ಚನ್ನಪಟ್ಟಣ ಕ್ಷೇತ್ರ | ಸೈನಿಕನ ಮಣಿಸಿ ಮರಳಿ ಕಿಂಗ್ ಆಗುವರೇ ಕುಮಾರಸ್ವಾಮಿ?

Date:

Advertisements

ರಾಜ್ಯದ ಹೈ ವೋಲ್ಟೇಜ್ ಚುನಾವಣಾ ಕಣಗಳ ಸಾಲಿನಲ್ಲಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರವೂ ಒಂದು. ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಸಚಿವರ ನಡುವೆ ಪಕ್ಷ ಹಾಗೂ ವೈಯಕ್ತಿಕ ನೆಲೆಗಟ್ಟಿನಲ್ಲಿ ನಡೆಯುತ್ತಿರುವ ಈ ಚುನಾವಣೆ ನೇರ ಹಣಾಹಣಿಯನ್ನು ನಿರೀಕ್ಷಿಸುತ್ತಿದೆ.

ವಿ.ವೆಂಕಟಪ್ಪ, ಡಿ.ಟಿ.ರಾಮು, ಬಿ.ಜೆ ಲಿಂಗೇಗೌಡ, ಎಂ ವರದೇಗೌಡ , ಸಾದತ್ ಆಲಿಖಾನ್ ಸೇರಿದಂತೆ ರಾಜಕೀಯ ರಂಗದಲ್ಲಿ ಗುರುತು ಮೂಡಿಸಿರುವ ಈ ಕ್ಷೇತ್ರದಲ್ಲೀಗ ಪ್ರತಿಷ್ಠೆಗಾಗಿಯೇ ಚುನಾವಣೆ ನಡೆಯುತ್ತಿದೆ. ಆ ಮಟ್ಟಿಗೆ ಕ್ಷೇತ್ರವನ್ನು ಹಾಲಿ ಶಾಸಕರಾದ ಎಚ್ ಡಿ ಕುಮಾರಸ್ವಾಮಿ, ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಬದಲಾಯಿಸಿಬಿಟ್ಟಿದ್ದಾರೆ.

ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ನೇರ ಹಣಾಹಣಿ ಇರುವ ಈ ಕ್ಷೇತ್ರದೊಳಗೆ ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲದ ರೀತಿಯಲ್ಲಿದೆ. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಾಜಿ ಸಚಿವ ಎಚ್ ಎಂ ರೇವಣ್ಣ ಹೊರತುಪಡಿಸಿ ಇತ್ತೀಚಿನ ಚುನಾವಣೆಗಳಲ್ಲಿ ಕೈ ಪಕ್ಷ ಇಲ್ಲಿ ಸದ್ದನ್ನೇ ಮಾಡಿಲ್ಲ.

Advertisements

ಕುಮಾರಸ್ವಾಮಿಯವರಿಗೆ ಈ ಕ್ಷೇತ್ರ ಅದೃಷ್ಟದ ಕ್ಷೇತ್ರ. ಎರಡನೇ ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ಕಲ್ಪಿಸಿದ ಕ್ಷೇತ್ರ ಇದೆನ್ನುವ ಕಾರಣಕ್ಕೆ ಚನ್ನಪಟ್ಟಣದ ಮೇಲೆ ಎಲ್ಲಿಲ್ಲದ ಅಕ್ಕರೆ. ಸದ್ಯದ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಕುಮಾರಸ್ವಾಮಿಯವರ ಜೆಡಿಎಸ್ ಮೈಲುಗೈ ಸಾಧಿಸಿದೆ.

ಸಿ ಪಿ ಯೋಗೇಶ್ವರ್ ಕೂಡ ಕುಮಾರಸ್ವಾಮಿಯವರಂತೆಯೇ ವೈಯಕ್ತಿಕ ವರ್ಚಸ್ಸಿನ ಮೂಲಕ ಕ್ಷೇತ್ರದಲ್ಲಿ ಹೆಸರು ಗಳಿಸಿಕೊಂಡವರು. ಸಿ ಪಿ ಯೋಗೇಶ್ವರ್ ಮೊದಲ ಚುನಾವಣೆಯಲ್ಲಿ ಪಕ್ಷೇತರರಾಗಿ ಕಣಕ್ಕಿಳಿದು, ಅಲ್ಲಿಂದ ಮುಂದೆ ಪ್ರತಿ ಚುನಾವಣೆಯಲ್ಲೂ ಒಂದೊಂದು ಪಕ್ಷದಿಂದ ಸ್ವರ್ಧಿಸಿ ಒಂದು ಬಾರಿ ಸೋತು, ಮಿಕ್ಕಂತೆ ಗೆಲುವು ಕಂಡವರು. ಬಿಜೆಪಿಯಿಂದ ಗೆದ್ದು ಮಂತ್ರಿ ಆದವರು.

