ಸಿ.ಟಿ. ರವಿ ಮಹಿಳಾ ನಿಂದಕ ಪ್ರಕರಣ ಮುಂದೇನಾಗಲಿದೆ?

Date:

Advertisements
ಆಳುವ ಸರ್ಕಾರಕ್ಕೆ ಬಿಜೆಪಿ ನಾಯಕರ ಹುಳುಕೆಲ್ಲ ಗೊತ್ತು. ಭ್ರಷ್ಟಾಚಾರದ ಹಗರಣಗಳೂ ಗೊತ್ತು. ಅವರ ಪರ ಮಾಧ್ಯಮಗಳು ವಕಾಲತ್ತು ವಹಿಸುವುದೂ ಗೊತ್ತು. ಗೊತ್ತಿದ್ದೂ ಕಾಂಗ್ರೆಸ್ಸಿಗರು ಎಡವುತ್ತಾರೆ. ಸುಳ್ಳು ಊರಾಡಿ ಬಂದಮೇಲೆ ಸತ್ಯ ಹೇಳಲು ಮುಂದಾಗುತ್ತಾರೆ. ಅಷ್ಟರೊಳಗೆ ಬಿಜೆಪಿಪ್ರಣೀತ ಮಾಧ್ಯಮಗಳು ರವಿಯನ್ನು ಹೀರೋ ಮಾಡಿ, ಅವಮಾನಕ್ಕೊಳಗಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನೇ ಸರಿ ಇಲ್ಲ ಎಂಬ ತೀರ್ಮಾನಕ್ಕೆ ಬಂದರೂ ಆಶ್ಚರ್ಯವಿಲ್ಲ.

ಚಿಂತಕರ ಚಾವಡಿ, ಬುದ್ಧಿವಂತರ ವೇದಿಕೆ ಎಂದು ಕರೆಯಲ್ಪಡುವ ಮೇಲ್ಮನೆಯ ಸಭಾಂಗಣದಲ್ಲಿ ನಿಂತು ಭಾರತೀಯ ಜನತಾ ಪಕ್ಷದ ಶಾಸಕರೊಬ್ಬರು ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಜರುಗಿ ಇಲ್ಲಿಗೆ ಐದು ದಿನಗಳಾದವು.

ಈ ಐದು ದಿನಗಳಲ್ಲಿ ಆ ಬಿಜೆಪಿ ಶಾಸಕ ಬಳಸಿದ ಅತ್ಯಂತ ಅಸಹ್ಯಕರ ಪದ ಹಿನ್ನೆಲೆಗೆ ಸರಿದು, ಬೇಡವಾದ್ದೆಲ್ಲ ಮುನ್ನೆಲೆಗೆ ಬರುತ್ತಿದೆ. ಹೆಣ್ಣುಮಕ್ಕಳನ್ನು ಅವಮಾನಿಸಿದ್ದು ಅಂಚಿಗೆ ಸರಿದು, ನಿಂದಕನನ್ನೇ ಹೊತ್ತು ಮೆರೆಸಲಾಗುತ್ತಿದೆ. ಇದು ಈ ನಾಡಿನ ದುರಂತ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ, ಅವರ ಸ್ಥಾನಕ್ಕಿರುವ ಘನತೆ-ಗೌರವಗಳನ್ನು ಕಡೆಗಣಿಸಿ, ಶಾಸಕಾಂಗದ ಸಭಾಂಗಣದಲ್ಲಿಯೇ ಶಾಸಕ ಸಿ.ಟಿ. ರವಿಯವರು ಅವಾಚ್ಯ ಶಬ್ದವನ್ನು ಬಳಸುತ್ತಾರೆಂದರೆ, ಮೊದಲಿಗೆ ನಾವು ಅನುಮಾನದಿಂದ ನೋಡಬೇಕಾದ್ದು, ಅವರ ಸುತ್ತಲಿದ್ದ ಹೆಂಗಸರ ಬಗ್ಗೆ. ಆನಂತರ ಅಲ್ಲೇ ನೋಡುತ್ತ ನಿಂತಿದ್ದ ಗಂಡಸರ ಬಗ್ಗೆ. ಆ ಕ್ಷಣದಲ್ಲಿ ಅಲ್ಲಿದ್ದವರು ಸಾಮಾನ್ಯರಲ್ಲ, ಘನತೆವೆತ್ತ ಶಾಸಕರು. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಎಂಬ ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸುವವರು.

