ದೇವೇಗೌಡರ ಅದೃಷ್ಟದ ನೆಲ ರಾಮನಗರದಲ್ಲಿ ಚಿಗುರೊಡೆಯುವುದೇ ನಿಖಿಲ್‌ ಕುಮಾರಸ್ವಾಮಿ ರಾಜಕೀಯ?

Date:

ಇದು ಪತ್ನಿಗಾಗಿ ಪತಿ, ಮಗನಿಗಾಗಿ ಅಮ್ಮ, ಪುತ್ರನಿಗಾಗಿ ಅಪ್ಪನೇ ಪಕ್ಷತ್ಯಾಗ ಮಾಡಿ ಕುಟುಂಬ ರಾಜಕಾರಣಕ್ಕೆ ಹೊಸ ಪರಂಪರೆ ಹಾಕಿಕೊಟ್ಟ ಕ್ಷೇತ್ರ. ಈ ಅಖಾಡದಿಂದ ಒಂದು ಕುಟುಂಬದ ಎರಡನೆಯ ಹಾಗೂ ಮತ್ತೊಂದು ಕುಟುಂಬದ ಮೂರನೇ ತಲೆಮಾರು ರಾಜಕೀಯ ಅಸ್ತಿತ್ವ ಪಡೆಯಲು ಸಜ್ಜಾಗುತ್ತಿದೆ.

ರಾಮನಾಮದ ಜಪದಿಂದಲೇ ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆದಿರುವ ಕ್ಷೇತ್ರ ರಾಮನಗರ. ರಾಜಕೀಯ ರಂಗದ ಮುತ್ಸದ್ದಿ, ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರ ಪಾಲಿನ ಅದೃಷ್ಟದ ನೆಲ ರಾಮನಗರ.

ಈಗ ಇದೇ ಮಣ್ಣಿನಿಂದ ಅವರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ತಮ್ಮ ರಾಜಕೀಯ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ದೊಡ್ಡಗೌಡರ ಮೊಮ್ಮಗನನ್ನು ಇಲ್ಲಿನ ಜನ ಕೈ ಹಿಡಿದು ನಡೆಸುತ್ತಾರಾ ಎಂಬುದು ಎಲ್ಲರ ಪ್ರಶ್ನೆ.

ಕುಟುಂಬ ರಾಜಕೀಯ
ರಾಮನಗರ ಕ್ಷೇತ್ರವನ್ನು ಒಳಗೊಂಡಂತೆ ಇಡೀ ಜಿಲ್ಲೆಯ ರಾಜಕಾರಣ ನಿಂತಿರುವುದು ಕೌಟುಂಬಿಕ ರಾಜಕಾರಣದ ಮೇಲೆ. ರಾಮನಗರ ಜಿಲ್ಲೆಯ ಕನಕಪುರ, ಮಾಗಡಿ, ಚನ್ನಪಟ್ಟಣ ಹಾಗೂ ಜಿಲ್ಲಾ ಕೇಂದ್ರ ರಾಮನಗರದಲ್ಲೂ ಕುಟುಂಬ ರಾಜಕಾರಣದ ದಟ್ಟ ಛಾಯೆ ಕಾಣಬಹುದು. ಮಂಡ್ಯ ಮತ್ತು ಹಾಸನ ಜಿಲ್ಲೆಯಂತೆ ಇಲ್ಲೂ ಕುಟುಂಬ ರಾಜಕೀಯ ಬೇರೂರಿದೆ. ವಿಶೇಷವೆಂದರೆ ಇದಕ್ಕೆ ಮೂರು ಪಕ್ಷಗಳೂ ಹೊರತಾಗಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹಿಂದೆ ಗಂಡ –ಹೆಂಡತಿ, ಅಕ್ಕಪಕ್ಕದ ಕ್ಷೇತ್ರಗಳ ಶಾಸಕರಾಗಿದ್ದರೆ, ಈಗ ಅಪ್ಪ – ಮಗ ಅಕ್ಕ – ಪಕ್ಕದ ಕ್ಷೇತ್ರದ ಅಭ್ಯರ್ಥಿಗಳು. ಇದು ರಾಮನಗರ ಕ್ಷೇತ್ರದ ಚಿತ್ರಣವಾದರೆ, ಪಕ್ಕದ ಕನಕಪುರ ಕ್ಷೇತ್ರದಲ್ಲಿ ಅಣ್ಣ ಶಾಸಕ, ತಮ್ಮ ಸಂಸದ. ಅಣ್ಣ ಶಾಸಕರಾಗಿದ್ದಾಗ ತಮ್ಮ ಜಿಪಂ ಅಧ್ಯಕ್ಷ.

