ಕಲಬುರಗಿ ಸೀಮೆಯ ಕನ್ನಡ | 33% ರಾಜಕೀಯ; ಗಂಡಸರ ಕಾರಬಾರು, ಹೆಣ್ಣಮಕ್ಕಳ ಮಾತು

Date:

Advertisements

(ಆಡಿಯೊ ಪೂರ್ಣಪ್ರಮಾಣದಲ್ಲಿ ಸಿಗದಿದ್ದಲ್ಲಿ, ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಕೇಳಿ…)

ಒಮ್ಮೆ ಗೆಳತೆರೆಲ್ಲ ಮಾತಾಡಕೋತ ಕುತಿದ್ದೆವ್ರಿ. ಹಂಗ ಮಾತು ರಾಜಕೀಯದ ಕಡಿ ಹೊಳ್ಳತು. ಹಂಗ ನೊಡಿದ್ರ ನಮ್ಮ ಹೆಣ್ಣಮಕ್ಕಳಿಗೂ ರಾಜಕೀಯಕ್ಕೂ ಸ್ವಲ್ಪ ದೂರನ ನೋಡ್ರಿ. ನಾವು ಸೀರಿ, ಬಂಗಾರ, ಅಡುಗಿ, ಮತ್ತೊಬರ ಮನಿ ವಿಷಯ ಮಾತಾಡೋದ್ರಾಗ ತೋರಸೋ ಆಸಕ್ತಿ – ಈ ರಾಜಕೀಯ ವಿಷಯ ಮಾತಾಡೊದ್ರಾಗ ತೊರಸೋದು ಕಮ್ಮಿನೆ. ಈಗ ಮಾತು ಯಾಕ ಆಕಡಿ ಹೊಳ್ಳತು ಅಂದ್ರ, ರಾಜಕೀಯದೊಳಗ ಹೆಣ್ಣಮಕ್ಕಳಿಗಿ ಅದೇನೋ 33% ಮೀಸಲಾತಿ ಕೊಟ್ಟಾರಂತ ಎಲ್ಲರೂ ಟೀವಿದಾಗ ನೊಡಿದ್ದರಿಂದ ಆ ವಿಷಯ ಬಂತ್ರಿ.

ಹೆಣ್ಣಮಕ್ಕಳು ರಾಜಕೀಯದೊಳಗ ಬರಲಿಕ್ಕಿ ಯಾಕ ಒಲವು ತೊರಸವಲ್ರೂ ಅಂಬೋ ವಿಷಯದಾಗ ಚರ್ಚೆ ಶುರುವಾತು.

Advertisements

“ರಾಜಕೀಯ ಅಂದ್ರ ಹಿಂದಿನಿಂದಲೂ ಗಂಡಸರ ಕಾರಬಾರು ಅಂತೆ ತಿಳಕೊಂಡಿವಿ. ಮನ್ಯಾಗಿನ ಗಂಡಸರು ಯಾವಾಗಲೂ ರಾಜಕೀಯದ ಬಗ್ಗೆ ಮನಿ ಹೆಣ್ಣಮಕ್ಕಳ ಜೊತಿಗಿ ಚರ್ಚೆ ಮಾಡಲ್ಲ. ಟೀವ್ಯಾಗ ಎನರ ರಾಜಕೀಯದ ಬಗ್ಗೆ ನೋಡಿ ಗಂಡಮಕ್ಕಳಿಗ ಕೇಳಿದ್ರ, “ನಿನಗೇನು ತಿಳಿತದ ಸುಮ್ಮನಿರು!” ಅಂತಾರ. ಬರೀ ಓಟ ಹಾಕಲಕ್ ಕರಕೊಂಡು ಹೋಗತಾರ ನೋಡು; ಅದೂ ಅವರು ಯಾರಿಗಿ ಹೇಳತಾರ ಅವರಿಗೆ ಓಟ್ ಹಾಕಿ ಬರಬೇಕು ನೋಡು ಅಷ್ಟೆ,” ಅಂದಳು.