ಚನ್ನಪಟ್ಟಣದಲ್ಲಿ ಇದ್ದೂ ಇಲ್ಲದಂತಿರುವ ಕಾಂಗ್ರೆಸ್ ಪಕ್ಷದಿಂದ ಈ ಬಾರಿ ಎಸ್ ಗಂಗಾಧರ್ ಕಣಕ್ಕಿಳಿದಿದ್ದಾರೆ. ಪಕ್ಷದ ಕಾರ್ಯಕರ್ತರು ಮತ್ತು ಸಾಂಪ್ರದಾಯಿಕ ಮತಬ್ಯಾಂಕ್ ಹೊಂದಿದ್ದರೂ ಗೆಲುವಿನ ದಡ ಸೇರಿಸುವುದು ಕಷ್ಟ ಎಂಬ ಮಾತಿದೆ.

ಜಂಪಿಂಗ್ ಸ್ಟಾರ್ ಎನ್ನುವ ಅನ್ವರ್ಥ ನಾಮ ಹೊಂದಿರುವ ಸಿ ಪಿ ಯೋಗೇಶ್ವರ್, ತಾಲೂಕಿನಲ್ಲಿ ಮಾಡಿರುವ ನೀರಾವರಿ ಯೋಜನೆಗಳಿಂದ ಗುರುತಿಸಿಕೊಂಡವರು. ತಮ್ಮದೇ ಅಭಿಮಾನಿ ಬಳಗ ಹಾಗೂ ಸ್ಥಳೀಯ ಮಟ್ಟದ ಕಾರ್ಯಕರ್ತರ ಬಲ ಹೊಂದಿರುವವರು. ಕೆರೆ ಅಭಿವೃದ್ದಿ ಹೊರತುಪಡಿಸಿ ಇನ್ನುಳಿದ ವಿಚಾರಗಳಲ್ಲಿ ಅಂತಹ ಸಾಧನೆ ಮಾಡದ ಕಾರಣ, ಕ್ಷೇತ್ರದ ಜನ ಅವರತ್ತ ಒಲವು ಕಳೆದುಕೊಂಡಿದ್ದಾರೆ. ಜೊತೆಗೆ ವ್ಯಕ್ತಿಗತ ವರ್ಚಸ್ಸಿದ್ದರೂ ಪಕ್ಷನಿಷ್ಠೆ ವಿಚಾರದಲ್ಲಿ ಬದ್ಧತೆ ಇಲ್ಲದಿರುವುದು ಅವರಿಗೆ ಹಿನ್ನೆಡೆಯಾಗಬಹುದೆಂದು ಅಂದಾಜಿಸಲಾಗಿದೆ.

ಇನ್ನು ಎಚ್ ಡಿ ಕುಮಾರಸ್ವಾಮಿ, ತಮ್ಮ 20 ತಿಂಗಳ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ ಮಾಡಿದ ಕೆಲಸ, ಜೊತೆಗೆ ಕ್ಷೇತ್ರಕ್ಕೂ ಭರಪೂರ ಕೊಡುಗೆಗಳನ್ನು ಕೊಟ್ಟು ಕಾರಣದಿಂದಾಗಿ ಜನಮನ್ನಣೆ ಗಳಿಸಿಕೊಂಡಿದ್ದಾರೆ.ಜೊತೆಗೆ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎನ್ನುವ ವಿಶೇಷತೆ ಕ್ಷೇತ್ರದೊಳಗೂ ಸದ್ದು ಮಾಡುತ್ತಿದೆ.

ಈ ಬೆಳವಣಿಗೆಗಳು ಈ ಬಾರಿ ಕುಮಾರಸ್ವಾಮಿಯ ಗೆಲುವನ್ನು ನಿರಾಯಾಸವಾಗಿಸಲಿದೆ ಎನ್ನಲಾಗುತ್ತಿದೆ. ಕುಟುಂಬ ರಾಜಕಾರಣದಲ್ಲಿ ಕೆಲವೊಮ್ಮೆ ಕ್ಷೇತ್ರ ಮರೆಯುತ್ತಾರೆನ್ನುವ ಆರೋಪ ಬಿಟ್ಟರೆ ಇವರನ್ನು ಕಟ್ಟಿಹಾಕುವ ಬಲವಾದ ನೆಗಟಿವ್ ಕಾರಣಗಳಿಲ್ಲ.

ಹಿಂದಿನ ಚುನಾವಣೆಯಂತೆ ಈ ಬಾರಿಯೂ ಇಲ್ಲಿ ಜೆಡಿಎಸ್–ಬಿಜೆಪಿ ನಡುವೆ ನೇರ ಹಣಾಹಣಿ ನಡೆಯಲಿದೆ. ಕಾಂಗ್ರೆಸ್ ಅಭ್ಯರ್ಥಿ ಎಸ್ ಗಂಗಾಧರಯ್ಯನವರು ಗೆಲುವಿಗಿಂತ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ಹೋರಾಡಬೇಕಾಗಿದೆ.