ದೂರದ ಮಾಗಡಿ ಕ್ಷೇತ್ರದಲ್ಲಿ ಅಪ್ಪನ ನಂತರ ಈಗ ಮಗನ ರಾಜಕೀಯ, ಅದರ ಪಕ್ಷದ ಚನ್ನಪಟ್ಟಣದಲ್ಲಿ ಅಪ್ಪನ ನಂತರ ಮಗಳು… ಹೀಗೆ ಇಡೀ ಜಿಲ್ಲೆಯ ರಾಜಕೀಯ ಕುಟುಂಬ ರಾಜಕೀಯದ ಬಂಧನದೊಳಗಿದೆ. ಅಚ್ಚರಿಯ ವಿಚಾರ ಅಂದರೆ ಇಲ್ಲಿಯ ಜನ ಇದನ್ನೊಪ್ಪಿ ನೀರೆರೆದುಕೊಂಡೇ ಬರುತ್ತಿದ್ದಾರೆ.

ಇಂತಹ ರಾಜಕಾರಣ ವ್ಯವಸ್ಥೆ ರೂಪಿಸಿಕೊಂಡು ಬಂದಿರುವ ರಾಮನಗರ ವಿಧಾನಸಭಾ ಕ್ಷೇತ್ರ ಈಗ ಅಂತಹದ್ದೇ ಮತ್ತೊಂದು ಕೌಟುಂಬಿಕ ರಾಜಕಾರಣ ಕದನಕ್ಕೆ ವೇದಿಕೆಯಾಗುತ್ತಿದೆ. ಈ ಬಾರಿಯ ಹಣಾಹಣಿಯಲ್ಲಿ ಕುಮಾರಸ್ವಾಮಿ ಪುತ್ರ ಹಾಗೂ ಮರಿಲಿಂಗೇಗೌಡರ ಪುತ್ರ ಗೌತಮ್‌ ಗೌಡ ಸ್ಪರ್ಧಾಳುಗಳಾಗಿದ್ದಾರೆ.

ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿ ಕಳೆದ ಬಾರಿ ಪರಾಭವಗೊಂಡಿದ್ದ ಇಕ್ಬಾಲ್‌ ಹುಸೇನ್‌, ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ನಿಂತರೆ, ಅಮ್ಮನಿಂದ ಬಳುವಳಿಯಾಗಿ ಬಂದ ಕೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ನಿಖಿಲ್‌ ಕಣಕ್ಕಿಳಿದಿದ್ದಾರೆ. ಹಾಗೆಯೇ ಮೊದಲ ಬಾರಿ ಕ್ಷೇತ್ರದಲ್ಲಿ ಖಾತೆ ತೆರೆಯುವ ಉಮೇದಿನೊಂದಿಗೆ ಬಿಜೆಪಿ ಹೊಸ ಮುಖ ಯುವ ನಾಯಕ ಗೌತಮ್‌ ಗೌಡಗೆ ಅವಕಾಶ ಕೊಟ್ಟಿದೆ.

ಯಾರು ವೀಕ್‌, ಯಾರು ಸ್ಟ್ರಾಂಗ್‌?