“ನಾವರ ಎಲ್ಲಿ ರಾಜಕೀಯದ ಬಗ್ಗಿ ಆಸಕ್ತಿ ತೊರಸತೀವಿ ಹೇಳು… ಧಾರಾವಾಹಿ, ಸಿನಿಮಾ ನೋಡದ್ರಾಗ ಇರೋ ಇಂಟರೆಸ್ಟ್ ನಮಗ ನ್ಯೂಸ್‌ ನೋಡದ್ರಾಗ ಇರತದ ಎನ್ ಹೇಳು. ಅದಕ್ಕ ಈಗ ರಾಜಕೀಯದಾಗ ಹೆಚ್ಚ-ಹೆಚ್ವ ಹೆಣ್ಣಮಕ್ಕಳು ಬರಲಿ ಅಂತ ನಮಗೂ 33% ಸೀಟು ಕೊಟ್ಟಾರಂತ. ಆದ್ರ, ಇದು ಲಾಗೂ ಆಗಲಕ್ಕ ಇನ್ನೊಂದಿಷ್ಟ ವರ್ಷ ಕಾಯಬೇಕಂತ… ಅದ್ಯಾಕೋ ಏನೊಪ್ಪ,” ಅಂದೆ.

ಈ ಆಡಿಯೊ ಕೇಳಿದ್ದೀರಾ?: ಮಾಲೂರು ಸೀಮೆಯ ಕನ್ನಡ | ಮುಂತಾಯಕ್ಕನ ಸೊಸೆಯ ತಾನದ ಪ್ರಸಂಗ

“ತಮ್ಮ ಮನಿ ಹೆಣ್ಣಮಕ್ಕಳಿಗಿ ರಾಜಕೀಯದಾಗ ಬರಲಿಕ್ಕಿ ಅವಕಾಶ ಕೊಡತಾರೇನು ಮನಿಯವರು? ಮೊದಲೇ ರಾಜಕೀಯ ಅಂದ್ರ ಹೊಲಸು ಅಂಬೊ ಕಲ್ಪನೆ ಅದಾ. ಅದರಾಗೂ, ಈ ಎಲೆಕ್ಷನ್‌ಗೆ ನಿಂದ್ರೊದು ಅಂದ್ರ ರೊಕ್ಕ ಮತ್ತು ವಶೀಲಿ ಇಲ್ಲಂದ್ರ ಸಾದ್ಯನೇ ಇಲ್ಲ. ಸಾಮಾನ್ಯ ಹೆಣ್ಣಮಕ್ಕಳು ರಾಜಕೀಯದಾಗ ಬರೋದಂದ್ರ ಮಾಮೂಲಿ ಮಾತಲ್ಲ ಬಿಡು,” ಅಂದಳು.

ಇನ್ನೊಬ್ಬ ಗೆಳತಿ, “ಐ… ರೊಕ್ಕ ಅಕಡಿರಲಿ, ರಾಜಕೀಯದಾಗಿರೋ ಹೆಣ್ಣಮಕ್ಕಳ ಬಗ್ಗಿ ಜನ ತಲಿಗೊಂದು ಮಾತಾಡರೆವ್ವ. ಮುಂದ ಹೊಗಳಿ ಹಿಂದ ನಗೋ ಮಂದಿ ಇರತಾರ. ಗಂಡಸ್ರ ಜೋಡಿ ಓಡಾಡಿದ್ರ, ಕುಂತ್ರ, ನಿಂತ್ರ ಒಂದೊಂದು ಸುದ್ದಿ ಹಬ್ಬಿಸತಾರ. ರಾಜಕೀಯ ತಣ್ಣಗಿರಲಿ…” ಅಂದಳು.

