ನಮ್ ಜನ | ಗಿಡ-ಮರಗಳನ್ನು ಮಕ್ಕಳಿಗಿಂತ ಮಿಗಿಲಾಗಿ ಮುದ್ದಿಸುವ ಚನ್ನಪ್ಪ

Date:

Advertisements
“ಊರ್ಬುಟ್ಟು ಓಡ್ಬಂದೋನು… ಈ ಬೆಂಗ್ಳೂರು ನನ್ನಂಥೋನ್ಗೂ ತಾವ್ ಕೊಡ್ತು. ಇಪ್ಪತ್ನಾಕ್ ವರ್ಷ ಹೋಗಿದ್ದೇ ಗೊತ್ತಾಗಲಿಲ್ಲ… ಗಿಡ-ಮರಗಳು ನನ್ ನೋಡ್ಕಂಡೋ, ನಾನು ಅವುನ್ ನೋಡ್ಕಂಡೆ. ಅವೂ ಚೆನ್ನಾಗವೆ, ನಾನೂ ಚೆನ್ನಾಗಿದೀನಿ. ಇನ್ನೇನು ಬೇಕು?”

(ಆಡಿಯೊ ಪೂರ್ಣಪ್ರಮಾಣದಲ್ಲಿ ಸಿಗದಿದ್ದಲ್ಲಿ, ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಕೇಳಿ…)

ರಾಜಾಜಿನಗರದ ಭಾಷ್ಯಂ ಸರ್ಕಲ್ ಬಳಿಯ ಮಹದೇವ್ ಬಣಕಾರ್ ಪಾರ್ಕಿನ ಮೂಲೆಯಲ್ಲಿ, ಚೆಡ್ಡಿ, ಬನಿಯನ್, ಹೆಗಲ ಮೇಲೊಂದು ಟವಲ್ ಹಾಕಿದ ವೃದ್ಧರೊಬ್ಬರು ಕುಡುಗೋಲಿನಿಂದ ನೆಲ ಕೆರೆಯುತ್ತಿದ್ದರು.

“ನಮಸ್ಕಾರ ಯಜಮಾನ್ರಿಗೆ… ಏನ್ ಮಾಡ್ತಿದೀರ?” ಎಂದೆ.

Advertisements

ನಮಗ್ಯಾರು ನಮಸ್ಕಾರ ಮಾಡ್ತರಪ್ಪ ಎಂದು ಬೆಚ್ಚಿಬಿದ್ದು ತಿರುಗಿ ನೋಡಿದ ವೃದ್ಧರು, “ಏನಿಲ್ರ… ಮಳೆಯಾಗಿತ್ತಲ್ಲ, ಊವ್ ಗಿಡಕ್ಕೆ ಕಳೆ ಅಡ್ರಸ್ಗಂಡಿತ್ತು, ಬುಡುಸ್ತಿದ್ದೆ…” ಅಂದರು. ಆ ಪುಟ್ಟ ಗಿಡದ ಬೇರಿಗೆ ಬೇಕಾದ ಗಾಳಿ, ಬೆಳಕು, ನೀರಿಗೆ ಅನುವು ಮಾಡಿಕೊಡುತ್ತಿದ್ದರು. ಅದು ಬೆಳೆದು ನಿಲ್ಲಲು, ಹೂ ಬಿಟ್ಟು ನಗಲು, ನೋಡಿದ ನಾಲ್ಕು ಮಂದಿ ಮೊಗದಲ್ಲಿ ಮಂದಹಾಸ ಮೂಡಲು – ಇವರು ಕಳೆ ಕಿತ್ತು, ಪಾತಿ ಮಾಡಿ, ನೀರುಣಿಸಲು ಅಣಿಯಾಗುತ್ತಿದ್ದರು. ಕಾಯಕದಲ್ಲಿ ನಿಷ್ಠೆಯಿತ್ತು, ಮಾತಿನಲ್ಲಿ ವಿನಯವಿತ್ತು. ಮಾತು ಕಡಿಮೆ ಇತ್ತು. ತನ್ನ ಪಾಡಿಗೆ ತನ್ನನ್ನು ಬಿಟ್ಟರೆ, ಅದೇ ದೊಡ್ಡ ಉಪಕಾರ ಎನ್ನುವ ಮುಖಭಾವ.

