ನೆಟ್ಸ್‌ನ ‘ಎರಡನೆ ಹಂತದಲ್ಲಿ ಸರ್ಕಾರದ ಮಧ್ಯಸ್ಥಿಕೆಯಿಂದ ಆದಾಯ ಹೆಚ್ಚಾಗುತ್ತದೆ, ಬಡತನ ಕಡಿಮೆಯಾಗುತ್ತದೆ’ ಎನ್ನುವ ಸಿದ್ದಾಂತ ಹಾದಿ ತಪ್ಪಿಸುತ್ತದೆ ಎಂದು ಭಾರತದ ಇಂದಿನ ವಾಸ್ತವ ದತ್ತಾಂಶಗಳು ಬಹಿರಂಗಗೊಳಿಸುತ್ತವೆ.

International Day for the Eradication of Poverty and its observance in India

ಈ ಮೊದಲು ಭಾರತದಲ್ಲಿ ಯುಆರ್‌ಪಿ( ಏಕರೂಪ ಪರಾಮರ್ಶೆ ಅವಧಿ) ವಿಧಾನವನ್ನು ಅನುಸರಿಸಲಾಗುತ್ತಿತ್ತು. ಈ ವಿಧಾನದಲ್ಲಿ ಕುಟುಂಬಗಳು ತಾವು ಖರೀದಿಸಿದ ಬಹುತೇಕ ಎಲ್ಲ ವಸ್ತುಗಳ ವೆಚ್ಚದ ವಿವರಗಳನ್ನು ಹಿಂದಿನ 30 ದಿನಗಳ ಆಧಾರದ ಮೇಲೆ ನೀಡಬೇಕಾಗಿತ್ತು. ನಂತರ ಭಾರತವು ಎಂಎಂಆರ್‌ಪಿ(ಪರಿಷ್ಕೃತ ಮಿಶ್ರ ಪರಾಮರ್ಶೆ ಅವಧಿ) ವಿಧಾನಕ್ಕೆ ಬದಲಾಯಿತು. ಈ ವಿಧಾನದಲ್ಲಿ ವಿವಿಧ ವಸ್ತುಗಳ ಖರೀದಿ ಮತ್ತು ಬಳಕೆಯ ವಿವರಗಳನ್ನು ವಿಭಿನ್ನ ಕಾಲಾವಧಿಗಳ ಆಧಾರದ ಮೇಲೆ ಸಂಗ್ರಹಿಸಲಾಗುತ್ತದೆ. ಆದರೆ ಯಾವುದೇ ಸಂದರ್ಭದಲ್ಲಿಯೂ ಜೀವನಮಟ್ಟವನ್ನು, ಗುಣಮಟ್ಟದ ಉದ್ಯೋಗವನ್ನು ಮಾನದಂಡವಾಗಿ ಬಳಸುವುದಿಲ್ಲ. ಹಣದುಬ್ಬರದ ಕಾರಣಕ್ಕೆ ಸರಕುಗಳ ಬೆಲೆ ಹೆಚ್ಚಾಗುತ್ತವೆ. ಆಗ ಖರೀದಿಯ ವೆಚ್ಚವೂ ಹೆಚ್ಚಾಗುತ್ತದೆ. ಆದರೆ ಆದಾಯದಲ್ಲಿ ಯಾವುದೇ ಬದಲಾವಣೆಯಾಗಿರುವುದಿಲ್ಲ. ಇದನ್ನು ಆಧರಿಸಿ ಬಡತನ ರೇಖೆಯನ್ನು ಅಳೆಯುವುದು ಅವೈಜ್ಞಾನಿಕ ಎನಿಸಿಕೊಳ್ಳುತ್ತದೆ.

