ಕೃಷಿ ವೆಚ್ಚದ ಹೊರೆ, ಬೆಲೆ ಏರಿಕೆ ಮತ್ತು ಮಾರುಕಟ್ಟೆಯ ಅನಿಶ್ಚಿತತೆಯಿಂದಾಗಿ ರೈತ ಸಮುದಾಯ ತೀವ್ರ ಸಂಕಷ್ಟದಲ್ಲಿದೆ. ಈ ಸಂದರ್ಭದಲ್ಲಿ ಸರ್ಕಾರವು ರಸಗೊಬ್ಬರಗಳ ಮೇಲಿನ ಸಬ್ಸಿಡಿ ಹೆಚ್ಚಿಸುವುದು, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು, ಸರಿಯಾದ ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸುವುದು ಮತ್ತು ರೈತರ ಆದಾಯವನ್ನು ಸುಧಾರಿಸುವಂತಹ ದೀರ್ಘಕಾಲಿಕ ಯೋಜನೆಗಳನ್ನು ತ್ವರಿತವಾಗಿ ಜಾರಿಗೊಳಿಸುವುದು ಅತ್ಯಂತ ಅಗತ್ಯವಾಗಿದೆ.
ರಾಜ್ಯದಲ್ಲಿ ಮುಂಗಾರು, ಹಿಂಗಾರು ಹಂಗಾಮಿಗೆ ಸಿದ್ಧತೆ ನಡೆಸುತ್ತಿರುವ ರೈತರಿಗೆ ರಸಗೊಬ್ಬರ ಬೆಲೆ ಗಗನಕ್ಕೆ ಏರಿದ್ದು ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಬಿತ್ತನೆ ಮಾಡುವುದೇ ದುಸ್ತರವಾಗಿದೆ. ರೈತರು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಸಿಗದೆ ನಷ್ಟ ಅನುಭವಿಸುತ್ತಿರುವ ಈ ಸಂದರ್ಭದಲ್ಲಿ ಕೃಷಿ ವೆಚ್ಚದ ಹೊರೆಯಿಂದ ರೈತರಿಗೆ ತೀವ್ರ ಸಂಕಷ್ಟದ ಸ್ಥಿತಿ ಎದುರಾಗಿದೆ.
ಕೃಷಿ ಇಲಾಖೆಯಿಂದ ಎಕರೆಗೆ ಒಂದು ಮೂಟೆ ರಸಗೊಬ್ಬರ ನೀಡುತ್ತಿದ್ದು, ಇದು ಸಾಕಾಗುತ್ತಿಲ್ಲ, ಕನಿಷ್ಠ ನಾಲ್ಕು ಮೂಟೆಗಳನ್ನಾದರೂ ನೀಡಬೇಕೆಂಬುದು ರೈತರ ಒತ್ತಾಯವಾಗಿದೆ. ಇದಲ್ಲದೆ ಕೆಲವರು ಗೊಬ್ಬರದ ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಪುಟ್ಟಣ್ಣಯ್ಯ ಬಣದ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಟಿ ಕೆ ಅರುಣ್ ರವರು ಈ ದಿನ. ಕಾಮ್ಗೆ ಪ್ರತಿಕ್ರಿಯೆ ನೀಡಿದ್ದು, “ರೈತರಿಗೆ ಸರಿಯಾದ ನಿಟ್ಟಿನಲ್ಲಿ ರಸಗೊಬ್ಬರ ನೀಡಬೇಕು ಹಾಗೂ ಬೆಲೆಯನ್ನು ಕಡಿಮೆ ಮಾಡಬೇಕೆಂದು ಜಿಲ್ಲಾಧಿಕಾರಿ ಕಚೇರಿ ಹಾಗೂ ಶಿಡ್ಲಘಟ್ಟ ತಾಲೂಕು ಕಚೇರಿ ಬಳಿ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ. ಕೃಷಿ ಇಲಾಖೆಯಿಂದ ನೀಡುತ್ತಿರುವ ರಸಗೊಬ್ಬರ ರೈತರಿಗೆ ಸಾಕಾಗುತ್ತಿಲ್ಲ. ಸರ್ಕಾರ ರಸಗೊಬ್ಬರಗಳ ಬೆಲೆಯನ್ನು ಕೂಡಲೇ ಇಳಿಸಬೇಕು, ರೈತರಿಗೆ ನೇರ ನಗದು ವರ್ಗಾವಣೆ(ಡಿಬಿಟಿ) ಮೂಲಕ ಹೆಚ್ಚುವರಿ ಸಹಾಯ ಧನ ಒದಗಿಸಬೇಕು” ಎಂದು ಒತ್ತಾಯಿಸಿದರು.