“ನೋಡ್ರೆ… ಅಂಬೋರು ಎಲ್ಲಾ ಕ್ಷೇತ್ರದಾಗೂ ಇರತಾರ. ಜನ ಆಡೋಕೋತಾರ ಅಂದ್ರ ನಾವು ಹೆಣ್ಷಮಕ್ಕಳು ಅಡಿಗಿ ಮನಿ ಬಿಟ್ಟು ಹೊರಗ ಬರಲಾಕ ಆಗಲ್ಲ. ಅಲ್ಲ, ಈಗ ರಾಜಕೀಯದಾಗ ಹೆಸರು ಮಾಡಿದ ಜಯಲಲಿತಾ, ಸೋನಿಯಾ ಗಾಂಧಿ, ಮಮತಾ ಬ್ಯಾನರ್ಜಿ ಇವರೆಲ್ಲ ಮಂದಿಗಿ ಅಂಜಿ ರಾಜಕೀಯ ಮಾಡತಾರೇನು? ಜಯಲಲಿತಾಗಂತೂ ಅವಳ ರಾಜ್ಯದವರು ದೇವರ ಪಟ್ಟ ಕೊಟ್ಟಾರ. ಸೋನಿಯಾ ಗಾಂಧಿ ಒಂದು ಪಕ್ಷದ ಆಡಳಿತ ನಡಸೋದಂದ್ರ ಸುಮ್ನ ಅಲ್ಲ. ನಮ್ಮ ದೇಶದಾಗ ಸೋನಿಯಾ ಗಾಂಧಿಗಿ ಟ್ರೋಲ್ ಮಾಡಿದಷ್ಟು ಮತ್ತಾವ ಹೆಣ್ಣಮಕ್ಕಳಿಗೂ ಮಾಡಿರಲಿಕ್ಕಿಲ್ಲ.ಆದ್ರ, ಅವಳ ಆತ್ಮವಿಶ್ವಾಸದ ಮುಂದ ಈ ಮಾತುಗಳೆಲ್ಲ ಯಾವ ಲೆಕ್ಕ? ಹಂಗ್ ಇರಬೇಕು ಧೈರ್ಯ… ಆಗ ಮಾತ್ರ ಹೆಣ್ಣಮಕ್ಕಳು ರಾಜಕೀಯದಾಗ ಇರಲಿಕ್ಕ ಸಾಧ್ಯ ಆಗತದ. ಪುರುಷ ಪ್ರಧಾನ ರಾಜಕೀಯದಾಗ ಅವರು ಅನುಭವಿಸಿದ ಅವಮಾನ, ಯಾತನೆ ಅವರಿಗ ಗೊತ್ತು. ಎಲ್ಲಾ ಅವಮಾನ ಮೀರಿ ಬೆಳಿಬೆಕಂದ್ರ ಅವರ ಮನೆಯವರ ಸಹಕಾರ ಬಹಳ ಮುಖ್ಯ ಆಗತದ…”
ಅಂದೆ.

ಈ ಆಡಿಯೊ ಕೇಳಿದ್ದೀರಾ?: ಹೊನ್ನಾಳಿ ಸೀಮೆಯ ಕನ್ನಡ | ನನ್ ಬಾಯ್ಮಾತ್ ಯಾರ್ಕೆಳ್ತಾರಾ…

“ಹೌದು ನೋಡೆ… ಈಗೀನ ಕಾಲದಾಗ ಹೆಣ್ಣಮಕ್ಕಳಿಗಿ ಎಲ್ಲಾ ಕ್ಷೇತ್ರದಾಗ ಮುಂದುವರಿಲಕ್ಕ ತಾಯಿ-ತಂದಿ, ಅಣ್ಣತಮ್ಮದೇರು ಪ್ರೋತ್ಸಾಹ ಮಾಡಲತಾರ. ಆದ್ರ, ಈ ರಾಜಕೀಯ ಕ್ಷೇತ್ರದಾಗ ಬರಲಿಕ್ಕ ನಾವೇ ನಮ್ಮನಿ ಹೆಣ್ಣಮಕ್ಕಳಿಗಿ ಪ್ರೋತ್ಸಾಹ ಮಾಡತಿಲ್ಲ ನೋಡು…” ಅಂದಳು.