ಇದನ್ನು ಓದಿದ್ದೀರಾ?: ಉತ್ತರ ಕರ್ನಾಟಕದ ಬಡವರ ಜೀವನಾಡಿ: ಸಾರ್ವಕಾಲಿಕ ದಾಖಲೆ ದರ ದಾಟಿದ ಜೋಳ

ಭಾರತ ಸರ್ಕಾರವು ನಿತಿ ಆಯೋಗ, ಯುಎನ್‌ಡಿಪಿ (ವಿಶ್ವಸಂಸ್ಥೆ ಅಭಿವೃದ್ಧಿ ಯೋಜನೆ) ಮತ್ತು ಆಕ್ಸ್‌ಫರ್ಡ್ ಬಡತನ ಮತ್ತು ಒಪಿಎಚ್‌ಐ(ಮಾನವ ಅಭಿವೃದ್ಧಿ ಇನಿಷಿಯೇಟಿವ್) ಸಹಯೋಗದಲ್ಲಿ ಅಭಿವೃದ್ಧಿಪಡಿಸಿದ ಎನ್ಎಂಪಿಐಯನ್ನು(ರಾಷ್ಟ್ರೀಯ ಬಹು ಆಯಾಮ ಬಡತನ ಸೂಚ್ಯಂಕ) ಬಳಸಿಕೊಂಡು ಬಡತನ ಕಡಿಮೆಯಾಗಿದೆ ಎಂಬುದನ್ನು ತೋರಿಸುವುದು ಒಂದು ಕಾರ್ಯತಂತ್ರವಾಗಿದೆ. ವಾಸ್ತವದಲ್ಲಿ ಎನ್‌ಎಸ್‌ಎಸ್‌ಒ(ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆ) ನಡೆಸುವ ಸಮೀಕ್ಷೆ ಭಾರತದಲ್ಲಿ ಆರ್ಥಿಕ ಬಡತನದ ಅಂದಾಜಿನ ಆಧಾರಸ್ತಂಭವಾಗಿದೆ. ಆದರೆ ಮೋದಿ ಸರ್ಕಾರವು 2017-18ರ ಸಮೀಕ್ಷೆಯನ್ನು ರದ್ದುಗೊಳಿಸಿದೆ. 2014ರಿಂದ 2022ರವರೆಗೆ ಗ್ರಾಹಕ ವೆಚ್ಚ ಸಮೀಕ್ಷೆಗಳ ದತ್ತಾಂಶ ಲಭ್ಯವಿಲ್ಲ. ಆದಾಯ-ಆಧಾರಿತ ಬಡತನದ ಸ್ಥಿತಿಗತಿಗಳ ಸಮೀಕ್ಷೆ ನಡೆಸದಿರಲು ಅಥವಾ ಬಿಡುಗಡೆ ಮಾಡದಿರಲು ಮೋದಿ ನೇತೃತ್ವ ಸರ್ಕಾರ ತೆಗೆದುಕೊಂಡ ನಿರ್ಧಾರವು ಬಡತನ ಅಳೆಯುವ ಸಾಮರ್ಥ್ಯವನ್ನು ಸೀಮಿತಗೊಳಿಸುತ್ತದೆ.