ಆದರೂ ಬಿಡದೆ, “ಹುಲ್ಲು ಚೆನ್ನಾಗಿ ಬೆಳೆದೈತಲ್ಲ ಯಜಮಾನ್ರೆ…” ಅಂದೆ.

“ಅದು ಉಲ್ಲಲ್ಲ, ಚೈನಾ ಗ್ರಾಸ್…” ಎಂದರು. ಅಪ್ಪಟ ಹಳ್ಳಿಹೈದನಂತಿದ್ದ ಅವರ ಬಾಯಲ್ಲಿ ಬಂದ ಬಟಾನಿಕಲ್ ಹೆಸರು ಕೇಳಿ ಸುಮ್ಮನಾಗುವ ಸರದಿ ನನ್ನದಾಗಿತ್ತು. ಆಶ್ಚರ್ಯವೆಂದರೆ, ಅದೊಂದೇ ಅಲ್ಲ, ಆ ಪಾರ್ಕಿನಲ್ಲಿದ್ದ ನೂರಾರು ಗಿಡಗಳ ಬಟಾನಿಕಲ್ ಹೆಸರು ಅವರ ಬಾಯಲ್ಲೇ ಇತ್ತು. ಅವರು ಓದು-ಬರಹ ಬಲ್ಲವರಲ್ಲ, ನಗರದಲ್ಲಿ ಹುಟ್ಟಿ ಬೆಳೆದವರಲ್ಲ. ಉಚ್ಚಾರಣೆಯಲ್ಲಿ ತಪ್ಪಿದ್ದರೂ, ತಪ್ಪು ಹುಡುಕುವ ಅಗತ್ಯವಿರಲಿಲ್ಲ.

ಅವರ ಹೆಸರು ಚನ್ನಪ್ಪ. 64ರ ಹರೆಯ. ಶಾಲೆಯ ಮೆಟ್ಟಿಲು ಹತ್ತದವರು. ಕನಕಪುರ ತಾಲೂಕಿನ ಸಾಸಲಪುರದವರು. ಊರಿನಲ್ಲಿ ಸ್ವಂತ ಮನೆಯಿದೆ, ಜಮೀನಿದೆ. ಪರಂಪರಾಗತವಾಗಿ ಬಂದ ಬೇಸಾಯದ ಬಗೆಗಿನ ತಿಳಿವಳಿಕೆ ಅಪಾರವಾಗಿಯೇ ಇದೆ. ಆ ಅನುಭವದಿಂದ ಅವರು, “ಬಿಬಿಎಂಪಿ ಪಾರ್ಕಿದು. ಇಲ್ಲಿ ಸೋ ಗಿಡ, ಊ ಗಿಡ ಬಿಟ್ರೆ ಇನ್ನೇನೂ ಹಾಕಂಗಿಲ್ಲ. ನಾನ್ ಬುಡ್ತಿನಾ? ಹಲಸು, ಮಾವು, ನೇರಳೆ, ಬಾದಾಮಿ ಗಿಡಾನ ಕದ್ ಹಾಕಿದೀನಿ. ಅಕ್ಕಡಿಕೆ ಬಾಳೆನೂ ಹಾಕಿದೀನಿ. ಇಲ್ನೋಡಿ… ನಿಂಬೆ ಗಿಡಾನೂ ಐತೆ. ಅನ್ನೊಂದು ತೆಂಗಿನ ಸಸಿನೂ ಮಡಗಿದೀನಿ, ಅವಾಗ್ಲೆ ದಸಿ ನೂಕತಾವೆ…” ಎಂದರು.

ತಕ್ಷಣ, ಅವರ ಕೆಲಸ, ಸಂಬಳ ತಲೆಯಲ್ಲಿ ತೇಲಿಹೋಗಿ, “ನಿಮಗೇನ್ ತೊಂದರೆ ಇಲ್ವಾ?” ಎಂದೆ.

