ಬುಲ್ಡೋಜರ್ಗಳು ಇಂದು ಉತ್ತರ ಪ್ರದೇಶದೊಂದಿಗೆ ತಳುಕು ಹಾಕಿಕೊಂಡಿರುವ ಒಂದು ಬ್ರ್ಯಾಂಡ್ ಆಗಿ ಮಾರ್ಪಟ್ಟಿವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಗೌತಮ್ ಬುದ್ಧ ನಗರದಲ್ಲಿ ಟ್ರ್ಯಾಕ್ಟರ್ ತಯಾರಿಕಾ ಘಟಕವನ್ನು ಸ್ಥಾಪಿಸುತ್ತಿರುವ ಸಿಎನ್ಎಚ್ ಇಂಡಸ್ಟ್ರಿಯಲ್ ಕಂಪನಿಯು, ರಾಜ್ಯದಲ್ಲೇ ಬುಲ್ಡೋಜರ್ಗಳನ್ನೂ ತಯಾರಿಸಬಹುದು ಎಂದು ಅವರು ಗುರುವಾರ ಸಲಹೆ ನೀಡಿದ್ದಾರೆ.
ಯಮುನಾ ಎಕ್ಸ್ಪ್ರೆಸ್ವೇ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ (YEIDA) ಸೆಕ್ಟರ್ 8ಡಿ ಯಲ್ಲಿ ಸಿಎನ್ಎಚ್ ಇಂಡಸ್ಟ್ರಿಯಲ್ನ ಟ್ರ್ಯಾಕ್ಟರ್ ತಯಾರಿಕಾ ಘಟಕದ ಭೂಮಿಪೂಜೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು ಈ ಹೇಳಿಕೆ ನೀಡಿದ್ದಾರೆ.
ಸಿಎಂ ಯೋಗಿ ಹೇಳಿದ್ದೇನು?
“ಉತ್ತರ ಪ್ರದೇಶದ ಬುಲ್ಡೋಜರ್ ಬಗ್ಗೆ ನೀವು ಕೇಳಿರಬಹುದು. ನೀವು ಉತ್ತರ ಪ್ರದೇಶದಲ್ಲಿ ಟ್ರ್ಯಾಕ್ಟರ್ಗಳನ್ನು ತಯಾರಿಸುತ್ತಿರುವುದರಿಂದ, ಇಲ್ಲಿ ಬುಲ್ಡೋಜರ್ಗಳನ್ನೂ ತಯಾರಿಸಬಹುದು ಎಂದು ನಾನು ಸಿಎನ್ಎಚ್ ಕಂಪನಿಗೆ ಹೇಳಲು ಬಯಸುತ್ತೇನೆ. ಅವುಗಳಿಗೆ ದೇಶ ಮತ್ತು ವಿದೇಶಗಳಲ್ಲಿ ತಾನಾಗಿಯೇ ಬೇಡಿಕೆ ಸೃಷ್ಟಿಯಾಗುತ್ತದೆ, ಏಕೆಂದರೆ ಅದು ಈಗಾಗಲೇ ಇಲ್ಲಿ ಒಂದು ಬ್ರ್ಯಾಂಡ್ ಆಗಿದೆ,” ಎಂದು ಯೋಗಿ ಆದಿತ್ಯನಾಥ್ ತಮ್ಮ ಭಾಷಣದಲ್ಲಿ ತಿಳಿಸಿದರು.