ಆರ್ಥಿಕ ತಜ್ಞ ಸಂತೋಷ್‌ ಮೆಹ್ರೋತ್ರಾ ‘2014 ರಿಂದ 2022ರವರೆಗೆ ಗ್ರಾಹಕ ವೆಚ್ಚ ಸಮೀಕ್ಷೆಗಳ ಅಲಭ್ಯತೆಯ ಹೊರತಾಗಿಯೂ ಎನ್ಎಂಪಿಐಯನ್ನು ಭಾರತದ ಬಡತನ ಸೂಚಕವಾಗಿ ಬಳಸುವ ಉದ್ದೇಶವು ರಾಜಕೀಯ ತಂತ್ರದ ಭಾಗವಾಗಿದೆ. ವಾಸ್ತವದಲ್ಲಿ ವೇತನಗಳು ಆರು ವರ್ಷಗಳ ಕಾಲ ಸ್ಥಗಿತಗೊಂಡಿದ್ದವು, ಇದು ಗ್ರಾಹಕರ ಕೊಳ್ಳುವಿಕೆ, ಬೇಡಿಕೆಗಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರಿತು ಮತ್ತು ಇದು ಬಡತನ ಮಟ್ಟದ ಕಡಿಮೆಯಾಗುವಿಕೆಗೆ ತಾಳೆಯಾಗುವುದಿಲ್ಲ… ವಿಧಾನಶಾಸ್ತ್ರ ಮತ್ತು ಅದರ ಫಲಿತಾಂಶಗಳು ಹೆಚ್ಚಿನ ಪರೀಕ್ಷೆಗೆ ತೆರೆದುಕೊಳ್ಳುತ್ತವೆಯೇ? ಎನ್ಎಂಪಿಐಗೆ ಸಂಪೂರ್ಣ ಚಿತ್ರಣವನ್ನು ಸೆರೆಹಿಡಿಯಲು ಸಾಧ್ಯವಾಗಿದೆಯೇ?… ಚುನಾವಣೆಗಳ ಮುಂಚೆ ಅಥವಾ ಸುಸ್ಥಿರ ಅಭಿವೃದ್ಧಿ ಗುರಿಗಳ(ಎಸ್‌ಡಿಜಿ) ಗುರಿ 1.2ನಂತಹ (2030ರ ವೇಳೆಗೆ ಬಹುಆಯಾಮದ ಬಡತನವನ್ನು ಅರ್ಧಕ್ಕೆ ಇಳಿಸುವುದು) ಜಾಗತಿಕ ಬದ್ಧತೆಗಳ ಮುಂಚೆ ಬಡತನ ಕಡಿಮೆಯಾಗಿದೆ ಎಂದು ತೋರಿಸಲು ಎನ್ಎಂಪಿಐಯನ್ನು ಬಳಸಿಕೊಳ್ಳುವುದು ರಾಜಕೀಯ ಕಾರ್ಯಸೂಚಿಯಾಗಿದೆ… ಎನ್ಎಂಪಿಐನ ಆದ್ಯತೆಯು ಆದಾಯೇತರ ಸೂಚಕಗಳ ಮೇಲಿದೆ. ಇವು ಸರ್ಕಾರಿ ಯೋಜನೆಗಳಿಂದ (ಉದಾಹರಣೆಗೆ, ಸ್ವಚ್ಛ ಭಾರತ ಮತ್ತು ಉಜ್ವಲ ಯೋಜನೆ) ಜನಜೀವನ ಸುಧಾರಣೆಗೊಂಡಿದೆ, ಇದು ಸರ್ಕಾರದ ನೀತಿಗಳ ಯಶಸ್ಸು ಎಂದು ತೋರಿಸಿಕೊಳ್ಳುವ ಉದ್ದೇಶವಿದೆ… ಆದರೆ ಆದಾಯದಲ್ಲಿ ಸ್ಥಗಿತವನ್ನು ನಿರ್ಲಕ್ಷಿಸಲಾಗಿದೆ. ಇದು ಚರ್ಚೆಯಾಗುತ್ತಿಲ್ಲ…’ ಎಂದು ಬರೆಯುತ್ತಾರೆ