ಕಾಂಗ್ರೆಸ್‌ನ ಇಕ್ಬಾಲ್‌ ಹುಸೇನ್‌ ಹೊರತುಪಡಿಸಿ ಉಳಿದಿಬ್ಬರು ಅಭ್ಯರ್ಥಿಗಳಿಗೆ ಇದು ಹೊಸ ಕ್ಷೇತ್ರ. ಹಿಂದಿನ ಚುನಾವಣೆ ಅನುಭವ, ಸ್ಥಳೀಯ ರಾಜಕೀಯದ ಲೆಕ್ಕಾಚಾರ, ಪಕ್ಷ ಸಂಘಟನೆ ವಿಚಾರಗಳಿಂದ ಹುಸೇನ್‌ ಉಳಿದವರಿಗಿಂತ ಕೊಂಚ ಸ್ಟ್ರಾಂಗ್‌ ಎನಿಸಿಕೊಂಡಿದ್ದಾರೆ. ಆದರೆ ಜಾತಿ ಲೆಕ್ಕಾಚಾರದಲ್ಲಿ ಒಕ್ಕಲಿಗರ ಪ್ರಾಬಲ್ಯ ಇರುವ ಕ್ಷೇತ್ರದೊಳಗೆ ಗೆಲುವು ಸುಲಭವಲ್ಲ ಎನ್ನುವ ಸತ್ಯವೂ ಅವರ ಗಮನದಲ್ಲಿದೆ.

ಜೆಡಿಎಸ್‌ ನಿಖಿಲ್‌ ಕುಮಾರಸ್ವಾಮಿಗೆ ಕ್ಷೇತ್ರ ಹೊಸದಾದರೂ ಕ್ಷೇತ್ರದ ಮೂಲ ಹಳೆಯದ್ದು, ಈ ಹಿಂದೆ ತಂದೆ ಹಾಗೂ ತಾಯಿ ಕ್ಷೇತ್ರದ ಶಾಸಕರಾಗಿರುವ ಕಾರಣ ಕಾರ್ಯಕರ್ತರ ದೊಡ್ಡ ಪಡೆ ಅವರೊಂದಿಗಿದೆ. ಅಪ್ಪ ಭದ್ರಪಡಿಸಿರುವ ನೆಲೆ ನಿಖಿಲ್‌ ಪಾಲಿಗೆ ಶಕ್ತಿಯಾಗಿದೆ. ಮಾಜಿ ಮು‍ಖ್ಯಮಂತ್ರಿ ಪುತ್ರ, ಒಕ್ಕಲಿಗ ಸಮುದಾಯದ ಯುವ ನಾಯಕ, ಚಿತ್ರ ನಟ, ಎಲ್ಲದಕ್ಕಿಂತ ಹೆಚ್ಚಾಗಿ ದೇವೇಗೌಡರ ಮೊಮ್ಮಗ ಎನ್ನುವ ಬ್ರಾಂಡ್‌ ನಿಖಿಲ್‌ ಕುಮಾರಸ್ವಾಮಿ ಪಾಲಿಗೆ ಪ್ಲಸ್‌ ಆಗಿದೆ.

ಇನ್ನು ಬಿಜೆಪಿ ಅಭ್ಯರ್ಥಿ ಗೌತಮ್‌ ಗೌಡಗೂ ಇದು ಮೊದಲ ಅಗ್ನಿಪರೀಕ್ಷೆ, ಅಪ್ಪನ ಕೃಪಾಕಟಾಕ್ಷದಿಂದ ಉಮೇದುವಾರನಾಗುವ ಅವಕಾಶ ಪಡೆದುಕೊಂಡಿದ್ದಾರೆ. ಯುವ ನಾಯಕನಾಗಿ ಕ್ಷೇತ್ರದಲ್ಲಿ ಹೆಸರು ಮಾಡಿರುವ ಅವರಿಗೆ ಜಿಲ್ಲಾ ಉಸ್ತುವಾರಿ ಹೊತ್ತಿರುವ ಸಚಿವ ಅಶ್ವತ್ಥ ನಾರಾಯಣ ಬೆನ್ನೆಲುಬಾಗಿ ನಿಂತಿದ್ದಾರೆ. ಪಕ್ಕದ ಚನ್ನಪಟ್ಟಣ ಕ್ಷೇತ್ರದ ಪ್ರಭಾವಿ ಮುಖಂಡರಾಗಿರುವ, ಮಾಜಿ ಸಚಿವ ಸಿ ಪಿ ಯೋಗೇಶ್ವರ್‌ ಅವರು ಮತಯಾಚನೆ ಮಾಡಲಿರುವುದು ಗೌತಮ್ ಗೆ ಅನುಕೂಲವಾಗಲಿದೆ.

