ಸುಮಾರು ಆರು ತಿಂಗಳುಗಳಿಂತ ನಡೆಯುತ್ತಿರುವ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಇರಾನ್ನ ವಾಯು ರಕ್ಷಣೆ, ರಾಡಾರ್ ವ್ಯವಸ್ಥೆ ಹಾಗೂ ನೌಕಾಪಡೆಯ ನೆಲೆಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಮಿಲಿಟರಿ ದಾಳಿ ನಡೆಸಿದೆ. ಈ ದಾಳಿಗಳ ಬೆನ್ನಲ್ಲೇ ಇರಾನ್ ಕೂಡ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚಾಗಿದೆ.
ಅಮೆರಿಕ ನಡೆಸಿದ ದಾಳಿಯಲ್ಲಿ ದಕ್ಷಿಣ ಇರಾನ್ನ ಕುಹೇಸ್ತಕ್ ಎಂಬಲ್ಲಿ ಮದುವೆ ಸಮಾರಂಭ ನಡೆಯುತ್ತಿದ್ದ ಮನೆಯೊಂದಕ್ಕೆ ಕ್ಷಿಪಣಿ ಅಪ್ಪಳಿಸಿದೆ. ಪರಿಣಾಮ, ಮಗು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. 68ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ನಡೆದ ಅಮೆರಿಕದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 11 ಜನರು ಮೃತಪಟ್ಟಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ಆದರೆ, ತಮ್ಮ ಸೇನಾ ಪಡೆಗಳು ನಾಗರಿಕರನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಅಮೆರಿಕ ಸೆಂಟ್ರಲ್ ಕಮಾಂಡ್ ಹೇಳಿಕೊಂಡಿದೆ.
ಅಮೆರಿಕದ ದಾಳಿ ಕುರಿತು ಪ್ರಕ್ರಿಯಿಸಿರುವ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್, ಅಮೆರಿಕದ ವಿರುದ್ಧ ಕ್ರೂರ ಮತ್ತು ವಿನಾಶಕಾರಿ ಪ್ರತಿದಾಳಿಗಳನ್ನು ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಅಲ್ಲದೆ, ಇರಾನ್ ಪಡೆಗಳು ಜೋರ್ಡಾನ್ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿವೆ.
ಆರ್ಥಿಕ ನಿರ್ಬಂಧಗಳ ಮೂಲಕ ಇರಾನ್ಅನ್ನು ಮಣಿಸಲು ಯತ್ನಿಸುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಇರಾನ್ ಪ್ರತಿಕಾರ ತೀರಿಸಿಕೊಂಡರೆ ಅದಕ್ಕಿಂತಲೂ ಭೀಕರ ದಾಳಿ ನಡೆಸಲಾಗುವುದು. ಇರಾನ್ನ ರಾಡಾರ್ ವ್ಯವಸ್ಥೆಯನ್ನು ಅಮೆರಿಕ ಪಡೆಗಳು ಧ್ವಂಸಗೊಳಿಸಿವೆ” ಎಂದು ಹೇಳಿದ್ದಾರೆ.
ಹಾರ್ಮುಜ್ ಜಲಸಂಧಿ ಮೇಲೆ ನಿಯಂತ್ರಣ ಸಾಧಿಸಲು ಅಮೆರಿಕ ಹವಣಿಸುತ್ತಿದೆ. ಆದರೆ, ಅಮೆರಿಕದ ಈ ಕುತಂತ್ರವನ್ನು ಹಿಮ್ಮೆಟ್ಟುವುದಾಗಿಯೂ, ಜಲಸಂಧಿಯನ್ನು ಅಮೆರಿಕ ಸುಪರ್ದಿಗೆ ಕೊಡುವುದಿಲ್ಲವೆಂದು ಇರಾನ್ ಬಲವಾಗಿ ಹೇಳಿದೆ.
ಪ್ರಪಂಚದ 20%ರಷ್ಟು ಕಚ್ಚಾ ತೈಲ ಹಾದುಹೋಗುವ ಈ ಜಲಸಂಧಿಯನ್ನು ಇರಾನ್ ಬಂದ್ ಮಾಡಿದೆ. ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಗ್ಯಾಸೋಲಿನ್ ಬೆಲೆಗಳು 50%ಗೂ ಹೆಚ್ಚು ಏರಿಕೆಯಾಗಿವೆ. ಮುಂಬರುವ ನವೆಂಬರ್ನಲ್ಲಿ ನಡೆಯಲಿರುವ ಅಮೆರಿಕದ ಮಧ್ಯಂತರ ಚುನಾವಣೆಯ ಮೇಲೆಯೂ ಈ ಸಂಘರ್ಷ ಮತ್ತು ತೈಲ ಬಿಕ್ಕಟ್ಟು ರಾಜಕೀಯ ಪ್ರಭಾವ ಬೀರುವ ಸಾಧ್ಯತೆಯಿದೆ.