ಕುಟುಂಬಗಳು ತಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಲು ಸುಸ್ಥಿರ ಆದಾಯವನ್ನು ಅವಲಂಬಿಸಿವೆ. ಸಿಎಂಐಇನ(ಸೆಂಟರ್ ಫಾರ್ ಮಾನಿಟರಿಂಗ್ ದಿ ಇಂಡಿಯನ್ ಎಕಾನಮಿ) ಅಧ್ಯಯನಗಳು 2014ರಿಂದ 2024ರವರೆಗೆ ಗ್ರಾಮೀಣ ಕೂಲಿ ಕಾರ್ಮಿಕರು ಮತ್ತು ನಗರ ಕಾರ್ಮಿಕರ ವಾಸ್ತವಿಕ ವೇತನದಲ್ಲಿ ಹೆಚ್ಚಳವಾಗದೆ ಸ್ಥಗಿತಗೊಂಡಿರುವುದು ಅಥವಾ ಕಡಿಮೆಯಾಗಿರುವುದನ್ನು ಸೂಚಿಸುತ್ತವೆ. ಅಂದರೆ ಆದಾಯ ಕುಂಠಿತಗೊಂಡಿದೆ. ಈ ಬೆಳವಣಿಗೆಯು ವಿಶೇಷವಾಗಿ ಕಡಿಮೆ ಆದಾಯದ ಗುಂಪುಗಳಿಗೆ ಗ್ರಾಹಕ ಬೇಡಿಕೆಯನ್ನು ಮಿತಿಗೊಳಿಸಿತು. ಆದಾಯದ ಮಿತಿಯ ಕಾರಣ ಗ್ರಾಹಕರ ಬೇಡಿಕೆ ದುರ್ಬಲಗೊಂಡಿರುವುದು ಎನ್‌ಎಂಪಿಐನ  ಬಡತನ ಕಡಿಮೆಯಾಗಿದೆ ಎಂಬ ಹೇಳಿಕೆಗೆ ಸವಾಲಾಗಿದೆ. ಮತ್ತೊಂದೆಡೆ ಎನ್‌ಎಂಪಿಐ ಆದಾಯ ಅಥವಾ ಗ್ರಾಹಕ ವೆಚ್ಚವನ್ನು ನೇರವಾಗಿ ಅಳೆಯುವುದಿಲ್ಲ, ಬದಲಿಗೆ ಆರೋಗ್ಯ, ಶಿಕ್ಷಣ ಮತ್ತು ಜೀವನಮಟ್ಟದ ಕೊರತೆಗಳ ಮೇಲೆ ಕೇಂದ್ರೀಕರಿಸುತ್ತದೆ. ಈ ಕ್ಷೇತ್ರಗಳಲ್ಲಿ ಸುಧಾರಣೆಗಳು (ಉದಾಹರಣೆಗೆ, ವಿದ್ಯುತ್ ಅಥವಾ ಸ್ವಚ್ಛತೆಗೆ ಪ್ರವೇಶ) ಸರ್ಕಾರದ ಹಸ್ತಕ್ಷೇಪಗಳ ಮೂಲಕ ಜನತೆಯ ಆದಾಯ ಹೆಚ್ಚಳ/ಕಡಿಮೆ ಆಗದೆಯೂ ಸಂಭವಿಸಬಹುದು. ಇದು ವಾಸ್ತವ ಆರ್ಥಿಕತೆ ಮತ್ತು ಬಹುಆಯಾಮದ ಬಡತನ ಮಾಪನಗಳ ನಡುವೆ ತಾಳೆ ಆಗದಿರುವುದನ್ನು ಸೂಚಿಸುತ್ತದೆ.

ಮೆಹ್ರೋತ್ರಾ ‘2003–04ರ ವೇಳೆಗೆ, ಭಾರತದ ಉಳಿತಾಯ ಪ್ರಮಾಣವು ಜಿಡಿಪಿಯ ಶೇ.23ಕ್ಕೆ ಮತ್ತು ಹೂಡಿಕೆಯ ಪ್ರಮಾಣವು ಜಿಡಿಪಿಯ ಶೇ.24ಕ್ಕೆ ತಲುಪಿತ್ತು. ನಂತರ ಅನುಸರಿಸಿದ ಆರ್ಥಿಕ ನೀತಿಗಳ ಪರಿಣಾಮವಾಗಿ, 2004–14ರ ಅವಧಿಯಲ್ಲಿ ಹೂಡಿಕೆ ಮತ್ತು ಜಿಡಿಪಿಯ ನಡುವಿನ ಅನುಪಾತವು ಶೇ.32ರಿಂದ ಶೇ.38ರ ಮಟ್ಟಕ್ಕೆ ಏರಿತು. ಇದಕ್ಕೂ ಮೊದಲು ಅಥವಾ ನಂತರ ಭಾರತವು ಇಷ್ಟೊಂದು ಉನ್ನತ ಹೂಡಿಕೆ ಪ್ರಮಾಣವನ್ನು ಸಾಧಿಸಿಲ್ಲ.2014–24ರ ಅವಧಿಯಲ್ಲಿ ವಾರ್ಷಿಕ ಹೂಡಿಕೆ ಪ್ರಮಾಣವು ಜಿಡಿಪಿಯ ಶೇ.26ರಿಂದ ಶೇ.32ರ ನಡುವೆ ಏರಿಳಿತ ಕಂಡಿತು. ಇದಕ್ಕೆ ಪ್ರಮುಖ ಕಾರಣವೆಂದರೆ ವೇತನಗಳ ಕುಸಿತ ಮತ್ತು ಅದರ ಪರಿಣಾಮವಾಗಿ ಉಳಿತಾಯ ಪ್ರಮಾಣದಲ್ಲೂ ಉಂಟಾದ ಇಳಿಕೆ’ ಎಂದು ಬರೆಯುತ್ತಾರೆ.