ಅದಕ್ಕ ಇನ್ನೊಬ್ಬ ಗೆಳತಿ, “ಪ್ರೋತ್ಸಾಹ ಕೊಡತಾರ. ಯಾಕ ಕೊಡಲ್ಲ? ಎಲೆಕ್ಷನ್ ನಿಂದ್ರಲಕ ಅಷ್ಟೇ ಪ್ರೋತ್ಸಾಹ ಕೊಡತಾರ. ಗೆದ್ದ ಮ್ಯಾಗ ಗಂಗೆತ್ತಿನ ಹಂಗ ಗಂಡ-ಮಗ ಹೇಳಿದಾಂಗ್ ಕೇಳೊದಷ್ಟ ಅವರ ಕೆಲಸ. ಈಗ ಪಂಚಾಯತ್ ಎಲೆಕ್ಷನ್‌ದಾಗ ಗೆದ್ದ ಮಹಿಳೆಯರಾಗಲೀ, ಅಧ್ಯಕ್ಷರಾಗಲೀ ಎನ್ ಮಾಡತಾರ್? ಗಂಡ-ಮಗ ತೋರಿಸಿದ ಜಾಗದಾಗ ಹೆಬ್ಬೆಟ್ಟ ಒತ್ತೊದಷ್ಟ್ ಅವರ ಕೆಲಸ. ಒಂದು ಸ್ವಂತ ನಿರ್ಧಾರ ತಗೊಳ್ಳೋ ಸ್ವತಂತ್ರ ಅವರಿಗಿ ಇರಲ್ಲ. ಒಟ್ಟಿನಾಗ ರಾಜಕೀಯ ಅಂದ್ರೇನು ಅಂತನ ಅವರಿಗೆ ಗೊತ್ತಿರಲ್ಲ. ಅಂತವರಿಗೂ ಗೆಲ್ಲಸ್ತಿವಿ ನಾವು. ಸುಮ್ನ ನಾಮಕಾವಾಸ್ತೆ ಅಷ್ಟ್ ಅಧ್ಯಕ್ಷೆ ಅವರು, ಕಾರುಬಾರೆಲ್ಲ ಮನಿ ಗಂಡಸರದ್ದೇ…” ಅಂದಳು.

“ಹೌದು ನೋಡೇ… ರಾಜಕೀಯದಾಗ ಆಸಕ್ತಿ ಇಲ್ಲದ ಹೆಣ್ಣಮಕ್ಕಳು ಮನಿಯವರ ಒತ್ತಾಯಕ್ಕ ರಾಜಕೀಯದಾಗ ಬರ್ಲೇಬಾರದು. ಗಂಡಸ್ರ ಜೊತೆ ಮಾತಾಡಿದ್ರ ಯಾರ ಏನಾಂತಾರೋ ಅಂತ ಅಂಜೋರು ಮನ್ಯಾಗೆ ಕೂಡಬೇಕು. ಎಷ್ಟೋ ಮಂದಿ ಹೆಣ್ಣಮಕ್ಕಳು ಅದಾರ – ರಾಜಕೀಯದಾಗ ಆಸಕ್ತಿ ಇರೋರು, ಅಂತವರಿಗೆ ಅವಕಾಶ ಸಿಗಬೇಕು. ಏನ್ ಮಾಡೋದು… ಹಲ್ಲ ಇದ್ದಲ್ಲಿ ಕಡ್ಲಿ ಇಲ್ಲ, ಕಡ್ಲಿ ಇದ್ದಲ್ಲಿ ಹಲ್ಲಿಲ್ಲ ಅಂಬಂಗ ಅದಾ ನಮ್ಮ ಪರಿಸ್ಥಿತಿ,” ಅಂದೆ.