“ಈ ವಯಸ್ನಲ್ಲಿ ನನ್ಗೆಂತ ತೊಂದ್ರೆ? ಆದ್ರಾಗ್ಲಿ ಬುಡಿ…” ಎಂದವರು ಸ್ವಲ್ಪ ಹೊತ್ತು ಸುಮ್ಮನಾದರು. ಆಮೇಲೆ ಏನನ್ನಿಸಿತೋ, “ಪ್ರಾಣಿ-ಪಕ್ಷಿಗಳ್ಗೆ ತೊಂದ್ರೆ ಆಗ್ಬಾರ್ದು. ಅಣ್ಣಿನ್ ಗಿಡಯಿದ್ರೆ ಅಳ್ಳಿಕುಂಚ, ಅಕ್ಕಿ-ಪಕ್ಸಿಗಳು ಬತ್ತವೆ, ಕಿಚಕಿಚ ಅಂತವೆ, ಅಣ್ ತಿಂತವೆ, ಬೀಜ ಬಿತ್ತವೆ, ಗಿಡ ಎಚ್ಚಾಯ್ತವೆ, ಅಸರಾಯ್ತದೆ… ಅಲ್ವೇ?” ಎಂದರು.

ಗಿಡ ಮರ ನಮ್ ಜನ ಬಸವರಾಜು ಮೇಗಲಕೇರಿ

ಚನ್ನಪ್ಪನವರು ಗಿಡ-ಮರಗಳ ಬಗೆಗಷ್ಟೇ ಅಲ್ಲ, ಪ್ರಾಣಿ-ಪಕ್ಷಿಗಳು, ಕ್ರಿಮಿಕೀಟಗಳ ಚಲನವಲನ, ಅವುಗಳ ಆಹಾರ ಸರಪಳಿ, ಮರಿ ಮಾಡುವಿಕೆ, ಪೋಷಣೆ, ವಲಸೆ, ವಂಶಾಭಿವೃದ್ಧಿಗಳ ಬಗ್ಗೆ ಅಪಾರ ಜ್ಞಾನವಿರುವವರು. ಆದರೆ, ಅದನ್ನವರು ಜ್ಞಾನವೆಂದು ಭಾವಿಸುವುದಿಲ್ಲ, ತನಗೆ ಗೊತ್ತಿದೆ ಎಂದು ಹೇಳಿಕೊಳ್ಳುವುದೂ ಇಲ್ಲ. ನಾವು ತಿಳಿದಿರಬೇಕಾದ ಸಾಮಾನ್ಯ ತಿಳಿವಳಿಕೆ ಎಂದು ತಣ್ಣಗಿರುವವರು. ಅವರಲ್ಲಿನ ಜ್ಞಾನವನ್ನು ಹೊರಗೆಳೆಯುವ ತಂತ್ರವಾಗಿ, “ಸಾಸಲಪುರದೋರು… ಇಲ್ಲಿಗೆಂಗ್ ಬಂದ್ರಿ?” ಅಂದೆ.

“ಅಯ್ಯೋ… ಅದೊಂದು ದೊಡ್ ಕತೆ ಬುಡಿ. ಊರಲ್ಲಿ ಜಮೀನಿತ್ತು, ಬೆಳೆ ಬತ್ತಿರಲಿಲ್ಲ. ಮನಿತ್ತು, ತಿನ್ನಕ್ಕಿರಲಿಲ್ಲ. ಸಾಲ ಮಾಡ್ಕಂಡಿದ್ದೆ, ತೀರ್ಸಕ್ಕಾಯ್ತಿರಲಿಲ್ಲ. ಬೆಂಗಳೂರಲ್ಲಿ ಕೆಲಸಕ್ಕಿದ್ದ ನಮ್ ಊರ್ನ ಪಕ್ಕದೋನು ಒಂದ್ಸಲ ಸಿಕ್ದ; ‘ಇಲ್ಲೇನ್ ಮಾಡ್ತಿಯ ಬಾ, ಅಲ್ಲಿ ನಿಂಗೊಂದ್ ಕೆಲ್ಸ ಕೊಡಸ್ತಿನಿ’ ಅಂದ. ಬಂದೆ. ಸುಮ್ನೆ ಅಲ್ಲ, ಮನೇರಿಗೆ, ಊರೋರ್ಗೆ ಹೇಳ್ದೆ ಕೇಳ್ದೆ ಕದ್ ಬಂದೆ. ನಿಜ… ನಾನ್ ಕದ್ ಓಡ್ಬಂದೋನು…”