Advertisements

ಈ ಕ್ಷಣಕ್ಕೆ ಹೆಮ್ಮೆ ಎನಿಸುವುದು ಮಾಜಿ ಸಚಿವೆ, ಹಾಲಿ ಶಾಸಕಿ ಉಮಾಶ್ರೀ ಅವರ ಮಾತುಗಳು. ಏಕೆಂದರೆ, ಘಟನೆಯಾದ ತಕ್ಷಣ ಸುದ್ದಿ ಮಾಧ್ಯಮಗಳ ಪತ್ರಕರ್ತರ ಹಿಂಡು ಉಮಾಶ್ರೀ ಅವರನ್ನು ಸುತ್ತುವರೆದು, ಘಟನೆ ಬಗ್ಗೆ ಪ್ರಶ್ನೆ ಕೇಳಿದರು. ಅವರು, ಘಟನೆಯ ವಿವರಗಳನ್ನು ಸವಿಸ್ತಾರವಾಗಿ ಹೇಳಿದರು. ಎಲ್ಲವೂ ಆನ್ ರೆಕಾರ್ಡ್ ದಾಖಲಾಗುತ್ತದೆ. ಸುದ್ದಿ ಮಾಧ್ಯಮಗಳು ಜನಪರವಾಗಿದ್ದರೆ, ಸರಿ ದಾರಿಯಲ್ಲಿ ನಡೆದಿದ್ದರೆ, ಉಮಾಶ್ರೀ ಅವರ ಹೇಳಿಕೆ ಸಾಕಾಗಿತ್ತು. ಕೊಳಕರು ಯಾರು ಎನ್ನುವುದು ಎಲ್ಲರಿಗೂ ತಿಳಿಯುತ್ತಿತ್ತು. ಅರ್ಥವಾಗುತ್ತಿತ್ತು.  

ನಾಡಿನ ಜನತೆ ಈಗಲೂ ಯೋಚಿಸುತ್ತಿರುವ ಮತ್ತೊಂದು ಗಂಭೀರ ವಿಷಯವೆಂದರೆ, ವಿಧಾನ ಪರಿಷತ್ತಿನ ಕಲಾಪಗಳನ್ನು ವರದಿ ಮಾಡಲು ನಾಡಿನ ಮೂಲೆ ಮೂಲೆಗಳಿಂದ ಮುದ್ರಣ, ದೃಶ್ಯ, ಡಿಜಿಟಲ್ ಮೀಡಿಯಾಗಳ ಪತ್ರಕರ್ತರು ಆಗಮಿಸಿರುತ್ತಾರೆ. ಅವರ ಕಣ್ಣಮುಂದೆಯೇ ಇದೆಲ್ಲ ಜರುಗಿದೆ. ಅವರು ಹೋಗಿರುವುದೇ ಅಲ್ಲಿ ನಡೆಯುವುದನ್ನು ನೋಡಿ ವರದಿ ಮಾಡಲು. ಆದರೂ, ಯಾವೊಬ್ಬ ಪತ್ರಕರ್ತನೂ, ಇದನ್ನು ವರದಿ ಮಾಡುವ ಧೈರ್ಯ ತೋರುವುದಿಲ್ಲ, ಏಕೆ? ಮೇಲಿಂದ ಒತ್ತಡವಿತ್ತೇ? ಅಥವಾ ಕಂಡಿದ್ದನ್ನು ಕಂಡಂತೆ ವರದಿ ಮಾಡುವುದು ಅಪರಾಧವೇ? ಇವತ್ತಿನ ಪತ್ರಿಕೋದ್ಯಮ ಇದನ್ನು ಸಹಿಸುವುದಿಲ್ಲವೇ?

