ಬರಕ್ಕೆ ಮಾನದಂಡ ಮುಖ್ಯವೋ, ಬದುಕು ಮುಖ್ಯವೋ?: ಸಿ. ಬೈರೇಗೌಡರ ಪ್ರಶ್ನೆ ಇಂದಿಗೂ ಪ್ರಸ್ತುತ

Date:

ಬರ ಮೊದಲು ರೈತನ ಹೊಲದಲ್ಲಿ ಕಾಣಿಸುತ್ತದೆ. ನಂತರ ಅವನ ಸಾಲ, ಮನೆಯ ಖರ್ಚು, ಜಾನುವಾರುಗಳ ಮೇವು, ಕುಡಿಯುವ ನೀರು ಸೇರಿದಂತೆ ಕೊನೆಗೆ ಸರ್ಕಾರದ ಅಂಕಿಅಂಶದಲ್ಲಿ ಕಾಣಿಸುತ್ತದೆ. ಹಾಗಾಗಿಯೇ ʼಬರಕ್ಕೆ ಮಾನದಂಡ ಮುಖ್ಯವೋ, ಬದುಕು ಮುಖ್ಯವೋ?ʼ ಎಂಬ ಎರಡು ಪ್ರಶ್ನೆಗಳಲ್ಲೂ ಉತ್ತರ ಇದೆ. ಮಾನದಂಡ ಬೇಕು. ಜೊತೆಗೆ ಮನುಷ್ಯನ ಬದುಕನ್ನು ಅರಿಯುವ ಮಾನದಂಡವೂ ಮುಖ್ಯವಾಗಬೇಕು.

ಎಲ್‌ನಿನೋ ಪರಿಣಾಮ ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿದ್ದು, ಸರ್ಕಾರ ಈಗಾಗಲೇ ಮೊದಲ ಹಂತದಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಇನ್ನೂ 25 ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸುವ ಸಾಧ್ಯತೆ ಇದೆ. ಹೆಚ್ಚಿನ ತಾಲೂಕುಗಳನ್ನು ಬರಪಟ್ಟಿಗೆ ಸೇರಿಸುವಂತೆ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಹಲವು ಕಡೆಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಬರ ಮತ್ತು ಕ್ಷಾಮದ ಭಯ ರೈತರಲ್ಲಿ ಆವರಿಸಿದ್ದು, ನೆರವಿಗಾಗಿ ಸರ್ಕಾರಗಳತ್ತ ನೋಡುತ್ತಿದ್ದಾರೆ.

- Advertisement -

ಬಹುತೇಕ ತಾಲೂಕುಗಳಲ್ಲಿ ಒಂದೇ ಒಂದು ಕಾಳು ಬಿತ್ತನೆಯೂ ಆಗಿಲ್ಲ. ವಾರ್ಷಿಕ ಖರ್ಚುವೆಚ್ಚ, ಆಹಾರಧಾನ್ಯಗಳ ಚಿಂತೆ ಒಂದೆಡೆಯಾದರೆ, ದನಕರುಗಳಿಗೆ ವರ್ಷಪೂರ್ತಿ ಮೇವು, ನೀರು ಒದಗಿಸುವುದು ಹೇಗೆ ಎನ್ನುವ ಚಿಂತೆ ರೈತರನ್ನು ಕಾಡುತ್ತಿದೆ. ಬರ ಪರಿಹಾರ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದ್ದರೂ ಕೇಂದ್ರದ ಸಹಾಯಕ್ಕಾಗಿ ಎದುರುನೋಡುತ್ತಿದೆ. ಆದರೆ, ಕೇಂದ್ರ ಸರ್ಕಾರವು ಬರ ಘೋಷಣೆಗೆ ಸಂಬಂಧಿಸಿದ ಮಾನದಂಡಗಳನ್ನು 2016ರಲ್ಲಿ ಪರಿಷ್ಕರಿಸಿರುವುದರಿಂದ ಮಾನದಂಡಗಳು ಬದಲಾಗಿವೆ. ಆ ಪ್ರಕಾರ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡುವುದಾಗಲಿ, ಕೇಂದ್ರ ಸರ್ಕಾರದಿಂದ ಧನಸಹಾಯ ಪಡೆಯುವುದಾಗಲಿ ಸವಾಲಾಗಿ ಪರಿಣಮಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ಹನಿ ನೀರಿಗೂ ಪರದಾಡುತ್ತಿರುವ ದಣ್ಣೂರು...

ಎರಡು ನಳಗಳ ಮುಂದೆ ಖಾಲಿ ಕೊಡ ಹಿಡಿದು ಗಂಟೆಗಟ್ಟಲೆ ಕಾಯುವ ಮಹಿಳೆಯರು; ಬೆಳೆ ನಷ್ಟ, ಜಾನುವಾರು ಮಾರಾಟ, ಉದ್ಯೋಗದ ಕೊರತೆಯಿಂದ ಗ್ರಾಮ ತೊರೆಯುತ್ತಿರುವ ಕುಟುಂಬಗಳು ಒಂದು ಕೊಡ ನೀರಿಗಾಗಿ ಮನೆಮನೆಯ ಮುಂದೆ ಕಾಯಬೇಕು....

‘ನನ್ನೊಳಗೆ ನೀವೊ ನಿಮ್ಮೊಳಗೆ ನಾನೊ’

ಲೇಹ್ ಲಡಾಕಿನ ಪರ್ವತ ಶ್ರೇಣಿಗಳ ನಡುವೆ ನಮ್ಮ ಕಾರು ನಿಧಾನವಾಗಿ ಸಾಗುತ್ತಿತ್ತು. ಬೇರೆ ಬೇರೆ ಬಣ್ಣಗಳ ಪರ್ವತ ಶಿಖರಗಳು, ಕೆಳಗಡೆ ಕಿಲೋಮಿಟರ್ ಉದ್ದದ ಕಿರಿದಾದ ರಸ್ತೆ, ಪಕ್ಕದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಕಾಣುವ...

ಕಾರ್ಪೊರೇಟ್‌ ಕಾಳಗ | ಮಸ್ಕ್‌ನ ಸ್ಟಾರ್‌ಲಿಂಕ್ ಮಣಿಸಿ ಅಂಬಾನಿಯ...