“…ಹೆಂಡತಿ-ಮಕ್ಕಳು ಇದ್ರು, ಅವರ್ಗೂ ಹೇಳ್ಲಿಲ್ಲ. ನನ್ ಕರಕೊಂಡ್ ಬಂದೋನು ಗವಿಪುರಂ ಗುಟ್ಟಳ್ಳಿಯ ಜಿಂಕೆ ಪಾರ್ಕಿಗೆ ಬುಟ್ಟ. ಕಳೆ ಕೀಳದು, ಗಿಡ ಕಿತ್ ಪಾಟ್ ಮಾಡದು, ಪಾತಿ ಮಾಡದು, ನೀರ್ ಹಾಕದು… ಎಲ್ಲ ಊರಲ್ಲಿ ಮಾಡ್ತಿದ್ ಹೊಲಗೆಲಸವೇ. ಅಲ್ಲೊಂದು ಆರು ತಿಂಗ್ಳಿದ್ದು, ಆಮೇಲೆ ರಾಜಾಜಿ ನಗರದ ಧೋಬಿ ಘಾಟ್ ಪಾರ್ಕಿಗೆ ಬಂದೆ, ಅಲ್ಲೊಂದು ಆರು ವರ್ಷ ಇದ್ದೆ. ಕೆಲಸ ಕಲ್ತೆ, ಬೆಂಗಳೂರಲ್ಲಿ ಬದುಕಬೋದು ಅನ್ನಿಸ್ತು, ದೈರ್ಯ ಬಂತು, ಹೋಗಿ ಹೆಂಡ್ತಿ-ಮಕ್ಕಳ್ನ ಕರಕಂಡ್ ಬಂದು ಒಂದು ಸಣ್ಣ ಮನೆ ಮಾಡ್ದೆ. ಆಮ್ಯಾಲೆ ಅವನ್ಯಾರೋ ಧೋಬಿ ಘಾಟ್ ಪಾರ್ಕಿಂದ ಓಡುಸ್ದ. ಓಡ್ಸಿದ್ದೇ ಒಳ್ಳೆದಾಯ್ತು ಅಂತ ಇಲ್ಲಿಗೆ ಬಂದೆ…” ಎಂದು ಯಾವುದೋ ಗಿಡದ ಎಲೆ ಸವರತೊಡಗಿದರು.

“ಇಲ್ಲಿಗೆ ಬಂದಾಗ ಈ ಪಾರ್ಕ್ ಹೆಂಗಿತ್ತು ಯಜಮಾನ್ರೆ?” ಎಂದೆ.