2017ಕ್ಕಿಂತ ಮೊದಲು “ನಿರ್ಲಕ್ಷ್ಯಮತ್ತು ಅರಾಜಕತೆಯ” ಪ್ರಶ್ನೆಗಳನ್ನು ಎದುರಿಸುತ್ತಿದ್ದ ಉತ್ತರ ಪ್ರದೇಶವು, ಈಗ “ಅಶಾಂತಿಯ ರಾಜ್ಯದಿಂದ ಸಂಭ್ರಮದ ರಾಜ್ಯವಾಗಿ” ಮತ್ತು ಮಾಫಿಯಾ ಆಳ್ವಿಕೆಯಿಂದ ಕಾನೂನಿನ ಆಳ್ವಿಕೆಯತ್ತ ಸಾಗಿದೆ ಎಂದು ಅವರು ಪ್ರತಿಪಾದಿಸಿದರು. ಅಪರಾಧಗಳ ವಿರುದ್ಧ ಸರ್ಕಾರದ ಶೂನ್ಯ ಸಹಿಷ್ಣುತೆ ನೀತಿಯಿಂದಾಗಿ ಜೇವರ್ ಪ್ರದೇಶ ಸೇರಿದಂತೆ ರಾಜ್ಯದಾದ್ಯಂತ ಹೂಡಿಕೆದಾರರ ವಿಶ್ವಾಸ ಹೆಚ್ಚಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಅಪರಾಧಿಗಳು, ಗ್ಯಾಂಗ್ಸ್ಟರ್ಗಳು ಮತ್ತು ಗಲಭೆಕೋರರಿಗೆ ಸೇರಿದ ಆಸ್ತಿಗಳನ್ನು ನೆಲಸಮಗೊಳಿಸುವ ಕಾರ್ಯಾಚರಣೆಗಳಿಂದಾಗಿ ಯೋಗಿ ಆದಿತ್ಯನಾಥ್ ‘ಬುಲ್ಡೋಜರ್ ಬಾಬಾ’ ಎಂದೇ ಗುರುತಿಸಿಕೊಂಡಿದ್ದಾರೆ. ಸರ್ಕಾರ ಮತ್ತು ಬೆಂಬಲಿಗರು ಇದನ್ನು ಅಪರಾಧಿಗಳ ವಿರುದ್ಧದ ಕಠಿಣ ಕ್ರಮ ಮತ್ತು ಕಾನೂನು ಸುವ್ಯವಸ್ಥೆಯ ಸಂಕೇತವೆಂದು ಬಿಂಬಿಸುತ್ತಿದ್ದಾರೆ.
ಆದರೆ, ಈ ‘ಬುಲ್ಡೋಜರ್ ನ್ಯಾಯ’ದ ವಿರುದ್ಧ ವಿರೋಧ ಪಕ್ಷಗಳು, ಮಾನವ ಹಕ್ಕುಗಳ ಹೋರಾಟಗಾರರು ಮತ್ತು ಕಾನೂನು ತಜ್ಞರಿಂದ ತೀವ್ರ ಆಕ್ಷೇಪಗಳೂ ವ್ಯಕ್ತವಾಗಿವೆ. ನ್ಯಾಯಾಲಯದ ವಿಚಾರಣೆ ಪೂರ್ಣಗೊಳ್ಳುವ ಮೊದಲೇ ಆರೋಪಿಗಳ ಮನೆ ಅಥವಾ ಆಸ್ತಿಗಳನ್ನು ನೆಲಸಮಗೊಳಿಸುವುದು ಸಂವಿಧಾನಬಾಹಿರ, ಏಕಪಕ್ಷೀಯ ಮತ್ತು ನ್ಯಾಯದ ಉಲ್ಲಂಘನೆಯಾಗಿದೆ ಎಂಬುದು ವಿಮರ್ಶಕರ ಪ್ರಮುಖ ವಾದವಾಗಿದೆ. ಈ ಕ್ರಮವು ಕಾನೂನಿನ ಪ್ರಕ್ರಿಯೆಯನ್ನು ಬದಿಗೊತ್ತಿ ನಿರ್ದಿಷ್ಟ ಸಮುದಾಯಗಳು ಅಥವಾ ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಿಕೊಳ್ಳುವ ಅಸ್ತ್ರವಾಗಿದೆ ಎಂಬ ಆರೋಪಗಳೂ ಕೇಳಿಬಂದಿವೆ.
2017 ಮತ್ತು 2022ರ ವಿಧಾನಸಭಾ ಚುನಾವಣೆಗಳಲ್ಲಿ ಜಯಗಳಿಸಿರುವ ಬಿಜೆಪಿ, 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೇರುವ ಗುರಿ ಹೊಂದಿದೆ. ಚುನಾವಣೆಗೆ ಮುನ್ನ ಆಡಳಿತ ಪಕ್ಷ ಬುಲ್ಡೋಜರನ್ನೇ ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗಿದ್ದರೆ, ವಿರೋಧ ಪಕ್ಷಗಳು ಬುಲ್ಡೋಜರ್ ಕ್ರಮದ ಕಾನೂನುಬದ್ಧತೆ ಮತ್ತು ಆಡಳಿತದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಎದುರಿಸಲು ಸಜ್ಜಾಗುತ್ತಿವೆ.