ಎಲಾನ್ ಮಸ್ಕ್ ಒಡೆತನದ ‘ಸ್ಟಾರ್‌ಲಿಂಕ್’ ಉಪಗ್ರಹ ಇಂಟರ್ನೆಟ್ ಭಾರತಕ್ಕೆ ಕಾಲಿಡುತ್ತಿದ್ದಂತೆ ರಿಲಯನ್ಸ್ ಜಿಯೋದ ಮಾರುಕಟ್ಟೆ ಏಕಸ್ವಾಮ್ಯಕ್ಕೆ ಭಾರಿ ಪೈಪೋಟಿ ಎದುರಾಗುವಂತೆ ಕಾಣುತ್ತಿದೆ. ಈ ಬೆನ್ನಲ್ಲೇ, ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸುರಕ್ಷತೆಯ ನೆಪವೊಡ್ಡಿ...

ಬರ ನಿರ್ವಹಣಾ ವಿಧಾನ ಪ್ರಶ್ನಿಸಿದ್ದ ಬೈರೇಗೌಡರು

2001ರ ಜುಲೈನಲ್ಲಿ ಉತ್ತರ ಕರ್ನಾಟಕದಲ್ಲಿ ಬರ ತೀವ್ರವಾಗಿದ್ದ ಸಂದರ್ಭದಲ್ಲಿ ಸಿ. ಬೈರೇಗೌಡರು ಸರ್ಕಾರದ ಬರ ನಿರ್ವಹಣಾ ವಿಧಾನವನ್ನು ಪ್ರಶ್ನಿಸಿದ್ದರು. ಜಿಲ್ಲಾಧಿಕಾರಿಗಳು, ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು ಹಾಗೂ ಇತರರನ್ನು ಒಂದೇ ವೇದಿಕೆಗೆ ಕರೆದು ನೀರಿನ ಕೊರತೆ ಸೇರಿದಂತೆ ಸಮಸ್ಯೆಗಳ ಕುರಿತು ಅವರ ಅಭಿಪ್ರಾಯ, ಸಲಹೆಗಳನ್ನು ಪಡೆಯುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ಹೇಳಿದ್ದರು.

1983 ಮತ್ತು 1986ರ ತೀವ್ರ ಬರದ ಸಂದರ್ಭಗಳಲ್ಲಿ ರಾಮಕೃಷ್ಣ ಹೆಗಡೆ ಸರ್ಕಾರವು ಸರ್ವಪಕ್ಷಗಳ ಸಭೆ, ಜಿಲ್ಲಾಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಭೆ ನಡೆಸಿ ಪರಿಹಾರದ ಮಾರ್ಗಗಳ ಬಗ್ಗೆ ಚರ್ಚಿಸಿತ್ತು. ‘ಬರ ನಿರ್ವಹಣೆ ಎಂಬುದು ಕಂದಾಯ ಇಲಾಖೆಯ ಫೈಲ್, ಮಳೆ ಅಂಕಿಅಂಶ ಮತ್ತು ಪರಿಹಾರ ಘೋಷಣೆ ಮಾತ್ರವಲ್ಲ; ಅದು ಜನರೊಂದಿಗೆ ನಡೆಸಬೇಕಾದ ರಾಜಕೀಯ ಮತ್ತು ಆಡಳಿತಾತ್ಮಕ ಸಂವಾದ’ ಎಂಬ ದೃಷ್ಟಿಕೋನ ಆಗಲೇ ಅವರಿಗಿತ್ತು.

ಸಿ. ಬೈರೇಗೌಡರ ಈ ಮಾತಿಗೆ ವಿಶೇಷ ಮಹತ್ವವಿದೆ. ಅವರು ಕೇವಲ ವಿರೋಧ ಪಕ್ಷದ ರಾಜಕಾರಣಿಯಾಗಿರಲಿಲ್ಲ. ಕೃಷಿ ಸಚಿವರಾಗಿದ್ದವರು; ಐದು ಬಾರಿ ಶಾಸಕರಾಗಿದ್ದವರು; ಕೃಷಿ ಮತ್ತು ರೈತರ ಸಮಸ್ಯೆಗಳ ಬಗ್ಗೆ ಆಳವಾದ ತಿಳಿವಳಿಕೆ ಹೊಂದಿದ್ದ ನಾಯಕರಾಗಿ ಗುರುತಿಸಿಕೊಂಡಿದ್ದರು. 2003ರಲ್ಲಿ ಅವರು ನಿಧನರಾಗುವುದಕ್ಕೆ ಕೆಲವೇ ದಿನಗಳ ಮೊದಲು ಕೂಡ ವಿಧಾನಸಭೆಯಲ್ಲಿ ನಡೆದ ಬರದ ಚರ್ಚೆಯಲ್ಲಿ ಭಾಗವಹಿಸಿದ್ದರು. ಇಂದು 25 ವರ್ಷಗಳ ನಂತರ, ಕರ್ನಾಟಕ ಮತ್ತೆ ಅಂಥದ್ದೇ ಪ್ರಶ್ನೆಗಳ ಮುಂದೆ ನಿಂತಿದೆ.

ರಾಜ್ಯದ ಮೂರನೇ ಒಂದು ಭಾಗದ ಮಳೆ ಮಾಯ

ಕರ್ನಾಟಕದಲ್ಲಿ 2026ರ ಆಗಸ್ಟ್ 26ರವರೆಗೆ ಸಾಮಾನ್ಯವಾಗಿ 666 ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ, ಕೇವಲ 465 ಮಿ.ಮೀ. ಮಳೆಯಾಗಿದೆ. ಅಂದರೆ ಶೇಕಡಾ 30ರಷ್ಟು ಮಳೆ ಕೊರತೆಯಾಗಿದೆ. ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಶೇ.41, ಮಲೆನಾಡಿನಲ್ಲಿ ಶೇ.35, ಉತ್ತರ ಒಳನಾಡಿನಲ್ಲಿ ಶೇ.31 ಹಾಗೂ ಕರಾವಳಿಯಲ್ಲಿ ಶೇ.24ರಷ್ಟು ಮಳೆ ಕೊರತೆ ದಾಖಲಾಗಿದೆ.