ಲೇಖಾ ಚಕ್ರವರ್ತಿ ‘ಆರೋಗ್ಯ, ಶಿಕ್ಷಣ, ಮತ್ತು ಜೀವನ ಗುಣಮಟ್ಟವನ್ನು ಅಳೆಯುವ ಮಾನದಂಡವನ್ನು ತಾಯಿಯ ಆರೋಗ್ಯ ಮತ್ತು ಬ್ಯಾಂಕ್‌ ಖಾತೆಯೊಂದಿಗೆ ಸಮಾನವಾಗಿ ಪರಿಗಣಿಸುವುದು ಹಾದಿ ತಪ್ಪಿಸುವ ಕ್ರಮವಾಗಿದೆ… 2015-16ರ ವೇಳೆಗೆ ಬಹುತೇಕ ಕುಟುಂಬಗಳು ಬ್ಯಾಂಕ್‌ ಖಾತೆ ಹೊಂದಿವೆ. ಇದು ಸಹಜವಾಗಿ ಬದುಕಿನ ಗುಣಮಟ್ಟದ ಅಳತೆಯಲ್ಲಿ ಹೆಚ್ಚಿನ ಅಂಕಗಳನ್ನು ನೀಡುತ್ತದೆ. ಆದರೆ ಇದನ್ನು ಅಳೆಯುವ ಮಾನದಂಡವನ್ನು ಶಿಕ್ಷಣ, ಆರೋಗ್ಯ, ಜೀವನಮಟ್ಟಕ್ಕೆ ಅನ್ವಯಿಸಿದರೆ ಈ ವಲಯಗಳಲ್ಲಿಯೂ ಸುಧಾರಣೆ ಕಂಡುಬರುತ್ತದೆ. ಆದರೆ ಇದು ಸತ್ಯವಲ್ಲ. ಬ್ಯಾಂಕ್‌ ಖಾತೆ ಹೊಂದಿರುವ ಕೋಟ್ಯಂತರ ಜನಸಂಖ್ಯೆ ಶಿಕ್ಷಣದಿಂದ ವಂಚಿತರಾಗಿದ್ದಾರೆ, ಆರೋಗ್ಯದ ಕೊರತೆಯಿಂದ, ಹಸಿವಿನಿಂದ ಬದಕುತ್ತಿದ್ದಾರೆ. ಆದರೆ ಈ ಅಂಶಗಳು ಬಡತನ ಅಳೆಯುವ ಮಾಪನದಲ್ಲಿ ಪರಿಗಣಿಸಲ್ಪಡುವುದಿಲ್ಲ…’ ಎಂದು ಹೇಳುತ್ತಾರೆ. ಹಾಗೆಯೇ ಜನನ ಪ್ರಮಾಣ ಕಡಿಮೆಯಾಗಿರುವುದರಿಂದ ತಾಯಿಯ ಆರೋಗ್ಯವನ್ನು ಅಳೆಯುವ ಮಾನದಂಡ ಬದಲಾಗಬೇಕಾಗುತ್ತದೆ, ಅಪೌಷ್ಟಿಕತೆಯನ್ನು ಪರಿಗಣಿಸಬೇಕಾಗುತ್ತದೆ. 2015-16ರಲ್ಲಿ ಶೇ.20ರಷ್ಟಿದ್ದ ಮಹಿಳೆಯರ ಅಪೌಷ್ಟಿಕತೆ 2021-22ರ ವೇಳೆಗೆ ಶೇ.30ರಷ್ಟಾಗಿದೆ. ಆದರೆ ಎನ್‌ಎಂಪಿಐ ಇದನ್ನು ನಿರ್ಲಕ್ಷಿಸಿ ಬಾಣಂತಿ ಆರೋಗ್ಯ ಎನ್ನುವ ಮಾನದಂಡವನ್ನು ಮಾತ್ರ ಬಳಸಿಕೊಂಡು ಗುಣಮಟ್ಟದ ಸೂಚ್ಯಂಕವನ್ನು ಹೆಚ್ಚಿಸುತ್ತದೆ. ಇಂತಹ ದೋಷಪೂರಿತ ಸಮೀಕ್ಷೆಗಳನ್ನು ಮಾಧ್ಯಮಗಳು, ಆರ್ಥಿಕ ತಜ್ಞರು ವರದಿ ಮಾಡುವುದಿಲ್ಲ.

