ಚುನಾವಣಾ ಭಾಷಣದ ವೇಳೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಬಿಜೆಪಿ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ ಅವರು 24 ಗಂಟೆಗಳ ಕಾಲ ಪ್ರಚಾರ ನಡೆಸದಂತೆ ಚುನಾವಣಾ ಆಯೋಗ ಮಂಗಳವಾರ ನಿರ್ಬಂಧ ವಿಧಿಸಿದೆ.
ಕಲ್ಕತ್ತಾ ಹೈಕೋರ್ಟ್ನ ಮಾಜಿ ನ್ಯಾಯಮೂರ್ತಿಯೂ ಆಗಿರುವ ಗಂಗೋಪಾಧ್ಯಾಯ ಅವರು ಪಶ್ಚಿಮ ಬಂಗಾಳದ ತಾಮ್ಲುಕ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
ಗಂಗೋಪಾಧ್ಯಾಯ ಅವರು ಮೇ 15ರಂದು ಹಲ್ಲಿಯಾದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಮತಾ ವಿರುದ್ಧ ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದಾರೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್ ಪಕ್ಷದ ನಿಯೋಗವು ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಈ ದೂರಿಗೆ ಸಂಬಂಧಿಸಿದಂತೆ ಆಯೋಗವು ಅವರಿಗೆ ಶೋಕಾಸ್ ನೋಟಿಸ್ ಕಳುಹಿಸಿತ್ತು.
ಇದನ್ನು ಓದಿದ್ದೀರಾ? ಆಲ್ರೌಂಡರ್ ಸ್ವಪ್ನಿಲ್ ಸಿಂಗ್: ಆರ್ಸಿಬಿ ತಂಡದ ‘ಹೊಸ ಲಕ್ಕಿ ಚಾರ್ಮ್’
‘ಗಂಗೋಪಾಧ್ಯಾಯ ಅವರು ನೋಟಿಸ್ಗೆ ನೀಡಿದ ಉತ್ತರವನ್ನು ಎಚ್ಚರಿಕೆಯಿಂದ ಪರಿಶೀಲಿಸಲಾಗಿದೆ. ಅವರು ಮಮತಾ ವಿರುದ್ಧ ನೀಡಿದ್ದ ಹೇಳಿಕೆಯನ್ನು ಮತ್ತೊಮ್ಮೆ ಪರಿಶೀಲಿಸಿದ್ದೇವೆ. ಮುಖ್ಯಮಂತ್ರಿ ವಿರುದ್ಧ ‘ಕೀಳುಮಟ್ಟದ ವೈಯಕ್ತಿಕ ದಾಳಿ’ ನಡೆಸಿ, ನೀತಿ ಸಂಹಿತೆ ಉಲ್ಲಂಘಿಸಿರುವುದು ಸಾಬೀತಾಗಿದೆ’ ಎಂದು ಆಯೋಗ ತಿಳಿಸಿದೆ. ನಿರ್ಬಂಧವು ಮಂಗಳವಾರ ಸಂಜೆ 5ರಿಂದ ಜಾರಿಗೆ ಬಂದಿದ್ದು, ಬುಧವಾರ ಸಂಜೆ 5ರವರೆಗೆ ಜಾರಿಯಲ್ಲಿರಲಿದೆ.