ಆಗಸ್ಟ್ 27ರಂದು ರಾಜ್ಯ ಸರ್ಕಾರ ಮೊದಲ ಹಂತದಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತು. ಅವುಗಳಲ್ಲಿ 89 ತಾಲೂಕುಗಳನ್ನು ತೀವ್ರ ಬರಪೀಡಿತ ಮತ್ತು 12 ತಾಲೂಕುಗಳನ್ನು ಸಾಧಾರಣ ಬರಪೀಡಿತ ಎಂದು ಗುರುತಿಸಲಾಗಿದೆ. ಈ ಘೋಷಣೆ ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ-2016ನ್ನು ನವೀಕರಿಸಿರುವ 2020ರ ಮಾನದಂಡಗಳ ಆಧಾರದ ಮೇಲೆ ನಡೆದಿದೆ. ಆದರೆ ಮಳೆ ಕೊರತೆ ಇರುವ ತಾಲೂಕುಗಳು 101 ಮಾತ್ರವಲ್ಲ, ಸರ್ಕಾರದ ಮಾಹಿತಿಯ ಪ್ರಕಾರ 29 ಜಿಲ್ಲೆಗಳ 190 ತಾಲೂಕುಗಳು ಮಳೆ ಕೊರತೆ ಅಥವಾ ತೀವ್ರ ಮಳೆ ಕೊರತೆ ಹಂತದಲ್ಲಿವೆ. ಆಗಸ್ಟ್ 26ರ ವೇಳೆಗೆ 134 ತಾಲೂಕುಗಳಲ್ಲಿ ಮೂರು ವಾರಗಳಿಗಿಂತ ಹೆಚ್ಚು ಒಣಹವೆ ದಾಖಲಾಗಿತ್ತು. ಅಂದರೆ ಅವು ಬರ ಕೈಪಿಡಿಯ ಮೊದಲ ಹಂತದ ಪರೀಕ್ಷೆಗೆ ಅರ್ಹವಾಗಿದ್ದವು. ಆದರೆ ಉಪಗ್ರಹಗಳ ಮತ್ತು ಉಳಿದ ಮಾನದಂಡಗಳ ನಂತರ 101 ತಾಲೂಕುಗಳು ಮಾತ್ರ ಮೊದಲ ಪಟ್ಟಿಗೆ ಬಂದವು.

ಹೀಗಾದರೆ ಉಳಿದ ತಾಲೂಕುಗಳಲ್ಲಿ ಬರ ಇಲ್ಲವೇ? ಮಳೆಯಾಯಿತು ಎಂದರೆ ಬರದಿಂದ ಬಚಾವು ಆಯಿತೇ?

ಬರ ಕೈಪಿಡಿ ಪ್ರಕಾರ ಮೊದಲ ಹಂತದಲ್ಲಿ ಮಳೆ ಕೊರತೆ ಮತ್ತು ಸತತ ಒಣಹವೆ ಪ್ರಮುಖ ಕಾರಣಗಳಾಗುತ್ತವೆ. ನಂತರ ಬಿತ್ತನೆಯ ಪ್ರಮಾಣ, ಬೆಳೆದಿರುವ ಬೆಳೆಗಳ ಸ್ಥಿತಿ, ಮಣ್ಣಿನ ತೇವಾಂಶ, ಅಂತರ್ಜಲ, ಕೆರೆ–ಜಲಾಶಯಗಳಲ್ಲಿನ ನೀರು ಮೊದಲಾದವುಗಳನ್ನು ಪರಿಗಣಿಸಲಾಗುತ್ತದೆ. ಉಪಗ್ರಹಗಳ ಮೂಲಕ ಅಧಿಕಾರಿಗಳು ಹೊಲಗಳಿಗೆ ತೆರಳಿ ವಾಸ್ತವ ಬೆಳೆ ಪರಿಸ್ಥಿತಿಯನ್ನು ಪರಿಶೀಲಿಸುತ್ತಾರೆ.

ವಿಜ್ಞಾನಾಧಾರಿತ ವ್ಯವಸ್ಥೆ ಬೇಕು ಎಂಬುದರಲ್ಲಿ ಅನುಮಾನವಿಲ್ಲ. ಬರವನ್ನು ರಾಜಕೀಯ ಒತ್ತಡದಿಂದ ಅಥವಾ ಊಹೆಯಿಂದ ಘೋಷಿಸಲಾಗದು. ಆದರೆ ಆ ವಿಜ್ಞಾನಾಧಾರಿತ ವ್ಯವಸ್ಥೆಯೇ ನೆಲದ ವಾಸ್ತವವನ್ನು ಸರಿಯಾಗಿ ಹಿಡಿಯದೆ ಹೋದರೆ?

2026ರಲ್ಲಿ ರಾಜ್ಯ ಸರ್ಕಾರವೇ ಅದರ ಒಂದು ವಿಚಿತ್ರತೆಯನ್ನು ಬಹಿರಂಗವಾಗಿ ಒಪ್ಪಿಕೊಂಡಿದೆ. ಒಂದು ತಾಲೂಕಿನಲ್ಲಿ ಎರಡು ವಾರ ಮಳೆಯೇ ಆಗದೆ ಬೆಳೆ ಒಣಗುತ್ತಿರಬಹುದು. ಮೂರನೇ ವಾರದಲ್ಲಿ ಒಂದೇ ದಿನ ಸ್ವಲ್ಪ ಮಳೆಯಾದರೆ ‘ಸತತ ಮೂರು ವಾರಗಳ ಒಣಹವೆ’ ಎಂಬ ತಾಂತ್ರಿಕ ಷರತ್ತು ಮುರಿಯಬಹುದು. ಆದರೆ ಅಷ್ಟರೊಳಗೆ ಬೆಳೆ ಹಾಳಾಗಿರುತ್ತದೆ. ರೈತನ ಸಂಕಷ್ಟ ಕೊನೆಗೊಳ್ಳುವುದಿಲ್ಲ. ಇಂತಹ ಸಮಸ್ಯೆಗಳ ಕಾರಣದಿಂದಲೇ ಬರವನ್ನು ಹಂತ ಹಂತವಾಗಿ ಘೋಷಿಸಬೇಕಾಗಿದೆ.

ಕೈಪಿಡಿಯಲ್ಲಿ ಬರ ಇಲ್ಲ; ರೈತನ ಹೊಲದಲ್ಲಿ ಬರ ಇದೆ

ಬಿತ್ತನೆಯ ಅಂಕಿಅಂಶವೇ ಪರಿಸ್ಥಿತಿಯ ಗಂಭೀರತೆಯನ್ನು ಹೇಳುತ್ತಿದೆ. 2026ರ ಮುಂಗಾರಿನಲ್ಲಿ ಕರ್ನಾಟಕದ ಬಿತ್ತನೆ ಗುರಿ 84.10 ಲಕ್ಷ ಹೆಕ್ಟೇರ್. ಆದರೆ ಆಗಸ್ಟ್ 21ರವರೆಗೆ ಬಿತ್ತನೆಯಾಗಿರುವುದು ಸುಮಾರು 60 ಲಕ್ಷ ಹೆಕ್ಟೇರ್ ಮಾತ್ರ. ಅಂದರೆ ಶೇ.71ರಷ್ಟು ಬಿತ್ತನೆಯಾಗಿದೆ.