ಗುರುವಾರ ಸಂಜೆ ಘಟನೆ ನಡೆದ ನಂತರ, ಸಚಿವೆ ಕಣ್ಣೀರಾಕುತ್ತ ಸಭಾಂಗಣದಿಂದ ಹೊರಹೋಗುತ್ತಿದ್ದಂತೆ, ಅದು ಅವರ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದೆ. ಅದು ಸಹಜ. ಏಕೆಂದರೆ, ಅದು ಬೆಳಗಾವಿ, ಆಕೆಯ ಕ್ಷೇತ್ರ. ಅಭಿಮಾನಿಗಳು ಸುವರ್ಣ ವಿಧಾನಸೌಧದೊಳಕ್ಕೆ ನುಗ್ಗಲು ಪ್ರಯತ್ನಿಸಿದ್ದಾರೆ. ಇದು ತಪ್ಪು. ಇದು ಸಂಪೂರ್ಣವಾಗಿ ಸಂಸದೀಯ ನಡವಳಿಕೆಗಳಿಗೆ ವಿರುದ್ಧವಾದುದು. ಸಚಿವೆಯ ಅಭಿಮಾನಿಗಳು ಪ್ರವೇಶಿಸುವುದು, ಆವೇಶಭರಿತರಾಗಿ ಕೂಗಾಡುವುದು, ಹಲ್ಲೆಗೆ ಮುಂದಾಗುವುದು ಅಕ್ಷಮ್ಯ ಅಪರಾಧ.

ಕ್ರಮ ಕೈಗೊಳ್ಳಬೇಕಾದ್ದು ಪೊಲೀಸರು ಮತ್ತು ಕಾಯ್ದೆ-ಕಾನೂನುಗಳು. ಅದಕ್ಕಿಂತ ಹೆಚ್ಚಾಗಿ ಸಭಾಪತಿಗಳಿದ್ದಾರೆ. ಮೊದಲಿಗೆ ಆ ಘಟನೆಯ ಸಂಪೂರ್ಣ ಜವಾಬ್ದಾರಿ ಸಭಾಪತಿಗಳದು. ಆದರೆ, ಅವರಿಗೆ ಹಲ್ಲಿಲ್ಲ, ಬೆನ್ನುಮೂಳೆ ಇಲ್ಲ ಎನ್ನುವುದು ಅವರ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ವರ್ತಿಸಿದ್ದು ಮತ್ತು ಮಾತನಾಡಿದ್ದು ಸಾಬೀತು ಮಾಡಿತು. ಅದಾದ ನಂತರ, ಆಳುವ ಪಕ್ಷ ಅಧಿಕಾರ ದುರ್ಬಳಕೆ ಮಾಡಿಕೊಂಡು, ಪೊಲೀಸರ ಕೈಗೆ ಪ್ರಕರಣವನ್ನು ಒಪ್ಪಿಸಿತು. ಪೊಲೀಸರು ಅಧಿಕಾರಸ್ಥರ ಆದೇಶದಂತೆ ವರ್ತಿಸಿದರು.

ಸಿ.ಟಿ. ರವಿಯವರು ಆಡಿರುವ ನಿಂದಕ ಮಾತುಗಳು. ದೂರು ಮತ್ತು ಎಫ್ಐಆರ್ ದಾಖಲಾಗಲು ಯೋಗ್ಯವಾದವುಗಳು. ಅದರಲ್ಲಿ ಎರಡು ಮಾತಿಲ್ಲ. ಹಾಗೆಯೇ ಅದು ಬೇಲಬಲ್ ಅಫೆನ್ಸ್ ಕೂಡ. ಪೊಲೀಸರು ಅವರನ್ನು ಆ ಕ್ಷಣವೇ ಅರೆಸ್ಟ್ ಮಾಡಿ, ಸ್ಟೇಷನ್ ಬೇಲ್ ಮೇಲೆ ಬಿಡಬಹುದಿತ್ತು.