“ಎಲ್ಲಿತ್ತು? ಎರಡೂವರೆಕ್ರೆ ಜಾಗಿತ್ತು, ಬರೀ ಬೋಳ್ ಗುಡ್ಡಿತ್ತು. ಗುಡ್ಡದ್ ಮ್ಯಾಲೆ ದೊಡ್ ನೀರಿನ್ ಟ್ಯಾಂಕ್ ಇತ್ತು. ಕಲ್ ಮಂಟಿ ಇತ್ತು. ಉಬ್ಬು ತಗ್ಗಿತ್ತು. ಅಲ್ಲೊಂದು ಇಲ್ಲೊಂದು ಮರಗಳಿದ್ದೋ. ಮದ್ಲು ಮಟ್ಟ ಮಾಡ್ತಾ ಬಂದೆ. ಕೆಲ್ಸ ಕಲ್ತಿದ್ನಲ್ಲ, ಗಿಡಗೋಳ್ ಗೊತ್ತಿದ್ವಲ್ಲ, ಒಂದೊಂದೇ ತಂದು ಹಾಕ್ತ-ಹಾಕ್ತ ಆರೈಕೆ ಮಾಡ್ತಾ-ಮಾಡ್ತಾ… ಇವತ್ತು ನೀವೇ ನೋಡ್ತಿದೀರಲ್ಲ, ಅಸ್ರು ವನಾಗದೆ. ಬೆಳಗ್ಗೆ-ಸಂಜೆ 50ರಿಂದ 60 ಜನ ವಾಕಿಂಗ್ ಬತ್ತರೆ. ಆ ಕಡೆ ಜಿಮ್ಮದೆ. ಈ ಕಡೆ ಉಡ್ರು ಕರಾಟೆ ಕಲಿತವೆ. ವಯಸ್ಸಾದೋರು ಬಂದ್ ಯೋಗ ಮಾಡ್ತರೆ. ನಗೆಕೂಟ ಅಂತ ಕೆಲವ್ರು ಬಂದ್ ನಗಾಡ್ತರೆ. ಮಕ್ಳು ಆಟ ಆಡ್ತವೆ. ಇದೆಲ್ಲ ಬುಡಿ… ಪ್ರಾಣಿ-ಪಕ್ಸಿ ಬತ್ತವೆ, ಕಿಚಕಿಚ ಅಂತವೆ… ಹೆಂಗಿರ್ತದೆ ಗೊತ್ತಾ ಕೇಳಕ್ಕೆ? ಬುಟ್ಟೋಗಕೆ ಮನಸೇ ಆಗದಿಲ್ಲ…” ಎಂದು ಅವರದೇ ಲೋಕಕ್ಕೆ ಜಾರಿದರು.