104 ತಾಲೂಕುಗಳಲ್ಲಿ ಶೇ.75ಕ್ಕಿಂತ ಕಡಿಮೆ ಬಿತ್ತನೆಯಾಗಿದೆ. 42 ತಾಲೂಕುಗಳಲ್ಲಿ ಬಿತ್ತನೆಯ ಪ್ರಮಾಣ ಶೇ.25ಕ್ಕಿಂತ ಕಡಿಮೆ ಇದೆ. ತೋಟಗಾರಿಕೆ ಬೆಳೆಗಳಲ್ಲೂ 4.36 ಲಕ್ಷ ಹೆಕ್ಟೇರ್ ಗುರಿಗೆ ವಿರುದ್ಧವಾಗಿ 3.04 ಲಕ್ಷ ಹೆಕ್ಟೇರ್ ವ್ಯಾಪ್ತಿಯಲ್ಲಿ ಮಾತ್ರ ಕೃಷಿ ಚಟುವಟಿಕೆಗಳು ನಡೆದಿವೆ.

ಬರ ಎಂದರೆ ಬಿತ್ತನೆಯೇ ಆಗದೆ ಇರುವುದು ಮಾತ್ರವಲ್ಲ. ಮಳೆ ಬಂದಾಗ ಸಾಲ ಮಾಡಿ ಹೊಲ ಹಸನು ಮಾಡಿ, ಬೀಜ ಬಿತ್ತಿ, ಗೊಬ್ಬರ ಹಾಕಿದ ಬಳಿಕ ಮಳೆ ನಿಂತರೆ ರೈತನಿಗೆ ಅದೂ ಕೂಡ ದೊಡ್ಡ ಆರ್ಥಿಕ ಹೊಡೆತವೇ. ಕೆಲವೆಡೆ ಹೊಲಗಳು ಮೇಲ್ನೋಟಕ್ಕೆ ಹಸಿರಾಗಿ ಕಾಣುತ್ತಿದ್ದರೂ ರೈತನಿಗೆ ಇಳುವರಿ ದೊರೆಯದ ಸ್ಥಿತಿಯಿಂದ ‘ಹಸಿರು ಬರ’ ಉಂಟಾಗುವುದೂ ಇದೆ.

ಹೀಗಾಗಿ ‘ಹಸಿರು ಹೊಲ’ ಎಂದರೆ ಸದಾ ‘ಉತ್ತಮ ಬೆಳೆ’ ಎಂದರ್ಥವಲ್ಲ. ಹಾಗೆಯೇ ಒಂದು ದಿನ ಮಳೆ ಬಿದ್ದರೆ ‘ಬರ ಮುಗಿಯಿತು’ ಎಂದರ್ಥವೂ ಅಲ್ಲ. ಮಣ್ಣೇ ಬರವನ್ನು ಹೇಳುತ್ತಿದೆ. ಮಳೆ ಅಂಕಿಅಂಶಗಳಿಗಿಂತ ಇನ್ನೂ ಗಂಭೀರವಾದ ಚಿತ್ರ ಮಣ್ಣಿನಲ್ಲಿ ಕಾಣುತ್ತಿದೆ. ಹಾಗಾಗಿ ಕೇಂದ್ರದ ಬರ ಘೋಷಣೆಯ ಮಾನದಂಡಗಳಲ್ಲಿ ಸಮಸ್ಯೆಗಳಿರುವುದು ಗಮನಾರ್ಹ.

ತೇವಾಂಶ ಸಮರ್ಪಕತೆ ಸೂಚ್ಯಂಕದ ಪ್ರಕಾರ ಆಗಸ್ಟ್ 26ರ ವೇಳೆಗೆ ಕರ್ನಾಟಕದ 178 ತಾಲೂಕುಗಳು ಅಂದರೆ ರಾಜ್ಯದ ಸುಮಾರು ಶೇ.74ರಷ್ಟು ತಾಲೂಕುಗಳು ತೀವ್ರ ತೇವಾಂಶ ಕೊರತೆಯನ್ನು ಎದುರಿಸುತ್ತಿವೆ. 132 ತಾಲೂಕುಗಳಲ್ಲಿ ಹಿಂದಿನ ಹತ್ತು ವರ್ಷದ ಸರಾಸರಿಗಿಂತ ಹೆಚ್ಚು ಅಂತರ್ಜಲ ಮಟ್ಟವು ಕುಸಿದಿದೆ. ಉಪಗ್ರಹ ಆಧಾರಿತ ವಿಶ್ಲೇಷಣೆಯಲ್ಲೂ 165 ತಾಲೂಕುಗಳಲ್ಲಿ ಬೆಳೆಗಳ ಸಾಮಾನ್ಯ ಬೆಳವಣಿಗೆ ಕಂಡುಬಂದಿದೆಯೇ ಹೊರತು, ಇಳುವರಿಗೆ ಪೂರಕವಾಗಿಲ್ಲ.

ಜಲಾಶಯಗಳಲ್ಲೂ ಕಳೆದ ವರ್ಷದಷ್ಟೇ ನೀರಿಲ್ಲ. ಇದೇ ಅವಧಿಯಲ್ಲಿ ಕಳೆದ ವರ್ಷ 815.70 TMC ನೀರು ಸಂಗ್ರಹವಾಗಿದ್ದರೆ, ಈ ವರ್ಷ ಸುಮಾರು 684.09 TMC ಮಾತ್ರ ಇದೆ. ಅಂದರೆ ಬರವೆಂಬುದು ಕೇವಲ ಆಕಾಶದಲ್ಲಿ ಮಾತ್ರವಲ್ಲದೆ, ಜಮೀನು, ಬಾವಿ, ಕೆರೆ, ಜಲಾಶಯ, ಬೆಳೆ ಹಾಗೂ ಗ್ರಾಮೀಣ ಆರ್ಥಿಕತೆಯಲ್ಲೂ ಕಾಣುತ್ತಿದೆ. ಬರ ಘೋಷಣೆ ಇಲ್ಲದಿದ್ದರೆ ಸಂಕಷ್ಟವೂ ಅಧಿಕೃತವಾಗುವುದಿಲ್ಲ. ಬರ ಕೈಪಿಡಿಯ ಮಾನದಂಡಗಳು ಆಡಳಿತಾತ್ಮಕ ಸಮಸ್ಯೆಯಿಂದ ಸಾಮಾಜಿಕ ನ್ಯಾಯದ ಪ್ರಶ್ನೆಯಾಗುತ್ತವೆ.