ಇದನ್ನು ಓದಿದ್ದೀರಾ?: ಜಾಣರ ಜಗುಲಿಯಲ್ಲಿ ಇದೇನಿದು?

ಬೆಳಗಾವಿ ಪೊಲೀಸರು ಹಾಗೆ ಮಾಡಿದ್ದರೆ, ರವಿ ಬೇಲ್ ಮೇಲೆ ಇಷ್ಟು ಸುರಕ್ಷಿತವಾಗಿ ಹೊರಬರುತ್ತಿರಲಿಲ್ಲ. ಏಕೆಂದರೆ, ಅಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಅಭಿಮಾನಿಗಳು, ಹಿಂಬಾಲಕರು, ಪಕ್ಷದ ಕಾರ್ಯಕರ್ತರು ಸುತ್ತುವರೆದು ರವಿಗೆ ‘ಗೌರವ’ ಮಾಡುತ್ತಿದ್ದರು. ಆಗ ಇದೇ ರವಿ, ಪೊಲೀಸರನ್ನೇ ರಕ್ಷಣೆಗಾಗಿ ಬೇಡಿಕೊಳ್ಳುವ ಪರಿಸ್ಥಿತಿ ಉದ್ಭವಿಸುತ್ತಿತ್ತು.

ಆದರೆ ಆಳುವ ಸರ್ಕಾರ ಪೊಲೀಸರಿಗೆ ಸಂದೇಶ ರವಾನಿಸಿ, ಎಡವಿತು. ವೃಥಾ ರವಿ ಅವರನ್ನು ಜೀಪಿನಲ್ಲಿ ಕೂರಿಸಿಕೊಂಡು ಅಲೆದಾಡಿಸಿ, ಬಯಲಾಗುವಂತೆ ಮಾಡಿತು. ಸೋಷಿಯಲ್ ಮೀಡಿಯಾ ಜಾಗೃತವಾಗಿರುವ ಈ ಕಾಲದಲ್ಲಿ ಯಾರಾದರೂ ಮಾಡುವ ಕೆಲಸವೇ ಇದು? ಜೊತೆಗೆ ಶೇ. 80 ಭಾಗ, ಮಾರಿಕೊಂಡ ಮಾಧ್ಯಮಗಳು. ಅವರಿಗೆ ಆ ವಿಡಿಯೋ ತುಣುಕು ಸಿಕ್ಕಿ, ಮಹಿಳಾ ನಿಂದನೆ ಮರೆಯಾಯಿತು. ಅಲೆದಾಟ, ಹಲ್ಲೆ ದೊಡ್ಡದಾಯಿತು.

ಅಷ್ಟೇ ಅಲ್ಲ, ಮಹಿಳೆಯನ್ನು ಅತ್ಯಂತ ಕೀಳು ಭಾಷೆಯಿಂದ ನಿಂದಿಸಿದ ಶಾಸಕ ಸಿ.ಟಿ. ರವಿಯವರಿಗೆ ಕೋರ್ಟ್‌ನಿಂದ ಮಧ್ಯಂತರ ಜಾಮೀನು ಕೂಡ ಸಿಕ್ಕಿತು. ಅದಾದ ಮೇಲೆ ಅವರಿಗೆ ವೀರೋಚಿತ ಸ್ವಾಗತ, ಹೂ ಮಳೆಯೊಂದಿಗೆ ಮೆರೆವಣಿಗೆ. ರವಿಯವರು ಯಾರ ಪರವಾಗಿ ಹೋರಾಡಿದ್ದಾರೆ, ಯಾವ ಯುದ್ಧ ಗೆದ್ದು ಬಂದಿದ್ದಾರೆ?