ಈ ಆಡಿಯೊ ಕೇಳಿದ್ದೀರಾ?: ಕುಮಟಾ ಸೀಮೆಯ ಕನ್ನಡ | ಉತ್ತರ ಕನ್ನಡದ ಅಡ್ಗಿ ಮನಿ ರಾಜ ಮತ್ತು ಹಿಂದಿನ ಮನಿ ಪಾರ್ವತಕ್ಕ

“ಈಗ ಎಷ್ಟ ಮಂದಿ ಹೆಣ್ಣಮಕ್ಕಳು IAS, KAS ಮಾಡಿ AC, DC ಆಗಲತಾರ. ಹಿಂಗ್ ರಾಜಕೀಯದಾಗೂ ಹೆಣ್ಣಮಕ್ಕಳ ಸಂಖ್ಯೆ ಹೆಚ್ಚಾಗಬೇಕು. ಎಷ್ಟೊ ರಾಜಕೀಯ ವೇದಿಕೆಯಲ್ಲಿ ನೋಡತಿವಿ, ಒಂದೋ ಎರಡು ಹೆಣ್ಣುಮಕ್ಕಳು ಕಾಣತಾರ, ಅಷ್ಟ್. ಮೊದಲು ನಾವ್ ಹೆಣ್ಣಮಕ್ಕಳು ರಾಜಕೀಯದಾಗ ಬರಲಿಕ್ಕ ಆಸಕ್ತಿ ತೋರಸಬೇಕು. ಪಂಚಾಯತ್ ಎಲೆಕ್ಷನ್ದಾಗ ಆಸಕ್ತಿ ಇರೋ ಹೆಣ್ಣಮಕ್ಕಳಿಗೆ ಅವಕಾಶ ಸಿಗಬೇಕು. ಗೆದ್ದೋರು ತಮ್ಮ-ತಮ್ಮ ಹಳ್ಳಿಗಳ ಸಮಸ್ಯೆ ಅಧಿಕಾರಗಳ ಮೂಲಕ ಪರಿಹರಿಸಿಕೊಳ್ಳಬೇಕು. ನಮ್ದು ಹಳ್ಳಿಗಳ ದೇಶ, ಹಳ್ಳಿಗಳು ಉದ್ಧಾರ ಆದ್ರ ಮಾತ್ರ ನಮ್ಮ ದೇಶ ಉದ್ಧಾರ ಆಗತದ. ನಮ್ಮ ಗೆಳತೇರು ಯಾರರ ರಾಜಕೀಯದಾಗ ಆಸಕ್ತಿ ಇರೋರು ಇದ್ರ ಅಂತವರಿಗಿ ನಾವೂ ಪ್ರೋತ್ಸಾಹ ಕೊಡಬೇಕು. ಜನ ಹಿಂದ ಎನ್ ಅನಕೋತಾರೋ ಅಂಬೋ ಅಳುಕು ದೂರ ಮಾಡಬೇಕು. ಆಗ ಮಾತ್ರ ಹೆಣ್ಣಮಕ್ಕಳು ರಾಜಕೀಯದಾಗ ಬರಲಿಕ್ಕ ಸಾದ್ಯ ಆಗತದ,” ಅಂದಳು ಮತ್ತೊಬ್ಬ ಗೆಳತಿ.