ಒಂದು ತಾಲೂಕನ್ನು ಬರಪೀಡಿತವೆಂದು ಅಧಿಕೃತವಾಗಿ ಘೋಷಿಸುವುದರಿಂದ ಪರಿಹಾರಕ್ಕೆ ದಾರಿ ಕಾಣುತ್ತದೆ. ಕುಡಿಯುವ ನೀರು, ಉದ್ಯೋಗ, ಬೆಳೆನಷ್ಟ ಪರಿಹಾರ, ಜಾನುವಾರುಗಳಿಗೆ ಮೇವು ಸೇರಿದಂತೆ ಹಲವು ಕ್ರಮಗಳಿಗೆ SDRF ಮತ್ತು ವಿಪತ್ತು ಪರಿಹಾರ ವ್ಯವಸ್ಥೆಗಳನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ.

ಹಾಗಾಗಿ ಒಂದು ತಾಲೂಕು ಪಟ್ಟಿಯೊಳಗೆ ಇದೆಯೇ ಅಥವಾ ಹೊರಗೆ ಇದೆಯೇ ಎಂಬುದು ಕೇವಲ ಸರ್ಕಾರಿ ಅಧಿಸೂಚನೆಯ ವಿಷಯವಲ್ಲ. ಆ ರೈತನಿಗೆ ಪರಿಹಾರ ಸಿಗುತ್ತದೆಯೇ ಇಲ್ಲವೇ ಎಂಬ ಪ್ರಶ್ನೆಯೂ ಆಗುತ್ತದೆ. ಇದಕ್ಕೆ ಪ್ರತ್ಯಕ್ಷ ಉದಾಹರಣೆ ಧಾರವಾಡ. ಸರ್ಕಾರದ ಮೊದಲ ಪಟ್ಟಿಯಲ್ಲಿ ಜಿಲ್ಲೆಯ ಎಲ್ಲಾ ಎಂಟು ತಾಲೂಕುಗಳೂ ಹೊರಗುಳಿದಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಲವು ವಾರಗಳಿಂದ ಬರ ಘೋಷಣೆಗೆ ಒತ್ತಾಯಿಸಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದರೂ, ಮೊದಲ ಪಟ್ಟಿಯಲ್ಲಿ ಸ್ಥಾನ ಸಿಗದಿರುವುದರಿಂದ ಕೇಂದ್ರದ ಮಾನದಂಡಗಳ ಕುರಿತ ಪ್ರಶ್ನೆಗಳು ಎದ್ದಿವೆ.

ಬೀದರ್‌ನಲ್ಲೂ ಔರಾದ್, ಕಮಲನಗರ, ಹುಲಸೂರು ಮತ್ತು ಭಾಲ್ಕಿ ತಾಲೂಕುಗಳು ತೀವ್ರ ಮಳೆ ಕೊರತೆಯ ನಡುವೆಯೂ ಮೊದಲ ಪಟ್ಟಿಯಿಂದ ಹೊರಗುಳಿದಿವೆ ಎಂಬ ಆಕ್ಷೇಪ ಕೇಳಿಬಂದಿದೆ.

ಅಂದರೆ ಬೆಳೆನಷ್ಟ ಅನುಭವಿಸಿರುವ ರೈತರ ಸಂಕಷ್ಟವನ್ನು ಆಡಳಿತ ವ್ಯವಸ್ಥೆ ಕೇಳುತ್ತಿದೆಯೇ ಎಂದು 2001ರಲ್ಲಿ ಸಿ. ಬೈರೇಗೌಡರು ಕೇಳಿದ್ದ ಪ್ರಶ್ನೆ ಮತ್ತೆ ಮುನ್ನಲೆಗೆ ಬರುತ್ತಿದೆ. ಇಂದು ಬರ ಕೈಪಿಡಿ ವಿರುದ್ಧ ರೈತ ಸಂಘಟನೆಗಳಿಂದ ಟೀಕೆ ವ್ಯಕ್ತವಾಗುತ್ತಿದೆ. ಇನ್ನೂ ಕುತೂಹಲಕರ ಸಂಗತಿಯೆಂದರೆ ರಾಜ್ಯ ಸರ್ಕಾರವೂ ಅದರ ಮಿತಿಗಳನ್ನು ಒಪ್ಪಿಕೊಂಡಿದೆ.

2023ರಲ್ಲಿಯೇ ಕರ್ನಾಟಕ ಸರ್ಕಾರವು ಕೇಂದ್ರಕ್ಕೆ ಈ ಮಾನದಂಡಗಳನ್ನು ಪರಿಷ್ಕರಿಸುವಂತೆ ಕೇಳಿತ್ತು. ಕರ್ನಾಟಕದ 14 ಕೃಷಿ-ಹವಾಮಾನ ವಲಯಗಳಿಗೆ ಒಂದೇ ರೀತಿಯ ಮಾನದಂಡ ಅನ್ವಯಿಸುವುದಕ್ಕಿಂತ ಪ್ರಾದೇಶಿಕ ವೈವಿಧ್ಯತೆಯನ್ನು ಪರಿಗಣಿಸಬೇಕು ಎಂಬ ವಾದವನ್ನು ರಾಜ್ಯ ಮುಂದಿಟ್ಟಿತ್ತು. ಮಳೆ ಎಷ್ಟು ಬಂತು ಎಂಬುದಕ್ಕಿಂತ ಯಾವಾಗ, ಎಲ್ಲಿ, ಎಷ್ಟು ಅಂತರದಲ್ಲಿ ಬಂತು ಎಂಬುದೂ ಮಹತ್ವದ್ದು ಎಂಬುದನ್ನು ತಜ್ಞರು ಮತ್ತು ಸರ್ಕಾರ ಒತ್ತಿ ಹೇಳಿತ್ತು. ಅಲ್ಲದೆ ಹಾಲಿಗೃಹ ಸಚಿವ ಪ್ರಿಯಾಂಕ್ ಖರ್ಗೆ ಕೂಡ ನಿಯಮ ಸಡಿಕಿಸುವಂತೆ ಇತ್ತೀಚೆಗೆ ಒತ್ತಾಯಿಸಿದ್ದರು. ಇವೆಲ್ಲವೂ 2026ರ ಪರಿಸ್ಥಿತಿಗೆ ಹೊಸ ಸಾಕ್ಷಿ ನೀಡುತ್ತಿವೆ.

ಕೇಂದ್ರ ಹೇಗೆ ನೆರವು ನೀಡುತ್ತದೆ?