ಸಿಟಿ ರವಿ 1

ಭಾರತೀಯ ಜನತಾ ಪಕ್ಷ ಮಾತೆತ್ತಿದರೆ ಧರ್ಮ, ಹಿಂದುತ್ವ, ರಾಷ್ಟ್ರೀಯತೆಯ ಬಗ್ಗೆ ಮಾತನಾಡುತ್ತದೆ. ‘ಬೇಟಿ ಬಚಾವೋ, ಬೇಟಿ ಪಡಾವೋ’ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೋದಲ್ಲಿ ಬಂದಲ್ಲಿ ಹೆಣ್ಣುಮಕ್ಕಳ ಬಗ್ಗೆ ಕಾಳಜಿ-ಕಳಕಳಿ ವ್ಯಕ್ತಪಡಿಸುತ್ತಾರೆ. ಹೆಣ್ಣುಮಕ್ಕಳನ್ನು ಮಾತೆ, ದೇವತೆ, ಪೂಜಿತೆ ಎನ್ನುತ್ತಾರೆ. ಗೌರವಿಸುವುದು, ರಕ್ಷಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಸಾರುತ್ತಾರೆ. ಆದರೆ ಅದೇ ಹೆಣ್ಣುಮಕ್ಕಳನ್ನು ಅವಾಚ್ಯ ಶಬ್ದದಿಂದ ನಿಂದಿಸಿದ ಶಾಸಕನ ತಲೆ ಮೇಲೆ ಹೂ ಮಳೆ ಸುರಿಸಿ, ಸನ್ಮಾನಿಸುತ್ತಾರೆ!

ಇದು ಬಿಜೆಪಿಗರ ಡಬಲ್ ಸ್ಟಾಂಡರ್ಡ್ ಅಲ್ಲವೇ!?

ಬಿಜೆಪಿಯ ಈ ಕೊಳಕರು ಈ ರೀತಿ ಮೆರೆಯಲು ಕಾರಣ, ಕಾಂಗ್ರೆಸ್ ಪಕ್ಷದ ನಾಯಕರು ಎಂದರೆ ತಪ್ಪಾಗುವುದಿಲ್ಲ. ಏಕೆಂದರೆ, ಹೆಣ್ಣುಮಕ್ಕಳ ಬಗ್ಗೆ ಕೀಳಾಗಿ ಮಾತನಾಡಿದ ಸಿ.ಟಿ. ರವಿ, 2019ರಲ್ಲಿ ಕುಣಿಗಲ್ ಹತ್ತಿರ ಕಾರು ಗುದ್ದಿಸಿ ಇಬ್ಬರು ಯುವಕರನ್ನು ಕೊಂದಾಗಲೇ, ಆತನನ್ನು ಕಂಬಿ ಹಿಂದೆ ಕೂರಿಸಿದ್ದರೆ, ಇವತ್ತು ಇಷ್ಟೆಲ್ಲ ನಡೆಯುತ್ತಿರಲಿಲ್ಲ.

ಅಷ್ಟಕ್ಕೂ ಪ್ರಾಣ ಚೆಲ್ಲಿದ ಆ ಯುವಕರು ಕನಕಪುರ ತಾಲೂಕಿನ ಸೂರನಹಳ್ಳಿ ಗ್ರಾಮದವರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕ್ಷೇತ್ರದ ಮತದಾರರು. ಅವರ ಬೆಂಬಲಿಗರು. ಆ ಬಡ ಯುವಕರ ಮನೆಯ ಅಳು, ನೋವು, ಸಂಕಟ ಅಧಿಕಾರಸ್ಥ ರಾಜಕಾರಣಿಗಳಿಗೆ ಕೇಳಿಸಲೇ ಇಲ್ಲ.

ಅದರ ಫಲ ಈಗ ಕಾಣುತ್ತಿದೆ. ಅದೇ ಡಿ.ಕೆ. ಶಿವಕುಮಾರ್ ಗುಂಪಿನಲ್ಲಿ ಗುರುತಿಸಿಕೊಂಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ, ಅದೇ ಸಿ.ಟಿ. ರವಿ ಅವಾಚ್ಯವಾಗಿ ನಿಂದಿಸಿದ್ದಾರೆ. ನಿಂದಿಸಿದ್ದಷ್ಟೇ ಅಲ್ಲ, ಮಾಧ್ಯಮಗಳಲ್ಲಿ ಹೀರೋ ಆಗಿ ಮೆರೆಯುತ್ತಿದ್ದಾರೆ.