ಗಿಡ ಮರ ನಮ್ ಜನ ಬಸವರಾಜು ಮೇಗಲಕೇರಿ

ಹಸಿರುವನವನ್ನು ಅವರು ದೇವಲೋಕವೆಂದು ಕರೆದರು. ಆ ಲೋಕದೊಳಗೆ ವಿಹರಿಸುತ್ತಿದ್ದಾಗ ಗುಡ್ಡದ ಮೇಲೊಂದು ದೊಡ್ಡ ನೀರಿನ ಟ್ಯಾಂಕ್ ಕಾಣಿಸಿತು. ಆ ಭಾರೀ ಗಾತ್ರದ ಟ್ಯಾಂಕ್ ಕೆಳಗೆ ಒಂದು ಮನೆ ಇತ್ತು. ಆ ಮನೆಯಲ್ಲಿ ಕುಟುಂಬವೊಂದು ಸಂಸಾರ ಹೂಡಿತ್ತು. ಅದನ್ನು ನೋಡಿದರೆ, ಅಪಾಯದ ಅಡಿಯಲ್ಲಿ ಮಲಗಿದಂತೆ ಭಾಸವಾಗುತ್ತಿತ್ತು. ಅದು ನನ್ನ ಭ್ರಮೆ ಇರಲೂಬಹುದು. ಆದರೆ, ಬೆಂಗಳೂರಿನಲ್ಲಿ ಬದುಕುವುದು ಅನಿವಾರ್ಯ ಆದಾಗ, ಬರುವ 15 ಸಾವಿರ ಸಂಬಳದಲ್ಲಿ ಇಡೀ ಕುಟುಂಬ ನಿಭಾಯಿಸುವುದು ಸಾಧ್ಯವಾಗದಿದ್ದಾಗ, ಎಲ್ಲೋ ಒಂದು ಗೂಡು ಸಿಕ್ಕಿದರೆ ಸಾಕು ಎನಿಸಿ, ಚನ್ನಪ್ಪನವರು ಅದನ್ನೇ ಮನೆಯನ್ನಾಗಿ ಮಾಡಿಕೊಂಡಿದ್ದರು. ಅವರ ಸಂಸಾರ ಅಲ್ಲಿದ್ದು ಹದಿನಾರು ವರ್ಷಗಳೇ ಉರುಳಿಹೋಗಿವೆ. ಅಲ್ಲಿಯೇ ಮಗನಿಗೆ ವಿದ್ಯಾಭ್ಯಾಸ ಕೊಡಿಸಿದ್ದಾರೆ, ಮದುವೆ ಮಾಡಿದ್ದಾರೆ, ಮಗನಿಗೆ ಎರಡು ಮಕ್ಕಳೂ ಆಗಿವೆ. ಆ ಮಕ್ಕಳು ಹತ್ತಿರದ ಗೋಕುಲ ಹೈಸ್ಕೂಲಿಗೆ ಹೋಗುತ್ತಿವೆ. ಮಡದಿ ಮತ್ತು ಸೊಸೆ, ಪಕ್ಕದ ಈಸ್ಟ್ ವೆಸ್ಟ್ ಸ್ಕೂಲಿನಲ್ಲಿ ಆಯಾ ಆಗಿ ಕೆಲಸಕ್ಕೆ ಸೇರಿದ್ದಾರೆ. ಮಗ ಪೀಣ್ಯ ಇಂಡಸ್ಟ್ರಿಯಲ್ ಏರಿಯಾದ ಕಂಪನಿಯೊಂದರ ಉದ್ಯೋಗಿಯಾಗಿದ್ದಾರೆ. ಇದೆಲ್ಲಕ್ಕೂ ಚನ್ನಪ್ಪನವರಿಂದ ಬಂದ ಒಂದೇ ಮಾತು, “ಏನೋ… ಶಿವಾ ಅಂಬ್ಲಿ ಕುಡಿಯಂಗಿಟ್ಟವ್ನೆ…” – ಹೀಗನ್ನುತ್ತಲೇ ಕತ್ತು ಮೇಲೆತ್ತಿ ಆಕಾಶ ನೋಡಿದರು.

ಆಕಾಶವನ್ನು ಅವರು ಸುಮ್ಮನೆ ನೋಡಿದ್ದಲ್ಲ. “ಆಕಾಸದ ಅಗಲಾನೂ ಬೂಮ್ತಾಯಿಯ ಆಳಾನೂ ಅಳ್ದರುಂಟೆ? ಎಲ್ಲ ದೇವ್ರು ಕೊಟ್ಟುದ್ದು. ಅವುನ್ ಕೊಡ್ದೆ ಹೋಗಿದ್ರೆ ಇದೆಲ್ಲ ಎಲ್ಲಿರ್ತಿತ್ತು?” ಎಂದು ಪ್ರಶ್ನೆ ಹಾಕಿದರು. ಪ್ರಕೃತಿಯನ್ನು ಚನ್ನಪ್ಪನವರು ದೇವರಿಗೆ ಹೋಲಿಸಿದ್ದರು. ಅವರೇ ಮುಂದುವರಿದು, “ಅತಿಯಾಸೆ ಜನ, ನಂದು-ನಂದು ಅಂತರೆ. ಎಲ್ಲ ನಂಗೆ ಬೇಕು ಅಂತರೆ. ದುಡ್ ಮಾಡ್ಬೇಕು ಅಂತರೆ. ದುಡ್ನೇನ್ ತಿನ್ನಕ್ಕಾದುತೆ? ಬುಟ್ಟೋಗಲೇಬೇಕು… ಅದೇ ಗಿಡ-ಮರ ಬೆಳ್ಸಿದ್ರೆ, ನೀನಲ್ಲ, ನಿನ್ನ ಮಮ್ಮಕ್ಳು, ಮರಿಮಕ್ಕಳ ಕಾಲಕ್ಕೂ ನೀರು-ನೆಳ್ಳು, ಊ-ಅಣ್ಣು ಕೊಡ್ತನೇ ಇರ್ತವೆ. ಕೊಟ್ಟು ತಣ್ಣಗಿರ್ತವೆ. ನಾನ್ ಕೊಟ್ಟೆ ಅಂತ ಹೇಳ್ತವಾ?” ಎಂದು ಮತ್ತೊಂದು ಪ್ರಶ್ನೆ ವಗಾಯಿಸಿದರು. ಸುಗಂಧರಾಜ ರೀತಿಯ ಹೂ ಉದುರಿದ್ದ ಮರದ ಬುಡದಲ್ಲಿ ನಿಂತು, “ಇದೈತಲ್ಲ, ಇದು ಆಕಾಶ ಮಲ್ಗೆ ಅಂತ… ಇದು ಊನಲ್ಲೇ ಶ್ರೇಷ್ಠವಾದ್ದು, ಊಗಳ ತಾಯಿಯಿದ್ದಂಗೆ. ಶಿವಾ ಪಾರ್ವತಿಗೆ ವರ ಕೊಡ್ವಾಗ, ಪಾರ್ವತಿ ಇದ್ನ ಕೇಳಿ ಪಡೆದಿದ್ಳಂತೆ. ಈ ಊವಲ್ಲೇ ನನಗೆ ಪೂಜೆ ಮಾಡ್ಲಿ ಅಂತ ಕೇಳ್ಕಂಡಿದ್ಲಂತೆ…” ಎಂದು ಹೂವಿನ ಕತೆ ಹೇಳಿದರು.