ಕೇಂದ್ರವು, ತಜ್ಞರ ತಂಡದ ಶಿಫಾರಸಿನ ಆಧಾರದಲ್ಲಿ ಬರದ ತೀವ್ರತೆ, ಬಾಧಿತ ಪ್ರದೇಶ ಮತ್ತು ಬೆಳೆ ನಷ್ಟ ಇತ್ಯಾದಿ ಆಧರಿಸಿ ಎನ್‌ಡಿಆರ್‌ಎಫ್‌ನಿಂದ ನಿಗದಿತ ಮೊತ್ತವನ್ನು ಬಿಡುಗಡೆ ಮಾಡುತ್ತದೆ. ಕೇಂದ್ರದ ನೆರವಿನ ಯೋಜನೆಗಳಲ್ಲಿ ಶೇ.10ರಷ್ಟು ಹಣವನ್ನು ಬರ ಪರಿಹಾರಕ್ಕೆ ಬಳಸಲೂ ಅವಕಾಶವಿದೆ. ವಿಬಿಜಿ ರಾಮ್‌ ಜಿ, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ, ಜಲ ಸಂರಕ್ಷಣಾ ಯೋಜನೆಗೆ ಹೆಚ್ಚಿನ ನೆರವು ನೀಡಲಾಗುತ್ತದೆ. ಕೃಷಿಗೆ ನೆರವು. ಮೇವು ಉತ್ಪಾದನೆ ಮತ್ತು ನೀರು ಪೂರೈಕೆ ಕಾರ್ಯಕ್ರಮಗಳನ್ನು ಉತ್ತೇಜಿಸಲಾಗುತ್ತದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಮಳೆ ಆಧಾರಿತ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮಮುಂತಾದ ಯೋಜನೆಗಳ ಮೂಲಕ ದೀರ್ಘಾವಧಿಯ ನೆರವು ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಇವೆಲ್ಲವೂ ಸಮರ್ಪಕವಾಗಿ ಕಾರ್ಯರೂಪಕ್ಕೆ ಬರುತ್ತವೆಯೇ?

ಕರ್ನಾಟಕದಲ್ಲಿ ಎಲ್ಲೆಡೆ ಒಂದೇ ಮಾದರಿಯ ಕೃಷಿಯಿಲ್ಲ. ಕೋಲಾರದ ಮಳೆಯಾಧಾರಿತ ಕೃಷಿ, ವಿಜಯಪುರದ ಒಣಭೂಮಿ, ಮಲೆನಾಡಿನ ಹೆಚ್ಚಿನ ಮಳೆ ಪ್ರದೇಶ, ಮಂಡ್ಯದ ಕಾಲುವೆ ನೀರಾವರಿ ಪ್ರದೇಶ, ಉತ್ತರ ಕರ್ನಾಟಕದ ತೊಗರಿ–ಜೋಳದ ಕೃಷಿ ಇವೆಲ್ಲವನ್ನೂ ಒಂದೇ ರೀತಿಯ ಮಳೆಯಾಧಾರಿತವಾಗಿ ಅಳೆಯುವುದು ಎಷ್ಟು ವೈಜ್ಞಾನಿಕ?

ಬರ ಎಂದರೆ ‘ಮಳೆ ಕಡಿಮೆ’ ಮಾತ್ರವಲ್ಲ; ಮಳೆಯ ಸಮಯ ತಪ್ಪಿದರೂ ಬರ. ಬಿತ್ತಿದ ನಂತರ ಮಳೆ ನಿಂತರೂ ಬರ. ನಾಲ್ಕು ಮಳೆಗಳು ಒಟ್ಟಿಗೆ ಸುರಿದು ನಂತರ ತಿಂಗಳು ಒಣಗಿದರೂ ಬರ. ಹೊಲ ಹಸಿರಾಗಿದ್ದು ಕಾಳು ಕಟ್ಟದಿದ್ದರೂ ಬರ. ಬಾವಿ ಒಣಗಿದರೂ ಬರ. ಮೇವು ಮುಗಿದರೂ ಬರ. ಕೃಷಿಕನ ಆದಾಯ ಕುಸಿದರೂ ಅದು ಬರದ ಪರಿಣಾಮವೇ ಆಗಿರುತ್ತದೆ.

ಪರಿಹಾರ ಹಣವೇ ಬರ ನಿರ್ವಹಣೆಯಲ್ಲ. ಪ್ರಸ್ತುತ ಸರ್ಕಾರ ಬರ ನಿರ್ವಹಣೆಗೆ ₹635 ಕೋಟಿ ಮೀಸಲಿಟ್ಟಿರುವುದಾಗಿ ತಿಳಿಸಿದೆ. ಕುಡಿಯುವ ನೀರಿಗಾಗಿ ₹306 ಕೋಟಿ ಬಿಡುಗಡೆ ಮಾಡಲಾಗಿದೆ. ಆಗಸ್ಟ್ 22ರವರೆಗೆ 758 ಗ್ರಾಮಗಳಿಗೆ 149 ಟ್ಯಾಂಕರ್ ಮತ್ತು 714 ಖಾಸಗಿ ಬೋರ್‌ವೆಲ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಮೇವು ಬೀಜ ಕಿಟ್‌ಗಳಿಗೆ ₹25 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ. ಇವು ಅಗತ್ಯ ಕ್ರಮಗಳು. ಆದರೆ ಬರ ನಿರ್ವಹಣೆಯ ಪ್ರಶ್ನೆಯನ್ನು ಟ್ಯಾಂಕರ್ ನೀರು, ಪರಿಹಾರ ಮತ್ತು ಬೆಳೆನಷ್ಟ ಪಾವತಿಗೆ ಮಾತ್ರ ಸೀಮಿತಗೊಳಿಸಬಾರದು. ಯಾಕೆಂದರೆ ಪ್ರತೀ ಮೂರು–ನಾಲ್ಕು ವರ್ಷಕ್ಕೊಮ್ಮೆ ನಾವು ಮತ್ತೆ ಅದೇ ಸಂಕಷ್ಟಕ್ಕೆ ಮರಳುತ್ತೇವೆ.

ಸಿ. ಬೈರೇಗೌಡರು 2001ರಲ್ಲಿ ‘ಸಮಸ್ಯೆಯನ್ನು ಪರಿಹರಿಸಲು ಯಾರನ್ನೆಲ್ಲಾ ಕುಳ್ಳಿರಿಸಿದ್ದೀರಿ?’ ಎಂಬ ಪ್ರಶ್ನೆ ಕೇಳಿದ್ದರು. ಇಂದು ಆ ಪ್ರಶ್ನೆಯನ್ನು ಮತ್ತಷ್ಟು ವಿಸ್ತರಿಸಿ ಕೇಳಬೇಕಾಗಿದೆ. ರೈತ ಎಲ್ಲಿದ್ದಾನೆ? ಗ್ರಾಮ ಪಂಚಾಯಿತಿ ಎಲ್ಲಿದೆ? ಜಲತಜ್ಞರು ಎಲ್ಲಿದ್ದಾರೆ? ಕೃಷಿ ವಿಶ್ವವಿದ್ಯಾಲಯಗಳು ಎಲ್ಲಿವೆ? ರೈತ ಸಂಘಟನೆಗಳ ಅನುಭವ ಎಲ್ಲಿದೆ? ಮಹಿಳಾ ಕೃಷಿಕರು, ಕೃಷಿ ಕಾರ್ಮಿಕರು, ಪಶುಪಾಲಕರು ಮತ್ತು ಮಳೆಯಾಧಾರಿತ ಕೃಷಿಕರ ಧ್ವನಿ ಬರಕೈಪಿಡಿಯ ಯಾವ ಕಾಲಮ್‌ನಲ್ಲಿ ದಾಖಲಾಗುತ್ತದೆ?