ಮಗನಿಗಾಗಿ ಕ್ಷೇತ್ರ ತ್ಯಾಗ!

ರಾಮನಗರ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ತಮ್ಮ ಮಗ ನಿಖಿಲ್‌ ಕುಮಾರಸ್ವಾಮಿ ಅವರಿಗಾಗಿ ಈ ಬಾರಿ ಕ್ಷೇತ್ರ ತ್ಯಾಗ ಮಾಡಿದ್ದಾರೆ. ಈ ಹಿಂದೆ ಪತ್ನಿಗಾಗಿ ಮಾಜಿ ಸಿಎಂ ಕುಮಾರಸ್ವಾಮಿ ಕ್ಷೇತ್ರ ತ್ಯಾಗ ಮಾಡಿದ್ದರು. ಈಗ ಮಗನಿಗಾಗಿ ಪತ್ನಿ ಕ್ಷೇತ್ರ ತ್ಯಾಗ ಮಾಡಿರುವುದು ವಿಶೇಷ.

ಹಿಂದಿನ ಚುನಾವಣೆಗಳ ಬಲಾಬಲ

2004ರಲ್ಲಿ ಈ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ 20 ತಿಂಗಳ ಅಧಿಕಾರ ನಡೆಸಿದ್ದರು. 2008ರ ಚುನಾವಣೆಯಲ್ಲಿ ಗೆದ್ದು ಜೆಡಿಎಸ್‌ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಎಚ್ ಡಿ ಕುಮಾರಸ್ವಾಮಿ ಪಕ್ಷಕ್ಕೊಂದು ಗಟ್ಟಿನೆಲೆ ಒದಗಿಸಿದ್ದರು. 2009ರಲ್ಲಿ ಕುಮಾರಸ್ವಾಮಿ ಸಂಸದರಾದ ಕಾರಣದಿಂದ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್‌ನ ಕೆ ರಾಜು, ಕಾಂಗ್ರೆಸ್‌ನ ಲಿಂಗಪ್ಪ ಎದುರು ಜಯ ಸಾಧಿಸಿದ್ದರು. ಇನ್ನು 2013ರಲ್ಲಿ ಎಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್‌ನ ಮರಿದೇವರನ್ನು, 2018ರಲ್ಲಿ ಕಾಂಗ್ರೆಸ್‌ನ ಇಕ್ಬಾಲ್‌ ಹುಸೇನ್‌ ಅವರನ್ನು ಪರಾಭವಗೊಳಿಸಿದ್ದರು.

ಇದೇ ಚುನಾವಣೆಯಲ್ಲಿ ಕುಮಾರಸ್ವಾಮಿ ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರಗಳಿಂದ ಸ್ಪರ್ಧಿಸಿ ಗೆಲುವು ಪಡೆದು ಮರಳಿ ಮುಖ್ಯಮಂತ್ರಿಯಾದರು. ಈ ವೇಳೆ ಎಚ್‌ಡಿಕೆ ರಾಮನಗರ ಕ್ಷೇತ್ರ ತೊರೆದು, ಚನ್ನಪಟ್ಟಣವನ್ನು ಉಳಿಸಿಕೊಂಡರು. ಪರಿಣಾಮ ಇಲ್ಲಿ ಉಪಚುನಾವಣೆ ನಡೆದು ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಇಲ್ಲಿನ ಶಾಸಕರಾದರು.