ಗಿಡ ಮರನಮ್ ಜನ ಬಸವರಾಜು ಮೇಗಲಕೇರಿ
ಚನ್ನಪ್ಪನವರೊಂದಿಗೆ ಲೇಖಕರು

ಈ ಮಾತುಕತೆಯ ನಡುವೆ, ನನ್ನ ತಲೆಯಲ್ಲಿ ದೊಡ್ ಟ್ಯಾಂಕ್, ಆ ಟ್ಯಾಂಕ್ ಕೆಳಗೇ ಸಂಸಾರ, ಅಪಾಯ ತಲೆ ತುಂಬಿ, ಅದನ್ನು ಕೇಳುವುದು ಹೇಗೆ ಎಂದು ಯೋಚಿಸುತ್ತ, “ಟ್ಯಾಂಕಿರದ್ರಿಂದ ನೀರಿಗೇನೂ ತೊಂದ್ರೆ ಇಲ್ಲ ಅಲ್ವಾ ಯಜಮಾನ್ರೆ?” ಎಂದೆ.

“ಅಯ್ಯೋ… ಟ್ಯಾಂಕೈತೆ, ನೀರಿಲ್ಲ. ನೀರು ತುಂಬಸದೂ ಇಲ್ಲ, ಎಲ್ಗೂ ಸಪ್ಲೇನೂ ಇಲ್ಲ. ಸುಮ್ನೆ ಟ್ಯಾಂಕೈತೆ,” ಎಂದವರು, “ಅಗೋ ಅಲ್ಲಿ, ಒಂದು ಬೋರೈತೆ. ಬೇಕಾದಷ್ಟು ನೀರು ಸಿಕ್ತದೆ. ಗಿಡಗಳಿಗೆ ದಿನಾ ನೀರ್ ಹಾಕ್ಬೇಕು, ಮಳೆ ಬಂದ್ರೆ ಬ್ಯಾಡ. ನಾನೇನಾರ ಊರ್‍ಗೋದ್ರೆ, ಮಗ ನೀರ್ ಹಾಕಿ ನೋಡ್ಕತನೆ,” ಎಂದರು.