ಬರ ಪರಿಹಾರದಿಂದ ‘ಬರ ಪ್ರತಿರೋಧಕ ಕರ್ನಾಟಕ’ದತ್ತ

ಕರ್ನಾಟಕಕ್ಕೆ ಈಗ ಕೇವಲ ಬರ ಪರಿಹಾರ ನೀತಿಯಲ್ಲದೆ; ಬರ ಸ್ಥಿತಿಸ್ಥಾಪಕತ್ವ ನೀತಿ ಬೇಕಾಗಿದೆ.

  • ಮೊದಲನೆಯದಾಗಿ, ಕೇಂದ್ರದ ಬರ ಕೈಪಿಡಿಯಲ್ಲಿ ಕೃಷಿ-ಹವಾಮಾನ ವಲಯಾಧಾರಿತ flexibility ತರಬೇಕು. ಮಲೆನಾಡು ಮತ್ತು ಬಯಲುಸೀಮೆಗೆ ಒಂದೇ ಮಾನದಂಡ ಇರಬಾರದು.
  • ಎರಡನೆಯದಾಗಿ, ಮಳೆಯ ಕೊರತೆಗಿಂತ ಮಳೆಯ ವಿತರಣೆ ಮತ್ತು ಬೆಳೆ-ನಿರ್ಣಾಯಕ ಅವಧಿಗೆ ಹೆಚ್ಚಿನ ಒತ್ತು ನೀಡಬೇಕು. ಹೂ ಬಿಡುವ ಸಮಯದಲ್ಲಿ ಅಥವಾ ಕಾಳು ಕಟ್ಟುವ ಹಂತದಲ್ಲಿ 15 ದಿನ ಮಳೆ ಇಲ್ಲದಿರುವುದರಿಂದ ಆಗುವ ನಷ್ಟವನ್ನು ಋತು ಅಂತ್ಯದ ಒಟ್ಟು ಮಳೆ ಸರಿಪಡಿಸಲಾರದು.
  • ಮೂರನೆಯದಾಗಿ, ಉಪಗ್ರಹದ ಮಾಹಿತಿ ಕೇವಲ ಅಧಿಕಾರಿಗಳ ತಾಂತ್ರಿಕ ಕಾರ್ಯವಾಗದೆ ಗ್ರಾಮಸಭೆ ಮತ್ತು ರೈತರ ಸಾಕ್ಷ್ಯವನ್ನೂ ಒಳಗೊಂಡ ಸಾಮಾಜಿಕ ಪರಿಶೀಲನೆ ಆಗಬೇಕು.
  • ನಾಲ್ಕನೆಯದಾಗಿ, ಬೆಳೆನಷ್ಟದ ಜತೆಗೆ ಕೃಷಿಕನ ಆದಾಯ ನಷ್ಟ, ಹೆಚ್ಚುವರಿ ಸಾಲ, ಮರುಬಿತ್ತನೆ ವೆಚ್ಚ, ಪಶು ಆಹಾರದ ವೆಚ್ಚ ಹಾಗೂ ಕೃಷಿ ಕಾರ್ಮಿಕರ ಉದ್ಯೋಗ ನಷ್ಟವನ್ನೂ ಬರದ ಪರಿಣಾಮವಾಗಿ ಅಳೆಯಬೇಕಾಗಿದೆ.
  • ಐದನೆಯದಾಗಿ, ಪ್ರತೀ ಬರದ ನಂತರ ಟ್ಯಾಂಕರ್ ಕಳುಹಿಸುವುದಕ್ಕಿಂತ ಕೆರೆಗಳ ಪುನಶ್ಚೇತನ, ಜಲಾನಯನ ಅಭಿವೃದ್ಧಿ, ಅಂತರ್ಜಲ ಮರುಪೂರಣ, ಕಡಿಮೆ ನೀರಿನ ಬೆಳೆಗಳು ಮತ್ತು ಸ್ಥಳೀಯ ಮಳೆನೀರು ಸಂಗ್ರಹವನ್ನು ಶಾಶ್ವತ ಬರ ನಿವಾರಣೆ ಯೋಜನೆಯ ಭಾಗವಾಗಿಸಬೇಕು.

ಇತಿಹಾಸ ಕೆಲವೊಮ್ಮೆ ನಮಗೆ ಉತ್ತರ ಕೊಡುವುದಿಲ್ಲ; ಆದರೆ ಸರಿಯಾದ ಪ್ರಶ್ನೆಯನ್ನು ನೆನಪಿಸುತ್ತದೆ. 2001ರಲ್ಲಿ ಸಿ. ಬೈರೇಗೌಡರು ಹೇಳಿದ್ದ ಸಾರ ಸರಳವಾಗಿತ್ತು: ಬರವನ್ನು ಬೆಂಗಳೂರಿನ ಕಚೇರಿಯಲ್ಲಿ ಕುಳಿತು ಮಾತ್ರ ಅರ್ಥಮಾಡಿಕೊಳ್ಳಲಾಗದು. ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಆಯಾ ಪ್ರದೇಶದ ರೈತರ ಅನುಭವವನ್ನು ಕೇಳಬೇಕು ಎಂದು ಪ್ರತಿಪಾದಿಸಿದ್ದರು.