Extreme Poverty India

ಭಾರತ ಸರ್ಕಾರವು 2014ರ ರಂಗರಾಜನ್ ಸಮಿತಿಯ ವರದಿಯ ನಂತರ ಇದುವರೆಗೂ ಬಡತನ ರೇಖೆ ಅಳೆಯುವ ರೂಪಾಯಿ ಆಧಾರಿತ ಮಿತಿಯನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಈ ವರದಿಯ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಒಬ್ಬ ವ್ಯಕ್ತಿಗೆ ತಿಂಗಳಿಗೆ ಸುಮಾರು ₹2,100–₹2,300 (ದಿನಕ್ಕೆ ₹70–₹76) ನಗರ ಪ್ರದೇಶದಲ್ಲಿ ಒಬ್ಬ ವ್ಯಕ್ತಿಗೆ ತಿಂಗಳಿಗೆ ಸುಮಾರು ₹3,200–₹3,500 (ದಿನಕ್ಕೆ ₹106–₹116) ಸಾಕಾಗುತ್ತದೆ. ಆದರೆ ಇಂದಿನ ಹಣದುಬ್ಬರ ಮತ್ತು ಗಗನಕ್ಕೇರಿರುವ ಬೆಲೆಗಳು, ರೂಪಾಯಿ ಮೌಲ್ಯದ ಕುಸಿತದ ಹಿನ್ನಲೆಯಲ್ಲಿ ಈ ಮಾನದಂಡ ಅಮಾನವೀಯವಾಗಿದೆ.

ಇದನ್ನು ಓದಿದ್ದೀರಾ?: ಬೆಂಗಳೂರು ಮೆಟ್ರೋ ಯೋಜನೆ: ಕೇಂದ್ರದ ನೆರವು ನಾಮಮಾತ್ರ, ಆರ್ಥಿಕ ಹೊರೆಯಲ್ಲಿ ರಾಜ್ಯದ್ದೇ ‘ಸಿಂಹಪಾಲು’