“ಹಿಂದ ಇಂದಿರಾ ಗಾಂಧಿ ಪ್ರಧಾನಮಂತ್ರಿ ಆಗಿದ್ದು ಬಿಟ್ರೆ ನಮ್ಮ ದೇಶದ ಇನ್ನೊಬ್ಬ ಹೆಣ್ಣಮಗಳು ದೇಶ ಆಳೋ ದೈರ್ಯ ಮಾಡಿಲ್ಲ. ಮಾಡಿಲ್ಲ ಅನ್ನೊದಕಿಂತ ಅವಳಿಗೆ ಅವಕಾಶ ಸಿಕ್ಕಿಲ್ಲ ಅನ್ನಬೇಕು. ಅಂತ ಅವಕಾಶ ಸಿಗಬೇಕಾದ್ರ ನಮ್ಮ ಹೆಣ್ಣಮಕ್ಕಳು ರಾಜಕೀಯದೊಳಗಿರೋರು ಸ್ವತಃ ನಿರ್ಧಾರ್ ತಗೊಳ್ಳೋ ಕ್ಷಮತೆ ರೂಪಿಸಿಕೊಳ್ಳಬೇಕು. ಮೊಟ್ಟಮೊದಲ ನಮ್ಮ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್‌ನ ಮಹಿಳಾ ಸದಸ್ಯೆಯರು, ಮಹಿಳಾ ಅಧ್ಯಕ್ಷರುಗಳು ಆಸಕ್ತಿ ವಹಿಸಿ ಅಭಿವೃದ್ಧಿ ಕಾರ್ಯ ಮಾಡಿಸಬೇಕು. ಸುಮ್ನ ಹೆಸರಿಗಿ ರಾಜಕೀಯ ಮಾಡಿದ್ರ ಏನೂ ಉಪಯೋಗ ಇಲ್ಲ. ಈಗ ಮುಂದ ನಮಗ ಕೊಡೋ 33% ಮಹಿಳಾ ಮೀಸಲಾತಿಯಲ್ಲಿ ರಾಜಕೀಯದಲ್ಲಿ ಆಸಕ್ತಿ ಮತ್ತು ಧೈರ್ಯ ಇರೋ ಹೆಣ್ಣಮಕ್ಕಳಿಗಿ ಅವಕಾಶ
ಸಿಗಬೇಕು ನೋಡ್ರಿ…” ಅಂದೆ.

“ಹೌದು…” ಅಂತ ಎಲ್ಲರೂ ಮೌನ ಆದೇವು.

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಜ್ಯೋತಿ ಡಿ ಬೊಮ್ಮಾ
ಜ್ಯೋತಿ ಡಿ ಬೊಮ್ಮಾ
ಚಿಂಚೋಳಿ ತಾಲೂಕಿನವರು. ಸದ್ಯ ಕಲಬುರಗಿ ನಿವಾಸಿ. ಗೃಹಿಣಿ. ಓದು, ಬರಹ, ಪ್ರವಾಸವೆಂದರೆ ಪ್ರೀತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊನ್ನಾಳಿ ಸೀಮೆಯ ಕನ್ನಡ | ನಮ್ಮೂರಾಗ ಎಲ್ಲಾ ಜಾತೇರು ಸೇರ್ಕೆಂದ್ ಮಾಡಾ ಮಯೇಶುರಿ ಹಬ್ಬ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮಾಲೂರು ಸೀಮೆಯ ಕನ್ನಡ | ಪ್ರೊಫೆಸರ್ ಮೈಲಾರಪ್ಪನ ಅಗ್ರ ಪೂಜಾ ಅಭಿಲಾಷೆ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಔರಾದ್ ಸೀಮೆಯ ಕನ್ನಡ | ಈವೊರ್ಷ್ ಯಳಮಾಸಿ ಭಜ್ಜಿ ಉಳ್ಳಾಕ್ ನಮ್ ಹೊಲ್ಕಡಿನೇ ಬರೀ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ದಾವಣಗೆರೆ ಸೀಮೆಯ ಕನ್ನಡ | ‘ಅವ್ರ್ ಕೊಡುಕ್ಕೆ ನಮ್ ಕೊಡಾನ ಯಾಕ್ ಮುಟ್ಟಿಸ್ಕ್ಯಬಾರ್ದು?’

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ ಸ್ಪಾಟಿಫೈ...

Download Eedina App Android / iOS

X