2026ರಲ್ಲಿ ತಂತ್ರಜ್ಞಾನ ಬಹಳ ಮುಂದಾಗಿದೆ. ಇಂದು ಉಪಗ್ರಹದಿಂದ ಹೊಲದ ಬೆಳೆಗಳ ಬೆಳವಣಿಗೆ ನೋಡಬಹುದು. ಸಾವಿರಾರು ಸ್ವಯಂಚಾಲಿತ ಮಳೆ ಮಾಪಕಗಳು ಇವೆ. ಮಣ್ಣಿನ ತೇವಾಂಶ ಸೂಚ್ಯಂಕ ಇದೆ. ಅಂತರ್ಜಲ ಮೇಲ್ವಿಚಾರಣೆ ಇದೆ. mobile app ಮೂಲಕ ಸ್ಥಳದಲ್ಲೇ ಬೆಳೆಗಳ ವೀಕ್ಷಣೆ ಮಾಡಬಹುದು. ಆದರೂ ಅತಿ ಆಧುನಿಕ ತಂತ್ರಜ್ಞಾನಕ್ಕೂ ಒಂದು ಮಿತಿ ಇದೆ. ಅದರಿಂದ ರೈತನ ಬದುಕನ್ನು ಸಂಪೂರ್ಣವಾಗಿ ಅಳೆಯಲು ಸಾಧ್ಯವಿಲ್ಲ. ಆದ್ದರಿಂದ ವಿಜ್ಞಾನವನ್ನು ತಿರಸ್ಕರಿಸುವುದು ಪರಿಹಾರವಲ್ಲ; ವಿಜ್ಞಾನಕ್ಕೆ ಜನರು, ರೈತರ ಅನುಭವವನ್ನು ಸೇರಿಸುವುದೇ ಪರಿಹಾರ.

ಇದನ್ನೂ ಓದಿದ್ದೀರಾ? ಬರಪೀಡಿತ ತಾಲೂಕು ಘೋಷಣೆ: ಸರ್ಕಾರದ ಮಾನದಂಡಗಳು ಎಷ್ಟು ಸಮರ್ಪಕ?

ಆಗಸ್ಟ್ 27ರಂದು 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವ ಸರ್ಕಾರ, ಆಗಸ್ಟ್ 29ರಂದು ಇನ್ನೂ 40ರಿಂದ 50 ತಾಲೂಕುಗಳನ್ನು ಮುಂದಿನ 15 ದಿನಗಳ ಪರಿಶೀಲನೆಯ ನಂತರ ಬರಪಟ್ಟಿಗೆ ಸೇರಿಸುವ ಸಾಧ್ಯತೆ ಇದೆ ಎಂದು ಹೇಳಿದೆ.

ಇಂದು ಬರ ಇಲ್ಲವೆಂದು ಮಾನದಂಡ ಹೇಳಿದ ತಾಲೂಕು, ಹದಿನೈದು ದಿನಗಳ ನಂತರ ಬರಪೀಡಿತ ಆಗುವುದಾದರೆ ಈ ಹದಿನೈದು ದಿನ ರೈತನ ಬದುಕಿನಲ್ಲಿ ಸಂಭವಿಸಿದ ನಷ್ಟಕ್ಕೆ ಹೊಣೆ ಯಾರು? ಬರ ಒಂದು ಸರ್ಕಾರಿ ಅಧಿಸೂಚನೆಯ ದಿನಾಂಕದಿಂದ ಆರಂಭವಾಗುವುದಿಲ್ಲ. ಬರ ಪರಿಹಾರ ಘೋಷಣೆಯಿಂದ ಕೊನೆಯಾಗುವುದೂ ಇಲ್ಲ. ಬರ ಮೊದಲು ರೈತನ ಹೊಲದಲ್ಲಿ ಕಾಣಿಸುತ್ತದೆ. ನಂತರ ಅವನ ಸಾಲ, ಮನೆಯ ಖರ್ಚು, ಜಾನುವಾರುಗಳ ಮೇವು, ಕುಡಿಯುವ ನೀರು ಸೇರಿದಂತೆ ಕೊನೆಗೆ ಸರ್ಕಾರದ ಅಂಕಿಅಂಶದಲ್ಲಿ ಕಾಣಿಸುತ್ತದೆ. ಹಾಗಾಗಿಯೇ ‘ಬರಕ್ಕೆ ಮಾನದಂಡ ಮುಖ್ಯವೋ, ಬದುಕು ಮುಖ್ಯವೋ?’ ಎಂಬ ಎರಡು ಪ್ರಶ್ನೆಗಳಲ್ಲೂ ಉತ್ತರ ಇದೆ. ಮಾನದಂಡ ಬೇಕು. ಆದರೆ ಮನುಷ್ಯನ ಬದುಕನ್ನು ಅರಿಯದ ಮಾನದಂಡ ಬೇಡ. ಅದಕ್ಕಾಗಿಯೇ ಇಂದಿನ ಸರ್ಕಾರ ಸಿ. ಬೈರೇಗೌಡರು 25 ವರ್ಷದ ಹಿಂದೆ ಎತ್ತಿದ್ದ ಚರ್ಚೆಯನ್ನು ಮತ್ತೆ ನೆನಪಿಸಿಕೊಳ್ಳಬೇಕಾಗಿದೆ.

WhatsApp Image 2025 07 12 at 17.38.34 e1752322718567
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

​ಪದವೀಧರರ-ಶಿಕ್ಷಕರ ನಿಜವಾದ ಧ್ವನಿಯಾಗಲು ಸ್ಪರ್ಧೆ;ಯಾವುದೇ ಒತ್ತಡಕ್ಕೂ ಹಿಂದೆ ಸರಿಯಲ್ಲ:ವಕೀಲ ಬರೀದ್

ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ವಕೀಲ ಬರೀದ್...

ಸಿಜೆಪಿ ಪ್ರತಿಭಟನೆ ಯಶಸ್ವಿ; 40 ಸಾವಿರ ಅರೆಸೇನಾ ಯೋಧರ ನಿಯೋಜನೆಯೇ ಸಾಕ್ಷಿ:‌ ಪ್ರಶಾಂತ್ ಕಿಶೋರ್

ಭಾರತದ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ಸಿಜೆಪಿ ಕರೆಕೊಟ್ಟಿದ್ದ...

ಬೀದರ್‌ | ಜಿಪಂ 34, ತಾಪಂ 123 ಸ್ಥಾನಗಳ ಚುನಾವಣೆಗೆ ಕ್ಷೇತ್ರವಾರು ಕರಡು ಮೀಸಲಾತಿ ಪಟ್ಟಿ ಪ್ರಕಟ!

ರಾಜ್ಯ ಸರ್ಕಾರವು ಬೀದರ್‌ ಜಿಲ್ಲೆಯ 34 ಜಿಲ್ಲಾ ಪಂಚಾಯಿತಿ ಹಾಗೂ 123...

ಚಿಕ್ಕಮಗಳೂರು | ಭೂಮಿಯ ರಕ್ಷಣೆ ಹಾಗೂ ಮುಂದಿನ ಪೀಳಿಗೆಗೆ ಸ್ವಚ್ಛ; ಸಿ.ಟಿ ರವಿ 

ಚಿಕ್ಕಮಗಳೂರು ನಗರ ಘಟಕದ ವತಿಯಿಂದ ಬಾಳೇಹಳ್ಳಿಯ ಶ್ರೀ ಸಿದ್ದೇಶ್ವರ ಮತ್ತು ಶ್ರೀ...