ಅಂತಾರಾಷ್ಟ್ರೀಯ ಬಡತನ ರೇಖೆಗಳ (ಉದಾಹರಣೆಗೆ ಪಿಪಿಪಿ) ಮಾನದಂಡಗಳಾದ ದಿನಕ್ಕೆ 3 ಅಥವಾ 4.20 ಡಾಲರ್ ವಾಸ್ತವದಲ್ಲಿ ಅತ್ಯಂತ ಕಡಿಮೆ ದೈನಂದಿನ ಆದಾಯವನ್ನು ಸೂಚಿಸುತ್ತವೆ. ಆರ್ಥಿಕ ತಜ್ಞರ ಪ್ರಕಾರ ಇದು ಒಬ್ಬ ವ್ಯಕ್ತಿಗೆ ದಿನಕ್ಕೆ ಸರಿಸುಮಾರು 58 ರೂಪಾಯಿಗಳಿಗೆ ಸಮನಾಗುತ್ತದೆ. ಅಂದರೆ ಕುಟುಂಬವೊಂದು ಒಂದೇ ಒಂದು ಆರೋಗ್ಯ ತುರ್ತುಪರಿಸ್ಥಿತಿಯನ್ನು ಎದುರಿಸಿದರೂ ಅಥವಾ ಉದ್ಯೋಗ ಕಳೆದುಕೊಂಡರೂ ಮತ್ತೆ ಸುಲಭವಾಗಿ ತೀವ್ರ ಬಡತನದ ಸಂಕಷ್ಟಕ್ಕೆ ಜಾರಬಹುದು. ಇನ್ನು ಜಾಗತಿಕ ಬಹುಆಯಾಮದ ಬಡತನ ಸೂಚ್ಯಂಕ(Global Multidimensional Poverty Index)ದ ಪ್ರಕಾರ ಭಾರತದ ಆರೋಗ್ಯ, ಶಿಕ್ಷಣ ಮತ್ತು ಜೀವನಮಟ್ಟಕ್ಕೆ ಸಂಬಂಧಿಸಿದ ಅನೇಕ ರೀತಿಯ ಕೊರತೆ ಮತ್ತು ಹಿನ್ನಡೆಗಳನ್ನು ಎದುರಿಸುತ್ತಿದೆ. ಇಂದಿಗೂ 80 ಕೋಟಿ ಜನಸಂಖ್ಯೆ(2011ರ ಜನಗಣತೆ) ಪಡಿತರ ವ್ಯವಸ್ಥೆಯ ಮೇಲೆ ಅವಲಂಬಿತರಾಗಿದ್ದಾರೆ. ಹಾಗೆಯೇ ಮೋದಿ ನೇತೃತ್ವ ಸರ್ಕಾರದ 2016ರ ನೋಟು ಅಮಾನ್ಯೀಕರಣ, ಸಿದ್ಧತೆ ಇಲ್ಲದ ಜಿಎಸ್‌ಟಿ ಜಾರಿ ಮತ್ತು 2020ರ ಕೋವಿಡ್ ಲಾಕ್‌ಡೌನ್‌ನಂತಹ ಕ್ರಮಗಳು ಅಸಂಘಟಿತ ವಲಯದ ಕಾರ್ಮಿಕರು ಹಾಗೂ ಸಣ್ಣಪುಟ್ಟ ಕುಟುಂಬಗಳ ಜೀವನೋಪಾಯದ ಮೇಲೆ ತೀವ್ರ ಹೊಡೆತ ನೀಡಿವೆ. ಆಗಿನ ಹಿಮ್ಮುಖ ವಲಸೆಯ (Reverse Migration) ಪರಿಣಾಮವೂ ಸೇರಿದಂತೆ ಸುಮಾರು 6.5 ಕೋಟಿ (65 ಮಿಲಿಯನ್) ಕಾರ್ಮಿಕರು ಕೃಷಿ ವಲಯಕ್ಕೆ ಮರಳಿದರು. ಆದರೆ ಇಲ್ಲಿಯೂ ಉದ್ಯೋಗವಿರಲಿಲ್ಲ. ವಿಶ್ವಬ್ಯಾಂಕ್‌ ಮಾನದಂಡಗಳು ಈ ವಾಸ್ತವ ಚಿತ್ರಣವನ್ನು ಒಳಗೊಳ್ಳುವುದಿಲ್ಲ.

(ಮುಂದುವರೆಯುವುದು)

bhut sir
ಬಿ. ಶ್ರೀಪಾದ ಭಟ್
+ posts

ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ  ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಬಿ. ಶ್ರೀಪಾದ ಭಟ್
ಬಿ. ಶ್ರೀಪಾದ ಭಟ್
ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ  ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಸಾರ್ವಜನಿಕ ಸಭ್ಯತೆ ಹಿನ್ನೆಲೆಗೆ; ಚಾಕು-ಚೂರಿ ಸಂಸ್ಕೃತಿ ಮುನ್ನೆಲೆಗೆ!

ಸಮಾಜಕ್ಕೆ ಇಂದು ಬೇಕಿರುವುದು ಚಾಕು-ಚೂರಿ ಹಿಡಿಯುವ ಕೈಗಳಲ್ಲ, ಕೈಕುಲುಕಿ ಸಮಸ್ಯೆ ಬಗೆಹರಿಸುವ...

ನವೆಂಬರ್ 21ರಿಂದ ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಸ್ಥಗಿತ ಸಾಧ್ಯತೆ!

ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನಯಾನ ಸೇವೆ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ವಿಮಾನಗಳ...

ಶಿವಮೊಗ್ಗ | ಬೆಲೆ ಏರಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಪ್ರತಿಭಟನೆ!

ಶಿವಮೊಗ್ಗ : ರಾಜ್ಯದಲ್ಲಿ ಹಾಲು ಮತ್ತು ಬಸ್ ಪ್ರಯಾಣ ದರ ಹೆಚ್ಚಳದಿಂದ...