ಇದನ್ನು ಓದಿದ್ದೀರಾ?: ಲೇಖಕಿ ಬಾನು ಮುಷ್ತಾಕ್ ಅವರಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಬಹಿರಂಗ ಪತ್ರ 

ಇದು ಕಾಂಗ್ರೆಸ್ ಕಾಯಿಲೆ. ಆಳುವ ಸರ್ಕಾರಕ್ಕೆ ಬಿಜೆಪಿ ನಾಯಕರ ಹುಳುಕೆಲ್ಲ ಗೊತ್ತು. ಭ್ರಷ್ಟಾಚಾರದ ಹಗರಣಗಳೂ ಗೊತ್ತು. ಅವರ ಪರ ಮಾಧ್ಯಮಗಳು ವಕಾಲತ್ತು ವಹಿಸುವುದೂ ಗೊತ್ತು. ಗೊತ್ತಿದ್ದೂ ಕಾಂಗ್ರೆಸ್ಸಿಗರು ಎಡವುತ್ತಾರೆ. ಸುಳ್ಳು ಊರಾಡಿ ಬಂದಮೇಲೆ ಸತ್ಯ ಹೇಳಲು ಮುಂದಾಗುತ್ತಾರೆ. ಉಗುರಿನಿಂದ ಹೋಗುವುದಕ್ಕೆ ಕೊಡಲಿ ಎತ್ತಿಕೊಳ್ಳುತ್ತಾರೆ. ಅದಕ್ಕೆ ಇತ್ತೀಚಿನ ಮುಡಾ, ವಕ್ಫ್ ಪ್ರಕರಣಗಳೇ ಅತ್ಯುತ್ತಮ ಉದಾಹರಣೆಗಳು.

ಸಿ.ಟಿ. ರವಿಯವರ ಪ್ರಕರಣವೂ ಈಗ ಅದೇ ಹಾದಿ ಹಿಡಿದಿದೆ. ಕಾಂಗ್ರೆಸ್ಸಿಗರು ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಹಿಂದೆ ಬಿದ್ದಿದ್ದಾರೆ. ಅದಾಗಲಿ, ಆಮೇಲೆ ನೋಡೋಣ ಎನ್ನುತ್ತಿದ್ದಾರೆ. ಅಷ್ಟರೊಳಗೆ ಬಿಜೆಪಿಪ್ರಣೀತ ಮಾಧ್ಯಮಗಳು ರವಿಯನ್ನು ಹೀರೋ ಮಾಡಿ, ಅವಮಾನಕ್ಕೊಳಗಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನೇ ಸರಿ ಇಲ್ಲ ಎಂಬ ತೀರ್ಮಾನಕ್ಕೆ ಬಂದರೂ ಆಶ್ಚರ್ಯವಿಲ್ಲ.

ಈ ಕಾಂಗ್ರೆಸ್ಸಿಗರಿಗೆ ಜನ ಕೊಟ್ಟ ಅಧಿಕಾರವನ್ನು ಹೇಗೆ ಬಳಸಬೇಕೆಂದು ಗೊತ್ತಿಲ್ಲ. ಈ ಕಾಲಕ್ಕೆ ಬುದ್ಧಿ ಬರುವಂತೆಯೂ ಕಾಣುತ್ತಿಲ್ಲ.

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಧರ್ಮಸ್ಥಳ ಪ್ರಕರಣಗಳ ಸಮಗ್ರ ತನಿಖೆಗೆ ಎಡಪಕ್ಷಗಳ ಒತ್ತಾಯ

ಧರ್ಮಸ್ಥಳದಲ್ಲಿ ನಡೆದಿರುವ ವೇದವಲ್ಲಿ, ಪದ್ಮಲತಾ, ನಾರಾಯಣ, ಯಮುನಾ ಮತ್ತು ಸೌಜನ್ಯ, ಮುಂತಾದ...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

Download Eedina App Android / iOS

X