“ರೈತರು ಬೆಳೆದ ಬೆಳೆಗೆ ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ವೈಜ್ಞಾನಿಕ ಬೆಂಬಲ ಬೆಲೆ ನೀಡಬೇಕು. ರೈತರು ಕೇಳಿದ ಗೊಬ್ಬರ ನೀಡಬೇಕು, ಡೀಲರ್‌ಗಳು ತಮಗೆ ಇಷ್ಟವಾದ ರೀತಿಯಲ್ಲಿ ರೈತರಿಗೆ ಬೇರೆ ಗೊಬ್ಬರಗಳನ್ನು ನೀಡುವುದನ್ನು ಸರ್ಕಾರ ತಡೆಯಬೇಕು, ಕೃಷಿ ಚಟುವಟಿಕೆಗಳಿಗೆ ರಿಯಾಯಿತಿ ದರದಲ್ಲಿ ಡೀಸೆಲ್ ನೀಡಬೇಕು, ಕಾಳಸಂತೆಯಲ್ಲಿ ಗೊಬ್ಬರ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದರು.
“ರೈತರು ಒಂದು ಎಕರೆ ಜಮೀನಿನಲ್ಲಿ ಕೃಷಿ ಮಾಡಬೇಕಾದರೆ ನಾಲ್ಕರಿಂದ ಐದು ಮೂಟೆ ರಸಗೊಬ್ಬರ ಬೇಕಾಗುತ್ತದೆ. ಆದರೆ ಕೃಷಿ ಇಲಾಖೆಯಿಂದ ನೀಡುವ ಒಂದು ಮೂಟೆ ಸಾಕಾಗುವುದಿಲ್ಲ, ಹಾಗಾಗಿ ರೈತರಿಗೆ ಹೆಚ್ಚು ರಸಗೊಬ್ಬರ ನೀಡಬೇಕು. ರಸಗೊಬ್ಬರದ ಮೇಲೆ ₹400 ಬೆಲೆ ಹೆಚ್ಚು ಮಾಡಿದ್ದು, ಕೂಡಲೇ ಬೆಲೆ ಕಡಿತಗೊಳಿಸಬೇಕು. ರೈತರನ್ನು ಉದ್ದಾರ ಮಾಡುವ ಯೋಚನೆ ಸರ್ಕಾರಕ್ಕೆ ಇದ್ದರೆ ರೈತರಿಗೆ ಬೆಂಬಲ ಬೆಲೆ ನೀಡಬೇಕು. ಸಬ್ಸಿಡಿಯಲ್ಲಿ ರಸಗೊಬ್ಬರ ನೀಡಬೇಕು. ಬಿತ್ತನೆ ಬೀಜಗಳನ್ನು ಕಡಿಮೆ ಬೆಲೆಗೆ ನೀಡಿದರೆ ರೈತರಿಗೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ನಷ್ಟವಾಗುತ್ತದೆ. ಹಾಗಾಗಿ ಸರ್ಕಾರ ರೈತರಿಗೆ ಹೆಚ್ಚು ರಸಗೊಬ್ಬರ ನೀಡಬೇಕು” ಎಂದು ಗೌರಿಬಿದನೂರು ತಾಲೂಕಿನ ರೈತ ಹರ್ಷವರ್ಧನ್ ಈ ದಿನ.ಕಾಮ್‌ಗೆ ತಿಳಿಸಿದರು.
