ನಿರಾಶ್ರಿತರು ಜೀವನ ದೂಡಲು ಅಹಮದಾಬಾದ್‌ನ ಸರ್ಕಾರಿ ಭೂಮಿಯಲ್ಲಿ ಕಟ್ಟಿಕೊಟ್ಟಿದ್ದ ಸುಮಾರು 2,000 ಗುಡಿಸಲುಗಳನ್ನು ಗುಜರಾತ್ ಸರ್ಕಾರ ಧ್ವಂಸಗೊಳಿದೆ. ಅಧಿಕಾರಿಗಳು ಆರಂಭಿಸಿದ್ದ ಒತ್ತುವರಿ ಕಾರ್ಯಾಚರಣೆಗೆ ತಡೆ ನೀಡಲು ಗುಜರಾತ್ ಹೈಕೋರ್ಟ್ ನಿರಾಕರಿಸಿದ ಬೆನ್ನಲ್ಲೇ, ನಿರಾಶ್ರಿತರ ಗುಡಿಸಲುಗಳನ್ನು ನೆಲಸಮ ಮಾಡಲಾಗಿದೆ.
ಅಹಮದಾಬಾದ್‌ನ ಚಂಡೋಲ್ ಲೇಕ್ ಪ್ರದೇಶದಲ್ಲಿ ನಿರಾಶ್ರಿತರು ಗುಡಿಸಲುಗಳನ್ನು ಕಟ್ಟಿಕೊಂಡು ಬದುಕುತ್ತಿದ್ದರು. ಆದರೆ, ಅವರು ಬಾಂಗ್ಲಾದೇಶದ ಅಕ್ರಮ ವಲಸಿಗರು ಎಂದು ಶಂಕಿಸಲಾಗಿದೆ. ಇದೇ ಶಂಕೆಯ ಮೇಲೆ ಸುಮಾರು 900 ಮಂದಿಯನ್ನು ಪೊಲೀಸರು ಮೂರು ದಿನಗಳ ಹಿಂದೆ ವಶಕ್ಕೆ ಪಡೆದಿದ್ದರು.
ಈ ಬೆನ್ನಲ್ಲೇ, ಅಧಿಕಾರಿಗಳು ಸೋಮವಾರ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ್ದರು. ಅಲ್ಲಿ ವಾಸಿಸುತ್ತಿದ್ದ 18 ಮಂದಿ ನಿವಾಸಿಗಳು ಹೈಕೋರ್ಟ್ ಮೆಟ್ಟಿಲೇರಿ, ಒತ್ತುವರಿ ಕಾರ್ಯಾಚರಣೆಗೆ ತಡೆಯಾಜ್ಞೆ ನೀಡುವಂತೆ ಅರ್ಜಿ ಸಲ್ಲಿಸಿದ್ದರು.
ಮಂಗಳವಾರ ರಜೆ ದಿನವಾದರೂ, ಹೈಕೋರ್ಟ್ ನ್ಯಾಯಮೂರ್ತಿ ಮೌನಾ ಭಟ್ಟ ಅವರು ಅರ್ಜಿಯ ವಿಚಾರಣೆ ನಡೆಸಿದರು. ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲ ಆನಂದ್ ಯಾಜ್ಞಿಕ್, “ಎಲ್ಲ ಅರ್ಜಿದಾರರು ಭಾರತೀಯ ಪೌರರಾಗಿದ್ದಾರೆ. ಕಳೆದ 50 ವರ್ಷಗಳಿಂದ ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಆದಾಗ್ಯೂ, ತಮ್ಮ ಪೌರತ್ವವನ್ನು ಸಾಬೀತು ಮಾಡಲು ಅವರ ಬಳಿ ಅಗತ್ಯ ದಾಖಲೆಗಳಿಲ್ಲ” ಎಂದು ಹೇಳಿದ್ದಾರೆ.
“ತೆರವು ಕಾರ್ಯಾಚರಣೆಗೂ ಮುನ್ನವೇ ನೋಟಿಸ್ ನೀಡಬೇಕೆಂಬ ಸುಪ್ರೀಂ ಕೋರ್ಟ್ ಆದೇಶವಿದೆ. ಆದರೆ, ಕೋರ್ಟ್ ಆದೇಶವನ್ನು ಉಲ್ಲಂಘಿಸಿ, ನೋಟಿಸ್ ನೀಡದೆಯೇ ತೆರವು ಕಾರ್ಯಾರಣೆ ನಡೆಸಲು ಅಧಿಕಾರಿ ಮುಂದಾಗಿದ್ದಾರೆ. ಅರ್ಜಿದಾರರು ಆ ಭೂಮಿಯ ಮಾಲೀಕರಲ್ಲ. ಅದರೆ ಸಿಆರ್‌ಝೆಡ್ ಅಧಿಸೂಚನೆಯಡಿ ಕೊಳಗೇರಿ ಪುನರ್ವಸತಿ ಯೋಜನೆಯಿಂದ ಅವರಿಗೆ ಪರ್ಯಾಯ ವಸತಿ ಸೌಲಭ್ಯ ನೀಡಲು 2010ರಲ್ಲಿ ರಾಜ್ಯ ಸರ್ಕಾರವು ನಿರ್ಧರಿಸಿತ್ತು. ಈಗ ಪರ್ಯಾಯ ವ್ಯವಸ್ಥೆ ಮಾಡದೆ, ಅವರನ್ನು ತೆರವುಗೊಳಿಸುವುದು ಸರಿಯಲ್ಲ” ಎಂದು ವಾದಿಸಿದರು.
ಅಲ್ಲದೆ, “ಬಾಂಗ್ಲಾದಿಂದ ಬಂದಿರುವ ಅಕ್ರಮ ವಲಸಿಗರ ವಿರುದ್ದದ ಕ್ರಮವೆಂಬ ನೆಪದಲ್ಲಿ ಭಾರತೀಯರೇ ಆದ ನಿರಾಶ್ರಿತರನ್ನು ಹೊರದೂಡಲು ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಹೀಗಾಗಿ, ಕಾರ್ಯಾಚರಣೆಗೆ ತಡೆ ನೀಡಬೇಕು”” ಎಂದು ಕೋರ್ಟ್‌ಗೆ ಮನವಿ ಮಾಡಿದರು.
ಈ ವರದಿ ಓದಿದ್ದೀರಾ?: ಯುದ್ಧದ ಪರಿಣಾಮಗಳು ಯುದ್ಧಭೂಮಿಗೆ ಮಾತ್ರ ಸೀಮಿತವಾಗುವುದಿಲ್ಲ…
ಆದರೆ, ಅರ್ಜಿದಾರರ ವಾದವನ್ನು ರಾಜ್ಯ ಸರ್ಕಾರ ತಳ್ಳಿಹಾಕಿದೆ. ಜಲಪ್ರದೇಶದ ಭೂಭಾಗವನ್ನು ಅತಿಕ್ರಮಿಸಲಾಗಿದೆ. ಯಾವುದೇ ರೀತಿಯ ಅನಧಿಕೃತ ಒತ್ತುವರಿ ಮತ್ತು ನಿರ್ಮಾಣಗಳ ತೆರವಿಗೆ ನೋಟಿಸ್ ನೀಡುವ ಅಗತ್ಯವಿಲ್ಲ ಎಂದು ತನ್ನ ವಾದವನ್ನು ಮುಂದಿಟ್ಟಿದೆ.
ವಾದ-ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್, ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಅರ್ಜಿಯ ವಿಚಾರಣೆಯನ್ನು ಜೂನ್ ತಿಂಗಳಿಗೆ ಮುಂದೂಡಿದೆ.