ಜಾತಿವಾರು ಲೆಕ್ಕಾಚಾರ

ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,06,982 ಮತದಾರರಿದ್ದಾರೆ. ಇದರಲ್ಲಿ 1,02,938 ಪುರುಷ ಮತದಾರರು ಹಾಗೂ 1,04,019 ಮಹಿಳಾ ಹಾಗೂ 25 ಮಂದಿ ಇತರೆ ಮತದಾರರಿದ್ದಾರೆ. ಒಕ್ಕಲಿಗರ ಸಮುದಾಯ ಸಂಖ್ಯಾಬಲದಲ್ಲಿ ಮುಂದಿದ್ದು, ಇವರೊಂದಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡ, ಲಿಂಗಾಯತ, ಅಲ್ಪಸಂಖ್ಯಾತರು ಹಾಗೂ ಕುರುಬ ಸಮುದಾಯದವರೂ ಅಭ್ಯರ್ಥಿ ಭವಿಷ್ಯ ನಿರ್ಧರಿಸುವಲ್ಲಿ ನಿರ್ಣಾಯಕರಾಗಿದ್ದಾರೆ.

ಕ್ಷೇತ್ರದ ಸಮಸ್ಯೆ, ಬೇಕು ಬೇಡಗಳು;

ರಾಮನಗರ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿರುವ ಇಲ್ಲಿ ನಿರುದ್ಯೋಗ ಸಮಸ್ಯೆ ಸ್ಥಳೀಯರನ್ನು ಕಾಡುತ್ತಿದೆ. ಬೆಂಗಳೂರಿಗೆ ಹತ್ತಿರವಾದರೂ ಅಂದುಕೊಂಡಷ್ಟು ಅಭಿವೃದ್ಧಿ ಆಗಿಲ್ಲ. ಜೊತೆಗೆ ರೇಷ್ಮೆ ಬೆಳೆಗಾರರ ಸಮಸ್ಯೆಗಳೂ ನೀಗಿಲ್ಲ. ರಾಮನಗರ ಇಂಡಸ್ಟ್ರೀಯಲ್‌ ಟೌನ್‌ಗೆ ಕೊಂಚ ಕಾಯಕಲ್ಪ ಕೊಡಿಸಿದ ಕೀರ್ತಿ ಕುಮಾರಸ್ವಾಮಿಯವರಿಗೆ ಸೇರಿದರೆ, ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ಹಟಕ್ಕೆ ಬಿದ್ದು ಹಲವು ಯೋಜನೆಗಳನ್ನು ಕ್ಷೇತ್ರಕ್ಕೆ ಒದಗಿಸಿಕೊಟ್ಟ ಕಾರಣ ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿಗೂ ಕೊಂಚ ಮಾರ್ಕ್‌ ದೊರಕಲಿದೆ.

ಈ ಇಬ್ಬರ ನಡುವೆ ಸ್ಥಳೀಯ ಎನ್ನುವ ಕಾರಣ ಇಕ್ಬಾಲ್‌ ಹುಸೇನ್‌ ಕೊಂಚ ಮುನ್ನೆಲೆಗೆ ಬಂದರೂ ಕಾಂಗ್ರೆಸ್‌ ಪಕ್ಷದ ಕೊಡುಗೆ ಇಲ್ಲಿ ಕಡಿಮೆ ಇರುವ ಕಾರಣ ಇಬ್ಬರಿಗಿಂತ ಕೊಂಚ ಮಂಕೆನಿಸುತ್ತಾರೆ. ಹೀಗೆ ಮೂರು ಪಕ್ಷದ ಅಭ್ಯರ್ಥಿಗಳು ತಮ್ಮ ತಮ್ಮ ನೆಲೆಗಟ್ಟಿನಲ್ಲಿ ಬಲಶಾಲಿಗಳಾಗಿರುವುದು ಕ್ಷೇತ್ರದೊಳಗೆ ತ್ರಿಕೋನ ಸ್ಪರ್ಧೆಯ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ಈ ಸುದ್ದಿ ಓದಿದ್ದೀರಾ? :ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರ | ಒಕ್ಕಲಿಗರ ಕೋಟೆಯಲ್ಲಿ ಅನ್ಯ ಭಾಷಿಕರೆ ಗೆಲುವಿನ ನಿರ್ಣಾಯಕರು