ರೈತ ರವಿಚಂದ್ರ ರೆಡ್ಡಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಮುಂಗಾರು ಪ್ರಾರಂಭವಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿಸಿರುವ ರಸಗೊಬ್ಬರದ ಬೆಲೆಯನ್ನು ಕಡಿತಗೊಳಿಸಬೇಕು. ರೈತರ ಬೇಡಿಕೆಗೆ ತಕ್ಕಂತೆ ರಸಗೊಬ್ಬರ ನೀಡಬೇಕು. ರೈತರಿಗೆ ಬೇಕಾಗುವಷ್ಟು ರಸಗೊಬ್ಬರ ಸರ್ಕಾರದ ಬಳಿ ಸ್ಟಾಕ್ ಇಲ್ಲ. ಸರ್ಕಾರ ಹಾಗೂ ಅಧಿಕಾರಿಗಳು ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸಿ ಸಮಯಕ್ಕೆ ಸರಿಯಾಗಿ ರಸಗೊಬ್ಬರ ವಿತರಣೆ ಮಾಡಬೇಕು. ಇಲ್ಲದಿದ್ದರೆ ರೈತರಿಗೆ ಬಹಳ ಅನಾನುಕೂಲವಾಗುತ್ತದೆ. ಇದರ ಜತೆಗೆ ಬಿತ್ತನೆ ಬೀಜಗಳನ್ನು ಸಮರ್ಪಕವಾಗಿ ವಿತರಣೆ ಮಾಡಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
“ಕೃಷಿ ಇಲಾಖೆಯಲ್ಲಿ ರಸಗೊಬ್ಬರ ದಾಸ್ತಾನು ಎಷ್ಟಿದೆ, ಅದಕ್ಕೆ ಅನುಗುಣವಾಗಿ ಡಿವೈಡ್ ಮಾಡಿ ವಿತರಣೆ ಮಾಡಲು ಸರ್ಕಾರ ಮುಂದಾಗಿದೆ. ಆದರೆ ಪ್ರತಿ ರೈತರಿಗೆ ಕನಿಷ್ಠ 5 ಮೂಟೆಗೂ ಅಧಿಕ ರಸಗೊಬ್ಬರ ವಿತರಣೆ ಮಾಡಬೇಕು” ಎಂದು ಹೇಳಿದರು.
ಚಿಕ್ಕಬಳ್ಳಾಪುರ ಕೃಷಿ ಅಧಿಕಾರಿ ಎಸ್ ಆಬೀದ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಜಿಲ್ಲೆಯಲ್ಲಿ ಎರಡು ತಿಂಗಳಿಗೆ ಆಗುವಷ್ಟು ರಸಗೊಬ್ಬರ ದಾಸ್ತಾನು ಇದ್ದು, ರೈತರಿಗೆ ನೀಡುವುದಕ್ಕಿಂತ ಅಧಿಕ ದಾಸ್ತಾನು ನಮ್ಮಲ್ಲಿದೆ. ಜಿಲ್ಲೆಯ ಶೇ.90ರಷ್ಟು ರೈತರ ಬಳಿ ಎಫ್‌ಐಡಿ ಇದ್ದು, ಅಂತಹ ರೈತರಿಗೆ ಎಕರೆಗೆ ಒಂದು ಸೀಜ಼ನ್‌ಗೆ ಒಂದು ಚೀಲ ರಸಗೊಬ್ಬರ ಕೊಡುತ್ತೇವೆ. ನಮ್ಮಲ್ಲಿ ರಸಗೊಬ್ಬರದ ಕೊರತೆ ಇಲ್ಲ, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ 3,566 ಮೆಟ್ರಿಕ್ ಟನ್ ಬೇಡಿಕೆ ಬಂದಿತ್ತು. ಈಗಾಗಲೇ ನಾವು 4,914 ಮೆಟ್ರಿಕ್ ಟನ್ ದಾಸ್ತಾನು ಮಾಡಿಕೊಂಡಿದ್ದೇವೆ. ಇದರಲ್ಲಿ ಎರಡು ಸಾವಿರ ಮೆಟ್ರಿಕ್ ಟನ್ ಮಾರಾಟ ಆಗಿದ್ದು, ಇನ್ನೂ ಮೂರು ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ನಮ್ಮಲ್ಲಿದೆ. ನಿಜವಾದ ರೈತರಿಗೆ ರಸಗೊಬ್ಬರ ಸಿಗುವಂತೆ ನಾವು ಮಾಡಿದ್ದೇವೆ” ಎಂದರು.
“ನಮ್ಮ ಕೃಷಿ ಇಲಾಖೆಯಲ್ಲಿ ರಾಜ್ಯಾದ್ಯಂತ ಒಂದು ನಿಯಮ ಮಾಡಿದ್ದು ಎಫ್‌ಐಡಿ ಇರುವ ರೈತರಿಗೆ ರಸಗೊಬ್ಬರ ವಿತರಣೆ ಮಾಡಬೇಕು. ಇಲ್ಲದಿದ್ದರೆ ರೈತರು ಪಾಣಿ, ಆಧಾರ್, ಪಾಸ್ ಬುಕ್ ನೀಡಿದರೆ, ಎಫ್‌ಐಡಿ ಮಾಡಿಕೊಡುತ್ತಾರೆ. ಶೇ.90ರಷ್ಟು ರೈತರು ಎಫ್‌ಐಡಿ ಮಾಡಿಸಿಕೊಂಡಿದ್ದಾರೆ. ಖಾಸಗಿ ಅಂಗಡಿಯವರು ರಸಗೊಬ್ಬರಗಳ ಮೇಲೆ ಹೆಚ್ಚಿಗೆ ಹಣ ತೆಗೆದುಕೊಂಡರೆ, ರೈತರು ನಮಗೆ ದೂರು ನೀಡಬೇಕು. ಆಗ ನಾವು ಅಂಥವರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ. ಈವರೆಗೂ ಸುಮಾರು 40 ಅಂಗಡಿಗಳಿಗೆ ನೋಟಿಸ್ ನೀಡಿದ್ದೇವೆ. ಒಂದು ಲೈಸೆನ್ಸ್ ರದ್ದು ಮಾಡಿದ್ದೇವೆ, ಇನ್ನೊಂದು ಅಂಗಡಿ ಲೈಸೆನ್ಸ್ ಸೀಜ಼್ ಮಾಡಿದ್ದೇವೆ” ಎಂದು ತಿಳಿಸಿದರು.
“ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ವರ್ತಕರ ಸಭೆ ಕರೆದು ರಸಗೊಬ್ಬರವನ್ನು ಜಾಸ್ತಿ ಬೆಲೆಗೆ ಮಾರಾಟ ಮಾಡಬಾರದು, ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆಂದು ಕಟ್ಟುನಿಟ್ಟಾಗಿ ನಿರ್ದೇಶನ ನೀಡಿದ್ದಾರೆ. ರೈತರಿಗೆ ರಸಗೊಬ್ಬರ ವಿತರಿಸಲು ಜಿಲ್ಲೆಯಲ್ಲಿ ಯಾವುದೇ ತೊಂದರೆ ಇಲ್ಲ, ರಸಗೊಬ್ಬರ ದಾಸ್ತಾನು ನಮ್ಮಲ್ಲಿ ಜಾಸ್ತಿ ಇದ್ದು, ರೈತರಿಗೆ ತೊಂದರೆಯಾಗುವುದಿಲ್ಲ. ಒಂದು ಎಕರೆಗೆ ಒಂದು ಮೂಟೆಯಂತೆ ರೈತರಿಗೆ ರಸಗೊಬ್ಬರ ನೀಡುತ್ತೇವೆ” ಎಂದರು.
ಇದನ್ನೂ ಓದಿದ್ದೀರಾ? ಹಾವೇರಿ | ಬಿತ್ತನೆ ಬೀಜಕ್ಕೆ ಭಾರೀ ಬೇಡಿಕೆ: ರೈತ ಸಂಪರ್ಕ ಕೇಂದ್ರಗಳ ಎದುರು ಕಿಕ್ಕಿರಿದ ಜನ
ಕೃಷಿ ವೆಚ್ಚದ ಹೊರೆ, ಬೆಲೆ ಏರಿಕೆ ಮತ್ತು ಮಾರುಕಟ್ಟೆಯ ಅನಿಶ್ಚಿತತೆಯಿಂದಾಗಿ ರೈತ ಸಮುದಾಯ ತೀವ್ರ ಸಂಕಷ್ಟದಲ್ಲಿದೆ. ಈ ಸಂದರ್ಭದಲ್ಲಿ ಸರ್ಕಾರವು ರಸಗೊಬ್ಬರಗಳ ಮೇಲಿನ ಸಬ್ಸಿಡಿ ಹೆಚ್ಚಿಸುವುದು, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು, ಸರಿಯಾದ ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸುವುದು ಮತ್ತು ರೈತರ ಆದಾಯವನ್ನು ಸುಧಾರಿಸುವಂತಹ ದೀರ್ಘಕಾಲಿಕ ಯೋಜನೆಗಳನ್ನು ತ್ವರಿತವಾಗಿ ಜಾರಿಗೊಳಿಸುವುದು ಅತ್ಯಂತ ಅಗತ್ಯವಾಗಿದೆ. ರೈತರು ದೇಶದ ಅನ್ನದಾತರು ಎಂಬುದನ್ನು ಮರೆಯದೆ, ಅವರ ಸಮಸ್ಯೆಗಳಿಗೆ ಸ್ಪಷ್ಟ ಮತ್ತು ಸಮಗ್ರ ಪರಿಹಾರ ನೀಡಿದಾಗ ಮಾತ್ರ ಕೃಷಿ ಕ್ಷೇತ್ರ ಪುನರುಜ್ಜೀವನಗೊಳ್ಳಲು ಸಾಧ್ಯವಾಗುತ್ತದೆ. ಇಲ್ಲವಾದರೆ ರೈತರಿಗೆ ಕೃಷಿ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಯಿದೆ.