ಕ್ಷೇತ್ರದ ಬಹುಪಾಲು ಜನ ಕುಮಾರಸ್ವಾಮಿ ಪರವೇ ಒಲವು ವ್ಯಕ್ತಪಡಿಸಿದ್ದಾರೆ. ಸಿಎಂ ಆಗಿದ್ದಾಗ ‘ಕ್ಷೇತ್ರಕ್ಕೆ ಕೋಟಿ, ಕೋಟಿ ಅನುದಾನ ತಂದು ಕೆಲಸ ಮಾಡಿಸಿದ್ದಾರೆ. ಇವರ ಸಮಯದಲ್ಲಿ ನನೆಗುದಿಗೆ ಬಿದ್ದಿದ್ದ ಕೆಲಸಗಳೂ ಆಗಿವೆ.

ಅವರು ರಾಜ್ಯದ ನಾಯಕರು. ಮುಖ್ಯಮಂತ್ರಿ ಅಭ್ಯರ್ಥಿ. ಹೀಗಾಗಿ ಕ್ಷೇತ್ರಕ್ಕೆ ಬರದಿದ್ದರೆ ಏನಂತೆ, ನಾವೇ ಅವರನ್ನು ಮತ್ತೆ ಗೆಲ್ಲಿಸಿಕೊಡುತ್ತೇವೆ’ ಎನ್ನುವುದು ಅವರ ಅಭಿಮಾನಿ ವಿನಯ್ ಅವರನ್ನೂ ಒಳಗೊಂಡಂತೆ ಹಲವರ ಮಾತು.

ಇನ್ನು ಹಲವರದು ಯೋಗೇಶ್ವರ್ ಕೆಲಸ ಶೈಲಿ ಕ್ಷೇತ್ರ ಬೆಳೆಸಲು ಸಹಕಾರಿಯಾಗತ್ತದೆ ಎನ್ನುವ ವಿಶ್ವಾಸ. ಅದಕ್ಕೆ ತಕ್ಕಂತೆ, ಅವರು ನಮ್ಮೂರಿನವರು, ಬೇಕಾದಾಗ ಕೈಗೆ ಸಿಗುತ್ತಾರೆ. ಅವರಿಂದ ನಾವು ಕೆಲಸ ಮಾಡಿಸಿಕೊಳ್ಳಬಹುದು. ಅದಕ್ಕಾಗಿ ಅವರನ್ನೇ ಗೆಲ್ಲಿಸಿಕೊಳ್ಳಬೇಕು ಎನ್ನುವ ವಾದವೂ ಇದೆ.

ಈ ಸುದ್ದಿ ಓದಿದ್ದೀರಾ? : ದೇವೇಗೌಡರ ಅದೃಷ್ಟದ ನೆಲ ರಾಮನಗದಲ್ಲಿ ಚಿಗುರೊಡೆಯುವುದೇ ನಿಖಿಲ್‌ ಕುಮಾರಸ್ವಾಮಿ ರಾಜಕೀಯ?

ಒಟ್ಟು 2.2 ಲಕ್ಷ ಮತದಾರರನ್ನು ಹೊಂದಿಕೊಂಡಿರುವ ಚನ್ನಪಟ್ಟಣ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯವೇ ನಿರ್ಣಾಯಕ. ಸಮುದಾಯದ ಒಲವು ಗಳಿಸಿದವರಿಗೆ ಗೆಲುವು ಸುಲಭ.

ಇದರ ಜೊತೆಗೆ ಉಳಿದ ಸಮುದಾಯಗಳ ಬೆಂಬಲ ಯಾರಿಗೆ ಎನ್ನುವುದರ ಮೇಲೆ, ಗೆಲುವು ನಿಶ್ಚಯವಾಗಲಿದೆ. ಅದರಲ್ಲೂ, ಮುಸ್ಲಿಂ ಹಾಗೂ ದಲಿತ ಮತದಾರರು ಸೋಲು-ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.

ಅಂಕಿ ಸಂಖ್ಯೆಗಳ ಲೆಕ್ಕದಲ್ಲಿ ನೋಡುವುದಾದರೆ, ಒಕ್ಕಲಿಗರು 1,05,000, ಪರಿಶಿಷ್ಟ ಜಾತಿಯ 40,000, ಮುಸ್ಲಿಂ ಸಮುದಾಯದ 35,000, ಲಿಂಗಾಯತರ 11,000 ಹಾಗೂ ಕುರುಬರು 8,000 ಇದ್ದರೆ, ಇತರೆ ವರ್ಗದ 31,000 ಮತಗಳಿವೆ. ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿರುವುದು ಈ ಕ್ಷೇತ್ರದ ವೈಶಿಷ್ಟ್ಯ.

bfe5ebf00de2b670976597f37a6d2b77?s=150&d=mp&r=g
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

Download Eedina App Android / iOS

X