“ಅಲ್ಲಾ ಯಜಮಾನ್ರೆ… ತೊಂದ್ರೆ ಗಿಂದ್ರೆ…?” ಎಂದು ಮಾತು ಮುಂದುವರಿಸುವ ಮುನ್ನವೇ, “ಉಳಾ ಉಪ್ಟೆಯಿಂದ್ಲು ತೊಂದ್ರಿಲ್ಲ. ಮನುಷ್ಯರಿಂದ್ಲು ತೊಂದ್ರಿಲ್ಲ. ತಣ್ಣಗಿದಿನಿ,” ಎಂದರು. ಕತ್ತೆತ್ತಿ ಟ್ಯಾಂಕ್ ನೋಡಿದೆ, ಅದು ಅವರಿಗೆ ಅರ್ಥವಾಯಿತು. “ಬೆಂಗ್ಳೂರಲ್ಲಿ ಎಂಥೆಂಥ ಬಿಲ್ಡಿಂಗ್ ಎದ್ದವೇ… ಮೂರು ಮಹಡಿ ಇರವೂ ಅವೆ, ಮುನ್ನೂರು ಮಾಡಿ ಇರವೂ ಅವೆ; ಅದರಲ್ಲಿ ವಾಸ ಮಾಡೋರೆಲ್ಲ ಭಯ ಬೀಳ್ತರಾ? ಅವ್ರು ಬದಕಿಲ್ವಾ? ಎಲ್ಲಾರೂ ಒಂದಿನ ಹೋಗ್ಲೇಬೇಕು, ಯಾರಿಗ್ಗೊತ್ ಎಲ್ಲೋಯ್ತಿವಿ ಅಂತ…” ಎಂದು ಬಾಯಿ ಮುಚ್ಚಿಸಿದರು.

ಅವರನ್ನು ಆ ಮೂಡಿನಿಂದ ಹೊರತರಲು, “ಇಂಥಾ ಒಳ್ಳೆ ಪಾರ್ಕ್ ಮಾಡಿದ್ದೀರ… ಇಲ್ಲೇ ಇದ್ದು ನೋಡ್ಕೋತಿದೀರ… ಈ ಪಾರ್ಕ್‌ನ ನಿಮಗೇ ಕೊಟ್ರೆ ಒಳ್ಳೆದೇನೋ…” ಎಂದೆ.

“ಅಯ್ಯೋ… ಎಲ್ಲಾದ್ರು ಉಂಟೆ? ನಮ್ದೇ ನಮ್ಗಿಲ್ಲ, ನಮಗ್ಯಾಕಪ್ಪ! 64 ವರ್‍ಸ ಆಯ್ತು. ಸುಗರ್ ಬ್ಯಾರೆ ಬಂದದೆ. ಕಣ್ ಸರೀಗ್ ಕಾಣ್ತಿಲ್ಲ, ಅದೇ ಒಂಚೂರು ಪೀಲಿಂಗು. ಊರ್ಬುಟ್ಟು ಓಡ್ಬಂದೋನು, ಈ ಬೆಂಗ್ಳೂರು ನನ್ನಂಥೋನ್ಗೂ ತಾವ್ ಕೊಡ್ತು. ಇಪ್ಪತ್ನಾಕ್ ವರ್ಷ ಹೋಗಿದ್ದೇ ಗೊತ್ತಾಗಲಿಲ್ಲ…” ಎಂದವರು, ಗಿಡ-ಮರಗಳನ್ನು ನೋಡಿ, “ಅವು ನನ್ ನೋಡ್ಕಂಡೋ, ನಾನು ಅವುನ್ ನೋಡ್ಕಂಡೆ. ಅವೂ ಚೆನ್ನಾಗವೆ, ನಾನೂ ಚೆನ್ನಾಗಿದೀನಿ. ಇನ್ನೇನು ಬೇಕು?” ಎಂದು ಮತ್ತೆ ಆಕಾಶ ನೋಡಿದರು.

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನಯಾನ | ಸನಾತನ ಧರ್ಮವು ಶರಣ ಧರ್ಮಕ್ಕೆ ಶರಣಾಗತವಾಗಿದೆ

ಶರಣರು ಸನಾತನ ಬ್ರಾಹ್ಮಣ ಧರ್ಮದ ಷಡ್ದರ್ಶನ ಪರಿಕಲ್ಪನೆಯನ್ನು ಹಾಗೂ ಸಮಯಾದಿ ಶೈವಗಳೆಲ್ಲವನ್ನು...

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

Download Eedina App Android / iOS

X