ಇದರ ನಡುವೆಯೇ ಬಿಜೆಪಿ ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ ಮಾಡುವ ವಿಚಾರವನ್ನೇ ಮುಂದಿಟ್ಟುಕೊಂಡು ಇಲ್ಲಿ ನೆಲೆಕಂಡುಕೊಳ್ಳಲು ಪ್ರಯತ್ನಿಸುತ್ತಿದೆ. ಹಾಲಿ ಪ್ರಭಾವಿ ಮಂತ್ರಿಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಅಶ್ವತ್ಥ ನಾರಾಯಣ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಹಣಬಲ ಜಾತಿ ಬಲ ಹಾಗೂ ಅಧಿಕಾರ ಬಲಗಳೆಲ್ಲವೂ ಅವರ ಬಳಿ ಇರುವ ಕಾರಣ ಉಳಿದವರಿಗೆ ಕೊಂಚ ಹಿನ್ನೆಡೆಯಾಗುವ ಸಾಧ್ಯತೆ ಇದೆ.

ಈ ಘಟಾನುಘಟಿ ನಾಯಕರ ನಡುವೆ ಸ್ಥಳೀಯವಾಗಿ ಹೆಸರಿರುವ ಪ್ರಜಾಕೀಯ, ಸ್ವತಂತ್ರ ಅ‍ಭ್ಯರ್ಥಿಗಳು ಮೂವರ ಗೆಲುವಿನ ಓಟಕ್ಕೆ ಸಣ್ಣಪ್ರಮಾಣದ ಅಡ್ಡಿ ಆತಂಕ ತಂದೊಡ್ಡುವುದರಲ್ಲಿ ಎರಡು ಮಾತಿಲ್ಲ.

Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನದ ‘ಪೆನ್‌ಡ್ರೈವ್’ ನಮಗೂ ತಲುಪಿದೆ; ಎಸ್ಐಟಿ ರಚಿಸಲು ಸಿಎಂಗೆ ಮನವಿ: ಮಹಿಳಾ ಆಯೋಗ

ರಾಜ್ಯದ ರಾಜಕೀಯ ವಲಯದಲ್ಲಿ ಭಾರೀ ಸುದ್ದಿ ಮಾಡುತ್ತಿರುವ ಹಾಸನದ ಪೆನ್‌ಡ್ರೈವ್‌ ಬಗ್ಗೆ...

ಲೋಕಸಭಾ ಚುನಾವಣೆ | ಮತದಾನ ಮಾಡಲು ವಿಕಲಚೇತನರು, ಹಿರಿಯ ನಾಗರಿಕರಿಗೆ ಸೌಲಭ್ಯ

ರಾಜ್ಯದಲ್ಲಿ ಏಪ್ರಿಲ್ 26ರಂದು ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯಲಿದೆ. ಈ...

ʼಈ ದಿನʼ ಸಮೀಕ್ಷೆ | ನಂಬಿಕೆ ಉಳಿಸಿಕೊಂಡ ಕಾಂಗ್ರೆಸ್‌; ʼಗ್ಯಾರಂಟಿʼ ಎದುರು ಮಂಕಾದ ಮೋದಿ ಯೋಜನೆಗಳು

ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ಘೋಷಿಸಿದ್ದ ಪಂಚ ಗ್ಯಾರಂಟಿಯನ್ನು ವರ್ಷದೊಳಗೆ...

ಹಾಸನ ಪೆನ್‌ಡ್ರೈವ್‌ ಪ್ರಕರಣ: ನಾಲ್ವರು ಸಂತ್ರಸ್ತೆಯರು ಆತ್ಮಹತ್ಯೆಗೆ ಯತ್ನ

ಹಾಸನದ ಪೆನ್‌ಡ್ರೈವ್‌ ಪ್ರಕರಣ ದಿನದಿಂದ ದಿನಕ್ಕೆ ಜಿಲ್ಲಾದ್ಯಂತ ಆತಂಕ ಹೆಚ್ಚಿಸ್ತಾ ಇದೆ....